*ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತು

ಹೋಗಯ್ಯ ಹೋಗ್‌, ನಿಂದೊಳ್ಳೆ ಹಾವೇರಿ ನ್ಯಾಯ ಆಯ್ತಲ್ಲ ಎಂದು ಮಾತಿನ ನಡುವೆ ಹೇಳಿಬಿಡುತ್ತೇವೆ. ಹಾವೇರಿ ನ್ಯಾಯ ಎಂದರೇನು ಎಂಬುದು ಸ್ವತಃ ಹಾವೇರಿಯವರಿಗೂ ಗೊತ್ತಿಲ್ಲ. ನಿಮ್ಮೂರಿಂದೇ ನ್ಯಾಯ ಇದು. ನಿಮಗೇ ಗೊತ್ತಿಲ್ಲಂದ್ರ ಹೆಂಗ್ರಿ ಎಂದು ಕೇಳಿದರೆ ಪೆಚ್ಚಾಗಿ ನಗೆ ಬೀರುತ್ತಾರೆ. ಹಾವೇರಿಗೂ ಹಾವೇರಿ ನ್ಯಾಯಕ್ಕೂ ಎಂಥ ನಂಟು ಎಂಬುದು ಇಂದಿಗೂ ಬಿಡಿಸಲಾಗದ ಒಗಟು.
ಅತ್ತ ಕಡೆಯೂ ಅಲ್ಲ, ಇತ್ತ ಕಡೆಯೂ ಇಲ್ಲ ಎಂಬಂತೆ ನ್ಯಾಯ ಹೇಳುವುದು ಹಾವೇರಿ ನ್ಯಾಯ. ಅಡ್ಡ ಗೋಡಯ ಮೇಲೆ ದೀಪ ಇಟ್ಟ ಹಾಗೆ ಮಾತನಾಡುವುದು ಹಾವೇರಿ ನ್ಯಾಯ. ಅತ್ತ ಹಾವೂ ಸಾಯಬಾರದು ಇತ್ತ ಕೋಲೂ ಮುರಿಯಬಾರದು ಎನ್ನುವಂಥ ತೀರ್ಪನ್ನು ಹೇಳುವುದು ಹಾವೇರಿ ನ್ಯಾಯ.
ಅಂದಹಾಗೆ ಈಗ ಹಾವಿಗೂ ನ್ಯಾಯಕ್ಕೂ ಸಂಬಂಧ ಕಲ್ಪಿಸಬಹುದಾಗಿದೆ. ಹಾವು ಮೈಮೇಲೆ ಏರಿ ಬಂದಾಗ ಏನು ಮಾಡುತ್ತೀರಿ? ಏನು ಮಾಡಬೇಕೆಂದು ನಿಮ್ಮ ಮೆದುಳು ಆಲೋಚಿಸುವ ಪೂರ್ವದಲ್ಲಿಯೇ ನಿಮ್ಮ ಕಾಲುಗಳು ಅದೇನೋ ತೀರ್ಮಾನ ಕೈಗೊಂಡಿರುತ್ತವೆ. ತಮ್ಮ ಕೈ ಮೀರಿದ ಸ್ಥಿತಿಯಲ್ಲಿ, ಯಾವುದೇ ತೀರ್ಮಾನ ಕೈಗೊಳ್ಳಲಾಗದ ಸ್ಥಿತಿಯಲ್ಲಿ ಕೈಗೊಳ್ಳಲಾದ ತೀರ್ಮಾನವೂ ಹಾವೇರಿ ನ್ಯಾಯವೇ.
ಹರಿ ಹೆಚ್ಚೋ ಹರ ಹೆಚ್ಚೋ ಎಂಬ ಪುರಾಣದ ವಿವಾದದಲ್ಲಿ ಇಬ್ಬರೂ ಸರಿ ಎಂಬಂಥ ಪರಿಹಾರವನ್ನು ಕಂಡುಕೊಂಡರಲ್ಲ, ಅದೂ ಹಾವೇರಿ ನ್ಯಾಯವೇ. ತಾಯಿಗೂ ಸಮಾಧಾನವಾಗಬೇಕು, ಹೆಂಡತಿಗೂ ಸಮಾಧಾನವಾಗಬೇಕು ಎಂಬ ಗಂಡನ ನಡೆಯೂ ಹಾವೇರಿ ನ್ಯಾಯವೇ.