ಬದುಕು ಕಲಿಸುವಷ್ಟು ಚೆನ್ನಾಗಿ ಪಾಠವನ್ನು ಯಾವ ಶಾಲೆ, ಕಾಲೇಜು, ವಿಶ್ವವಿದ್ಯಾಲಯವೂ ಕಲಿಸುವುದಿಲ್ಲ. ಬದುಕಿನಿಂದ ಕಲಿಯುವುದಕ್ಕೆ ನಾವು ಕಣ್ಣನ್ನು, ಕಿವಿಯನ್ನು ಸದಾ ತೆರೆದಿಟ್ಟುಕೊಳ್ಳಬೇಕು ಅಷ್ಟೇ. ಜಗತ್ತಿನ ಬಹುದೊಡ್ಡ ದಾರ್ಶನಿಕ ಗೌತಮ ಬುದ್ಧ ಕಲಿತದ್ದು ಬದುಕಿನಿಂದಲೇ. ಅವನನ್ನು ತಲ್ಲಣಗೊಳಿಸಿದ ಮೂರ್ನಾಲ್ಕು ಘಟನೆಗಳು ಅವನನ್ನು ಅದರ ಬಗೆಗೆ ಚಿಂತಿಸುವುದಕ್ಕೆ ಹಚ್ಚುತ್ತದೆ. ಅವನು ಆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದೂ ಬದುಕಿನಿಂದಲೇ. ತಮ್ಮ ಎಲ್ಲ ಸಮಸ್ಯೆಗಳ ಮೂಲ ಹಾಗೂ ಅವುಗಳಿಗೆ ಪರಿಹಾರ ಈ ಜಗತ್ತಿನಲ್ಲಿಯೇ ಇದೆ ಎಂಬ ಸತ್ಯವನ್ನು ಕಂಡುಕೊಂಡಾಗ ಯಾರೊಬ್ಬರೂ ನಿರಾಶರಾಗುವ ಪ್ರಸಂಗ ಒದಗುವುದೇ ಇಲ್ಲ. ಯಾಕೆ, ಎಲ್ಲಿ, ಏನು, ಹೇಗೆ ಈ ನಾಲ್ಕು ಪ್ರಶ್ನೆಗಳನ್ನು ಸಕಾಲದಲ್ಲಿ ಹಾಕಿಕೊಳ್ಳಬೇಕು ನಾವು. ಯಾಕೆ ಈ ಸಮಸ್ಯೆ ಉದ್ಭವವಾಯಿತು ಎಂಬುದು ಮೊದಲ ಪ್ರಶ್ನೆ. ಈ ಸಮಸ್ಯೆಯ ಮೂಲ ಎಲ್ಲಿದೆ? ಇದು ಎರಡನೆಯ ಪ್ರಶ್ನೆ. ಏನು ಮಾಡಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ? ಇದು ಮೂರನೆಯ ಪ್ರಶ್ನೆ. ಹೇಗೆ ಇದನ್ನು ಮರುಕಳಿಸದಂತೆ ತಡೆಯಬಹುದು? ಈ ಪ್ರಶ್ನೆ ಭವಿಷ್ಯಕ್ಕೆ ಉತ್ತರವನ್ನು ನೀಡುತ್ತದೆ. ಬದುಕಿನಲ್ಲಿ ಇನ್ನೇನಿದೆ ಎಂಬಂಥ ನಿರಾಶಾದಾಯಕ ಭಾವನೆ ಒಮ್ಮೊಮ್ಮೆ ಮನಸ್ಸಿನಲ್ಲಿ ಮೂಡಿಬಿಡುವುದು. ಬದುಕೆಂದರೆ ಇಷ್ಟೇನಾ ಅನ್ನಿಸಿಬಿಡುವುದು. ಏನು ಗಳಿಸಿ ಯಾರಿಗೆ ಉಳಿಸಿ ಹೋಗುವುದು ಎಂಬ ನಿರಾಕರಣಕ್ಕೆ ಮನಸ್ಸು ಪಕ್ಕಾಗಬಹುದು. ಇಂಥ ಪ್ರಶ್ನೆಗಳಿಗೆಲ್ಲ ನಮ್ಮ ಸುತ್ತಲೇ ಉತ್ತರಗಳು ಇರುತ್ತವೆ. ಯಾವುದೋ ಒಂದು ಊರು. ಅಲ್ಲೊಂದು ಬಸ್ ನಿಲ್ದಾಣ. ಅಲ್ಲೊಂಬ್ಬ ಸುಮಾರು ಹನ್ನೆರು ವರ್ಷಗಳ ಬಾಲಕ. ಕಾಲುಗಳೆರಡೂ ಇಲ್ಲ. ಗಾಲಿಗಳಿರುವ ಮಣೆಯ ಮೇಲೆ ಕುಳಿತು ಬಸ್ಸುಗಳ ಸಂಧಿಗೊಂದಿಗಳಲ್ಲೆಲ್ಲ ಲೀಲಾಜಾಲವಾಗಿ ತನ್ನ ಗಾಲಿಯ ಮಣೆಯನ್ನು ಓಡಿಸುತ್ತಾನೆ. ಅವನ ಕೈಯಲ್ಲಿ ಲಾಟರಿ ಟಿಕೆಟ್. ಬಸ್ ಹತ್ತಲು ನಿಂತ ನಿಮ್ಮ ಬಳಿಗೂ ಅವನು ಬರುತ್ತಾನೆ. `ಅಣ್ಣಾ, ನಾಳೆನೇ ಡ್ರಾ ಇದೆ. ಒಂದು ಟಿಕೆಟ್ ತಗೊಳ್ಳಿ. ಹತ್ತು ಲಕ್ಷ ರುಪಾಯಿ ಬಂಪರ್ ಬಹುಮಾನ ಇದೆ, ಅಣ್ಣ. ನಿಮ್ಮ ಮಗನ ಡಾಕ್ಟರ್ ಓದಿಸೋಕೆ, ಇಂಜಿನಿಯರ್ ಓದಿಸೋಕೆ, ಈ ರೊಕ್ಕ ಬರುತ್ತೆ. ನಿಮ್ಮ ಮಗಳ ಮದುವೆ ಈ ರೊಕ್ಕದಲ್ಲಿ ಚೆಂದಾಗಿ ಮಾಡಬಹುದು” ಎಂದೆಲ್ಲ ತನ್ನದೇ ಧಾಟಿಯಲ್ಲಿ ನಿಮ್ಮನ್ನು ಒತ್ತಾಯಿಸುತ್ತಾನೆ. ತಾನೇ ದರಿದ್ರದ ಬದುಕು ಬದುಕುತ್ತಿದ್ದಾನೆ. ನಮಗೆ ಲಕ್ಷ್ಮೀಕಟಾಕ್ಷ ಒದಗಿಸಲಿಕ್ಕೆ ಬಂದಿದ್ದಾನೆ ಇವನು ಎಂದು ನಿಮಗೆ ತಕ್ಷಣಕ್ಕೆ ಅನ್ನಿಸಬಹುದು. ನೀವು ನಿಮ್ಮ ಕಣ್ಣು, ಕಿವಿ ಎರಡನ್ನೂ ತೆರೆದಿಟ್ಟುಕೊಂಡಿದ್ದರೆ ಅವನೇ ನಿಮ್ಮ ಬದುಕಿನ ಗುರುವೂ ಆಗಬಹುದು. ಎಂದೂ ಲಾಟಲಿ ಟಿಕೆಟ್ ಖರೀದಿಸದೆ ಇದ್ದ ನೀವು ಆ ಕ್ಷಣದಲ್ಲಿ ಕಿಸೆಗೆ ಕೈ ಹಾಕಿ ಹತ್ತು ರುಪಾಯಿಗಳ ನೋಟೊಂದನ್ನು ತೆಗೆದು ಅವನಿಗೆ ನೀಡಿ ಅವನ ಕೈಯಲ್ಲಿಯ ಒಂದು ಟಿಕೆಟನ್ನು ಖರೀದಿಸಬಹುದು. ಇವೆಲ್ಲ ಹೇಗೆ ಸಾಧ್ಯ ಅನ್ನುವಿರಿ? ನಿಮ್ಮ ಕಣ್ಣು ತೆರೆದಿದ್ದರೆ ಅವನ ಅಂಗವೈಕಲ್ಯ ನಿಮ್ಮ ಕಣ್ಣಿಗೆ ರಾಚತ್ತದೆ. ಬೇರೆ ಇನ್ನಾರೋ ಆಗಿದ್ದರೆ ಆ ಅಂಗವೈಕಲ್ಯವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಭಿಕ್ಷೆ ಬೇಡುತ್ತಿದ್ದರೇನೋ? ಕಣ್ಣಿನ ಜೊತೆಯಲ್ಲಿ ನಿಮ್ಮ ಹೃದಯವೂ ತೆರೆದಿದ್ದರೆ ಆ ಸತ್ಯದ ಬೋಧೆ ತಟ್ಟನೆ ನಿಮಗೆ ಆಗುತ್ತದೆ. ಅವನ ಬಗೆಗೆ ನಿಮಗೆ ಗೌರವ ಮೂಡುತ್ತದೆ. ಆ ಕಾರಣಕ್ಕಾಗಿಯೇ ನೀವು ಲಾಟರಿ ಟಿಕೆಟ್ ಖರೀದಿಸದೆ ಇದ್ದವರೂ ಅವನಿಂದ ಒಂದು ಲಾಟರಿ ಟಿಕೆಟ್ ಖರೀದಿಸುತ್ತೀರಿ. ಅದು ನೀವು ಅವನ ಬಗೆಗೆ ತೋರಿಸಿದ ಗೌರವ. ಯಾರೋ ಏನೋ, ಬಸ್ ನಿಲ್ದಾಣದ ಆ ಬಾಲಕ ಮನಸ್ಸನ್ನು ತುಂಬುತ್ತಾನೆ. ಬದುಕನ್ನು ಅವನು ಸ್ವೀಕರಿಸಿದ ರೀತಿ ಅಚ್ಚರಿಯದು. ಅಚ್ಚಳಿಯದಂಥದ್ದು. ಬದುಕಿಗೆ ಅವನು ಬೆನ್ನು ತಿರುಗಿಸಲಿಲ್ಲ. ನಿರಾಶಾವಾದಿಯಾಗಲಿಲ್ಲ. ತನ್ನ ಬದುಕಿಗಾಗಿ ಬೇರೆಯವರನ್ನು ಅವನು ಅವಲಂಬಿಸಲಿಲ್ಲ. ತಮ್ಮ ಮಿತಿಯೊಳಗೆ, ಇತರರಲ್ಲಿ ತನ್ನ ಬಗೆಗೆ ಗೌರವ ಮೂಡುವ ಹಾಗೆ ಅವನು ಬದುಕಿದನು. ಇನ್ನೊಂದು ಸನ್ನಿವೇಶ. ಅವನಿಗೆ ಒಂದೇ ಕಾಲು. ಇನ್ನೊಂದು ಕಾಲನ್ನು ದುರಂತವೊಂದರಲ್ಲಿ ಕಳೆದುಕೊಂಡಿದ್ದಾನೆ. ಅವನೂ ಆ ಬಸ್ ನಿಲ್ದಾಣದ ಬಾಲಕನ ಹಾಗೆ ಬದುಕಿಗೆ ಬೆನ್ನು ತಿರುಗಿಸಲಿಲ್ಲ. ತುಂಬಿದ ಹೊಳೆಯಲ್ಲಿ ಆತನು ಒಂಟಿ ಕಾಲಿನ ಮೇಲೆ ನಿಂತು ದೋಣಿ ನಡೆಸುತ್ತಾನೆ. ಅದೇ ಅವನ ಉದ್ಯೋಗ. ಗಾಳಿ ಇರಲಿ, ಮಳೆ ಇರಲಿ, ನೆಗಸು ತುಂಬಿರಲಿ ಅವನು ನಿತ್ಯ ಯಾತ್ರಿ. ಹಲವರ ಹಲವು ವಿಧದ ಯಾತ್ರೆಯಲ್ಲಿ ಅವನು ನಿರಂತ ಭಾಗಿ. ಬಸ್ಸು ನಿಲ್ದಾಣದ ಬಾಲಕ, ಹೊಳೆಯಲ್ಲಿ ನೆಗಸಿನಲ್ಲೂ ಒಂಟಿ ಕಾಲಿನಲ್ಲಿ ಕಸರತ್ತು ಮಾಡುತ್ತ ದೋಣಿ ನಡೆಸುವ ಆಅವನು ನಮ್ಮಲ್ಲಿ ನಿರಂತರ ಜೀವಪರ ಸಂದೇಶ ಬಿತ್ತುತ್ತ ಹೋಗುತ್ತಾರೆ. ಬದುಕೆಂದರೆ ಇಷ್ಟೇನಾ ಅಂದುಕೊಳ್ಳುವವರಿಗೆ, “ಅಲ್ಲ, ಇದರಾಚೆಗೂ ಇನ್ನಷ್ಟೋ ಇದೆ” ಎಂಬ ಸಂದೇಶ ಸಾರುತ್ತ ಹೋಗುತ್ತಾರೆ. ಇಂಥವರು ನಮ್ಮ ಸುತ್ತ ಮುತ್ತ ಎಲ್ಲೆಲ್ಲೂ ಇರುತ್ತಾರೆ. ಬದುಕನ್ನು ಪ್ರೀತಿಸು ಎಂದು ಹೇಳುತ್ತಿರುತ್ತಾರೆ. ಸಾಲಮಾಡಿಯಾದರೂ ತುಪ್ಪ ತಿನ್ನು ಎನ್ನುವ ಮಾತನ್ನು ಈ ಅರ್ಥದಲ್ಲಿಯೂ ಗ್ರಹಿಸಬಹುದೇನೋ?
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.