ಶರಾವತಿ ದಡದಲ್ಲಿ ಅನಗೋಡು ಎಂಬ ಊರಿದೆ. ಈ ಅನಗೋಡಿನ ಬಗ್ಗೆ ಇತ್ತೀಚಿನ ಹೊಸ ಮಾಹಿತಿ ಎಂದರೆ ವಿಷ್ಣುವರ್ಧನ್ ಅಭಿನಯದ ‘ಮಾತಾಡ್ ಮಾತಾಡ್ ಮಲ್ಲಿಗೆ’ ಸಿನಿಮಾದ ಕೆಲವು ಭಾಗವನ್ನು ಚಿತ್ರೀಕರಿಸಿದ್ದು ಇಲ್ಲಿಯೇ. ಅನಗೋಡಿನ ಜಾನಪದ ಪರಂಪರೆಯಲ್ಲಿ ನಡೆಯುವ ಊರ ಹಬ್ಬ ಪ್ರತಿ ವರ್ಷ ಮೇ ತಿಂಗಳ 21ರಂದು ನಡೆಯುತ್ತದೆ. ಈ ಬಾರಿ ನನಗೆ ಅನಗೋಡು ಹಬ್ಬವನ್ನು ನೋಡುವ ಅವಕಾಶ ದೊರೆಯಿತು. ಅನಗೋಡು ಹಬ್ಬದಲ್ಲಿ ಕುಮಾರರಾಮನನ್ನು ಮತ್ತು ಸತಿಹೋದ ಆತನ ಪತ್ನಿಯರನ್ನು ಪೂಜೆ ಮಾಡುತ್ತಾರೆ.
ಮೂಲತಃ ಕುಮಾರರಾಮನು ಕಳ್ಳನೇ ಎಂದು ಆತನ ಬಗ್ಗೆ ಪ್ರಚಲಿತದಲ್ಲಿರುವ ಜಾನಪದ ಕತೆಗಳು ಮತ್ತು ಐತಿಹ್ಯಗಳು ಹೇಳುತ್ತವೆ. ಹಾಗೆಯೇ ತನ್ನ ಚಿಕ್ಕಮ್ಮನ ಕಾಮದಾಸೆಗೆ ಬಲಿಯಾಗದ ಜಿತೇಂದ್ರಿಯನೆಂದೂ ಮನ್ನಣೆ ಪಡೆದಿದ್ದಾನೆ. ನಾಮಧಾರಿ ಸಮಾಜದವರು ಈ ಕುಮಾರರಾಮ ತಮ್ಮ ಕುಲದವನೇ ಎಂದು ನಂಬಿದ್ದಾರೆ. ಕುಮಾರರಾಮನಿಗೂ ಅನಗೋಡು ಹಬ್ಬಕ್ಕೂ ಮತ್ತು ಹಬ್ಬದ ಅಂಗವಾಗಿ ನಡೆಸುವ ವ್ರತವಾಗಿ ಕಳ್ಳರ ವೇಷವನ್ನು ಧರಿಸುವ ಪದ್ಧತಿಗೂ ಹಾಸುಹೊಕ್ಕಾದ ಸಂಬಂಧವಿದೆ. ಅಲ್ಲಿನ ಜನರು ಪಕ್ಕದಲ್ಲಿಯ ಗುಡ್ಡದತ್ತ ಕೈ ತೋರಿಸಿ, ಇದೇ ಗುಡ್ಡದ ಮೇಲೆಯೇ ಕುಮಾರರಾಮ ಯುದ್ಧದಲ್ಲಿ ಹೋರಾಡಿ ಮಡಿದನು ಎಂದು ವಿವರಿಸುತ್ತಾರೆ. ಆತನು ಯುದ್ಧಮಾಡಿದ ವೈಖರಿಯನ್ನು ಹೂಬೇಹೂಬಾಗಿ ವರ್ಣಿಸುತ್ತಾರೆ.
ಅನಗೋಡು ಊರಿನವರು ಇಂದು ಎಲ್ಲೆಲ್ಲೋ ಹರಿದುಹಂಚಿಹೋಗಿದ್ದಾರೆ. ಆದರೂ ಅವರ ಕುಟುಂಬದ ಒಬ್ಬ ವ್ಯಕ್ತಿ ಈ ಹಬ್ಬಕ್ಕೆ ಆಗಮಿಸಿ ಹಬ್ಬದ ಮೊದಲಿನ ದಿನ ಕಳ್ಳರ ವೇಷವನ್ನು ಧರಿಸಿ ದೇಶಸಂಚಾರ ಹೊರಟು ಮಾರನೆ ದಿನ ಮಧ್ಯಾಹ್ನ ಪೂಜೆಯ ವೇಳೆಗೆ ಅದೇ ಸ್ಥಳಕ್ಕೆ ಬಂದು ಸುಮಾರು ಐವತ್ತು ಅಡಿ ಎತ್ತರದ ಶೂಲದ ಕಂಬವನ್ನು ಏರಬೇಕು. ಕಳ್ಳನಿಗೆ ಶಿಕ್ಷೆ ಶೂಲಕ್ಕೆ ಏರಿಸುವುದಲ್ಲವೆ? ಹಾಗೆ ಏರಿದ ಕಳ್ಳನಿಗೆ ಹೊಳೆಯಲ್ಲಿ ಕುಮಾರರಾಮನ ಕಣ್ಣುಗಳು ಕಾಣುವುದೆಂದು ನಂಬಿಕೆ. ಹೀಗೆ ಊರು ತಿರುಗುವ ಅನಗೋಡು ಕಳ್ಳರಿಗೆ ಆ ಭಾಗದ ಪ್ರತಿ ಮನೆಯವರೂ ತೆಂಗಿನ ಕಾಯಿ ಇಲ್ಲವೆ ಹಣವನ್ನು ನೀಡುತ್ತಾರೆ. ಕಳ್ಳನನ್ನು ಹಿಡಿಯಲು ಬಂದವನಂತೆ ಇನ್ನೊಬ್ಬನು ಓಡುತ್ತ ಬರುತ್ತಾನೆ. ಆದರೆ ಆತ ನಿಜವಾಗಿಯೂ ಆತನನ್ನು ಹಿಡಿಯುವವನಾಗಿರುವುದಿಲ್ಲ. ಆದರೆ ಆತನ ಸಹಾಯಕನಾಗಿ ಕಾಯಿ, ಹಣವನ್ನು ಸಂಗ್ರಹಿಸುತ್ತ ಹೋಗುವನು.
ಅನಗೋಡು ಕಳ್ಳರ ಸಾಹಸದ ಪ್ರತೀತಿ ಎಂಥದ್ದೆಂದರೆ ಶತ್ರುಗಳು ತುಂಡುತುಂಡು ಮಾಡಿದ್ದ ಕುಮಾರರಾಮನ ಶರೀರವನ್ನು ಮರು ಜೋಡಿಸಿ ಆತನಿಗೆ ಮತ್ತೆ ಜೀವಕೊಟ್ಟವರಂತೆ ಅವರು. ಅದಕ್ಕಾಗಿಯೇ ಅವರಿಗೆ ಕಳ್ಳರಾಗಿ ಒಂದು ದಿನ ಎಲ್ಲಿ ಬೇಕಾದರೂ ಹೋಗಿ ಕಳ್ಳತನ ಮಾಡಿ ಬರುವುದಕ್ಕೆ ಪರವಾನಗಿ ದೊರಕಿತ್ತಂತೆ. ಇವೆಲ್ಲ ಲೂಟಿ ಸಂಸ್ಕೃತಿಯ ಪ್ರತೀಕವೇ. ಅವರು ಲೂಟಿಕೋರರೆಂದು ಗೊತ್ತಿದ್ದರೂ ಅವರಿಗೆ ಏನೂ ಮಾಡುವಂತಿಲ್ಲ, ಬದಲಾಗಿ ಅವರಿಗೇ ರಾಜಮರ್ಯಾದೆ.
ಅನಗೋಡು ಹಬ್ಬಕ್ಕೆ ಹೋದ ನನಗೆ ಅನಗೋಡು ಕಳ್ಳರು ಶೂಲದ ಮರವನ್ನು ಏರಿ ಕೇಕೇ ಹಾಕುತ್ತಿರುವುದನ್ನು ನೋಡಿದಾಗ ತಟ್ಟನೆ ನಮ್ಮ ಯಡಿಯೂರಪ್ಪ, ಒಬಾಮಾ, ಒಸಾಮಾ, ಪಾಕಿಸ್ತಾನ ಇತ್ಯಾದಿ ಎಲ್ಲ ನೆನಪಾದವು. ಎಲ್ಲಕಡೆಯೂ ಅನಗೋಡು ಹಬ್ಬವೇಹಬ್ಬ ನಡೆದಿರುವಂತೆ ಕಂಡುಬಂತು.
ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರನ್ನೇ ತೆಗೆದುಕೊಳ್ಳಿ. ಅದೆಷ್ಟು ಆರೋಪಗಳು ಅವರ ಮೇಲೆ. ತಮ್ಮ ಅಪರಾಧವನ್ನು ಅವರು, ಉಳಿದ ಮುಖ್ಯಮಂತ್ರಿಗಳೂ ಮಾಡಿಲ್ಲವೆ ಇದನ್ನು ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಒಪ್ಪಿಕೊಂಡಿದ್ದೂ ಆಯಿತು. ಆದರೆ ಮುಖ್ಯಮಂತ್ರಿ ಗದ್ದುಗೆ ಚಿರಾಯು. ಅವರನ್ನು ಕೆಳಗಿಳಿಸಲು ರಾಜ್ಯಪಾಲರು, ಪ್ರತಿಪಕ್ಷಗಳು, ಕೇಂದ್ರಸರ್ಕಾರ ಯಾವುದರಿಂದಲೂ ಸಾಧ್ಯವಾಗಲಿಲ್ಲ. ಬದಲಿಗೆ, ಯಡಿಯೂರಪ್ಪನವರಿಗೆ ಇಷ್ಟೊಂದು ಕಿರುಕುಳವನ್ನು ನೀಡುತ್ತಿದ್ದಾರಲ್ಲ ಈ ಜನ ಎಂಬ ಅನುಕಂಪ ಬೇರೆ. ಕೋಟಿಕೋಟಿ ಲೂಟಿಗೂ ಮಾಪ್. ಥೇಟ್ ಅನಗೋಡು ಕಳ್ಳರ ಹಾಗೆಯೇ ಅಲ್ಲವೆ ಇದು.
ಅದೇ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನವನ್ನೇ ತೆಗೆದುಕೊಳ್ಳಿ. ನಮ್ಮ ನೆಲದ ಮೇಲೆ ಉಗ್ರಗಾಮಿಗಳಿಂದ ಅದು ದಾಳಿ ಮಾಡಿಸಿದರೂ ಅಮೆರಿಕಕ್ಕೆ ಅದು ಗಂಭೀರವಾಗಿ ತೋರುವುದೇ ಇಲ್ಲ. ಅವರ ಬಳಿ ಸೆರೆ ಸಿಕ್ಕಿರುವ ಉಗ್ರಗಾಮಿಯೇ ಎಲ್ಲವನ್ನೂ ಹೇಳಿಬಿಟ್ಟಿದ್ದಾನೆ. ಪಾಕಿಸ್ತಾನದ ಸೇನೆಯ ನಾಯಕರೇ ಮುಂಬಯಿಯ ಮೇಲೆ ದಾಳಿ ಮಾಡಿಸಿದ್ದು ಎಂದಿದ್ದಾನೆ. ನಮಗೆ ಬೇಕಾಗಿರುವ ಮತ್ತೊಬ್ಬ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನ ಬಚ್ಚಿಟ್ಟುಕೊಂಡಿದೆ. ಹೀಗೆ ಇಷ್ಟೊಂದು ಸಾವಿರ ತಪ್ಪು ಮಾಡಿದರೂ ಅಮೆರಿಕದ ದೃಷ್ಟಿಯಲ್ಲಿ ಪಾಕಿಸ್ತಾನ ಒಬ್ಬ ಅನಗೋಡು ಕಳ್ಳ. ಅದರ ಎಲ್ಲ ಅಪರಾಧಗಳೂ ಮಾಪ್.
ಅಮೆರಿಕದ ಮಾದರಿಯಲ್ಲಿ ಭಾರತವೇನಾದರೂ ದಾವೂದ್್ಗೋಸ್ಕರ ದಾಳಿ ನಡೆಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುವುದು ಎಂದು ಪಾಕಿಸ್ತಾನ ಎಚ್ಚರಿಸಿದೆ. ಆದರೆ ಅಮೆರಿಕವು ತನಗೆ ಬೇಕಾದಂತೆ ಪಾಕಿಸ್ತಾನ ನೆಲವನ್ನು ಬಳಸಿಕೊಳ್ಳುತ್ತಿದೆ. ಪಾಕಿಸ್ತಾನದ ದೃಷ್ಟಿಯಲ್ಲಿ ಅಮೆರಿಕವೂ ಒಬ್ಬ ಅನಗೋಡು ಕಳ್ಳನೇ. ಅಮೆರಿಕದ ಸಾವಿರ ತಪ್ಪುಗಳೂ ಮಾಪ್.
ಪಾಕಿಸ್ತಾನದ ವಿಷಯದಲ್ಲಿ ಅಮೆರಿಕವು ಹೆಚ್ಚಿನ ಒಲವು ತೋರಿಸುತ್ತಿದೆ. ಭಾರತದ ಆಸಕ್ತಿಯನ್ನು ಅಮೆರಿಕ ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಬಹಳ ಹಿಂದಿನಿಂದಲೂ ಕೇಳಿಬರುತ್ತಿವೆ. ಅಮೆರಿಕಕ್ಕೆ ಪ್ರಜಾಪ್ರಭುತ್ವದ ದೇಶವಾದ ಭಾರತಕ್ಕಿಂತ ಪಾಕಿಸ್ತಾನ ಮತ್ತು ಚೀನವೇ ಹೆಚ್ಚಿನ ಆದ್ಯತೆಯವು ಎಂಬ ಟೀಕೆಯೂ ಇದೆ. ಹಾಗೆ ನೋಡಿದರೆ ಈ ಟೀಕೆಗಳ ಹಿಂದೆ ಆಳವಾದ ಒಳನೋಟಗಳಿಲ್ಲ ಎಂದೇ ಹೇಳಬೇಕು. ಇಲ್ಲಿ ಗಮನಿಸಬೇಕಾದ ಕೆಲವು ಸಂಗತಿಗಳಿವೆ:
ಅಮೆರಿಕವು ಪಾಕಿಸ್ತಾನಕ್ಕೆ ಹೆಚ್ಚಿನ ಒಲವು ತೋರಿಸುತ್ತಿದೆ ಎಂದರೆ ಭಾರತವನ್ನು ನಿರ್ಲಕ್ಷಿಸುತ್ತಿದೆ ಎಂದರ್ಥವಲ್ಲ. ಪಾಕಿಸ್ತಾನದ ಭೌಗೋಳಿಕ ಸ್ಥಾನವು ಕಾರ್ಯತಂತ್ರದ ದೃಷ್ಟಿಯಿಂದ ಅಮೆರಿಕಕ್ಕೆ ಮಹತ್ವದ್ದು. ಅಫಘಾನಿಸ್ಥಾನದ ಉಗ್ರರ ಮೇಲೆ ನಿಯಂತ್ರಣ ಸಾಧಿಸಬೇಕೆಂದರೆ ಅಮೆರಿಕಕ್ಕೆ ಪಾಕಿಸ್ತಾನದ ನೆಲವೇ ಬೇಕು. ಅಲ್ಲಿ ಅದು ತನ್ನ ಸೇನೆಯ ನೆಲೆಯನ್ನು ಸ್ಥಾಪಿಸಿತು. ಪಾಕಿಸ್ತಾನ ಇಷ್ಟವಿಲ್ಲದಿದ್ದರೂ ಅದನ್ನು ಸಹಿಸಿಕೊಂಡಿತು. ಪಾಕಿಸ್ತಾನವನ್ನು ಹೇಗೆಬೇಕೋ ಹಾಗೆ ನಡೆಸಿಕೊಂಡ ರೀತಿಯಲ್ಲಿ ಭಾರತವನ್ನು ಅದು ನಡೆಸಿಕೊಳ್ಳಲು ಬರುವುದೆ? ಭಾರತದ ನೆಲದಲ್ಲಿ ಅಮೆರಿಕವು ತನ್ನ ಸೇನೆಯ ನೆಲೆಯನ್ನು ಸ್ಥಾಪಿಸುವುದಕ್ಕೆ ನಾವು ಅವಕಾಶ ನೀಡಿದ್ದೇವೆಯೆ? ನಮ್ಮ ಸಾರ್ವಭೌಮಾಧಿಕಾರದ ಮೇಲೆ ಅಮೆರಿಕವು ಎಂದಾದರೂ ಹಲ್ಲೆ ನಡೆಸಿದೆಯೆ? ಇವನ್ನೆಲ್ಲ ಗಮನಿಸಿದಾಗ ಅಮೆರಿಕದ ದೃಷ್ಟಿಯಲ್ಲಿ ಭಾರತದ ಸ್ಥಾನಮಾನ ದೊಡ್ಡದು ಎಂದೇ ಹೇಳಬೇಕು.
ಲೂಟಿ ಮಾಡುವುದು ಮತ್ತು ಲೂಟಿ ಮಾಡಿಸಿಕೊಳ್ಳುವುದು ನಮ್ಮ ಸಂಸ್ಕೃತಿಯ ಭಾಗವೇ ಆಗಿರುವುದರಿಂದ ಯಡಿಯೂರಪ್ಪ ಆಗಲಿ ಒಬಾಮಾ ಆಗಲಿ, ಪಾಕಿಸ್ತಾನವಾಗಲಿ ಮಾಡುತ್ತಿರುವುದು ನಮಗೆ ಸೋಜಿಗವೆಂದು ತೋರುವುದಿಲ್ಲ. ಈ ಪಟ್ಟಿ ಇಷ್ಟಕ್ಕೇ ನಿಲ್ಲುವುದಿಲ್ಲ. ಉತ್ತರಪ್ರದೇಶದ ಮಾಯಾವತಿ ಏನು ಕಡಿಮೆ? ಹಗರಣಗಳಲ್ಲಿ ಸಿಲುಕಿಬಿದ್ದಿರುವ ಮಹಾರಾಷ್ಟ್ರದ ಸಚಿವರು, ಕೇಂದ್ರ ಸರ್ಕಾರದ ಸಚಿವರು, ಮಾಡಿದ್ದುಣ್ಣೋ ಮಾರಾಯ ಎನ್ನುವಂತೆ ತಿಹಾರ ಜೈಲು ಸೇರಿದ ಗಣ್ಯರು ಎಲ್ಲರೂ ಅವರವರ ಅಗತ್ಯಕ್ಕೆ ತಕ್ಕಂತೆ ಆಗಾಗ ಅನಗೋಡುಕಳ್ಳರ ವೇಷವನ್ನು ಧರಿಸುತ್ತಾರೆ. ತಮ್ಮ ತಮ್ಮ ಅಗತ್ಯ ಮುಗಿದ ಬಳಿಕ ವೇಷವನ್ನು ಕಳಚುತ್ತಾರೆ. ಅವರು ವೇಷ ಧರಿಸಿದಷ್ಟೂ ಕಾಲವೂ ನಾವುಗಳು ಅವರ ಲೂಟಿಯನ್ನೆಲ್ಲ ಸಹಿಸಿಕೊಳ್ಳಲೇಬೇಕು. ಏಕೆಂದರೆ ಅವರೆಲ್ಲ ನಮ್ಮದೇ ಸೃಷ್ಟಿ ತಾನೆ!
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.