ಸೃಜನಶೀಲ ಮನಸ್ಸು ಸದಾ ವಸ್ತುವಿನ ಹುಡುಕಾಟದಲ್ಲಿರುತ್ತದೆ. ಬರೆಹಗಾರನೊಬ್ಬ ತನ್ನ ತುಡಿತದೊಂದಿಗೆ ಸದಾ ಧ್ಯಾನದಲ್ಲಿರುತ್ತಾನೆ. ಸಖ ಸಖಿಗಾಗಿ ಕಾಯುವಂತೆ, ಕೊಟ್ಟಿಗೆಯಲ್ಲಿರುವ ಕರು ಮೇಯಲು ಹೋದ ತನ್ನ ತಾಯಿ ಯಾವಾಗ ಮರಳುವುದೋ ಎಂಬ ಕಾತರದಿಂದ ಕೂಡಿರುವಂತೆ. ಸಖಿ ಎದುರಾದಾಗ ಸಖ ಅವಳನ್ನು ಮತ್ತೆಂದೂ ತಪ್ಪಿಸಿಕೊಂಡು ಹೋಗದಂತೆ ಬಿಗಿದಪ್ಪಿಕೊಳ್ಳುತ್ತಾನೆ. ಮೇಯಲು ಹೋದ ಹಸು ಮರಳಿದಾಗ ಕರು ಕೆಚ್ಚಲಿಗೆ ಬಾಯಿಕ್ಕಿ ಒಂದೂ ಹನಿ ಉಳಿಯದಂತೆ ಹಾಲನ್ನು ಹೀರಿಬಿಡುತ್ತದೆ. ನಾನೂ ಹೀಗೇ ನನ್ನ ಕತೆಯ ಹುಡುಕಾಟದಲ್ಲಿ ಎಲ್ಲೆಲ್ಲೋ ಅಲೆದಿದ್ದೇನೆ. ಯಾವುದು ಬದುಕು, ಯಾವುದು ಕತೆ, ಬದುಕು ಕತೆಯೊಳಗೆ ಬಂದಾಗ ಎಷ್ಟು ಮಾತ್ರ ತೆರೆಯಬೇಕು ಎಂದು ಗೊತ್ತಾಗದೆ ಕಂಗಾಲಾಗಿದ್ದೇನೆ. ಕತೆಯನ್ನೇ ಬದುಕಿನಲ್ಲಿ ಕಂಡಾಗ ಅಚ್ಚರಿಪಟ್ಟಿದ್ದೇನೆ. ಕತೆಯಲ್ಲಿ ಬಂದಾತ ಸಂಜೆ ಕಡಲತಡಿಯಲ್ಲಿ ಅಲೆಯುವಾಗ ಎದುರಾದಾಗ ಹೇಗೆ ಪ್ರತಿಕ್ರಿಯಿಸಬೇಕು ಎಂದು ಗೊತ್ತಾಗದೆ ಕಕ್ಕಾಬಿಕ್ಕಿಯಾಗಿದ್ದೇನೆ. ಬದುಕು ತನ್ನ ಪಾಡಿಗೆ ತಾನು ಸಾಗುತ್ತಿರುತ್ತದೆ. ಅದೊಂದು ಹೊಳೆ ಎಂದಿಟ್ಟುಕೊಳ್ಳಿ. ತನ್ನ ದಾರಿಯಲ್ಲಿ ಅಡ್ಡಬಂದುದನ್ನು ಆವರಿಸಿ ಮುಳುಗಿಸಿ ಮುಂದೆ ಹೋಗುತ್ತದೆ. ಸಣ್ಣ ಅಡೆತಡೆ ಇದ್ದರೆ ತಳ್ಳಿಕೊಂಡು ಹೋಗುತ್ತದೆ. ಹೆಬ್ಬಂಡೆ ಇದ್ದರೆ ಬಳಸಿಕೊಂಡು ಹೋಗುತ್ತದೆ. ತನ್ನ ಪಾತ್ರದಲ್ಲಿ ಬಂದುದನ್ನೆಲ್ಲ ಅರಗಿಸಿಕೊಂಡು ಮೈದುಂಬಿಸಿಕೊಳ್ಳುತ್ತದೆ. ಅದರ ನಿರಂತರ ಹರಿಯುವಿಕೆಯಿಂದ ಗಿಡಮರಗಳು ಹಸಿರಿನಿಂದ ಕಂಗೊಳಿಸುತ್ತವೆ. ಇನ್ನಾರೋ ಅದಕ್ಕೆ ಕೋಡಿ ಬಗೆದು ಹೊಲಕ್ಕೆ ಹರಿಸಿ ಫಸಲು ಬೆಳೆದುಕೊಳ್ಳುತ್ತಾರೆ. ಮತ್ಯಾರೋ ಅದಕ್ಕೆ ಒಡ್ಡು ಕಟ್ಟಿ ಟರ್ಬೈನುಗಳ ಮೇಲೆ ಬೀಳಿಸಿ ವಿದ್ಯುತ್ ತಯಾರಿಸಿಕೊಳ್ಳುತ್ತಾರೆ. ಕೆಲವರು ಅದರ ಒಡಲೊಳಗಿನ ಮೀನುಗಳನ್ನು ಹಿಡಿದು ಮಾರಿ ಜೀವನ ಸಾಗಿಸುತ್ತಾರೆ. ಪ್ರಾಣಿಪಕ್ಷಿಗಳು ಅದರ ನೀರು ಕುಡಿದು ಬದುಕುತ್ತವೆ. ಮಳೆ ಬಂದಾಗ ಹೊಳೆಯೂ ಉಕ್ಕುತ್ತದೆ. ಅದರಿಂದ ಕೆಲವರಿಗೆ ಹಾನಿಯೂ ಆಗುತ್ತದೆ. ಹೀಗೆ ಬದುಕೆಂಬುದು ಸದಾ ಕೊಡುತ್ತ, ಪಡೆಯುತ್ತ, ಕಾಡುತ್ತ, ಹರಿಯುತ್ತ ಇರುವುದು. ಈ ಕೊಡುವ, ಪಡೆಯುವ, ಕಾಡುವ ಕ್ರಿಯೆಗಳ ಒಟ್ಟೂ ಮೊತ್ತವೇ ಸೃಜನಕ್ರಿಯೆ. ನಾನು ಹುಟ್ಟಿಬೆಳೆದ ಹೊಳೆಸಾಲಿನಲ್ಲಿ ನೂರಾರು ಕತೆಗಳಿವೆ, ಸಾವಿರಾರು ಕವಿತೆಗಳಿವೆ, ತಲೆತಲಾಂತರಗಳ ಕತೆ ಹೇಳುವ ಕಾದಂಬರಿಗಳಿವೆ. ಇವೆಲ್ಲ ನಿಮ್ಮ ಸೃಜನಕ್ರಿಯೆಯ ಭಾಗವಾಗಿ ಮರುಹುಟ್ಟು ಪಡೆಯುವ ಪ್ರಚೋದಕ ಕ್ಷಣ ಯಾವುದು? ತೀವ್ರ ವಿಷಾದ, ತೀವ್ರ ಅಪಮಾನ, ಅತೀವ ಯಾತನೆ, ನಿಯಂತ್ರಣ ಮೀರಿದ ಕೋಪದ ಕ್ಷಣ, ಸಂಯಮದ ಒಡ್ಡು ಮೀರಿ ಹರಿದ ಪ್ರೀತಿ ಇವೇ ಇರಬಹುದೇ? ನಿಮ್ಮ ಜೊತೆಯೇ ಸಾಗುತ್ತಿರುತ್ತಾನೆ, ಬೆಣ್ಣೆಯ ಮಾತುಗಳನ್ನೂ ಹೇಳುತ್ತಿರುತ್ತಾನೆ, ಸರಕ್ಕನೆ ಚಾಕು ತೆಗೆದು ನಿಮ್ಮ ಬೆನ್ನಿಗೆ ಇರಿದುಬಿಡುತ್ತಾನೆ. ಆ ಚೀತ್ಕಾರದ ದನಿಯಲ್ಲೊಂದು ಕತೆ ಇರುತ್ತದೆ. ಬೇಡನ ಬಾಣದ ಏಟಿಗೆ ಚಕ್ರವಾಕದ ಜೋಡಿಯಲ್ಲಿ ಒಂದು ಗತಪ್ರಾಣ ಆದಾಗ ವಾಲ್ಮೀಕಿ ಬಾಯಿಂದ ಹೊಮ್ಮಿತಲ್ಲ ಶಾಪ ವಾಕ್ಯ! ಹಾಗೆ, ಕಾವ್ಯವಿರಲಿ, ಕತೆ ಇರಲಿ, ಅದು ನಿಮ್ಮ ಆತ್ಮವನ್ನು ಸೀಳಿಕೊಂಡು ಬರುವ ದನಿಯಾಗಿರುತ್ತದೆ. ಅದಕ್ಕೆ ಯಾವುದೇ ಸಿದ್ಧಾಂತಗಳ ಲೇಪನವಿರುವುದಿಲ್ಲ. ಕೇವಲ ಅನುಭೂತಿ ಮಾತ್ರ. ನಮ್ಮೂರಿನಲ್ಲಿ ಹರಿವ ಹೊಳೆಯಲ್ಲಿ ಅದೆಷ್ಟೋ ಪಿಸುದನಿಗಳು ಅಡಗಿವೆ. ಗಂಡನ ಜೊತೆ ಜಗಳ ಮಾಡಿಕೊಂಡು ಬಂದ ಹೆಂಡತಿ ಹೊಳೆದಂಡೆಯಲ್ಲಿ ಕುಳಿತು ಮನಸಾರೆ ಅತ್ತು ಹಗುರಾಗಿದ್ದಾಳೆ. ಹೊಳೆ ದಂಡೆಯಲ್ಲೇ ಬಟ್ಟೆ ತೊಳೆಯುತ್ತ ಅತ್ತೆ ತನ್ನ ಸೊಸೆಯ ಚಾಡಿಯನ್ನು ಪಕ್ಕದ ಮನೆಯವಳ ಬಳಿ ಹೇಳುತ್ತಾಳೆ. ಹೊಳೆಯ ಆ ದಡದಿಂದ ಈ ದಡಕ್ಕೆ ತಾರಿಯನ್ನು ದಾಟಿಸುವ ಹೊನ್ನ ಕೇಳಿಸಿಕೊಳ್ಳುವ ಕತೆಗಳನ್ನು ಬರೆಯುತ್ತ ಹೋದರೆ ಅದು ಕೊನೆಯಿಲ್ಲದ ಧಾರಾವಾಹಿ. ಹೊಳೆಸಾಲಿನಲ್ಲಿ ಕತೆಯನ್ನೋ ಕವನವನ್ನೋ ಧೇನಿಸುತ್ತ ನಡೆವವನಿಗೆ ಎಡವಿದಲ್ಲಿ ಅದು ಸಿಕ್ಕುತ್ತ ಹೋಗುತ್ತದೆ. ನಮ್ಮ ದೋಣಿ ನಡೆಸುವ ಬೊಮ್ಮ ಇದ್ದ. ಯಾವ ದೇವರು ದೆವ್ವಗಳನ್ನೂ ಅವನು ನಂಬುತ್ತಿರಲಿಲ್ಲ. ಯಾರೋ ದೆವ್ವಕ್ಕೆ ಎಡೆ ಹಾಕಿ, ತಾಮ್ರದ ಮೊಳೆ ಚುಚ್ಚಿದ ತಂಗಿನಕಾಯಿಯನ್ನು ಹೊಳೆಯಲ್ಲಿ ತೇಲಿಬಿಟ್ಟರೆ, ಈ ಬೊಮ್ಮನಿಗೆ ಅದು ಸಿಕ್ಕಿತೆಂದರೆ, ತಂದು ಸುಲಿದು ಮನೆಗೆ ಒಯ್ದು ಕಮ್ಮಗೆ ಮೀನು ಸಾರಿಗೆ ಮಸಾಲೆ ರುಬ್ಬಿಕೊಂಡು ತಿನ್ನುತ್ತಿದ್ದ. ತನ್ನ ಮಗಳ ಮದುವೆಯನ್ನು ಅಮಾವಾಸ್ಯೆ ದಿನದಂದೇ ಅವನು ಮಾಡಿದ್ದು! ‘‘ದೇವರ ಸೃಷ್ಟಿಯಲ್ಲಿ ಆ ದಿನ ಚಲೋ, ಈ ದಿನ ಕೆಟ್ಟ ಅಂತ ಇದೆಯಾ?’’ ಎಂದು ಮುಗ್ಧವಾಗಿ ಆತ ಪ್ರಶ್ನಿಸುತ್ತಿದ್ದ. ಹೊಳೆಸಾಲಿನಲ್ಲಿ ಶಿವಪ್ಪ ಮತ್ತು ಮಾದೇವಿ ಎಂಬ ದಂಪತಿ ಇದ್ದರು. ಅವರಿಗೆ ಮಕ್ಕಳಿರಲಿಲ್ಲ. ಒಬ್ಬ ಅನಾಥ ಮಗುವನ್ನು ತಂದು ಸಾಕಿದರು. ತಮ್ಮ ವೃದ್ಧಾಪ್ಯದಲ್ಲಿ ನೆರವಿಗೆ ಇರುತ್ತಾನೆ ಎಂದು ಹೊತ್ತ ಮಗನಿಗೆ ನೀಡುವ ಪ್ರೀತಿಯ ಧಾರೆಯನ್ನೇ ಅವನಿಗೆ ಎರೆದರು. ಹುಡುಗ ದೊಡ್ಡವನಾಗುತ್ತ ಹೋದ. ಮುಂದೊಂದು ದಿನ ತಾನು ದುಡಿಯಲು ಹೋಗುತ್ತೇನೆ ಎಂದು ಮುಂಬೈಗೆ ಹೋಗಿಬಿಟ್ಟ. ವರ್ಷಕ್ಕೊಮ್ಮೆ ಬರುತ್ತಿದ್ದ. ಬಟ್ಟೆ, ತಿಂಡಿ ಎಲ್ಲ ತಂದುಕೊಡುತ್ತಿದ್ದ. ಮುಂದೊಂದು ದಿನ ಅವನ ಮದುವೆ ಮುಂಬೈನಲ್ಲೇ ಆಗಿದೆ ಎಂಬ ಸುದ್ದಿ ಇವರಿಗೆ ಬಂತು. ಮುದಿ ದಂಪತಿಯ ಕಣ್ಣಂಚಿನಲ್ಲಿ ಎರಡು ಬಿಂದು ನೀರು ಹರಿದಿದ್ದು ಯಾರಿಗೂ ಕಾಣಿಸಲಿಲ್ಲ. ಮತ್ತೆ ವರ್ಷ ಬಿಟ್ಟು ಮಗ ಬಂದ. ನಾಲ್ಕಾರು ದಿನ ಉಳಿದ. ಒಂದು ದಿನ ರಾತ್ರಿ ಮನೆಯಲ್ಲಿದ್ದ ದುಡ್ಡು, ಚಿನ್ನಾಭರಣ ಎಲ್ಲವನ್ನೂ ಕದ್ದುಕೊಂಡು ಹೋದವನು ಮತ್ತೆ ಇತ್ತ ಮುಖ ಹಾಕಲಿಲ್ಲ. ಇನ್ನೊಬ್ಬಳು ಕಲ್ಯಾಣಿ, ಚೆಲುವೆ. ಜಂಬೆಮರಕ್ಕೆ ಹೂವು ಬಂದಂತೆ ನಲಿಯುವವಳು. ಅವಳ ಮದುವೆ ಆಯ್ತು. ಒಂದು ಮಗುವೂ ಆಯ್ತು. ಗಂಡ-ಹೆಂಡತಿ ನಡುವೆ ಜಗಳ. ಗಂಡ ಅವಳನ್ನು ಬಿಟ್ಟೇಬಿಟ್ಟ. ಮತ್ತೊಂದು ಮದುವೆಯಾದ. ಕಲ್ಯಾಣಿ ಮಹಾ ಮೌನಿಯಾಬಿಟ್ಟಳು. ಯಾರೊಂದಿಗೂ ಒಂದೂ ಮಾತನಾಡಲಿಲ್ಲ. ಇತ್ತೀಚೆಗೆ ಅವಳ ಗಂಡ ಸತ್ತುಹೋದ. ಇಡೀ ದಿನ ಅವಳ ಕಣ್ಣಿಂದ ಬಳಬಳ ನೀರು ಸುರಿಯಿತು. ತನ್ನ ಕುಂಕುಮ ಅಳಿಸಿಕೊಂಡಳು, ಬಳೆ ಒಡೆದುಕೊಂಡಳು. ಹೇಳಿ, ಈ ಕಲ್ಯಾಣಿ ಒಂದು ಕವಿತೆಯೋ, ಒಂದು ಕತೆಯೋ? ಮಾತಿದ್ದೂ ಮೂಕನಾದವ ಮತ್ತೊಬ್ಬ, ತೆಂಗಿನ ಮರದಿಂದ ಕಾಯಿ ಇಳಿಸುತ್ತಿದ್ದ ಗೋವಿಂದ. ಅದೇನಾಯಿತು ಎಂದರೆ, ಒಂದು ದಿನ ಯಾರದೋ ಮನೆಯ ತೆಂಗಿನಮರ ಏರಿದ್ದ ಅವನು. ತೆಂಗಿನಕಾಯಿಯ ಹಿಂಡಗಿಯ ಬುಡಕ್ಕೆ ಕತ್ತಿಹಾಕಿ ಎಳೆದೇಬಿಟ್ಟ. ಹಿಂಡಗಿ ಕತ್ತರಿಸಿ ಕೆಳಕ್ಕೆ ಬಿತ್ತು. ಅದೇ ವೇಳೆ ಅಲ್ಲಿಗೆ ಒಂದು ದನ ಬಂದಿತ್ತು. ಅದರ ತಲೆಯ ಮೇಲೇ ಈ ಕಾಯಿ ಹಿಂಡಿಗೆ ಬಿದ್ದು ದನ ಸತ್ತೇಹೋಯಿತು. ಗೋಹತ್ಯೆಯ ವ್ಯಥೆಯಿಂದ ಆತ ಮುಂದೆ ಯಾರ ಹತ್ತಿರವೂ ಮಾತನ್ನೇ ಆಡಲಿಲ್ಲ! ಇವೆಲ್ಲ ಕತೆಗಳಾಗುತ್ತವೋ ಕವಿತೆಗಳಾಗುತ್ತವೋ ಗೊತ್ತಿಲ್ಲ. ಅವರೆಲ್ಲ ಅನುಭವಿಸಿದ ತೀವ್ರ ಆಘಾತದ ಕ್ಷಣದಲ್ಲಿಯೇ ಅವು ಮುಂದೇನಾಗಬೇಕು ಎಂಬುದರ ಬೀಜದ ಅಂಕುರವಾಗಿರುತ್ತದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.