ಕನ್ನಡದ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರಾದ ಕೃಷ್ಣಮೂರ್ತಿ ಪುರಾಣಿಕರ ಕೊನ್ನಾರ ಕಿಂಕಿಣಿ' ಕಾದಂಬರಿಯು ಅವರ ಬರೆವಣಿಗೆಯ ಆರಂಭದ ದಿನಗಳಲ್ಲಿ ರಚನೆಗೊಂಡಿದ್ದು. ಇದು ಪ್ರಕಟವಾದದ್ದು 1961ರ ಆಗಸ್ಟ್‌ ತಿಂಗಳಿನಲ್ಲಿ. ಸರಿಸುಮಾರು ಅರವತ್ತು ವರ್ಷಗಳ ನಂತರ ಈ ಕಾದಂಬರಿಯ ಮರು ಅವಲೋಕನ ಮಾಡುವಾಗ ಕೆಲವು ಹೊಳಹುಗಳು ನಮಗೆ ಇರಬೇಕಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ನವೋದಯ ಮತ್ತು ಪ್ರಗತಿಶೀಲ ಲೇಖಕರು ಕಾದಂಬರಿ ಪ್ರಕಾರಕ್ಕೆ ಒಂದು ಗಟ್ಟಿಯಾದ ಪರಂಪರೆಯನ್ನು ಹಾಕಿಕೊಟ್ಟಿದ್ದರು. ಐತಿಹಾಸಿಕ ಕಾದಂಬರಿಗಳು, ಸಾಮಾಜಿಕ ಕಾದಂಬರಿಗಳು, ಅನ್ಯಭಾಷೆಯಿಂದ ಅನುವಾದಗೊಂಡ ಕಾದಂಬರಿಗಳು ಎಲ್ಲವೂ ಹುಲುಸಾಗಿ ಎಂಬಂತೆ ಆಗ ಇದ್ದವು. ಆದರೆ ಓದುಗನ ಹಸಿವನ್ನು ಹಿಂಗಿಸುವಷ್ಟು ಅವು ಸಮೃದ್ಧವಾಗಿ ಇರಲಿಲ್ಲ ಎನ್ನುವುದೂ ಸತ್ಯ. ಈ ಹಸಿದ ಓದುಗನೇ ಪುರಾಣಿಕರ ಆದ್ಯತೆಯಾಗಿತ್ತು. ಮೂರ್ನಾಲ್ಕು ತಾಸುಗಳಲ್ಲಿ ಓದಿ ಮುಗಿಸಬಹುದಾದ, ಓದುಗನ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವ ಕಾದಂಬರಿಗಳನ್ನು ಪ್ರಕಟಿಸುವ ಪ್ರಕಾಶನ ಉದ್ಯಮವೂ ಇತ್ತು. ಪುರಾಣಿಕರು ಓದುಗನ ಹಸಿವನ್ನು ಹಿಂಗಿಸುವ ಜನಪ್ರಿಯ ಮಾರ್ಗವನ್ನು ಆಯ್ದುಕೊಂಡರು. ಅದರಲ್ಲಿಯೇ ಸಾಧ್ಯವಾದಷ್ಟು ಮಟ್ಟಿಗೆ ಕೆಲವು ಆದರ್ಶ ವಿಚಾರಗಳನ್ನು ಪ್ರತಿಪಾದಿಸಲು ಯತ್ನಿಸಿದರು. ಕೊನ್ನಾರ ಕಿಂಕಿಣಿ’ ಕಾದಂಬರಿಯ ನಾಯಕ ಜಯರಾಮ. ಅವನೊಬ್ಬ ಕಲಾವಿದ. ಎಲ್ಲರನ್ನೂ ಸುಲಭವಾಗಿ ನಂಬಿಬಿಡುವ ಮುಗ್ಧ. ಎಲ್ಲರ ಎಲ್ಲ ತಪ್ಪುಗಳನ್ನೂ ಕ್ಷಮಿಸಿಬಿಡಬಲ್ಲ ಉದಾರ ಹೃದಯಿ. ದಾರಿ ತಪ್ಪಿದವರನ್ನು ಸರಿದಾರಿಯಲ್ಲಿ ನಡೆಯಿಸಬೇಕೆಂಬ ಸುಧಾರಣಾ ಮನೋಭಾವದವನು. ಆದರೆ ಯಾವುದನ್ನೂ ಸರಿಯಾಗಿ ನಿಭಾಯಿಸಲಾಗದೆ ವಿಫಲನಾಗುತ್ತಾನೆ. ದೃಢವಾದ ಮನಸ್ಸು ಇಲ್ಲದ ಒಬ್ಬ ದುರ್ಬಲ ಆತ. ಆತ ಮೊದಲು ಪ್ರೇಮಿಸಿ ಮದುವೆಯಾಗಿದ್ದು ಹೇಮಲತೆ ಎಂಬಾಕೆಯನ್ನು. ಆಕೆ ಸುದರಿಯಲ್ಲ. ಅಲ್ಲದೆ ಅವಳು ಒಂದು ಕಣ್ಣಿಲ್ಲದವಳು. ಆದರೆ ಅವಳು ಅವನ ಕಲೆಗೆ ಪ್ರೇರಣೆಯಾಗಿದ್ದಳಂತೆ. ಅದು ಹೇಗೆಂಬ ವಿವರ ಕಾದಂಬರಿಯಲ್ಲಿ ಇಲ್ಲ. ಅವಳು ಅವನಿಗೆ ವಂಚನೆ ಮಾಡುತ್ತಾಳೆ. ಅವನ ಕಲಾಕೃತಿಗಳನ್ನು ಅವಳು ಕದ್ದು ಮಾರುತ್ತಾಳೆ. ಅವನ ಹಣವನ್ನು, ಹೊನ್ನನ್ನು ಕಳವು ಮಾಡುತ್ತಾಳೆ. ಆದರೂ ಅವಳನ್ನು ಕ್ಷಮಿಸುವಂಥ ಉದಾರತೆ ಅವನಲ್ಲಿತ್ತು. ಆದರೆ ಅವಳು ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅವಳ ಆತ್ಮಹತ್ಯೆಯ ಕಾರಣವೇನು ಎಂಬ ಸ್ಪಷ್ಟವಾದ ವಿವರಗಳು ಕಾದಂಬರಿಯಲ್ಲಿ ಇಲ್ಲ. ಜಯರಾಮನ ಏಕಮುಖ ಪ್ರಲಾಪದಲ್ಲಿ ಮಾತ್ರ ಅವಳು ಬಂದುಹೋಗುತ್ತಾಳೆ. ಅವಳನ್ನು ಜಯರಾಮನಿಗೆ ಪರಿಚಯಿಸಿದ ಪುಟ್ಟಾಚಾರಿ, ಹೇಮಲತೆಯ ಪ್ರಿಯಕರ ದೇಸಾಯಿ ಇವರ ಪಾತ್ರಗಳ ಪರಿಚಯವಾದರೂ ಅವೆಲ್ಲವೂ ಜಯರಾಮನ ಗ್ರಹಿಕೆಯಲ್ಲಿ ಹಿಡಿದಿಟ್ಟ ಚಿತ್ರಗಳು ಅಷ್ಟೇ. ಹೀಗಾಗಿ ಈ ಪಾತ್ರಗಳಿಗೆ ಪುರಾಣಿಕರು ನ್ಯಾಯವನ್ನು ಒದಗಿಸಿದ್ದಾರೆ ಎಂದು ತೋರುವುದಿಲ್ಲ.
ಪುಟ್ಟಾಚಾರಿನ್ನು ಸಾಯುವಹಾಗೆ ಹೊಡೆದು ಮಳೆಯಲ್ಲಿಯೇ ಮನೆಯಿಂದ ಹೊರಡುವ ಜಯರಾಮನ ಮುಂದಿನ ಭೇಟಿ ಲಗಮಿ ಮತ್ತು ಅವಳ ತಂದೆ ಭಿಕ್ಕೂನ ಜೊತೆ ಆಗುತ್ತದೆ. ಅವರು ಕಳ್ಳಭಟ್ಟಿ ತಯಾರಕರಾಗಿರುತ್ತಾರೆ. ಅವರಿಗೊಬ್ಬ ಯಜಮಾನ ಕೋಜೇರಿ. ಅವನಿಗೆ ಲಗಮಿಯ ಮೇಲೆ ಮನಸ್ಸು. ಲಗಮಿಯನ್ನು ಹೇಗಾದರೂ ಅಲ್ಲಿಂದ ಪಾರುಮಾಡಬೇಕು, ಕೋಜೇರಿಯ ಮನಸ್ಸು ಬದಲಾಯಿಸಿ ಕಳ್ಳಭಟ್ಟಿ ತಯಾರಿಕೆಯು ತಪ್ಪು ಎಂಬುದರ ಅರಿವು ಮೂಡಿಸಬೇಕು ಎನ್ನುವ ಸಂಕಲ್ಪವನ್ನು ಜಯರಾಮ ತಳೆಯುತ್ತಾನೆ. ಆದರೆ ಅದರಲ್ಲಿ ಅವನು ವಿಫಲನಾಗುತ್ತಾನೆ. ಲಗಮಿ ಕೋಜೇರಿಯ ಕಾಮಕ್ಕೆ ಬಲಿಯಾಗುತ್ತಾಳೆ. ಪ್ರಪಾತದಿಂದ ಅವಳು ಬಿದ್ದು ಸಾಯುವಳು. ಅವಳ ತಂದೆಯನ್ನು ಕೋಜೇರಿ ಗುಂಡಿಟ್ಟು ಸಾಯಿಸುತ್ತಾನೆ.
ಜಯರಾಮನ ಮುಂದಿನ ಭೇಟಿ ಧೋಂಡೀಬಾ ಮತ್ತು ಅವನ ಮಗಳು ಸಾವಂತ್ರಿಯ ಜೊತೆ ಆಗುತ್ತದೆ. ಅವರ ಸಹವಾಸದಲ್ಲಿ ಕೆಲವು ದಿನ ಉಳಿದು ಮನಸ್ಸಿನ ನೆಮ್ಮದಿಯನ್ನು ಪಡೆದುಕೊಂಡ ಜಯರಾಮ ಅಲ್ಲಿಂದ ಹೊರಡುವುದು ಅನಿವಾರ್ಯವಾಗುತ್ತದೆ. ಸಾವಂತ್ರಿಯ ಜೊತೆಗಿನ ಅವನ ಸಲುಗೆಯ ಒಡನಾಟ ಧೋಂಡೀಬಾನಿಗೆ ಸರಿಬರುವುದಿಲ್ಲ. ಮರಾಠಾ ಸರದಾರನ ವಂಶದವನಾದ ಧೋಂಡೀಬಾ ತನ್ನ ಮಗಳಿಗೆ ಬುದ್ಧಿಹೇಳುವಾಗ ಕದ್ದು ಕೇಳಿಸಿಕೊಳ್ಳುವ ಜಯರಾಮ ಅಲ್ಲಿಂದ ಅವರಿಗೆ ಹೇಳದೆಯೇ ಮತ್ತೆಲ್ಲಿಗೋ ಹೋಗುತ್ತಾನೆ. ಒಬ್ಬ ಅಂತರ್‌ಪಿಶಾಚಿಯ ಹಾಗೆ ಗೊತ್ತುಗುರಿ ಇಲ್ಲದ ಬದುಕು ಅವನದಾಗುತ್ತದೆ.
ಪುರಾಣಿಕರು ಈ ಕಾದಂಬರಿಯನ್ನು ಬರೆದಾಗ ಆಗಷ್ಟೇ ಸ್ವಾತಂತ್ರ್ಯ ಲಭಿಸಿದ ದಿನಗಳಾಗಿದ್ದವು. ಕೇವಲ ಹದಿನಾಲ್ಕು ವರ್ಷಗಳು, ಅಂದರೆ ಗಾಂಧಿ ಪ್ರತಿಪಾದಿಸಿದ ತತ್ವಗಳು ಇನ್ನೂ ಜನರ ಮನಸ್ಸಿನಲ್ಲಿ ಇದ್ದವು. ಗಾಂಧೀಜಿಯನ್ನು ಸ್ವತಃ ನೋಡಿದ, ಅವರ ಮಾತುಗಳನ್ನು ಕಿವಿಯಾರೆ ಕೇಳಿದ, ಅವರ ಚಳವಳಿಯಲ್ಲಿ ಭಾಗಿಯಾದ ಜನರು ಆಗ ಇದ್ದರು. ಗಾಂಧೀಜಿಯ ಮುಖ್ಯ ಸಂದೇಶ ಗ್ರಾಮಸ್ವರಾಜ್ಯ ಮತ್ತು ಮದ್ಯಪಾನ ಮುಕ್ತ ಸಮಾಜವಾಗಿತ್ತು. ಮದ್ಯಪಾನದಿಂದಾಗುವ ಸಾಮಾಜಿಕ ಅನಿಷ್ಟಗಳನ್ನು ಕುರಿತು ಅವರು ಹೇಳಿದ್ದರು. ಆದರೆ ಗಾಧೀಜಿಯ ಹೆಸರಿನಲ್ಲಿ ಅಧಿಕಾರ ಹಿಡಿದವರಿಗೆ ಪಾನಪ್ರತಿಬಂಧವನ್ನು ಜಾರಿಗೆ ತರುವುದರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದ್ದನ್ನು ಪುರಾಣಿಕರು ವಿಷಾದದಿಂದ ಮಂಡಿಸುತ್ತಾರೆ. ಖಾದಿಯ ಮರೆಯಲ್ಲಿ, ಪೊಲೀಸರ ನೆರವಿನೊಂದಿಗೇ ಕಳ್ಳಭಟ್ಟಿ ಸಾರಾಯಿಯ ದಂಧೆ ನಡೆಯುತ್ತಿದ್ದುದನ್ನು ಅವರು ವರ್ಣಿಸುತ್ತಾರೆ. ಯಲ್ಲವ್ವನ ಮೂರ್ತಿಯ ಕೆಳಗಡೆಯೇ ಕಳ್ಳಭಟ್ಟಿ ಬಾಟ್ಲಿಗಳನ್ನು ಇಟ್ಟು ಮಾರುವುದು. ಈ ಮಾರಾಟದಲ್ಲಿ ಹೆಂಗಸರೂ ಭಾಗಿಯಾಗಿರುವುದು, ರಾಜಕಾರಣಗಳ ಕುಮ್ಮಕ್ಕೂ ಇದಕ್ಕೆ ಇರುವುದು, ಇದನ್ನು ತಡೆಯುವುದಕ್ಕೆ ಯಾರಲ್ಲೂ ಪ್ರಾಮಾಣಿಕವಾದ ಬುದ್ಧಿ ಇಲ್ಲದಿರುವುದು ಕಾದಂಬರಿಯಲ್ಲಿ ಚಿತ್ರಿತವಾಗಿದೆ. ಈಗಂತೂ ಸಾರಾಯಿಯ ಆದಾಯವು ರಾಜಸ್ವದ ಬಹುದೊಡ್ಡ ಭಾಗವಾಗಿದೆ. ಸರ್ಕಾರವೇ ಸಾರಾಯಿಯನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಆದರೆ ಸ್ವಾತಂತ್ರ್ಯದ ಹೊಸತರಲ್ಲಿ ಗಾಂಧೀಜಿಯ ಆದರ್ಶಗಳನ್ನು ಪಾಲಿಸುವ ತೋರಿಕೆಯಲ್ಲಿ ಕಳ್ಳಭಟ್ಟಿ ತಯಾರಿಕೆಯು ಒಂದು ದೊಡ್ಡ ದಂಧೆಯಾಗಿತ್ತು.
ಪುರಾಣಿಕರು ಒಂದು ಜ್ವಲಂತವಾದ ಸಮಸ್ಯೆಯನ್ನು ವಸ್ತುವನ್ನಾಗಿ ಆರಿಸಿಕಂಡಿದ್ದರೂ ಅದನ್ನು ನಿರ್ವಹಿಸುವಲ್ಲಿ ದೊಡ್ಡ ಸೋಲನ್ನು ಕಂಡಿದ್ದಾರೆ. ಕಳ್ಳಭಟ್ಟಿ ದಂಧೆಯ ವಿರುದ್ಧ ದನಿಯನ್ನು ಎತ್ತುವವನು ಒಬ್ಬ ದುರ್ಬಲನಾದ ಕಲಾವಿದ. ತನ್ನ ಬದುಕನ್ನೇ ಸರಿಯಾಗಿ ಕಟ್ಟಿಕೊಳ್ಳದ ಕಲಾವಿದ ಜಯರಾಮ ಸಮಾಜದ ಡೊಂಕನ್ನು ಅದು ಹೇಗೆ ತಿದ್ದಬಲ್ಲ? ಹೆಣ್ಣು ಕಂಡಲ್ಲಿ ಕರಗಿ ಬಿಡುವ ಅವನು ಕಳ್ಳಭಟ್ಟಿ ದಂಧೆಯ ಕದೀಮರನ್ನು ಹೇಗೆ ಎದುರುಹಾಕಿಕೊಳ್ಳಬಲ್ಲ? ಅಷ್ಟಕ್ಕೂ ಅವನಲ್ಲಿ ಯಾವುದೇ ನಿರ್ದಿಷ್ಟವಾದ ಯೋಜನೆಗಳೂ ಇರಲಿಲ್ಲ. ಯಾವುದೇ ಚಳವಳಿಯ ಬೆಂಬಲವೂ ಅವನಿಗೆ ಇರಲಿಲ್ಲ. ಯಾವುದೇ ಹೋರಾಟವನ್ನು ರೂಪಿಸುವ ದೃಢ ಸಂಕಲ್ಪವೂ ಅವನಲ್ಲಿ ಇರಲಿಲ್ಲ. ಕೆಟ್ಟದ್ದನ್ನು ಕಂಡಾಗ ಅದು ಹಾಗಿರಬಾರದು, ಅದನ್ನು ಸುಧಾರಿಸಬೇಕು ಎನ್ನುವ ಕಲಾವಿದನ ಮನಸ್ಸು ಮಾತ್ರ ಅವನಿಗಿತ್ತು. ಕಲಾವಿದನಿಗೆ ಸಮಾಜ ತಿದ್ದುವ ಜವಾಬ್ದಾರಿ ಇಲ್ಲವೆ ಎಂಬ ಚರ್ಚೆಯ ಮಾತು ಕಾದಂಬರಿಯ ಒಡಲಲ್ಲಿ ಇದ್ದರೂ ಅದು ಕೇವಲ ಮಾತಿಗಾಗಿ ಮಾತ್ರ. ಜಯರಾಮನ ದೃಷ್ಟಿಯಲ್ಲಿ ಕಳ್ಳಭಟ್ಟಿ ತಯಾರಿಕೆ ಒಂದು ಅಕ್ರಮ ಕೆಲಸ. ರಾಷ್ಟ್ರಘಾತಕ ಕೆಲಸ. ಇದನ್ನಸರಕಾರ ಸಹಿಸೂದಿಲ್ಲ. ಈ ಮಾತನ್ನು ಆತ ಭಿಕ್ಕೂನಿಗೆ ಮನದಟ್ಟು ಮಾಡಲು ಪ್ರಯತ್ನಿಸುತ್ತಾನೆ. ಆ ಮಾತು ಕೇಳಿದ ಭಿಕ್ಕೂಗೆ ಜಯರಾಮ ಒಬ್ಬ ಎಳೇ ಕೂಸಿನಾಂಗ ಕಾಣುತ್ತಾನೆ. ವಾಸ್ತವ ಪ್ರಪಂಚದ ಅರಿವಿಲ್ಲದ ಅವಾಸ್ತವದ ವ್ಯಕ್ತಿ ಜಯರಾಮ ಎಂಬ ಭಿಕ್ಕೂನ ವ್ಯಾಖ್ಯಾನ ಸರಿಯಾಗಿಯೇ ಇದೆ ಅನ್ನಿಸುವುದು.ಪಾನಪ್ರತಿಬಂಧ ಕಾಯ್ದೆ ಜಾರಿಗೆ ಬಂದ ದಿನವೇ ಕಳ್ಳಭಟ್ಟಿ ತಯಾರಿಕೆಯು ಒಂದು ದಂಧೆಯಾಗಿ ಬೆಳೆಯುತ್ತದೆ. ಅದು ಹೊಟ್ಟೆಪಾಡಿನ ಗ್ರಾಮೋದ್ಯೋಗವಾಗುತ್ತದೆ. ಯಾವದೇ ಸುಧಾರಣಾ ಕ್ರಮಗಳನ್ನು ಸರ್ಕಾರಗಳು ಜಾರಿಗೆ ತರುವಾಗ ಅದರ ಸಾಧಕ ಬಾಧಕಗಳನ್ನು ಪರಿಗಣಿಸಬೇಕಾಗುತ್ತದೆ. ಪಾನಪ್ರತಿಬಂಧ ಜಾರಿಗೆ ತಂದಮೇಲೆ ಬಡವರಿಗೆ ಸೂಕ್ತವಾದ ಗ್ರಾಮೋದ್ಯೋಗವನ್ನು ನೀಡಿ ಅವರನ್ನು ಹಸಿವಿನಿಂದ ಮುಕ್ತಗೊಳಿಸಬೇಕಿದ್ದುದು ಸರ್ಕಾರದ ಕರ್ತವ್ಯವಾಗಿತ್ತು. ಮಾಡಲು ಕೆಲಸವಿಲ್ಲದೆ, ಕೃಷಿಗೆ ಜಮೀನು ಇಲ್ಲದೆ, ಇದ್ದರೂ ನೀರಾವರಿ ಇಲ್ಲದೆ ಜನರು ಕಳ್ಳಭಟ್ಟಿಯಂಥ ದಂಧೆಯಲ್ಲಿ ತೊಡಗಿ ಹೊಟ್ಟೆಹೊರೆದುಕೊಳ್ಳುವುದು ಸರ್ಕಾರದ (ಬಡವರನ್ನು ಬಡಕೊಂಡು ತಿನ್ನೂ ಸರ್ಕಾರಕ್ಕ ಏನ ಹೇಳಬೇಕು? ಶ್ರೀಮಂತಗೋಳು ಏನ ಮಾಡಿದರೂ ಚಂದ?- ಪುಟ 38) ವೈಫಲ್ಯ ಎಂದು ಪುರಾಣಿಕರು ಪ್ರತಿಪಾದಿಸುವಂತಿದೆ. -ನಾಗರಿಕ ಯುಗದಲ್ಲಿ ಅನಾಗರಿಕ ವ್ಯವಹಾರವು ಒಳ್ಳೇ ಭರದಿಂದ ಸಾಗುತ್ತಿರುವುದು ನಮ್ಮ ಸಮಾಜದ ಜೀವನದ ಮೇಲೆ, ನಾವು ದೊರಕಿಸಿಕೊಂಡ ತಂತ್ರ್ಯದ ಮೇಲೆ ಬೆಳಕುಚೆಲ್ಲುವುದಾದರೂ ಸತ್ಯ ಸಂಗತಿಯಾಗಿತ್ತು- (ಪುಟ28). ಅದಕ್ಕೇ ಬಿಕ್ಕೂ ತನ್ನ ಮಗಳಿಗೆ, `ಮಣ್ಣಾಗ ಹಾಕ ಆ ಕಾಯ್ದೆ ಒಯ್ದು. ಮಾಡಿದರೆ ಕುಡಿಯೂದ ಬಿಡಾಕ ಬರತೈತೇನು?’ ಎಂದು ಹೇಳುವುದು. ಹಾಗೆಯೇ ಹೆಂಡ ತಯಾರಕರು ಮತ್ತು ಕುಡುಕರ ಬಗ್ಗೆ ಲಗಮಿಯ ವ್ಯಾಖ್ಯಾನ ನೋಡಿ- ನಾಚಿಕೆ ಬಿಟ್ಟ ಜಾತಿ, ಈದಗದಾ ಮಾಡತೈತಿ. ಇದರಾಗ ಎಲ್ಲಾ ಜಾತೀನೂ ಕೂಡೇತಿ. ಇದನ್ನ ಕುಡಿಯೂ ಮಂದಿನೂ ಎಲ್ಲಾ ಜಾತ್ಯಾಗ ಐತೆ; ಈ ಕುಡುಕರ ಸಲುವಾಗಿ ಕುಡುಕರದೊಂದು ಜಾತಿನೇ ಆಗೇತಿ ಈ ಗುಡ್ಡದಾಗ- (ಪುಟ 42) ಮತ್ತು, -ಕುಡಿಯೂ ಜನಾ ಕುಡಿಯೂದು ಬಿಟ್ಟರ ಭಟ್ಟೀ ಹೂಡೂ ಜನ ಬ್ಯಾರೆ ದಗದಾ ನೋಡಕೋತಾರ. ಈಗಂಕಾ ಗನ ಕುಡಿಯೂತ ಹತ್ತೇತಿ ಜನಾ- ಎಂಬ ಲಗಮಿಯ ಮಾತಿಗೆ ಜಯರಾಮನ ಉತ್ತರ, ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದು. ಸ್ವಾತಂತ್ರ್ಯ ಅಂದರೆ ಅದು ಒಂದು ಬೆಕ್ಕಿನ ಮರಿಯ ಹಾಗೆ ಇರುವುದೆ ಎಂಬ ಲಗಮಿಯ ಪ್ರಶ್ನೆ ಮುಗ್ಧತೆಯಿಂದ ಕೂಡಿದಂತೂ ಅಲ್ಲ. ಅದಕ್ಕೆ ಜಯರಾಮನ ಉತ್ತರ ಮಾರ್ಮಿಕವಾಗಿದೆ- ಆದರೆ .. ಅದನ್ನು ಸಾಕಲು ನಮಗೆ ಬರದಾಗಿದೆ.- ನಿಜ, ಸ್ವಾತಂತ್ರ್ಯ ಎಂಬುದು ಚಪಲ ಬೆಕ್ಕಿನ ಹಾಗೆ. ಇಲಿಯನ್ನು ಹಿಡಯಬೇಕಾದ ಬೆಕ್ಕು ಸುಮ್ಮನೆ ಮಲಗಿಬಿಟ್ಟರೆ ಉದ್ದೇಶ ಸಾಧನೆಯಾಗದು.
ದೊರೆತ ಸ್ವಾತಂತ್ರ್ಯದ ಸರಿಯಾದ ಬಳಕೆ ಆಗಲಿಲ್ಲ ಎಂಬ ಹತಾಶೆ ಪುರಾಣಿಕರಲ್ಲಿದೆ. ಇದನ್ನು ನವ್ಯ ಪ್ರಜ್ಞೆ ಎಂದು ಕರೆಯಬಹುದು. ನವೋದಯ ಪಾತ್ರಗಳ ಉದಾತ್ತತೆಗೆ ಮನಸೋತ ಪುರಾಣಿಕರು ಬದಲಾದ ಕಾಲಘಟ್ಟದ ಸಂಕೀರ್ಣತೆಗೆ ಒಗ್ಗುವ ಗಟ್ಟಿಯಾದ ಕಥಾನಾಯಕನನ್ನು ರೂಪಿಸುವಲ್ಲಿ ಎಡವಿದ್ದಾರೆ. ನವೋದಯದವರಂತೆ ಆದರ್ಶದ ಹಳಹಳಿಕೆ ಇದೆ. ಆದರೆ ಆ ಆದರ್ಶವನ್ನು ಸಾಕಾರಗೊಳಿಸಬಲ್ಲ ಪ್ರಗತಿಶೀಲ ನಾಯಕನಿಲ್ಲ. ತನ್ನನ್ನೇ ನಿಕಷಕ್ಕೆ ಒಡ್ಡಿಕೊಳ್ಳಬಲ್ಲ ನವ್ಯದ ನಾಯಕನ ಪ್ರಾಮಾಣಿಕತೆಯೂ ಇಲ್ಲಿಯ ಜಯರಾಮನಿಗೆ ಇಲ್ಲ. ಇನ್ನು ತುಂಬ ಕ್ಲೀಷೆ ಎನ್ನಿಸುವ ವರ್ಣನೆಗಳಿವೆ. ಕಾದಂಬರಿಯ ಮೊದಲ ವಾಕ್ಯ ಹೀಗಿದೆ- ಭೀಮಾಕಾರದ ತೆರೆಯೊಂದು ಭೋರ್ಗರೆಯತ್ತ ಬಂದು ಜಯರಾಮನ ಮೇಲೆ ಹೊರಳಿ ಹೋಯಿತು.- ಇದನ್ನು ಓದಿದಾಗ ಅದೊಂದು ಸಮುದ್ರ ತೀರ ಎಂದು ಓದುಗನಿಗೆ ಅನಿಸುತ್ತದೆ. ಆದರೆ ಅದು ಒಂದು ಹೊಳೆಯಾಗಿರುತ್ತದೆ. ಹೊಳೆಯ ತೆರೆ ಭೋರ್ಗರೆಯುವಾದಲಿ ಭೀಮಾಕಾರ ತಾಳುವುದಾಗಲಿ ಸಾಧ್ಯವೆ? ಇಂಥ ಹಲವು ಉದಾಹರಣೆಗಳನ್ನು ಕಾದಂಬರಿಯ ಒಡಲಿನಿಂದ ಆಯ್ದುಕೊಡಬಹುದು.
ಕೃಷ್ಣಮೂರ್ತಿ ಪುರಾಣಿಕರ ಮುಂದೆ ಓದಿಗೆ ಹಸಿದಿದ್ದ ಒಂದು ಅಕ್ಷರಸ್ಥ ಸಮೂಹವಿತ್ತು. ಆ ಹಸಿವಿನ ತಣಿವಿಗೆ ಇದನ್ನು ಅವರು ಬರೆದಿದ್ದರೂ ಸ್ವಾತಂತ್ರ್ಯ ಗಳಿಸಿದ ಹೊಸತರಲ್ಲಿ ಅದರ ಭ್ರಮನಿರಸನದ ಒಂದು ಮುದ್ದೆಯನ್ನು ತುಂಬ ವಿಸ್ತಾರವಾಗಿ ಪ್ರತಿಪಾದಿಸಿದ್ದಾರೆ. ಈ ಮೂಲಕ ಕಲಾವಿದ, ಸಾಹಿತಿ ಸಮಾಜದ ಆಗುಹೋಗುಗಳಿಗೆ ಮೂಕ ಪ್ರೇಕ್ಷಕನಾಗಿರಬಾರದು ಎಂದು ಕಾದಂಬರಿಯ ಆಂತರ್ಯದಲ್ಲಿ ಹೇಳಿದ ಮಾತುಗಳಿಗೆ ಪ್ರಾಮಾಣಿಕವಾಗಿದ್ದಾರೆ ಎಂದು ಹೇಳಲೇಬೇಕು.