*ಪಕ್ಷಾಂತರಿಗಳು ಅವತಾರ ಪುರುಷರು

ರಾಜಕೀಯದಲ್ಲಿ ತತ್ವ ಆದರ್ಶಗಳು ಮುಖ್ಯವಾಗಿದ್ದ ಕಾಲ ಒಂದಿತ್ತು. ಅಧಿಕಾರವೇ ಮುಖ್ಯ ಎನ್ನುವ ಕಾಲವೂ ಬಂತು. ಅಧಿಕಾರ ರಾಜಕಾರಣಿಗಳಿಗೆ ಮುಖ್ಯವಾಗತೊಡಗಿದಾಗ ತತ್ವಗಳಿಗೆ ತಿಲಾಂಜಲಿ ಬಿಟ್ಟರು. ಬೆಳಿಗ್ಗೆ ಒಂದು ಪಕ್ಷ, ಸಂಜೆ ಇನ್ನೊಂದು ಪಕ್ಷ, ರಾತ್ರಿ ಮಗದೊಂದು ಪಕ್ಷ ಎನ್ನುವ ಮಟ್ಟಿಗೆ ರಾಜಕಾರಣ ಕುಲಗೆಟ್ಟು ಹೋಯಿತು.
1977ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯನ್ನು ಹಿಂದಕ್ಕೆ ಪಡೆದು ಚುನಾವಣೆಯನ್ನು ಘೋಷಣೆ ಮಾಡಿದ ಬಳಿಕ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಬಾಬು ಜಗಜೀವನರಾಂ ಅವರು ಪಕ್ಷವನ್ನು ತೊರೆದು ಹೊಸ ಪಕ್ಷ ಕಟ್ಟಿದರು. ಒರಿಸ್ಸಾದ ನಂದಿನಿ ಸತ್ಪತಿ ಕೂಡ ಪಕ್ಷ ಬಿಟ್ಟರು. ಈ ಸಂದರ್ಭದಲ್ಲಿ ಉತ್ತರ ಭಾರತದ ಹಿಂದಿ ಪಟ್ಟಿಯಲ್ಲಿ ಆಯಾರಾಂ ಗಯಾರಾಂ ಎಂಬ ನುಡಿಗಟ್ಟು ಚಾಲ್ತಿಗೆ ಬಂತು.
ಜನತಾ ಪಕ್ಷದ ಸರ್ಕಾರ ಬಿದ್ದು ಮತ್ತೆ ಇಂದಿರಾ ಗಾಂಧಿ ಪ್ರಧಾನಿಯಾದಾಗ ಹರ್ಯಾಣದಲ್ಲಿ ಭಜನ್‌ಲಾಲ್‌ ತಮ್ಮ ಇಡೀ ಸರ್ಕಾರವನ್ನೇ ಕಾಂಗ್ರೆಸ್‌ ಸರ್ಕಾರವನ್ನಾಗಿ ಪರಿವರ್ತಿಸಿದರು. ಗೋವಾ, ಮಣಿಪುರ ಮೊದಲಾದ ಚಿಕ್ಕ ರಾಜ್ಯಗಳಲ್ಲಿ ಪಕ್ಷಾಂತರ ಪಿಡುಗಿನಿಂದ ಸರ್ಕಾರಗಳು ಬೀಳುವುದು ಸಾಮಾನ್ಯವಾಗಿದೆ.
ಆಯಾರಾಂ ಗಯಾರಾಂಗಳಿಗೆ ಮೂಗುದಾರ ತೊಡಿಸಲು ರಾಜೀವ ಗಾಂಧೀಯವರು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರು.
ಆಯಾರಾಂ ಗಯಾರಾಂ ಎಂಬುದು ಕನ್ನಡದ `ಹೋದ ಪುಟ್ಟ ಬಂದ ಪುಟ್ಟ’ ಎಂಬ ನುಡಿಗಟ್ಟಿಗೆ ಸಂವಾದಿಯಾಗುತ್ತಿದೆ.