ಗೋವು ಇಲ್ಲದೆ ಶ್ರೀಕೃಷ್ಣನನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಅದಕ್ಕೇ ಕೃಷ್ಣನನ್ನು ಗೋಪಾಲಕೃಷ್ಣ ಎಂದೂ ಕರೆಯುವುದು. ಬೃಂದಾವನದಲ್ಲಿ ಗೋವುಗಳನ್ನು ಕಾಯುತ್ತಲೇ ಬೆಳೆದವನು ಕೃಷ್ಣ. ಬೆಣ್ಣೆಕಳ್ಳನೆಂದು ಭಕ್ತರು ಪ್ರೀತಿಯಿಂದ ಆತನಿಗೆ ಬಿರುದನ್ನೂ ನೀಡಿದ್ದಾರೆ. ಆತನ ಬಾಲಲೀಲೆಗಳಲ್ಲಿ ಬೆಣ್ಣೆಯ ಕಳ್ಳತನ, ಮೊಸರು ಗಡಿಗೆಗಳನ್ನು ಒಡೆದು ಮೊಸರು ಕುಡಿಯುವುದು ಎಲ್ಲವೂ ಸೇರಿದೆ. ಕೃಷ್ಣ ಭಕ್ತಿಯ ಪ್ರಸಾರ ಮಾಡುವ ಇಸ್ಕಾನ್ ಸಂಸ್ಥೆಗೆ ಕೃಷ್ಣ ಬೇರೆಯಲ್ಲ ಗೋವು ಬೇರೆಯಲ್ಲ. ಗೋ ಸೇವೆಯಲ್ಲಿಯೇ ಕೃಷ್ಣನನ್ನು ಕಾಣಬಹುದು ಎಂದು ಅವರು ನಂಬಿದ್ದಾರೆ. ಇದಕ್ಕೆ ಉದಾಹರಣೆ ರಾಜಸ್ಥಾನದ ಹಿಂಗೋನಿಯಾದ ಗೋಶಾಲೆಯ ಉಸ್ತುವಾರಿಯನ್ನು ಅವರು ವಹಿಸಿಕೊಂಡಿರುವುದು. ಇಸ್ಕಾನ್ ಪ್ರವೇಶಕ್ಕೆ ಮೊದಲು ನರಕಕ್ಕೆ ಸಮನಾಗಿದ್ದ ಹಿಂಗೋನಿಯಾ ಗೋಶಾಲೆ ಇದೀಗ ನಂದಗೋಕುಲದಂತಿದೆ. ಜೈಪುರದಲ್ಲಿರುವ ಹಿಂಗೋನಿಯಾ ಗೋಶಾಲೆ ಒಂದು ವರ್ಷದ ಹಿಂದೆ ದೊಡ್ಡ ಸಂಖ್ಯೆಯಲ್ಲಿ ಗೋವುಗಳು ಸತ್ತಿದ್ದರಿಂದ ಸುದ್ದಿಯಾಗಿತ್ತು. ೨೦೧೬ರ ಮೊದಲ ಏಳು ತಿಂಗಳಲ್ಲಿ ಗೋಶಾಲೆಯಲ್ಲಿ ೭೦೦೦ ಹಸುಗಳು ಸಾವಿಗೀಡಾಗಿದ್ದವು. ಬಿಜೆಪಿ ಸರ್ಕಾರವಿರುವ ಮತ್ತು ಗೋಹತ್ಯೆ ನಿಷೇಧವಿರುವ ಆ ರಾಜ್ಯದಲ್ಲಿ ಗೋವುಗಳು ಈ ರೀತಿಯಲ್ಲಿ ಸಾವಿಗೀಡಾಗುತ್ತಿದ್ದುದು ಸರ್ಕಾರಕ್ಕೆ ಮುಜುಗರದ ವಿಷಯವಾಗಿತ್ತು. ಇನ್ನೂ ವಿಶೇಷವೆಂದರೆ, ಗೋವುಗಳ ಕಲ್ಯಾಣಕ್ಕಾಗಿಯೇ ಒಬ್ಬ ಸಚಿವರಿರುವ ಏಕೈಕ ರಾಜ್ಯ ರಾಜಸ್ಥಾನ. ಅಲ್ಲಿ ಸ್ಟಾಂಪ್ ಡ್ಯೂಟಿ ಮೇಲೆ ಸರ್‌ಚಾರ್ಜ್ ವಿಧಿಸಿ ಗೋವುಗಳ ಸಂರಕ್ಷಣೆ ಮತ್ತು ಗೋಸಂತತಿಯನ್ನು ಬೆಳೆಸುವುದಕ್ಕಾಗಿ ೨೦೧೬-೧೭ನೆ ಸಾಲಿನಲ್ಲಿ ೧೫೧.೫೦ ಕೋಟಿ ರು. ಸಂಗ್ರಹಿಸಲಾಗಿದೆ. ಹೀಗಿದ್ದೂ, ಜೈಪುರ ಮುನ್ಸಿಪಲ್ ಕಾರ್ಪೋರೇಶನ್ (ಜೆಎಂಸಿ) ಉಸ್ತುವಾರಿಯಲ್ಲಿದ್ದ ಗೋಶಾಲೆ ಸರ್ಕಾರದ ಉದ್ದೇಶವನ್ನು ಪೂರೈಸುವಲ್ಲಿ ವಿಫಲವಾಗಿತ್ತು. ಗಂಗೆ ಬಾರೆ, ಗೌರಿ ಬಾರೆ, ತುಂಗಭದ್ರೆ ತಾಯಿ ಬಾರೆ ಎಂದು ಪ್ರೀತಿಯಿಂದ ಕರೆಯುವ ಗೊಲ್ಲನ ನಿರೀಕ್ಷೆಯಲ್ಲಿದ್ದವು ಹಿಂಗೋನಿಯಾ ಗೋಶಾಲೆಯ ಹಸುಗಳು. ವ್ಯವಸ್ಥೆಯೆಂಬ ದುಷ್ಟ ವ್ಯಾಘ್ರನ ವಿರುದ್ಧ ಸೆಣೆಸುವ ಕಾಳಂಗನೆಂಬ ಗೊಲ್ಲ ಬರಲಿ ಎಂದು ಅವು ಕಾಯುತ್ತಿದ್ದವು. ಆಗ ಗೋವುಗಳ ರಕ್ಷಣೆಗೆ ಮುಂದೆ ಬಂದದ್ದು ಇಸ್ಕಾನ್‌ನ ಅಕ್ಷಯಪಾತ್ರ ಫೌಂಡೇಶನ್. ಆರಂಭದಲ್ಲಿ ಗೋಶಾಲೆಯನ್ನು ಇಸ್ಕಾನ್‌ಗೆ ಆರು ತಿಂಗಳ ಮಟ್ಟಿಗೆ ವಹಿಸಿ ಕೊಡಲಾಯಿತು. ಅದರ ಸಾಧನೆ ತೃಪ್ತಿಕರವಾಗಿದ್ದರಿಂದ ಮತ್ತೆ ಆರು ತಿಂಗಳಿಗೆ ವಿಸ್ತರಿಸಲಾಯಿತು. ಅಕ್ಟೋಬರ್ ೩೦ರಂದು ಈ ಗೋಶಾಲೆಯನ್ನು ಇಸ್ಕಾನ್‌ಗೆ ೧೯ ವರ್ಷಗಳ ಗುತ್ತಿಗೆಗೆ ವಹಿಸಿಕೊಡಲಾಗಿದೆ. ಈ ಸಂಬಂಧ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾರಾಜೇಯವರ ಸಮ್ಮುಖದಲ್ಲಿ ಸಹಿ ಹಾಕಲಾಗಿದೆ. ಇಸ್ಕಾನ್‌ನ ಅಕ್ಷಯಪಾತ್ರ ಫೌಂಡೇಶನ್ ಮತ್ತು ಜೈಪುರ ಮುನ್ಸಿಪಲ್ ಕಾರ್ಪೋರೇಷನ್ ಜಂಟಿಯಾಗಿ ‘ಶ್ರೀಕೃಷ್ಣ ಬಲರಾಮ ಸೇವಾ ಟ್ರಸ್ಟ್’ ಸ್ಥಾಪಿಸಿಕೊಂಡಿದ್ದು, ಈ ಟ್ರಸ್ಟ್ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸುಮಾರು ಐದು ನೂರು ಎಕರೆಯಷ್ಟು ವಿಶಾಲವಾದ ಗೋಶಾಲೆಯಲ್ಲಿ ನೂರಾರು ಶೆಡ್‌ಗಳಲ್ಲಿ ಗೋವುಗಳನ್ನು ಇರಿಸಲಾಗಿದೆ. ಗೋಶಾಲೆಯನ್ನು ವಹಿಸಿಕೊಂಡ ಅಕ್ಷಯಪಾತ್ರ ಫೌಂಡೇಶನ್‌ಗೆ ಆರಂಭದಲ್ಲಿ ಸತ್ತ ಗೋವುಗಳನ್ನು ಹೂಳುವುದೇ ದೊಡ್ಡ ಕೆಲಸವಾಗಿತ್ತು. ಆಕಳ ಶೆಡ್‌ಗಳಿಗೆ ಹತ್ತಿರದಲ್ಲಿಯೇ ನಾಲ್ಕು ಹೆಕ್ಟೇರ್ ವಿಶಾಲ ಪ್ರದೇಶದಲ್ಲಿ ಗೋವುಗಳ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹೊಸ ಒಪ್ಪಂದದ ಪ್ರಕಾರ ಸಾವಿಗೀಡಾದ ಗೋವುಗಳ ಕಳೇಬರವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕಾರ ಮಾಡುವುದಕ್ಕಾಗಿ ಒಂದು ಘಟಕವನ್ನು ನಿರ್ಮಿಸು, ನಿರ್ವಹಿಸು ಮತ್ತು ವರ್ಗಾಯಿಸು ಆಧಾರದ ಮೇಲೆ ಒಂದು ವರ್ಷದಲ್ಲಿ ನಿರ್ಮಿಸಬೇಕು. ಇದಕ್ಕೆ ಸುಮಾರು ೫ ಕೋಟಿ ರು. ತಗಲುತ್ತದೆ. ಜೆಎಂಸಿಯು ಟ್ರಸ್ಟ್‌ಗೆ ಪ್ರತಿ ಗೋವಿಗೆ ದೊಡ್ಡವಕ್ಕೆ ದಿನವೊಂದಕ್ಕೆ ೫೦ ರು. ಮತ್ತು ಚಿಕ್ಕವಕ್ಕೆ ದಿನವೊಂದಕ್ಕೆ ೩೨.೫೦ ರು. ಮೇವಿಗಾಗಿ ನೀಡುತ್ತದೆ. ೪೦ ಗೋವುಗಳಿಗೆ ಒಬ್ಬರಂತೆ ಇಲ್ಲಿ ಕೆಲಸಗಾರರಿದ್ದಾರೆ. ಇಸ್ಕಾನ್ ಹಿಂಗೋನಿಯಾ ಗೋಶಾಲೆಯ ಉಸ್ತುವಾರಿಯನ್ನು ವಹಿಸಿಕೊಳ್ಳುವಾಗ ಸುಮಾರು ೮ಸಾವಿರ ಗೋವುಗಳು ಅಲ್ಲಿದ್ದವು. ಇದೀಗ ಸುಮಾರು ೧೬ ಸಾವಿರ ಗೋವುಗಳಿವೆ. ಪ್ರತಿ ಗೋವಿಗೂ ಗುರುತಿನ ನಂಬರ್ ಹಾಕಲಾಗುತ್ತಿದೆ. ಅವುಗಳ ಕಿವಿಗೆ ಒಂದು ಬಿಲ್ಲೆಯನ್ನು ಪೋಣಿಸಿರುತ್ತಾರೆ. ಆರಂಭದಲ್ಲಿ ೫೦೦ ಲೀಟರ್ ಹಾಲು ಸಿಗುತ್ತಿದ್ದುದು ಈಗ ೧೮೦೦ ಲೀಟರ್‌ಗೆ ಏರಿದೆ. ಗೋಶಾಲೆಯಲ್ಲಿ ಈಗ ಗೋವುಗಳಿಗೆ ರಾಜಮರ್ಯಾದೆ. ಹಸಿರು ಮೇವು ಮತ್ತು ಪಶು ಆಹಾರ ನಿಯಮಿತವಾಗಿ ಅವುಗಳಿಗೆ ಸಿಗುತ್ತಿವೆ. ಹಸು ಅನಾರೋಗ್ಯಕ್ಕೆ ಈಡಾದರೆ ಅವುಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ಸಿಗುತ್ತದೆ. ತೀವ್ರ ಅನಾರೋಗ್ಯವಿದ್ದರೆ ಅವುಗಳಿಗಾಗಿಯೇ ತುರ್ತು ಚಿಕಿತ್ಸಾ ಘಟಕ (ಐಸಿಯು) ಇಲ್ಲಿದೆ. ಶಸ್ತ್ರಚಿಕಿತ್ಸೆಯಲ್ಲಿ ಪರಿಣತರಾದ ವೈದ್ಯರು ಇಲ್ಲಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸುವ ಆಪರೇಷನ್ ಥಿಯೇಟರ್ ಇತ್ತೀಚೆಗೆ ಮುಖ್ಯಮಂತ್ರಿ ಉದ್ಘಾಟಿಸಿದ್ದಾರೆ. —— ಗೋವು ರಾಷ್ಟ್ರೀಯ ಪ್ರಾಣಿಯಾಗಲಿ ಎಂದ ಹೈ ಕೋರ್ಟ್ ——– ಹಿಂಗೋನಿಯಾ ಗೋಶಾಲೆಯಲ್ಲಿ ಗೋವುಗಳ ಸಾವು ಹೆಚ್ಚಾದ ವರದಿಗಳು ಪತ್ರಿಕೆಗಳಲ್ಲಿ ಬಂದಾಗ ಜಾಗೋ ಜನತಾ ಸೊಸೈಟಿ ಎಂಬ ಸಂಸ್ಥೆ ರಾಜಸ್ಥಾನ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು, ಗೋಶಾಲೆಯಲ್ಲಿರುವ ಗೋವುಗಳಿಗೆ ಹಸಿರು ಮೇವು ಮತ್ತು ಆಹಾರವನ್ನು ಕೊಡಬೇಕು ಎಂದು ಕೋರಿದ್ದರು. ಕಳೆದ ಮೇ ತಿಂಗಳಿನಲ್ಲಿ ರಾಜಸ್ಥಾನದ ಹೈಕೋರ್ಟ್ ಆಕಳನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಸೂಕ್ತ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿತ್ತು. ಗೋವುಗಳು ದುರ್ಬಲ ಪ್ರಾಣಿಗಳು. ಗೋವಿನ ಬಗ್ಗೆ ಹಿಂದೂಗಳಲ್ಲಿ ಭಕ್ತಿ ಇದೆ. ಹಿಂದೂ ರಾಷ್ಟ್ರ ನೇಪಾಳದಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಸಂವಿಧಾನದಲ್ಲಿಯೇ ಉಲ್ಲೇಖಿಸಿದೆ. ಗೋಸಂತತಿ ಕೃಷಿಗೆ ಉಪಕಾರಿ, ಹೈನುಗಾರಿಕೆಗೂ ಉಪಯುಕ್ತ. ಇದರ ಕೊಡುಗೆ ಭಾರತದ ಆರ್ಥಿಕತೆಗೆ ಅಧಿಕವಾಗಿದೆ. ಇವೆಲ್ಲದರ ಜೊತೆಗೆ ಸಂವಿಧಾನದ ಆರ್ಟಿಕಲ್ ೪೮ ಮತ್ತು ೫೧ಎ(ಜಿ)ಗೆ ಅನುಗುಣವಾಗಿ ಗೋವಿಗೆ ಕಾನೂನುಬದ್ಧ ಸ್ಥಾನಮಾನ ನೀಡಬೇಕು. ಈ ಸರ್ಕಾರ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು. ಈ ಸಂಬಂಧದಲ್ಲಿ ರಾಜ್ಯದ ಮುಖ್ಯಕಾರ್ಯದರ್ಶಿ ಮತ್ತು ಅಡ್ವೋಕೇಟ್ ಜನರಲ್ ಅವರು ಮುಂದಿನ ಕ್ರಮಗಳನ್ನು ಜರುಗಿಸಬೇಕು, ಕೇಂದ್ರ ಸರ್ಕಾರದ ಜೊತೆ ವ್ಯವಹರಿಸಬೇಕು ಎಂದು ಹೇಳಿತ್ತು. ಗೋಶಾಲೆಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅದಕ್ಕೆ ತಕ್ಷಣ ಸುತ್ತಲೂ ಗೋಡೆ ನಿರ್ಮಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಅದರ ಪ್ರಕಾರ ಈಗ ಗೋಡೆ ನಿರ್ಮಾಣವಾಗಿದೆ. ಅಲ್ಲಿ ಏನೇನು ಸೌಕರ್ಯಗಳು ಬೇಕು ಎನ್ನುವುದನ್ನು ಹರೇಕೃಷ್ಣ ಪಂಥದವರು ಹೇಳಿದ್ದಾರೋ ಅದನ್ನೆಲ್ಲ ಒದಗಿಸಲೂ ಕೋರ್ಟ್ ಸೂಚನೆ ನೀಡಿತ್ತು. ಹರೇಕೃಷ್ಣ ಪಂಥವು ಗೋಶಾಲೆ ವಹಿಸಿಕೊಂಡ ಮೇಲೆ ಅಲ್ಲಿ ಎಲ್ಲ ಸುಧಾರಣೆಯಾಗಿರುವುದರಿಂದ ಅದಕ್ಕೆ ಎಲ್ಲ ನೆರವನ್ನು ಒದಗಿಸಲೂ ಅದು ಹೇಳಿದೆ. ಅಲ್ಲೊಂದು ವೇದಪಾಠಶಾಲೆಯೂ ತಲೆಎತ್ತಲಿದೆ. ಗೋಶಾಲೆಯ ಆವರಣದಲ್ಲಿ ೫೦೦೦ ಗಿಡಗಳನ್ನು ಪ್ರತಿವರ್ಷ ನೆಡುವಂತೆಯೂ ಕೋರ್ಟ್ ಹೇಳಿದೆ. —— ಬಯೋಮೆಟ್ರಿಕ್ ಹಾಜರಿ ———- ಇಸ್ಕಾನ್ ಉಸ್ತುವಾರಿಗೂ ಮೊದಲು ಕೆಲಸಗಾರರು ಇಲ್ಲಿ ಸಹಿಮಾಡಿ ನಂತರ ಎಲ್ಲೆಲ್ಲಿಗೋ ಹೋಗಿಬಿಡುತ್ತಿದ್ದರು. ಇದರಿಂದ ಗೋವುಗಳ ಆರೈಕೆ ಸರಿಯಾಗಿ ಆಗುತ್ತಿರಲಿಲ್ಲ. ಈಗ ಅವರಿಗೆಲ್ಲ ಬಯೋಮೆಟ್ರಿಕ್ ಹಾಜರಿಯನ್ನು ಕಡ್ಡಾಯ ಮಾಡಲಾಗಿದೆ. ಅವರಿಗೆ ಬ್ಯಾಂಕ್ ಮೂಲಕವೇ ವೇತನ ಸಂದಾಯವಾಗುತ್ತಿದೆ. ಅವರ ಮಕ್ಕಳಿಗೆ ಅಲ್ಲಿ ಶಾಲೆಯನ್ನು ತೆರೆಯಲಾಗಿದೆ. ಕೆಲಸಗಾರರಿಗೆ ಪಿಎಫ್, ಇಎಸ್‌ಐ ಸೌಲಭ್ಯವನ್ನು ನೀಡಲಾಗುತ್ತಿದೆ. ಇಸ್ಕಾನ್ ಉಸ್ತುವಾರಿ ವಹಿಸಿಕೊಂಡಾಗ ಕೆಲಸಗಾರರ ಗೊಣಗಾಟ ಶುರುವಾಗಿತ್ತು. ಅವರ ಬೇಕಾಬಿಟ್ಟಿ ವರ್ತನೆಗೆ ಕಡಿವಾಣ ಬಿದ್ದುದರಿಂದ ಪ್ರತಿಭಟನೆ ತೋರಿಸಿದ್ದರು. ಕ್ರಮೇಣ ಅವೆಲ್ಲ ಮರೆಯಾಗಿವೆ. ಜೈಪುರದ ರಸ್ತೆಗಳಲ್ಲಿ ಅಡ್ಡಾಡುವ ಬಿಡಾಡಿ ಗೋವುಗಳನ್ನು ತಂದು ಈ ಗೋಶಾಲೆಗೆ ಸೇರಿಸುತ್ತಾರೆ. ಹಾಲು ಕರೆಯದ, ಮುದಿಯಾದ ಗೋವುಗಳು, ಉಳುಮೆಗೂ ಬಾರದ, ಗಾಡಿ ಎಳೆಯುವುದಕ್ಕೂ ಬಳಕೆಯಾಗದ ಎತ್ತುಗಳನ್ನು ಸಾಕಲಾಗದೆ ಅವುಗಳ ಪೋಷಕರು ರಸ್ತೆಗೆ ಬಿಟ್ಟುಬಿಡುತ್ತಾರೆ. ಅವನ್ನೆಲ್ಲ ಇಲ್ಲಿ ತಂದು ಹಾಕುತ್ತಾರೆ. ರೋಗದಿಂದ ಬಳಲುತ್ತಿದ್ದ ಗೋವುಗಳಿಗೆ ಇಲ್ಲಿ ಚಿಕಿತ್ಸೆಯನ್ನು ನೀಡಿದ ನಂತರ ಅವು ಗುಣಮುಖವಾದರೆ, ಅದರ ಮೂಲ ಮಾಲೀಕ ಸರಿಯಾದ ದಾಖಲೆಗಳೊಂದಿಗೆ ಬಂದು ಅದನ್ನು ಮರಳಿ ಕೇಳಿದರೆ ಆತನಿಗೆ ಮರಳಿ ನೀಡುವ ವ್ಯವಸ್ಥೆಯೂ ಇದೆ. ——— ಪ್ಲಾಸ್ಟಿಕ್ ದೊಡ್ಡ ಶತ್ರು —– ಪಾಲಿಥೀನ್ ಚೀಲಗಳು ಗೋವುಗಳಿಗೆ ದೊಡ್ಡ ಶತ್ರು. ಬೀದಿಗೆ ಬೀಳುವ ಹಸುಗಳು ಪರಿಸರದಲ್ಲಿ ಚೆಲ್ಲಾಡಿದ ಪ್ಲಾಸ್ಟಿಕ್‌ಚೀಲಗಳನ್ನು ನುಂಗಿಬಿಡುತ್ತವೆ. ಅವುಗಳ ಅನಾರೋಗ್ಯಕ್ಕೆ ಇದೇ ಮೂಲ ಕಾರಣ. ಅದಕ್ಕಾಗಿಯೇ ಗೋ ಸೇವೆ ಮತ್ತು ಪಾಲಿಥೀನ್ ಜೊತೆಜೊತೆಯಲ್ಲಿ ಸಾಗಲಾರವು ಎಂದು ವಸುಂಧರಾರಾಜೇ ಹೇಳಿದ್ದು. ರಾಜಸ್ಥಾನದಲ್ಲೀಗ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಷೇಧಿಸಲಾಗಿದೆ. ಜನರು ಪ್ಲಾಸ್ಟಿಕ್ ಚೀಲ ಬಳಸುವುದನ್ನು ನಿಲ್ಲಿಸಿದರೆ ಮತ್ತು ಇತರರಿಗೂ ಬಳಸದಂತೆ ಹೇಳಿದರೆ ಅದೇ ದೊಡ್ಡ ಗೋಸೇವೆ ಎಂದು ರಾಜೇ ಹೇಳಿದ್ದು ಅರ್ಥಪೂರ್ಣವಾಗಿದೆ. ಜೈಪುರ ನಗರದಲ್ಲಿ ಪ್ಲಾಸ್ಟಿಕ್ ಬಳಸಿ ಎಲ್ಲೆಂದರಲ್ಲಿ ಬಿಸಾಡುವುದರಿಂದ ಗೋವುಗಳು ಅವುಗಳನ್ನು ತಿಂದು ಹೇಗೆ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತವೆ ಎಂಬುದನ್ನು ಜನರಿಗೆ ತಿಳಿಸಲು ಪ್ರತಿ ವಾರ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ———- ಕನ್ನಡಿಗರ ಸಾರಥ್ಯ ——- ರಾಜಸ್ಥಾನದಲ್ಲಿಯ ಹರೇಕೃಷ್ಣ ಪಂಥವನ್ನು ಮುನ್ನಡೆಸುತ್ತಿರುವವರು ಕನ್ನಡಿಗರೇ ಆದ ರತ್ನಾಂಗದ ಗೋವಿಂದ ದಾಸ ಅವರು. ರಾಜಸ್ಥಾನದಲ್ಲಿಯ ಅಕ್ಷಯಪಾತ್ರ ಕಾರ್ಯಕ್ರಮ ಹಾಗೂ ಹಿಂಗೋನಿಯಾ ಗೋಶಾಲೆಯ ಉಸ್ತುವಾರಿ ಎಲ್ಲವೂ ಇವರ ನೇತೃತ್ವದಲ್ಲಿಯೇ ನಡೆದಿದೆ. ರತ್ನಾಂಗದ ಗೋವಿಂದ ದಾಸರು ಬೆಂಗಳೂರು ಇಸ್ಕಾನ್‌ದಲ್ಲಿದ್ದರು. ನಂತರ ಅವರು ಹುಬ್ಬಳ್ಳಿಯ ಇಸ್ಕಾನ್‌ದಲ್ಲಿ ಬಹಳ ವರ್ಷ ಇದ್ದರು. ಧಾರವಾಡ ಜಿಲ್ಲೆಯ ಶಾಲಾ ಮಕ್ಕಳಿಗೆ ಅಕ್ಷಯಪಾತ್ರದ ಊಟ ಲಭಿಸುವಂತೆ ಆಗಿರುವುದರ ಹಿಂದೆ ಇವರ ಪ್ರಯತ್ನ ಬಹುದೊಡ್ಡದಿದೆ. ಇಂದು ಇಡೀ ದೇಶದಲ್ಲಿಯೇ ಹುಬ್ಬಳ್ಳಿಯಲ್ಲಿರುವ ಅಕ್ಷಯಪಾತ್ರದ ಅಡುಗೆ ಮನೆ ಬಹಳ ದೊಡ್ಡದು.