*ಕೆಡುಕನ್ನು ಬಿಟ್ಟು ಕೇವಲ ಒಳಿತನ್ನು ಮಾತ್ರ ಸ್ವೀಕರಿಸುವುದು

ಹಂಸವನ್ನು ನಿರ್ಮಲತೆಗೆ ಸಂಕೇತವಾಗಿ ಬಳಸುತ್ತಾರೆ. ಬೆಳ್ಳಗಿರುವ ಹಂಸ ಪರಿಶುಭ್ರವಾಗಿರುತ್ತದೆ. ಕಪಟ, ಕಲ್ಮಷ ಇಲ್ಲದವರು ಎಂದು ಹೇಳಬೇಕೆಂದರೆ ಹಂಸದಂತೆ ಅವರು ಎಂದು ಹೇಳುವುದಿದೆ. ಹೇಗೆ ಹಂಸವು ಶುಭ್ರವೋ ಅದು ಸೇವಿಸುವ ಆಹಾರವೂ ಶುಭ್ರವೇ. ಬೆಳ್ಳಗಿರುವ ಹಂಸ ಶುಭ್ರತೆಯ ಇನ್ನೊಂದು ಪ್ರಮಾಣವಾದ ಹಾಲನ್ನು ಕುಡಿಯುತ್ತದೆ ಎನ್ನುವ ಪ್ರತೀತಿ ಇದೆ. ಹಂಸ ಪಕ್ಷಿಯು ನೀರು ಬೆರೆಸಿದ ಹಾಲನ್ನು ಅದಕ್ಕೆ ನೀಡಿದರೂ ಅದು ಹಾಲನ್ನಷ್ಟೇ ಬೇರೆ ಮಾಡಿ ಕುಡಿದು ನೀರನ್ನು ಉಗುಳುತ್ತದೆಯಂತೆ.
ನೀರು ಬೆರೆಸಿದ ಹಾಲು ಎಂದರೆ ಒಳಿತು ಮತ್ತು ಕೆಡುಕಿನ ಮಿಶ್ರಣ. ಬದುಕಿನಲ್ಲಿ ಎಲ್ಲವೂ ಒಳ್ಳೆಯದೇ ನಮಗೆ ಲಭಿಸುವುದಿಲ್ಲ. ಒಳಿತು ಕೆಡುಕು ಎರಡನ್ನೂ ನಮಗೆ ಅದು ಬೇಕಿರಲಿ ಬೇಡದಿರಲಿ ಎದುರಿಸಲೇ ಬೇಕಾಗುತ್ತದೆ. ಪರಿಶುದ್ಧ ಆತ್ಮದವರು ಹಂಸಪಕ್ಷಿಯ ಹಾಗೆ ಒಳಿತನ್ನು ಮಾತ್ರ ಗ್ರಹಿಸುತ್ತ ಕೆಡುಕನ್ನು ಬಿಟ್ಟುಬಿಡುತ್ತಾರೆ. ಇದೇ ಹಂಸಕ್ಷೀರ ನ್ಯಾಯ.
ಹಾಲಿನಲ್ಲಿ ನೀರು ಬೆರೆತಿರುವುದನ್ನು ಬೇರ್ಪಡಿಸುವುದಾದರೂ ಹೇಗೆ? ಈ ಸೇರ್ಪಡೆ ಬೇರ್ಪಡಿಸಲಾಗದಹಾಗೆ ಅವಿನಾಭಾವಿಯಾಗಿರುತ್ತದೆ. ಆದರೂ ಹಂಸವು ಹಾಲನ್ನಷ್ಟೇ ಗ್ರಹಿಸುತ್ತದೆ. ನಾವು ನಮ್ಮ ಆತ್ಮವನ್ನು ಶುದ್ಧವಾಗಿಟ್ಟುಕೊಂಡರೆ, ನಮ್ಮ ವಿವೇಚನಾಶಕ್ತಿಯನ್ನು ಸದಾ ಜಾಗೃತವಾಗಿ ಇಟ್ಟುಕೊಂಡರೆ ಕೆಡುಕನ್ನು ಬಿಟ್ಟು ಒಳಿತನ್ನಷ್ಟೇ ಗ್ರಹಿಸುವುದು ನಮ್ಮಿಂದ ಸಾಧ್ಯ ಎನ್ನುವುದನ್ನು ಹೇಳುವುದಕ್ಕಾಗಿಯೇ ಈ ಹಂಸ ಕ್ಷೀರ ನ್ಯಾಯವನ್ನು ಆಡುಮಾತಿನಲ್ಲಿ ಬಳಸುತ್ತಿರುವುದು.