ಅದು ಹೀಗಾಯಿತು. ಶರಾವರಿ ನದಿಯಲ್ಲಿ ಹೊನ್ನಾವರದಿಂದ ಗೇರಸಪ್ಪಾ ವರೆಗೆ ಕೇರಳದ ಕಡೆಯವರೊಬ್ಬರು ಲಾಂಚ್ ಸವರ್ಿಸ್ ಇಟ್ಟಿದ್ದರು. ಒಂದಲ್ಲ ಎರಡು ಲಾಂಚುಗಳು. ಬರಿ ಲಾಂಚ್ ಎಂದರೆ ಕಲ್ಪನೆಗೆ ನಿಲುಕುವುದಿಲ್ಲ. ಒಮ್ಮೆಲೆ ಸುಮಾರು 500 ಜನರನ್ನು ಒಯ್ಯಬಹುದಾದಷ್ಟು ದೊಡ್ಡ ಲಾಂಚು ಅದು. ಇದಕ್ಕೆ ಮಾಳಿಗೆ ಕೂಡ ಇತ್ತು. ಅಲ್ಲಿ `ಎ’ ಕ್ಲಾಸ್ ಸೀಟುಗಳು. ಬಸ್ಸಿನಲ್ಲಿರುವಂತೆ ಗ್ಲಾಸಿನ ಕಿಡಕಿಗಳು. ಕೆಳಗಡೆ ಕೇವಲ ಕಟ್ಟಿಗೆಯ ಹಲಗೆಗಳು.
ಹೊನ್ನಾವರದಿಂದ ಗೇರಸಪ್ಪಾಗೆ ಕ್ರಮಿಸಲು ಕನಿಷ್ಠ ಮೂರೂವರೆ ತಾಸು ಹಿಡಿಯುತ್ತಿತ್ತು. ಒಂದು ಲಾಂಚನ್ನು ಗೇರಸಪ್ಪಾದಿಂದ ಬೆಳಿಗ್ಗೆ ಆರು ಆರೂವರೆಗೆ ಬಿಡುತ್ತಿದ್ದರು. ಇದು ಹೊನ್ನಾವರವನ್ನು ಒಂಬತ್ತೂವರೆ ಹತ್ತಕ್ಕೆ ತಲುಪುತ್ತಿತ್ತು. ಇನ್ನೊಂದು ಲಾಂಚು ಹೊನ್ನಾವರವನ್ನು ಬೆಳಿಗ್ಗೆ ಎಂಟೂವರೆಗೆ ಬಿಡುತ್ತಿತ್ತು.
ಹೊಳೆಸಾಲಿನ ಇಕ್ಕೆಲಗಳಲ್ಲೂ ಸುಮಾರು 25 ಬಂದರುಗಳು. ಯಾವ ಬಂದರಿನಲ್ಲಿ ಯಾವ ಯಾವ ದಿನ ಯಾರ್ಯಾರು ಹತ್ತುತ್ತಾರೆ ಎಂಬುದನ್ನು ನಿಖರವಾಗಿ ಹೇಳಿಬಿಡಬಹುದಾದಷ್ಟು ಕೇರಳದವರೂ ಸ್ಥಳೀಯರೇ ಆಗಿ ಬಿಟ್ಟಿದ್ದರು.
ಲಾಂಚಿನ ಕಾದರ, ಇಬ್ರಾಹಿಮ, ಕರಿ ಅಹ್ಮದ, ಬಿಳಿ ಅಹ್ಮದ, ಕಾತೀಮ, ಕೃಷ್ಣ, ಅಬ್ದುಲ್ಲ ಇವರೆಲ್ಲ ಕನ್ನಡವನ್ನು ಇಲ್ಲಿಗೆ ಬಂದ ಮೇಲೆಯೇ ಕಲಿತದ್ದು. ಹೊಳೆಸಾಲಿನ ಎಷ್ಟೋ ಗಾದೆಗಳು, ನುಡಿಗಟ್ಟುಗಳು ಅವರ ಮಾತಿನಲ್ಲಿ ನುಸುಳಿಬಿಡುತ್ತಿತ್ತು. ಕಾತೀಮ ಇಲ್ಲಿಯ ಖೆವರ್ಿ ಹೆಂಗಸೊಬ್ಬಳನ್ನು ಮದುವೆಯಾಗಿದ್ದ. ಬಂದರದಲ್ಲಿಯೇ ಅವರ ಮನೆ. ಮೂರ್ನಾಲ್ಕು ಮಕ್ಕಳು. ಕೇರಳದಲ್ಲಿಯೂ ಅವನಿಗೆ ಒಬ್ಬ ಹೆಂಡತಿ ಇದ್ದಾಳೆ ಎಂದು ಕೆಲವರು ಹೇಳುತ್ತಿದ್ದರು.
ಲಾಂಚಿಗೆ ಕೆಲವರು ಸ್ಥಳೀಯ ಅಂಬಿಗರು ಸೇರಿದ್ದರು. ಅವರದ್ದು ಏನಿದ್ದರೂ ಲಾಂಚು ನಿಲ್ಲುವಾಗ ಜಲ್ಲಹಾಕುವುದು, ಬದಿಗೆ ನಿಲ್ಲಿಸಲು ಹಗ್ಗ ಹಾಕಿ ಜಗ್ಗುವುದು ಇವೇ ಕೆಲಸ. ಎಂಜಿನ್ ಬಳಿ ಕುಳಿತುಕೊಳ್ಳುವುದು, ಸ್ಟಿಯರಿಂಗ್ ಹಿಡಿಯುವುದು ಇವೆಲ್ಲ ಕೇರಳದವರೇ ಮಾಡುವ ಕೆಲಸ. ಸ್ಥಳೀಯರಾದ ಸಣ್ಣಪ್ಪು, ಗೋಯ್ದ, ಮಾಬ್ಲ ಇವರಿಗೆಲ್ಲ ಲಾಂಚಿನ ಕೆಲಸ ಎಂದರೆ ಅದೇನೋ ಮಹಾ. ಅಪ್ಪಿತಪ್ಪಿ ಅವರು ಸ್ಟಿಯರಿಂಗ್ ಹಿಡಿಯಲು ಅಥವಾ ಇಂಜಿನ್ ಬಳಿ ಕುಳಿತರೆಂದರೆ ಅವರನ್ನು ಅಂದು ಮಾತನಾಡಿಸುವುದೇ ಕಷ್ಟವಾಗುತ್ತಿತ್ತು. ಉಳಿದವರಿಗೆ ಅದು ಸಾಧ್ಯವಿಲ್ಲ ಎಂಬಂತೆ ವತರ್ಿಸುತ್ತಿದ್ದರು.
ಲಾಂಚಿನವರು ಪ್ರತಿ ಬಂದರಿನಲ್ಲಿ ಆ ಸ್ಥಳದ ಮಾಲೀಕರೊಬ್ಬರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರು. ಅವರು `ಎ’ ಕ್ಲಾಸಿನ ಮೆತ್ತನೆಯ ಸೀಟುಗಳ ಮೆಲೆಯೇ ಕುಳಿತು ಪ್ರಯಾಣಿಸಬಹುದಿತ್ತು. ಅಲ್ಲಿ ಕೆಲವರು ನಾಲ್ಕಾಣೆ ಎಂಟಾಣೆ ಹಚ್ಚಿ ಇಸ್ಪೀಟು ಆಡುತ್ತಿದ್ದರು.
ಲಾಂಚಿನ ಮೇಲೆಯೇ ಎಲೆ ವ್ಯಾಪಾರ, ಬಾಳಿಕಾಯಿ ವ್ಯಾಪಾರ, ಅಡಕೆ, ತೆಂಗಿನಕಾಯಿ ವ್ಯಾಪಾರವೆಲ್ಲ ನಡೆಯುತ್ತಿತ್ತು. ಹೊಳೆಸಾಲಿನವರಿಗೆಲ್ಲ ಹೊನ್ನಾವರವೇ ತಮ್ಮ ಸಾಮಾನು ಮಾರುವ ಮಾರುಕಟ್ಟೆಯಾಗಿತ್ತು. ಹೊನ್ನಾವರದಲ್ಲಿ ತಮ್ಮ ಸಾಮಾನು ಮಾರಿ ಮನೆಗೆ ಬೇಕಾಗುವ ಬೇಳೆಕಾಳು ಮತ್ತಿತರ ಸಾಮಾನುಗಳನ್ನು ಅವರು ಒಯ್ಯುತ್ತಿದ್ದರು. ತಮ್ಮ ಸಾಮಾನುಗಳನ್ನು ಅವರು ಲಾಂಚು, ದೋಣಿಗಳ ಮೇಲೆ ತರುತ್ತಿದ್ದರು. ಹೀಗಾಗಿ ಲಾಂಚಿನ ಮೇಲೆಯಶ ಕೆಲವು ವ್ಯಾಪಾರಿಗಳು ಬರುತ್ತಿದ್ದರು. ಲಾಂಚಿನಲ್ಲಿಯೇ ದರ ಮಾತಾಡಿ ಅವರು ಖರೀದಿಸಿ ಬಿಡುತ್ತಿದ್ದರು.
ಇಂಥ ವ್ಯಾಪಾರಿಗಳು ಲಾಂಚಿನಲ್ಲಿ ಖರೀದಿಸಿದ್ದನ್ನು ಹೊನ್ನಾವರದ ಬಂದರದಲ್ಲಿಯೇ ರೇಟು ಚೆನ್ನಾಗಿ ಸಿಕ್ಕಿದರೆ ಮಾರುತ್ತಿದ್ದರು. ಇಲ್ಲದಿದ್ದರೆ ಆವನ್ನು ಬೈಂದೂರಿಗೋ ಕುಂದಾಪುರಕ್ಕೋ ಒಯ್ಯುತ್ತಿದ್ದರು.
ಲಾಂಚಿನಲ್ಲಿ ಬರೀ ವ್ಯಾಪಾರವಷ್ಟೇ ಅಲ್ಲ, ಎಷ್ಟೋ ತಕರಾರುಗಳ ಇತ್ಯರ್ಥವಾಗಿವೆ. ಎಷ್ಟೋ ಜನರ ಮದುವೆಯ ಮಾತುಕತೆಗಳು ನಡೆದಿವೆ. ಕೆಲವರು ತಮ್ಮ ಬಾಳ ಸಂಗಾತಿಯನ್ನು ಮೊದಲಬಾರಿ ನೋಡಿ ಮೆಚ್ಚಿದ್ದು ಲಾಂಚಿನಲ್ಲಿಯೇ. ಇಷ್ಟೇ ಏಕೆ ನಾಲ್ಕೈದು ಹೆರಿಗೆಗಳೂ ಈ ಲಾಂಚಿನಲ್ಲಿಯೇ ಆಗಿ ಕೆಲವರ ಜನ್ಮಸ್ಥಾನವೂ ಆಗಿದೆ ಅದು.
ಹೊಸಾಡದಲ್ಲಿ ಲಾಂಷನ್ನು ಹತ್ತುವ ಸೊನಗಾರರೊಬ್ಬರು ಬೆಳ್ಳಿಯ ತಂತಿಯಿಂದ ನೇವಳವನ್ನು ಲಾಚಿನಲ್ಲಿಯೇ ಹೇಣೆಯುತ್ತಿದ್ದರು. ಹೆಗ್ಗಾರದ ಕೃಷ್ಣ ಭಟ್ಟರು `ಎ’ ಕ್ಲಾಸಿನಲ್ಲಿ ಕುಳಿತು ಯಾರದೋ ಜಾತಕ ಬರೆಯುವುದು, ಜಾತಕ ನೋಡಿ ಫಲ ಹೇಳುವುದು ಮಾಡುತ್ತಿದ್ದರು. ಜಲವಳ್ಳಿಯ ಶೆಟ್ಟರು ಕವಳದ ಚಂಚಿ ತೆಗೆದು ಕುಳಿತರು ಎಂದರೆ ಅಕ್ಕಪಕ್ಕದಲ್ಲಿ ಕುಳಿತ ಹತ್ತು ಜನರಿಗೆ ಅವರು ಕವಳ ಕೊಡಲೇ ಬೇಕು. ಕೆಲವರ ಕೈಯಲ್ಲಿ ಚಂಚಿ ಇದ್ದರೂ ಶೆಟ್ಟರ ಚಂಚಿಯ ಕವಳಕ್ಕೆ ವಿಶೇಷ ರುಚಿ ಇದೆ ಎನ್ನುವಂತೆ ಅವರಿಂದ ಕವಳ ಕೇಳುತ್ತಿದ್ದರು.
ಹೆಬ್ಬೆರಳಿನ ಉಗುರಿನಿಂದ ಸುಣ್ಣ ತೆಗೆದು, ತಂಬಾಕು ಚಿವುಟಿ ಅವರ ಬೆರಳೇ ಕಪ್ಪಾಗಿಬಿಟ್ಟಿತ್ತು. ಮನೆಯಿಂದ ಹೊನ್ನಾವರಕ್ಕೆ ಬರುವುದು ಎಂದರೆ ಮಕ್ಕಳಿಂದ ಹತ್ತು ಅಡಕೆ ಸುಲಿಸಿ, ಕೆರಿಸಿ ಸ್ವಚ್ಛ ಮಾಡಿಸಿಕೊಂಡೇ ಬರುತ್ತಿದ್ದರು.
ಕವಳ ಎಂದ ಕೂಡಲೆ ಕಾತೀಮನನ್ನು ನೆನೆಯಲೇ ಬೇಕು. ಅವನಿಗೆ ಚಂಚಿ ಕೊಡಲು ಎಲ್ಲರೂ ಅಂಜುತ್ತಿದ್ದರು. ಕೊಟ್ಟರೆ ಅರ್ಧ ಚಂಚಿಯನ್ನೇ ಅವನು ಖಾಲಿಮಾಡಿಬಿಡುವವನು. ಮೂರು ರಾಣಿ ಎಲೆ, ಬೆರಳಗಲದ ತಂಬಾಕು ತುಂಡು, ಅದಕ್ಕೆ ತಕ್ಕಾಗಿ ಸುಣ್ಣ, ಮುಕ್ಕಾಲು ಅಡಕೆ ಅವನಿಗೆ ಒಂದು ಕವಳಕ್ಕೆ ಬೇಕಾಗುತ್ತಿತ್ತು. ಬಡವರ ಒಂದು ದಿನದ ಕವಳದ ಸಾಹಿತ್ಯ ಅವನು ಒಂದೇ ಏಟಿಗೆ ತಿಂದುಳುತ್ತಿದ್ದ.
ಕಕರ್ಿಯ ಗೋವಿಂದ ನಾಯ್ಕ, ಜಲವಳ್ಳಿಯ ತಿಮ್ಮಪ್ಪ ನಾಯ್ಕ ಇವರ ನಡುವಿನ ಜಗಳ ಬಗೆಹರಿದದ್ದೂ ಲಾಂಚಿನಲ್ಲಿಯೇ. ಅವರು ಕೋಟರ್ು, ಕಚೇರಿ ಎಂದು ಅಲೆದದ್ದು ಅದೆಷ್ಟು ವರ್ಷ ಅಂತೀರಿ. ಇಬ್ಬರಿಗೂ ಬೇಜಾರು ಹುಟ್ಟಿಬಿಟ್ಟಿತ್ತು. ಸಿವಿಲ್ ಕೇಸು ಒಂದೆರಡು ವರ್ಷಕ್ಕೆ ಮುಗಿಯುತ್ತದೆಯೇ? ಕೊನೆಗೂ ಒಂದು ದಿನ ಲಾಂಚಿನಲ್ಲಿ ಎರಡೂ ಊರಿನ ಹಿರಿಯರು ಸೇರಿ ರಾಜಿ ಮಾಡಿಸಿದರು. ಗೋವಿಂದ ನಾಯ್ಕನಿಗೆ ಅರ್ಧ ಎಕರೆ ತೆಂಗಿನ ಬಾಗಾಯ್ತ ನೀಡಲು ತಿಮ್ಮಪ್ಪ ಒಪ್ಪಿಕೊಂಡರು. ಲಾಂಚು ಇಳಿದ ಮೇಲೆ ಅವರು ವೆಂಕಟೇಶನ ಚಾದಂಗಡಿಯಲ್ಲಿ ಬನ್ಸ್ ಬಾಜಿ ತಿಂದು ಚಾ ಕುಡಿದರು.
ಹೀಗೆ ಹೊಳೆಸಾಲಿನ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿಬಿಟ್ಟಿದ್ದ ಈ ಲಾಂಚಿನವರ ವಿರುದ್ಧವೇ ಜನರು ತಿರುಗಿ ಬಿದ್ದರು.
ಸ್ಟ್ರೈಕು, ಹರತಾಳ ಮುಷ್ಕರ ಇವೆಲ್ಲ ನಗರ ಬದುಕಿನಲ್ಲಿ ಆಗೊಮ್ಮೆ ಈಗೊಮ್ಮೆ ಪ್ರತ್ಯಕ್ಷವಾಗಿ ನಾಲ್ಕಾರು ದಿನ ಜನಜೀವನವನ್ನು ಅಸ್ತವ್ಯಸ್ತ ಮಾಡಿ ಮತ್ತೆ ಮರೆಯಾಗಿಬಿಡುವಂಥ ಘಟನೆಗಳು. ಆದರೆ ಹೊಳೆಸಾಲಿನ ಮಂದಿ ಇಂಥ ಸ್ಟ್ರೈಕು ಮಾಡಿದರು ಎಂದರೆ ನಂಬಲಿಕ್ಕೇ ಸಾಧ್ಯವಾಗುವುದಿಲ್ಲ. ಆದರೆ ಅವರು ಸ್ಟ್ರೈಕು ಮಾಡಿದ್ದಂತೂ ನಿಜ. ಅದರಲ್ಲಿ ಅವರು ತಮ್ಮ ಗುರಿ ಸಾಧಿಸಿಕೊಂಡದ್ದೂ ಸತ್ಯ.
ಈಗ ಕೇಳಿದರೆ ಇದೆಲ್ಲ ಮಹಾ ಅನ್ನಿಸಲಿಕ್ಕಿಲ್ಲ. ಆದರೆ ಅಂದು, ಕಳೆದ ಶತಮಾನದ ಎಪ್ಪತ್ತರ ದಶಕದ ಕೊನೆಯಲ್ಲಿ ಹೊನ್ನಾವರದಿಂದ ಗೇರಸಪ್ಪಾ ವರೆಗಿನ 25-30 ಹಳ್ಳಿಗಳ ಜನರು ಒಂದು ಅಭಿಪ್ರಾಯ ತಾಳಿದ್ದು ಮಹಾ ಅಲ್ಲದೆ ಇನ್ನೇನು?
ಲಾಂಚಿನವರು ಪ್ರಯಾನ ದರದಲ್ಲಿ ಸ್ವಲ್ಪ ಏರಿಕೆ ಮಾಡಿಬಿಟ್ಟರು. ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿ ಬಸ್ಸಿನ ಪ್ರಯಾನ ದರವೂ ಏರಿತ್ತು. ಬಸ್ಸಿನವರ ಉದಾಹರಣೆ ನೀಡಿ ತಮ್ಮ ಏರಿಕೆಯನ್ನು ಲಾಂಚಿನವರು ಸಮಥರ್ಿಸಿಕೊಳ್ಳಲು ನೋಡಿದರು.
ಈ ರೀತಿ ದರ ಏರಿಸಿದ್ದು ಇದೇ ಮೊದಲ ಸಲವೇನಲ್ಲ. ಹಿಂದೆಲ್ಲ ಪ್ರತಿ ಬಮದರಕ್ಕೆ 5 ಪೈಸೆ, 10 ಪೈಸೆ ಹೆಚ್ಚಿಸಿದ್ದರು. ಆಗ ಅವರು ಸಮರ್ಥನೆ ಮಾಡಿಕೊಳ್ಳುವ ಪ್ರಶ್ನೆಯೇ ಬಂದಿರಲಿಲ್ಲ. ಜನರಿಗೂ ಏರಿಕೆಯನ್ನು ಪ್ರಶ್ನಿಸಬೇಕೆನಿಸಿರಲಿಲ್ಲ.
ಆದರೆ ಈ ಬಾರಿ ಲಾಂಚಿನವರು ಸ್ವಲ್ಪ ಹೆಚ್ಚಿಗೆಯೇ ಏರಿಸಿದ್ದರು. 50 ಪೈಸೆ ಇದ್ದ ಬಂದರಿಗೆ 75 ಪೈಸೆ, ರುಪಾಯಿ ಇದ್ದಲ್ಲಿ ಒಂದೂವರೆ ರುಪಾಯಿ. ಹೀಗೆ ಪ್ರತಿಶತ ಐವತ್ತರಷ್ಟು ಏರಿಕೆ. ಈ ಪ್ರಮಾಣದಲ್ಲಿ ಬಸ್ಸಿನ ಪ್ರಯಾಣ ದರವೂ ಏರಿರಲಿಲ್ಲ. ದಿನಕ್ಕೆ ಮೂರು ರುಪಾಯಿ ಕೂಲಿಗೆ ಹೋಗುತ್ತಿದ್ದ ಹೊಳೆಸಾಲಿನ ಬಡವರಿಗೆ ಇದು ಬಹಳ ದುಬಾರಿ ಎನ್ನಿಸಿತು. ಹೊನ್ನಾವರದ ಬಳಕೂರು ಡಾಕ್ಟರರ ಆಸ್ಪತ್ರೆಯಲ್ಲಿ 40 ಪಢಸೆಗೆ ಒಂದು ದಿನದ ಔಷಧ ನೀಡುತ್ತಿದ್ದರು. ಅದಕ್ಕಿಂತ ಇದು ದುಬಾರಿ ಅಲ್ಲವೆ ಎಂದು ಮಾತನಾಡಿಕೊಳ್ಳತೊಡಗಿದರು.
ಸ್ಟ್ರೈಕು ಹೊಳಹು ಪಡೆದದ್ದು ಲಾಂಚಿನಲ್ಲಿಯೇ. ಗೇರಸಪ್ಪಾ ತುದಿಯಿಂದ ಚಿಕಣಿಮೂಲೆಯವರೆಗಿನ ಜನರೆಲ್ಲ ಗುಂಪುಗುಂಪಾಗಿ ಚಚರ್ಿಸಿದರು. ಒಂದೇ ದಿನ ಸ್ಟ್ರೈಕು ಆ ತುದಿಯಿಂದ ಈ ತುದಿಯವರೆಗೆ ಮಾಡಬೇಕು ಎಂದು ನಿರ್ಧರಿಸಿದರು. ಇದಕ್ಕೆ ಯಾರೋ ಒಬ್ಬ ನಾಯಕನಿರಲಿಲ್ಲ. ಆಯಾ ಊರಿನಲ್ಲಿ ಆ ಊರಿನವರದೇ ನಾಯಕತ್ವ.
ಅಂದು ಗೇರಸಪ್ಪಾದಿಂದ ಹೊನ್ನಾವರದ ವರೆಗೆ ಯಾವ ಬಂದರಿನಲ್ಲಿಯೂ ಲಾಂಚು ನಿಲ್ಲುವುದಕ್ಕೆ ಜನರು ಬಿಡಲೇ ಇಲ್ಲ. `ಲಾಂಚು ನಿಲ್ಲಿಸಲೇ ಬೇಡಿ, ದರ ಇಳಿಸಿ’ ಎಂದು ಕೂಗಿದರು. ಒಂದು ನರಪಿಳ್ಳೆಯಾದರು ಹತ್ತಬೇಕಲ್ಲ ಲಾಂಚನ್ನ. ಹೊನ್ನಾವರಕ್ಕೆ ಅಜರ್ೆಂಟಾಗಿ ಹೋಗಬೇಕಾದವರು ದೋಣಿ ಹತ್ತಿದರು.
ಮೂರು ದಿನ ಹೀಗೇ ಆಯಿತು. ಲಾಂಚಿನವರು ಮೆದುವಾದರು. ದರ ಈಳಿಸಲು ಒಪ್ಪಿಕೊಂಡರು. ಮೊದಲಿದ್ದ ದರಕ್ಕಿಂತ ಹತ್ತು ಪೈಸೆಯಷ್ಟೇ ಏರಿಸುವುದು ಎಂದು ಒಪ್ಪಿಕೊಂಡರು.
ಮತ್ತೆ ಯಥಾ ಪ್ರಕಾರ ಲಾಂಚು ಓಡಾಡತೊಡಗಿತು. ಅದೇ ಜನರು ಅದರಲ್ಲಿ ಹತ್ತಿ ಓಡಾಡಿದರು. ಅವರ ಬಗ್ಗೆ ಇವರು, ಇವರ ಬಗ್ಗೆ ಅವರು ಮೊದಲಿನದೇ ಭಾವನೆ ಇಟ್ಟುಕೊಂಡರು. ಕಾತೀಮ ಶೆಟ್ಟರ ಚಂಚಿಯಿಮದ ಕವಳ ಹಾಕುತ್ತಿದ್ದ. ಸ್ಟಿಯರಿಂಗ್ ಹಿಡಿದು ಕುಳಿತ ಇಬ್ರಹಿಂ ಸಣ್ಣಮಕ್ಕಳನ್ನು ಕಂಡರೆ ಪೊಂವ್ ಪೊಂವ್ ಎಂದು ಹಾನರ್್ ಮಾಡುತ್ತಿದ್ದ. ಸಣ್ಣಪ್ಪು ಬಳಕೂರಿನ ಪ್ರಭುಗಳಿಗೆ ಹೊನ್ನಾವರದಿಂದ ತಾಜಾ ತರಕಾರಿ ತಂದುಕೊಡುತ್ತಿದ್ದ. ಗೆರಸಪ್ಪಾದ ಪೈಗಳ ಅಂಗಡಿ ಸಾಮಾನು ಮತ್ತೆ ಲಾಂಚಿನಲ್ಲೇ ಬರತೊಡಗಿತು. ಗೆದ್ದವರೆಂದು ಹೊಳೆಸಾಲಿನವರು ಬೀಗಲಿಲ್ಲ. ಬಗ್ಗಿದೆವೆಂದು ಲಾಂಚಿನವರು ಬೇಸರಿಸಲಿಲ್ಲ.