ಅದು ಪುಷ್ಯವೋ ಪುನರ್ವಸುವೋ ಇರಬೇಕು. ಬಿಟ್ಟೂ ಬಿಡದೆ ಎಂಟೆಂಟು ದಿನ ಮಳೆಯ ಸುರಿಸುವ ತಾಕತ್ತು ಇರುವುದು ಈ ನಕ್ಷತ್ರಗಳಿಗಲ್ಲದೆ ಬೇರೆ ಯಾವುದಕ್ಕಿದೆ? ಇವು ಮಾಡುವ ಅನಾಹುತಗಳು ಒಂದೇ ಎರಡೇ? ಅಪ್ಪುಗೈಗೆ ನಿಲುಕದ ಗಾತ್ರದ ಮಾವಿನ ಮರ, ಮುಗಿಲ ಚುಂಬಿಸ ಹೊರಟ ತೆಂಗಿನ ಮರ, ಎಕರೆಯಷ್ಟು ಜಾಗದಲ್ಲಿ ಬೇರ ಜಾಲವ ಬೀಸಿ ಚಪ್ಪರ ಹಾಕಿದ್ದ ಆಲದ ಮರ ಹೀಗೆ ಯಾವುದೆಂದರೆ ಅದನ್ನು ಕಿತ್ತು ಧರೆಗುರುಳಿಸುವ ಅಗಾಧ ಶಕ್ತಿ ಈ ಮಳೆ ಗಾಳಿಗಳಿಗೆ ಇರುತ್ತದೆ. ಸತತ ಮಳೆಯಿಂದ ನೀರು ಕುಡಿದು ಭೂನಿ ಮೆದುವಾಗುತ್ತದೆ. ಭಾರೀ ವೇಗದ ಗಾಳಿಗೆ ಮರಗಳು ತೊನೆದು ತೊನೆದು ಬೇರು ಸಡಿಲವಾಗಿರುತ್ತದೆ. ಈ ಗಾಳಿ ಮಳೆಯಲ್ಲಿ ನೆಲಕ್ಕೊರಗದೆ ಮರಗಳು ಉಳಿದವೆಂದರೆ ಅವುಗಳಿಗೆ ಸಾವಿರ ವರ್ಷ ಆಯುಸ್ಸವೆನ್ನಿ. ಪುಷ್ಯ ಪುನರ್ವಸುಗಳು ಮಾಡುವ ಈ ಬಗೆಯ ಪುಂಡಾಟಿಕೆ ಕಂಡೇ ನಮ್ಮ ಹೊಳೆಸಾಲಿನಲ್ಲೆಲ್ಲ ಇವನ್ನು ಸಣ್ಣಪುಂಡ ದೊಡ್ಡಪುಂಡ ಎಂದು ಕರೆಯುತ್ತಾರೆ.
ಇಂಥದ್ದೇ ಒಂದು ಮಳೆಗಾಲದಲ್ಲಿ ನಮ್ಮ ಮನೆಯ ಪಕ್ಕದಲ್ಲಿಯೇ ಇದ್ದ ತೆಂಗಿನ ಮರವೊಂದು ಧರೆಗೆ ಒರಗಿತು. ಪ್ರಾಯದ ಮಡಿಗೆ ಅದು. 50ಕ್ಕಿಂತ ಕಡಿಮೆ ಇಲ್ಲದಷ್ಟು ಕಾಯಿಗಳಿರುವ ಹಿಂಡಿಗೆಗಳು. ನಿಲ್ಲಿಸಿದರೆ ಬದುಕಬಹುದೇನೋ ಎಂಬ ಆಸೆ ಇವೆಲ್ಲ ಸೇರಿ ಆ ತೆಂಗಿನ ಮರವನ್ನು ಕಡಿದು ಹಾಕದೆ ನಿಲ್ಲಿಸಬೇಕೆಂದು ತೀಮರ್ಾನವಾಯಿತು. ಬಿದ್ದ ತೆಂಗಿನ ಮರಕ್ಕೆ ಸರಿಗೆಗಳನ್ನು ಕಟ್ಟಿ ಹತ್ತಿರದ ಮಾವಿನ ಮರಕ್ಕೋ, ನೇರಳೆ ಮರಕ್ಕೋ ಕಟ್ಟುವುದು ಮತ್ತು ಒಂದು ಚಿಗುರುವ ಜಾತಿಯ ಮರದ ಕಂಬವನ್ನು ತಂದು ಆಧಾರವಾಗಿ ಅದಕ್ಕೆ ಕೊಡುವುದು ಪರಿಹಾರದ ರೂಪದಲ್ಲಿ ಕಂಡುಬಂತು.
ಬಿದ್ದುಹೋದ ಮರಗಳನ್ನು ಎತ್ತಿನಿಲ್ಲಿಸುವುದನ್ನೇ ಉದ್ಯೋಗ ಮಾಡಿಕೊಂಡವರು ಹೊಳೆಸಾಲಿನಲ್ಲಿ ಇದ್ದಾರೆ. ಜೋರಾಗಿ ಗಾಳಿ ಬೀಸಿ ಮಳೆ ಸುರಿದು ತೆಂಗಿನ ಮರಗಳು ಕಿತ್ತು ನೆಲಕ್ಕುರುಳಿದರೆ ಮಾತ್ರ ಅವರಿಗೆ ಉದ್ಯೋಗ. ಇಲ್ಲದಿದ್ದರೆ ಮನೆಗಳ ಹತ್ತಿರ ಇರುವ ಮರಗಳನ್ನು ಕಡಿಯುವಾಗ ಇವರ ಅಗತ್ಯ ಕಂಡುಬರುತ್ತದೆ. ಇವರ ಬಳಿ ಭಾರೀ ಗಾತ್ರದ ಹಗ್ಗಗಳು, ಹಗ್ಗಗಳನ್ನು ಎಳೆಯಲು ಬಳಸುವ ಕಟ್ಟಿಗೆಯಿಂದಲೇ ತಯಾರಿಸಿದ ಗಡಗಡೆಗಳು (ಈವನ್ನು ಗಡಗಡೆ ಎಂದು ಹೇಳುವುದಿಲ್ಲ, ಕಪಿಗಳು ಎಂದು ಕರೆಯುತ್ತಾರೆ.) ಹೈಲೇಸಾ ಪದಗಳ ಸಂಗ್ರಹ ಎಲ್ಲ ಇರುತ್ತದೆ. ಯಾವುದೇ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿತವರಲ್ಲ ಡಿಕೊಸ್ತ, ಬಸ್ತ್ಯಾಂವ, ಲಿಯಾಂವ. ಪರಂಪರಾಗತವಾಗಿ ಬಂದ ಕಸಬುಗಾರಿಕೆಯಲ್ಲಿ ಅವರನ್ನು ಮೀರಿಸುವವರೇ ಇಲ್ಲ.
ಗಾಳಿಮಳೆಯಲ್ಲಿ ಧರಾಶಾಯಿಯಾದ ನಮ್ಮ ಮನೆಯ ತೆಂಗಿನ ಮರ ನಿಲ್ಲಿಸಿದರೆ ಬದುಕಬಹುದೆಂದು ಕೊಸ್ತ ಭವಿಷ್ಯ ನುಡಿದ ಬಳಿಕವೇ ಅದನ್ನು ನಿಲ್ಲಿಸಲು ಕ್ರಮಕೈಗೊಳ್ಳಲಾಯಿತು. ಬಿದ್ದ ಮರವನ್ನು ಪೂರ್ತಿ ನೆಟ್ಟಗೆ ನಿಲ್ಲಿಸದೆ ಭೂಮಿಗೆ ಸುಮಾರು 45 ಡಿಗ್ರಿ ಕೋನವನ್ನು ಮಾಡಿ ನಿಲ್ಲಿಸಿದರೆ ಸಾಕು ಎಂದು ಅವನು ಶಿಫಾರ್ಸು ಮಾಡಿದ. ಇದಕ್ಕೆ ಆಧಾರವಾಗಿ ನಿಲ್ಲಿಸಲು ಹಂಗರಕನ ಮರವನ್ನು ಅವನು ಸೂಚಿಸಿದ. ನಾನು ಹಂಗರಕನ ಮರವೆಂಬ ಹೆಸರನ್ನು ಕೇಳಿದ್ದು ಅದೇ ಮೊದಲ ಬಾರಿಗೆ. ಇಂಥವರ ಮನೆಯಲ್ಲಿ ಹಂಗರಕನ ಮರ ಇದೆ. ಅದಕ್ಕೆ ಅವರು ಎಷ್ಟು ಬೆಲೆ ಹೇಳುತ್ತಾರೆ ಎಂಬುದನ್ನೆಲ್ಲ ಕೊಸ್ತನೇ ಹೇಳಿದ. ಹಂಗರಕನ ಮರಕ್ಕೆ ಮೈತುಂಬ ಮುಳ್ಳು. ಚಿಕ್ಕಚಿಕ್ಕ ಮುಳ್ಳುಗಳು ಎಳೆಯ ಹೆಣೆಗಳ ಮೇಲೆ ಅಧಿಕ. ಆದರೆ ಬೆಳೆದು ವಯಸ್ಸಾದ ಕಾಂಡದ ಮೇಲೆ ಮುಳ್ಳುಗಳು ಇರುವುದಿಲ್ಲ. ಬೆಳೆದ ಮರವನ್ನು ಕಡಿದು ತಂದು ನೆಟ್ಟರೂ ಅದು ಬೇರುಬಿಡುತ್ತದೆ ಎಂಬ ಸಂಗತಿಯೂ ನನಗೆ ಹೊಸದೇ.
ಕೊಸ್ತ ಮಾಡಿದ ಚಮತ್ಕಾರವೋ ಏನೋ ನಮ್ಮ ತೆಂಗಿನ ಮರವೂ ಬದುಕಿತು, ಆತ ಅದಕ್ಕೆ ಆಧಾರವಾಗಿ ನಿಲ್ಲಿಸಿದ ಹಂಗರಕನ ಮರವೂ ಚಿಗುರಿತು. ಕೇವಲ ಹಂಗರಕವಲ್ಲ, ಅಮಟೆ ಮರದ ಕೊಂಬೆಯನ್ನು ಕಡಿದು ನೆಟ್ಟರೂ ಅದು ಬೇರುಬಿಟ್ಟು ಮರವಾಗುವುದಂತೆ.
ಒಂದು ವರ್ಷದ ಬಳಿಕ ಹಂಗರಕನ ಮರ ನಮ್ಮ ಗಮನ ಸೆಳೆದದ್ದು ಅದು ಬಿಟ್ಟ ಕೆಂಪುಬಣ್ಣದ ಹೂಗಳಿಂದಲೇ. ಎಲೆಗಳಿಗಿಂತ ಹೂಗಳೇ ಮರವನ್ನು ಮುಚ್ಚಿಬಿಟ್ಟಿದ್ದವು. ಹೂವುಗಳು ನೋಡುವುದಕ್ಕೆ ಸಂಪಿಗೆಯ ಹೂವನ್ನು ಹೋಲುತ್ತಿದ್ದವು. ಆದರೆ ಸಂಗಿಗೆಯ ವಾಸನೆ ಅವಕ್ಕಿಲ್ಲ. ಹೂವುಗಳು ಉದುರಿಹೋಗಿ ಅವುಗಳ ಸ್ಥಾನದಲ್ಲಿ ಹಸಿರು ಬಣ್ಣದ ಸೋಡಿಗೆಗಳು ಕಂಡುಬಂದವು. ಗದ್ದೆಬಯಲಿನಲ್ಲಿ ಅಲಸಂದೆ, ವಠಾಣಿ ಸೋಡಿಗೆಗಳನ್ನು ಕಂಡಿದ್ದ ನಾನು ಇದೂ ಒಂದು ತಿನ್ನುವ ಜಾತಿ ಇರಬೇಕು ಎಂದುಕೋಡು ನಮ್ಮಣ್ಣನನ್ನು ಈ ಬಗ್ಗೆ ವಿಚಾರಿಸಿದೆ. ಸ್ವಲ್ಪ ದಿನ ತಡೆದುಕೋ, ಆ ಮೇಲೆ ನೋಡುವಿಯಂತೆ ಎಂದು ನಮ್ಮ ಆಣ್ಣ ಹೇಳಿದ.
ಹೀಗಿರುವಾಗಲೇ ಹಂಗರಕನ ಮರದ ಬಳಿ ಸುಳಿದಾಡುತ್ತಿದ್ದ ನನಗೆ ಅದರ ಬುಡದಲ್ಲಿ ಒಂದು ಕಪ್ಪು ಸೋಡಿಗೆ ಬಿದ್ದಿರುವುದು ಕಂಡಿತು. ಕುತೂಹಲ ತಾಳಲಾರದೆ ಅದನ್ನು ಬಿಡಿಸಿ ನೋಡಿದೆ. ಅಪೂರ್ವವಾದ ಮುತ್ತಿನ ಮಣಿಗಳಮತಿರುವ ಬೀಜಗಳು. ಕೆಂಪಗೆ ಅಂದರೆ ಕೆಂಪಗಲ್ಲ; ಸ್ವಲ್ಪ ಕಂದು. ಮಿರಮಿರನೆ ಮಿಂಚು. ಕಪ್ಪು ನಾಮದ ಹಾಗೆ ಬೀಜಾಂಕುರ ಪ್ರದೇಶ. ಆರೇಳು ಬೀಜಗಳಿದ್ದವು. ಅವು ಚೆನ್ನೆ ಬೀಜಗಳೆಂದೂ ಅವುಗಳಿಂದಲೇ ಚೆನ್ನೆಮಣೆ ಆಡುತ್ತಾರೆಂದೂ ನಮ್ಮಣ್ಣ ಹೇಳಿದ. ಚೆನ್ನೆ ಮಣೆ ಆಡುವುದರಿಂದ ಅದಕ್ಕೆ ಚೆನ್ನೆ ಬೀಜಗಳೆಂದು ಹೆಸರು ಬಂತೋ, ಚೆನ್ನೆ ಬೀಜಗಳಿಂದ ಆಡುವುದರಿಂದ ಆ ಮಣೆಗೆ ಚೆನ್ನೆ ಮಣೆ ಎಂಬ ಹೆಸರು ಬಂತೋ ನಾ ಕಾಣೆ. ಬಹುಶಃ ಮೊದಲಿನ ಕಾರಣವೇ ಸರಿ ಇರಬಹುದೇನೋ, ಏಕೆಂದರೆ ಹಂಗರಕನ ಮರದಿಂದ ಉದ್ಭವವಾದ ಅದು ಹಂಗರಕನ ಬೀಜವೇ ಆಗಿರಬೇಕು. ಮತ್ತು ಚೆನ್ನೆ ಮಣೆ ಆಡುವುದಕ್ಕೆ ಆ ಬೀಜವೇ ಬೇಕಿಲ್ಲ. ಹುಣಸೆ ಬೀಜ, ಸೀಗೇಕಾಯಿಯ ಬೀಜವೂ ನಡೆಯುತ್ತದೆ. ಇಲ್ಲದಿದ್ದರೆ ಹೊಯಿಗೆ ರಾಶರಿಯಲ್ಲಿ ದೊರೆಯುವ ನುಣುಪಾದ ಕಲ್ಲುಗಳೂ ನಡೆಯುತ್ತವೆ. ಆದರೆ ಅವು ಯಾವುದಕ್ಕೂ ಚೆನ್ನೆಬೀಜವೆಂದು ಕರೆಯುವುದಿಲ್ಲ ನೋಡಿ. ಅಲ್ಲದೆ ಚೆನ್ನೆ ಬೀಜಕ್ಕೆ ಇರುವ ಗ್ಲಾಮರ್ ಇವು ಯಾವುದಕ್ಕೂ ಇಲ್ಲವೇ ಇಲ್ಲ. ಚೆನ್ನೆಮಣೆಯನ್ನು ಹಂಗರಕನ ಬೀಜದಿಂದಲೇ ಆಡುವುದು ಸೂಕ್ತ ಎಂಬ ಕಾರಣಕ್ಕೇ ಅದಕ್ಕೆ ಚೆನ್ನೆಬೀಜವೆಂಬ ಹೆಸರು ಬಂದುದು ಎಂದರೆ ಸರಿಯಾದೀತು.
ಚೆನ್ನೆಬೀಜ ಮತ್ತು ಚೆನ್ನೆಮಣೆಗಳೆರಡೂ ನನ್ನ ಬಾಲ್ಯದ ನೆನಪುಗಳಲ್ಲಿ ಹಾಸುಹೊಕ್ಕಾಗಿ ನಿಂತುಬಿಟ್ಟಿದೆ. ಬೀಜದ ಹೊಳಪಿನಂತೆ ಅದು ಆಗಾಗ ಮಿರುಗುತ್ತಲೇ ಇರುತ್ತದೆ. ಆ ಬೀಜಗಳಂತೆ ಆ ನೆನಪುಗಳೂ ಗ್ಲಾಮರ್. ನಮ್ಮ ಮನೆಯ ಅಟ್ಟದ ಮೇಲೆ ಒಂದು ಚೆನ್ನೆಮಣೆ ಇತ್ತು. ಅದನ್ನು ಯಾವ ಕಾಲದಲ್ಲಿ ಮಾಡಿದ್ದೋ ಏನೋ? ಯಾರು ಯಾವಾಗ ಮಾಡಿದ್ದು ಎಂದು ಮನೆಯ ಹಿರಿಯರನ್ನು ಕೇಳಿದ್ದರೆ ಅವರು ಅದಕ್ಕೊಂದು ಕಥೆ ಉಪಕಥೆಗಳನ್ನು ಸೇರಿಸಿ ಸಂದರ್ಭ ಸಹಿತ ಸ್ಪಷ್ಟೀಕರಣ ನೀಡುತ್ತಿದ್ದರೇನೋ! ಮರಿಯಾಚಾರಿಯೋ ಮಂಜಪ್ಪ ಆಚಾರಿಯೋ ನಮ್ಮ ಮನೆಯನ್ನು ಕಟ್ಟುವ ಸಮಯದಲ್ಲಿ ಬೀಟೆಯ ಮರದ ತುಂಡಿನಿಂದ ತಮ್ಮ ಕುಸುರಿ ಕಲೆಯ ನೈಪುಣ್ಯವನ್ನೆಲ್ಲ ಎರಕ ಹೊಯ್ದು ಅದನ್ನು ತಯಾರಿಸಿದ್ದಂತೆ. ಮನೆ ತುಂಬ ಮಕ್ಕಳು. ಅವರು ಆಡುವುದಕ್ಕೆ ಆಟಿಕೆಯೊಂದನ್ನು ಮಾಡಿಕೊಟ್ಟರೆ ಅವರಲ್ಲದೆ ಅವರ ಸಂತತಿಯವರೆಲ್ಲರ ನೆನಪಿನಲ್ಲಿ ಗೋಡೆಗೆ ಹೊಡೆದ ಗಿಣಿಗೂಟದಂತೆ ಕದಲದೇ ಇರಬಹುದು ಎಂದು ಲೆಕ್ಕ ಹಾಕಿಯೇ ಅದನ್ನು ಮಾಡಿದ್ದು.
ಚೆನ್ನೆಮಣೆಯ ಪ್ರತಿ ಸಾಲಿನಲ್ಲಿ ತಲಾ ಎಂಟು ಮನೆಗಳು. ಇರುವುದು ಎರಡೇ ಸಾಲು. ಎರಡೂ ಕೊನೆಯಲ್ಲಿ ಒಂದೊಂದು ಖಜಾನೆ. ಇಬ್ಬರು ಒಂದೊಂದು ಕಡೆ ಕುಳಿತು ಆಡುವುದು. ಒಬ್ಬೊಬ್ಬರಿಗೆ ಒಂದೊಂದು ಖಜಾನೆ. ಅವರವರು ಗೆದ್ದ ಹರಳುಗಳನ್ನು ಅವರವರ ಖಜಾನೆಯಲ್ಲಿ ತುಂಬುತ್ತ ಹೋಗುವುದು. ಕಪ್ಪಗೆ ಮಿರುಗುತ್ತಿದ್ದ ಚೆನ್ನೆಮಣೆಯಲ್ಲಿ ಕೆಂಪಗೆ ಮಿರುಗುವ ಚೆನ್ನೆಬೀಜಗಳು ಚಂದವೋ ಚೆಂದ. ಒಂದೊಂದು ಮನೆಯಲ್ಲಿ ನಾಲ್ಕು ನಾಲ್ಕು ಹರಳುಗಳನ್ನು ಹಾಕುವುದು. ಐದು ಐದು ಹರಳುಗಳನ್ನು ಹಾಕಿ ಆಡುವ ಆಟವೂ ಉಂಟು. ಆ ಆಟಗಳ ನಿಯಮಗಳನ್ನೆಲ್ಲ ನಾವು ನಮ್ಮ ಅಕ್ಕ ಅಣ್ಣಂದಿರಿಂದ ಕೇಳಿ ತಿಳಿದದ್ದು. ಮನೆಯಿಂದ ಮನೆಗೆ ಹರಳುಗಳನ್ನು ಹಾಕುತ್ತ ಹೋಗುವಾಗ ಎದುರಾಳಿಯ ಮನೆಯ ಹರಳುಗಳನ್ನು ಲಪಟಾಯಿಸುವಾಗ ಒಮ್ಮೊಮ್ಮೆ ಕೈಯಿಂದ ಹರಳುಗಳನ್ನು ಜಾರಿಸದೆಯೇ ಮೋಸದ ಆಟವಾಡುವುದೂ ಇರುತ್ತಿತ್ತು. ಅಟದ ನಡುವೆ ನಾವು ಜಗಳ ಮಾಡಿಕೊಂಡರೆ ಅಣ್ಣ ಅಥವಾ ಅಕ್ಕ ಮ್ಯಾಚ್ ರೆಫರಿ, ಅಂಪಾಯರ್ ಎಲ್ಲ ಆಗಿ ತೀಪರ್ು ನೀಡುತ್ತಿದ್ದರು. ಮನೆಯಲ್ಲಿ ಆಗ ಈಗಿನಂತೆ ಹೊತ್ತು ಕಳೆಯಲು ಟೀವಿಗೀವಿ ಇರಲಿಲ್ಲ. ಮಳೆಗಾಲದಲ್ಲಾದರೆ ಹೊರಗೆಬೀಳುವಂತೆಯೇ ಇರಲಿಲ್ಲ. ಕೇರಂಬೋಡರ್್ ಇತ್ಯಾದಿಗಳನ್ನು ಕಂಡಿದ್ದೇ ಇರಲಿಲ್ಲ. ಹೀಗಾಗಿ ಚೆನ್ನೆಮಣೆಯೇ ನಮ್ಮ ಸರ್ವಸ್ವವಾಗಿತ್ತು. ಒಮ್ಮೊಮ್ಮೆ ನಮ್ಮವ್ವನೂ ಆಟದಲ್ಲಿ ಸೇರಿಕೊಂಡು ಆಟಕ್ಕೆ ರಂಗೇರಿಸುತ್ತಿದ್ದಳು. ಬೇಸಿಗೆಯ ರಜೆಯಲ್ಲಿ ಊರಿಗೆ ಬರುತ್ತಿದ್ದ ನಮ್ಮ ಅಕ್ಕನ ಮಕ್ಕಳಿಗೂ ಚೆನ್ನೆಮಣೆ ಬೇಕೇಬೇಕು.
ಚೆನ್ನೆಬೀಜದಿಂದ ನಾವು ಸರಿಯೋ ಮಿಗಿಲೋ ಆಟವನ್ನೂ ಆಡುತ್ತಿದ್ದೆವು. ಕೈಯ ಮುಷ್ಟಿಯಲ್ಲಿ ಒಂದಿಷ್ಟು ಬೀಜವನ್ನು ಹಿಡಿದುಕೊಳ್ಳುವುದು. ಎದುರಾಳಿಗೆ ಸರಿಯೋ ಮಿಗಿಲೋ ಎಂದು ಕೇಳುವುದು. ಸರಿ ಮಿಗಿಲು ಎಂದರೆ ಸಮ ಬೆಸ ಎಂದು. ಸರಿ ಎಂದಾಗ ಸಮ ಸಂಖ್ಯೆಯಲ್ಲಿ ಹರಳು ಇದ್ದರೆ ಅದನ್ನು ಎದುರಾಳಿಗೆ ಕೊಡಬೇಕು. ಅದೇ ರೀತಿ ಮಿಗಿಲು ಎಂದಾಗ ಬೆಸ ಸಂಖ್ಯೆಯಲ್ಲಿ ಹರಳು ಇದ್ದರೆ ಎದುರಾಳಿಗೆ ಕೊಡಬೇಕು. ಒಂದುವೇಳೆ ಹೇಳಿದ್ದು ತಪ್ಪಾದರೆ ಕೈಯಲ್ಲಿ ಎಷ್ಟು ಹರಳು ಇದೆಯೋ ಅಷ್ಟನ್ನು ಎದುರಾಳಿಯು ನೀಡಬೇಕು. ಇದೊಂದು ರೀತಿಯಲ್ಲಿ ಜೂಜು ಇದ್ದಹಾಗೆ. ಅದೃಷ್ಟದಾಟ. ಹಣಹಾಕುತ್ತಿಲಿಲ್ಲ ಅಷ್ಟೇ.
ಸರಿ ಬೆಸ ಹೇಳುವಾಗ ಮುಷ್ಟಿಯ ಮೇಲೆ ಕೈಯಿಂದ ತಟ್ಟಿ ನಮ್ಮ ಹಸ್ತದ ಹಿಂಭಾಗದ ಚರ್ಮವನ್ನು ಅಲ್ಲಿ ಎಷ್ಟು ಗೆರೆಗಳು ಬರುತ್ತವೆ ಎನ್ನುವುದನ್ನು ಎಣಿಸಿ ಸರಿ ಬೆಸ ಹೇಳುತ್ತಿದ್ದುದನ್ನು ನೆನಪಿಗೆ ತಂದುಕೊಂಡಾಗ ಈಗ ನಗುಬರುತ್ತದೆ. ನಾವು ಚಿಕ್ಕವರಿದ್ದಾಗ ತೆಂಗಿನ ಮರಕ್ಕೆ ಗೂಟದ ರೂಪದಲ್ಲಿ ತಂದು ನಿಲ್ಲಿಸಿದ ಹಂಗರಕನ ಮರ ಇಂದಿಗೂ ಹಾಗೆಯೇ ಇದೆ. ತೆಂಗಿನ ಮರ ನಾಲ್ಕಾರು ವರ್ಷದ ಕೆಳಗೆ ಸತ್ತು ಹೋಗಿದೆ. ಹಂಗರಕನ ಮರ ಉದುರಿಸುವ ಚೆನ್ನೆ ಬೀಜಗಳಿಗಾಗಿ ಅದನ್ನು ಕಡಿಯದೆ ಹಾಗೇ ಉಳಿಸಿದ್ದಾನೆ ನಮ್ಮಣ್ಣ. ಈಗ ರಜೆಯಲ್ಲಿ ನಮ್ಮ ಮಕ್ಕಳು ಊರಿಗೆ ಹೋದಾಗ ಅದೇ ಚೆನ್ನೆ ಮಣೆಯನ್ನು ಆಡುತ್ತಾರೆ. ಚೆನ್ನೆ ಬೀಜಗಳ ಹೊಳಪಿಗೆ ಪುಳಕಗೊಳ್ಳುತ್ತಾರೆ. ಚೆನ್ನೆ ಬೀಜದ ಜೂಜಿನಲ್ಲಿ ಒಬ್ಬರನ್ನೊಬ್ಬರು ಯಾಮಾರಿಸಲು ನೋಡಿ ಲಡಾಯಿ ಮಾಡಿಕೊಳ್ಳುತ್ತಾರೆ. ಮತ್ತೆ ನಾನು ಮ್ಯಾಚ್ ರೆಫರಿ, ಅಂಪಾಯರ್ ಎಲ್ಲ ಆಗುತ್ತೇನೆ. ಚೆನ್ನೆ ಮಣೆಯ ಜನಕ ಮಾಯಾಚಾರಿ, ಮಂಜಪ್ಪ ಆಚಾರಿಯ ಬಗ್ಗೆ ಕಥೆ ಹೇಳುವಂತೆ ಮಕ್ಕಳಿಗೆ ಹೇಳುತ್ತೇನೆ. ಮತ್ತೆ ನನ್ನ ಬಾಲ್ಯದ ನೆನಪುಗಳಿಗೆ ಜಾರಿಕೊಳ್ಳುತ್ತೇನೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.