* ಈ ಪಾತ್ರೆ ಬರಿದಾಗುವುದೇ ಇಲ್ಲ!

ಕ್ಷಯ ಎಂದರೆ ನಾಶ, ಕುಂದುವುದು, ಕಡಿಮೆಯಾಗುವುದು ಇತ್ಯಾದಿ ಅರ್ಥಗಳಿವೆ. ಅಕ್ಷಯ ಎಂದರೆ ನಾಶ ಇಲ್ಲದುದು, ಕುಂದಿಲ್ಲದಿರುವುದು, ಕಡಿಮೆಯೇ ಆಗದಿರುವುದು, ಬರಿದಾಗದೆ ಇರುವುದು ಇತ್ಯಾದಿ. ಆಗರ್ಭ ಶ್ರೀಮಂತರ ಸಂಪತ್ತನ್ನು ಅಕ್ಷಯಪಾತ್ರೆ ಎಂದು ಹೇಳುವುದನ್ನು ಕೇಳಿದ್ದೇವೆ.
ಮಹಾಭಾರತದಲ್ಲಿ ದ್ರೌಪದಿಯ ಬಳಿ ಅಕ್ಷಯಪಾತ್ರೆ ಇತ್ತಂತೆ. ಸೂರ್ಯದೇವ ಪಾಂಡವರ ಕಷ್ಟವನ್ನು ದೂರ ಮಾಡಲು ದ್ರೌಪದಿಗೆ ಈ ಪಾತ್ರೆಯನ್ನು ನೀಡಿದ್ದನು. ಪಾಂಡವರನ್ನು ಪೇಚಿಗೆ ಸಿಲುಕಿಸಲು ದುರ್ಯೋಧನನು ಕೋಪಿಷ್ಠ ಮುನಿ ದೂರ್ವಾಸನನ್ನು ಅವರಲ್ಲಿಗೆ ಕಳುಹಿಸುತ್ತಾನೆ. ಅಕ್ಷಯಪಾತ್ರೆಯನ್ನು ಒಮ್ಮೆ ತೊಳೆದಿಟ್ಟಮೇಲೆ ಅದೇ ದಿನ ಅದನ್ನು ಮತ್ತೆ ಬಳಸಲು ಬರುತ್ತಿರಲಿಲ್ಲ. ದೂರ್ವಾಸರು ಬಂದಾಗ ಪಾಂಡವರ ಊಟವಾಗಿತ್ತು. ಅಕ್ಷಯಪಾತ್ರೆಯನ್ನು ತೊಳೆದಿಟ್ಟಾಗಿತ್ತು.
ಧರ್ಮರಾಯ ದೂರ್ವಾಸ ಮತ್ತು ಅವರ ಶಿಷ್ಯರನ್ನು ನದಿಗೆ ಹೋಗಿ ಸ್ನಾನಮಾಡಿ ಬನ್ನಿ ಎಂದು ಕಳುಹಿಸುತ್ತಾನೆ. ಕೃಷ್ಣನ ಮಾಯೆ. ಪಾತ್ರೆಯ ತಳದಲ್ಲಿ ಒಂದೇ ಒಂದು ಅಗಳು ಅಂಟಿಕೊಂಡಿತ್ತು. ದ್ರೌಪದಿ ಅದರಿಂದಲೇ ದೂರ್ವಾಸನ ಪರಿವಾರಕ್ಕೆ ಹೊಟ್ಟೆ ತುಂಬ ಊಟ ಮಾಡಿಸುತ್ತಾಳೆ.
ಇತ್ತೀಚೆ ಇಸ್ಕಾನ್‌ದವರು ಶಾಲೆಗಳ ಮಕ್ಕಳಿಗೆ ಊಟ ಹಾಕುವ ಯೋಜನೆಗೆ ಅಕ್ಷಯಪಾತ್ರೆ ಎಂದೇ ಹೆಸರಿಟ್ಟಿದ್ದಾರೆ.