*ಜಗ್ಗಿದಷ್ಟೂ ಹಿಗ್ಗುವುದು ಈ ಬಾಲ

ಹಿಗ್ಗಿಸಿ ಹಿಗ್ಗಿಸಿ ಬರೆಯುವವರನ್ನು ಕಂಡಾಗ, ತುಂಡಿಲ್ಲದೆ ಮಾತನಾಡುವುದನ್ನು ಕೇಳಿದಾಗ ಅದೇನು ಹನುಮಂತನ ಬಾಲದ ಹಾಗೆ ಬೆಳೆಸುತ್ತಾನಪ್ಪ ಎಂದು ಮೂಗುಮುರಿಯುತ್ತೇವೆ. ಅವನದೇನು ಹರಿಕಥೆ ಮುಗಿಯುವುದೇ ಇಲ್ಲ, ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ ಎಂದು ಉದ್ಗಾರ ತೆಗೆಯುತ್ತೇವೆ. ಏನಿದು ಹನುಮಂತನ ಬಾಲ?
ರಾಮನ ಭಂಟ ಹನುಮಂತ ಎಲ್ಲರಿಗೂ ಗೊತ್ತು. ಆದರೆ ಅವನ ಬಾಲದ ಬಗ್ಗೆ ಗೊತ್ತಿದ್ದವರು ವಿರಳ. ಸೀತಾನ್ವೇಷಣೆಗೆ ಹನುಮಂತ ಉಳಿದವರೊಂದಿಗೆ ಹೊರಡುತ್ತಾನೆ. ಹನುಮಂತ ಕಾಮರೂಪಿ. ಅಂದರೆ ಇಷ್ಟಪಟ್ಟ ರೂಪವನ್ನು ಧರಿಸುವ ಸಾಮರ್ಥ್ಯ ಅವನಲ್ಲಿತ್ತು. ಸಮುದ್ರ ಲಂಘಿಸುವಾಗ ಪರ್ವತಕಾಯನಾದ. ಸುರಮೆಯ ದೇಹದೊಳಗೆ ಪ್ರವೇಶಿಸುವಾಗ ಸೂಕ್ಷ್ಮ ಅಣುವಾದ.
ಇಂಥ ಹನುಮಂತ ಲಂಕೆಯನ್ನು ಪ್ರವೇಶಿಸಿ ಸೀತೆಯ ತಾಣವನ್ನು ಪತ್ತೆ ಮಾಡುತ್ತಾನೆ. ಅಶೋಕವನವನ್ನು ಧ್ವಂಸ ಮಾಡಿದ ಮೇಲೆ ಇಂದ್ರಜಿತುವಿನಿಂದ ಬಂಧಿತನಾಗುತ್ತಾನೆ. ಅವನನ್ನು ರಾವಣನ ಆಸ್ಥಾನಕ್ಕೆ ಕರೆದೊಯ್ಯುತ್ತಾರೆ. ರಾವಣ ಎತ್ತರದ ಸಿಂಹಾಸನದ ಕುಳಿತಿದ್ದಾನೆ. ತಾನು ಶ್ರೀರಾಮನ ದೂತ ಎಂದು ಹನುಮಂತ ಪರಿಚಯಿಸಿಕೊಳ್ಳುತ್ತಾನೆ. ದೂತನಿಗೆ ರಾಜಮರ್ಯಾದೆಯನ್ನು ನೀಡಬೇಕು ಎಂದು ರಾಜನೀತಿ ಹೇಳುತ್ತದೆ. ರಾವಣ ಅದನ್ನು ಪಾಲಿಸುವುದಿಲ್ಲ. ರಾವಣನ ಎದುರು ತಾನು ನೆಲದ ಮೇಲೆ ನಿಲ್ಲುವುದೆಂದರೆ ಶ್ರೀರಾಮನಿಗೆ ಅಪಮಾನ ಎಂದು ಬಗೆದ ಹನುಮಂತ ತನ್ನ ಬಾಲವನ್ನು ಸುರುಳಿಸುತ್ತಿ ರಾವಣನ ಸಿಂಹಾಸನಕ್ಕಿಂತ ಎತ್ತರದ ಪೀಠ ಮಾಡಿಕೊಂಡು ಅದರ ಮೇಲೆ ತಾನು ಕುಳಿತುಕೊಳ್ಳುತ್ತಾನೆ.
ಈ ಹನುಮಂತನ ಬಾಲಕ್ಕೆ ರಾವಣ ಬೆಂಕಿ ಹಚ್ಚಿದಾಗ ಹನುಮ ಇಡೀ ಲಂಕೆಯನ್ನೇ ತನ್ನ ಬಾಲದ ಬಲದಿಂದ ಸುಡುತ್ತಾನೆ.
ಇಂದು ಹನುಮಂತನ ಬಾಲದ ಕತೆ. ದ್ರೌಪದಿಯ ಸೀರೆಯ ಕತೆಯೂ ಇಂಥದ್ದೇ. ಆದರೆ ನಿರಂತರ ಮಾತಿಗೆ, ಉದ್ದೇಉದ್ದ ಬರೆವಣಿಗೆಗೆ ದ್ರೌಪದಿಯ ಸೀರೆಯನ್ನು ಉದಾಹರಣೆಯಾಗಿ ನೀಡುವುದಿಲ್ಲ.