ಸಾಹಿತ್ಯದ ಪ್ರೇರಣೆಗಳಲ್ಲಿ ಅಮ್ಮ ಕೂಡ ಒಂದು. ಬಹುಶಃ ತನ್ನ ತಾಯಿಯನ್ನು ನೆನೆಯದ ಬರೆಹಗಾರ ಇಲ್ಲವೇ ಇಲ್ಲವೇನೋ. ಪ್ರತಿಯೊಬ್ಬರಿಗೂ ತಮ್ಮ ಅಮ್ಮನ ಕುರಿತು ಒಂದು ಬೆಚ್ಚಗಿನ ಕತೆ ಇರುತ್ತದೆ. ಒಂದು ಸುಂದರ ಕವನ ಇರುತ್ತದೆ. ಯಾರಿಗೂ ಹೇಳಿಕೊಳ್ಳಲಾಗದಂಥ, ಮಾತಿಗೆ ನಿಲುಕದ ಒಂದು ಆರ್ದ್ರ ಭಾವವಿರುತ್ತದೆ. ಅಮ್ಮನ ಋಣವನ್ನು ತೀರಿಸಲಾಗದ್ದು ಎಂಬ ದೈನ್ಯವಿರುತ್ತದೆ. ಈ ಕಾರಣಕ್ಕಾಗಿಯೇ ತಾಯಿಗೆ ದೇವರ ಸ್ಥಾನವನ್ನು ನಮ್ಮ ಸಂಸ್ಕೃತಿಯಲ್ಲಿ ನೀಡಿರುವುದು. ಅಮ್ಮ ಪದಕ್ಕೆ ಬೇರೆ ಅರ್ಥವಿಲ್ಲ. ಅಮ್ಮನೆಂದರೆ ಅಮ್ಮ ಎಂದೇ ಅರ್ಥ. ಇಂಥ ಅಮ್ಮನನ್ನು ಅಜರಾಮರಗೊಳಿಸಿದವನು ಮ್ಯಾಕ್ಸಿ ಗಾರ್ಕಿ. ತನ್ನ ‘ತಾಯಿ’ ಕೃತಿಯ ಮೂಲಕ ಜಗತ್ತಿನ ತಾಯಂದಿರೆಲ್ಲರ ಒಂದು ಮಾದರಿಯನ್ನು ಮುಂದಿಟ್ಟ. ಅವಳೊಬ್ಬಳು ಅನನ್ಯ ತಾಯಿ. ಚಂದ್ರಕಾಂತ ವಡ್ಡು ಅವರು ತಮ್ಮ ತಾಯಿ ಸರ್ವಮಂಗಳಮ್ಮ ಇತ್ತೀಚೆ ನಿಧನರಾದ ಬಳಿಕ ಅವರ ನೆನಪನ್ನು ಶಾಶ್ವತವಾಗಿ ಮಾಡಲು ತಾಯಿಯ ನೆನಪುಗಳ ಹೊತ್ತುಗೆಯೊಂದನ್ನು ತರಲು ನಿರ್ಧರಿಸಿದರು. ಅದನ್ನು ‘ಅಮ್ಮನ ನೆನಪು’ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ೩೮ ಮಹನೀಯರು ತಮ್ಮ ತಾಯಿಯ ನೆನಪುಗಳನ್ನು ಹಲವು ನೆಲೆಯಲ್ಲಿ ಬಯಲಿಗಿಟ್ಟಿದ್ದಾರೆ. ಇಲ್ಲಿಯ ಎಲ್ಲ ಬರೆಹಗಳು ಸುತ್ತಿಕೊಳ್ಳುವುದು ನಿಮ್ಮ ಕರುಳಿಗೇ. ರಾಜಕಾರಣಿ ಬಸವರಾಜ ಬೊಮ್ಮಾಯಿಯವರು ತಮ್ಮ ತಾಯಿಯ ನೆನಪಿನಲ್ಲಿ ಇಂಥದ್ದೊಂದು ಅಕ್ಷರ ನಮನ ಸಲ್ಲಿಸಿದ್ದರು. ವಡ್ಡು ಅವರದು ಇದು ಎರಡನೆಯ ಪ್ರಯತ್ನವೆಂದು ತೋರುತ್ತದೆ. ಇದರ ಎರಡನೆಯ ಭಾಗವೂ ಬರಲಿದೆ ಎಂದು ಅವರು ಇದರಲ್ಲಿ ಹೇಳಿಕೊಂಡಿದ್ದಾರೆ. ಎಲ್ಲರ ತಾಯಿಯಲ್ಲಿಯೂ ಒಂದು ವಿಶೇಷ ಇರುತ್ತದೆ. ಹಾಗೆಯೇ ನಾ.ಡಿಸೋಜ ಅವರ ತಾಯಿಯಲ್ಲಿಯೂ ವಿಶೇಷವಿದೆ. ಮರಿ ಕೋಳಿ ತನ್ನ ಮರಿಗಳನ್ನು ಸಾಕಿದ ಹಾಗೆ ಅಮ್ಮ ನಮ್ಮನ್ನು ಸಾಕಿದಳು ಎಂದು ಅವರು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ತಂದೆಯ ಸಾವಿನ ನಂತರ ನಿವೃತ್ತಿ ವೇತನವೆಂದೋ ಏನೋ ಬಂದ ೯೫ ರುಪಾಯಿಗಳಲ್ಲಿ ೯೦ ರುಪಾಯಿಗಳನ್ನು ನೀಡಿ ಪುರಸಭೆಯು ಹಂಚಿದ ಒಂದು ನಿವೇಶನವನ್ನು ಅಮ್ಮ ಕೊಂಡಿದ್ದಳು. ಅದರಲ್ಲಿ ಈಗ ನಾನು ಮನೆ ಕಟ್ಟಿಕೊಂಡು ಸುಖವಾಗಿದ್ದೇನೆ ಎಂದು ಅವರು ನೆನಪಿಸಿಕೊಂಡಿರುವರು. ತಮ್ಮ ಅಮ್ಮ ಹೇಗೆ ಅರ್ಥಶಾಸ್ತ್ರಜ್ಞೆ ಎಂಬುದನ್ನು ಡಿಸೋಜ ಸೊಗಸಾಗಿ ಹೇಳಿದ್ದಾರೆ. ಅಮ್ಮನ ಕೈಗೆ ಬರುತ್ತಿದ್ದ ಹಣವೇ ಕಡಿಮೆ. ಅಪ್ಪನ ಪೆನಷನ್ ಹಣದ ಕೆಲ ಹತ್ತುಗಳು. ಅದರಲ್ಲಿಯೇ ಸಂಸಾರ ಸಾಗಿಸುತ್ತಿದ್ದಳು. ರಾತ್ರಿಯ ಊಟಕ್ಕೆ ಅಕ್ಕಿ ಹಾಕುವ ಮುನ್ನ ಒಂದು ಬಾರಿ ಅನ್ನದ ಪಾತ್ರೆ ನೋಡಿಯೇ ಅಕ್ಕಿ ಹಾಕುವಾಕೆ. ನಮಗೆಲ್ಲ ಬಿಸಿಬಿಸಿ ಅನ್ನ. ಅವಳಿಗೆ ಉಳಿದ ಹಳಸಲು. ಹಲಸು, ಗೆಣಸು, ಸೌತೆಕಾಯಿಯ ಕಡಬು ಎಂದೆಲ್ಲ ರುಚಿಕರವಾದ ಖಾದ್ಯಗಳು, ಬಯಲಲ್ಲಿ ಬೆಳೆವ ವಿವಿಧ ಸೊಪ್ಪುಗಳು, ಕೆಸುವಿನ ಎಲೆ, ಮರಕೋಸು, ಹುರಿದ ಗೇರುಬೀಜ ಎಂದೆಲ್ಲ ನಮಗೆ ಬಾಯಿ ಆಡಿಸಲು. ಇದು ಅಮ್ಮನ ನಳಪಾಕ. ಹಾಗೆಯೇ ಅಕ್ಕಿಯನ್ನು ಉಳಿಸಲು ಅಮ್ಮ ಕಂಡುಕೊಂಡ ಉಪಾಯ ಅನ್ನುವುದು ಈಗ ನೆನಪಿಗೆ ಬರುತ್ತದೆ. ಹೀಗೆ ನಾ.ಡಿಸೋಜ ತಾಯಿಯನ್ನು ನೆನೆಯುತ್ತ ತಮ್ಮ ಬಾಲ್ಯದ ಬಡತನವನ್ನು ಹೇಳುತ್ತಾರೆ. ತಾವು ಕತೆಗಾರ ಆಗುವುದರ ಹಿಂದೆ ಅಮ್ಮನ ಪ್ರೇರಣೆ ಇದೆ ಎಂಬುದನ್ನು ಹೇಳುತ್ತಾರೆ. ಕುವೆಂಪು ಅವರ ಮಗಳು ತಾರಿಣಿ ಚಿದಾನಂದ ಅವರು, ತಾಯಿ ನಮ್ಮನ್ನಗಲಿ ಮೂವತ್ತೈದು ವರ್ಷಗಳು ಕಳೆದಿವೆ. ಆದರೆ ಈಗಲೂ ಅಪ್ಪ ಅಮ್ಮನ ‘ಉದಯ ರವಿ’ ಮನೆಯಲ್ಲಿಯೇ ವಾಸಿಸುತ್ತಿರುವ ನನಗೆ, ಅಮ್ಮ ಇಲ್ಲೇ ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದೇ ಅನ್ನಿಸುತ್ತದೆ. ಅವರ ಕಿಣಿಕಿಣಿ ಬಳೆಗಳ ಶಬ್ದ, ಅವರ ಓಡಾಟದ ಕಾಲ ಸಪ್ಪಳ ಕೇಳುತ್ತಲೇ ಇರುತ್ತದೆ ಎನ್ನುವರು. ನಾ.ಮೊಗಸಾಲೆಯವರು ಹೇಳುತ್ತಾರೆ, ನಾನು ನನ್ನ ತಾಯಿಯನ್ನು ಈಗ ನೆನೆಯುವುದೇ ಆದರೆ, ಈಗ ನಾನು ಏನಾಗಿದ್ದೇನೋ ಅದರ ಎಲ್ಲಾ ಜೀವಸೆಲೆ ಅವಳ ರಕ್ತದಿಂದ ನಾನು ಪಡೆದದ್ದು ಎನ್ನುವುದಕ್ಕಾಗಿಯೇ! ಅಂದರೆ ಜೀವದಯೆ, ಬೋಳೆಸ್ವಭಾವ, ಪರೋಪಕಾರ ಪ್ರವೃತ್ತಿ, ಅತಿ ಬಾವುಕತೆ, ಮನುಷ್ಯ ಮನುಷ್ಯರೊಳಗಿನ ಬಾಂಧವ್ಯವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಉಳಿಸಿಕೊಳ್ಳಬೇಕು ಎನ್ನುವ ‘ಜೀವಭಾವ’ ಈಗ ನನ್ನಲ್ಲಿ ಇರುವುದೇ ಆದರೆ ಅದಕ್ಕೆ ಕಾರಣ, ಅವಳು ನನ್ನ ಮೇಲೆ ಬೀರಿದ ಪ್ರಭಾವ ಎಂದು ಹೇಳಿದ್ದಾರೆ. ವಾಮನ ಬೇಂದ್ರೆಯವರು ತಮ್ಮ ತಾಯಿ ಮತ್ತು ಕವಿ ಬೇಂದ್ರೆಯವರ ದಾಂಪತ್ಯದ ಸೊಗಸನ್ನು ಕೆಲವು ಉದಾಹರಣೆಗಳ ಮೂಲಕ ನೀಡಿದ್ದಾರೆ. ಪ್ರಸಿದ್ಧ ಕವಿಗಳ ಜನರಿಗಿರುತ್ತದೆ. ಅವರ ಪತ್ನಿಯರು ಪತಿಯ ಪ್ರಸಿದ್ಧಿಯ ಮರೆಯಲ್ಲಿ ಸರಿದು ಹೋಗಿಬಿಡುತ್ತಾರೆ. ಬೇಂದ್ರೆಯವರು. ಕುವೆಂಂಪು ಅವರು, ನರಸಿಂಹಸ್ವಾಮಿಯವರು ತಮ್ಮ ತಮ್ಮ ಪತ್ನಿಯರನ್ನು ಕವಿತೆಗಳಲ್ಲಿ ಅಜರಾಮರಗೊಳಿಸಿದ್ದಾರೆ. ಈ ಕೃತಿಗೊಂದು ಮುನ್ನುಡಿ ರೂಪದ ಶುಭ ಕೋರಿರುವ ಧರಣಿದೇವಿ ಮಾಲಗತ್ತಿಯವರು, ಈ ಸಂಕಲನವನ್ನು ಗಟ್ಟಿಗೊಳಿಸಿರುವುದು ಅದರ ಅನುಭವದ ವೈವಿಧ್ಯ ಮತ್ತು ಸಮಾಜದ ಹಲವು ವರ್ಗಗಳ ಪ್ರಾತಿನಿಧಿಕ ಅಮ್ಮನ ಚಿತ್ರಣ ಎಂದಿದ್ದಾರೆ. ಈ ಕೃತಿಯನ್ನು ಹೊರತರುವ ವಿಚಾರ ತರ್ಕವಿಲ್ಲದ ತಕ್ಷಣದ ಹೊಳಹು, ಭಾವನಾತ್ಮಕ ನೆಲೆಯ ಸೆಲೆ ಎಂದು ವಡ್ಡು ಹೇಳಿಕೊಂಡಿದ್ದರೂ ತುಂಬ ಅರ್ಥವತ್ತಾದ ಪ್ರಯತ್ನ ಎನ್ನಬೇಕು. ಈ ತಾಯಂದಿರಲ್ಲಿ ನಿಮ್ಮ ತಾಯಿಯನ್ನು ನೀವು ಕಂಡರೆ ಆಶ್ಚರ್ಯವಿಲ್ಲ. ಏಕೆಂದರೆ ಜಗದ ತಾಯಂದಿರೆಲ್ಲರೂ ಒಂದೇ. ಈ ಸತ್ಯವನ್ನು ಹೇಳುವಲ್ಲಿ ಈ ಕೃತಿ ಯಶಸ್ವಿಯಾಗಿದೆ. ಇದರ ೨ನೆ ಭಾಗ ಬೇಗನೆ ಬರಲಿ. ಪ್ರ: ಅಂಕುರ ಪ್ರಕಾಶನ, ಮೈಸೂರು, ಪುಟಗಳು ೨೦೦, ಬೆಲೆ ₹ ೧೫೦
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.