ಅವತರಿಸುವ ಮುನ್ನ (1995ರ ಸುಮಾರಿಗೆ ಬರೆದ ನಾಟಕ ಇದು. ಆಗ ನಾನು ಬೆಳಗಾವಿಯ ನಾಡೋಜ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ.)

ಅವತಾರದ ರಚನಾ ಶಿಲ್ಪದಲ್ಲಿ ಪೌರಾಣಿಕ ಕಲ್ಪನೆ ಇದ್ದರೂ ಅದು ಸ್ಫೋಟಗೊಳಿಸುವ ಬೀಜಾಣುಗಳು ತೀರ ಸಮಕಾಲೀನವಾದುದಾಗಿದೆ. ಅದು ಹೇಳಹೊರಟ ಗುರಿಯತ್ತ ತಡೆಯಿಲ್ಲದೆ ಸಾಗಿದೆ ಎಂಬುದು ನನ್ನ ಭಾವನೆ. ಜಾನಪದ ಗೇಯತೆಯುಳ್ಳ ಪದ್ಯಗಳ ಬಾಹುಳ್ಯತೆಯಿಂದಾಗಿ ಇದೊಂದು ಸಂಗೀತ ನಾಟಕವೇನೋ ಎನ್ನುವ ಗುಮಾನಿಯೂ ಬರಬಹುದು.
ವಿಶೇಷ ಸಲಕರಣೆಗಳಿಲ್ಲದೆ, ರಂಗದಲ್ಲಿಯೇ ಜೋಡಿಸಬಹುದಾದ ಖುರ್ಚಿಯೊಂದನ್ನುಳಿದು, ಇದನ್ನು ಬೀದಿ ನಾಟಕವನ್ನಾಗಿಯೂ ನಟಿಸಬಹುದಾದ ಸಾಧ್ಯತೆ ಇದೆ.

ರಂಗಪ್ರಯೋಗದ ವೇಳೆಯಲ್ಲಿ ಕೆಲವು ಕಡೆಗಳಲ್ಲಿ ಪಾರದರ್ಶಕ ಪರದೆಗಳನ್ನು ಬಳಸಬಹುದಾಗಿದೆ. ಪರಿಣಾಮದ ದೃಷ್ಟಿಯಿಂದ ಇದು ಪೂರಕ. ಉಳಿದದ್ದು ನಿರ್ದೇಶಕರ ಪ್ರತಿಭೆಗೆ ಬಿಟ್ಟಿದ್ದು.

ಪಾತ್ರವರ್ಗ-

ರೈತ, ಕಾರ್ಮಿಕ, ಬುದ್ಧಿಜೀವಿ, ದಲಿತ, ಶಿವೇಗೌಗ, ಪುಢಾರಿಗಳು, ಕಂಟ್ರಾಕ್ಚರುಗಳು, ಜಮೀನ್ದಾರರ ವೇಷದವರು, ಕೆಲವು ಹೆಂಗಸರು, ಗಂಡಸರು.

ದೃಶ್ಯ 1

(ರಂಗಸ್ಥಳದಲ್ಲಿ ಬೆಳಕು ನಿಧಾನವಾಗಿ ಹೆಚ್ಚುತ್ತ ಹೋದಹಾಗೆ ಮೇಳ ಕಾಣಿಸಿಕೊಳ್ಳುತ್ತದೆ. ರೈತನ ವೇಷಧಾರಿ ರಂಗಸ್ಥಳಕ್ಕೆ ಬರುವನು. ಅವನು ಬೆನ್ನಿಗೆ ಖುರ್ಚಿಯ ಎರಡು ಕಾಲುಗಳನ್ನು ಕಟ್ಟಿಕೊಂಡಿರುವನು. ರಂಗದಲ್ಲಿ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಅವನು ಅಡ್ಡಾಡುತ್ತಿರುವಾಗ ಮೇಳ ಹಾಡಲು ಪ್ರಾರಂಭಿಸುವುದು.)
ಮೇಳ-
ಹೊತ್ತು ಮೂಡದ ಮುನ್ನ
ಗುತ್ತಿನೊಳಗಿಂದ ಜಾರಿ
ಕತ್ತಲಲ್ಲಿಯೇ ನಡೆದು
ಹರೇರೇರೇ ssss

ಹೊತ್ತು ನೆತ್ತಿಗೆ ಬಂದು
ಮಾರು ತಿರುಗಿದರೂ ಇನ್ನೂ
ಬುತ್ತಿ ಬರದುದ ಕಂಡು
ಹೊಟ್ಟೆ ಚುರ್‌ ಎನುತ್ತಿರಲು
ಪಪ್ಪಪ್ಪೋ ssss

ತಂದ ಬುತ್ತಿಯ ಬಿಚ್ಚಿ
ಹೆಣ್ಣು ನೀಡುತಲಿರಲು
ತಂಗಳನ್ನವನ್ನುಂಡು
ಡರ್‌ ss ಎಂದು ತೇಗಿದ ಮೇಲೆ
ಹರೇರೇss ಪಪ್ಪಪ್ಪೋssss

ಗುದುಕಿ ಸಾಗಿದೆ ಮನಸು
ಕಷ್ಟ ಗದ್ದೆಯ ಕಳಿದು
ಸುಖದ ಬೆಳಸಿನ ಬೀಜ
ಅರಸಿ ಅರಸುತಲಿಹುದು
ಹರೇರೇ ssss ಪಪ್ಪಪ್ಪೋ ssss

ರೈತ- ಹಾಂ, ನನ್ನ ನೋಡಿದ ಕೂಡ್ಲೇ ನಿಮಗೆ ಅನಿಸಿರಬೇಕು, ಇಂವ್ನ ನಾನು ಎಲ್ಲೋ ನೋಡಿದ್ದೀನಿ ಎಂದು, ಅಲ್ವಾ? ಕರೇ ಹೇಳಿ. ನಿಮಗೆ ಹಾಗೆ ಅನಿಸಿದ್ದರೆ ಅದು ನಿಜಾನೇ. ನನ್ನ ನೀವು ನೋಡಿರ್ಲಿಕ್ಕೇ ಬೇಕು. ಇಲ್ಲಾ ಅಂದ್ರೆ ಹ್ಯಾಂಗೆ? ಮೊನ್ನೆ ನೀವು ನಿಮ್ಮ ಮನೆಯವರ ಕೂಡ ಬಾಜಾರಿನಲ್ಲಿ ಆ ಟಾರ್ಸಿ ಬಿಲ್ಡಿಂಗಿನ ಪ್ರಭುರ ಅಂಗಡೀಲಿ ಎರಡು ಕೇಜಿ ತುಪ್ಪ ನಿಮ್ಮ ಬಾಸ್ಕೆಟಿನಲ್ಲಿ ತುಂಬಿಸಿಕೊಳ್ತಾ ಇದ್ದರಲ್ಲ? ಮತ್ತೆ ಅರ್ಧ ಕೇಜಿ ಚಾಪುಡಿ, ಅರ್ಧ ಕೇಜಿ ಮಸಾಲೆ ಹಿಟ್ಟು, ಆಲೂರ ಸಣ್ಣ ಐದು ಕೇಜಿ, ಟೂಥ್‌ಪೇಸ್ಟ್‌, ಸ್ನೋ, ಪೌಡರು ಎಲ್ಲಾ ತಗೊಂಡು, ಎತ್ಕೊಂಡು ಹೋಗ್ಲಿಕ್ಕೆ ಆಗ್ದೆ ಹಮಾಲಿಗಾಗಿ ಎಡಾ ಬಲಾ ನೋಡಿದ್ರಲ್ಲಾ. ಆಗ ನಿಮ್ಮ ಬಲ ಬದಿ ಬಾಜೂನಲ್ಲಿ ನಿಂತವ ನಾನೇ. ನೀನು ಅಲ್ಲಿಗೆ ಯಾಕೆ ಬಂದು ನಿಂತೆ ಅಂತ ನೀವು ಕೇಳೂರಿ. ಅದು ನನಗೆ ಗೊತ್ತಿದೆ. ನಮ್ಮನೆಯವಳು ನನಗೆ ಎಂಟಾಣೆ ಚಾಪುಡಿ, ಎಂಬತ್ತು ಪೈಸೆ ಕೊಬ್ರಿ ಎಣ್ಣೆ, ಎಂಟಾಣೆ ಉಪ್ಪು ತಗೊಂಡು ಬಾ ಎಂದು ಕಳಿಸಿದ್ಳು. ಕಡೆಗೆ ನೀವು ನಿಮ್ಮ ಚೀಲಾನ ನನ್ನ ತಲಿ ಮೇಲೆ ಇಟ್ರಿ. ನೀವು ಉಣ್ಣುವ ಆ ಅಕ್ಕಿ ಬೆಳೆದವ ನಾನೇ ನೋಡಿ. ನಿಮ್ಮ ಮಸಾಲೆ ಪುಡಿಯ ಮೆಣಸು, ಕುತ್ತುಂಬರಿ, ಜೀರಿಗೆ, ಅರಸಿಣ ಎಲ್ಲಾ ಬೆಳೆದವನೂ ನಾನೇ. ಕೊನೆಗೆ ನೀವು ದಾರಿ ಮೇಲೆ ಒಂದು ಅಂಗಡಿ ಮುಂದೆ ನಿಂತು ಬಾಳೆಹಣ್ಣು ತಗಂಡ್ರಲ್ಲಾ? ಅವನು ಒಂದು ಹಣ್ಣಿಗೆ ಎಂಬತ್ತು ಪೈಸೆ ಅಂದ್ರೂ ನೀವು ಚೌಕಾಶಿನೇ ಮಾಡಲಿಲ್ಲ. ಆ ನನ್ನ ಹರಕು ಅಂಗಿಯ ತುಂಬ ಆದ ಬಾಳಿಕಾಯಿಯ ಸೊನೆಯ ಕಲೆಗಳು ಇದನ್ನು ಬೆಳೆದವನು ನಾನೇ ಅಂತ ನಿಮಗೆ ಹೇಳಿರಬೇಕು ಅಲ್ವಾ? ಅಂದ್ರೆ ಮತ್ತೆ ಹತ್ತಿಯನ್ನೂ ನಾನೇ ಬೇಳಿತೇನೆ. ನಾನು ರೈತ. ನಾನು ಬೆಳಿತೇನೆ. ಬೆಳಿತೇನೆ. ಆದ್ರೂ ಎರಡು ಹೊತ್ತು ಹೊಟ್ಟೆ ತುಂಬ ಊಟ ಇಲ್ಲ. ಅಭಿಮಾನದಿಂದ ನಾಲ್ಕು ಜನರ ಎದುರು ಹೋಗಿ ನಿಲ್ಲುವಂಥ ಬಟ್ಟೆ ಇಲ್ಲ. ನನ್ನ ಸಮಸ್ಯೆ ಏನಂತ ಹೇಳ್ಲಿ? ಯಾರ ಕೂಡ ಹೇಳ್ಲಿ? ಇದಕ್ಕೆ ಪರಿಹಾರ ಸೂಚಿಸುವವರು ಕೊಡುವವರು ಯಾರಾದರೂ ಇದ್ದಾರಾ? ಯಾರಾದರೂ ಇದ್ದಾರಾ?
(ರೈತ ಪ್ರೇಕ್ಷಕರಿಗೆ ಬೆನ್ನು ಹಾಕಿ ನಿಲ್ಲುವನು. ರಂಗದಲ್ಲಿ ಒಮ್ಮೆ ಕತ್ತಲು ಕವಿದು ಪುನಃ ಬೆಳಗಿದಾಗ ಕಾರ್ಮಿಕ ರಂಗಪ್ರವೇಶ ಮಾಡುವನು. ಅವನೂ ಬೆನ್ನಿಗೆ ಖುರ್ಚಿಯ ಎರಡು ಕಾಲುಗಳನ್ನು ಕಟ್ಟಿಕೊಂಡಿರುವನು. ರಂಗದಲ್ಲಿ ಅತ್ತಿಂದಿತ್ತ ಅಡ್ಡಾಡುತ್ತಿರುವಾಗ- )
ಮೇಳ-
ಹೊತ್ತು ಬೆತ್ತಲಾದುದ ಕಂಡು
“ರೀs ನಿಲ್ಲಿ ” ಎಂದರೂ ಕೇಳದೆ
ಆಫೀಸು, ಬಾಸು ಎನ್ನುತ ಓಡಿ
ಢಣ್‌ ಢಣಾ ಢಣ್‌

ಕುಳಿತ ಖುರ್ಚಿಯ ಮುಂದೆ
ಕೆಲಸ ಕೆಲಸದ ಮೂಟೆ
ತಿರುಗಿ ತಿರುಗದ ಮುಳ್ಳು
ಢಣ್‌ ಢಣಾ ಢಣ್‌

ತಾಸು ತಾಸುಗಳಲ್ಲಿ
ದಿವಸ ದಿವಸಗಳನಳೆದು
ತಿಂಗಳ ಒಂದರ ಬರವ
ಬಯಸಿ ಬಯಸಿ ಜೀವ
ಸಾಕು ಸಾಕೋ ಎನುವ ನೋವ
ಢಣ್‌ ಢಣಾ ಢಣ್‌

ಕಾರ್ಮಿಕ- ಢಣ್‌ ಢಣಾ ಢಣ್, ಇದೇ ಈಗ ನಿಮ್ಮ ಎದುರಿಗೆ ತನ್ನ ಪ್ರವರ ಎಲ್ಲ ಬಿಚ್ಚಿದನಲ್ಲಾ, ಆ ನಮ್ಮ ಅಣ್ಣನ ಹಾಗೆ ನಾನು ಸಿಕ್ಕ ಸಿಕ್ಕಲೆಲ್ಲ ನಿಮಗೆ ಕಾಣಸಿಗುವುದಿಲ್ಲ. ಅವ್ನಿಗೆ ಅಂಗಡಿಗೆ ಹೋಗಿ ಸಾಮಾನು ತರುವಷ್ಟಾದರೂ ಪುರುಸೊತ್ತು ಇದೆ. ನನಗೆ ಅದೂ ಇಲ್ಲ. ನಾನು ಒಂದು ಬೆಳಗಾಗೆ ಮನೆ ಬಿಟ್ಟರೆ ಮತ್ತೆ ತಿರುಗಿ ಬರುವುದು ರಾತ್ರಿಗೇಯ. ನನ್ನ ಮಕ್ಕಳ ಕೂಡ ಮನ್ಸು ತುಂಬ ಮಾತನಾಡಿ ಅವರನ್ನು ಮುದ್ದು ಮಾಡಬೇಕು ಅಂದ್ರೂ ಆ ನಶೀಬು ನನ್ನ ಹಣೀಲಿ ಬರೀಲಿಲ್ಲ. ಮತ್ತೆ ಅಂಗಡಿಗೆ ಸಾಮಾನಿಗೆ ಹೋಗುವವರು ಯಾರು ಅಂತೀರಿ? ನಮ್ಮ ಕಡೆಯವಳೇ ಹೋಗುತ್ತಾಳೆ. ಕೊಳಕಾದ ಹರಿದ ಸೀರೆಯ ಆ ಹೆಂಗಸಿನ ಮೇಲೆ ತಮ್ಮಂಥ ಸಭ್ಯರ ದೃಷ್ಟಿ ಬೀಳೂದಾದರೂ ಹೇಗೆ? ನೋಡಿ, ನನ್ನ ಕೈ ನೋಡಿ. ಈ ಎರಡೂ ಕೈಗಳ ಮೇಲೂ ಉಬ್ಬಿ ಕಾಣುವ ನರಗಳನ್ನು ನೋಡಿದ್ರಾ? ಅಯ್ಯೋ, ನಿಮ್ಮ ಹಣೆ ಮೇಲೆ ಯಾಕೆ ನೆರಿಗೆ ಬೀಳ್ಲಿಕ್ಕೆ ಹತ್ತಿತು? ನನಗೂ ಈಗೀಗ ಸ್ವಲ್ಪ ಕಣ್ಣು ಮರೆ ಮರೆಯಾಗ್ಲಿಕ್ಕೆ ಹತ್ತಿದೆ. ಡಾಕ್ಟ್ರು ಹೇಳಿದ್ರು, ಚಸ್ಮ ತಗೋ ಅಂತ. ಕಾರ್ಖಾನೆ, ಫ್ಯಾಕ್ಟರಿ, ಗಿರಣಿ, ಗ್ಯಾರೇಜು, ಕಂಪನಿ ಎಲ್ಲಂತ ಅಲೀಲಿ? ಚಸ್ಮ ತಗೋಬೇಕು ಅಂತ ಓವರ್‌ ಟೈಂ ಮಾಡಿದೆ. ಎಷ್ಟು ದಣಿವು ಆಯ್ತು ಗೊತ್ತಿದ್ಯೆ? ಮೈ ಕೈ ನೋವು ಕಳೀಲಿಕ್ಕೆ ಅಂತ ಸ್ವಲ್ಪ ಹೆಂಡ ಕುಡ್ದೆ. ಓವರ್‌ಟೈಂ ಮಾಡಿದ ರೊಕ್ಕ ಎಲ್ಲ ಅಲ್ಲೇ ನಿರ್ನಾಮ ಆಗಿ ಹೋಯ್ತು. ಮತ್ತೆ ಚಸ್ಮ ಎಲ್ಲಿಂದ ತರೂದು? ನನಗೂ ಸಂಸಾರ ಅನ್ನೂದು ಇದೆ. ನನ್ನ ಹೆಣ್ತಿ ನನಗೆ ಊಟ ಬಡಿಸುತ್ತಾಳೆ. ನಾನು ಊಟ ಮಾಡ್ತಾ ಇರುವಾಗಲೆ ನಮ್ಮನೆ ಹುಡುಗರು ಬೀದಿಲಿ ಹೆಣೆಗೆಂಡೆ ಆಡಲು ಹೋದದ್ದು ತಮ್ಮ ಅಂಗಿ ಹರ್ಕೊಂಡು ಬಂದದ್ದು ಎಲ್ಲಾ ಕತೆ ಮಾಡಿ ಹೇಳ್ತಾಳೆ. ಅದು ಕೇಳ್ತಾ ಕೊನೆಯ ತುತ್ತಿಗೆ ನಾನು ಬರುವುದರೊಳಗೆ ಕಣ್ಣಿಗೆ ಜೋಂಪು ಹತ್ತಿರುತ್ತದೆ. ನಾನು ಒಬ್ಬೊಂಟಿ ಅಲ್ಲ. ಎಷ್ಟೆಲ್ಲಾ ಜನರು ನನಗೆ ದಾಯಾದಿಗಳು ಇದ್ದಾರೆ ಗೊತ್ತಿದ್ಯೆ? ನಿಮ್ಮ ಪಕ್ಕದ್ಮನೆ ಕುಂಬಾರ, ಕಬ್ಣ ಕಾಯ್ಸಿ ಬಡಿಯುವ ಕಮ್ಮಾರ, ಗ್ಯಾರೇಜಿನಲ್ಲಿ ಕೆಲಸ ಮಾಡುವವ, ಇವರಿಂದ ಮೇಲ್‌ ಮೇಲಿನ ಕೆಲಸ ಮಾಡೋರೆಲ್ಲ ನನ್ನ ದಾಯಾದಿಗಳೇ. ಆದ್ರೇನು? ನನ್ನ ಸಮಸ್ಯೆ ನನಗೆ. ಬದುಕಿನಲ್ಲಿ ಸುಖ ಅನ್ನೂದು ಅರಸಿ ಅರಸಿ ಸಾಕಾಗಿ ಹೋಯ್ತು. ನನ್ನ ಸಮಸ್ಯೆ ನಿಮಗೆ ಅರ್ಥ ಆಗ್ತದ್ಯೆ? ಇದಕ್ಕೆ ಪರಿಹಾರ ತೋರ್ಸುವವರು ಯಾರು? ಪರಿಹಾರ ತೋರ್ಸುವವರು ಯಾರು?
(ಕಾರ್ಮಿಕನು ಕೂಡ ರೈತನ ಜೊತೆಯಲ್ಲಿ ಪ್ರೇಕ್ಷಕರಿಗೆ ಬೆನ್ನು ಹಾಕಿ ನಿಲ್ಲುವನು. ರಂಗದಲ್ಲಿ ಒಮ್ಮೆ ಕತ್ತಲು ಕವಿದು ಪುನ- ಬೆಳಕು ಬಿದ್ದಾಗ ಬುದ್ಧಿಜೀವಿಯ ಪ್ರವೇಶವಾಗುವುದು. ಇವನು ಬೆನ್ನಿಗೆ ಖುರ್ಚಿಯ ಎರಡು ಕೈಗಳನ್ನು ಕಟ್ಟಿಕೊಂಡಿರುವನು. ಅವನು ರಂಗದಲ್ಲಿ ಅತ್ತಿತ್ತ ಅಡ್ಡಾಡುತ್ತಿರುವಾಗ-)
ಮೇಳ-
ಅಯ್ಯಾ ಬುದ್ಧಿ ಅಂತಾರೆ
ಸಾರ್‌ ಸಾಹೇಬ್ರೆ ಅಂತಾರೆ
ನಮಸ್ಕಾರ, ಕೈ ಮುಗ್ದೆ
ಅಡ್‌ ಬಿದ್ದೆ, ಸಲಾಮ್‌
ಇವೆಲ್ಲದಕ್ಕೂ ನನ್ನದೊಂದು ದೊಡ್ಡ ಸಲಾಮು
ಇವೆಲ್ಲದಕ್ಕೂ ನನ್ನದೊಂದು ದೊಡ್ಡ ಸಲಾಮು, ದೊಡ್ಡ ಸಲಾಮು

ಬುದ್ಧಿ ಭಾವಕೆ ಬೆಸುಗೆ
ಭಾವ ಒಲವಿಗೆ ಬೆಸುಗೆ
ಒಲವು ಮರೆಸಿತು ಪ್ರಜ್ಞೆ
ಕವಿಸಿ ನಡೆಯಿತು ಬೈಗ
ಕವಿದ ಇರುಳಿನ ನಡುವೆ
ಬಳ್ಳಿ ಮಿಂಚಿನ ಬೆಳಕ
ಬಯಸಿ ಬಯಸಿ ಜೀವ
ಸಾಕು ಸಾಕೋ ಎನುವ ನೋವ

ಬು.ಜಿ.- ಹಿಹ್ಹಿಹ್ಹಿ ನೀವು ನನ್ನ ಗುರುತು ಹಿಡೀದಿದ್ದರೂ ನನಗೆ ನಿಮ್ಮೆಲ್ಲರ ಗುರುತು ಬಹಳ ಚೆನ್ನಾಗಿ ಇದೆ. `ಎಲಾ ಇವನ’ ಎನ್ನಬೇಡಿ. ಒಂದು ವೇಳೆ ನೀವು ನನ್ನ ಉಪೇಕ್ಷೆ ಮಾಡಿದರೂ ಸೈ, ನಾನು ನಿಮ್ಮ ಉಪೇಕ್ಷೆ ಮಾಡ್ಲಿಕ್ಕೆ ಬರ್ತದ್ಯೆ? ನನ್ನ ಬದುಕು ಸಾಗಬೇಡವೆ? ನಾನು ಬಹುರೂಪಿ ನೋಡಿ. ಮುಂಜಾನೆ ಮಾಸ್ತರಿಕಿ ಮಾಡಿದರ ಮಧ್ಯಾಹ್ನದಾಗ ವಕೀಲಕಿ ಮಾಡ್ತೇನೆ. ಮತ್ತೆ ಸಂಜೆ ಮುಂದೆ ಮಂತ್ರಿಗಳಿಗೆ ಭಾಷಣ ಬರೆದು ಕೊಡಲಿಕ್ಕೆ ಹೋಗ್ತೇನೆ. ನಡುವೆ ಟೈಂ ಉಳಿದ್ರೆ ಸಾಹಿತಿ ಆಗ್ತೇನೆ. ಅಂದ್ರೆ ಕತೆ, ಕವನ ಬರೀತೇನೆ. ನಾಟಕ ಬರೀತೇನೆ. ನಾಟಕದಲ್ಲಿ ಪಾರ್ಟು ಮಾಡುತ್ತೇನೆ. ಬುದ್ಧಿಗೆ ಪ್ರಜ್ಞೆಯನ್ನು ಬಲಿಯಾಗಿಸಿ ಬುದ್ಧಿಜೀವಿ ಎನಿಸಿಕೊಂಡು ಬದುಕುತ್ತಿರುವ ನನ್ನಂಥವನನ್ನು ಕಂಡು ನೀವು ಥೂ ಎಂದು ಉಗುಳಬಹುದು. ಇಂದೋ ಎಂದೋ ಬಿದ್ದುಹೋಗಬಹುದಾದ ಈ ಶರೀರದ ಕಾಮನೆಗಳ ಪೂರೈಕೆಗೆ ಪ್ರಜ್ಞೆ ನೆರವಾದರೂ ಅಷ್ಟೇ, ಬುದ್ಧಿ ನೆರವಾದರೂ ಅಷ್ಟೇ. ಬರೀ ಬುದ್ಧಿ ಜೀವಿ ಆದ್ರೆ ಈಗಿನ ಕಾಲದಲ್ಲಿ ಸಾಕಾಗುವುದಿಲ್ಲ. ಬದ್ಧ ಜೀವಿಯೂ ಆಗಬೇಕು. ನಾಲ್ಕು ಮಂದಿಯ ಕೂಡ ಸೈ ಅನ್ನಿಸಿಕೊಂಡು ಹೋಗಬೇಕಿದ್ದರೆ ಒಂದು ಪಕ್ಷಕ್ಕೆ ಬದ್ಧತೆ, ಒಂದು ಉಡುಪಿಗೆ ಬದ್ಧತೆ, ಒಂದು ತಿನಿಸಿಗೆ ಬದ್ಧತೆ, ಒಂದು ಸಿಗರೇಟಿಗೆ ಬದ್ಧತೆ, ಒಂದು …. ಒಂದು… ಹಾಂ ಒಂದು ತತ್ವಕ್ಕೆ ಬದ್ಧತೆ ಇರಬೇಕು. ಹಾಂಗೆ ಇಲ್ಲದೆ ಇದ್ರೆ ಇದ್ದ ಹಾಗಾದ್ರೂ ನಟನೆ ಮಾಡಲಿಕ್ಕೆ ಕಲಿಬೇಕು. ನನಗೆ ಈಗೀಗ ಅನಿಸಲಿಕ್ಕೆ ಹತ್ತಿದೆ, ಈ ನಟನೇನೇ ಬುದ್ಧಿವಂತಿಕೆ ಎನಿಸಿಕೊಂಡಿದೆಯೋ ಹೇಗೆ ಅಂತ. ಇವ್ನು ಎಲ್ಲಿಂದ ಬಂದ್ನಪ್ಪ ದೇಡ್‌ ಬುದುವಂತ ಎನ್ನೂ ಮೊದ್ಲೆ ಸ್ವಲ್ಪ ವಿಚಾರ ಮಾಡಿ. ನಾನು ಬದುಕುತ್ತಿರುವ ಬದುಕು ನನಗೆ ಇಷ್ಟವಾದದ್ದು ಎಂದು ತಿಳಿಬೇಡಿ. ಆದ್ರೂ ಹೀಂಗೆ ಬದುಕೂದು ನನಗೆ ಅನಿವಾರ್ಯವಾಗಿಬಿಟ್ಟಿದೆ. ಏನು ಮಾಡೂದು ಹೇಳಿ? ಕ್ಷಮಿಸಿ.

(ಇವನು ಕೂಡ ಉಳಿದಿಬ್ಬರಂತೆ ಪ್ರೇಕ್ಷಕರಿಗೆ ಬೆನ್ನುಹಾಕಿ ಅವರ ಜೊತೆಯಲ್ಲೇ ನಿಲ್ಲುವನು. ರಂಗದಲ್ಲಿ ಒಮ್ಮೆ ಕತ್ತಲಾಗಿ ಪುನಃ ಬೆಳಕು ಮೂಡಿದಾಗ ದಲಿತ ಪ್ರವೇಶಿಸುವನು. ಇವನ ಬೆನ್ನಿಗೂ ಖುರ್ಚಿಯ ಕುಳ್ಳುವ ಭಾಗದ ಹಲಗೆ, ಒರಗುವ ಭಾಗ ಇರುವವು. ಅತ್ತಿಂದಿತ್ತ ಅವನು ಸುತ್ತುತ್ತಿರುವಾಗ ಮೇಳ ಪ್ರಾರಂಭಿಸುವುದು.)

ಮೇಳ-
ಅಯ್ಯೋ, ಅಯ್ಯಯ್ಯಯ್ಯಯ್ಯೋ
ನಾನು ಬಂದಿನ್ರಿ, ನಾನು ಬಂದೀನ್ರಿ
ಮರೆಗೆ ನಿಂತಿರ್ರಿ, ಅಯ್ಯೋ
ನೋಡಬ್ಯಾಡ್ರಿ ನನ್ನ ನೋಡಬ್ಯಾಡ್ರಿ
ನೋಡ್‌ ಬಿಟ್ರೆ ಮುಟ್ಟಚಟ್ಟ
ಈ ಚಳೀಲಿ ಸಾನ ಮಾಡೋದ್‌ ಬೋ ಕಷ್ಟ
ನಾನ್‌ ಬಂದಿನ್ರೋ, ನೀವ್‌ ಮರೆಯಾಗ್ರೋ

ದಲಿತ- ಹೌದೌದು, ನಾನ್‌ ಬಂದೆ. ಇನ್‌ ನೀವು ಮರೆಯಾಗ್ಲೇ ಬೇಕು. ಯಾಕೆ ಅಂತೀರಾ? ನನ್ನ ನೋಡ್‌ಬಿಟ್ರೆ ನಿಮಗೆ ಮೈಲಿಗೆಯಾಗ್ತದೆ. ನಿಮ್ಮ ಶರೀರ್ದ ಇಂಚಿಂಚೂ ನೀರ್ನಲ್ಲಿ ತೋಯಬೇಕು. ಯಾಕೆ ಕಷ್ಟ? ನಾನು ಬಂದಾಗ ನೀವು ಮರೆಯಾಗ್ಲೇ ಬೇಕು. ಬಹಳ ವರ್ಷಗಳಾಗಿತ್ತು, ನನಗೂ ನಿಮಗೂ ಮುಖಾಮುಖಿನೇ ಆಗಿರ್ಲಿಲ್ಲ. ಇನ್‌ ಎಷ್ಟ್‌ ವರ್ಷ ಇದೇ ರೀತಿ ಮುಖ ಮುಖ ಮರೆಮಾಚ್ತಾನೇ ಇರಬೇಕು? ಒಬ್ರಿಗೊಬ್ರು ಎದುರಿಗೆ ನಿಂತುಬಿಡುವಾ. ನನ್ನ ನೀವು ಒಂದು ಸಲ ಚೆನ್ನಾಗಿ ನೋಡಿಬಿಡಿ. ನಿಮ್ಮ ನಾನು ಒಂದು ಸಲ ಚೆನ್ನಾಗಿ ನೋಡ್‌ ಬಿಡ್ತೀನಿ. ನನಗೂ ನಿಮಗೂ ಏನ್‌ ಫರಕು ಇದೆ ಅನ್ನೂದಾದ್ರೂ ನೋಡ್‌ ಬಿಡ್ತೆ. ನೀವು ಆಡಿದ್ರೆ ಮಾತ್‌ ಕೇಳ್ತದೆ. ದೇಹ ಕಾಣೋದಿಲ್ಲ. ಶರೀರ ಇದ್ದೂ ಇನ್‌ ಎಷ್ಟ್‌ ದಿವ್ಸ ಅಶರೀರಿಗಳಾಗಿ ಉಳೀಲಿಕ್ಕೆ ಬಯಸ್ತೀರಿ? ಓಹೋ ಹಿಂಗಾ ನಿಮ್ಮ ಆಲೋಚ್ನಿ? ಕಾಣೋ ಶರೀರದಿಂದ ಬರುವ ಮಾತಿಗಿಂತ ಕಾಣದಿರುವ ಶರೀರದಿಂದ ಬರುವ ಮಾತಿಗೆ ಬೆಲೆ ಹೆಚ್ಚೂಂತ ನೀವು ತಿಳಿದೀರಿ ಅಂತ ಕಾಣ್ತದೆ. ನಂಗೂ ಹಂಗೇ ಭ್ರಮೆ ಇತ್ತು ಹಿಂದೆ. ಇವತ್ತಿಲ್ಲ. ನಾನು ಬದಲಾಗಿ ಬಿಟ್ಟೀನ್ರಿ. ತುಂಬಾ ಬದಲಾಗಿ ಬಿಟ್ಟೀನಿ. ಹೌದ್ರೀ, ಹೌದ್ರೀ ನಾನು ತುಂಬಾ ಬದಲಾಗಿ ಬಿಟ್ಟಿನ್ರೀ. ಅಯ್ಯೋ ನಾನು ಬದಲಾಗಿದ್ದೇನೆ ಅಂತ ಇವ್ರಿಗೆ ಹ್ಯಾಗೆ ತೋರ್ಸಿ ಕೊಡೋದು. ಅಯ್ಯೋ, ಅಯ್ಯೋ ಹ್ಯಾಗ್ರಿ ತೋರ್ಸಿ ಕೊಡೋದು?
(ಇವನೂ ಉಳಿದ ಮೂವರಂತೆ ಪ್ರೇಕ್ಷಕರಿಗೆ ಬೆನ್ನು ಹಾಕಿ ಅವರಿಂದ ಸ್ವಲ್ಪ ದೂರದಲ್ಲಿ ನಿಲ್ಲುವನು.)
ರೈತ- (ಮುಖ ತಿರುಗಿಸಿ ನಾಲ್ಕು ಹೆಜ್ಜೆ ಮುಂದೆ ಬರುವನು) ನಮ್ಮ ಸಮಸ್ಯೆಗೆ ಪರಿಹಾರ ಸೂಚಿಸುವವರು ಯಾರಾದರೂ ಇದ್ದಾರಾ?
ಕಾರ್ಮಿಕ- (ಪ್ರೇಕ್ಷಕರಿಗೆ ಮುಖ ಮಾಡಿ ಮುಂದಕ್ಕೆ ಬಂದು) ನನ್ನ ಸಮಸ್ಯೆ ನಿಮಗೆ ಅರ್ಥ ಆಗ್ತದ್ಯೆ?
ಬು.ಜೀ.- (ಇವನೂ ಅವರಂತೆ ಮುಂದೆ ಬಂದು) ಏನ್‌ ಮಾಡೂದು ಹೇಳಿ?
ದಲಿತ- (ಹೆದರುತ್ತ ಹೆದರುತ್ತ) ಅಯ್ಯೋ ನಾನು ಇವ್ರಿಗೆ ಹೇಗೆ ತೋರ್ಸಿಕೊಳ್ಳಲಿ?
ರೈತ- ಅಂದ್ರೆ, ನಮ್ಮೆಲ್ಲರಿಗೂ ಒಂದಂದು ಸಮಸ್ಯೆ ಇದೆ ಅಂದಹಾಗೆ ಆಯ್ತು.
ಕಾರ್ಮಿಕ- ಸಮಸ್ಯೆ ಇದೆ, ಆದ್ರೆ ಒಬ್ಬೊಬ್ಬರದು ಒಂದೊಂದು.
ಬು.ಜೀ.-ನಮ್ಮ ಸಮಸ್ಯೆ ಪರಿಹಾರ ಮಾಡಿಕೊಳ್ಳಿಕ್ಕೆ ಒಂದುಪಾಯ ಇದೆ.
ರೈತ, ಕಾರ್ಮಿಕ (ಒಟ್ಟಿಗೆ)- ಏನು ಅದು?
ಬು.ಜೀ.- ನಾವೆಲ್ಲ ಹೀಗೆ ಬೇರೆಬೇರೆಯಾಗಿ ಇರ್ಬಾರ್ದು. ನಾವೆಲ್ಲ ಒಟ್ಟಿಗೆ ಸೇರಬೇಕು. ಒಬ್ಬರ ಕೈಗೆ ಇನ್ನೊಬ್ಬರ ಕೈ ಕೂಡಿಸಬೇಕು. ಒಂದೇ ಕೈ ಗಾಳಿಯಲ್ಲಿ ಆಡಿಸಿದರೆ ಸದ್ದು ಬರ್ತದ್ಯೆ? ಇಲ್ಲ. ಹಂಗೇ ಇದು. ನೋಡಿ ಅಲ್ಲಿ, ದೂರದಲ್ಲಿ ನಮಗೆ ಕಾಣದಾಂಗೆ ನಿಂತಾನಲ್ಲ. ಅವನೂ ನಮ್ಮೊಟ್ಟಿಗೆ ಬರಬೇಕು. ಆಗ ಮಾತ್ರ ನಮ್ಮ ತೋಳ್ಗಳಲ್ಲಿ ಭೀಮಶಕ್ತಿ, ಬಕನ ಶಕ್ತಿ, ಕೀಚಕ, ದುರ್ಯೋಧನ, ಶಲ್ಯ ಇನ್‌ ಯಾರ್ಯಾರ್‌ ದೊಡ್‌ ದೊಡ್‌ ಮಲ್ಲರಿದ್ದರಲ್ಲ……
ಕಾರ್ಮಿಕ- ದಾರಾಸಿಂಗ್‌, ಕಿಂಗ್‌ಕಾಂಗ್‌
ಬು.ಜೀ.- ಹಾಂ, ಅವರ್ನೂ ಸೇರ್ಸಿಕೊಳ್ಳಿ. ಅವರೆಲ್ಲರ ಶಕ್ತಿಯೂ ಬಂದು ಸೇರ್ತದೆ. ಒಪ್ಗೆನಾ ನಿಮಗೆ?
ರೈತ- ಒಪ್ಗೆ, ಒಪ್ಗೆ.
ಕಾರ್ಮಿಕ- ಹ್ಯಾಂಗಾದ್ರೂ ಆಗ್ಲಿ. ಒಟ್ಟಿನ ಮೇಲೆ ನಮ್ಮ ಕಷ್ಟ ದೂರಾಗ್ಲಿ.
ಬು.ಜೀ.- ಹಾಗಾದ್ರೆ, ಓ ಅಲ್ಲಿ ದೂರದಲ್ಲಿ ಕಾಣದಾಂಗೆ ನಿಂತಾನಲ್ಲ, ಕರೀರಿ ಅವನ.
ರೈತ- ಬಾರೋ ಅಣ್ಣ ಇತ್ಲಾಗೆ.
ದಲಿತ- `ಅಣ್ಣ!’ ಇದೇನೋ ಹೊಸ ಶಬ್ದ ಅಪ್ಪಾ.
ಕಾರ್ಮಿಕ- ಬಾ, ಬಾ, ದೂರ್‌ ದೂರಾನೇ ಯಾಕೆ ನಿಲ್ತಿ? ಹತ್ತಿರ ಬಾ.
ಬು.ಜೀ.- ಬಾ, ಹೆದರಬೇಡ. ನಿನ್ನ ಅಗತ್ಯ ನಮಗೆ ಇದೆ. ಹಾಗೆ ನಿನ್ನ ಕಷ್ಟಾನೂ ದೂರಾಗ್ತದೆ.
ದಲಿತ- ಹೌದಾ, ಹೌದಾ, ಹಂಗಾದ್ರೆ ನಾನು ಏನು ಮಾಡಬೇಕು ಹೇಳಿ?
ಬು.ಜೀ.- ಇವ್ರ ಕೈಗೆ ನಿನ್ನ ಕೈ ಜೋಡಿಸಬೇಕು.
ದಲಿತ- ನನ್ನ… ನ… ನ್ನ.. ಕೈ ಇವರ…… ಕೈಗೆ ಜೋ….. ಡ್ಸ…. ಬೇಕಾ?
ಬು.ಜೀ.- ಅಂದ್ರೆ ನಿನ್ನ ಸಹಕಾರ ನಮಗೆ ಬೇಕು ಅಂತ. ನಮ್ಮ ಬಲವಂತದಿಂದ ನೀನು ಮಾಡುವ ಬಾಹ್ಯ ದೈಹಿಕ ಕ್ರಿಯೆಯಲ್ಲಿ ನನ್ನ ಆಸಕ್ತಿ ಇಲ್ಲ. ನೀನು ನಿನ್ನ ಮನಸ್ಸಿನಿಂದ ನಮ್ಮ ಮುಟ್ಟಬೇಕು. ಅದರ ಜರೂರು ಅದೆ.
ದಲಿತ- ಹಿಂಗೆ ನಾವು ಒಟ್ಟಿಗೆ ಕೂಡಿ ಏನ್‌ ಮಾಡವ್ರು ಅವ್ರೆ?
ಬು.ಜೀ.- ನಾವು ಸೃಷ್ಟಿ ಮಾಡಬೇಕು ಸೃಷ್ಟಿ. ಹೊಸಾ ಸೃಷ್ಟಿ.
ಕಾರ್ಮಿಕ- ಏನು? ಸೃಷ್ಟಿ?
ಬು.ಜೀ.- ಹಾಂ. ಹೌದೌದು, ಸೃಷ್ಟಿ. ಒಂದು ಹೊಸಾ ಖುರ್ಚಿಯ ಸೃಷ್ಟಿ ಮಾಡಬೇಕು. ನಿನ್ನ ಉಳಿ, ಸುತ್ತಿಗೆ, ಮೊಳೆಗಳಿಂದ ಅಲ್ಲ. ನಮ್ಮ ತೋಳುಗಳಿಂದ.
ರೈತ- ಅಂದ್ರೆ?
ಬು.ಜೀ.- ಖುರ್ಚಿ ಅಂದ್ರೆ ಅಧಿಕಾರ. ಅಧಿಕಾರ, ಅದಿದ್ದರೆ ಮಾತ್ರ ಇವತ್ತು ಬೆಲೆ. ಅದು ಹೋಯ್ತೋ ಏನೂ ಇಲ್ಲ. ನಾವು ಎಲ್ಲರೂ ಒಟ್ಟಿಗೆ ಸೇರಿದರೆ ನಮ್ಮ ಕಷ್ಟಗಳನ್ನೆಲ್ಲ ಪರಿಹರಿಸುವಂಥವನೊಬ್ಬನನ್ನು ನಾವು ಅಧಿಕಾರದ ಗಾದಿಗೆ ಏರಿಸಬಹುದು. ಎಂ.ಎಲ್‌.ಎ. ಮಾಡಬಹುದು, ಮಂತ್ರಿ ಮಾಡಬಹುದು, ಮುಖ್ಯಮಂತ್ರಿ, ಪ್ರಧಾನಮಂತ್ರಿ ಇನ್‌ ಏನೇನೋ ಮಾಡಬಹುದು.
ಕಾರ್ಮಿಕ- ಮಾಡಬಹುದು?
ರೈತ- ನಮಗೆ ಅರ್ಥ ಆಗ್ಲಿಲ್ಲಪ್ಪ.
ಬು.ಜೀ.- ಕಷ್ಟ ಬಂದಾಗ್ಲೇ ಒಕ್ಕಟ್ಟಿನ ವಿಚಾರ ತಲೇಲಿ ಮೂಡೋದು. ಹಿಂದೆ ಮಹಿಷಾಸುರ ಹುಟ್ಕೊಂಡಾಗ ದೇವತೆಗಳೆಲ್ಲರೂ ಸೇರಿ ತಮ್ಮ ತಮ್ಮ ಶಕ್ತಿ ಕೊಟ್ಟು ದೇವಿಯನ್ನು ಸೃಷ್ಟಿ ಮಾಡಿದರು. ಆ ದೇವಿ ಮಹಿಷಾಸುರನನ್ನು ಕೊಂದು ಹಾಕಲಿಲ್ವೆ? ಹಾಗೇ ಇದು. ಒಬ್ಬನ ಅವತಾರ ನಾವು ಮಾಡಿಸಬೇಕು.
ದಲಿತ- ಇದು ಹ್ಯಾಗೆ ಸಾಧ್ಯ?
ಬು.ಜೀ.- ಹ್ಯಾಗೆ ಅಂದ್ರೆ, ಬಂತಲ್ಲ ಇಲೆಕ್ಸನ್ನು. ಅದ್ರಲ್ಲಿ ನಾವೆಲ್ಲ ಒಟ್ಟಿಗೇ ಒಂದೇ ಪಾರ್ಟಿಗೇ ಓಟು ಹಾಕಬೇಕು. ನಾವೆಲ್ಲ ಅಂದರೆ ನಾವು ನಾಲ್ಕು ಜನ ಅಷ್ಟೇ ಅಲ್ಲ. ನಾವು ಪ್ರತಿನಿಧಿಸುತ್ತ ಇದ್ದೇವಲ್ಲ, ರೈತ ಬಂಧುಗಳು, ಕಾರ್ಮಿಕ ಬಂಧುಗಳು, ದಲಿತ ಬಂಧುಗಳು, ಬುದ್ಧಿಜೀವಿ ಅನ್ನಿಸಿಕೊಂಡವರು ಎಲ್ಲರೂ. ಕೈ ಕೈ ಕೂಡ್ಸೋದು ಅಂದ್ರೆ ಇದೇನೇ. ನಮ್ಮೆಲ್ಲರ ಓಟಿನಿಂದ ಪ್ರಚಂಡ ಬಹುಮತದಿಂದ ಆರ್ಸಿ ಬಂದಾ ಅಂದ್ರೆ ಮಂತ್ರಿ ಆಗೇ ಆಗ್ತಾನೆ. ಮಂತ್ರಿ ಆದ ಅಂದ್ರೆ ನಮ್ಮೆಲ್ಲ ಕಷ್ಟಾನೂ ಪರಿಹಾರ ಆಗ್ತದೆ. ಒಪ್ಗೆನಾ?
ಮೂವರೂ- ಒಪ್ಗೆ, ಒಪ್ಗೆ.
ಬು.ಜೀ.- ಹಂಗಾದ್ರೆ ಯಾರಿಗೆ ಓಟು ಹಾಕ್ತೀರಿ?
ರೈತ- ಇಷ್ಟೆಲ್ಲ ಹೇಳ್ದೆಯಲ್ಲಾ? ಅದನ್ನೂ ನೀನೇ ಹೇಳ್ಬಿಡು. ಆರ್ಸಿ ಬಂದವ ಮಂತ್ರಿ ಆದ ಅಂದ್ರೆ ಅವ್ನಿಗೆ ಭಾಷ್ಣ ಬರೆದು ಕೊಡುವವನು ನೀನೇ. ಅವ್ನ ಹೊಗಳಿ ಪತ್ರಿಕೆಯಲ್ಲಿ ಬರೆಯುವವನೂ ನೀನೇ ಅಲ್ವಾ?
ಬು.ಜೀ.- ಅದೆಲ್ಲಾ ಇರ್ಲಿ. ಆ ಮೇಲಿನ ಮಾತು. ಎಲ್ರಿಗೂ ಒಪ್ಗೆಯಾಗುವ ಮನುಷ್ಯಾನೇ ಆಗ್ಬೇಕು. ಶಿವಯ್ಯ ಹೆಂಗಿದ್ದಾನೆ? ಬಡವರ ಕಷ್ಟಗಳ ಬಗ್ಗೆ ಅವನಿಗೆ ತುಂಬಾ ಕಳಕಳಿ ಇದೆ.
ಕಾರ್ಮಿಕ- ಸರಿ, ನೀ ಹೇಳಿದ ಮೇಲೆ ಆಯ್ತು. ಅವನನ್ನೇ ನಾವು ಬೆಂಬಲಿಸಿದರೆ ಆಯ್ತು.
(ರಂಗದಲ್ಲಿ ಕತ್ತಲು)
(ಮತ್ತೆ ಬೆಳಕು ಆದಾಗ ಎಲ್ಲರ ಕೈಗಳಲ್ಲೂ ಅವರ ಬೆನ್ನಿಗಿದ್ದ ಖುರ್ಚಿಯ ಭಾಗಗಳು ಇರುವವು. ನಾಲ್ಕು ಜನರೂ ಮೊಣಕಾಲೂರಿ ಕುಳಿತು ಬಿಡಿ ಭಾಗಗಳನ್ನು ಜೋಡಿಸಿ ಒಂದು ಖುರ್ಚಿ ತಯಾರಿಸುವರು. ಒಬ್ಬೊಬ್ಬನೂ ಅದರ ಮೇಲೆ ಕುಳಿತು ಸರಿಯಾಗಿದೆಯೇ ಹೇಗೆಂದು ಪರೀಕ್ಷಿಸಿ ನೋಡುವನು. ರಂಗದಲ್ಲಿ ಪುನಃ ಕತ್ತಲು.)

ದೃಶ್ಯ 2

(ಶಿವಯ್ಯನ ಮನೆ. ಶಿವಯ್ಯ ಮೊಣಕಾಲಿಗಿಂತ ಮೇಲೆ ಬರುವ ಪಂಚೆಯನ್ನು ಕಚ್ಚೆಹೊಡೆದು ಉಟ್ಟಿದ್ದಾನೆ. ಟೇಬಲ್ಲಿನ ಪಕ್ಕದಲ್ಲಿ ಇದ್ದ ಖುರ್ಚಿಯ ಮೇಲೆ ಕುಳಿತು ಪೇಪರು ಓದುತ್ತಿದ್ದಾನೆ. ಅವನು ತೊಟ್ಟ ಬನಿಯನ್ನು ಅಲ್ಲಲ್ಲಿ ಹರಿದಿದೆ. ವಯಸ್ಸು ಸುಮಾರು ನಲ್ವತ್ತು.)
ಬು.ಜೀ.- (ಬಾಗಿಲಲ್ಲಿಯೇ ನಿಂತು ಕೆಮ್ಮುವನು.)
ಶಿವಯ್ಯ- (ಪೇಪರು ಮಡಚುತ್ತ) ಯಾರು? ಬನ್ನಿ ಒಳಗೆ.
ಬು.ಜೀ.- (ಪ್ರವೇಶಿಸುತ್ತ) ನಮಸ್ಕಾರ ಶಿವಯ್ಯ.
ಶಿವಯ್ಯ- ನಮಸ್ಕಾರ, ನಮಸ್ಕಾರ. ಬರ್ಬೇಕು, ಬರ್ಬೇಕು. (ಅವನು ಹೀಗೆ ಹೇಳುತ್ತಿರುವಾಗಲೆ ರೈತ, ಕಾರ್ಮಿಕ, ದಲಿತ ಇವರೂ ಪ್ರವೇಶಿಸುವರು.)
ಶಿವಯ್ಯ- ಅರೆ, ಅರೆ, ಬನ್ನಿ, ಎಲ್ರೂ ಬನ್ನಿ.. ಏನ್‌ ವಿಶೇಷ ಇವತ್ತು? ಅಪರೂಪದವರೆಲ್ಲ ಸ್ವಸ್ವರೂಪದಲ್ಲಿ ಮೂಡಿಬಿಟ್ಟರಲ್ಲ?
ಬು.ಜೀ.- ಬಂದಾಯ್ತು, ಬಂದಾಯ್ತು. ಶಿವಯ್ಯ ಹೆಂಗಿದ್ದಾನೆ ನೋಡ್‌ ಹೋಗ್ವಾ ಅಂತ ಬಂದಾಯ್ತು.
ಕಾರ್ಮಿಕ- ಕಾಣ್ದೆ ದಿನಾನೂ ಬಹಳ ಆಗಿ ಹೋಯ್ತು.
ರೈತ- ಸುಖ-ದುಃಖ ಹೇಳಿಕೊಳ್ವಾ ಅಂತ ಬಂದ್ವಿ.
ದಲಿತ- ಎಲ್ರೂ ಒಟ್ಟಿಗೆ ಬಂದದ್ದು ಕಂಡು ಬೇಜಾರು ಗೀಜಾರು ಆಗ್ಲಿಲ್ಲ ಅಲ್ವಾ? ನೀ ಏನ್‌ ನಮಗೆಲ್ಲ ಚಾ ಮಾಡ್ಸೂ ತೊಂದ್ರೆ ತಗೊಳ್ಳೂದು ಬೇಡ.
ಬು.ಜೀ.- ಬೆಲ್ಲಾನೇ ಬೇಕು ಅಂತಿಲ್ಲ. ಬೆಲ್ಲದಂಥ ಮಾತಿದ್ರೂ ನಡೀತದೆ ಅಂತ ಅಂವ ಹೇಳೂದು.
ಶಿವಯ್ಯ- (ಗೊಂದಲದಲ್ಲಿ ಬಿದ್ದವನಂತೆ) ಏನ್‌ ಸಮಾಚಾರ, ಏನ್‌ ಕತೆ?
ಬು.ಜೀ.- ಶಿವಯ್ಯ, ನಾ ಹೇಳೂದು ಕೇಳು. ನಮಗೆಲ್ಲ ಒಂದೊಂದು ಸಮಸ್ಯೆ ಇದೆ. ನಮ್ಮ ನಮ್ಮಷ್ಟಕ್ಕೆ ನಾವು ಇದ್ದರೆ ಸಮಸ್ಯೆ ಬಗಿಹರೀತದಾ? ಇಲ್ಲ. ನಾವೆಲ್ಲ ಒಟ್ಟುಗೂಡಿದರೆ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗ ಕಂಡುಕೊಳ್ಳಬಹುದು ಅಲ್ವಾ?
ಶಿವಯ್ಯ- ಹೌಹೌದು, ಯಾವ್ದೇ ಕೆಲ್ಸಕ್ಕೂ ಒಬ್ರಿಗಿಂತ ಇಬ್ಬರು ಇದ್ದರೆ ಒಳ್ಳೇದು.
ಬು.ಜೀ.-ಅನ್ಯಾಯ ಕಂಡ್ರೆ ಸಿಡಿದೇಳುವವನು ನೀನು. ಸರ್ಕಾರದ ಎಷ್ಟೋ ತಪ್ಪು ನೀತಿಗಳನ್ನು ನೀನು ಬೀದಿಗಿಳಿದು ಪ್ರತಿಭಟಿಸಿದ್ದೀಯಾ. ಜನರನ್ನು ಕೂಡಿಸುವ ಶಕ್ತಿ ಇದ್ದರೂ ಯಾವುದೂ ಬೇಡ ಅಂತ ನಿನ್ನಷ್ಟಕ್ಕೆ ನೀನು ಇದ್ದೀಯಾ. ಆದ್ರೆ ಈಗ ನೀನು ನಿನ್ನ ಕವಚದಿಂದ ಹೊರಗೆ ಬರಬೇಕು.
ಶಿವಯ್ಯ- ಅಂದ್ರೆ?
ಬು.ಜೀ.- ಬರೂ ಇಲೆಕ್ಸನ್ನದಾಗೆ ನೀನು ನಿನ್ನದೇ ಹೊಸಾ ಪಾರ್ಟಿ ಕಟ್ಟಬೇಕು. ನಾವೆಲ್ಲ ನಿನ್ನ ಬೆಂಬಲಿಸುತ್ತೇವೆ. ನೀನು ಆರ್ಸಿ ಬಂದ ಮೇಲೆ ನಮ್ಮ ಎಲ್ಲ ಬಯಕೆಯನ್ನು ಈಡೇರಿಸಿ ಕೊಡಬೇಕು.
ಶಿವಯ್ಯ- ಅರೇ, ಎಂಥಾ ಮಾತು ಆಡ್ತೀರಿ? ಯಾರಾದ್ರೂ ಕೇಳಿದವರು ನಕ್ಕುಬಿಟ್ಟಾರು. ನಾನೆಲ್ಲಿ, ಇಲೆಕ್ಸನ್‌ ಎಲ್ಲಿ, ಆರ್ಸಿ ಬರೂದು ಎಲ್ಲಿ?
ರೈತ- ಅರೇ, ಶಿವಣ್ಣ, ನಮ್ಮ ಮಾತು ನೀ ಕೇಳು. ನೀ ಚುನಾವಣೆಗೆ ನಿಲ್ಲೂದಕ್ಕೆ ಒಂದು ಕಬೂಲು ಕೊಡು. ಬಾಕಿ ಕೆಲ್ಸ ನಾವು ನೋಡ್ಕಂತೀವಿ.
ಕಾರ್ಮಿಕ- ನಾವು ಇಷ್ಟು ಹೇಳಿದ ಮೇಲೆ ನೀ ಇಲ್ಲ ಅನ್ನುವ ಹಾಗೇ ಇಲ್ಲ.
ದಲಿತ- ಜನವಿರೋಧಿಯಾದ ಈ ಸರಕಾರ ಯಾರು ವಿರೋಧಿಸಿದರೂ ಉರುಳಿ ಹೋಗ್ತದೆ.
ಬು.ಜೀ.- ಇದು ಸಂಧಿಕಾಲ. ಕಾಲ ಕಳೆದುಹೋದರೆ ಮತ್ತೆ ಬರೂದಿಲ್ಲ.
ಶಿವಯ್ಯ- ಈಗ್ಲೇ ಯಾಕೆ ಇಷ್ಟು ಕಸರತ್ತು ಮಾಡೂದು. ಇಲೆಕ್ಸನ್ನಿಗೆ ಇನ್ನೂ ವರ್ಷ ತಡ ಇದೆ. ನಮಗ್ಯಾಕೆ ಈ ರಾಜಕೀಯ. ನಾವು ಮೊದಲಿನ ಹಾಗೇ ಚಳವಳಿ ಮಾಡ್ವ. ಸರಕಾರ ಬಗ್ಗದೆ ಎಲ್ಲಿ ಹೋಗ್ತದೆ?
ಬು.ಜೀ.- ನಾವು ಹೋರಾಟಕ್ಕೆ ಇಳಿದರೆ ಸರಕಾರ ಒಂದು ಆಯೋಗ ನೇಮಿಸಿ ಸುಮ್ಮನೆ ಕುಳಿತು ಬಿಡುತ್ತದೆ. ಅಲ್ಲಿಗೆ ಅವರ ಅವಧಿಯೂ ಮುಗಿಯುತ್ತ ಬರುತ್ತದೆ. ಇನ್ನೂ ಒಂದು ಸಂಗ್ತಿ ಇದೆ. ಇವ್ರು ಈಗ್ಲೇ ಸದ್ಯ ಸರಕಾರ ವಿಸರ್ಜಿಸಿ ಹೊಸ ಚುನಾವಣೆ ನಡೆಸುವ ಹಾಗೂ ಇದೆ.
ಶಿವಯ್ಯ- ಯಾಕೆ?
ಬು.ಜೀ.- ಯಾಕೆ ಅಂದ್ರೆ ಹೊಸ ಶಕ್ತಿ ಸಂಘಟಿತವಾಗಿ ಬಲವಾಗುವುದು ಬೇಡ ಎನ್ನುವುದು ಅವರಲ್ಲಿ ಕೆಲವರ ನಿಲುವು.
(ಬಾಗಿಲಲ್ಲಿ ಒಬ್ಬ ಬಂದು ನ್ಯೂಸ್‌ ಪೇಪರು ಒಗೆದು ಹೋಗುವನು. ದಲಿತ ಅದನ್ನು ಎತ್ತಿಕೊಂಡು ತಿರುವು ಮುರುವು ಹಿಡಿದುಕೊಂಡು ನೋಡುವನು. ಬುದ್ಧಿಜೀವಿ ಅದನ್ನು ತೆಗೆದುಕೊಂಡು ಕಣ್ಣಾಡಿಸುವನು. ಅವನ ಮುಖ ಆಶ್ಚರ್ಯದಿಂದ ಅರಳುವುದು.)
ಬು.ಜೀ.- ನೋಡಿ, ನನ್ನ ಊಹೆ ಸರಿಯಾಯ್ತೋ ಇಲ್ವೋ?
ಶಿವಯ್ಯ- ಏನು?
ಬು.ಜೀ.- ಏನಿಲ್ಲ, ರಾಜ್ಯ ವಿಧಾನಸಭೆ ವಿಸರ್ಜನೆ.. ಬರುವ ತಿಂಗಳಲ್ಲಿ ಮಧ್ಯಂತರ ಚುನಾವಣೆ.
ಎಲ್ಲರೂ- ಹೌದಾ!?
ಬು.ಜೀ.- ನೋಡಿ ಮತ್ತೆ. ನಾವು ನಿರ್ಧಾರ ಮಾಡಿ ಬರೂದಕ್ಕೂ ಅವರು ವಿಸರ್ಜನೆ ಮಾಡೂದಕ್ಕೂ ಸರಿ ಹೋಯ್ತು.
ಕಾರ್ಮಿಕ- ಈಗ ನಮ್ಮ ಮುಂದಿನ ಹೆಜ್ಜೆ ಏನು?
ಬು.ಜೀ.- ಮುಂದಿನ ಹೆಜ್ಜೆ ಇಲ್ಲೇ ಈಗಲೇ ಇಡಬೇಕು.
ದಲಿತ- ಹೇಗೆ?
ಬು.ಜೀ.- ಹೇಗೆ ಅಂದ್ರೆ ನಮ್ಮೊಟ್ಟಿಗೆ ಶಿವಯ್ಯನನ್ನು ಎಳ್ಕಂಡು ಹೋಗಬೇಕು. ಅವನನ್ನು ಒಪ್ಪಿಸಬೇಕು.
ಶಿವಯ್ಯ- ನನಗೆ ಬೇಡಪ್ಪಾ ಈ ರಗಳೆ ರಾಜಕೀಯ.
ಎಲ್ಲರೂ- ಒಪ್ಕೊಳ್ಳೋ, ಒಪ್ಕೊಳ್ಳೋ (ಜೋರಾಗಿ ಗದ್ದಲ ಮಾಡುತ್ತ ಒತ್ತಾಯಿಸುವರು.)
ಶಿವಯ್ಯ- ತಡೀರಿ, ತಡೀರಿ. ಸುಮ್ನೆ ಗೌಜಿ ಮಾಡಬೇಡಿ. ನಿಮ್ಮೆಲ್ಲರ ಪ್ರೀತಿ ನನ್ನ ಮೇಲೆ ಇಷ್ಟು ಇದೆ ಅಂತ ತಿಳಿದಿರಲಿಲ್ಲ. ನನಗೆ ಮನ್ಸು ಇಲ್ಲದಿದ್ದರೂ ನಿಮ್ಮೆಲ್ಲರ ಒತ್ತಾಯಕ್ಕೆ ಮಣೀತೀನಿ.. ನೀವು ಹೊರಿಸಿದ ಜವಾಬ್ದಾರಿ ನಾನು ಹೊರ್ತೀನಿ.
ಎಲ್ಲರೂ- ಹಾಂಹಾಂ (ಎನ್ನುತ್ತ ಚಪ್ಪಾಳೆ ತಟ್ಟುತ್ತ ಸ್ವಾಗತಿಸುವರು.)
(ರಂಗದಲ್ಲಿ ಕತ್ತಲು)

ದೃಶ್ಯ 3
(ರಸ್ತೆ. ಶಿವಯ್ಯ ಮತ್ತು ಉಳಿದ ನಾಲ್ವರು ಇದ್ದಾರೆ.)
ಬು.ಜೀ.- ಈಗ ನಾವು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ನಾಮಪತ್ರ ಸಲ್ಲಿಸಿ ಬರೋಣ.
ಶಿವಯ್ಯ- ನೀವೆಲ್ಲರೂ ಬರ್ಬೇಕು.
ರೈತ- ನಾವೆಲ್ಲ ಯಾಕೆ? ನಾವು ಪ್ರಚಾರ ಕಾರ್ಯಕ್ಕೆ ಹೋಗುತ್ತೇವೆ. ನೀವು ಹೋಗಿ ನಾಮಪತ್ರ ಸಲ್ಲಿಸಿ ಬನ್ನಿ. ನಾವೆಲ್ಲ ಜನ ಕೂಡ್ಸುತ್ತೇವೆ.
ಬು.ಜೀ.- ಸರಿ, ಸರಿ. ಅವ್ನು ಹೇಳಿದ ಹಾಗೇ ಮಾಡುವಾ.
(ಇಬ್ಬರು ಒಂದು ದಿಕ್ಕಿಗೂ ಮೂವರು ಒಂದು ದಿಕ್ಕಿಗೂ ಹೋಗುವರು. ಸ್ವಲ್ಪ ಹೊತ್ತು ಬಿಟ್ಟು ರೈತ, ಕಾರ್ಮಿಕ, ದಲಿತ, ಕೆಲವು ಜನರು ರಂಗದಲ್ಲಿ ಬರುವರು. ಈ ಮೂವರ ಕೈಯಲ್ಲಿ ಪ್ರಚಾರದ ಹಲಗೆಗಳು ಇರುವವು. ಅವುಗಳ ಮೇಲೆ ನಿಮ್ಮ ವೋಟು ಶಿವಯ್ಯನಿಗೆ',ಬಡವರ ಬಂಧು ಶಿವಯ್ಯ’ ಇತ್ಯಾದಿ ಬರಹಗಳಿರುವವು. ಅವರು ರಂಗದಲ್ಲಿ ಹಿಂದೆ ಮುಂದೆ ತಿರುಗುತ್ತ ಇರುವಾಗ)
ಮೇಳ-
ನಿಮ್ಮ ವೋಟು ಯಾರಿಗೆ?
ನಮ್ಮ ವೋಟು ಶಿವವಯ್ಯನಿಗೆ
ಬಡವರ ಬಂಧು ಶಿವಯ್ಯ
ಕರುಣೆಯ ಸಿಂಧು ಶಿವಯ್ಯ
ಬೋಲೋರೆ ಬೋಲೋ
ಶಿವಯ್ಯ ಬೋಲೋ
ಬಡವರ ಅಯ್ಯ ಶಿವಯ್ಯ
ನಮ್ಮ ನಿಮ್ಮ ಅಯ್ಯ ಶಿವಯ್ಯ
ನಿಮ್ಮ ವೋಟು ಯಾರಿಗೆ
ನಮ್ಮ ವೋಟು ಶಿವಯ್ಯನಿಗೆ

(ರಂಗದಲ್ಲಿ ಕತ್ತಲು)
ದೃಶ್ಯ 4
(ರಂಗದಲ್ಲಿ ಕುರ್ಚಿಯ ಮೇಲೆ ವೋಟಿನ ಪೆಟ್ಟಿಗೆ ಇರಬೇಕು. ಬೆಳಕು ಅದರ ಮೇಲೆ ಮಾತ್ರ ಕೇಂದ್ರಿತವಾಗಿ ಉಳಿದೆಡೆ ಮಬ್ಬು ಇರಬೇಕು. ಒಬ್ಬೊಬ್ಬರರಾಗಿ ಬಂದು ವೋಟು ಹಾಕಿ ಹೋಗಬೇಕು. ಕೆಲವು ಗಂಡು ಹೆಣ್ಣುಗಳೂ ಓಟು ಹಾಕಲು ಬರಬೇಕು. ಸ್ವಲ್ಪ ಸಮಯದ ನಂತರ ಬೆಳಕು ತೆಗೆಯಬೇಕು.)
ದೃಶ್ಯ 5
(ಈಗ ಶಿವಯ್ಯ ದೊಡ್ಡ ದೋತರ ಉಟ್ಟು, ಉದ್ದ ತೋಳಿನ ಶರ್ಟು ತೊಟ್ಟು ಟೋಪಿ ಹಾಕಿದ್ದಾನೆ. ಕೊರಳಿಗೆ ಮಾಲೆ ಹಾಕಿದ್ದಾನೆ. ಅವನ ಹಿಂದೆ ಬುದ್ಧಿಜೀವಿ, ರೈತ, ಕಾರ್ಮಿಕ, ದಲಿತರು ತಾವು ಸೃಷ್ಟಿಸಿದ ಖುರ್ಚಿಯ ನಾಲ್ಕು ಕಾಲುಗಳನ್ನು ಒಬ್ಬೊಬ್ಬರು ಹಿಡಿದುಕೊಂಡು ಬಂದು ರಂಗದ ಮಧ್ಯದಲ್ಲಿ ಪ್ರತಿಷ್ಠಾಪಿಸುವರು. ನಾಲ್ಕು ಕಾಲುಗಳಿಗೂ ಒಂದೊಂದು ಬಳ್ಳಿ ಕಟ್ಟಿ ಒಬ್ಬೊಬ್ಬರು ಒಂದೊಂದು ಇಟ್ಟುಕೊಳ್ಳುವರು. ಶಿವಯ್ಯನನ್ನು ಖುರ್ಚಿಯ ಮೇಲೆ ಕೂಡಿಸುವರು. ಜನರೆಲ್ಲ ಅತ್ತ ಇತ್ತ ಓಡಾಡುತ್ತ ಗಜಿಬಿಜಿಯ ವಾತಾವರಣ.)
ಮೇಳ-
ಬಂದ್ನಪ್ಪೋ ಬಂದ ಶಿವಪ್ಪ ಬಂದ
ಬಂದ್ನಪ್ಪ ಬಂದ್ನೋ ಶಿವಪ್ಪ ಬಂದ
ಬಂದ್ನಪ್ಪ ಬಂದ್ನೋ ಶಿವಪ್ಪ ಬಂದ
ಹ್ಯಾಂಗ್‌ ಹ್ಯಾಂಗ್ ಬಂದ‌! ಹಾರ್‌ ಹಾರಿ ಬಂದ
ಹ್ಯಾಂಗ್‌ ಹ್ಯಾಂಗ್‌ ಬಂದ‌! ಓಡೋಡಿ ಬಂದ
ಕಣ್ಮುಚ್ಚಿ ಬಂದ! ಕೈ ತಟ್ಟಿ ಬಂದ
ಬಂದ್ನಪ್ಪೋ ಬಂದ! ಶಿವಪ್ಪ ಬಂದ
ಬು.ಜೀ.- (ಮೇಳದ ಹಾಡಿಗೆ ಅಭಿನಯಿಸುತ್ತಿದ್ದ ಜನರನ್ನು ತಡೆಯುತ್ತ ಎತ್ತರದ ಧ್ವನಿಯಲ್ಲಿ) ಮಹಾಜನಗಳೆ ದಯವಿಟ್ಟು ಶಾಂತರಾಗಿ. ನಿಮ್ಮೆಲ್ಲರ ಹೃದಯಗಳಲ್ಲಿ ಆನಂದ ಇಂದು ಕಡಲಾಗಿ ಉಕ್ಕುತ್ತಿರುವುದಕ್ಕೆ ಕಾರಣ ಏನು ಎನ್ನುವುದನ್ನು ನಾನು ಬಲ್ಲೆ. ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನವರಾದ ಶಿವೇಗೌಡರು ಪ್ರಚಂಡ ಬಹುಮತದಿಂದ ಆರಿಸಿ ಬಂದಿದ್ದಾರೆ. ಅವರು ಮಂತ್ರಿಗಳಾಗಿ ಆಯ್ಕೆಯಾಗುವುದೂ ನಿಶ್ಚಿತ. ಇಂದಿಗೆ ನಮ್ಮ ನಿಮ್ಮೆಲ್ಲರ ಕಷ್ಟಗಳೆಲ್ಲ ಪರಿಹಾರ ಆಗಿ ಹೋಯಿತು. ಈಗ ಮಾನ್ಯರಾದ ಶಿವೇಗೌಡರು ಮಾತನಾಡಬೇಕೆಂದು ನಿಮ್ಮೆಲ್ಲರ ಪರವಾಗಿ ನಾನು ಕೇಳಿಕೊಳ್ಳುತ್ತೇನೆ.
ಶಿವೇಗೌಡ- (ಗಂಟಲು ಸರಿಪಡಿಸಿಕೊಳ್ಳುತ್ತ ಭಾಷಣದ ಧಾಟಿಯಲ್ಲಿ) ಮಹಾಜನಗಳೆ, ಏನೋ ಆಗಿದ್ದ ನಾನು ನಿಮ್ಮ ಬೆಂಬಲದಿಂದ ಇಂದು ಹೀಗಾದೆ. ನನ್ನ ಇಂದಿನ ಸ್ಥಿತಿಗೆ ನೀವೇ ಕಾರಣ. ಈ ಸ್ಥಿತಿಯಲ್ಲಿ ನಾನು ಮಾಡುವ ಯಾವುದೇ ಕಾರ್ಯಗಳ ಗಮ್ಯ ಸ್ಥಳ ನೀವೇ ಆಗಿರುತ್ತೀರಿ. ನೀವು ಅನುಭವಿಸುವ ನೋವೇ ನನ್ನ ನೋವೂ ಕೂಡ. ನಿಮ್ಮ ಕಾಲಿಗೆ ಮುಳ್ಳು ಚುಚ್ಚಿದರೆ ನನ್ನ ಕಾಲು ಕುಂಟಾಗುತ್ತದೆ. ನಿಮ್ಮ ಕುಂಡೆಗೆ ಯಾರಾದ್ರೂ ಒದ್ರು ಅಂದರೆ ನನ್ನ ಹಲ್ಲು ಉದುರುತ್ತದೆ. ಹಗಲೂ ರಾತ್ರಿ ನಾ ನಿಮ್ಮ ಕಷ್ಟ ಸುಖ ವಿಚಾರ್ಸುದು ಬಿಟ್ರೆ ಇನ್ನೇನೂ ಮಾಡುವುದಿಲ್ಲ. ನಿಮ್ಮ ಆಶೀರ್ವಾದ ನನ್ನ ಮೇಲೆ ಎಷ್ಟು ದಿವ್ಸ ಇರ್ತದೋ ಅಷ್ಟು ದಿವ್ಸ ನಾನು ಬೆಳಿತೀನಿ, ಬದುಕ್ತೀನಿ. ಜೈ ಹಿಂದ್.
ರೈತ- ಶಿವೇಗೌಡರಿಗೆ
ಜನ- ಜಯವಾಗಲಿ.
ಕಾರ್ಮಿಕ- ಗೌಡರ ಗೌಡ
ಜನ- ಶಿವೇಗೌಡ
ದಲಿತ- ಆಗ್ತಾನೋ ಆಗ್ತಾನೆ
ಜನ- ಮಂತ್ರ್ಯಪ್ಪ ಆಗ್ತಾನೆ
(ಜನ ಘೋಷಣೆಯನ್ನು ಕೂಗುತ್ತಿರುವಾಗಲೆ ರಂಗದಲ್ಲಿ ಕತ್ತಲು)
ದೃಶ್ಯ 6
(ಮೇಳ ಹಾಡನ್ನು ಹಾಡುತ್ತಿರುವಾಗ ಶಿವಯ್ಯ, ಬುದ್ಧಿಜೀವಿ, ರೈತ, ಕಾರ್ಮಿಕ, ದಲಿತ ಹಾಗೂ ಕೆಲವು ಪುಢಾರಿಗಳ ವೇಷದವರು, ಗುತ್ತಿಗೆದಾರರು ಇತ್ಯಾದಿ ರಂಗದ ಮೇಲೆ ಕಾಣಿಸಿಕೊಳ್ಳುತ್ತಾರೆ. ಎಲ್ಲರೂ ಮೂಕವಾಗಿ ಅಭಿನಯದಲ್ಲಿ ತೊಡಗಬೇಕು. ಶಿವಯ್ಯ ಒಂದು ಕಡೆ ಅಡಿಗಲ್ಲು ಸಮಾರಂಭ, ಇನ್ನೊಂದು ಕಡೆ ಉದ್ಘಾಟನೆ, ಇನ್ನೊಂದು ಕಡೆ ನಲ್ಲಿಯಲ್ಲಿ ನೀರು ಬಿಡುವುದು, ಶಾಲೆಯ ಪ್ರಾರಂಭೋತ್ಸವ, ಭಾಷಣ ಇತ್ಯಾದಿಗಳನ್ನು ಅಭಿನಯಿಸಬೇಕು.)
ಮೇಳ-
ಮೂಡಲಕೂ ಪಡುವಲಕೂ ನೇಸರ
ಓಡೋಡಿ ಬೆವರ್ಯಾನೋ
ಬೆವರ್ಯಾನೋ ಓಡೋಡಿ
ನೆಲ ಬಿರಿದೀದೆ ಮತ್ತೆ ಕಸರಾಗ್ಯಾದೆ
ಮರ ಚಿಗುರೀದೆ, ಎಲೆ ಉದುರೀದೆ
ಚಿಗುರಿ ಹೂವಾಗ್ಯಾದೆ
ಹೂವು ಮಾಲಾಗ್ಯಾದೆ, ಮಾಲಿ
ಶಿವಯ್ಯನ ಕೊರಳ ಏರ್ಯಾದೆ
ರೇಲು ಓಡಿsದೆ, ಧಡ ಧಡ ಓಡಿsದೆ
ಹಳಿ ಸವೆದಾವೆ ಎಲ್ಲೂ ಕೂಡದೆ ಬಿದ್ದಾವೆ
ಮೂಡಲು ಕೆಂಪಾಗ್ಯದೆ, ಪಡುವಲು ಕೆಂಪಾಗ್ಯದೆ.
(ರಂಗದಲ್ಲಿ ಕತ್ತಲು)

ದೃಶ್ಯ 7
(ರೈತ, ಕಾರ್ಮಿಕ, ಬುದ್ಧಿಜೀವಿ, ದಲಿತ ಒಂದೆಡೆ ನಿಂತು ಮಾತನಾಡುತ್ತಿದ್ದಾರೆ.)
ರೈತ- ಅಂತೂ ಇಂತೂ ಶಿವೇಗೌಡರು ಮಂತ್ರಿಗಳು ಆಗಿಬಿಟ್ರು.
ಕಾರ್ಮಿಕ- ಹೌದಪ್ಪಾ ಹೌದು. ಏನ್‌ ಪ್ರಭಾವ ಅವರ್ದು. ನಮ್ಮೂರಿನ ಒಂದು ಕೋಣೆ ಸಾಲಿಗೆ ಮತ್ತೆ ಮೂರು ಕೋಣೆ ಮಂಜೂರು ಮಾಡ್ಸಿದ್ದಾರೆ. ನಮ್ಮೂರಿಗೆ ಕರೆಂಟು ಬಂತು. ಕರೆಂಟ್‌ ಮೋಟಾರ ಪಂಪು ಬರ್ತದೆ. ನೀರು ಎತ್ತುವ ಕೆಲ್ಸ (ರೈತನತ್ತ ನೋಡಿ) ನಿನಗೆ ಕಮ್ಮಿ ಆಗ್ತದೆ.
ದಲಿತ- ಮನ್ಸೂ ಬಾಳ ದೊಡ್ದು. ಆ ದಿನ ಅಷ್ಟ್‌ ದೊಡ್ಡ ಸಭೆಲಿ ನನ್ನ ಕೈ ಹಿಡಿದು ಕುಲ್ಕಿದ್ದೇ ಕುಲ್ಕಿದ್ದು. ನನ್ನ ಭುಜ ನೋಯ್ಲಿಕ್ಕೆ ಹತ್ತಿದ್ರೂ ಬಿಡ್ಲೇ ಇಲ್ಲ.
ರೈತ- ಮೊನ್ನೆ ಮುನಿಸಿಪಾಲ್ಟಿ ಬಯಲಲ್ಲಿ ಅವರು ಮಾಡಿದ ಭಾಷ್ಣಕ್ಕೆ ಎಷ್ಟು ಜನ ಸೇರಿದ್ರು ಗೊತ್ತಾ? ಅವ್ರ ಬಾಯಿಂದ ಹೊರಬಿದ್ದ ಒದೊಂದು ಶಬ್ದ ಕೇಳಿದಾಗ್ಲೂ ನನ್ನ ಮೈಯಲ್ಲಿ ಕರೆಂಟ್‌ ಹರ್ದಹಾಗೆ ಆಯ್ತು. ಹಸಿರುಕ್ರಾಂತಿ ಅದೂ ಇದೂ ಮಾತಾಡಿದ್ರು. (ಬು.ಜೀ. ಕಡೆ ತಿರುಗಿ) ಏನ್ಲಾ ನೀನೇ ಏನೋ ಅದ್ನೆಲ್ಲಾ ಬರ್ದು ಕೊಟ್ಟವ.
ಬು.ಜೀ.- ಹೌದು, ನಾನೇ ಬರ್ದು ಕೊಟ್ಟೆ.
ಕಾರ್ಮಿಕ- ಎಂಟು ದಿನದ ಹಿಂದೆ ನಮ್ಮ ಫ್ಯಾಕ್ಟರಿಗೆ ಬಂದಿದ್ರು. ನಮ್ಮ ಲೇಬರ್ಸ್‌ ಯೂನಿಯನ್ನ ಉದ್ಘಾಟಿಸಿ ಮಾತಾಡಿದ್ರು. ಕಾರ್ಮಿಕರೇ ಈ ದೇಶದ ಬೆನ್ನು ಮೂಳೆ ಅಂದ್ರು. ಎಷ್ಟು ಚಂದ ಇತ್ತು ಅವ್ರ ಭಾಷ್ಣ. ಅದ್ನೂ ನೀನೇ ಬರ್ದು ಕೊಟ್ಟಿದ್ಯಾ?
ಬು.ಜೀ.- ಹೌದು, ಅದ್ನೂ ನಾನೇ ಬರ್ದು ಕೊಟ್ಟೆ.
ದಲಿತ- ನಮ್ಮ ಕೇರಿಗೆ ಜನತಾ ಮನೆ ಮಾಡ್ಸಿ ಕೊಟ್ಟರಲ್ಲ, ಕೊಳವೆ ಬಾವಿ ಎರಡು ತೋಡಿಸಿ ಕೊಟ್ಟರಲ್ಲ. ಅದರ ಚಾಲೂ ಮಾಡೂಕೂ ಅವ್ರು ಬಂದಿದ್ರು. ಅಲ್ಲೂ ಭಾಷ್ಣ ಮಾಡಿದ್ರು.
ಬು.ಜೀ.- ಅವ್ರು ಹೋದಹೋದಲೆಲ್ಲ ಭಾಷಣ ಮಾಡಲೇ ಬೇಕಾಗ್ತದೆ. ಮಂತ್ರಿ ಆದ ಮೇಲೆ ಕೆಲವು ಶಿಷ್ಟಾಚಾರ ಮನ್ಸ್‌ ಇಲ್ದಿದ್ರೂ ಪಾಲಿಸಬೇಕಾಗ್ತದೆ. ಆದ್ರೆ ಅವರನ್ನ ವ್ಯವಸ್ಥೆಯಲ್ಲಿ ಒಂದಾಗಿ ಹೋಗ್ಲಿಕ್ಕೆ ಬಿಡಬಾರದು. ಹತ್ತರಕೂಡ ಹನ್ನೊಂದು ಅವರು ಆಗಬಾರದು. ಹಾಗೆ ಆದ್ರೆ ನಮ್ಮ ಕನಸೆಲ್ಲ ಕನಸಾಗೇ ಇರ್ತದೆ. ಬರೀ ಅವರ ಮಾತಿಗೆ ಮರುಳಾಗುವ ಜನ ಅವ್ರ ಬೆನ್ನಿಗೆ ಬಿದ್ರೆ ಖಂಡಿತ ಅವರು ಗುಂಪಿನ ಕೂಡ ಗೋವಿಂದ ಆಗಿ ಹೋಗ್ತಾರೆ.
ರೈತ- ಅಂದ್ರೆ?
ಬು.ಜೀ.- ಅಂದ್ರೆ ಇಷ್ಟೇ, ಇನ್‌ ಮೇಲೆ ಅವರು ಹೇಳಿದಕ್ಕೆಲ್ಲ ಸುಮ್ಮಸುಮ್ಮನೆ ತಲೆದೂಗದೆ ಏನ್‌ ಹೇಳ್ತಾರೆ ಅನ್ನೂದನ್ನ ಸ್ವಲ್ಪ ಒರೆದು ನೋಡಲಿಕ್ಕೆ ನಾವು ಕಲ್ತುಕೋಬೇಕು.
ಕಾರ್ಮಿಕ- ಅಲ್ಲಾ, ಅವ್ರ ಮಾತೆಲ್ಲ ನಿಂದೇ ಅಲ್ವಾ?
ಬು.ಜೀ.- ಎಲ್ಲಾ ಅಲ್ಲ. ಮೊದಮೊದಲು ನಾನು ಬರ್ದು ಕೊಟ್ಟಿದ್ದು ಅಷ್ಟೇ ಓದ್ತಿದ್ದ. ಆಮೇಲಾಮೇಲೆ ತಾನು ಸ್ವತಃ ಕೆಲವಷ್ಟನನ್ನು ಸೇರಿಸಿ ಹೇಳ್ಲಿಕ್ಕೆ ಹತ್ತಿದೆ. ಈಗೀಗ ಪೂರ್ತಿ ಬೇರೇನೆ ಹೇಳ್ಲಿಕ್ಕೆ ಹತ್ಯಾನೆ.
ದಲಿತ- ಅಂದ್ರೆ?
ಬು.ಜೀ.- ಅಂದ್ರೆ ಇಷ್ಟೇ. ಅವ್ನಿಗೆ ನನ್ನ ಅಗತ್ಯ ಇಲ್ಲ. ನಾನು ಬರೆದು ಕೊಟ್ಟಿದ್ದಕ್ಕೆ ಹಣ ತಗೊಂಡರೆ ಪುಕ್ಕಟೆ ಬರೆದುಕೊಡುವವರನ್ನು ಪೂರೈಸುವವರು ಇದ್ದಾರೆ.
ದಲಿತ- ಯಾರಪ್ಪಾ ಅವ್ರು?
ಬು.ಜೀ.- (ಕಾರ್ಮಿಕನನ್ನು ತೋರಿಸುತ್ತ) ಇವ್ನ ಫ್ಯಾಕ್ಟರಿ ಮಾಲೀಕರು, (ರೈತನನ್ನು ತೋರಿಸುತ್ತ) ಇವ್ನ ಜಮೀನಿನ ಒಡೆಯರು, ಇವನ ಧಾನ್ಯಗಳನ್ನು ಖರೀದಿ ಮಾಡುವ ದಲ್ಲಾಳಿಗಳು. ಇವ್ರೆಲ್ಲ ತಾಮುಂದು ತಾಮುಂದು ಎಂದು ಅವ್ನ ಬೆನ್ನಿಗೆ ಬಿದ್ದಾರೆ.
ರೈತ- ಓಹೋ ಹಿಂಗಾ ಮಜ್ಕೂರು!?
ಕಾರ್ಮಿಕ- ಹಂಗಾದ್ರೆ ಅವನನ್ನು ಯೋಗ್ಯ ಸಮಯದಲ್ಲಿ ಎಚ್ಚರಿಸಿ ಬರುವಾ.
(ರಂಗದಲ್ಲಿ ಕತ್ತಲು)

ದೃಶ್ಯ 8

ಮೇಳ-
ಹಕ್ಕಿ ಕೂಗ್ಯಾವೆ, ರೆಕ್ಕೆ ಬಡಿಬಡಿದು ಹಾರ್ಯಾವೆ.
ಊರೂರು ತಿರುಗ್ಯಾವೆ ಕಾಳು ಅರಸ್ಯಾವೆ
ನೀರ ಗುಟುಕರಿಸ್ಯಾವೆ
ಹತ್ತೂರ ನೀರು ಪಿತ್ಥ ನೆತ್ತಿಗೇರಿಸ್ಯಾದೆ.
ಗೂಡ ದಾರಿ ಮರೆಯಾಗ್ಯಾದೆ, ದಾರಿ ಮರೆಯಾಗ್ಯಾದೆ.

(ಮೇಳ ಈ ಹಾಡನ್ನು ಹಾಡುತ್ತಿರುವಾಗ ಶಿವೇಗೌಡ ರಂಗಕ್ಕೆ ಬರುತ್ತಾನೆ. ಅವನ ಬೆನ್ನಿಗೆ ಕಂಟ್ರಾಕ್ಟರುಗಳು, ಜಮೀನ್ದಾರರರು ಕೆಲವರು ಪ್ರವೇಶಿಸಿ ಕೋಟೆಯ ಹಾಗೆ ಅವನ ಬಳಸಿ ನಿಲ್ಲುತ್ತಾರೆ. ಅವನು ಹಿಂದೆ ಮುಂದೆ ನಡೆಯುವಾಗಲೂ ಆ ಕೋಟೆ ಹಾಗೇ ಇರುತ್ತದೆ. ರಂಗದ ನಾಲ್ಕು ಮೂಲೆಯಿಂದ ಬು.ಜೀ., ದಲಿತ, ರೈತ, ಕಾರ್ಮಿಕ ಬರುತ್ತಾರೆ. ಅವರ ಕೈಯಲ್ಲಿ ಒಂದೊಂದು ಅರ್ಜಿ ಇರುತ್ತದೆ. ಅವರು ಶಿವೇಗೌಡನನ್ನು ಸಮೀಪಿಸಲು ಪ್ರಯತ್ನಿಸುತ್ತಾರೆ. ಆದರೆ ಅವನ ಸುತ್ತ ಇದ್ದ ಕೋಟೆ ಅವರನ್ನು ಹತ್ತಿರ ಬರಗೊಡುವುದಿಲ್ಲ. ಅವರು ಹತ್ತಿರ ಬರಲು ಪ್ರಯತ್ನಿಸುವುದು ಮತ್ತು ಅವರ ಪ್ರಯತ್ನ ವಿಫಲವಾಗುವುದು ನಾಲ್ಕಾರು ಬಾರಿ ನಡೆಯುತ್ತದೆ. ಈ ನಡುವೆ ಶಿವೇಗೌಡ ತನಗೆ ಕೋಟೆಯಾದವರು ಮುಂದುಮಾಡಿದ ಕಾಗದಗಳಿಗೆಲ್ಲ ಸಹಿ ಎಳೆದೆಳೆದು ಕೊಡುತ್ತಿರುತ್ತಾನೆ.

ರಂಗದಲ್ಲಿ ಒಮ್ಮೆ ಕತ್ತಲಾಗುತ್ತದೆ. ಆಗ ಶಿವೇಗೌಡ, ಅವನಿಗೆ ಕೋಟೆಯಾದವರು ಹೋಗಿರಬೇಕು. ಬೆಳಕು ಹೊತ್ತಿದಾಗ ರಂಗದಲ್ಲಿ ನಾಲ್ಕು ಮೂಲೆಗೆ ಈ ನಾಲ್ವರು ಒಬ್ಬರಿಗೊಬ್ಬರು ಬೆನ್ನು ಹಾಕಿಕೊಂಡು ಯೋಚಿಸುತ್ತ ನಿಂತಿರುತ್ತಾರೆ..)
ರೈತ- ನೋಡ್ದ್ಯಾ? ನಮ್ಮ ಮಂತ್ರ್ಯಪ್ಪ ಎಷ್ಟು ದೊಡ್ಡ ಮನುಷ್ಯ ಆಗಿಹೋದ ಅಂತ.
ಕಾರ್ಮಿಕ- ಹೌದು, ಬಾಳ ಬಡಕಾಯ್ಸಿ ಬಿಟ್ಯಾನೆ.
ದಲಿತ- ಇಮಾನ ಮ್ಯಾಲೆ ಹಾರಾಡ್ತಾನಂತಲ್ಲ?
ರೈತ- ಯಾವ ಪೇಪರಿನ್ಯಾಗ ನೋಡಿದ್ರೂ ಅಂವ್ದೇ ಫೋಟೋ.
ಬು.ಜೀ.- ಹೌದೌದು, ಇನ್‌ ನೀವು ಅವ್ನ ಫೋಟೋ ಕತ್ತರಿಸಿ ಚೌಕಟ್ಟು ಹಾಕ್ಸಿ ಪೂಜೆ ಮಾಡೂಕೆ ಅಡ್ಡಿಯಿಲ್ಲ.
ರೈತ- ಯಾವ್ದಾದ್ರೂ ಪೇಪರಿನಲ್ಲಿ ಬಣ್ಣದ ಫೋಟೋ ಬಂದ್ರೆ ಹೇಳಿ.
ಬು.ಜೀ. ಅಂದ್ರೆ ಬಣ್ಣದ ಫೋಟೋಗೆ ಬಣ್ಣದ ಹೂವು ಹಾಕಲಿಕ್ಕೆ ಆಯ್ತು ಅಂತಾನಾ ನಿನ್ನ ಆಲೋಚ್ನಿ?
ಕಾರ್ಮಿಕ- ಬಣ್ಣದ ಫೋಟೋನೇ ಬಾಳ ಚಂದ ಕಾಣೂದಿಲ್ವಾ?
ಬು.ಜೀ.- ಫೋಟೋ ಬಣ್ಣದಿದ್ರೆ ಚಂದಾನೇ. ಆದ್ರೆ ಮನ್ಸಾನೇ ಬಣ್ಣದವ ಆಗಿಬಿಟ್ರೆ ಮಾತ್ರ ಬಾಳ ಕಷ್ಟ. ತಣ್ಣೀರ್‌ ಸುರ್ದು ಅವನ ಬಣ್ಣ ಕಳೀಲೇ ಬೇಕು.
ಕಾರ್ಮಿಕ- ನಮ್ಮ ಮಂತ್ರ್ಯಪ್ಪ ಬಣ್ಣ ಬಳ್ಕೊಂಡಾನೆ ಅಂತೀಯಾ?
ಬು.ಜೀ.- ಅಲ್ದೆ ಮತ್ತೆ? ನಮ್ಮೂರ ಶಿವಯ್ಯನನ್ನು ಯಾವತ್ತು ನಾವು ಶಿವೇಗೌಡರು ಅಂತ ಕೂಗ್ಲಿಕ್ಕೆ ಶುರು ಮಾಡ್ದ್ವೋ ಅವತ್ಲಿಂದ್ಲೆ ಅವನ ಮೂಲ ಬಣ್ಣದಲ್ಲಿ ಬೆರಕೆ ಆಗ್ಲಿಕ್ಕೆ ಶುರು ಆಯ್ತು.
ದಲಿತ- ಅವನ ಬಣ್ಣ ಬದಲಾಗಿದ್ದು ಕರೇನಾ?
ಬು.ಜೀ.- ವಿಚಾರ ಮಾಡು. ಹಿಂದಿನ ವರ್ಷ ಆಗ್ಲಿ, ಈ ವರ್ಷ ಆಗ್ಲಿ ನಮ್ಮ ಮಂತ್ರಿಗಳು ಎಷ್ಟು ಸಲ ನಿಮಗೆ ಮಾತಾಡಸ್ಲಿಕ್ಕೆ ಬಂದ್ರು? ನೀವೇ ಅವರನ್ನು ಹುಡುಕಿಕೊಂಡು ಹೋದಾಗ ಎಷ್ಟು ಸಲ ನಿಮಗೆ ಅವರ ದರ್ಶನ ಆಯ್ತು?
ದಲಿತ- ಹಾಂ, ಅದೂ ಖರೇ ಅನ್ನು.
ಬು.ಜೀ. ಇವತ್ತು ಅವರ ಹಿಂದೆ ಮುಂದೆ ಸುತ್ಕೊಂಡು ಇದ್ದವರೆಲ್ಲ ಯಾರು ಅಂತೀರಿ? ನಮ್ಮ ನಿಮ್ಮ ರಕ್ತ ಹೀರುವ ತಿಗಣೆಗಳು. ಅವರನ್ನು ಪರೀಕ್ಷೆ ಮಾಡಿ ಹತ್ತಿರ ಸೇರ್ಸಿಕೊಳ್ಳಬೇಕಿತ್ತು ಅವನು. ಈಗ ಅವರ ಬಗಲಲ್ಲಿ ಸಿಕ್ಕಿಬಿದ್ದಿದ್ದಾನೆ ಅವ್ನು.
ರೈತ- ನಮಗೆ ಇದೆಲ್ಲ ಹೊಳಿಲೇ ಇಲ್ಲ.
ಬು.ಜೀ.- ಇವ್ನು ಚುನಾವಣೆಗೆ ನಿಂತಾಗ ಅವರೆಲ್ಲ ಇವ್ನ ವಿರುದ್ಧ ಪ್ರಚಾರ ಮಾಡಿದ್ರು. ಕಂಟ್ರಾಕ್ಟರ ಕೇಶವಯ್ಯ ತನ್ನ ಕಾರನ್ನು ಇವನ ವಿರುದ್ಧ ನಿಂತವನ ಪ್ರಚಾರ ಕಾರ್ಯಕ್ಕೆ ಕೊಟ್ಟಿದ್ದ. ಅವನೇ ಇವತ್ತು ಎಲ್ಲರಿಗಿಂತ ಮುಂದೆ ಇವ್ನಿಗೆ ಮಾಲೆ ಹಾಕುವವ್ನು. ಎತ್ತು ಎದ್ದರೆ ಬಾಲ ಹಿಡಿಯೂದು, ಎತ್ತು ಬಿದ್ದರೆ ಕಲ್ಲೆತ್ತುವುದು. ಈ ಶಿವೇಗೌಡನ ಅಕಲು ಸರಿ ಇದ್ದರೆ ಅವರೆಲ್ಲ ಇವನ ಹತ್ತಿರ ಸುಳಿಯುತ್ತಿದ್ದರಾ?
ಕಾರ್ಮಿಕ- ಬಾಳ ವಿಚಿತ್ರಆಗಿ ಹೋಯ್ತು.
ಬು.ಜೀ.- ಇವ್ನಿಗೆ ತನ್ನ ಇತಿ ಮಿತಿ ಆದ್ರೂ ಗೊತ್ತಿದ್ಯೆ? ಅದೂ ಇಲ್ಲ. ಯಾವಾಗ ನೋಡಿದ್ರೂ ಡೆಲ್ಲಿಗೆ, ಲಕ್ನೋಗೆ, ಮುಂಬಯಿಗೆ, ಕೊಲ್ಕತಾಗೆ ಅಂತ ವಿಮಾನದಾಗ ಹಾರಾಡ್ತಾನೆ ಇದ್ದಾನೆ. ಈ ಹಾರಾಟದಲ್ಲಿ ನಮ್ಮ ಸುಖ ದುಃಖ ಎಲ್ಲ ಅವನ್ಗೆಲ್ಲಿ ನೆನಪಿರಬೇಕು? ನಾವು ಅವನ ಸೃಷ್ಟಿಸಿದ ಉದ್ದೇಶಾನೆ ಬೇರೆ ಇತ್ತು. ಅದಕ್ಕೆ ಪೂರಕವಾಗಿ ಅವ್ನಿಲ್ಲ ಅಂದ ಮೇಲೆ ಅವನ ಅವತಾರ ಸಮಾಪ್ತಿ ಮಾಡಲೇ ಬೇಕು.
ಕಾರ್ಮಿಕ- ಹೌದು, ನೀನು ಹೇಳಿದ ಮೇಲೆ ನನಗೆ ಈಗೀಗ ಸ್ವಲ್ಪ ಮಿಂಚೂಕೆ ಹತ್ತಿತು. ಕರಂಟ್‌ ಕಂಬ ಹುಗ್ಸಿದ್ರು. ಒಂದು ತಿಂಗ್ಳು ಲೈಟು ಉರೀತು. ಕಡೀಗೆ ಬಲ್ಬು ಹಾಕುವವರೇ ಇಲ್ಲ ನೋಡು.
ರೈತ- ಶಾಲಿ ಬರಸಾತ್‌ ರಿಪೇರಿಗೆ ರೊಕ್ಕ ಕೇಳ್ಲಿಕ್ಕೆ ಹೋದ್ರೆ ಆಫೀಸಿನವರು ಹದಿನೆಂಟು ಸಲ ತಿರುಗಾಡ್ಸಿದ್ರೂ ರೊಕ್ಕ ಮಂಜೂರು ಮಾಡ್ಲಿಲ್ಲ. ಎಲ್‌ ಹೋದ್ರೂ ಟೇಬಲ್‌ ಕೆಳಗಿನಿಂದ ಕೊಡದೇನೆ ಕೆಲಸಾನೆ ಆಗೋದಿಲ್ಲ.
ದಲಿತ- ಇದಕ್ಕೆಲ್ಲ ಮಂತ್ರ್ಯಪ್ಪನೇ ಕಾರಣ ಅಂತೀಯಾ?
ಬು.ಜೀ.- ಅವ್ನು ನಿದ್ದಿ ಮಾಡ್ತಾ ವಿಮಾನದಲ್ಲಿ ಹಾರಾಡ್ತಾ ಇಲ್ದಿದ್ರೆ ಈ ಸ್ಥಿತಿ ಬರ್ತಾ ಇರ್ಲಿಲ್ಲ. ಅವ್ನ ಕಾಲು ನೆಲಕ್ಕೆ ತಾಗದೇನೆ ವರ್ಷಗಳೇ ಆಗಿ ಹೋದ್ವು. ಸುಲಿದು ಸುಲಿದೆ ಗುಡ್ಡೆ ಹಾಕಿದ್ದಾನೆ. ಸರಕಾರಾನ ದಿವಾಳಿ ಎಬ್ಸಿ ಬಿಟ್ಟಿದ್ದಾನೆ. ತನ್ನ ಗುರಿ ಮರತಾನೆ. ಇನ್‌ ಅವ್ನ ಬಹಳಷ್ಟು ಸಹಿಸಿಕೊಳ್ಳಬಾರ್ದು.
ಕಾರ್ಮಿಕ- ಅವ್ನ ನಿಗ್ರಹಿಸುವುದು ಹೇಗೆ ಸಾಧ್ಯ? ಅವ್ನು ನಾಟಕ ಮಾಡೂದ್ರಲ್ಲಿ ಬಾಳ ಪ್ರವೀಣ ಆಗ್ಯಾನಂತೆ.
ಬು.ಜೀ.- ನಾಟಕದ ಪಾತ್ರ ಚೌಕಿ ಮನೆಯಿಂದ ಹೊರಗೆ ಬೀಳುವ ಮೊದಲೇ ಬಣ್ಣ ಒರಸಿಕೊಂಡು ಬರ್ತದೆ. ಆದ್ರೆ ಇವ್ನು ಅದೇ ವೇಷದಲ್ಲೇ ರಸ್ತೆಯಲ್ಲಿ ಹೊರಟು ಬಿಟ್ಟಿದ್ದಾನೆ. ಹೀಗೆ ಆದ್ರೆ ನಾಟಕದಲ್ಲಿ ಅವನ ಹೀರೋ ರೋಲಿಗೆ ಚಪ್ಪಾಳೆ ತಟ್ತಿದ್ದವರೇ ರಸ್ತೆಯಲ್ಲಿ ಹುಚ್ಚ ಅಂತ ಕೂಗಿ ಚಪ್ಪಾಳೆ ತಟ್ತಾರೆ.
ರೈತ- ತಾನು ಹುಚ್ಚ ಅಂತ ಅವ್ನಿಗೆ ಗೊತ್ತಾಗ್ಲಿಲ್ಲ?
ಬು.ಜೀ.- ಯಾವ ಹುಚ್ಚನಿಗೆ ತಾನು ಹುಚ್ಚ ಅನ್ನೂದು ಗೊತ್ತಿರ್ತದೆ?
ದಲಿತ- ಇವ್ನ ಅವತಾರ ಸಮಾಪ್ತಿ ಮಾಡೂದು ಹೇಗೆ ಸಾಧ್ಯ? ನೀನೇ ಹೇಳ್ಬಿಡು.
ಬು.ಜೀ.- ಎತ್ತಿಕಟ್ಟಿದವರೇ ಎತ್ತಿ ಕುಕ್ಕಬೇಕಾದ ಪರಿಸ್ಥಿತಿ ತಂದುಕೊಂಡಿದ್ದು ಅವನ ದುರದೃಷ್ಟ.
ಕಾರ್ಮಿಕ- ಕುಕ್ಕುವುದು ಹೇಗೆ?
ಬು.ಜೀ.- ಸೃಷ್ಟಿಸುವ ಶಕ್ತಿ ಇದ್ದವನಿಗೆ ನಾಶ ಮಾಡುವ ಶಕ್ತಿಯೂ ಇರುತ್ತದೆ ಎನ್ನುವುದನ್ನು ಮರೀಬೇಡಿ. ಎಲ್ಲರ ಅವತಾರಕ್ಕೂ ಒಂದು ಆಯುಸ್ಸು ಇರುತ್ತದೆ.
ರೈತ- ಅಂದ್ರೆ?
ಬು.ಜೀ.- ನಮ್ಮಲ್ಲಿದ್ದ ಒಂದು ಶಕ್ತಿಯ ಪರಿಚಯ ನಮಗಾಗಿದೆ. ಇನ್ನೊಂದು ಶಕ್ತಿಯ ಪರಿಚಯವನ್ನು ಮಾಡಿಕೊಳ್ಳುವಾ. ಇವನ ಸರಕಾರದ ವಿರುದ್ಧ ವ್ಯಾಪಕವಾಗಿ ಸಹಿ ಸಂಗ್ರಹಿಸುವಾ. ಪ್ರತಿಭಟನೆ ಮಾಡುವಾ. ರಾಜೀನಾಮೆ ಕೇಳುವಾ. ತಾನಾಗಿಯೇ ದಾರಿಗೆ ಬರುವ ಹಾಗೆ ಆಗುತ್ತದೆ.
ಉಳಿದ ಮೂವರೂ- ಸರಿ, ಸರಿ. ನೀನು ಹೇಳಿದ ಹಾಗೇ ಮಾಡೋಣ. ನಮ್ಮ ಶಕ್ತಿ ಮೊದ್ಲು ನಮಗೆ ತಿಳೀಬೇಕು.
(ರಂಗದಲ್ಲಿ ಕತ್ತಲು)

ದೃಷ್ಯ 9
(ರಂಗದಲ್ಲಿ ಖುರ್ಚಿ. ಅದರ ಮೇಲೆ ಶಿವೇಗೌಡ ಕುಳಿತಿದ್ದಾನೆ. ಖುರ್ಚಿಯ ನಾಲ್ಕು ಕಾಲಿಗೂ ನಾಲ್ಕು ಹಗ್ಗ ಬಿಗಿದು ನಾಲ್ಕು ಮೂಲೆಯಲ್ಲಿ ಬುದ್ಧಿಜೀವಿ, ರೈತ, ಕಾರ್ಮಿಕ, ದಲಿತ ನಿಂತಿದ್ದಾರೆ. ಅವರ ಹಗ್ಗವನ್ನು ಎಳೆಯತೊಡಗಿದಂತೆ ಖುರ್ಚಿ ಅಲುಗಾಡುವುದು. ಖುರ್ಚಿಯನ್ನು ಶಿವೇಗೌಡ ಗಟ್ಟಿಯಾಗಿ ಹಿಡಿದುಕೊಳ್ಳುತ್ತ)
ಶಿವೇಗೌಡ- ಅರೇ, ಅರೇ, ಅರೆ, ಇದೇನು? ಗಾಳಿ ಇಲ್ಲ, ಗುಡುಗಿಲ್ಲ. ತನ್ನಷ್ಟಕ್ಕೇ ಅಲುಗಾಡೂಕ್ಕೆ ಹತ್ತಿದೆಯಲ್ಲ. ಎಲಾ ಇದರ.
ಬು.ಜೀ.- ಶಿವೇಗೌಡ ನಿನ್ನ ಕಣ್ಣು ಕುರುಡಾಗಿದೆ. ನಿನ್ನ ಇಂದ್ರಿಯಗಳು ಗ್ರಹಣ ಶಕ್ತಿಯನ್ನು ಕಳೆದುಕೊಂಡಿವೆ.
ಶಿವೇಗೌಡ- ಯಾರು? ಯಾರು ಅದು?
ರೈತ- ನಮ್ಮ ಗುರ್ತು ನಿನಗೆ ಮರೆತು ಹೋಗಿದ್ದರೆ ಅದೇನು ಆಶ್ಚರ್ಯ ಅಲ್ಲ.
ದಲಿತ- ಅಪ್ಪನನ್ನು ದೂಡಿ ಮಾವಿನ ಹಣ್ಣು ಹೆಕ್ಕುವ ಜನ ಎಷ್ಟಿಲ್ಲ?
ಶಿವೇಗೌಡ- ಏಯ್‌ ಬಾಯಿ ಮುಚ್ಚಿ.
ಕಾರ್ಮಿಕ- ಇಷ್ಟ್‌ ದಿವ್ಸ ನಾವು ಬಾಯಿ ಮುಚ್ಚಿಕೊಂಡು ಇದ್ದಿರ್ಲಿಕ್ಕಾಗೇ ನೀನು ಇಷ್ಟರವರೆಗೆ ಬಂದು ಮುಟ್ಟಿದೆ.
ಬು.ಜೀ.- ಶಿವೇಗೌಡ ನಿನ್ನ ಹುಟ್ಸಿದವರ ನೆನಪು ಮಾಡಿಕೋ.
ರೈತ- ನೀನು ಅವರಿಗಾಗಿ ಏನ್‌ ಮಾಡಿದೆ ಎಂದು ನಿನ್ನೇ ನೀನು ಪ್ರಶ್ನೆ ಕೇಳಿಕೋ.
ಕಾರ್ಮಿಕ- ನೀನು ಅವರೆಲ್ಲರಿಗೂ ಏನೇನು ಆಸೆ ತೋರ್ಸಿದ್ದಿ ನೆನಪು ಮಾಡಿಕೋ.
ದಲಿತ- ಇಷ್ಟ್‌ ದಿವ್ಸ ನಿನ್ನ ಹಿಂದೆ ಮುಂದೆ ಸುತ್ತುತ್ತ ಇದ್ದವರು ಒಬ್ಬರಾದ್ರೂ ಈಗ ನಿನ್ನ ಜೊತೆ ಇದ್ದಾರಾ? ನಿನ್ನ ಖುರ್ಚಿ ಹೇಗೆ ಅಲುಗಾಡಲಿಕ್ಕೆ ಹತ್ತಿದೆ ನೋಡು.
ಶಿವೇಗೌಡ- ಏಯ್‌ ಮುಚ್ರೋ ಬಾಯಿ.
ದಲಿತ- ಮುಚ್ಚುತ್ತೇವೆ. ನೀನು ಹೇಳದಿದ್ರೂ ಮುಚ್ಚುತ್ತೇವೆ. ನಿನ್ನ ಬಾಯಿ ಮುಚ್ಚಿಸಿ ನಾವೂ ಮುಚ್ಚುತ್ತೇವೆ.
(ನಾಲ್ಕು ಜನರೂ ಹಗ್ಗವನ್ನು ಬಿಗಿಗೊಳಿಸುವರು)
ಶಿವೇಗೌಡ- ಅಯ್ಯೋ, ಅಯ್ಯೋ ನನ್ನ ಉರುಳಿಸಬೇಡಿ. ನಿಮ್ಮ ದಮ್ಮಯ್ಯ. ನಿಮಗೆ ಏನು ಆಗಬೇಕು ಹೇಳಿ. ನೀವು ಕೇಳಿದ್ದೆಲ್ಲ ಕೊಡ್ತೆ.
ರೈತ- ಓಹೋ, ಕೇಳಿದ್ದೆಲ್ಲ ಕೊಡ್ತ್ಯಾ? ಆ ಶಕ್ತಿ ನಿನಗೆ ಹ್ಯಾಗೆ ಬಂತು, ಯಾರಿಂದ ಬಂತು? ನೆನಪು ಅದೆಯಾ?
ಕಾರ್ಮಿಕ- ಅದೆಲ್ಲ ಅವನಿಗೆ ಈಗ ನೆನಪು ಮಾಡೂದು ಯಾಕೆ?
ದಲಿತ- ಈಗ ಅವನ ಅಗತ್ಯ ಯಾರಿಗೂ ಉಳಿದಿಲ್ಲ.
ಬು.ಜೀ.- ನಿನ್ನ ನೋಡಿ ಉಳಿದವರಾದರೂ ಪಾಠ ಕಲೀಲಿ.
(ಶಿವೇಗೌಡ ಖುರ್ಚಿಯನ್ನು ಬಲವಾಗಿ ಹಿಡಿಯಲು ಪ್ರಯತ್ನಿಸುವನು. ಇವರು ಹಗ್ಗವನ್ನು ಜೋರಾಗಿ ಎಳೆಯವರು. ಖುರ್ಚಿಯ ಭಾಗಗಳು ಬೇರೆಬೇರೆ ಆಗುವವು. ಶಿವೇಗೌಡ ಕೆಳಗೆ ಬೀಳುವವನು.)
ಮೇಳ-
ಬಣ್ಣದ ಗೊಂಬಿ ನೀರಿಗೆ ಬಿತ್ತು
ಬಣ್ಣ ಬಯಲಾಯ್ತೋ ಬಯಲಾಯ್ತು
ಮಣ್ಣು ನೆನೆಯಿತೋ ನೆನೆಯಿತು
ಗೊಂಬಿ ಕರಗೋಯ್ತೋ ಗೊಂಬಿ ಕರಗೋಯ್ತು.

(ತೆರೆ ಬೀಳುವುದು)