ಅವ್ವ ಎಂಬುದು ಒಂದು ಜಾಗತಿಕ ವಿಸ್ಮಯ. ಅವ್ವ ದೇಶ ಕಾಲಾತೀತವಾದ ಒಂದು ಅನುಭವ. ಅವ್ವ ನಿನ್ನೆಯ ನೆನಪು, ಇಂದಿನ ಮೆಲಕು, ನಾಳೆಯ ಕನಸು ಕೂಡ. ಕಣ್ಣರಿಯದುದನ್ನು ಕರುಳರಿಯಿತು ಎನ್ನುತ್ತಾರೆ. ಕರುಳು ಸಂಬಂಧ ಎನ್ನುತ್ತಾರೆ ಪ್ರಾಜ್ಞರು. ಕರುಳ ಬಳ್ಳಿಯಿಂದ ಹೊಕ್ಕುಳ ಹುರಿಯನ್ನು ಕತ್ತರಿಸಿ ಈ ಭೂಮಂಡಲದಲ್ಲಿ ತನ್ನ ಕುಡಿಯನ್ನು ಕಸಿ ಮಾಡುವ ಅವ್ವ ಕೆಲವರಿಗೆ ಒಗಟು, ಕೆಲವರಿಗೆ ಸುಂದರ ಕಾವ್ಯ, ಕೆಲವರಿಗೆ ಸುಭಾಷಿತ. ಅವ್ವ ಎಲ್ಲರಿಗೂ ಬೇಕು ಅದಕು ಇದಕು ಎದಕೂ. ಸಾಹಿತ್ಯ ಕ್ಷೇತ್ರದಲ್ಲಿ ಮ್ಯಾಕ್ಸಿಂ ಗಾರ್ಕಿ ತಮ್ಮ ‘ತಾಯಿ’ ಕೃತಿಯ ಮೂಲಕ ತಾಯಿಯನ್ನು ಅಜರಾಮರಗೊಳಿಸಿದ್ದಾರೆ. ಶೃಂಖಲೆಯಿಂದ ಬಿಡುಗಡೆಯ ವರೆಗೆ ದಾರಿ ತೋರುವ ಮಾರ್ಗದರ್ಶಕಳಾದ ಆ ತಾಯಿ ಒಂದು ಆದರ್ಶ. ಪ್ರತಿಯೊಬ್ಬರ ಬದುಕಿನಲ್ಲೂ ತಾಯಂದಿರು ದಾರಿ ತೋರುವ ದೀಪಗಳಾಗಿ ಉರಿದು ಮರೆಯಾಗಿದ್ದಾರೆ. ಇಂಥ ಅವ್ವನ ಬಗ್ಗೆ ಕೆಲವರು ಕಾವ್ಯ ಕಟ್ಟಿದ್ದಾರೆ, ಕತೆ ಕಟ್ಟಿದ್ದಾರೆ. ಇದು ಅಕ್ಷರ ಸೌಧವಾದರೆ ನಿಜಕ್ಕೂ ಸ್ಮಾರಕ ನಿರ್ಮಿಸಿದವರೂ ಇದ್ದಾರೆ. ಹಲವರು ತಮ್ಮ ಆತ್ಮಕತೆಗಳನ್ನು ಬರೆದುಕೊಂಡಿದ್ದಾರೆ. ಅವ್ವನ ಪ್ರಸ್ತಾಪವಾಗದ ಆತ್ಮಕತೆಗಳೇ ಇಲ್ಲವೇನೋ. ಚಂದ್ರಶೇಖರ ವಸ್ತ್ರದ ಅವರು, ಆತ್ಮಕತೆಗಳಲ್ಲಿಯ ಅವ್ವಂದಿರ ವ್ಯಕ್ತಿಚಿತ್ರಗಳನ್ನು ಸಂಪಾದಿಸಿ ಈಗಾಗಲೆ ಪ್ರಕಟಟಿಸಿದ್ದಾರೆ. ಅದರ ಎರಡನೆಯ ಭಾಗ ಈಗ ಹೊರಬಂದಿದೆ. ಇದರಲ್ಲಿ ಅವರು ಎರಡು ವಿಭಾಗ ಮಾಡಿಕೊಂಡಿದ್ದಾರೆ. ಮೊದಲ ವಿಭಾಗದಲ್ಲಿ ಇಂಗ್ಲಿಷ್, ಮಲೆಯಾಳಂ, ಮರಾಠಿ, ತಮಿಳು, ಹಿಂದಿ ಭಾಷೆಯ ಆತ್ಮಕತೆಗಳಲ್ಲಿ ಮೂಡಿದ ಹದಿನಾಲ್ಕು ಅವ್ವಂದಿರ ಬಗ್ಗೆ ದಾಖಲಿಸಿದ್ದಾರೆ. ಎರಡನೆ ವಿಭಾಗದಲ್ಲಿ ಕನ್ನಡದಲ್ಲಿ ಬಂದಿರುವ ಒಂಬತ್ತು ತಾಯಂದಿರ ಬಗ್ಗೆ ಬರೆದಿದ್ದಾರೆ. ಕೌಂಟ್ ಲಿಯೋ ಟಾಲ್ಸ್ಟಾಯ್, ಅಬ್ದುಲ್ ಕಲಾಂ, ಅಡಾಲ್ಫ್ ಹಿಟ್ಲರ್, ಉತ್ತಮ್ ಕಾಂಬ್ಳೆ, ನಾಮಕ್ಕಲ್ ವಿ.ರಾಮಲಿಂಗಂ ಪಿಳ್ಳೈ, ಯು.ಆರ್.ಅನಂತಮೂರ್ತಿ, ಗಿರೀಶ ಕಾರ್ನಾಡ, ಚನ್ನಮ್ಮ ಹಳ್ಳಿಕೇರಿ ಮೊದಲಾದವರು ತಮ್ಮ ತಾಯಿಯ ಕುರಿತು ದಾಖಲಿಸಿದ ನುಡಿಚಿತ್ರಗಳು ಇಲ್ಲಿವೆ. ಅವ್ವ ಎಂಬ ಅಪ್ರಮೇಯದ ಅನುಸಂಧಾನ ಇಲ್ಲಿ ನಡೆದಿದೆ. ಟಾಲ್ಸ್ಟಾಯ್ ಅವರು ತಮ್ಮ ತಾಯಿಯ ಅಂತ್ಯಸಮಯವನ್ನು ಕುರಿತು ಬರೆದುದನ್ನು ಇಲ್ಲಿ ಎತ್ತಿಕೊಳ್ಳಲಾಗಿದೆ. ತಾಯಿಯ ಬಗ್ಗೆ ಅವರು ಹೇಳುವುದು, ‘‘ಸುಂದರವಾದ ನನ್ನ ತಾಯಿಯ ಮುಖ ಮುಗುಳ್ನಗೆ ನಕ್ಕಾಗ ಎಣೆಯಿಲ್ಲದ ಸೊಬಗನ್ನು ಪಡೆದು ಅವರ ಸುತ್ತಮುತ್ತನ್ನು ಚೇತನದಿಂದ ಸ್ಪಂದಿಸುವಂತೆ ಮಾಡುತ್ತಿತ್ತು. ಜೀವನದ ಅತಿ ಕಷ್ಟದವಾದ ಕ್ಷಣಗಳಲ್ಲಿ ನಾನು ನನ್ನ ತಾಯಿಯ ಆ ಮಧುರವಾದ ನಗೆಯನ್ನು ಸ್ವಲ್ಪಮಾತ್ರವಾದರೂ ನೆನಪಿನಿಂದ ಹಿಡಿಯಬಲ್ಲೆನಾದರೆ, ದುಃಖ ಎನ್ನುವುದು ನನ್ನ ಬಳಿ ಸುಳಿಯಲಾರದು…’’ ಎಂದು ಹೇಳಿದ್ದಾರೆ, ಒಮ್ಮೆ ಟಾಲ್ಸ್ಟಾಯ್ ಅವರ ತಾಯಿ ಮಗನಿಗೆ ಕೇಳುತ್ತಾರೆ, ‘‘ನೀನು ನನ್ನನ್ನು ಯಾವಾಗಲೂ ಪ್ರೀತಿಸುತ್ತಿ- ಎಂದಿಗೂ ಮರೆಯೋದಿಲ್ಲ, ಅಲ್ವೆ? ಅಮ್ಮ ಇನ್ನು ಇಲ್ಲ ಅಂತ ಆದಾಗಲೂ ನೀನು ಅವಳನ್ನು ಮರೆಯೋದಿಲ್ಲ- ಮರೆಯೋದೇ ಇಲ್ಲ ಅಲ್ವೇ- ನಿಕೊಲೆಂಕಾ?’’ ಹೀಗೆ ಹೇಳಿ ಪ್ರೀತಿಯಿಂದ ಮೃದುವಾಗಿ ಮುತ್ತಿಡುತ್ತಾರೆ. ‘‘ಬಾ ಅಮ್ಮಾ! ನಿನಗಿಂತ ಪ್ರೀತಿಯುಳ್ಳದ್ದು ನನಗೆ ಯಾವುದೂ ಇಲ್ಲ- ದಯವಿಟ್ಟು ನೀನು ಇಲ್ಲದಂತೆ ಆದಾಗ- ಅಂತ ಹೇಳಬೇಡ.’’ ಟಾಲ್ಸ್ಟಾಯ್ ಬರೆಹ ಮನಕಲಕುವ ಒಂದು ದಾಖಲೆ. ಲೋಕದ ಸಮಸ್ತ ಮಾತೆಯ ಮತ್ತು ಮಗುವಿನ ಒಂದು ಪ್ರತಿಮಾ ರೂಪ. ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ತಮ್ಮ ತಾಯಿ ಆಯೇಶಮ್ಮನ ಬಗ್ಗೆ ಬರೆದ ಭಾಗ ಇಲ್ಲಿದೆ. ಅವರು ಹಿಂದೊಮ್ಮೆ ಒಂದು ಕವಿತೆಯನ್ನು ತಾಯಿಯ ಬಗ್ಗೆ ಬರೆದಿದ್ದರು. ಅದರ ಮೊದಲ ಸಾಲುಗಳು ಹೀಗಿವೆ: ಸಮುದ್ರದ ತೆರೆಗಳು, ಬಂಗಾರದ ಮರಳು, ಯಾತ್ರಿಕರ ಭಕ್ತಿ, ರಾಮೇಶ್ವರದ ಮಸೀದಿ ರಸ್ತೆ ಇವೆಲ್ಲವೂ ವಿಲೀನವಾದರೆ, ನನ್ನ ತಾಯಿ! ನನ್ನ ತಾಯಿ ಸೌಮ್ಯ ಸ್ವಭಾವದ, ಲೋಕಾನುಭವವಿದ್ದ, ಧಾರ್ಮಿಕ ಮನೋವೃತ್ತಿಯ ಮಹಿಳೆಯಾಗಿದ್ದರು ಎಂದು ಹೇಳಿದ್ದಾರೆ. ತಮ್ಮ ತಾಯಿಯಿಂದ ತಾವು ಕಲಿತ ಪಾಠವೊಂದನ್ನು ಅವರು ಬರೆದುಕೊಂಡಿದ್ದಾರೆ. ದ್ವಿತೀಯ ಮಹಾಯುದ್ಧದ ಕಾಲದಲ್ಲಿ ಆಹಾರ ಧಾನ್ಯಗಳನ್ನೂ ಪಡಿತರ ಪದ್ಧತಿಯಲ್ಲಿ ಖರೀದಿಸಬೇಕಿತ್ತು. ಆ ಭಾರೀ ಅಭಾವದ ಕಾಲದಲ್ಲಿ ಮಿತವ್ಯಯ ಅವರ ಕುಟುಂಬಕ್ಕೂ ಅನ್ವಯವಾಗಿತ್ತು. ಅವರ ತಾಯಿ ಮತ್ತು ಅಜ್ಜಿ ಆಹಾರ ಪೋಲಾಗದಂತೆ ನಿಭಾಯಿಸುತ್ತಿದ್ದರು. ಒಂದು ದಿನ ಅನ್ನದ ಬದಲು ಚಪಾತಿಯನ್ನು ಮಾಡಿದ್ದರು. ಕಲಾಂ ಅವರು ಊಟಕ್ಕೆ ಕುಳಿತಾಗ ಅವರ ತಾಯಿ ಒಂದೊಂದೇ ಚಪಾತಿಯನ್ನು ಕಾಯಿಸಿ ಅವರ ತಾಟಿಗೆ ಹಾಕುತ್ತಿದ್ದರು. ಎಷ್ಟು ಹೊಟ್ಟೆಗೆ ಹೋಯಿತು ಎಂಬ ಲೆಕ್ಕ ಅವರು ಇಡಲಿಲ್ಲ. ಹೊಟ್ಟೆ ತುಂಬಿದ ಮೇಲೆ ಎದ್ದು ಕೈ ತೊಳೆದುಕೊಂಡರು. ಆಗ ಅವರ ಅಣ್ಣ ಹಿಂದುಮುಂದು ನೋಡದೆ ನೀನು ಚಪಾತಿ ತಿಂದುದರಿಂದ ತಾಯಿ ಉಪವಾಸ ಇರುವ ಹಾಗೆ ಆಗಿದೆ ಎಂದು ಹೇಳುತ್ತಾರೆ. ‘‘ಬಡಕಲು ಶರೀರದ, ಆದರೆ ನನಗೆ ತಿಳಿದಿರುವವರಲ್ಲೆಲ್ಲಾ ಅತ್ಯಂತ ಧೈರ್ಯಸ್ಥೆಯಾದ ನನ್ನ ತಾಯಿಗೆ ಈ ಅವಸ್ಥೆಯನ್ನು ತಂದಿತ್ತ ನನಗೆ ಆದ ನಾಚಿಕೆಯೂ, ದುಃಖವೂ ನನ್ನ ಎದೆಯನ್ನೇ ಒಡೆಯುವಂತೆ ಮಾಡಿತು. ನಾನು ಒಬ್ಬನೇ ಅತ್ತೆ. ಯಾರ ಮುಖಕ್ಕೂ ಮುಖ ಕೊಟ್ಟು ನೋಡಲೂ ನನಗೆ ಧೈರ್ಯ ಬರಲಿಲ್ಲ. ತಾಯಿಯ ಮುಖಕ್ಕೆ ಮುಖ ಕೊಟ್ಟು ನೋಡಲು ನನಗೆ ಸಾಧ್ಯವಾದದ್ದು ಎಷ್ಟೋ ದಿನಗಳ ನಂತರ. ಸುತ್ತಲಿನವರ ಬೇಕು-ಬೇಡಗಳ ಬಗ್ಗೆ ಗಮನವಿರಬೇಕು ಎಂಬ ವಿಷಯದಲ್ಲಿ ನಾನು ಕಲಿತ ಪಾಠ ಎಂಥದು?….’’ ಲಲಿತಾಂಬಿಕಾ ಅಂತರ್ಜನಂ ಅವರು ತಮ್ಮ ತಾಯಿಯ ಬಗೆಗೆ ಬರೆದ ಈ ಸಾಲುಗಲನ್ನು ಗಮನಿಸಬೇಕು: ಅಪ್ಪನ ನಿಧನದ ಬಳಿಕ ಅಮ್ಮ ತೀವ್ರ ತಪಸ್ವಿನಿಯ ಹಾಗೆ ಜೀವಿಸಿದರು. ಮಕ್ಕಳ ಸಲುವಾಗಿ ಮಾತ್ರ ಬದುಕಿದರು. ಕ್ರಮೇಣ ಅಮ್ಮನಿಗೆ ಮನುಷ್ಯರೆಲ್ಲರೂ ಮಕ್ಕಳಾಗಿಬಿಟ್ಟರು. ಪಕ್ಷಿಮೃಗಾದಿಗಳಲ್ಲು, ವೃಕ್ಷಲತಾದಿಗಳಲ್ಲು ಕೂಡ ವ್ಯಾಪಿಸತಕ್ಕ ರೀತಿಯಲ್ಲಿ ಆ ಸ್ನೇಹಾಮೃತ ಹಬ್ಬಿ ಹರಿಯಿತು. ತನಗೆ ಉಣ್ಣಲೆಂದು ಇರಿಸಿದ್ದ ಅನ್ನ ಹಸಿದವರಿಗೆ ತೆಗೆದುಕೊಟ್ಟು ಚಕಾರವೆತ್ತದೆ ಉಪವಾಸ ಮಲಗುತ್ತಿದ್ದರು…. ತಾಯ್ತನದ ಮೇರೆ ಮೀರಿದ ಎಲ್ಲೆಗಳನ್ನು ಗುರುತಿಸುವ ಪ್ರಯತ್ನ ಈ ಸಾಲುಗಳಲ್ಲಿ ಕಾಣುವುದು. ಯು.ಆರ್.ಅನಂತಮೂರ್ತಿಯವರು ತಮ್ಮ ಅಮ್ಮನ ಬಗೆಗೆ ತಮ್ಮ ಆತ್ಮಕತೆ ‘ಸುರಗಿ’ಯಲ್ಲಿ ಬರೆದುಕೊಂಡಿದ್ದನ್ನು ಇದರಲ್ಲಿ ಸಂಗ್ರಹಿಸಿಕೊಡಲಾಗಿದೆ. ಲೋಕದ ಎಲ್ಲ ತಾಯಂದಿರಂತೆ, ಎಲ್ಲ ಅತ್ತೆ ಸೊಸೆಯಂದಿರಂತೆ ಅವರ ಅಮ್ಮನೂ ಇದ್ದುದನ್ನು ಅವರು ದಾಖಲಿಸಿದ್ದಾರೆ. ಗಿರೀಶ್ ಕಾರ್ನಾಡರು ತಮ್ಮ ತಾಯಿಯ ಬಗೆಗೆ ಬರೆದ ಪುಟಗಳು ಇದರಲ್ಲಿವೆ. ಎಲ್ಲರಿಗೂ ತಮ್ಮ ತಾಯಿಯ ಬಗೆಗೆ ಒಂದು ಆಪ್ತವಾದ ಆಲೋಚನೆ ಹೃದಯದ ಗೂಡುಗಳಲ್ಲಿ ಸುಪ್ತವಾಗಿರುತ್ತದೆ. ಇಲ್ಲಿಯ ಬರೆಹಗಳನ್ನು ಓದಿದಾಗ ತಾವೂ ತಮ್ಮ ಅಮ್ಮನನ್ನು ನೆನೆದು ಅಕ್ಷರ ಸೌಧ ಕಟ್ಟಬಹುದು. ಆ ಮೂಲಕ ಕನ್ನಡ ನುಡಿ ಶ್ರೀಮಂತವಾಗಬಹುದು. ಆ ಕಾರಣಕ್ಕೆ ಚಂದ್ರಶೇಖರ ವಸ್ತ್ರದ ಅವರನ್ನು ಅಭಿನಂದಿಸಲೇಬೇಕು. ಪ್ರ: ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನ, ಹುಬ್ಬಳ್ಳಿ, ಪುಟಗಳು ೨೧೬, ಬೆಲೆ ₹ ೧೫೦
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.