ಅವಸ್ಥೆ

ಕವನಗಳ ಸಂಕಲನ

ವಾಸುದೇವ ಶೆಟ್ಟಿ

ಸತ್ಯವಾನ ಪ್ರಕಾಶನ ಜಲವಳ್ಳಿ

ಅರ್ಪಣೆ

ನಾನು ನಾನಾಗಿಯೇ ಉಳಿದು
ಬೆಳೆಯಲು ಕಾರಣರಾದ ನನ್ನ
ದಿವಂಗತ ತೀರ್ಥರೂಪರ
ನೆನಪುಗಳಿಗೆ

ಪ್ರಥಮ ಮುದ್ರಣ- ೧೯೮೭
ಪ್ರತಿಗಳು ೫೦೦, ಬೆಲೆ ೫ ರು.
ಮುದ್ರಕರು- ಆದರ್ಶ ಸಹಕಾರಿ ಮುದ್ರಣಾಲಯ, ಕಾರವಾರ

—————————

ಗೋಧೂಳಿ
ಜಯಲಕ್ಷ್ಮೀಪುರಂ
ಮೈಸೂರು 570012
ಮಾರ್ಚ್ 23, 1987

ಪ್ರಿಯ ಮಿತ್ರರೆ,
ನೀವು ಕೃಪೆಮಾಡಿ ಕಳಿಸಿದ ಕವನ ಸಂಗ್ರಹ ಬಂದಿದೆ. ಅದಕ್ಕಾಗಿ ವಂದನೆಗಳು. ನಿಮ್ಮ ಕವನಗಳನ್ನು ಓದಿದ್ದೇನೆ. ಕಡಲನ್ನು ಕುರಿತ ಕವಿತೆಗಳು ನನಗೆ ಇಷ್ಟವಾದವು. ನೀವು ಇನ್ನೂ ಬೆಳೆಯುತ್ತೀರಿ; ಇನ್ನೂ ಉತ್ತಮ ಕಾವ್ಯವನ್ನು ಕೊಡುತ್ತೀರಿ- ಎಂಬುದರಲ್ಲಿ ನನಗೆ ಭರವಸೆಯಿದೆ. ಒಳ್ಳೆಯದಾಗಲಿ.

ಆದರಗಳೊಡನೆ,
ವಿಶ್ವಾಸದ

ಹಾಮಾನಾ

————————-

೧ ಅವಸ್ಥೆ

ನಾನೊ•ಬ್ಬ ಕಲಾವಿದನಾಗಿ
ನನ್ನ ಕೇರಿಯ ಹುಡುಗರ ಚಿತ್ರ ಬಿಡಿಸತೊಡಗಿದರೆ
ಚೂಪಾಗಿ ಕೆತ್ತಿದ ಪೆನ್ಸಿಲ್ಲೂ
ಅವರ ಸುಂಬಳ ಸುರಕ ಮೋರೆಯ ಅಂಟಿನಲ್ಲಿ
ಅದ್ದಿ ಗಲೀಜಾಗುವುದು

ಹೇಗೋ ಮಾಡಿ ಮುಂದುವರಿದರೆ
ಬತ್ತಲೆ ಬೆನ್ನು ಹೊಟ್ಟೆಗಳಗುಂಟ
ಹೊರಟ ಪೆನ್ಸಿಲ್ಲು ಹೊಕ್ಕುಳದ ಹೊಂಡದಲ್ಲೋ
‘ಸ್ಪೀಡ್‌ಕಟರ್ಸ್’ಗಳಂತಿದ್ದ ಪಕ್ಕೆಲಬುಗಳ ನಡುವೆಯೋ
ಇಲ್ಲ, ದೃಷ್ಟಿಯನ್ನಿಡಲು ಹೋದಾಗ
ಕುಳಿಬಿದ್ದ ಕಣ್ಣುಗಳ ಆಳದಲ್ಲೆಲ್ಲೋ ಸಿಕ್ಕಿ
ಮೊನೆ ಮುರಿದು ಮೊಂಡಾಗುವುದು
*
ಹೋಗಲಿ, ನನ್ನೂರವರ ಕಥೆಯಾದರೂ ಹೇಳೋಣ
ಅಂದುಕೊಂಡರೆ,
ಉತ್ತಿದ್ದು, ಬಿತ್ತಿದ್ದು, ಒಕ್ಕಿದ್ದು, ಮೆಟ್ಟಿದ್ದು
ಬೋರ್‌ ಅನ್ಸಿದರೂ
ಕಥೆಯ ರಸಘಟ್ಟ ಗಂಗಿಯ
ಮರುಮದುವೆಯ ಪ್ರಸಂಗಕ್ಕೆ ಬಂದಾಗ
‘ನಾಯಕ’ನ ಬೈಕಿನ ‘ಡರ್‌ss ..’ ಸದ್ದು
ನಿಮಗೆ ನಾನನ್ನುವುದು ಕೇಳಿಸದಂತೆ ಮಾಡಬಹುದು
ಹಿಂದಕ್ಕೆ ತಳ್ಳಿಹೋದ ಹೊಗೆಯು
ಕಣ್ಣಿನಲ್ಲಿ ನೀರಾಡುವಂತೆ ಮಾಡಬಹುದು.
*
ಎಲ್ಲಾ ಬಿಟ್ಟು ನನ್ನ ಕೇರಿಯ ಕುರಿತು
ಕಾವ್ಯನಾದ್ರೂ ಬರೆಯುವಾ ಅಂದ್ರೆ;
ನಮ್ಮ ಗದ್ದೆ ಬಯಲಿನ ಹುಡಿಯ ವರ್ಣನೆ ಮಾಡುವಾಗ
ಇದ್ದೊಂದು ಅಂಗಡಿಯ ವರ್ಣನೆ ಮಾಡುವಾಗ
ರಾತ್ರಿ ದನ ಬಿಟ್ಟು ಬೇರೆಯವರ ಗದ್ದೆಯನ್ನು
ತಿನ್ಸಿದ್ದು ವರ್ಣಿಸುವಾಗ
ನಾಗಪ್ಪ ಹೆಣ್ತಿ ಬಿಟ್ಟು ಮುದುಕಿ ಮುಂಡೆಯ
ದೋಸ್ತಿ ಮಾಡಿದ್ದು ಹೇಳುವಾಗ,
‘ಊರ ಅಭಿವೃದ್ಧಿ ಸಮಿತಿ’ಯ ವಿಷಯಕ್ಕೆ ಬಂದಾಗ
ನಮ್ಮ ಕೇರಿಯ ಶಾಲೆಯ ಪ್ರಕರಣ ಹೇಳುವಾಗ
ರಾಂಗೌಡನ ಕೋಣವನ್ನು ಹೊಡೆದು
ಕೊಂದದ್ದನ್ನು ಹೇಳುವಾಗ
ಗೇರು ಹಕ್ಕಲಿನ ಬಿಡಾರದ ಅಧ್ಯಾಯ
ಇನ್ನೂ ಕೆಲವು ಪ್ರಮುಖ ಸಂದರ್ಭಗಳ
ವರ್ಣನೆಗಳಲ್ಲೆಲ್ಲ ಈ ಸುಡಗಾಡ ಪೆನ್ನು
ಮುದ್ದೆ ಮುದ್ದೆಯಾಗಿ ಶಾಯನ್ನು
ಕಾರಿ, ಬರೆಯುವುದೇ ಬೇಜಾರು
ಮಾಡಿ ಬಿಟ್ಟಿದೆ
(ದೆಹಲಿಯ ಗೆಳೆಯರ ಬಳಗವು ಏರ್ಪಡಿಸಿದ್ದ ಎಂ.ಎನ್‌.ಜಯಪ್ರಕಾಶ್‌ ಸ್ಮಾರಕ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಕವಿತೆ ಇದು.)

೨ ಬೋಳು ಗುಡ್ಡದ ಮೇಲಿನ ಒಂಟಿ ಮರ

ಬೋಳು ಗುಡ್ಡದ ಮೇಲೆ ಒಂಟಿಮರ
ಬೀಸುವ ಗಾಳಿ, ಸುರಿವ ಮಳೆ
ಸುಡುವ ಬಿಸಿಲು ಇವುಗಳ ನಡುವೆ
ಇದ್ದೂ ಹೂ ಬಿಡುತ್ತಿದೆ

ಈ ಮರ ಸಣ್ಣದಲ್ಲ, ಹೆಮ್ಮರ
ಇಲ್ಲಿ,
ಕಾಗೆಗಳೂ ಗೂಡು ಕಟ್ಟಿವೆ
ಕೋಗಿಲೆಗಳೂ ಒಮ್ಮೊಮ್ಮೆ ‘ಕೂಹೂ.’ ಹಾಕುತ್ತವೆ
ಆಕಾರ ನೋಡಿಯೇ ಹೆದರಿದ ಬುದ್ಧಿಗೇಡಿ ಅಂಜುಬುರುಕರು
ದೆವ್ವ ಭೂತಗಳನ್ನೂ ಹೆಗೆ ಏರಿಸಿದ್ದಾರೆ.
ಮೇಯಲು •ಬಂದ ದನಗಳು ಇದರ ಕೆಳಗೆ
ನೆರಳಿಗಾಗಿ ಬಂದು ನಿಲ್ಲುತ್ತವೆ
ಮೆಲುಕಾಡಿಸುತ್ತ ಉಚ್ಚೆಹೊಯ್ದು ಸೆಗಣಿ ಹಾಕುತ್ತವೆ
ಕೋಡುಗಳಿಗೆ ತುರಿಕೆ ಆದಾಗ ತೊಗಟೆಗೆ ಹಚ್ಚಿ
ಉಜ್ಜಿ ಮಾಡಿದ ಗಾಯದ ಗುತುಗಳು ಇನ್ನೂ ಅಲ್ಲಲ್ಲಿ ಇವೆ.

•ಬರೀ ದನಗಳೇ ಏಕೆ? ಎಷ್ಟು ಜನ
ಸೌದೆ ಹೊರೆ ಹೊರುವ ಆಜುಬಾಜಿನ ಊರವರು
ದಮ್ಮು ಕಳೆಯಲು •ಬಂದು ನಿಂತಿಲ್ಲ?
ಎಲೆಗೆ ಸುಣ್ಣ ಒರಸಿಕೊಳ್ಳುತ್ತ ಮನೆಯ ತಾಪತ್ರಯದ
ವಿಷಯ ಒಬ್ಬರಿಗೊಬ್ಬರು ಹೇಳಿಕೊಂಡಿದ್ದಿಲ್ಲ?

ನೋಡಿ
ಮೊನ್ನೆ ಇದೇ ದಾರಿಯಲ್ಲಿ ಒಂದು ಹೆಣ ಹೋಗಿತ್ತು.
ಅದರ ಹಿಂದೆ ಮನೆಯವರು ಅಳುತ್ತ ಹೋಗಿದ್ದರು.
ನಿನ್ನೆ ಒಂದು ದಿ•ಬ್ಬಣ ನಡೆದಿತ್ತು.
ನೂರಾರು ಜನರು ಕೇಕೆ ಹಾಕಿ ನಗುತ್ತ ನಡೆದಿದ್ದರು.
ಈ ಮರದ ಹೆಗೆಗಳು ದೂರದೂರಕ್ಕೆ ಚಾಚಿವೆ
ನೂರು ಜೀವಿಗಳ ಆವಾಸಸ್ಥಾನ
ಮುಂಜಾನೆಯೇ ಕಾಗೆ ಕೂಗಿನೊಂದಿಗೆ ಬೆಳಗಾದರೆ
ನಿಶ್ಶ•ಬ್ದ ರಾತ್ರಿಯಲ್ಲಿ ಗುಮ್ಮ ಕೂಗುವ ಸದ್ದು.
ನಡುವೆ ಎಲ್ಲೆಲ್ಲೋ ಅಪರೂಪಕ್ಕೆ
ಕೋಗಿಲೆ, ಗಿಳಿ, ಹುರುಸಾನ ಹಕ್ಕಿಗಳ ಆಪ್ಯಾಯಮಾನ ಕೂಗು.

ಈ ಮರ ನೂರು ನೂ..ರು ಘಟನೆಗಳಿಗೆ ‘ಸಾಕ್ಷಿ’
‘ಭೂತ’ವಾಗಿ ನಿಂತಿದೆ
ಮಳೆಯೋ ಹೆಗೆ ಮುರಿಯುವ ಹಾಗೆ.
ಚಳಿ ಬಿಸಿಲುಗಳು ಎಲೆಗಳನ್ನೇ ಕಳೆದು ಬೋಳು ಮಾಡಿಬಿಡುತ್ತವೆ
ಬಿರುಗಾಳಿಯೋ, ಉರುಳಿ ಬೀಳುವಂತೆ
ಹೀಗಿದ್ದೂ ಇದ್ದೂ ಮರ ಹೂ ಬಿಡುತ್ತಿದೆ
ಈ ಮಣ್ಣಿನೊಳಗೆ ಅದರ ಬೇರು ತೀರ ಆಳಕ್ಕೆ ಆಳಕ್ಕೆ ಇಳಿದು ಹೋಗಿದೆ.

೩ಆಧುನಿಕ ಪರೀಕ್ಷಿತ

ಏಳು ಸುತ್ತಿನ ಕೋಟೆ ಸುತ್ತಲೂ ನೀರು
ನಡುವೆ ಯಮನಿಗೆ ಟೋಪಿ ಹಾಕಲು ನಿಂತ
ಪರೀಕ್ಷಿತ
ಆಸೆ ಯಾರಪ್ಪನ ಮನೆಯದು ಹೇಳಿ?
ಪರೀಕ್ಷಿತನ ಕಥೆ ವರ್ಷ ವರ್ಷ
ನಮ್ಮವ್ವನಿಗೆ ಓದಿ ಹೇಳಿದ್ದೇ ಹೇಳಿದ್ದು
ಆದರೂ,
ಮಗಾ, ದೋಣಿ ಹತ್ತುವಾಗ ಹುಷಾರಿ,
ಸೈಕಲ್‌ ಹೊಡಿಬೇಡ
ಬಸ್ಸಿನಲ್ಲಿ ಬಾಗಿಲಲ್ಲಿ ನಿಲ್ಲಬೇಡ
ಎಂದೆಲ್ಲಾ ಅಟಿಗಳನ್ನು ಮಾಡುತ್ತಲೇ ಹೋಗುತ್ತಾಳೆ.

ಪರೀಕ್ಷಿತನ ಪುರಾಣ ಶ್ರವಣ ವೃಥಾ
ಕಥಾಕಾಲಕ್ಷೇಪವೆನ್ನಲೆ?
ಏಳು ಸುತ್ತಿನ ಕೋಟೆ, ಸುತ್ತಲೂ ನೀರು
ಲಾಠಿ ಛಾರ್ಜು, ಗೋಳಿಬಾರು, ವಿಮಾನಗಳ ಸ್ಫೋಟ,
ಗಲ್ಲು, ಗಡಿ ಚಕಮಕಿ,
ಅಟಂಬಾಂಬು, ನ್ಯೂಟ್ರಾನ್‌ ಬಾಂಬುಗಳ ಸಮೃದ್ಧ ಬೆಳೆ
ಉಪಗ್ರಹಗಳ ಬೇಹುಗಾರಿಕೆಯ ಜಾಲ

ಏಳು ಸುತ್ತಿನ ಕೋಟೆ, ಸುತ್ತಲೂ ನೀರು
ಒಳಗೆ ಕುಳಿತಿದ್ದಾನೆ ಸರ್ವತಂತ್ರ ಸ್ವತಂತ್ರ
ಪ್ರಜಾಪ್ರಭುತ್ವದ ಕೂಸು
ಆಧುನಿಕ ಪರೀಕ್ಷಿತ
ಆದರೆ ಈ ರೇಗನ್ನು ಗೊರ್ಬೊಚೇವ್‌ಗಳಿಗೆ ಟೋಪಿ ಹಾಕುವವರು ಯಾರು?

೪ ಸಂಶೋಧನೆಗೆ ಸಂವಾದಿ

ಸಂಶೋಧನೆಯ ಸಂವಾದಿ ಪದ
‘ಕಲಬುರ್ಗಿ’ ಎನ್ನುವೆ.
ವೃತ್ತಿ ಪ್ರಾಧ್ಯಾಪಕರದು ಪ್ರವೃತ್ತಿ ಸಂಶೋಧಕರದು
‘ಢಣ್’ ಎಂದ ಗಂಟೆಯ ಅನುರಣನ
ಇನ್ನೂ ನಿಲ್ಲುವ ಮೊದಲೇ ಕ್ಲಾಸ್ ರೂಮಿನ
ಬಾಗಿಲಲ್ಲಿ ಹಾಜರಾಗುವ ಇವರು
ಸಮಯ ಪಾಲನೆಯಲ್ಲಿ ಅಪ್-ಟು-ಡೇಟ್.

ಬಯಸಿದಾಕ್ಷಣವೇ ಉರುಳುವವು
ಯಾವಯಾವುದೋ ಗ್ರಂಥದ ಮೂಲೆಮೂಲೆಯೊಳಗಿರುವ
ಉದಾಹರಣ ಪದ್ಯಗಳು
ಹುಬ್ಬೇರಿಸಿ ನುಡಿವೆ, ‘ಇವರ ಮೆದುಳು
ಕಂಪ್ಯೂಟರಿಗೂ ಮಿಗಿಲು’

ಮತ್ತೆ ಇವರು ಬರೀ ಅಧ್ಯಾಪಕರಲ್ಲ;
ಅಧ್ಯಾಪಕ ಮಿತ್ರರು
ಸತ್ಯ ಕನ್ಯೆಗೆ ಕವಿದ ಅಜ್ಞಾನದ ಮುಸುಕನ್ನು
ಊಹೆ ಬ್ಯಾಟರಿಯ ಬೆಳಕು ಚೆಲ್ಲಿ ಕಳೆದು
ಕೆನ್ನೆ ನೇವರಿಸಿ ಬಯಲಿಗೆಳೆಯುವವರು ಇವರು
ಆದಿ ಕವಿಯ ತಪ್ಪಿದ ಜನ್ಮ ಜಾತಕವ
ತಿದ್ದಿ ನೇರ್ಪಡಿಸಿದವರು ಇವರು
‘ಇಲ್ಲಿದೆ ಪಂಪನ ಧರ್ಮಪುರ’ ಎಂದು ಸಾರಿದವರಲ್ಲಿ
ಮೊದಲಿಗರು
ಹತ್ತು ಜನ ಕಂಡು ಕ್ಯಾಕರಿಸಿ ಉಗಿದು
ಕಣ್ಣು ಕೂರಿದಲ್ಲೇ ಕೆದಕಿ, ಕಡೆದು
ಕೆಸರಲ್ಲೂ ನವನಿತ ಹೊರಡಿಸುವವರು
ಕಲ್ಲುಗಳ ನುಡಿಸುವ ಮಂತ್ರವಾದಿಗಳಿವರು
ಹೌದು,
ಕಗ್ಗಲ್ಲುಗಳಲ್ಲೂ ಸತ್ಯದ ಝರಿಯ ಬುಗ್ಗಿಸಬಲ್ಲವರು
ಕಲಬುರ್ಗಿಯವರು

೫ ಮುಂಜಾವು
ಮೂಡಣ ಬಾನಿನಲಿ ಮುಂಜಾವಿನಲಿ
ಮೂಡಿದ ದೃಶ್ಯವಿದು
ಹತ್ತಿಯ ರಾಶಿಗೇ ಕಿಚ್ಚಿಟ್ಟಂತೆ
ಕಂಡವು ಮೋಡಗಳು
ಹೌಹಾರೆದ್ದ ಕಾಗೆಗಳು ‘ಕಾಕಾ’ ಎಂದು ಕೂಗಿದವು
ಮರುಕದಿ ಕೋಗಿಲೆ ‘ಕುಹೂ’ ಎಂದಿತು
ಹಸುಗಳು ಕರುಗಳು ‘ಅಂಬಾ’ ಎಂದು ಒರಲಿದವು
ಬಾಳಿಗೇ ತಗುಲಿದ ಕಿಚ್ಚನೂ ಮರೆತು
ಮೈಮರೆತು ಮಲಗಿದ ಮಾನವಗೆ
ಒಕ್ಕೊರಲಿಂದ ಕೂಗಿದವು

‘ಏಳು ನೀ ಎದ್ದೇಳು’.

೬ ಗೆ

ನೀವ್ ಬರೆದ ಪತ್ರಗಳ ಪಂಕ್ತಿ, ಪದ, ಬಿಡಿ ಅಕ್ಷರಗಳು
ಕೊಂಬು ಕಾಮಾಗಳೆಲ್ಲ
ನನ್ನ ಮನದ ಪ್ರಶ್ನಾರ್ಥಕ ಚಿಹ್ನೆಗಳನ್ನೆಲ್ಲ
ಬದಿಗೆ ಸರಿಸಿ
ಪೂರ್ಣ ವಿರಾಮವನ್ನಿಡುತ್ತಿವೆ.
ಮತ್ತೆ,
ಅರೆಗಾಲದಲೊಮ್ಮೊಮ್ಮೆ
ಹನಿ ಮಳೆಯು ಸುರಿದಂತೆ
ವರ್ತಮಾನಕೆ ತಂಪು
ಹಸುರಿನ ಕನಸು ಭವಿಷ್ಯಕ್ಕೆ

ಅಲ್ಲದೆ,
ಬಿಳಿ ಹಾಳೆಯ ಕರಿಗೀರುಗಳಲ್ಲ,
ಬರಿಯ ಉಭಯ ಕುಶಲೋಪರಿಯಲ್ಲ,
ನೀವ್ ಬರೆದ ಪತ್ರಗಳು
ನಿಮ್ಮ ಪ್ರತ್ಯಕ್ಷ ದರ್ಶನವೆನಗೆ
ಹಣೆಯ ನಿರಿಗೆಗಳು ಕಣ್ಣ ಕೊಂಕುಗಳು
ತುಟಿಗಳ ವಕ್ರತೆ ಕೊರಳ ಉಬ್ಬುಗಳಷ್ಟೇ ಅಲ್ಲ
ನಿಮ್ಮ ಹೃದಯವೇ ತೆರೆದು ತೋರುವವಲ್ಲಿ ಬರೆಯಿರಿ, ಬರೆಯದೆ ಇರದಿರಿ.

೭ ಶರಾವತಿ ನೆರೆ

ಬಂದಿತು ಶರಾವತಿಗೆ ಮಹಾಪೂರ
ತಂದಿತು ಹಾನಿ ಅಪಾರ
ವರ್ಷಾಕಾಲದ ಮೊದಲಲ್ಲಿ
ಸುರಿಯಿತು ಮಳೆ ಘೋರ
ಘಟ್ಟದ ಮೇಲಿನ ಊರಲ್ಲಿ
ತುಂಬಿ ಹರಿದವು ಹಳ್ಳ ನಿರ್ಝರ
ಸುತ್ತ ಮುತ್ತಲ ಝಡಿ ಮಳೆಯಿಂದ
ತುಂಬಿ ನಿಂತಿತು ಜಲಾಶಯ
ಉಕ್ಕಿ ಹರಿಯಿತು ನಾಲ್ದೆಸೆಯಿಂದ
ಬಹು ರಮ್ಯವೆನಿಸಿತು ಕೆಲ ಸಮಯ
ಹೆದರಿದ ಜನರು ಬಾಗಿಲು ತೆರೆದು
ಬಿಟ್ಟರು ನೀರ ಕೈ ಮುಗಿದು
ಉಕ್ಕಿ ಹರಿಯಿತು ರಭಸದಿಂದಲಿ
ಮರೆತು ಬಿದ್ದಳು ಜೋಗದ ಗುಂಡಿಲಿ
ಹಾಹಾ ಮಾಡಿ ಕರೆದಳು ಕೂಗಿ
ನೋಡ ಬಂದರು ಜನ ತಲೆಬಾಗಿ
ನಿಲ್ಲದೆ ಅಲ್ಲಿ ಬಂದಳು ಜಾರಿ
ಅಡವಿಯ ನಡುವೆಯೂ ಹೆದರದೆ ನಾರಿ
ಪಾತಳಿಯಿಂದ ಉಕ್ಕೇರಿ
ಕೊಳ್ಳದ ಜನರಿಗೆ ಆದಳು ಮಾರಿ
ಎರಡು ತೋಳ್ಗಳ ರಭಸದಿ ಚಾಚಿ
ಗೋರಿ ಮಾಡಿದಳು ಮನೆಗಳ ಚಚ್ಚಿ
ಮನುಜರು ಪಶುಗಳು ಎಲ್ಲರೂ ಒಂದೇ
ಆಕೆಯ ಸಮತಾವಾದದ ಮುಂದೆ
ಬಾಚಿ ಒಯ್ದಳು ತನ್ನ ಮೇಲೆ
ಹೊತ್ತು ನಡೆದಳು ಕಂಬನಿ ಮಾಲೆ
ಕಸಿದು ಉಂಡಳು ಬಡವರ ಅನ್ನ
ಮುಚ್ಚಿ ನಡೆದಳು ಕರುಣೆಯ ಕಣ್ಣ
ಕ್ಷಣಿಕೋನ್ಮಾದದಿ ಹುಚ್ಚೆದ್ದು ಮಾಡಿಬಿಟ್ಟಳು ನಷ್ಟ ಎಷ್ಟೊಂದು?

೮ ಸತ್ಯವಾನ ಹೇಳಿದ್ದು

ಸಾವಿ,
ನಿನ್ನ ಕೆಂಪೇರಿದ ಕೆನ್ನೆಗಳಲ್ಲೇ
ನನ್ನ ಹೊಂಡ ಸಿದ್ಧವಾಗಿದ್ದುದು
ಅರಿವಾದದ್ದು ತೀರ ತಡವಾಗಿ
ಛೀ ಅಂದರೇನು? ಛೇ ಛೇ ಅಂದರೇನು?

ಸಾವಿ,
ನಾ ಬದುಕಬಾರದಿತ್ತು ಎನ್ನಿಸುವುದು
ಸತ್ತು ಬದುಕಿ
ನಾ ಗಳಿಸಿದುದಕ್ಕಿಂತ ನೀ
ಹೊಡೆದುಕೊಂಡ ಲಾಭವೇ ದೊಡ್ಡದೆನಿಸುವುದು

ಸಾವಿ,
ಯಮನ ಕೋಣಕ್ಕೆ ನಸೆ ಏರಿದರೆ
ಸವಾರನನ್ನೇ ದೂಡಿ ವೈ
ತರಣಿಯ ದಾಟಿ ಓಡಬಹುದಲ್ಲವೆ?
ಬಿದ್ದ ಯಮನ ಮೀಸೆ ಮಣ್ಣಾದದ್ದು
ನನ್ನ ನಗುವಿಗೂ ಕಾರಣ ಆಗಬಹುದು

ಸಾವಿ,
ನೀರೊಳಗೆ ಮೀನು ಬಾಲವಾಡಿಸುವಂತೆ
ನನ್ಹೆಸರ ಮುತ್ತುಗಳ
ನಿನ್ನೆದೆಗೆ ಕೋದಿದ್ದೆ
ಯಮ ಬಂದು ಎಳೆದಾಗ ಹರಿದಿತ್ತೆ
ಸರ? ಉರುಳಿತೆ ಮುತ್ತು?
ಗಾದೆ ನೆನಪಾಗುವುದು, ಮುತ್ತು
ಒಡೆದರೆ ಹೋಯಿತು.

ಸಾವಿ,
ತೆರೆ ನೊರೆಯು ನೇವರಿಸಲು
ನವಿರೆದ್ದ ಮರಳು ಕಣ
ಇನ್ನಷ್ಟು ಮುದುಡಿತ್ತು ಅಡಿಗೆ ಸೇರಿತ್ತು
ತೆರೆ ನೊರೆ ಮರಳು ಎಲ್ಲಾ
ಉಸಿರು ಹಿಡಿದು ಪಿಸುಗುಟ್ಟವು
‘ಯಾಕೆ, ಯಾಕೆ ಬದುಕಿದೆ ನೀನು?’
ಅಲ್ಲ, ನಾ ಸತ್ತೇ ನಿನ್ನ ಹೆಸರು ಮುಂದೆ ಬರಬೇಕಿತ್ತೇನು?

೯ ಗೆ

ಅದೇ ಅದೇ ಅದೇ ಅದೇ ವಸಂತ
ಚಿಗುರು ಚಿಗುರಲಿ ಅರಳು ಅರಳಲಿ ನಿನ್ನದೇ ಮುಖ
ಆ ನಿನ್ನ ರೂಪು ಕಣ್ಮನವ ತುಂಬಿ
ನನ್ನೆದೆಯ ಕಲಕಿದಾಗ
ಮಾಘದಲಿ ಬಿಸಿನೀರು ಮಿಂದ ಪುಳಕ

ಸಂಜೆ ಕಾನನದಲ್ಲಿ ಕಂಗೆಟ್ಟು ಕರೆದಾಗ
ಕನಸಲ್ಲೂ ನೀ ಬಂದು ಕಳೆದೆ ನಡುಕ
ಮೂಡಣದ ಬಾನಲ್ಲಿ ಮತ್ತೆ ಕೆಂಪು ಚೆಲ್ವರಳಿದಾಗ
ಬೇಗಬೇಗನೆ ಅದೆ ನಿನ್ನ ನೋಡುವ ತವಕ

ಸಂಯಮದ ಪಾಠವನು ಮತ್ತೆ ಮತ್ತೆ
ನೀನುಸುರಿದಾಗ
ನಿಜಕೂ ನನ್ನಲ್ಲೇ ನನಗಾಗಿ ಮರುಕ
ಹತ್ತು ಆಸೆಯ ಹೊತ್ತ್ತ ಬಸಿರಿಗೆ
ಮುಕ್ತಿ ಎಂದೋ ಕಾಣೆನು

ಹಣ್ಣು ಕಾಯೋ- ಕಾಯಿ ಹಣ್ಣೋ
ಎಂಬ ದುಗುಡವೇ ಮನಸ್ಸಿಗೆ
ಉತ್ತರೋತ್ತರ ಮಧುರ ಕ್ಷಣಗಳೇ
ಬರಡು ಬಾಳಿಗೆ ಅಮರ ಸಿಂಧುವು

ಗಳಿಗೆಗಳಿಗೆಗೂ ನಾನು ನೀನೇ ನೀನು ನಾನೇ
ಎನ್ನುವಂತೆ ಮುಳುಗುವಾ ಏಳುವಾ ಮುಳುಗೇಳುವಾ
ಕರೆಯಲಿ, ಕೂಗಲಿ, ಕಿರುಚಲಿ
ಇಲ್ಲಾ ಎಳೆಯಲಿ, ಬಿಡದೆ
ಮುಳುಗುವಾ ಮುಳುಗೇ ಹೋಗುವಾ ಕೊನೆಗೆ ತೇಲುವಾ

೧೦ ಸಮುದ್ರನ ಸನ್ನಿಧಿಯಲ್ಲಿ


ಸಮುದ್ರನೆ,
ಮನದ ಭಾವನೆಗಳಿಗೆ ರೂಹು ನೀಡಲಿಕೆಂದು
ನಾ ಬಂದೆ ನಿನ್ನ ತಡಿಗೆ
ದಿಟ್ಟಿ ಎಟುಕದ ದೂರ ಹಬ್ಬಿದ ನಿನ್ನ ಹರವು
ಮುಗಿಲ ಚುಂಬಿಸ ಹೊರಟ ಆ ನಿಲುವು
ನನ್ನಲ್ಲಿ ‘ನಾನೊಂದು ಕಣ’ ಎನಿಸಿತು.
ಕ್ಷಣಕ್ಷಣಕೂ ಕಲ್ಮಶವ
ದೂರ ತಳ್ಳುವ ನೀರ ನೀರೆಯರ ನರ್ತನ
ನನ್ನಲ್ಲಿ ‘ನಾನೊಂದು ಕುಪ್ಪೆ’ ಎನಿಸಿತು.

ಝಲ್ಲನೆ ಚಿಮ್ಮಿ ಎಳೆ ಎಳೆಯಾಗಿ ಬೀಳುವ
ತೆರೆ ಗೋಡೆಗಳ ಕಂಡು
(ವಿರೋಧ ಆಭಾಸ ಎನಿಸಿದರೂ)
ಉರಿಯ ಜ್ವಾಲೆಗೆ ಹೋಲಿಸುವಾಸೆ
ನೆತ್ತರುಣ್ಣುವ ಈ ಜವಳೆಗಳ ಹೊಂಡದಿಂದ
(ತಿಮಿಂಗಲಗಳು ಇದ್ದರೂ ಪರವಾಯಿಲ್ಲ)
ನಿನ್ನೊಳಗೆ ನಾ ಸೇರುವಾಸೆ
ಬದುಕ ಅಗ್ನಿ ಪರೀಕ್ಷೆಯಲ್ಲಿ ನಾನೋ ತ್ರಿಶಂಕುವೆನಿಸಿ
ಸಾಯಲಾಗದೆ ಬದುಕುತ್ತಿರುವ ಅನುಭವ
ನಿನ್ನ ಎತ್ತರ ಬಿತ್ತರಗಳ ನಾನಾವರಿಸುವಾಸೆ
ಬರೀ ಢೋಂಗಿಯದಲ್ಲ.
ಅದಕ್ಕೆಂದೇ, ಅಂತರಂಗದ ಆಳದಲ್ಲಿ ಅಚ್ಚೊತ್ತಿದ
ಸ್ತನ, ನಿತಂಬ ಮೊದಲಾದವುಗಳ ಚಿತ್ರಗಳು
ತ್ರಿಕೋನ, ನಕ್ಷತ್ರ, ಪಿರಾಮಿಡ್ಡುಗಳಾಗಿ
ಬದಲಾಗುತ್ತಿವೆ
ಹೌದು, ನೋಡು ನಿನ್ನ ಸನ್ನಿಧಿಯಲ್ಲಿ ಬಾವಿ ಕಪ್ಪೆಗಳಿಗೆ ಸ್ಥಾನವಿಲ್ಲ!

೧೧ ಕಾರವಾರದ ಕಡಲಿಗೆ


ಸಮುದ್ರನೆ,
ನಾನೀಗ ನಿನಗೆ ಬೆನ್ನು ತಿರುಗಿಸಿದ್ದೇನೆ.
ನಿನ್ನ ಕಂಡ ಹೊಸತರಲ್ಲಿ ನೀನು
ಉಕ್ಕಿಸುತ್ತಿದ್ದ ಭಾವನೆಗಳು ಇಂದು ಮರುಕಳಿಸುವುದಿಲ್ಲ.
ನನಗೆ ಅನ್ನಿಸುತ್ತಿದೆ
ನಿನ್ನ ಉಬ್ಬರ, ಎದ್ದೆದ್ದು ಬರುವ ಅಬ್ಬರ
ಇವೆಲ್ಲ ಬರಿಯ ಬಾಹ್ಯದ ಆಡಂಬರ
ನಿನ್ನ ಕುಂದುಗಳ ಮರೆಸಲು ಯತ್ನಿಸುತ್ತಿರುವೆ ನಿರಂತರ
ನಾನು ಕೃತಜ್ಞನಾಗಿರಬೇಕಾಗಿದೆ, ಗಾಬರಿಬೀಳಬೇಡ,
ನಿನಗಲ್ಲ;
ನಿನಗೆ ಪರಿಧಿಯನ್ನು ನಿರ್ಮಿಸಿದ ಈ ಮರುಳು ದಂಡೆಗೆ,
ನೀನು ಕವಡೆಗಳ, ಶಂಖಗಳ, ಬಣ್ಣಬಣ್ಣದ ಚಿಪ್ಪುಗಳ
ತಂದು ಎಸೆಯುತ್ತಿ ಎಂದಲ್ಲ;
ನಿನ್ನ ಗರ್ಭದಲ್ಲಿ ಇರುವ ಅಥವಾ
ಹಾಗೆಂದು ಕಥೆ ಹಬ್ಬಿದ ಮುತ್ತುಗಳಿಗಾಗಿಯಲ್ಲ;
ಆದರೆ,
ಕಣ್ಣಂಚಿನಲ್ಲಿ ಮುತ್ತನುಕ್ಕಿಸುತ್ತ ಬದುಕುತ್ತಿರುವ
ನನ್ನವರಿಗೆ ನೆಲವನ್ನು, ನೆಲೆಯನ್ನು
ಒದಗಿಸಿದ್ದಕ್ಕಾಗಿ ಮರಳಿಗೆ, ಮರಳು ದಂಡೆಗೆ.
ಮತ್ತೆ,
ನಿನ್ನೊಡನೆ ಹೂಡಿದ ನಿರಂತರ ಸಮರಕ್ಕಾಗಿ
ನೀನು ಅಪ್ಪಳಿಸಿದಾಗೊಮ್ಮೆ ಎದೆಗೊಟ್ಟು
ನಿನ್ನನ್ನು ಹಿಂದಕ್ಕೆ ನೂಕಿದ್ದಕ್ಕಾಗಿ.

ಇವರು ಮರಳಿಗೇ ಚಿಗುರೊಡೆದವರು
ಗೊಬ್ಬರವಿಲ್ಲದೆ ಬೆಳೆದವರು
ಆದರೂ ಹೂವರಳಿಸಬೇಕೆಂಬ ಸಂಕಲ್ಪದವರು
ಹೀಚಾಗಿ, ಕಾಯಾಗಿ ಮಾಗಿ ಹಣ್ಣಾಗ ಬಯಸಿದವರು
ಹಣ್ಣಾಗ ಬಯಸಿ ಕಣ್ಣಿಂದ ನೀರ ಉಕ್ಕಿಸಿದವರು
ಆ ಕಣ್ಣೀರು ಕುಡಿದ ಮರಳೆಲ್ಲ ಉಪ್ಪು, ಅದಕ್ಕೇ
ಅದನ್ನು ಅಪ್ಪಪ್ಪಿ ಬರುವ ನೀನೂ
ಉಪ್ಪುಪ್ಪು.

ನೀನು ಒಂದು ಸಮುದ್ರ.
ಇವರೆಲ್ಲರ ಹೃದಯಗಳೂ ಒಂದೊಂದು ಸಮುದ್ರ.
ಚಂಡಮಾರುತ ನಿನ್ನಲ್ಲಿ ಆಗೊಮ್ಮೆ ಈಗೊಮ್ಮೆ
ಆದರೆ ಈ ಸಮುದ್ರಗಳಲ್ಲೋ, ದಿನ ನಿತ್ಯ.
ಚಂದ್ರ ಎಲ್ಲೋ ಅಮಾವಾಸ್ಯಕ್ಕೊಮ್ಮೆ
ಹುಣ್ಣಿಮೆಗೊಮ್ಮೆ ನಿನ್ನ ಉದ್ರೇಕಿಸಬಹುದು
ಈ ಸಮುದ್ರಗಳ ಪ್ರಕ್ಷುಬ್ಧತೆಯೋ ಸ್ಥಾಯಿ.
ನಿನ್ನೊಬ್ಬನ ಕೋಪಕ್ಕೆ ಪತ್ರಿಕೆಗಳ ಮುಖಪುಟ
ಮೀಸಲು
ಆದರೆ ಇವೆಲ್ಲವುಗಳ ವಿಕ್ಷಿಪ್ತತೆಗಳೆಲ್ಲ
ಬರೀ ಗಾಳಿ ಮಾತು
ನಿನ್ನ ಮೇಲ್ಮೈ ಕ್ಷೇತ್ರಫಲ ಲೆಕ್ಕ ಹಾಕಲು
ಚಿಕ್ಕದೊಂದು ದೋಣಿ ಇದ್ದರೂ ನಡೆಯುತ್ತದೆ.
ನಿನ್ನ ಅಂತರಂಗ ಭೇದಿಸಲು ಸಬ್‌ಮೆರಿನ್‌ಗಳು,
ಆಕ್ಸಿಜನ್ ಸಿಲಿಂಡರುಗಳು ಮತ್ತು ರೋಬಾಟ್‌ಗಳೇ ಸಾಕು
ಆದರೆ ಈ ಸಮುದ್ರಗಳ ಉದ್ದ, ಅಗಲ, ಅಂತರಂಗಗಳು
ಈ ಎಲ್ಲ ಮಾಪು, ಸಲಕರಣೆಗಳಿಗೆ ಹೊರತು.

ನೋಡು,
ನೀನೂ ಆಟ ನಡೆಸಿದ್ದಿ ಆ ವಿಲಾಯತಿ ಹಕ್ಕಿಗಳ ಕೂಡ
ಈಗೀಗ ಈ ನಿನ್ನ ಚೆಲ್ಲಾಟ
ನನಗೆ ಪ್ರಾಣ ಸಂಕಟ. ಯಾಕೆಂದರೆ
ನಿನಗೆ ಬೆನ್ನುಹಾಕಿ ಹೆಜ್ಜೆ ಕೀಳುವೆನೆಂದರೆ
ಕಾಲು ಮರಳಲ್ಲಿ ಹೂತಿರುತ್ತದೆ.
ಮರಳಿಗೆ ಹುಟ್ಟಿದವರು
ಮರಳನ್ನೇ ಮೀಯುವವರು
ಮರಳನ್ನೇ ಉಣ್ಣುವವರು
ಎಲ್ಲಾ ಮರಳೇ ಮರುಳುಗಳಾಗಿ, ಕಣಕಣಗಳಾಗಿ
ಕಣ್ಣು ತುಂಬುತ್ತಾರೆ, ಕಣ್ಣೀರಿಳಿಸಿಬಿಡುತ್ತಾರೆ.

ಮತ್ತೆ,
ನಿನ್ನ ಗೋಡಾನು ತುಂಬಿರಬಹುದು
ಆದರೆ ಇವರ ಗೇಣುದ್ದ ಚೀಲ ಖಾಲಿ
ನಿನಗೆ ಮಿಕ್ಕಿ, ನನಗೂ ಮಿಕ್ಕುವಂತಿದ್ದರೂ
ನೀನು ಬಾಯಲ್ಲಿ ನೀರೂರಿಸಲಾರಿ;
ಇವರ ಅರೆ ಬೆಂದ ಬಕ್ಕರಿಗಳಂತೆ.
ನಿನ್ನಲ್ಲಿ ದಿನಕ್ಕೊಮ್ಮೆ ಸೂರ್ಯ ಮುಳುಗುತ್ತಿದ್ದರೆ
ಇವರ ಪಾಲಿಗೆ ಅವನ ಉದಯವೇ ಆಗಿಲ್ಲ

ಸಮುದ್ರ, ಕಡೆಯದಾಗಿ,
ನಿನ್ನ ಹೊಗಳಿ, ಅಟ್ಟಕ್ಕೇರಿಸಿ ಯಾರ‌್ಯಾರೋ
ಕವನ ಕಟ್ಟಿ ಹಾಡಿರಬಹುದು.
ಆದರೆ ನಾನೇನು ನಿನಗೆ ಬೈಗುಳ ಮಾಲೆ ಹೆಣೆದಿಲ್ಲ ತಾನೆ?
ಸಾಕು ಅಷ್ಟೇ,
ನನಗೂ, ನಿನಗೂ, ಸಮಾಧಾನ.

೧೩ ಪ್ರಶ್ನೆ – ಉತ್ತ್ತರ

ಹಿಂದೆ, ಬಹು ಹಿಂದೆ
ಮನುಷ್ಯನ ಪ್ರಶ್ನೆಗಳು
ಕದ್ದು ಬಸಿರಾದಾಗಲೆಲ್ಲ
ಗರ್ಭಪಾತ ಮಾಡಿಸಲು ಬಳಸಿದ
ಚುಚ್ಚುಮದ್ದು, ಗುಳಿಗೆ ಇತ್ಯಾದಿಗಳ
ಆಘಾತಕ್ಕೆ ಒಳಗಾಗಿ
ಭ್ರೂಣ
ವಿಕೃತ ರೂಪವನ್ನು ತಳೆದು
ಹುಟ್ಟಿದ್ದು
ದೇವರು, ದೆವ್ವ, ಭೂತ ಇತ್ಯಾದಿ ಉತ್ತರ ರೂಪವಾಗಿ.

೧೪ ಅಪ್ಪ

ಅಪ್ಪ
ನನಗಂತೂ
ಬಾಳೆಹಣ್ಣೂ ಆಗಿರಲಿಲ್ಲ, ಮತ್ತೆ
ದ್ರಾಕ್ಷಿ ಹಣ್ಣೂ ಅಲ್ಲ
ಎಳೆ ಸಿಯಾಳ
ದಾಹಕ್ಕೆ ನೀರು, ಹಸಿವಿಗೆ ತಿರುಳು
ಮಳೆಗಾಲಕ್ಕೆ ಶೀತವಲ್ಲ,
ಚಳಿಗಾಲಕ್ಕೆ ನಡುಕ ತರುವುದಿಲ್ಲ
ಬೇಸಿಗೆಗೋ ಅಮೃತವೇ.

ಮರವೋ ನಿಡುನೇರ
ಕೈ ಎತ್ತಿದರೆ ಎಟುಕುವುದಿಲ್ಲ
ಎಳೆದರೆ ಬಗ್ಗುವುದಿಲ್ಲ
ಹೆಡೆಗಳ ಸಂಧಿಯಲ್ಲಿ ಸುರಕ್ಷಿತ
ಕತ್ತೆತ್ತಿ ಮರದ ಬುಡದಲ್ಲಿ
ಅತ್ತಿದ್ದೇ ಬಹಳ

ಮರವೇರಹೊರಟು ಎದೆ
ತೊಡೆ ತೋಳುಗಳ ಸುಲಿದುಕೊಂಡದ್ದೇ
ಸುಮಾರು ಸಲ
ಕೊನೆಗೂ ಎಟುಕುದಾಗ
ಗಾಯವೆಲ್ಲ ಮಾಯ
ಬಯಕೆ ಮೊಗ್ಗೆಲ್ಲ ಅರಳು
ಎರಡೂ ಕೈಯಲ್ಲಿ ಅವುಚಿ ಹೀರಿದ್ದೇ ಹೀರಿದ್ದು ತಾಜಾ ತಾಜಾ ಸಿಹಿ ಸಿಯಾಳ

೧೫ ಲಕ್ಷ್ಮಣ ರೇಖೆ

ಯಾವ ಪೂರ್ವಪೀಠಿಕೆಯೂ ಇಲ್ಲದೆ
ಕೇಳಿದ್ದೆ- ಗೆಳತಿ,
ಆಗುವಿಯಾ ನೀ ನನ್ನ ಸತಿ?
ಪ್ರಶ್ನೆಗೆ ಪ್ರಶ್ನೆಯೇ ಅವಳ ಉತ್ತರ
‘ಗೆಳೆಯ ಯಾವುದು ನಿನ್ನ ಜಾತಿ?’
ನಾನಂದೆ ನನ್ನ ಜಾತಿ
ವಿಜಾತಿ ಆಯಿತಲ್ಲ; ಅದೇ ಫಜೀತಿ
ಅಂದಳು. ಮುಂದುವರಿದು
ನನಗೇನೋ ಮನಸ್ಸಿದೆ, ಆದರೆ
ಅಪ್ಪ ಅಮ್ಮ ಎಂದು ಎಳೆದಳು ರಾಗ
ನಾನಕ್ಕಾಗ ಅವಳ ಕೆನ್ನೆಗಳಲ್ಲಿ ಗುಳಿ ಬಿದ್ದದ್ದು
ನನ್ನ ಹುಬ್ಬುಗಳು ಕೂಡಿ ಕೆನ್ನೆಗಳು ಜೋಲುವಾಗ
ಆಕೆಯ ಕಪೋಲಗಳ ಮೇಲೆ ನೀರಿಳಿದದ್ದು
ಇವೆಲ್ಲ ಇತಿಹಾಸ ಎಂದುಕೊಂಡೆ

ನಾನು-ಆಕೆ
ಇಬ್ಬರ ನಡುವೆ ಬಂದಿತ್ತು ಲಕ್ಷ್ಮಣ ರೇಖೆ,
‘ಅತ್ತಿಗೆ ನೀ ಇದ ದಾಟಬೇಡ’ ಎಂದ
ಲಕ್ಷ್ಮಣನಿಗೆ ಕೊಟ್ಟಳೆ ಸೀತೆ
ಕಿಮ್ಮತ್ತ?
ಆಕೆ ದಾಟದಿದ್ದರೆ ಗೀಟು
ಹಿಡಿಯದಿದ್ದರೆ ಹಟ
ಸಾಧಿಸದಿದ್ದರೆ ದ್ವೇಷ
ಸಾಯುತ್ತಿದ್ದನೆ ರಾವಣ?
ವಿಭೀಷಣಗೆ ಆಗುತ್ತಿತ್ತೆ ಪಟ್ಟ? ಗೆಳತಿ, ಇದು ಬರಿ ನಿನಗಲ್ಲ ಪ್ರಶ್ನೆ.

೧೬ ಮಳೆಗಾಲದ ಕವಿಗೋಷ್ಠಿಗೊಂದು ಕವಿತೆ

ರೋಹಿಣಿ, ಮೃಗಶಿರಾ…. ಆಶ್ಲೇಷಾ ಧೋ ಎಂದು
ಸುರಿಯುವ ಮಳೆಯಲ್ಲಿ
ಪೂರ್ತಿ ಬೆತ್ತಲಾಗುತ್ತಿದ್ದೇನೆ ತೆರೆದುಕೊಳ್ಳುತ್ತಿದ್ದೇನೆ
ನೆಲ ನಿಸರ್ಗ ಬೆತ್ತಲಾಗಿದ್ದನ್ನು ಕಂಡು.

ಮೋಡ ಮುಸುಕಿ ಮಬ್ಬಾದ ಆಗಸದಲ್ಲಿ
ಮೂಡಿದ ಕಾಮನ ಬಿಲ್ಲಿನ ಬಣ್ಣಗಳ ಎದುರಿನಲ್ಲಿ
ನನ್ನ ಬಣ್ಣ ಕಳೆದುಕೊಳ್ಳುತ್ತಿದ್ದೇನೆ
ಬಣ್ಣದ ಬದುಕಿಗೆ ವಿದಾಯ ಹೇಳುತ್ತಿದ್ದೇನೆ.

ಬರೀ ಧೂಳು ಹಾರುತ್ತಿದ್ದ, ನಡೆದರೆ ಕಾಲು ಸುಡುತ್ತಿದ್ದ ನೆಲದಲ್ಲೂ
ಕಗ್ಗಲ್ಲುಗಳ ಕಿಬ್ಬಿನಲ್ಲಿ ಸಿಕ್ಕಿಬಿದ್ದ ಮಣ್ಣಿನಲ್ಲೂ
ಹಸಿರು ಉಸಿರಾಡಿಸುತ್ತಿರುವುದನ್ನು ಕಂಡು
ನಾನೂ ಶ್ವಾಸ ಆಡಿಸುತ್ತೇನೆ, ಮೈ ಸಡಿಲು ಬಿಡುತ್ತೇನೆ,
ಹೊಸ ಉಡುಪು ಧರಿಸುತ್ತೇನೆ.

ಕರಿಯ ಮೋಡಗಳು ಡಿಕ್ಕಿ ಹೊಡೆದಾಗ ಹುಟ್ಟುವ
ಸೆಳೆ ಮಿಂಚಿಗೆ ರೋಮಾಂಚನಗೊಳ್ಳುತ್ತೇನೆ
ತಲೆಯಲ್ಲಿ ತುಂಬಿದ ಕತ್ತಲೆಯನ್ನು ತೊಡೆಯಲು
ಬಳ್ಳಿ ಮಿಂಚಿಗೆ ತೆಕ್ಕೆಹಾಯ ಬಯಸುತ್ತೇನೆ.

ಜೋರಾಗಿ ಗಾಳಿ ಬೀಸಿದಾಗ ತೆಂಗು, ಮಾವಿನ ಮರಗಳಿಂದ
ಮಿಳ್ಳಿ, ಹಣ್ಣುಗಳು ಬಿದ್ದಾಗ ನಾನೂ ಧಾವಿಸುತ್ತೇನೆ
ಬಗ್ಗುತ್ತೇನೆ, ಕುಗ್ಗುತ್ತೇನೆ, ಕರಗಿ ನೀರಾಗುತ್ತೇನೆ
ನೀರಮೇಲೆ ಕೊಬ್ಬಾಗುತ್ತೇನೆ, ಕೊಬ್ಬಿನ ಮೇಲೊಂದು
ಚಿಪ್ಪಾಗುತ್ತೇನೆ ಮತ್ತೆ ನಾರಾಗುತ್ತೇನೆ

ಒಮ್ಮೊಮ್ಮೆ
ಮೊದಲೇ ಚಿಪ್ಪಾಗುತ್ತೇನೆ, ಚಿಪ್ಪಿನ ಮೇಲೆ
ನಾರು-ನೀರು-ಮಾಂಸ-ರಸ
ಸೋರದ ಹಾಗೆ ತೆಳ್ಳಗಿನ ಪರೆ
ಕಣ್ಣಿನಲ್ಲೇ ರುಚಿಯ ಆಸ್ವಾದಿಸಬಹುದು
ತುಂಡು ತುಂಡುಗಳಾಗಿಸಿ
ಹನಿಹನಿಯಾಗಿಸಿ

ಮಳೆಗಾಲ ಸುರಿಸಿದ ಭಾವದಾವೇಗಗಳಿಗೆ
ವಿವೇಕದ ಒಡ್ಡುಕಟ್ಟಿ
ಎಲೆಯುದುರಿಸುವ ಚಳಿಗಾಲದಲ್ಲಿ
ಬೆವರು ಸುರಿಯಿಸುವ ಬಿರು ಬೇಸಿಗೆಯಲ್ಲಿ
ಚಿಂತನೆಯ ಕಾಲುವೆಗಳಲ್ಲಿ ಹರಿಯಿಸಿ ಪುನಃ ಹಸಿರು ಬೆಳೆಯುತ್ತೇನೆ, ಉಸಿರಾಡಿಸುತ್ತೇನೆ.

೧೭ ಇವರ ಮೂತಿಗಿಷ್ಟು

ಈ ಇವರು
ಕದವನ್ನಿಕ್ಕಿದ್ದಾರೆ
ಸಂದು, ತೂತುಗಳೆಲ್ಲಕ್ಕೂ ಬೆಣೆ ಹೊಡೆದು
ಬಂದೋಬಸ್ತು ಮಾಡಿದ್ದಾರೆ.
ಉಸಿರಾಡಿಸಿದ ಗಾಳಿಯನ್ನೇ ಮತ್ತೆ ಮತ್ತೆ ಉಸಿ-
ರಾಡಿಸುತ್ತ ಕತ್ತಲೆಯಲ್ಲೇ
ತೆವಳುತ್ತಿದ್ದಾರೆ.
‘ವರ್ತಮಾನ’ವ ತಟ್ಟಿಸಿಕೊಳ್ಳದೆ
‘ಭೂತ’ವನ್ನೇ ತೆಕ್ಕೈಸಿ ಓಲೈಸುತ್ತಿದ್ದಾರೆ

ಈ ಇವರು
ಭಗ್ನ ಮೂರ್ತಿಯ ಕಳ್ಳ ಪೂಜಾರಿಗಳು
ಹೊಚ್ಚ ಹೊಸ ಮೂರ್ತಿಯ ಕಟೆಯುವ ಕಲೆ
ಇವರಿಗೆ ಗೊತ್ತಿಲ್ಲ
ಬೇರೆಯವರು ಕೆತ್ತಿದ್ದು ಕಂಡು ಮೆಚ್ಚಿ
ಸಂತೋಷಿಸುವಷ್ಟು ಅಪ್ಪಂತರಿವರಲ್ಲ
ಮುಖ್ಯ ಎಂದರೆ ಪೂಜೆಗೆ ಬೇಕಾಗುವ
ಮಂತ್ರಗಳೇ ಗೊತ್ತಿಲ್ಲ; ಪಾಪ.

ಈ ಇವರು
ಲೋಹಿತಾಶ್ವನ ಹೆಣದ ಮುಂದೆ
ವಿಲಪಿಸುತ್ತಿರುವ ಚಂದ್ರಮತಿಯ ದಾಯಿಗರು
ಹೊಸ ಸೃಷ್ಟಿಯ ದಾರಿಗಾಣದೆ
ಕಳೆದುದನ್ನೇ ಬಯಸಿ ಬಯಸಿ ಹಲಬುತ್ತಿದ್ದಾರೆ.
ಹೆಣಕ್ಕೆ ಜೀವ ತರಿಸಲು
ಚುಚ್ಚುತ್ತಿದ್ದಾರೆ ಚುಚ್ಚುಮದ್ದು
ಒಳಸೇರಿದ ಕಣ್ಣುಗಳ
ಬೋಡುತಲೆಯ
ನೆರತ ಗಡ್ಡದ ಇವರ ಮೂತಿಗಿಷ್ಟು……..

೧೮ ಒಂದು (ವ್ಯ,ಕ)ಥೆ

ಶಿವಪ್ಪ ಹೀಗಿದ್ದ :
ದರ್ಪದ ಬಾಳ್ವೆ ನಡೆಸಿದ್ದ
ಅದ್ದುರಿಯ ವೈಭವದಲ್ಲಿ ಬೆಳೆದಿದ್ದ
ಅಂದೊಮ್ಮೆ ನಮ್ಮೂರ
ಕೋಲ್ಕಾರ, ಬುದುವಂತರ ನಾಲಿಗೆ ಅವನಾಗಿದ್ದ
ಪಟೇಲರ ಲೆಕ್ಕಣಿ ಅವನಾಗಿದ್ದ
ಅರ್ಥವಾಯಿತೆ?

ಊರ ಶ್ಯಾನುಬೋಗರಿಗೂ
ಶಿವಪ್ಪನಿಗೂ ಬಲು ದೋಸ್ತಿ
ದಾಕ್ಷಿಣ್ಯಕ್ಕೆ ಬಸಿರಾದ ಶ್ಯಾನುಬೋಗನಿಂದ
ಹಲವು ಹೊಸ ಭೂಮಿಗಳಿಗೆ ಶಿವಪ್ಪ ಒಡೆಯ
ಜನರು ಕಂಡೊಡನೆಯೇ ಹೆದರಿ
ಶಿವಪ್ಪಗೆ ಕೈ ಮುಗಿಯುತ್ತಿದ್ದರು.
‘ಒಡೆಯಾ’ ‘ಒಡೆಯಾ’ ಎಂಬ ಶಬುದ
ಪದೇ ಪದೇ ಹೊಡೆದು
ಶಿವಪ್ಪನ ಕಿವಿಯ ಆಲಿಕೆಯೂ ತೆಳುವಾಗಿರಬಹುದು.

ನಮ್ಮೂರ ತಕರಾರುಗಳಿಗೆಲ್ಲ
ಶಿವಪ್ಪನೇ (ಅ)ನ್ಯಾಯಮೂರ್ತಿಯಾಗಿದ್ದ
ಯಾರದೋ ಮಗುವಿಗೆ ಯಾರನ್ನೋ ಅಪ್ಪನಾಗಿಸಿ
ಕೋರ್ಟಿಗೂ ಎಳೆಸಿದ್ದ.
ಕೋಲುಕಾರ, ಬುದುವಂತರಿಗೆ ಕಳ್ಳು ಕುಡಿಸಿ
ಊರಲ್ಲಿ ಪಾರ್ಟಿ ಕಟ್ಟಿದ್ದ.
ಪೊಲೀಸರು, ಕಚೇರಿ ಸಾಹೇಬರೂ
ಶಿವಪ್ಪನ ಅತಿಥಿಗಳೇ

ಗಾಂಧಿ ಯುಗದಲ್ಲಿ ಒಮ್ಮೆ ಜೈಲಿಗೂ ಹೋಗಿ ಬಂದಿದ್ದ.
ಆಗ ಹೊಲಿಸಿದ್ದ ಖಾದಿ ಶರ್ಟು, ಟೋಪಿಗಳನ್ನು
ಬಹಳ ಕಾಲ ಜೋಪಾನವಾಗಿ ಇರಿಸಿದ್ದ.
ಎಮ್ಮೆಲ್ಲೆ, ಮಂತ್ರಿಗಳ ಗುರ್ತೂ ಶಿವಪ್ಪಗೆ ಇತ್ತು.

ಆ ದೇವರಾಜನ ಭೂ ಸುಧಾರಣೆ ಬಂತು
ಜನರ ರೊಚ್ಚಿಗೂ ರೆಕ್ಕೆ ಬಂತು
ಸದ್ದಿಲ್ಲದೆ ಡಿಕ್ಲರೇಷನ್ ತುಂಬಿ
ಶಿವಪ್ಪನ ಎದುರು ಸುಳಿಯುವುದೇ ಬಿಟ್ಟರು.

ಹಾಗೆ ಮಾಡಿದ್ದು ಹೀಗೆ ಹೋಯಿತು.
ಕಾಯಿದೆಯ ಬಲ ಇಲ್ಲದ ಶಿವಪ್ಪ
ಸೂಜಿ ಚುಚ್ಚಿದ ಪುಗ್ಗೆಯಂತೆ ಸೊರಗುತ್ತಿದ್ದಾನೆ.
ಮಕ್ಕಳನ್ನು ಕಂಡು ಕೈಲಾಗದ ಷಂಡರೆಂದು ಜರೆದರೂ
ಅವರಿಗೆ ಏನೂ ಅನ್ನಿಸುವುದೇ ಇಲ್ಲ
ಅಂತೂ
ಶಿವಪ್ಪ ಹೀಗಿದ್ದ ; ಮತ್ತೆ ನನ್ನಪ್ಪ? ನಿಮ್ಮಪ್ಪ?

೧೯ ಪೊರಕೆ
ದೇವಲೋಕದ ಕಲ್ಪವೃಕ್ಷಕ್ಕೂ ನನಗೂ ನಂಟು
ಆದರೂ, ಪ್ರತಿ ಮನೆಯ ಕದುವಿನ ಮೂಲೆಯಲ್ಲೇ ನಾನು
ಬೇಕುಬೇಕಾದವರು ಬೇಕುಬೇಕೆನಿಸಿದಾಗ
ಕಸ, ಹೊಲಸು ಗುಡಿಸಿ ಮತ್ತೆ
ಮರೆಯದೆ ಅದೇ ಮೂಲೆಯಲ್ಲಿ ಎಸೆಯುತ್ತಾರೆ.
ದೇವಲೋಕದ ಕಲ್ಪವೃಕ್ಷಕ್ಕೂ ನನಗೂ ನಂಟು
ಆದರೂ,
ದೇವರ ಕಾರ್ಯ ನಡೆದ ಸ್ಥಳ ಗುಡಿಸಲು
ಹಿತ್ತುಂಬುಡಿ
ಇದೆಲ್ಲಾ ಕಂಡು ನನಗೂ ಒಮ್ಮೊಮ್ಮೆ ಸಿಟ್ಟು ಬರುತ್ತ್ತದೆ.
ಬಗ್ಗಬಾರದು, ಸೆಟೆದು ನಿಲ್ಲಬೇಕು ಅಂದುಕೊಂಡರೆ
ಸೆಟೆದಾಗೆಲ್ಲ ‘ಲಟಲಟಾ’ ಅಂತ ಸದ್ದಾಗಿ ಮುರಿದು
ನನ್ನೊಳಗೇ ನಾನು ಕರಗಿ ಹೋಗುತ್ತಾ ಇದ್ದೇನೆ.
ನಾನು ಬಿರುಸಾಗುತ್ತ ಹೋದಂತೆ
ನನ್ನ ಬಳಕೆಯೂ ಒರಟಾಗುತ್ತ ಹೋಗುತ್ತದೆ.

ದೇವಲೋಕದ ಕಲ್ಪವೃಕ್ಷಕ್ಕೂ ನನಗೂ ನಂಟು ಆದರೂ ಪ್ರತಿ ಮನೆಯ ಕದುವಿನ ಮೂಲೆಯಲ್ಲೇ ನಾನು.

೨೦ ಮಿಣುಕು ಮಿಂಚು

೧ ಕಪ್ಪೆಗಳು
ಈ ಮಂಡೂಕಗಳು ಹಾರುತ್ತವೆ
ಅತ್ತಿಂದ ಇತ್ತ, ಇತ್ತಿಂದ ಅತ್ತ
ಹೊಂಚು ಹಾಕುತ್ತಿರುವ ಹಾವನ್ನು ಕಂಡೋ
ಇಲ್ಲ, ಹಾರುತ್ತಿರುವ ಪತಂಗ ಹಿಡಿಯಲೆಂದೋ?

೨ ಬೆಳವಣಿಗೆ
ನಮ್ಮೂರಲ್ಲಿ ಬ್ರಾಹ್ಮಣನೊಬ್ಬ
ಜನಿವಾರವನ್ನು ಹರಿದೊಗೆದ
ದಿನವೇ ಶೂದ್ರನೊಬ್ಬ
ಜನಿವಾರ ಹಾಕಿಕೊಂಡ

೩ ಬ-ದು-ಕು
ಬ ದು ಕು
ಈ ಮೂರಕ್ಷರಕೆ
ವಾಲ್ಮೀಕಿ ವ್ಯಾಸರಿಂದ ಹಿಡಿದು
ನಿನ್ನೆ ಮೊನ್ನೆಯ ಚಿಲ್ಲರೆ ಕವಿಗಳೆಲ್ಲ
ಸೇರಿ ವ್ಯಾಖ್ಯಾನ ಬರೆದರೂ ಇನ್ನೂ ನಿಗೂಢವಾಗಿದೆ.

೨೧ ೮೭ರ ಸ್ವಾಗತ ಗೀತೆ

ನನಸಾಗದ ಕನಸುಗಳನ್ನೆಲ್ಲ ನಿನ್ನೆ ತಾನೆ
ಗರ್ಭಪಾತ ಮಾಡಿಸಿ
ತಾಜಾ ಋತುಮತಿಯಾಗಿ ನಿಂತಿದೆ
ಮನಸ್ಸು ೮೭ರ ಸ್ವಾಗತಕ್ಕೆ.

ಮೈತುಂಬ ಮೊಳಕೆಗಳು, ಆದರೆ
ಬಿಸಿಲಿನದೆ ಅವಭರವಸೆ
ಹೋದದ್ದು ಹೋಯಿತು ಬರುವುದಾದರೂ
ಎಂಥದ್ದಿರಬಹುದು? ಬರೀ ಗೋಜಲು
ಆಮ್ಟೆಯ ಶಾಂತಿ ಯಾತ್ರೆಯ ಬೆನ್ನಿಗೇ
ಮಷಿನ್‌ಗನ್ನುಗಳ ಆರ್ಭಟ
ಮಲಗಿದರೆ ನಿದ್ದೆ ಎಲ್ಲಿ? ಮತ್ತೆ
ಹೊಸ ವರುಷಕ್ಕೆ ಹೊಸ ಕನಸುಗಳೆಲ್ಲಿ?

ಹಳೆಯ ಭಗ್ನ ಪ್ರೇಮದ ಕಥೆಯೆಲ್ಲ
ಕೆಂಪು ಮಸಿಯಲ್ಲಿ ಕಾವ್ಯವಾಗಿ ಹರಿಯುತ್ತಿರುವಾಗ
ಮತ್ತ್ತೆ ಪ್ರೀತಿಸುವ ಹುಚ್ಚೆ?
ದೂರ ಗುಡ್ಡದ ಮರದ ಹೆಗಲಿನಲಿ ಚಿಗುರೊಡೆವ
ಅದೇ ಸೂರ್ಯ; ಸಂಜೆ ಸಮುದ್ರದಲಿ ತೆರೆಬುದ್ಬುದ
ಗಳ ಜೊತೆ ಕಣ್ಣು ಮುಚ್ಚಾಲೆ ಆಡಿ
ಕೊನೆಗೂ ಅಡಗುವನು ಅವನೇ
ನಿನ್ನೆ ಕೂಗಿದ್ದೇ ಕೋಳಿ ಇಂದೂ ಕೂಗುವುದು.
ಅದೇ ಕಾಗೆ, ಅದೇ ಕೋಗಿಲೆ, ಗೊರವಂಕ
ಹುರುಸಾನ ಹಕ್ಕಿಗಳು ಎಲ್ಲಾ, ಅದೇ ಅದೇ ಅದೇ,
ಆಕ್ಸಿಜನ್ನು, ಇಂಗಾಲಡೈಆಕ್ಸೈಡು ಇತ್ಯಾದಿ ಬೆರೆತ
ಗಾಳಿಯ ಉಸಿರಾಟ ಅದೇ.

ಹೊಟ್ಟೆ ಹಸಿದಿದೆ; ಅನ್ನ ಹಳಸಿದೆ
ಹಾಗೇ ಮಲಗಿದರೆ ನಿದ್ದೆ ಬರಬೇಕೆಲ್ಲಿ?
ಬರೇ ಅರ್ಧವೇ ಅರ್ಧ ನಿದ್ದೆ ಮಾತ್ರೆ-
ಅರೆ ನಿದ್ದೆಗೆ, ಹೊಸವರುಷಕೆ ಹೊಸ
ಕನಸ ಹೆಣೆಯಲಿಕ್ಕೆ, ಮತ್ತೆ,
ಸ್ವಾಗತ ಕೋರಲಿಕ್ಕೆ- ತೆಗೆದುಕೊಳ್ಳಲು ಅನುಮತಿ ನೀಡಿ.


ಬೆನ್ನುಡಿ

ಶ್ರೀ ವಾಸುದೇವ ಶೆಟ್ಟರು ಹೊನ್ನಾವರ ತಾಲೂಕಿನ ಜಲವಳ್ಳಿಯವರು. ಜಲವಳ್ಳಿ ಶರಾವತಿಯ ದಂಡೆಯ ಮೇಲಿದೆ. ಶ್ರೀಯುತರು ಕನ್ನಡ ಸ್ನಾತಕೋತ್ತರ ಪದವೀಧರರು. (ಕಾರವಾರ ಬಾಡದ ಶಿವಾಜಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.)
ಕವನಿಸುವ ಕಲೆ ಎಲ್ಲರಿಗೂ ಕರಗತವಲ್ಲ, ಕವನಿಸುವ ಗರಜು ಎಲ್ಲರಿಗೂ ಇದೆ. ಅನಿಸಿಕೆಗಳ ತೊಳಲಾಟಕ್ಕೆ ಸ್ಪಷ್ಟ ರೂಪು ಮೂಡಿಸುವ ಪ್ರಯತ್ನದಲ್ಲಿ ಹೆಚ್ಚಿನವರಿಗೆ ಸೋಲು, ಕೆಲವರಿಗೆ ಮಾತ್ರ ಜಯ. ಶೆಟ್ಟಿಯವರ ಈ ಕವನ ಸಂಕಲನ ಇಂತಹ ಜರೂರು ಗರಜಿನಿಂದ ಮೂಡಿ ಬಂದದ್ದು. ಅವ್ಯಕ್ತ ತುಮುಲ ಉಕ್ಕಿದಾಗ ಪರಿಸರದ ಒತ್ತಡದ ಬಂಡೆಗಲ್ಲು ಆರಿಸಿಕೊಂಡ ಅಭಿವ್ಯಕ್ತಿಯ ಮಾಧ್ಯಮವಾದ ಕಾವ್ಯಕ್ಕೆ ತೊಡಕಾಗಿ ಕವನಿಸುವ ಇಚ್ಛೆಯನ್ನು ಇನ್ನಷ್ಟು ತೀವ್ರಗೊಳಿಸುವುದನ್ನು ಇಲ್ಲಿ ಕಾಣಬಹುದು. ಬಹುಶಃ ಈ ‘ಅವಸ್ಥೆ’ ಇವರ ಕಾವ್ಯದ ಮೂಲ ಪ್ರೇರಣೆ. ಸಾಮಾಜಿಕ ಜವಾಬ್ದಾರಿ ಸ್ಲೋಗನ್ನುಗಳ ಮರೆಯಲ್ಲಿ ಅಡಗುವ ಪರಿ ಹಲವು ಕವಿವರ್ಗಗಳಲ್ಲಿ ವಿದಿತ. ಉತ್ತರ ಕನ್ನಡದ ನಿಸರ್ಗಪರಿ ಶಬ್ದಾಡಂಬರದಲ್ಲಿ ಸೊರಗದೆ ವೈಚಾರಿಕತೆಗೆ ಹಿನ್ನೆಲೆಯಾಗಿ ಇಲ್ಲಿ ಪ್ರಕಟ. ಶರಾವತಿಯ ರಭಸ ಕಂಬನಿ ಮಾಲೆ ಹೊತ್ತು ನಡೆದರೆ, ಬಡವರ ಅನ್ನ ಕಸಿದು ಉಂಡರೆ, ದಿಟ್ಟಿ ಎಟುಕದ ದೂರ ಹಬ್ಬಿದ ಸಮುದ್ರದ ಹರವು, ಅದರ ಮುಗಿಲ ಚುಂಬಿಸ ಹೊರಟ ನಿಲುವು ಹೂವರಳಿಸಬೇಕೆಂಬ ಸಂಕಲ್ಪದವರ, ಕಣ್ಣಂಚಿನಲ್ಲಿ ಮುತ್ತನುಕ್ಕಿಸುತ್ತ ಬದುಕುತ್ತಿರುವ, ಮರಳನ್ನೇ ಉಣ್ಣುವವರ ನೆನಪು ಬರಿಸುತ್ತದೆ ಕವಿಯ ಮುದ್ದೆಮುದ್ದೆಯಾಗಿ ಶಾಯನ್ನು ಕಾರುವ ಪೆನ್ನಿಗೆ.
ಮುಂಜಾನೆಯ ರಮ್ಯತೆಗೆ ಮನಸೋತ ಕವಿ ಹೃದಯಕ್ಕೆ ಚಂದ್ರಮತಿಯ ದಾಯಿಗರ ಬಗ್ಗೆ ರೋಷವಿದೆ. ರೇಗನ್ನು ಗೊರ್ಬೋಚೇವ್‌ರಿಗೆ ಟೋಪಿ ಹಾಕುವ, ಹತ್ತು ಆಸೆಯ ಹೊತ್ತ ಬಸಿರಿಗೆ ಮುಕ್ತಿ ದೊರಕಿಸುವ ಛಲವಿದೆ, ಕದ್ದು ಬಸಿರಾದ ಪ್ರಶ್ನೆಗಳು ವಿಕೃತ ರೂಪ ತಳೆದ ಬಗೆಯ ಕುರಿತು ತಿರಸ್ಕಾರವಿದೆ. ಆದರೆ ಎಲ್ಲಕ್ಕಿಂತ ಮಿಗಿಲಾಗಿ ಭಾವದಾವೇಗಗಳಿಗೆ ವಿವೇಕದ ಒಡ್ಡು ಕಟ್ಟಿ, ಚಿಂತನೆಯ ಕಾಲುವೆಗಳಲ್ಲಿ ಹರಿಯಿಸಿ ಬೆಳೆಯುವ ಪ್ರಾಮಾಣಿಕತೆ ಕವಿಗಿದೆ. ಇದೇ ಶ್ರೀ ವಾಸುದೇವ ಶೆಟ್ಟರ ಕವನಗಳ ವೈಶಿಷ್ಟ್ಯ.
ಶ್ರೀ ಎಲ್.ಎನ್.ನಾಯಕ
೧/೨೪/೮೭
ಸತ್ಯವಾನ ಪ್ರಕಾಶನ ಜಲವಳ್ಳಿ


ಗೋಧೂಳಿ
ಜಯಲಕ್ಷ್ಮೀಪುರಂ
ಮೈಸೂರು 570012
ಮಾರ್ಚ್ 23, 1987

ಪ್ರಿಯ ಮಿತ್ರರೆ,
ನೀವು ಕೃಪೆಮಾಡಿ ಕಳಿಸಿದ ಕವನ ಸಂಗ್ರಹ ಬಂದಿದೆ. ಅದಕ್ಕಾಗಿ ವಂದನೆಗಳು. ನಿಮ್ಮ ಕವನಗಳನ್ನು ಓದಿದ್ದೇನೆ. ಕಡಲನ್ನು ಕುರಿತ ಕವಿತೆಗಳು ನನಗೆ ಇಷ್ಟವಾದವು. ನೀವು ಇನ್ನೂ ಬೆಳೆಯುತ್ತೀರಿ; ಇನ್ನೂ ಉತ್ತಮ ಕಾವ್ಯವನ್ನು ಕೊಡುತ್ತೀರಿ- ಎಂಬುದರಲ್ಲಿ ನನಗೆ ಭರವಸೆಯಿದೆ. ಒಳ್ಳೆಯದಾಗಲಿ.

ಆದರಗಳೊಡನೆ,
ವಿಶ್ವಾಸದ

ಹಾಮಾನಾ