ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು ಎಂದು ವಿ.ಕೃ.ಗೋಕಾಕರು ಪರ್ಮಾನು ಹೊರಡಿಸಿ ಅರ್ಧ ಶತಮಾನವೇ ಕಳೆದುಹೋಯಿತು. ಮುಕ್ತ ಛಂದದ ರಚನೆಯ ಸುಖವನ್ನು ನವ್ಯ, ನವ್ಯೋತ್ತರ ಕವಿಗಳು ತುಂಬ ಚೆನ್ನಾಗಿಯೇ ಅನುಭವಿಸಿದ್ದಾರೆ. ಇಂಥ ಕಾಲಘಟ್ಟದಲ್ಲಿ ತಮ್ಮ ಭಾವನೆಗಳಿಗೆ ಛಂದಸ್ಸಿನ ಚೌಕಟ್ಟನ್ನು ನಿರ್ಮಿಸಿಕೊಂಡು ಕಾವ್ಯ ರಚನೆಯಲ್ಲಿ ತೊಡಗುವುದೆಂದರೆ ಅದೊಂದು ಸಾಹಸದ ಕೆಲಸವೆಂದೇ ಹೇಳಬೇಕು. ಅಂಥ ಒಂದು ಸಾಹಸವನ್ನು ಡಾ.ಧರಣೀದೇವಿ ಮಾಲಗತ್ತಿಯವರು ತಮ್ಮ ‘ಇಳಾಭಾರತಂ’ ಕೃತಿಯಲ್ಲಿ ಮಾಡಿದ್ದಾರೆ. ಬಿರುದು ಬಾವಲಿಗಳ ಪಡೆಯಲಿದ ಬರೆದುದಲ್ಲವು ಬರೆಹ ಲೋಕದಿ ಮರೆತ ದನಿಗಳ ಹುಡುಕಿ ಕೇಳಿಸೆ ಸಹೃದಯಗಳಿಗೆ ಬರೆದನಿದ ತಿಳಿಯುವುದು ಸುಜನರು ಧರೆಯ ಜಾಣರು ಕಾವ್ಯಲೋಕದ ಲಿರುವ ಕಾಣದ ದೃಶ್ಯ ಕೇಳದ ದನಿಯನಾಲಿಪುದು ಎಂದು ಧರಣೀದೇವಿಯವರು ಈ ಕೃತಿಯ ಕೊನೆಯಲ್ಲಿ ಹೇಳಿಕೊಂಡಿದ್ದಾರೆ. ಯಾವುದೇ ಪ್ರಶಸ್ತಿಯ ಆಶೆಗಾಗಿ ಅವರು ಇದನ್ನು ಬರೆದಿಲ್ಲ. ಮರೆತುಹೋದವರನ್ನು ನೆನಪಿಸುವುದಕ್ಕಾಗಿ, ಕಾಣದ ದೃಶ್ಯ, ಕೇಳದ ದನಿಯನ್ನು ತಲುಪಿಸಲು ಅವರು ಈ ಶ್ರಮ ತೆಗೆದುಕೊಂಡಿರುವರು. ಕನ್ನಡದಲ್ಲಿ ಮಹಾಕಾವ್ಯ ಪರಂಪರೆ ಪಂಪನಿಗೂ ಪೂರ್ವದ್ದು. ಇದು ಆಧುನಿಕ ಕಾಲದಲ್ಲಿಯೂ ಮುಂದುವರಿದಿದೆ. ಕುವೆಂಪು ತಮ್ಮ ಮಹಾಕಾವ್ಯಕ್ಕೆ ಮಹಾಛಂದಸ್ಸನ್ನು ರೂಪಿಸಿಕೊಂಡರು. ಆದರೆ ಧರಣೀದೇವಿಯವರು ತಮ್ಮ ಮಹಾಕಾವ್ಯಕ್ಕೆ ಭಾಮಿನಿ ಷಟ್ಪದಿಯನ್ನು ಬಳಸಿದ್ದಾರೆ. ಪೀಠಿಕಾ ಭಾಗವನ್ನು ಮಾತ್ರ ಪರಿವರ್ಧಿನಿ ಷಟ್ಪದಿಯಲ್ಲಿ ಬರೆದಿರುವರು. ಇವರ ಕಾವ್ಯವಸ್ತು ಮಹಾಭಾರತವೇ. ಆದರೆ ಇದು ಕುರುಕ್ಷೇತ್ರದ ಯುದ್ಧದ ಕತೆಯಲ್ಲ. ಆರ್ಯಾವರ್ತವನ್ನು ಸೂರ್ಯವಂಶ ಮತ್ತು ಚಂದ್ರವಂಶವೆಂಬ ಎರಡು ಕುಲಗಳ ಅರಸರು ಆಳಿದರು. ದೇವತೆಗಳಿಗೂ ಈ ರಾಜವಂಶದವರಿಗೂ ಸಂಬಂಧ. ಮಹಾಭಾರತದ ಹಾಗೂ ಹರಿವಂಶದ ಒಡಲಲ್ಲಿ ಈ ರಾಜವಂಶಗಳ ಹಲವು ಪ್ರಮುಖರ ಕತೆಗಳಿವೆ. ವ್ಯಾಸರು ರಾಜರುಗಳ ಕತೆಯನ್ನು ಸುಸಂಬದ್ಧವಾಗಿ ಕಟ್ಟಿಕೊಟ್ಟಿದ್ದಾರೆ. ಎಲ್ಲಿಯೂ ತಪ್ಪಿಹೋಗದ ಸಂಬಂಧಗಳ ಸೂತ್ರವನ್ನು ಅವರು ಹಿಡಿದಿಟ್ಟಿದ್ದಾರೆ. ಅದನ್ನೇ ಬಾದರಾಯಣ ಸಂಬಂಧವೆಂದು ಹೇಳುವುದು. ಈ ಬಾದರಾಯಣರ ಕಾವ್ಯಸಮುದ್ರದಿಂದ ಕೆಲವು ಧೀರೋದಾತ್ತ ಸ್ತ್ರೀಪಾತ್ರಗಳನ್ನು ಎತ್ತಿಕೊಂಡು ಧರಣೀದೇವಿಯವರು ತಮ್ಮ ಕಾವ್ಯವನ್ನು ರಚಿಸಿದ್ದಾರೆ. ಶಂತನು ಮಹಾರಾಜನ ಪತ್ನಿ ಸತ್ಯವತಿಯು ತನ್ನ ಇಬ್ಬರು ಸೊಸೆಯಂದಿರಾದ ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಹೇಳುವ ರೀತಿಯಲ್ಲಿ ಕತೆಯನ್ನು ಹೆಣೆಯಲಾಗಿದೆ. ಮೊದಲನೆಯ ಅಯನದಲ್ಲಿ ಸತ್ಯವತಿಯದೇ ಕತೆ ಇದೆ. ಚಂದ್ರನು ತನ್ನ ಗುರುವಾದ ಬೃಹಸ್ಪತಿಯ ಪತ್ನಿಯನ್ನು ಮೋಹಿಸಿ ಅವಳಿಂದ ಬುಧನನ್ನು ಪಡೆಯುತ್ತಾನೆ. ಬುಧನು ಮನುವಿನ ಮಗಳು ಇಳೆಯನ್ನು ಇಷ್ಟಪಡುತ್ತಾನೆ. ಅವರಿಬ್ಬರ ಮಗನೇ ಪುರೂರವ. ಈ ಪುರೂರವನು ಊರ್ವಶಿಯ ಜೊತೆ ಕೆಲವು ಕಾಲ ಸಂಸಾರ ಮಾಡುತ್ತಾನೆ. ಇವರ ಮಗ ಆಯುಕುಮಾರ. ಇವನ ಪತ್ನಿ ಇಂದುಮತಿ. ಇವರಿಬ್ಬರ ಪುತ್ರ ನಹುಷ. ಈ ನಹುಷನು ಅಶೋಕಸುಂದರಿ ಎಂಬಾಕೆಯನ್ನು ವರಿಸುತ್ತಾನೆ. ಒಮ್ಮೆ ಇಂದ್ರನು ತನ್ನ ಪದವಿಯಿಂದ ವಂಚಿತನಾದಾಗ ಆತನ ಸ್ಥಾನವನ್ನು ಅಲಂಕರಿಸುವಂತೆ ದೇವತೆಗಳು ನಹುಷನನ್ನು ಕೋರುತ್ತಾರೆ. ನಹುಷ ಇಂದ್ರನ ಸಿಂಹಾಸನವನ್ನು ಏರುತ್ತಾನೆ. ಇಂದ್ರನಾದಮೇಲೆ ಆತನ ಪತ್ನಿ ಶಚಿ ಕೂಡ ತನ್ನವಳಾಗಬೇಕು ಎಂದು ಆತ ಬಯಸುತ್ತಾನೆ. ಶಚಿಯು ನರವಾಹನನಾಗಿ ಬಂದರೆ ನಿನ್ನನ್ನು ಕೂಡುವೆ ಎಂದು ಹೇಳುತ್ತಾಳೆ. ನಹುಷನು ಸಪ್ತರ್ಷಿಗಳಿಂದ ತನ್ನ ಪಲ್ಲಕ್ಕಿಯನ್ನು ಹೊರಿಸಿಕೊಂಡು ಹೋಗುತ್ತಾನೆ. ಈತನ ಈ ಅಹಂಕಾರದ ಕಾರಣದಿಂದ ಆತ ಸ್ವರ್ಗದ ಜನರಿಂದ ತಿರಸ್ಕೃತನಾಗುತ್ತಾನೆ. ಅಜಗರನೆಂದು ಮೂದಲಿಕೆಗೆ ಒಳಗಾಗುತ್ತಾನೆ. ಮೂಲ ಹರಿವಂಶದಲ್ಲಿ ನಹುಷ ಅಗಸ್ತ್ಯನಿಂದ ಶಾಪಕ್ಕೆ ಒಳಗಾಗಿ ಹೆಬ್ಬಾವಾಗುತ್ತಾನೆ. ಮುಂದೆ ಯಾವತ್ತೋ ಶಾಪವಿಮೋಚನೆಗೊಳಗಾಗುತ್ತಾನೆ. ಈ ನಹುಷನ ಮಗನೇ ಯಯಾತಿ. ಯಯಾತಿಗೆ ದೇವಯಾನಿ ಮತ್ತು ಶರ್ಮಿಷ್ಠೆಯರೆಂಬ ಇಬ್ಬರು ಹೆಂಡತಿಯರು. ಯಯಾತಿ ತನ್ನ ಕಿರಿಯ ಮಗ ಪುರವಿನಿಂದ ಯವ್ವನ ಪಡೆದುಕೊಂಡವನು. ಈ ಕಾರಣಕ್ಕೆ ಪುರುವೇ ಆತನ ಉತ್ತರಾಧಿಕಾರಿಯಾಗುತ್ತಾನೆ. ಚಂದ್ರವಂಶದ ಇಲಿಲನ ಮಗ ದುಷ್ಯಂತ. ಆತನ ಪತ್ನಿ ಶಕುಂತಲೆ. ಇವನ ಮಗನೇ ಸರ್ವದಮನ ಅಥವಾ ಭರತ. ಶಕುಂತಲೆಯ ಕತೆ ಎರಡು ಅಯನಗಳಲ್ಲಿ ವರ್ಣನೆಗೊಂಡಿದೆ. ತ್ರಯೋದಶಾಯನದಲ್ಲಿ ಅಂಬೆ-ಸಾಲ್ವನ ಪ್ರೇಮ ಕತೆ, ಭೀಷ್ಮವಿಜಯ, ಪರಶುರಾಮನೊಂದಿಗೆ ಯುದ್ಧದ ಕತೆ ಇದೆ. ಕೊನೆಯಲ್ಲಿ ಗಾಂಧಾರಿಯು ಕುರುಡ ಧೃತರಾಷ್ಟ್ರನನ್ನು ಮದುವೆಯಾಗಬೇಕಾದ ಅನಿವಾರ್ಯದ ಕತೆಯನ್ನು ವಿವರಿಸುತ್ತಾಳೆ ಸತ್ಯವತಿ. ಬುಧನ ಪತ್ನಿ ಇಳೆಯ ಕಾರಣದಿಂದಾಗಿಯೇ ಧರಣೀದೇವಿಯವರು ಈ ಕಾವ್ಯಕ್ಕೆ ‘ಇಳಾಭಾರತಂ’ ಎಂದು ಹೆಸರಿಟ್ಟಿರಬಹುದು. ಇಳೆಗೆ ಭೂಮಿ ಎಂಬ ಅರ್ಥವೂ ಇದೆ. ಭೂಮಿ ಸಹನೆಯ ಪ್ರತೀಕ. ಹೆಣ್ಣೂ ಕ್ಷಮೆಗೇ ಹೆಸರುವಾಸಿ. ಈ ಕಾರಣಕ್ಕಾಗಿ ಇದು ಇಳಾಭಾರತಂ. ಧರಣೀದೇವಿಯವರು ವಿವಿಧ ಆಕರಗಳನ್ನು ಅನುಸರಿಸಿಯೇ ಇಲ್ಲಿ ಕಥಾಸಂವಿಧಾನವನ್ನು ಇರಿಸಿಕೊಂಡಿದ್ದಾರೆ ಮತ್ತು ಪಾತ್ರಪೋಷಣೆಯನ್ನು ಮಾಡಿದ್ದಾರೆ. ಕ್ರಾಂತಿಕಾರಕವೆನ್ನುವಂಥ ತಿರುವುಗಳು ಇಲ್ಲಿಲ್ಲ. ಹೆಣ್ಣಿನ ಕಣ್ಣಿನಿಂದಲೇ ಕತೆಯನ್ನು ನೋಡಿರುವರಾದರೂ ಪುರುಷ ಪಾತ್ರಗಳಿಗೆ ಅನ್ಯಾಯವಾಗಿದೆ ಎಂದು ಅನ್ನಿಸುವುದಿಲ್ಲ. ಆದರೆ ಹೆಣ್ಣಿನ ಒಳತೋಟಿಗಳೂ, ಆಕೆ ಎದುರಿಸುವ ಅಗ್ನಿಪರೀಕ್ಷೆಗಳೂ, ಅದರಿಂದ ಪಾರಾಗುವ ರೀತಿಗಳೂ ಹೆಚ್ಚು ಪರಿಣಾಮಕಾರಿಯಾಗಿ ಮೂಡಿವೆ. ಹೆಣ್ಣು ಮತ್ತು ಗಂಡಿನ ಸಂಬಂಧದ ಸೂಕ್ಷ್ಮಗಳು ನಿಕಷಕ್ಕೆ ಒಳಗಾಗಿವೆ. ಪ್ರಾಚೀನ ಭಾರತದ ಹೆಣ್ಣು ಪ್ರೇಮ ಕಾಮಗಳ ವಿಷಯದಲ್ಲಿ ಇಂದಿಗಿಂತಲೂ ಹೆಚ್ಚು ಸ್ವತಂತ್ರಳಾಗಿದ್ದಳು, ಅವಳಿಗೆ ಆಯ್ಕೆಗಳಿದ್ದವು ಮತ್ತು ತನ್ನಿಷ್ಟದ್ದನ್ನು ಅವಳು ಆಯ್ಕೆಮಾಡಿಕೊಳ್ಳಬಹುದಿತ್ತು. ಶೀಲದ ನೈತಿಕತೆಗೆ ವಿಪರೀತವಾದ ಮಹತ್ವವೇನಿರಲಿಲ್ಲ ಆಗ. ಸಂಕರವು ಆಗ ಸಾಮಾನ್ಯವಾಗಿತ್ತು. ಸತ್ಯವತಿ, ಪರಾಶರ, ಶಂತನು, ಗಂಗೆ, ಚಂದ್ರ, ತಾರೆ, ಬೃಹಸ್ಪತಿ, ಊರ್ವಶಿ, ಪುರೂರವ ಇವರೆಲ್ಲರ ಸಂಬಂಧದ ಸಂಕೀರ್ಣ ಸ್ವರೂಪವನ್ನು ಗಮನಿಸಿದಾಗ ಆಧುನಿಕ ಕಾಲದ ಸ್ತ್ರೀವಾದಿ ಚಿಂತಕರಿಗೆ ಹೊಸ ಹೊಳಹುಗಳು ಸಿಕ್ಕೀತು. ಇನ್ನೊಂದು ಇಲ್ಲಿ ಗಮನಿಸಬೇಕಾದದ್ದು ಅಹಂಕಾರ. ಅದು ಪುರುಷನದ್ದೇ ಇರಬಹುದು ಸ್ತ್ರೀಯದ್ದೇ ಇರಬಹುದು. ಅದರಿಂದ ಯಾರಿಗೂ ಒಳಿತಾಗುವುದಿಲ್ಲ. ಭೀಷ್ಮನ ಅಹಂಕಾರದಿಂದ ಮಹಾಭಾರತದಲ್ಲಿ ಆಗುವ ತಿರುವುಗಳೆಷ್ಟೊಂದು ನೋಡಿ, ಅದೇ ರೀತಿ ನಹುಷನ ಅಹಂಕಾರ, ಅಂಬೆಯ ಅಹಂಕಾರ, ಗಾಂಧಾರಿಯ ಅಹಂಕಾರ …. ಹೀಗೆ ಅಹಂಕಾರದ ಮೂಲ ಒಳ್ಳೆಯದೋ ಕೆಟ್ಟದ್ದೋ, ಆದರೆ ಪರಿಣಾಮ ಮಾತ್ರ ಭೀಕರವಾದದ್ದು. ಎಲ್ಲ ಪಾತ್ರಗಳನ್ನೂ ಮನುಷ್ಯ ನೆಲೆಯಲ್ಲಿಯೇ ನೋಡಿರುವುದು ಇನ್ನೊಂದು ವಿಶೇಷ. ಕಾವ್ಯದ ಶೈಲಿ ಸುಲಭವಾಗಿದೆ. ಮಹಾಕಾವ್ಯಕ್ಕೆ ಬೇಕಾದ ಅಪಾರವಾದ ಶಬ್ದಸಂಪತ್ತು ಧರಣೀದೇವಿಯವರಲ್ಲಿದೆ. ನಡುಗನ್ನಡದ, ಈಗ ಬಳಕೆಯಿಂದ ಮರೆಯಾದ ಅಥವಾ ಜಾನಪದರಲ್ಲೆಲ್ಲೋ ಅಳುಕಿನಲ್ಲಿ ಬಳಕೆಯಾಗುವ ಅದೆಷ್ಟೋ ಪದಗಳು ನಮಗೆ ಎದುರಾಗುತ್ತವೆ. ಇದು ಅವರು ಪೂರ್ವಸೂರಿಗಳ ಕಾವ್ಯವನ್ನು ಅಧ್ಯಯನ ಮಾಡಿದುದರ ಫಲ. ಆಧುನಿಕ ಕಾಲದಲ್ಲಿ ಇಂಥ ಕಾವ್ಯ ರಚಿಸುವಾಗ ಎದುರಿಸಬೇಕಾದ ಸವಾಲು ಇಂಗ್ಲಿಷ್ ಪದ ಬಳಸದೇ ಇರುವುದು. ಇಂದು ಬಾಯಿ ತೆರೆದರೆ ಒಂದಾದರೂ ಇಂಗ್ಲಿಷ್ ಪದ ಹೊರಡದೇ ಇರುವುದಿಲ್ಲ. ಇಂತಿರುವಾಗ ಇಂಗ್ಲಿಷ್ ಪ್ರಯೋಗವಿಲ್ಲದ ಮಹಾಕಾವ್ಯ, ಅದನ್ನು ರಚಿಸುವಲ್ಲಿಯ ಪದಸಂಪತ್ತನ್ನು ಗಮನಿಸಿದಾಗ ಕನ್ನಡಕ್ಕೆ ಮತ್ತಷ್ಟು ಮಹಾಕಾವ್ಯಗಳು ಬರಲಿ ಎಂದು ಅಪೇಕ್ಷಿಸುವಂತಾಗುತ್ತದೆ. ಕುಮಾರವ್ಯಾಸ ಭಾರತದಂತೆ, ಜೈಮಿನಿಯ ಭಾರತದಂತೆ ಈ ‘ಇಳಾಭಾರತಂ’ಅನ್ನೂ ಗಮಕಿಗಳು ಹಾಡಬಹುದಾಗಿದೆ. ಅಂಥ ಪ್ರಯೋಗಗಳು ಈಗಾಗಲೆ ನಡೆದಿರುವುದನ್ನು ಲೇಖಕಿ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಆ ಮೂಲಕವೂ ಈ ಕೃತಿ ಪ್ರಚಾರ ಪಡೆಯಲಿ. ಇದು ಕೃತಿಯ ವಿವರಣೆಯೇ ಹೊರತು ವಿಮರ್ಶೆಯಲ್ಲ. ಇದರ ಅನುಸಂಧಾನಕ್ಕೆ ಹಲವು ಮಾರ್ಗಗಳಿವೆ. ವಿದ್ವಾಂಸರಾದವರು ಆ ಕಾರ್ಯವನ್ನು ಮಾಡಬೇಕು. ಮುಡಿವ ಭೋಗಿಗಳೆಡೆಗೆ ಈ ಕಾವ್ಯಸುಮವನ್ನು ಒಯ್ಯುವ ಕೆಲಸವನ್ನು ಅವರು ಮಾಡಲಿ. ಪ್ರ: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಪುಟಗಳು ೩೭೪ ಬೆಲೆ ₹ ೨೨೦
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.