(ಈ ಲೇಖನ ಕನ್ನಡಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭದಲ್ಲಿ 26-1-2003ರಂದು ಪ್ರಕಟವಾದದ್ದು)
ಮೋಹನದಾಸ ಕರಮಚಂದ ಗಾಂಧಿ ಉರ್ಫ್ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು 1948ರ ಜನವರಿ 30ರಂದು ನಥೂರಾಮ ಗೋಡಸೆ ದಿಲ್ಲಿಯ ಬಿರ್ಲಾ ಭವನದಲ್ಲಿ ಗುಂಡಿಕ್ಕಿ ಕೊಂದು ಹಾಕಿದ. ಈ ಹತ್ಯೆಗಾಗಿ ಅವನನ್ನು ಗಲ್ಲಿಗೇರಿಸಲಾಯತು.
ಈ ಎರಡು ವಾಕ್ಯಗಳಲ್ಲಿ ಸ್ವತಂತ್ರ ಭಾರತದ ಅತ್ಯಂತ ದುರಂತವಾದ ಘಟನೆಯೊಂದನ್ನು ಪೊಲೀಸ್ ಶೈಲಿಯಲ್ಲಿ ಹೇಳಿ ಮುಗಿಸಬಹುದು. ಗಾಂಧೀಜಿಯವರ ಹತ್ಯೆ ನಡೆದು 55 ವರ್ಷಗಳಾದವು. ಗಾಂಧೀಜಿ ಹತ್ಯೆ ನಂತರದ ಎರಡನೆ ತಲೆಮಾರು ಗಾಂಧೀಜಿ ಹತ್ಯೆಯ ವಿವರಗಳ ಬಗೆಗೆ ಕತ್ತಲೆಯಲ್ಲಿದೆ. ಯಾರೋ ಒಬ್ಬ ತಲೆತಿರುಕ ಗಾಂಧೀಜಿಗೆ ಗುಂಡಿಕ್ಕಿ ಕೊಂದ ಎಂದು ಹೇಳಿಕೊಂಡು ಅಲ್ಲಿಗೆ ಅಧ್ಯಾಯವನ್ನು ಮಗುಚಿಬಿಡುವರು. ಆದರೆ ಗಾಂಧೀಜಿ ಹತ್ಯೆಯು ಸಂಭವಿಸುವಂಥ ಅಂದಿನ ಸನ್ನಿವೇಶಗಳು, ಹಂತಕರ ಮನೋಲಹರಿಗಳು, ಒಳಸಂಚು, ಗಾಂಧೀ ಹತ್ಯೆಯನ್ನು ತಪ್ಪಿಸಬಹುದಾದ ಸಾಧ್ಯತೆಗಳತ್ತ ಒಂದು ನೋಟ ಇಲ್ಲಿದೆ.
ಅವರು ಪ್ರೊ.ಜಗದೀಶಚಂದ್ರ ಜೈನ್. ಮುಂಬಯಿ ಮಹಾನಗರಿಯ ಒಬ್ಬ ಸಭ್ಯ ಗೃಹಸ್ಥ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ಮುಂಬಯಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದ ಘನ ವಿದ್ವಾಂಸ. ಮಾತುಂಗದಲ್ಲಿಯ ರಾಮನಾರಾಯಣ ರುಯಿಯಾ ಕಾಲೇಜಿನಲ್ಲಿ ಅರ್ಧಮಾಗಧಿ ಹಾಗೂ ಹಿಂದಿ ವಿಷಯಗಳ ಪ್ರಾಧ್ಯಾಪಕರು. ಅವರು ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಮದನಲಾಲ ಪಾಹವಾ ದೇಶ ವಿಭಜನೆಯ ಕಾಲದಲ್ಲಿ ಪಂಜಾಬದಲ್ಲಿ ಸಂತ್ರಸ್ತನಾಗಿ ಮುಂಬಯಿಗೆ ಬಂದವನು. ಸಂತ್ರಸ್ತನಾದ ಅವನಿಗೆ ನೆರವಾಗಲೆಂದು ಪ್ರೊ.ಜೈನ್ ಅವರು ತಮ್ಮ ಪುಸ್ತಕಗಳನ್ನು ಶೇ.25ರ ರಿಯಾಯ್ತಿ ದರದಲ್ಲಿ ಮಾರುವುದಕ್ಕೆಂದು ಅವನಿಗೆ ಕೊಡುತ್ತಿದ್ದರು.
ಅದು 1948ರ ಜನವರಿ ಮೊದಲ ವಾರ. ಪ್ರೊ.ಜೈನ್ ಅವರ ಬಳಿಗೆ ಬಂದ ಮದನಲಾಲನು ತನ್ನ ಜೊತೆ ಬಂದಿದ್ದ ಒಬ್ಬರನ್ನು ತೋರಿಸಿ, ಕರಕರೆ' ಎಂದು ಪರಿಚಯಿಸಿದನು. ಅದಾದ ಎರಡು ಮೂರು ದಿನಗಳ ತರುವಾಯ ಮತ್ತೊಮ್ಮೆ ಪ್ರೊ.ಜೈನ್ ಅವರ ಬಳಿಗೆ ಬಂದ ಮದನಲಾಲನು, ತಮ್ಮ ಗುಂಪಿನವರು ಒಬ್ಬ ಧುರೀಣನ ಹತ್ಯೆಗೆ ಒಳಸಂಚು ನಡೆಸಿದ್ದಾರೆ ಎಂದು ಹೇಳಿದನು. ಪ್ರೊ.ಜೈನ್ ಅವರಿಗೆ ಅವನು ಏನು ಹೇಳುತ್ತಿದ್ದಾನೆ ಎಂಬುದು ತಕ್ಷಣ ಅರ್ಥವಾಗಲಿಲ್ಲ.
ಏನು?’ ಎಂದು ಕೇಳಿದರು. ಮದನಲಾಲ, ತನ್ನ ಮಗನಿಗೆ ಜ್ವರ ಬಂದಿದೆ ಎಂದು ಹೇಳುವಷ್ಟೇ ಸಲೀಸಾಗಿ, ಮೊದಲು ಹೇಳಿದ್ದನ್ನೇ ಪುನರುಚ್ಚರಿಸಿದ. ಆಗ ಪ್ರೊ.ಜೈನ್ ಚುರುಕಾಗಿ, ಯಾರನ್ನು?' ಎಂದು ಪ್ರಶ್ನಿಸಿದರು. ಮದನಲಾಲನು ಸುಲಭದಲ್ಲಿ ಬಾಯಿಬಿಡಲಿಲ್ಲ. ಜೈನ್ ಅವರ ಕುತೂಹಲ ಹೆಚ್ಚಾಯಿತು. ಮತ್ತೆ ಮತ್ತೆ ಆಗ್ರಹದ ಧ್ವನಿಯಲ್ಲಿ ಕೇಳಲು ಆಗ ಮದನಲಾಲ ನಿಧಾನವಾಗಿ
ಮಹಾತ್ಮಗಾಂಧಿ’ ಎಂದ. ಜೈನ್ ಅವರಿಗೆ ಮಂಜುಗಡ್ಡೆ ತಲೆಯ ಮೇಲೆ ನೀರಾಗುತ್ತಿರುವ ಅನುಭವವಾಯಿತು. ನಿಂತಲ್ಲಿಯೇ ಕುರ್ಚಿಯಲ್ಲಿ ಕುಸಿದು ಕುಳಿತರು.
ಗಾಂಧೀಜಿಯವರ ಪ್ರಾರ್ಥನೆ ಸಭೆಯಲ್ಲಿ ಸ್ಫೋಟಗೊಳಿಸುವ ಕೆಲಸವನ್ನು ತಮಗೆ ಒಪ್ಪಿಸಿದ್ದಾರೆ. ಸ್ಫೋಟಗೊಂಡ ತಕ್ಷಣ ಗೊಂದಲ ಏಳುತ್ತದೆ. ಆ ಅವಕಾಶವನ್ನು ಬಳಸಿಕೊಂಡು ಗಾಂಧೀಜಿಯನ್ನು ಉಳಿದವರು ಸುತ್ತುಗಟ್ಟಿ ಕೊಲ್ಲುವರು ಎಂದು ಮದನಲಾಲ ಇಡೀ ಒಳಸಂಚನ್ನು ವಿವರಿಸಿದ.
ಮೊದಲ ಆಘಾತದಿಂದ ಸಾವರಿಸಿಕೊಂಡ ಪ್ರೊ.ಜೈನ್ ಅವರು, ಮದನಲಾಲನಿಗೆ, ಈ ರೀತಿ ಮಾಡುವುದು ಸರಿಯಲ್ಲ ಎಂದು ಬುದ್ಧಿ ಹೇಳಿದರು. ದೇಶ ವಿಭಜನೆಯಿಂದ ಸಂತ್ರಸ್ತರಾಗಿ ನೋವುಂಡವರೆಲ್ಲ ಅಂದಿನ ದಿನಗಳಲ್ಲಿ ಕಾಂಗ್ರೆಸ್ಸನ್ನು ಮತ್ತ ಗಾಂಧೀಜಿಯನ್ನು ಶಪಿಸುತ್ತಿದ್ದುದು ಸಾಮಾನ್ಯವಾಗಿತ್ತು. ಇದೊಂದು ಹತಾಶ ಮನಸ್ಸಿನ ದುರಾಲೋಚನೆ ಎಂದು ಜೈನ್ ಭಾವಿಸಿದರು. ಅದಾದ ಎರಡು ದಿನಗಳ ನಂತರ ಮತ್ತೆ ಮದನಲಾಲನು ಜೈನ್ ಅವರ ಬಳಿಗೆ ಬಂದನು. ತಮ್ಮ ಉಪದೇಶ ಮನಸ್ಸಿನಲ್ಲಿ ಇಳಿದಿದೆಯೇ? ಗಾಂಧಿ ಹತ್ಯೆಯ ಆಲೋಚನೆಯನ್ನು ಕೈಬಿಟ್ಟಿರುವಿರಲ್ಲವೆ? ಎಂದು ಪ್ರೊ.ಜೈನ್ ಮದನಲಾಲನನ್ನು ಪ್ರಶ್ನಿಸಿದರು.
ಅದಕ್ಕೆ ಮದನಲಾಲನು, ನೀವು ನನ್ನ ತಂದೆಯ ಸಮಾನರು. ನಿಮ್ಮ ಮಾತನ್ನು ಮೀರಿದರೆ ನನ್ನ ಸರ್ವಸ್ವ ನಾಶವಾದಹಾಗೆಯೇ' ಎಂದು ಹೇಳಿದನು. ಅದನ್ನು ಆ ಕ್ಷಣಕ್ಕೆ ಪ್ರೊ.ಜೈನ್ ನಂಬಿದರೂ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಸಂಶಯದ ಹಕ್ಕಿ ಮುದುಡಿ ಕುಳಿತಿತ್ತು. ಆಮೇಲೆ ಮತ್ತೆ ಎರಡು ದಿನ ಬಿಟ್ಟು ಬಂದ ಮದನಲಾಲನು, ತಾನು ದಿಲ್ಲಿಗೆ ತೆರಳುತ್ತಿರುವುದಾಗಿ ಪ್ರೊ.ಜೈನ್ ಅವರಿಗೆ ತಿಳಿಸಿದನು. ಆಗ ಪ್ರೊ.ಜೈನ್ ಅವರಿಗೆ ತಿಳಿಯಾಗಿದ್ದ ಶಂಕೆ ಮತ್ತೆ ದಟ್ಟವಾಗುತ್ತ ಹೋಯಿತು. ಈ ವಿಷಯವನ್ನು ಯಾರಿಗಾದರೂ ತಿಳಿಸಲೇಬೇಕು ಎಂದು ಸಂಕಲ್ಪ ಮಾಡಿಕೊಂಡರು. ಮದನಲಾಲನು ದಿಲ್ಲಿಗೆ ತೆರಳಿದ ಎರಡು ಮೂರು ದಿನಗಳಲ್ಲೇ ಮುಂಬಯಿಯ ಝೇವಿಯರ್ ಕಾಲೇಜಿನಲ್ಲಿ ಜಯಪ್ರಕಾಶ ನಾರಾಯಮರ ಭಾಷಣವನ್ನು ಏರ್ಪಡಿಸಲಾಗಿತ್ತು. ಅವರೂ ದಿಲ್ಲಿಗೆ ತೆರಳುವವರಿದ್ದರು. ಸಭೆಯಲ್ಲಿ ಬಹಳ ಗದ್ದಲವಿತ್ತು. ಜಯಪ್ರಕಾಶ ನಾರಾಯಣರಿಗೆ ಎಲ್ಲ ವಿಷಯವನ್ನೂ ಆದ್ಯಂತವಾಗಿ ತಿಳಿಸುವ ಅವಕಾಶ ಪ್ರೊ.ಜೈನ್ ಅವರಿಗೆ ಸಿಗಲಿಲ್ಲ. ಆದರೆ ದಿಲ್ಲಿಯಲ್ಲಿ ಒಂದು ಒಳಸಂಚು ಯೋಜಿಸಲಾಗಿದೆ ಎಂಬುದನ್ನಷ್ಟೇ ತಿಳಿಸುವುದು ಅವರಿಗೆ ಸಾಧ್ಯವಾಯಿತು. 1948ರ ಜನವರಿ 20ರಂದು ಸಂಜೆ ಬಿರ್ಲಾ ಭವನದಲ್ಲಿ ಮಹಾತ್ಮಾ ಗಾಂಧೀಜಿಯವರು ಪ್ರಾರ್ಥನೆ ನಡೆಸುತ್ತಿದ್ದಾಗ ಸ್ಫೋಟ ಸಂಭವಿಸಿತು. ಅಲ್ಲಿಯೇ ಮದನಲಾಲನ ಬಂಧನವೂ ಆಯಿತು. ಸ್ಫೋಟದಲ್ಲಿ ಗಾಂಧೀಜಿಯವರಿಗೆ ಏನೂ ಆಗಲಿಲ್ಲ. ನಿಜ, ಆದರೆ ಮುಂದೆ ಏನಾದರೂ ಆಗಬಹುದೆಂದು ಶಂಕಿಸಿ ಪ್ರೊ.ಜೈನ್ ಅವರು ಜವಾಬ್ದಾರಿ ಸ್ಥಾನದಲ್ಲಿರುವ ಯಾರಿಗಾದರೂ ಈ ವಿಷಯ ತಿಳಿಸಬೇಕು ಎಂದು ಉದ್ದೇಶಿಸಿದರು. ಅವರು ಸರದಾರ ವಲ್ಲಭಭಾಯಿ ಪಟೇಲರಿಗೆ ತಿಳಿಸಬೇಕೆಂದು ಬಯಸಿ ಮೂರ್ನಾಲ್ಕು ಬಾರಿ ದೂರವಾಣಿಯಲ್ಲಿ ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ನಂತರ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಬ.ಗಂ.ಖೇರ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಅವರನ್ನು ಭೆಟ್ಟಿಯಾಗುವ ಕಾರ್ಯಕ್ರಮ ಹಾಕಿಕೊಂಡರು. ಆ ಸಮಯದಲ್ಲಿ ಮುಂಬಯಿಯ ಆಗಿನ ಗೃಹ ಸಚಿವ ಮುರಾರ್ಜಿ ದೇಸಾಯಿ ಕೂಡ ಇದ್ದರು. ಮದನಲಾಲನ ಬಗ್ಗೆ ತಮಗೆ ಗೊತ್ತಿರುವ ವಿಷಯವನ್ನೆಲ್ಲ ಪ್ರೊ.ಜೈನ್ ವಿವರಿಸಿದರು. ಆ ಕೂಡಲೆ ಮುರಾರ್ಜಿ ದೇಸಾಯಿಯವರು ಗುಪ್ತಚರ ವಿಭಾಗದ ಅಧಿಕಾರಿ ನಗರವಾಲ ಅವರನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದರು. ಕರಕರೆಯವರನ್ನು ತಕ್ಷಣ ಬಂಧಿಸುವಂತೆಯೂ ಸೂಚಿಸಿದರು. ನಂತರ ಅಹಮದಾಬಾದಿಗೆ ಹೋಗಿದ್ದ ಮುರಾರ್ಜಿಯವರು ಅಲ್ಲಿಗೆ ಬಂದಿದ್ದ ವಲ್ಲಭಭಾಯಿ ಪಟೇಲರಿಗೆ ಪ್ರೊ.ಜೈನ್ ಅವರಿಂದ ದೊರೆತ ಮಾಹಿತಿಯನ್ನು ತಿಳಿಸಿ ತಾವು ಕೈಗೊಂಡ ಮುಂಜಾಗರೂಕತೆ ಕ್ರಮಗಳನ್ನು ವಿವರಿಸಿದರು. ಗಾಂಧೀಜಿಯವರು ಪ್ರಾರ್ಥನೆ ಸಭೆಗಳನ್ನು ನಡೆಸುತ್ತಿದ್ದ ದಿಲ್ಲಿಯ ಬಿರ್ಲಾ ಭವನದ ಬಾಗಿಲಲ್ಲಿ ಒಬ್ಬ ಹೆಡ್ಕಾನ್ಸ್ಟೇಬಲ್ ಮತ್ತು ನಾಲ್ವರು ಪೊಲೀಸ್ ಪೇದೆಗಳನ್ನು ಕಾವಲಿಗೆ ಹಾಕಲಾಗಿತ್ತು. ಜನವರಿ 20ರ ಸ್ಫೋಟದ ಬಳಿಕ ಇನ್ನೂ ಹೆಚ್ಚಿನ ಪೊಲೀಸರನ್ನು ಇಡಲಾಯಿತು. ಕೆಲವರು ಮಫ್ತಿಯಲ್ಲಿ ಕೆಲವರು ಸಮವಸ್ತ್ರದಲ್ಲಿ ಇದ್ದರು. 1948ರ ಜನವರಿ 24ರಂದು ನಗರವಾಲ ಅವರು ಯಾವುದೋ ಸುಳಿವಿನ ಮೇರೆಗೆ ಬಡಗೆ ಎಂಬವನನ್ನು ಬಂಧಿಸುವಂತೆ ಆದೇಶ ನೀಡಿದರು. ಮದನಲಾಲನು ಕರಕರೆಯವರನ್ನು ಹೊರತುಪಡಿಸಿ ಉಳಿದವರ ಹೆಸರನ್ನು ಹೇಳಿರಲಿಲ್ಲವಾದರೂ ಅವರ ಚಹರೆಗಳನ್ನು ವಿವರಿಸಿದ್ದನು. ಅಷ್ಟರಮೇಲೆಯೇ ಒಳಸಂಚುಗಾರರನ್ನು ಬಂಧಿಸುವುದು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಜನವರಿ30- ಸಂಜೆ 5 ಗಂಟೆಗೆ ಇನ್ನೂ ಹತ್ತು ನಿಮಿಷ ಇರುವಾಗಲೆ ಬಿರ್ಲಾ ಭವನದ ಬಾಗಿಲ ಬಳಿಗೆ ನಥೂರಾಮ ತೆರಳಿದ. ಬಾಗಿಲ ಬಳಿ ಕಾವಲುಗಾರರು ಪ್ರಾರ್ಥನೆಗೆ ಹೋಗುವವರನ್ನು ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸುತ್ತಿದ್ದರು. ನಥೂರಾಮನಿಗೆ ತನ್ನನ್ನು ಯಾರೋ ಗಮನಿಸುತ್ತಿದ್ದಾರೆ ಎಂಬ ಭಾವನೆ ಮನಸ್ಸಿನಲ್ಲಿ ಮೂಡಿತು. ತನ್ನ ಭ್ರಮೆ ಎಂದು ಸಾವರಿಸಿಕೊಂಡನು. ನಾಲ್ಕೈದು ಜನರು ಗುಂಪಿನಲ್ಲಿ ತೆರಳುತ್ತಿರುವಾಗ ಅವರಲ್ಲಿ ತಾನೂ ಒಬ್ಬನು ಎಂಬಂತೆ ಸೇರಿಕೊಂಡು ಸರಸರನೆ ಒಳಗೆ ಪ್ರವೇಶಿಸಿದನು. ಯಾರೂ ಅವನನ್ನು ತಡೆಯಲಿಲ್ಲ. ಐದು ಗಂಟೆಯಾಗಿ ಹತ್ತು ನಿಮಿಷ ಆಗಿತ್ತು. ಗಾಂಧೀಜಿ ಹಾಗೂ ಅವರ ನಿಕಟವರ್ತಿಗಳು ಕೋಣೆಯೊಳಗಿಂದ ಪ್ರಾರ್ಥನೆ ಸ್ಥಳದ ಕಡೆಗೆ ಹೋಗುತ್ತಿರುವುದನ್ನು ನಥೂರಾಮನು ಕಂಡನು. ಅವರು ಅಂಗಳದಲ್ಲಿ ಪಾವಟಿಗೆಗಳನ್ನು ಹತ್ತುತ್ತಿರುವಂತೆಯೇ ಜನರ ಮಧ್ಯದಲ್ಲಿದ್ದ ನಥೂರಾಮನು ಅಲ್ಲಿಯೇ ಎದ್ದು ನಿಂತನು. ಗಾಂಧೀಜಿ ಗಾಂಧೀಜಿ ಪಾವಟಿಗೆಗಳನ್ನು ಹತ್ತಿ ಐದಾರು ಹೆಜ್ಜೆ ಮುಂದೆ ಬಂದಿದ್ದರು. ಇಬ್ಬರು ಬಾಲಿಕೆಯರ ಹೆಗಲ ಮೇಲೆ ಅವರ ಕೈಗಳು ಇದ್ದವು. ನಥೂರಾಮನು ಕಿಸೆಯಲ್ಲಿದ್ದ ಪಿಸ್ತೂಲನ್ನು ತಡವಿ ನೋಡಿಕೊಂಡನು. ಅದು ಕಿಸೆಯಲ್ಲಿದ್ದಾಗಲೆ ಅದರ ಸೇಫ್ಟಿ ಕ್ಯಾಚ್ ತೆಗೆದನು. ಗಾಂಧೀಜಿಯವರ ಹತ್ತಿರ ಜನಸಂದಣಿ ಇದ್ದರೂ ಅವರನ್ನು ತಲುಪಲು ತನಗೆ ಅಡೆತಡೆ ಎದುರಾಗದು ಎಂಬುದನ್ನು ಖಚಿತಪಡಿಸಿಕೊಂಡನು. ಗಾಂಧೀಜಿಗೆ ಗುಂಡು ಹಾರಿಸಿದಾಗ ಅವರ ಪಕ್ಕದಲ್ಲಿದ್ದ ಬಾಲಿಕೆಯರಿಗೆ ಗುಂಡು ಬಡಿಯಬಹುದು ಎಂಬ ಆತಂಕ ನಥೂರಾಮನನ್ನು ಕಾಡಿತು. ಪಿಸ್ತೂಲು ಕಿಸೆಯಲ್ಲಿರುವಾಗಲೇ ಆತನು ಗಾಂಧೀಜಿಯವರ ಬಳಿಸಾರಿದನು. ಗಾಂಧೀಜಿಯವರು ತಮ್ಮ ಜೀವನದಾದ್ಯಂತ ಮಾಡಿದ ದೇಶ ಸೇವೆಗಾಗಿ ಪಿಸ್ತೂಲು ಹಿಡಿದ ಕೈಯಿಂದಲೇ ಅವರಿಗೆ
ನಮಸ್ತೆ’ ಎಂದು ಹೇಳುತ್ತ ಕೈ ಮುಗಿದನು. ಒಂದು ಕೈಯಿಂದ ಬಾಲಿಕೆಯನ್ನು ಪಕ್ಕಕ್ಕೆ ಸರಿಸಿದನು. ಪಿಸ್ತೂಲಿನ ಗುಂಡಿ ಅದುಮಿಬಿಟ್ಟನು. ಒಂದು, ಎರಡು, ಮೂರು… ಮೂರು ಗುಂಡುಗಳು ಹಾರಿದ್ದವು. ಗಾಂಧೀಜಿ ಆ...' ಎಂದು ಅಸ್ಪಷ್ಟವಾಗಿ ಧ್ವನಿ ತೆಗೆದು ನೆಲದ ಮೇಲೆ ಬಿದ್ದುಬಿಟ್ಟರು. ಆಗಲೇ ಅವರ ಪ್ರಾಣಪಕ್ಷಿ ಹೊರಟುಹೋಗಿತ್ತು. ಈ ಅನಿರೀಕ್ಷಿತ ಘಟನೆಯಿಂದ ಎಲ್ಲರೂ ದಂಗಾಗಿಹೋದರು. ಐದಾರು ಹೆಜ್ಜೆ ಹಿಂದಕ್ಕೆ ಸರಿದರು. ನಥೂರಾಮ ತಮ್ಮ ಮೇಲೆಯೇ ಎಲ್ಲಿ ಗುಂಡು ಹಾರಿಸುವನೋ ಎಂದು ಅವರು ಅಂಜಿದರು. ಆದರೆ ನಥೂರಾಮನು ಪಿಸ್ತೂಲು ಹಿಡಿದ ಕೈಯನ್ನು ಮೇಲಕ್ಕೆ ಎತ್ತಿ, ಪೊಲೀಸ್ ಎಂದು ಕೂಗಿದನು. ಅರ್ಧ ನಿಮಿಷವಾದರೂ ಯಾರೂ ಅವನ ಬಳಿಗೆ ಬರಲಿಲ್ಲ. ಯಾರಾದರೂ ತನ್ನನ್ನು ಹೊಡೆಯಬಹುದು, ತನಗೆ ಗುಂಡಿಕ್ಕಬಹುದು ಎಂದೆಲ್ಲ ಆಲೋಚಿಸಿ ನಥೂರಾಮನು ಅಸ್ವಸ್ಥನಾಗತೊಡಗಿದ. ಪಿಸ್ತೂಲನ್ನು ಎಸೆದರೆ ತಪ್ಪಿಸಿಕೊಂಡು ಹೋಗುವ ಪ್ರಯತ್ನ ನಡೆಸಿದ ಎಂದು ಅರ್ಥಹಚ್ಚಬಹುದಿತ್ತು. ಅದು ನಥೂರಾಮನಿಗೆ ಬೇಡವಾಗಿತ್ತು. ಗಾಂಧೀಜಿ ಹತ್ಯೆಯ ಆರೋಪವನ್ನು ತಪ್ಪಿಸಿಕೊಳ್ಳುವುದಕ್ಕೆ ಅವನು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಅದಕ್ಕಾಗಿಯೇ ಪಿಸ್ತೂಲು ಹಿಡಿದ ಕೈಯನ್ನು ಮೇಲಕ್ಕೆ ಎತ್ತಿ ಹಿಡಿದು ತಾನೇ ಪೊಲೀಸರನ್ನು ಕೂಗಿದ. ನಥೂರಾಮ ಕೂಗಿದರೂ ಪೊಲೀಸರು ಹತ್ತಿರ ಬರಲಿಲ್ಲ. ಆಗ ಅವನು ಅತ್ತಿತ್ತ ನೋಡಿದಾಗ ಅಮರನಾಥ ಅಥವಾ ಒಬ್ಬ ಸೈನಿಕನ ದೃಷ್ಟಿಯೊಂದಿಗೆ ಅವನ ದೃಷ್ಟಿ ಕಲೆಯಿತು. ಬಳಿಗೆ ಬರುವಂತೆ ಕಣ್ಸನ್ನೆಯಲ್ಲೇ ನಥೂರಾಮ ಸೂಚಿಸಿದ. ಆಗ ಅವರು ಮುಂದೆ ಬಂದು ಪಿಸ್ತೂಲು ಹಿಡಿದ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಆಗ ಜನರು ಮುತ್ತಿದರು. ಕೆಲವರು ನಥೂರಾಮನಿಗೆ ಹೊಡೆದರು. ಅದರಿಂದಾಗಿ ಸಣ್ಣ ಗಾಯವಾಗಿ ತಲೆಯಿಂದ ರಕ್ತ ಸುರಿಯಿತು. ಯಾರೋ ಒಬ್ಬನು ನಥೂರಾಮನು ಗಾಂಧೀಜಿಯನ್ನು ಕೊಂದ ಪಿಸ್ತೂಲನ್ನು ಕೈಯಲ್ಲಿ ಹಿಡಿದು,
ನಿನ್ನನ್ನೂ ಇದೇ ಪಿಸ್ತೂಲಿನಿಂದ ಕೊಲ್ಲುತ್ತೇನೆ’ ಎಂದು ಗರ್ಜಿಸಿದನು. ಅದಕ್ಕೆ ನಥೂರಾಮನು ಶಾಂತನಾಗಿ, ಆದರೆ ನಿನಗೆ ಪಿಸ್ತೂಲನ್ನು ಉಪಯೋಗಿಸುವುದು ಗೊತ್ತಿರುವ ಹಾಗೆ ಕಾಣುವುದಿಲ್ಲ. ಅದರ ಸೇಫ್ಟಿ ಕ್ಯಾಚ್ ತೆರೆದಿದೆ. ಅದರಲ್ಲಿ ಇನ್ನೂ ಗುಂಡುಗಳಿವೆ. ಸಹಜವಾಗಿ ಅದನ್ನು ಬಡಿದರೂ ಗುಂಡುಗಳು ಹಾರಿ ಮತ್ಯಾರನ್ನಾದರೂ ಬಲಿ ತೆಗೆದುಕೊಳ್ಳಬಹುದು' ಎಂದು ಎಚ್ಚರಿಸಿದ. ಗಾಂಧೀ ಹತ್ಯೆ ನಡೆದ ಸ್ವಲ್ಪ ಹೊತ್ತಿನಲ್ಲಿಯೇ ತನ್ನನ್ನು ಪರೀಕ್ಷಿಸಿದ ವೈದ್ಯರಿಗೆ ನಥೂರಾಮನು,
ಡಾಕ್ಟರ್, ನನ್ನನ್ನು ಸಂಪೂರ್ಣವಾಗಿ ಪರೀಕ್ಷಿಸಿ. ನನ್ನ ಹೃದಯ ಬಡಿತ, ನಾಡಿ ಮಿಡಿತ ಎಲ್ಲವೂ ವ್ಯವಸ್ಥಿತವಾಗಿ ಇದೆಯೋ ಇಲ್ಲವೋ ಅದನ್ನು ನೊಂದಾಯಿಸಿಕೊಳ್ಳಿರಿ’ ಎಂದು ಕೋರಿದ. ಯಾರೋ ಮಾನಸಿಕ ಅಸ್ವಸ್ಥನೊಬ್ಬ ಗಾಂಧೀಜಿಯನ್ನು ಕೊಂದ ಎಂದು ಪ್ರಚಾರವಾಗುವುದು ಅವನಿಗೆ ಬೇಕಿರಲಿಲ್ಲ. ಗಾಂಧೀಜಿಯ ಹತ್ಯೆ ಒಂದು ಉದ್ದೇಶ ಸಾಧನೆಗಾಗಿ ಮಾಡಿದ್ದು ಎಂಬುದು ರುಜುವಾತು ಆಗಬೇಕು ಎಂದು ಅವನು ಬಯಸಿದ್ದ.
ಗಾಂಧೀ ಹತ್ಯೆ ಹಾಗೂ ಅದಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ನಥೂರಾಮ ಮತ್ತು ನಾನಾ ಆಪಟೆಯನ್ನು 15-11-1949ರಂದು ಅಂಬಾಲಾ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು. ಕತ್ತಿಗೆ ನೇಣಿನ ಕುಣಿಕೆ ಬಿಗಿಯುತ್ತಿದ್ದಾಗ ಅವರು ಅಖಂಡ ಭಾರತ ಅಮರ ರಹೇ' ಮತ್ತು
ವಂದೇ ಮಾತರಂ’ ಘೋಷಣೆ ಕೂಗಿದರು. ಅಖಂಡ ಭಾರತದ ಸಿಂಧೂ ನದಿಯಲ್ಲಿ ತಮ್ಮ ಅಸ್ಥಿಗಳನ್ನು ವಿಸರ್ಜಿಸಬೇಕು ಎಂದು ಅವರು ತಮ್ಮ ಕೊನೆಯ ಆಸೆಯನ್ನು ವ್ಯಕ್ತಪಡಿಸಿದರು.
ದಿಲ್ಲಿಯ ಕೆಂಪುಕೋಟೆಯ ವಿಶೇಷ ನ್ಯಾಯಾಧೀಶ ಆತ್ಮಚರಣರು ಗಾಂಧೀ ಹತ್ಯೆ ಪ್ರಕರಣದ ತೀರ್ಪನ್ನು 10-02-1949ರಂದು ಘೋಷಿಸಿದದರು. ನಥೂರಾಮ ಗೋಡಸೆ ಮತ್ತು ನಾನಾ ಆಪಟೆಗೆ ಗಲ್ಲು ಶಿಕ್ಷೆ, ವಿಷ್ಣು ಕರಕರೆ, ಮದನಲಾಲ ಪಾಹವಾ, ಗೋಪಾಳ ಗೋಡಸೆ, ಶಂಕರ ಕಿಸ್ಟೈಯ್ಯಾ ಮತ್ತು ಡಾ. ಪರಚುರೆ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ಇತರ ಶಿಕ್ಷೆಗಳನ್ನು ವಿಧಿಸಲಾಗಿತ್ತು. ಅವುಗಳನ್ನು ಮುಖ್ಯ ಶಿಕ್ಷೆಯ ಜೊತೆಗೆಯೇ ಅನುಭವಿಸತಕ್ಕುದಾಗಿತ್ತು. ಬಡಗೆಗೆ ಸಂಪೂರ್ಣ ಕ್ಷಮೆಯನ್ನು ನೀಡಲಾಗಿತ್ತು ಹಾಗೂ ವೀರ ಸಾವರಕರರನ್ನು ನಿರ್ದೋಷಿಯೆಂದು ಬಿಡುಗಡೆ ಮಾಡಲಾಯಿತು. ಗಾಂಧೀಜಿಯವರನ್ನು ಹತ್ಯೆ ಮಾಡುವಂತೆ ಸಾವರ್ಕರ್ ಅವರು ಹಂತಕರಿಗೆ ಆದೇಶ ನೀಡಿದ್ದರು ಎಂದು ಹೊಲೀಸರು ಅವರ ಮೇಲೆ ಆರೋಪ ಹೊರಿಸಿದ್ದರು.
ಗಾಂಧಿ ಹತ್ಯೆಗೆ ಕಾರಣವೇನು?
ಇವತ್ತಿಗೂ ಕೂಡ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಮನಃಪೂರ್ತಿಯಾಗಿ ಈ ದೇಶ ವಿಭಜನೆಯನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಿರುವಾಗ 1947ರಲ್ಲಿಯ ಭಾರತೀಯರ ಮನಸ್ಸು ಹೇಗಿದ್ದಿರಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ದೇಶವಿಭಜನೆಯ ನಿಜವಾದ ಕಾರಣಗಳೇನು ಎಂಬ ಬಗೆಗೆ ಇದೀಗ ಹಲವಾರು ಹೊತ್ತಗೆಗಳು ಬಂದಿವೆ.
ಆದರೆ ಅಂದು ದೇಶ ವಿಭಜನೆ ಒಂದು ಘೋರ ಪ್ರಮಾದ ಎಂಬ ಭಾವನೆ ದಟ್ಟವಾಗಿತ್ತು. ಮುಸ್ಲಿಮರನ್ನು ತುಷ್ಟೀಕರಿಸುವ ಕಾಂಗ್ರೆಸ್ ಮತ್ತು ಗಾಂಧೀಜಿಯ ಧೋರಣೆಗಳೇ ದೇಶ ವಿಭಜನೆಗೆ ಕಾರಣ ಎಂಬ ಭಾವನೆ ಬೆಳೆದಿತ್ತು. ಮುಸ್ಲಿಂ ತುಷ್ಟೀಕರಣ ಧೋರಣೆಯನ್ನು ಗಾಂಧೀಜಿ ಮತ್ತು ಕಾಂಗ್ರೆಸ್ ಪಕ್ಷ ಇತರರಿಗೆ ಮನದಟ್ಟು ಮಾಡಿಕೊಡಬೇಕಿತ್ತು.
ದೇಶ ವಿಭಜನೆಯ ಕಾಲದಲ್ಲಿ ಆದ ಒಪ್ಪಂದದಂತೆ ಭಾರತವು ಪಾಕಿಸ್ತಾನಕ್ಕೆ 55 ಕೋಟಿ ರುಪಾಯಿಗಳನ್ನು ನೀಡಬೇಕಿತ್ತು. ಪಾಕಿಸ್ತಾನವು ಕಾಶ್ಮೀರದ ಮೇಲೆ ದಾಳಿಯನ್ನು ಮಾಡಿತ್ತು. ಈ ಕಾರಣಕ್ಕಾಗಿ ಅದಕ್ಕೆ ನೀಡಬೇಕಿದ್ದ 55 ಕೋಟಿ ರುಪಾಯಿಗಳನ್ನು ತಡೆಹಿಡಿಯಲು ಭಾರತ ಸರ್ಕಾರವು ನಿರ್ಧರಿಸಿತ್ತು. ಆದರೆ ಗಾಂಧೀಜಿಯವರು ಪಾಕಿಸ್ತಾನಕ್ಕೆ ನೀಡಬೇಕಿದ್ದ 55 ಕೋಟಿ ರುಪಾಯಿಗಳನ್ನು ನೀಡುವಂತೆ ಸರಕಾರದ ಮೇಲೆ ಒತ್ತಡ ಹೇರಿದರು. ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸರ್ಕಾರವನ್ನು ಎಚ್ಚರಿಸಿದರು.
ದೇಶವನ್ನು ಆಳುವುದಕ್ಕೆ ಒಂದು ಸರಕಾರ ಇರುವಾಗ ಗಾಂಧೀಜಿಯವರು ಸರಕಾರದ ಹೊರಗಿದ್ದುಕೊಂಡೇ ಅದರ ಮೇಲೆ ಪ್ರಭಾವ ಬೀರುವ ರೀತಿ ವರ್ತಿಸುತ್ತಿರುವುದು, ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದೆಂದರೆ ತಾವೇ ಒಂದು ಸರ್ಕಾರದಂತೆ ನಡೆದುಕೊಳ್ಳುತ್ತಿರುವುದು ಗಾಂಧೀ ಹಂತಕರ ಮನಸ್ಸಿಗೆ ಬರಲಿಲ್ಲ.
ಆಗ ಭಾರತದ ಉಪಪ್ರಧಾನಿಯಾಗಿದ್ದ ವಲ್ಲಭಭಾಯಿ ಪಟೇಲರು 12-01–1948ರಂದು ಸುದ್ದಿಗಾರರೊಂದಿಗೆ ಮಾತನಾಡುವಾಗ, ಕಾಶ್ಮೀರದ ಮೇಲಿನ ದುರಾಕ್ರಮಣವನ್ನು ಪ್ರತಿಭಟಿಸುವ ಸಲುವಾಗಿ ಪಾಕಿಸ್ತಾನದೊಂದಿಗಿನ ಆರ್ಥಿಕ ವ್ಯವಹಾರ ಒಡಂಬಡಿಕೆಯ ಕಾರ್ಯಾಚರಣೆಯನ್ನು ಮುಂದೂಡುವುದಾಗಿ ತಿಳಿಸಿದ್ದರು. ಕಾಶ್ಮೀರ ಪ್ರಶ್ನೆ ಬಗೆಹರಿಯದ ಹೊರತು ಪಾಕಿಸ್ತಾನಕ್ಕೆ ಯಾವುದೇ ಹಣವನ್ನು ಕೊಡಲು ಒಪ್ಪುವುದಿಲ್ಲ ಎಂದೂ ಪಟೇಲರು ಸ್ಪಷ್ಟಪಡಿಸಿದ್ದರು.
ಗಾಂಧೀಜಿ ಆಗ ದಿಲ್ಲಿಯಲ್ಲಿಯೇ ವಾಸ್ತವ್ಯ ಮಾಡಿದ್ದರು. ಆಡಳಿತದಲ್ಲಿಯ ವರಿಷ್ಠರೊಡನೆ ಅವರ ಭೆಟ್ಟಿ ಹಾಗೂ ರಾಜಕೀಯ ಸಮಸ್ಯೆಗಳ ಚರ್ಚೆ ನಡೆಯುತ್ತಿತ್ತು. ಹಣ ತಡೆಹಿಡಿದು ಪಾಕಿಸ್ತಾನ ಮಣಿಯುವಂತೆ ಮಾಡುವುದು ಅಹಿಂಸಾ ತತ್ವ ಪಾಲನೆಗೆ ಹಿನ್ನೆಡೆ ಎಂದು ಗಾಂಧೀಜಿ ಭಾವಿಸಿದರು.
ಈ ಹಿನ್ನೆಲೆಯಲ್ಲಿಯೇ ದಿಲ್ಲಿಯ ಪ್ರಾರ್ಥನೆ ಸಭೆಯಲ್ಲಿ ಗಾಂಧೀಜಿಯವರು 12-01-1948ರಂದು, ಸಮಾಜದಲ್ಲಿಯ ಯಾವುದೇ ಅನ್ಯಾಯದ ವಿರುದ್ಧ ವಿರೋಧವನ್ನು ಪ್ರಕಟಮಾಡಲು ಅಹಿಂಸೆಯ ಪೂಜಾರಿಗೆ ಸತ್ಯಾಗ್ರಹ ಮಾಡುವ ಪ್ರಸಂಗ ಬರುತ್ತದೆ. ಇದೊಂದೇ ಮಾರ್ಗವೆಂದು ಅನ್ನಿಸಿದಾಗ ಆ ರೀತಿ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಾನೆ. ಇಂಥದೊಂದು ಪ್ರಸಂಗ ನನಗೀಗ ಪ್ರಾಪ್ತವಾಗಿದೆ' ಎಂದು ಹೇಳಿದರು. ತಾವು ಹೇಳಿದಂತೆಯೇ ಗಾಂಧೀಜಿ ಎರಡನೆಯ ದಿನದಿಂದಲೇ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಪಾಕಿಸ್ತಾನದ ವಿರುದ್ಧ ಕೈಗೊಳ್ಳುವ ಕ್ರಮಗಳು ಭಾರತವನ್ನು ತತ್ವಭ್ರಷ್ಟಗೊಳಿಸುವುದು ಎಂಬ ಭಾವನೆ ಗಾಂಧೀಜಿಯವರಲ್ಲಿತ್ತು. ಹೀಗಾಗಿಯೇ ಅವರು ತಮ್ಮ ಪ್ರಾಣವನ್ನು ಪಣಕ್ಕೆ ಹಚ್ಚಿ ಉಪವಾಸ ಆರಂಭಿಸಿದ್ದರು. ಇದರಿಂದಾಗಿ ಭಾರತ ಸರ್ಕಾರವು ತನ್ನ ಮೊದಲಿನ ನಿರ್ಧಾರವನ್ನು ಬದಲಿಸುವಂತಾಯಿತು. ಈ ಎಲ್ಲ ಬೆಳವಣಿಗೆಗಳು ಗಾಂಧೀಜಿಯವರ ಹತ್ಯೆಗೆ ಸಂಚು ರೂಪಿಸಿದವರ ಮನಸ್ಸನ್ನು ಪ್ರಭಾವಿಸಿತು. ಗಾಂಧೀಜಿ ರಾಜಕೀಯದಿಂದ ನಿವೃತ್ತರಾಗಬೇಕು ಎಂದು ಅವರು ಬಯಸುತ್ತಿದ್ದರು. ತಾವಾಗಿಯೇ ಗಾಂಧೀಜಿ ನಿವೃತ್ತರಾಗುತ್ತಿರಲಿಲ್ಲ. ನಥೂರಾಮ ಗೋಡಸೆ ಮತ್ತು ನಾನಾ ಆಪಟೆ
ಹಿಂದೂ ಮಹಾಸಭಾ’ದ ಸಕ್ರಿಯ ಕಾರ್ಯಕರ್ತರಾಗಿದ್ದರು. ಹಿಂದೂಗಳ ಸಂಘಟನೆಗಾಗಿಯೇ ಅವರು ಹಿಂದೂ ರಾಷ್ಟ್ರ' ಪತ್ರಿಕೆಯನ್ನು ಹೊರತರುತ್ತಿದ್ದರು. ಗಾಂಧೀಜಿ ಉಪವಾಸ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿಯೇ ಅದರಲ್ಲಿ ನಥೂರಾಮ ಮತ್ತು ನಾನಾ ಆಪಟೆ ಬರೆದಿರುವ ಸಂಪಾದಕೀಯವನ್ನು ಗಮನಿಸಬೇಕು.
ಪಾಕಿಸ್ತಾನವು ಮುಸ್ಲಿಮ್ ರಾಷ್ಟ್ರವೇ ಆದುದರಿಂದಾಗಿ ಹಿಂದೂಗಳ ಮೇಲೆ ದಬ್ಬಾಳಿಕೆ; ಹಿಂದೂಸ್ತಾನದಲ್ಲಿ ಮುಸಲ್ಮಾನರನ್ನು ಸಂಪ್ರೀತಗೊಳಿಸಿ ಅವರು ಹೇಳಿದಂತೆಯೇ ನಡೆಯಲು ಹಿಂದುತ್ವವಾದಿಗಳು ಒಪ್ಪುತ್ತಿಲ್ಲ, ವಿರೋಧಿಸುತ್ತಾರೆ ಎಂಬ ಕಾರಣದಿಂದಾಗಿ ಹಿಂದೂಸ್ತಾನದಲ್ಲಿಯೇ ಹಿಂದೂಗಳ ಮೇಲೆ ದಬ್ಬಾಳಿಕೆ…’ ಇದಕ್ಕೆಲ್ಲ ಗಾಂಧೀಜಿಯ ಧೋರಣೆಯೇ ಕಾರಣ ಎಂಬ ನಂಬಿಕೆ ಅವರದಾಗಿತ್ತು.
ಇದು ಗಾಂಧೀಜಿ ಹತ್ಯೆಗೆ ದಾರಿ ಮಾಡಿತು.
ಯಾರೀ ನಥೂರಾಮ
ನಥೂರಾಮನ 19-05-1910ರಂದು ಬಾರಾಮತಿಯಲ್ಲಿ ಜನಿಸಿದನು. ತಂದೆ ವಿನಾಯಕರಾಯ ತಾಯಿ ಲಕ್ಷ್ಮೀಯ ಪ್ರಥಮ ಪುತ್ರ ನಥೂರಾಮ. ವಿನಾಯಕರಾಯರು ಅಂಚೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದರು. ಲಕ್ಷ್ಮೀಯು ಗರ್ಭಿಣಿಯಾಗಿದ್ದಾಗ ಅತ್ತೆ ಮಾವ ತಮ್ಮ ಸೊಸೆಗೆ ಗಂಡು ಮಗುವೇ ಆಗಲಿ, ಗಂಡು ಮಗುವಾದರೂ ಆತನ ಮೂಗು ಚುಚ್ಚಿಸುತ್ತೇವೆ, ಉಡಿ ತುಂಬಿಸುತ್ತೇವೆ, ಮುಂಜಿವೆಯನ್ನು ದೇವಾಲಯದಲ್ಲಿಯೇ ಮಾಡಿಸುತ್ತೇವೆ ಎಂದು ಕುಲದೇವರನ್ನು ಬೇಡಿಕೊಂಡಿದ್ದರು. ಮಗು ಜನಿಸಿದ ಬಳಿಕ ಅವನನ್ನು ಕುಲದೇವರ ಉಡಿಯಲ್ಲಿ ಹಾಕಿ ರಾಮಚಂದ್ರ ಎಂದು ನಾಮಕರಣ ಮಾಡಡಿದರು. ಅವನಿಗೆ ಹರಕೆಯ ಪ್ರಕಾರ ಮೂಗು ಚುಚ್ಚಿಸಲಾಯಿತು. ಇದರಿಂದಾಗಿ ಅವನನ್ನು ಎಲ್ಲರೂ ನಥೂ' ಎಂದು ಕರೆಯಲಾರಂಭಿಸಿದರು. ಅವನ ಹೆಸರಿಗೆ ನಥೂ ಸೇರಿಕೊಂಡು ರಾಮಚಂದ್ರನು ನಥೂರಾಮನಾದನು. ಪುಣೆಯ ರಾಷ್ಟ್ರೀಯವಾದಿ ಪತ್ರಿಕೆಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ನಥೂರಾಮನು ಓದುತ್ತಿದ್ದನು. ತಂದೆಯ ಸಂಗಡ ಯಾವುದಾದರೂ ಉಪನ್ಯಾಸ ಕಾರ್ಯಕ್ರಮಗಳಿಗೆ ಆತನು ಹೋಗುತ್ತಿದ್ದನು. ಅಲ್ಲಿ ಅವನು ಅನೇಕ ವಿಷಯಗಳನ್ನು ಅರಿತುಕೊಳ್ಳುತ್ತಿದ್ದನು. ಇಂಥ ಒಂದು ಉಪನ್ಯಾಸದ ಪ್ರಭಾವದಿಂದಾಗಿಯೇ ನಥೂರಾಮನು ತನ್ನ ಮನೆಯಲ್ಲಿ ಪರದೇಶಿ ಸಕ್ಕರೆಯನ್ನು ಬಳಸುವುದು ಬೇಡವೆಂದು ಹಟ ಹಿಡಿದನು. ಅವನ ಹಟಕ್ಕೆ ಮಣಿದ ಮನೆಯವರು ಸಕ್ಕರೆ ತರುವುದನ್ನು ನಿಲ್ಲಿಸಿಬಿಟ್ಟರು. ನಥೂರಾಮ ಕವಿ ಕೂಡ ಹೌದು. ಬೇರೆಯವರ ಕವಿತೆಗಳನ್ನು ಸಭೆಗಳಲ್ಲಿ ಹಾಡುತ್ತಿದ್ದುದಲ್ಲದೆ ತಾನೇ ಸ್ವತಃ ಕವಿತೆಗಳನ್ನೂ ಬರೆದಿದ್ದ. ಗಣಪತಿ ಉತ್ಸವಗಳಲ್ಲಿ ಹಾಡುವುದಕ್ಕೆ ಅನುಕೂಲವಾಗುವಂಥ ಅನೇಕ ದೇಶಭಕ್ತಿ ಗೀತೆಗಳನ್ನು ಅವನು
ಲಕ್ಷ್ಮೀ ತನಯ’ ಎಂಬ ಕಾವ್ಯನಾಮದಿಂದ ಬರೆದಿದ್ದ. ಮರಾಠಿಗೆ ರಾಮರಕ್ಷವನ್ನು ಶ್ಲೋಕಬದ್ಧವಾಗಿ ರೂಪಾಂತರಿಸಿದ್ದನು. ನಥೂರಾಮ ಚಿಕ್ಕವನಿದ್ದಾಗ ಮೈಮೇಲೆ ದೇವರು ಬಂದವನಂತೆ ಮಾಡುತ್ತಿದ್ದನು.
ಅವನ ತಂದೆ ಲೋನಾವಳದಲ್ಲಿ ನೌಕರಿ ಮಾಡುವಾಗ, ನದಿಯ ಪ್ರವಾಹದಲ್ಲಿ ಕೊಚ್ಚಿಕಂಡು ಹೋಗುತ್ತಿದ್ದ ಒಂದು ಅಸ್ಪೃಶ್ಯ ಮಗುವನ್ನು ನಥೂರಾಮ ಈಜಿ ಪಾರುಮಾಡುತ್ತಾನೆ. ಅದೇ ರೀತಿ ಅವನ ಅಕ್ಕ ಶಾಂತಾ ಕರ್ಜತದ ಘಟ್ಟದ ಮೇಲಿನಿಂದ ನದಿಯಲ್ಲಿ ಬಿದ್ದು ಮುಳುಗುತ್ತಿದ್ದಾಗಲೂ ನತೂರಾಮನೇ ಆಕೆಯನ್ನು ಕಾಪಾಡುತ್ತಾನೆ. ಇಂಥ ಸಾಹಸಗಳು ಅವನಿಗೆ ಚಿಕ್ಕಂದಿನಿಂದಲೇ ರೂಢಿಯಾಗಿತ್ತು.
ನಥೂರಾಮನ ತಂದೆ ಸರಕಾರಿ ನೌಕರಿ ಮಾಡುತ್ತಿದ್ದುದರಿಂದ ಸರಕಾರದ ವಿರುದ್ಧವಾಗಿ ನಡೆಯುತ್ತಿದ್ದ ದೇಶದ ಸ್ವಾತಂತ್ರ್ಯ ಹೋರಾಟದ ಚಳವಳಿಯಿಂದ ಅವರು ದೂರವೇ ಇದ್ದರು. ಆದರೆ ನಥೂರಾಮನಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಆಸಕ್ತಿ. ಚಳವಳಿಗಾರರ ಹತ್ತು ಹನ್ನೆರಡು ಜನರಿದ್ದ ಒಂದು ತಂಡವು ಮುಂಬಯಿಗೆ ಹೋಗುವ ಮಾರ್ಗದಲ್ಲಿ ಕರ್ಜತದಲ್ಲಿ ಒಂದು ದೇವಸ್ಥಾನದದಲ್ಲಿ ತಂಗುತ್ತದೆ. ಅವರಿಗೆ ಊಟೋಪಚಾರಗಳನ್ನು ಮಾಡಿಸಬೇಕೆಂದು ನಥೂರಾಮನಿಗೆ ಪ್ರಬಲವಾದ ಇಚ್ಛೆ. ಆದರೆ ಸತ್ಯಾಗ್ರಹಿಗಳೊಂದಿಗೆ ಸಂಪರ್ಕ ಇಟ್ಟುಕೊಂಡರೆ ತಂದೆಯ ವಿರೋಧ. ಉಭಯಸಂಕಟದಲ್ಲಿ ನಥೂರಾಮನು ಹುಂಬ ಧೈರ್ಯ ಮಾಡಿ ಸತ್ಯಾಗ್ರಹಿಗಳು ತಂಗಿದ್ದಲ್ಲಿಗೆ ಹೋಗಿ ಮಧ್ಯಾಹ್ನದ ಊಟಕ್ಕೆ ತಮ್ಮ ಮನೆಗೆ ಬರುವುದಕ್ಕೆ ಹೇಳಿ ಬರುತ್ತಾನೆ. ಅವರು ಬರುತ್ತಾರೆ. ಅವರು ಊಟಕ್ಕೆ ಕುಳಿತಿರುವಾಗಲೇ ತಂದೆ ಮನೆಗೆ ಬರುತ್ತಾನೆ. ಮಗನನ್ನು ಪಾರು ಮಾಡಲು ತಾಯಿ, ಮಧ್ಯಾಹ್ನದ ಹೊತ್ತಿಗೆ ಬಂದವರನ್ನು ಹಾಗೆಯೇ ಹೇಗೆ ಕಳುಹಿಸುವುದು. ಬಂದವರು ಸತ್ಯಾಗ್ರಹಿಗಳೋ, ಕಾಶಿ ಯಾತ್ರೆಗೆ ಹೋಗುವವರೋ ಎಂದು ವಿಚಾರಿಸಿಕೊಂಡು ನಾವೇನು ಮಾಡುವುದು' ಎಂದು ಹೇಳುತ್ತಾಳೆ. ಇದೆಲ್ಲ ಮಗನದೇ ಕಿತಾಪತಿ ಎಂದು ತಂದೆಗೆ ತಿಳಿಯುತ್ತದೆ. ಅತಿಥಿಗಳು ಹೋದಮೇಲೆ ಮಗನಿಗೆ,
ನಿನ್ನಷ್ಟಕ್ಕೆ ನೀನೇ ವ್ಯವಹಾರ ಮಾಡಬೇಡ. ನನ್ನ ಕಿವಿಯ ಮೇಲೂ ಸ್ವಲ್ಪ ಹಾಕು. ಹಳ್ಳಿಯಲ್ಲಿರುವ ಬೇರೆ ಯಾವುದಾದರೂ ಮನೆಯಲ್ಲಿ ಈ ವ್ಯವಸ್ಥೆ ಮಾಡಿಸೋಣ. ನನ್ನ ಪರಿಚಯದವರು ಬಹಳ ಜನ ಇದ್ದಾರೆ’ ಎಂದು ಬುದ್ಧಿ ಹೇಳಿದರು. ಸತ್ಯಾಗ್ರಹಿಗಳಿಗೆ ಊಟ ಮಾಡಿಸಿದ ಹೆಮ್ಮೆ ಮಾತ್ರ ನಥೂರಾಮನಲ್ಲಿ ಅನೇಕ ದಿನಗಳ ಕಾಲ ಮನೆ ಮಾಡಿತ್ತು.
ನಥೂರಾಮನ ತಂದೆಗೆ ರತ್ನಾಗಿರಿಗೆ ವರ್ಗವಾಯಿತು. ಅಲ್ಲಿ ನಥೂರಾಮನಿಗೆ ವೀರ ಸಾವರ್ಕರರ ಪರಿಚಯವಾಗುತ್ತದೆ. ಅವರ ಜೊತೆಯಲ್ಲಿಯೇ ಹಿಂದೂ ಮಹಾಸಭಾದ ಸಂಪರ್ಕ ಬರುತ್ತದೆ. ಸಾವರ್ಕರರ ತೀವ್ರ ಪ್ರಭಾವ ನಥೂರಾಮನ ಮೇಲೆ ಇತ್ತು. ದೇಶಸೇವೆಯಲ್ಲಿ ಬಾಧೆ ಬರದಿರಲಿ ಎಂದೇ ನಥೂರಾಮನು ವಿವಾಹ ಮಾಡಿಕೊಂಡಿರಲಿಲ್ಲ.
ದೇಶ ಬಲಿಷ್ಠವಾಗಬೇಕಾದರೆ, ಸ್ವಾತಂತ್ರ್ಯ ಚಳವಳಿಗೆ ಬಲ ಬರಬೇಕಾದರೆ ಹಿಂದೂ ಸಂಘಟನೆ ಅಗತ್ಯ ಎಂದು ಅವನು ಹಿಂದೆ ಹೊರಡುತ್ತಿದ್ದ ಅಗ್ರಣಿ' ಪತ್ರಿಕೆಯನ್ನು ಪುನರುಜ್ಜೀವನ ಗೊಳಿಸಿದನು. ಆಗ ಎರಡನೆ ಮಹಾಯುದ್ಧ ನಡೆಯುತ್ತಿದ್ದುದರಿಂದ ಹೊಸ ಪತ್ರಿಕೆ ಹೊರಡಿಸುವುದಕ್ಕೆ ಪ್ರತಿಬಂಧವಿತ್ತು. ಅದೇ ಪತ್ರಿಕೆ ಮುಂದೆ
ಹಿಂದೂರಾಷ್ಟ್ರ’ ಎಂಬ ಹೆಸರನ್ನು ತಳೆಯುತ್ತದೆ. ಹಿಂದೂ ಸಂಘಟನೆಯ ಕುರಿತು ಹಲವು ಲೇಖನಗಳನ್ನು ನಥೂರಾಮ ಮತ್ತು ನಾನಾ ಆಪಟೆ ಅದರಲ್ಲಿ ಬರೆದಿದ್ದರು. 1948ರ ಜನವರಿ 31ರಂದು ಅದರ ಕೊನೆಯ ಅಂಕ ಪ್ರಕಟವಾಗಿ ನಿಂತು ಹೋಯಿತು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.