*ಸ್ವಂತ ಬುದ್ಧಿ ಬಳಸದ ಕೆಲಸಗಾರ

ಒಂದೂರಿನಲ್ಲಿ ಪುಟ್ಟ ಎಂಬ ಹೆಸರಿನವನಿದ್ದ. ಸ್ವಲ್ಪ ಆತುರ ಸ್ವಭಾವದವನು. ಹೇಳಿದ್ದಷ್ಟೇ ಮಾಡುವವನು. ಸ್ವಂತ ಬುದ್ಧಿ ಉಪಯೋಗಿಸುವವನಲ್ಲ. ರಾತ್ರಿ ಮನೆಯಲ್ಲಿ ಏನೋ ಗಹನವಾದ ವಿಚಾರ ಮಾತನಾಡುತ್ತಿದ್ದರು. ಮಾತಿನ ನಡುವೆ ಬೆಳಿಗ್ಗೆ ಪುಟ್ಟನನ್ನು ಪಕ್ಕದೂರಿಗೆ ಕಳುಹಿಸಬೇಕು ಎಂಬ ಮಾತು ಇವನ ಕಿವಿಗೂ ಬಿತ್ತು. ಬೆಳಿಗ್ಗೆ ಎದ್ದು ನೋಡಿದರೆ ಮನೆಯಲ್ಲಿ ಪುಟ್ಟ ಇಲ್ಲ. ಪುಟ್ಟ ಎಲ್ಲಿ ಎಂದು ಹುಡುಕಿಯೇ ಹುಡುಕಿದರು. ಪುಟ್ಟನ ಪತ್ತೆಯೇ ಇಲ್ಲ.
ಹೊತ್ತು ಮಾರು ಏರುವ ಹೊತ್ತಿಗೆ ಪುಟ್ಟ ಬೈಸಾರದಿಂದ ಬೆವರು ಒರೆಸಿಕೊಳ್ಳುತ್ತ ಮನೆಯೊಳಗೆ ಬಂದ. ಪುಟ್ಟ ಎಲ್ಲಿ ಹೋಗಿದ್ದೆಯೋ ಎಂದು ಕೇಳಿದರು. ನಿನ್ನೆ ರಾತ್ರಿ ನೀವು ಮಾತನಾಡುವಾಗ ನನ್ನನ್ನು ಪಕ್ಕದೂರಿಗೆ ಕಳುಹಿಸಬೇಕು ಎಂದು ಹೇಳಿದ್ದಿರಲ್ಲವೆ? ಅದಕ್ಕೇ ನೀವು ಹೇಳುವ ಮೊದಲೇ ಹೋಗಿ ಬಂದೆ ಎಂದು ಪುಟ್ಟದಾಗಿ ವಿವರಣೆ ನೀಡಿದ. ಹೋಗಿ ಏನು ಮಾಡಿದೆ, ಯಾಕಾಗಿ ಹೋಗಿದ್ದೆ, ಯಾರನ್ನು ಕಂಡು ಬಂದೆ ಇತ್ಯಾದಿ ಪ್ರಶ್ನೆಗಳಿಗೆ ಪುಟ್ಟನಲ್ಲಿ ಉತ್ತರವಿಲ್ಲ.
ಆತುರಗಾರನಿಗೆ ಮೊಣಕಾಲು ಕೆಳಗೇ ಬುದ್ಧಿ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಸ್ವಂತ ಬುದ್ಧಿ ಬಳಸದ ಪುಟ್ಟನಂಥವರನ್ನು ಕಂಡಾಗ ಹೋದ ಪುಟ್ಟ ಬಂದ ಪುಟ್ಟ ಮಾತು ತಾನಾಗೇ ಉರುಳುತ್ತದೆ. ದಕ್ಷಿಣ ಕನ್ನಡದಲ್ಲಿ ಇದನ್ನು ವೆಂಕು ಪಣಂಬೂರಿಗೆ ಹೋಗಿಬಂದ ಹಾಗೆ ಎಂದೂ, ಕುಟ್ಟಿ ಕುಂದಾಪುರಕ್ಕೆ ಹೋಗಿ ಬಂದ ಹಾಗೆ ಎಂದೂ ಬಳಸುವುದು ರೂಢಿಯಲ್ಲಿದೆ.