*ಸಾಯುವಾಗ ಮಾತ್ರ ಶ್ರೇಷ್ಠತೆ ಹೊರಬೀಳುತ್ತದೆ

ಹಂಸ ತುಂಬ ಸುಂದರವಾದ ಪಕ್ಷಿ. ಪರಿಶುದ್ಧತೆಯ ಸಂಕೇತ ಅದು. ಹಾಲಿನಿಂದ ನೀರನ್ನು ಬೇರ್ಪಡಿಸಿ ಅದು ಕುಡಿಯುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಹಂಸಕ್ಕೆ ಸಂಬಂಧಿಸಿದ ಇನ್ನೊಂದು ನಂಬಿಕೆ, ಅದು ಸಾಯುವಾಗ ಅತ್ಯಂತ ಮಧುರವಾಗಿ ಹೃದಯಂಗಮವಾಗಿ ಹಾಡುತ್ತದೆಯಂತೆ. ಹಾಗೆ ಹಾಡುತ್ತ ಹಾಡುತ್ತ ಅದು ಸತ್ತುಹೋಗುವುದಂತೆ.
ಭಾರತೀಯ ಸಾಹಿತ್ಯದಲ್ಲಿ ಇದನ್ನು ಉಪಮೆಯ ರೀತಿಯಲ್ಲೋ ದೃಷ್ಟಾಂತದ ರೀತಿಯಲ್ಲೋ ಬಳಸಿಕೊಂಡಿದ್ದಾರೆ. ಅದೇ ಪಾಶ್ಚಾತ್ಯ ಸಾಹಿತ್ಯದಲ್ಲೂ ಇದು ಸ್ವಾನ್‌ ಸಾಂಗ್‌ ಎಂದು ಬಳಕೆಯಾಗಿದೆ. ಷೇಕ್ಸ್‌ಪಿಯರ್‌ನ ಮರ್ಚೆಂಟ್‌ ಆಫ್‌ ವೆನಿಸ್‌ನಲ್ಲಿ ಇದರ ಪ್ರಯೋಗವಾಗಿದೆ.
ಕನ್ನಡದಲ್ಲಿ ತ.ರಾ.ಸು. ಅವರು ಹಂಸಗೀತೆ ಎಂಬ ಕಾದಂಬರಿಯನ್ನು ಬರೆದರು. ಇದು ನಂತರ ಸಿನಿಮಾ ಆಗಿಯೂ ಹೆಸರು ಮಾಡಿತು. ಇದರಲ್ಲಿಯ ಕಥಾನಾಯಕ ಸಂಗೀತಗಾರ. ಅವನ ಅಂತ್ಯ ಹಾಡುತ್ತ ಹಾಡುತ್ತ ಆಗುತ್ತದೆ.
ಸಾಯುವಾಗ ಹಂಸ ಹಾಡುತ್ತದೆಯೆ? ಅದು ಒಂದು ಕವಿಸಮಯ. ಪ್ರಾಚೀನ ಗ್ರೀಸ್‌ ವಿದ್ವಾಂಸ ಪ್ಲಿನಿ ದ ಎಲ್ಡರ್‌ ಎಂಬಾತ ಕ್ರಿ.ಶ. 77ರಲ್ಲಿ ತನ್ನ ನ್ಯಾಚುರಲ್‌ ಹಿಸ್ಟರಿ ಎಂಬ ಗ್ರಂಥದಲ್ಲಿ ಹಂಸಗಳು ಸಾಯುವಾಗ ಹಾಡುವುದಿಲ್ಲ ಎಂದು ಸಾರಿದ.
ಅತ್ಯಂತ ಶ್ರೇಷ್ಠ ಅಭಿವ್ಯಕ್ತಿ ಎಂದು ಹೇಳುವಾಗ ಅಥವಾ ಯಾರದಾದರೂ ಅಂತ್ಯವನ್ನು ಹೇಳುವಾಗ ಹಂಸಗೀತೆ ಪದ ಪ್ರಯೋಗವಾಗುತ್ತದೆ.