*ಇದು ಮಹಾಭಾರತದ ಹದಿನೆಂಟು ದಿನಗಳ ಯುದ್ಧ
ಏನೋ ಒಂದನ್ನು ತುಂಬ ಕಷ್ಟಪಟ್ಟು ಸಾಧಿಸಿಕೊಂಡವರು ತಮ್ಮ ಸಾಧನೆಯ ಕಷ್ಟದ ಹಾದಿಯ ಬಗ್ಗೆ ಹೇಳುವಾಗ `ಏಳು ಹನ್ನೊಂದು ಆಯ್ತು' ಎಂದು ಹೇಳುವುದನ್ನು ಕೇಳಿದ್ದೇವೆ. ಸಾಧನೆಯ ಹಾದಿ ಹೂವಿನದಲ್ಲ, ಕಲ್ಲು ಮುಳ್ಳಿನಿಂದ ಕೂಡಿದ್ದು. ಆದನ್ನು ಸಾಧಿಸಿಯೇ ಬಿಟ್ಟೆ ಎಂದು ಹೆಚ್ಚಳವನ್ನು ಹೇಳಿಕೊಳ್ಳುವುದು ಅವರ ಉದ್ದೇಶ.
ಏಳು ಹನ್ನೊಂದು’ ಅಂದರೆ ಏನು? ಮಹಾಭಾರತದಲ್ಲಿ ಕೌರವ ಪಾಂಡವರಿಗೆ ಯುದ್ಧ ಸಂಭವಿಸುತ್ತದೆಯಲ್ಲವೆ? ಆಗ ಪಾಂಡವರ ಕಡೆಯಲ್ಲಿ ಏಳು ಅಕ್ಷೋಹಿಣಿ ಸೈನ್ಯ ಮತ್ತು ಕೌರವರ ಕಡೆ ಹನ್ನೊಂದು ಅಕ್ಷೋಹಿಣಿ ಸೈನ್ಯವಿತ್ತು. ಎರಡೂ ಕಡೆಯೂ ಯುದ್ಧ ಸಂಭವಿಸಿ ಕೊನೆಗೆ ಎಲ್ಲರೂ ನಾಶವಾಗಿ ಪಾಂಡವರು ಮಾತ್ರ ಉಳಿಯುತ್ತಾರೆ.
ದೊಡ್ಡ ಸೈನ್ಯದ ವಿರುದ್ಧ ಸಣ್ಣ ಸೈನ್ಯದ ಗೆಲವು ಅದು. ಕೆಟ್ಟದ್ದರ ವಿರುದ್ಧ ಒಳ್ಳೆಯದರ ಗೆಲವು ಅದು. ತಮ್ಮ ಸಾಧನೆಯೂ ಅದೇ ರೀತಿಯದು ಎಂದು ಒತ್ತಿ ಹೇಳುವುದಕ್ಕೆ ಈ `ಏಳು ಹನ್ನೊಂದು’ ಬಳಕೆಯಾಗುತ್ತದೆ.
ಏಳು ಮತ್ತು ಹನ್ನೊಂದು ಸೇರಿದರೆ ಹದಿನೆಂಟು. ಮಹಾಭಾರತದಲ್ಲಿ ಹದಿನೆಂಟಕ್ಕೆ ಬಹಳ ಮಹತ್ವ. ಸೇನೆಯು ಹದಿನೆಂಟು ಅಕ್ಷೋಹಿಣಿ. ಯುದ್ಧ ನಡೆದ ದಿನಗಳು ಹದಿನೆಂಟು, ಮಹಾಭಾರತದ ಪರ್ವಗಳು ಹದಿನೆಂಟು, ಅದರಲ್ಲಿಯ ಭಗವದ್ಗೀತೆಯ ಅಧ್ಯಾಯಗಳು ಹದಿನೆಂಟು ಇತ್ಯಾದಿ ಇತ್ಯಾದಿ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.