ಕೆ.ಸತ್ಯನಾರಾಯಣ ಅವರ ಹೊಸ ಪುಸ್ತಕ

ಕೆ.ಸತ್ಯನಾರಾಯಣ ಅವರ ಹೊಸ ಪುಸ್ತಕ `ಚಿಕ್ಕಪುಟ್ಟಮ್ಮನವರ ಗೃಹನ್ಯಾಯ’. ಇದಕ್ಕೆ ಅವರು ಟೆಕ್ಸ್ಟ್‌ ಬುಕ್ ಸ್ತ್ರೀವಾದ ಮತ್ತು ಹವ್ಯಾಸಿ ಸ್ತ್ರೀವಾದಿಗಳ ಬರವಣಿಗೆಯ ಆಚೆಗೂ ಇರುವ ಹೆಣ್ಣು ಕಥೆಗಳು ಎಂದು ಉಪಶೀರ್ಷಿಕೆ ನೀಡಿದ್ದಾರೆ. ಇಲ್ಲಿಯ ಕಥಾ ಜಗತ್ತಿನ ಹಿಂದೆ ಇರುವ ಇನ್ನೊಂದು ಜಗತ್ತು ನನಗೆ ಸಿಕ್ಕಿದೆಯೆನಿಸಿದಾಗ ಬರವಣಿಗೆ ತಾನೇತಾನಾಗಿ ರೂಪುಗೊಂಡಿದೆ ಎಂದು ಲೇಖಕರು ಆರಂಭದಲ್ಲಿ ಹೇಳಿಕೊಂಡಿದ್ದಾರೆ. ಆ ಇನ್ನೊಂದು ಜಗತ್ತುಎಂದರೆ ಸೃಷ್ಟಿಕ್ರಿಯೆಯ ಶರೀರದ ಒಳಗಿರುವ ಆತ್ಮ. ಅದೇ ಧ್ವನಿ. ಪ್ರತಿಯೊಂದು ಕೃತಿಯೂ ಸಾರ್ಥಕವೋ ವಿಫಲವೋ ಎನ್ನುವುದು ಅದು ಹೊರಡಿಸುವ ಧ್ವನಿ ಅಂದರೆ ಇನ್ನೊಂದು ಜಗತ್ತಿನ ಅನಾವರಣ ಎಷ್ಟರಮಟ್ಟಿಗೆ ಆಗಿದೆ ಎನ್ನುವುದನ್ನು ಅವಲಂಬಿಸಿರುತ್ತದೆ.


ಇದರಲ್ಲಿ ಒಟ್ಟೂ ಏಳು ಬರೆಹಗಳು ಇವೆ. ನಾನು ಇವುಗಳನ್ನು ಕತೆಗಳು ಎಂದು ಕರೆಯುವುದಕ್ಕೆ ಬದಲಾಗಿ ಕಥಾಚರಿತೆ ಎಂದು ಕರೆಯುವದಕ್ಕೆ ಇಷ್ಟಪಡುತ್ತೇನೆ. ಕತೆ ಎಂದರೆ ಸಂಪೂರ್ಣ ಕಾಲ್ಪನಿಕ ಪಾತ್ರಪ್ರಪಂಚ ಇರುತ್ತದೆ. ಆದರೆ ಈ ಕೃತಿಯಲ್ಲಿಯ ಪಾತ್ರಗಳನ್ನು ನಾವು ಎಲ್ಲಿಯೋ ತೀರ ಇತ್ತೀಚೆ ನಮ್ಮ ನಿಜ ಜೀವನದಲ್ಲಿ ಸಂಧಿಸಿದ್ದೇವೆ, ಲೋಕಾಭಿರಾಮವಾಗಿ ಮಾತನಾಡಿದ್ದೇವೆ, ಅವರೊಂದಿಗೆ ಚಹಾ ಕುಡಿದಿದ್ದೇವೆ, ಜಗಳವಾಡಿದ್ದೇವೆ ಎಂದೆಲ್ಲ ಅನಿಸುತ್ತವೆ. ಇವು ಜೀವನ ಚರಿತ್ರೆಯೋ, ಆತ್ಮಚರಿತ್ರೆಯೋ ಆಗುವುದರಿಂದ ಸ್ವಲ್ಪದರಲ್ಲೇ ಪಾರಾಗಿವೆ. ಮಹಾಭಾರತವನ್ನು ಕಾವ್ಯವೋ ಚರಿತ್ರೆಯೋ ಎಂದು ನಿರ್ಧರಿಸಲಾಗದಂಥ ಸಂದಿಗ್ಧದಲ್ಲಿ ನಾವಿದ್ದೇವೆ. ನಿಜ ಬದುಕಿಗೆ ತೀರ ಹತ್ತಿರವಾದಂಥ ಕೃತಿಗಳಲ್ಲಿ ನಮಗೆ ಇಂಥ ಅನುಭವ ಸಹಜವಾದದ್ದು. ಹಾಗಂತ ಇದರಲ್ಲಿ ಕಥನಗಾರಿಕೆಯ ಕುಸುರಿಗೆ ಊನವೇನೂ ಬಂದಿಲ್ಲ.


ಇಲ್ಲಿರುವ ಏಳು ಕತೆಗಳು ಸ್ತ್ರೀ ಚೈತನ್ಯದ ವಿವಿಧ ಮಜಲುಗಳನ್ನು ಅನಾವರಣಗೊಳಿಸುತ್ತವೆ. ಚಿಕ್ಕಪುಟ್ಟಮ್ಮ ಎಂಬ ಹೆಸರನ್ನು ಗಮನಿಸಿ. ಚಿಕ್ಕ ಮತ್ತು ಪುಟ್ಟ- ಚಿಕ್ಕಪುಟ್ಟ ಒಂದು ದ್ವಿರುಕ್ತಿಯ ಪದ. ಒಂದೇ ಅರ್ಥ ನೀಡುವ ಜೋಡಿ ಪದ. ಈ ಆಧುನಿಕ ಕಾಲದಲ್ಲಿ ಮಗುವಿಗೆ ಹೆಸರಿಡುವುವದಕ್ಕೆ ಎಷ್ಟೆಲ್ಲ ತಲೆಕೆಡಿಸಿಕೊಳ್ಳುತ್ತಾರೆ ಹೆತ್ತವರು ಅಲ್ಲವೆ? ಕ್ರಿಕೆಟಿಗ ವಿರಾಟ ಕೊಹ್ಲಿಯ ಇಬ್ಬರು ಮಕ್ಕಳ ಹೆಸರನ್ನು ನೋಡಿ. ಆದರೆ ಈ ಕತೆಯ ಚಿಕ್ಕಪುಟ್ಟಮ್ಮನು ಹೆಸರು ಅಷ್ಟೊಂದು ಮುಖ್ಯವಲ್ಲದ ಕಾಲದವಳು ಅಥವಾ ಹಾಗೆ ಭಾವಿಸಿದ್ದ ದಲಿತ ಜನಾಂಗಕ್ಕೆ ಸೇರಿದವಳು. ಆದರೆ ಅವಳ ಮಗ ಮತ್ತು ಮಗಳು ವಿದ್ಯಾವಂತರು. ಮಗ ಮೇಲ್ಜಾತಿಯ ಹುಡುಗಿಯನ್ನು ಮದುವೆಯಾಗಿದ್ದ. ಮಗಳು ಎರಡು ಬಾರಿ ಎಂಎಲ್‌ಎ ಆಗಿ, ಮಂತ್ರಿಯೂ ಆಗಿದ್ದ ತನ್ನ ತಾಯಿಯನ್ನು ಹಳೆಯ ಕಾಲದವಳು ಎಂದು ಹಂಗಿಸುವವಳು. ರಾಜಕೀಯಕ್ಕೆ ಬರಬೇಕು ಎಂಬ ತಾಯಿಯ ಬಯಕೆಯನ್ನು ತಿರಸ್ಕರಿಸುವವಳು. ಒಬ್ಬ ಪಂಜಾಬಿಯನ್ನು ಮದುವೆಯಾಗಿ ವಿದೇಶದಲ್ಲಿ ನೆಲೆಯಾದವಳು. ಸೊಸೆಯೂ ಅತ್ತೆಯ ಸ್ಥಾನಮಾನದಿಂದ ತನ್ನ ಘನತೆ ಹೆಚ್ಚಿದೆ ಎಂದು ಭಾವಿಸುವವಳಲ್ಲ. ಇದು ಚಿಕ್ಕಪುಟ್ಟಮ್ಮನಿಗೆ ಒಳಗೊಳಗೇ ನೋವು ನೀಡುವ ಸಂಗತಿ.


ಈ ಕತೆಯಲ್ಲಿ ಚಿಕ್ಕಪುಟ್ಟಮ್ಮನ ಮೈದುನ ಮುಡುಕಪ್ಪ ಮತ್ತು ಸ್ವಾತಂತ್ರ್ಯ ಯೋಧ ಶ್ರೀರಂಗಧಾಮಯ್ಯನವರ ಕುಟುಂಬದ ವಿವರಗಳೂ ಬರುತ್ತವೆ. ಶ್ರೀರಂಗಧಾಮಯ್ಯ ಸ್ವಾತಂತ್ರ್ಯ ಹೋರಾಟದ ಕಾಲದ ಆದರ್ಶಗಳನ್ನೇ ಇನ್ನೂಜಪಿಸುತ್ತಿರುವವರು. ಕಾಲ ಬದಲಾದಂತೆ ಅವರು ಬದಲಾಗಲೇ ಇಲ್ಲ. ಸ್ಥಗಿತತೆ ಮತ್ತು ಚಲನೆಯ ತಿಕ್ಕಾಟದಲ್ಲಿ ಜೀರ್ಣಗೊಂಡ ಅವರ ವ್ಯಕ್ತಿತ್ವ ಸಮಕಾಲೀನ ಸಮಾಜದಲ್ಲಿ ವಿಫಲಗೊಂಡಂತೆ ಕಾಣಿಸುತ್ತದೆ. ಅದು ವಾಸ್ತವ ಕೂಡ ಹೌದು. ಚಿಕ್ಕಪುಟ್ಟಮ್ಮ ಮತ್ತು ಅವರ ಮೈದುನ ಮುಡುಕಪ್ಪ ಇವರ ಸಂಸಾರದ ಮೇಲ್ಮುಖ ಚಲನೆಯನ್ನು ಚಿಕ್ಕಪುಟ್ಟಮ್ಮನ ಮಗಳು ಭಾವನಾ ಗುರುತಿಸುವ ರೀತಿ ಮುಖ್ಯವೆನಿಸುತ್ತದೆ. ಒಂದಷ್ಟು ಜನ. ಒಂದಷ್ಟು ಸಂಸಾರಗಳು ಮಾತ್ರ ಬದಲಾಗುವುದರಿಂದ ಏನೂ ಆಗುವುದಿಲ್ಲ.. ಅವರೆಲ್ಲ ವಿಚಿತ್ರ ಜನಗಳಿಗೆ, ದುರಂತಕ್ಕೆ ಉದಾಹರಣೆಗಳಾಗಿ ಕಾಣುತ್ತಾರೆ ಅಷ್ಟೇ. ಒಂದಷ್ಟು ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಕಂಡುಬಂದರೆ ಅದನ್ನು ಅನುಕರಿಸುವವರು ಕೂಡ ಹೆಚ್ಚಾಗುತ್ತಾರೆ. ಎಲ್ಲ ಸರಿಹೋಗುತ್ತದೆ. ಬಹುಶಃ ಕತೆಯು ಹೊರಡಿಸಬೇಕೆಂದಿದ್ದ ಧ್ವನಿ ಇದೇ ಆಗಿರಬಹುದು.

ಎರಡನೆಯ ಕತೆ `ಈಶಾನ್ಯೆಯರು’. ಈಶಾನ್ಯದ ರಾಜ್ಯಗಳಿಂದ ಹೊಟ್ಟೆಪಾಡಿಗೆ ಉದ್ಯೋಗ ಅರಸಿಕೊಂಡು ಕಾಸ್ಮೋಪಾಲಿಟನ್‌ ಸ್ವರೂಪಕ್ಕೆ ಹೊರಳಿಕೊಳ್ಳುತ್ತಿರುವ ಬೆಂಗಳೂರಿಗೆ ಬರುತ್ತಿರುವ ಹದಿಹರೆಯದ ಹೆಣ್ಣುಗಳ ಸಮಸ್ಯೆ, ಅವರನ್ನು ಯಾವ ರೀತಿಯಲ್ಲಿ ಶೋಷಣೆ ಮಾಡಲಾಗುತ್ತಿದೆ, ಅವರಲ್ಲಿಯ ಬಡತನ, ಹಣದಾಸೆಗಾಗಿ ಎಲ್ಲದಕ್ಕೂ ಸಿದ್ಧರಾಗುವ ಅವರ ಮನಸ್ಥಿತಿ ಇತ್ಯಾದಿ ವಿವರಗಳಿವೆ. ಈಶಾನ್ಯ ರಾಜ್ಯದವರ ಕುರಿತು ಮರುಚಿಂತನೆಗೆ ಈ ಕತೆ ನಮ್ಮನ್ನು ದೂಡುತ್ತದೆ. ಇದರಲ್ಲಿಯ ಒಂದು ಪಾತ್ರ ಆತ್ಮಹತ್ಯೆ ಮಾಡಿಕೊಂಡ ಐಎಎಸ್‌ ಅಧಿಕಾರಿ. ಹಾಗೆಯೇ ಆತ ಕೂಡ ಈಶಾನ್ಯೆಯೊಬ್ಬಳ ಬಲೆಗೆ ಬಿದ್ದದ್ದು, ಆತನ ಐಎಎಸ್‌ ಪ್ರೇಯಸಿ, ರಿಯಲ್‌ ಎಸ್ಟೇಟ್‌ ಬಿಸಿನೆಸ್‌ನ ಕನಸುಗಳು ಎಲ್ಲ ತಳಕುಹಾಕಿಕೊಂಡು ಸಮಕಾಲೀನ ಕಾಲಘಟ್ಟದ ವ್ಯಕ್ತಿಗಳೊಂದಿಗೆ ತಾಳೆಯಾದರೆ ಅಚ್ಚರಿಯೆನಿಸದು.

`ಸಕೇಶಿಯರ ಕಥನದ ದಿಕ್ಕು’ ಮೂರನೆ ಕತೆ. ಇಲ್ಲಿ ಕೋಡಗಪುರ ಎಂಬ ಊರಿನ ಬ್ರಾಹ್ಮಣ ಹೆಣ್ಣುಮಕ್ಕಳು ಮದುವೆಯಾಗಿ ಗಂಡ ಸತ್ತು ವಿಧವೆಯರಾದ ಮೇಲೆ ಮಠದಲ್ಲಿ ಕೆಲಸಕ್ಕೆ ಸೇರಿಕೊಳ್ಳುವುದು, ನಂತರ ಅಲ್ಲಿ ಕಾಮದಬೊಂಬೆಗಳಾಗಿ ಗರ್ಭಧರಿಸಿ ಯಾರೋ ಅನ್ಯಜಾತಿಯವರೊಂದಿಗೆ ಬೇರೊಂದು ಊರಿಗೆ ಓಡಿ ಹೋಗುವುದು, ಅಲ್ಲಿ ಅವರು ಸುಖ ಸಂಸಾರ ನಡೆಸುತ್ತಿರುವುದು, ಇದನ್ನೆಲ್ಲ ಒಬ್ಬ ಸಮಾಜಶಾಸ್ತ್ರಜ್ಞ ತನಗೆ ತಿಳಿದಂತೆ ದಾಖಲಿಸಿದ್ದ. ಅದನ್ನುಕಲ್ಪನಾ ಜೋಯಿಸ್‌ ಗ್ರಹಿಸಿದ ರೀತಿಯನ್ನು ಕೆಎಸ್ಕೆ ಗೌಡನ ಪತ್ರದ ಸಾಲುಗಳು ಸಂಕ್ಷಿಪ್ತಗೊಳಿಸಿ ಹೇಳಿದಂತೆ ಕಾಣುತ್ತವೆ. “ನಮ್ಮ ಜನಾಂಗದವರಿಗೂ ನಮ್ಮ ಹೆಂಗಸರು ಸರಿಯಾಗಿ ಅರ್ಥವಾಗಲಿಲ್ಲ. ಅರ್ಥವಾಗುವುದೂ ಬೇಕಿರಲಿಲ್ಲ. ಹೆಂಗಸರನ್ನು ಯಾವಾಗಲೂ ಹೋಲಿಕೆಯಲ್ಲೇ ನೋಡೋ ಅಭ್ಯಾಸ ನಮಗೆ ಮತ್ತು ಎಲ್ಲ ಮನುಷ್ಯರಿಗೆ” ಎನ್ನುವ ಸಾಲುಗಳು ಬಹುಶಃ ಕತೆಯ ತಿರುಳೂ ಆಗಿರಬಹುದು.…. ನೋಡೋಕೆ ಇಷ್ಟವಿಲ್ಲದೆ ಇರುವುದರಿಂದ ಎದುರಿಗಿದ್ದರೂ ಅದು, ಅವರು ಕಾಣುವುದಿಲ್ಲ. ಹಾಗಾಗಿ ನಮ್ಮ ಮನಸ್ಸಿನ ಸುಖಕ್ಕೆ, ಅಗತ್ಯಕ್ಕೆ ತಕ್ಕಂತೆ ಮಾತ್ರವೇ ವಿಚಾರ ಮಾಡಿಕೊಂಡು, ಬರೆದುಕೊಂಡು, ಅದು ಎಷ್ಟೇ ಚೆನ್ನಾಗಿದ್ದರೂ,, ಅದನ್ನು ಇಡೀ ಲೋಕವೇ ಮೆಚ್ಚಿದರೂ….'' ಎಂಬ ಗೌಡನ ಪತ್ರದ ಸಾಲುಗಳು ಸೃಜನಶೀಲ ವ್ಯಕ್ತಿಯ ಗ್ರಹಿಕೆಯ ಮಿತಿಯ ಕುರಿತೂ ಆಗಿರಬಹುದು. ಸ್ತ್ರೀಲೋಕದ ಇನ್ನೊಂದು ತಲ್ಲಣ ಇಲ್ಲಿದೆ.

`ಶೇಕದಾರ ಅತ್ತೆ' ಹಳೆಯ ಕಾಲದ ಟಿಪಿಕಲ್‌ ಹಳ್ಳಿಯ ಗಟ್ಟಿಗಿತ್ತಿ ಹೆಂಗಸು. ಒಂದು ರೀತಿಯಲ್ಲಿ ಹಾಸ್ಯ ಬರೆಹ ಎನ್ನಿಸಿಕೊಂಡರೂ ಸ್ತ್ರೀಸ್ವಭಾವದ ಒಂದು ಮುಖವನ್ನು ಇದು ತೋರಿಸುತ್ತದೆ.

`ಲೇಖಕಿಯರ ಸಂಘದ ಚಾರ್ಜ್‌ಶೀಟ್’ ಕತೆಯು ಸ್ತ್ರೀವಾದಿ ಚಿಂತನೆಯನ್ನು ಒರೆಗೆ ಹಚ್ಚುತ್ತದೆ.
`ಸಾವಿತ್ರಿ ಬರುತ್ತಾರಂತೆ! ಬಂದರಂತೆ!’ ಕತೆಯು ವೃದ್ಧಾಪ್ಯದಲ್ಲಿ ಗಂಡು ಹೆಣ್ಣು ಜೊತೆಯಾಗಿ ಬದುಕಬೇಕಾದ ಅನಿವಾರ್ಯತೆಯ ಕಡೆಗೆ ಬೆರಳು ಮಾಡುತ್ತದೆ. ತಾನೇ ಬಯಸಿ ಮದುವೆಯಾದ ರಂಗನಾಥನ ರಂಗಿನಾಟದಿಂದಬೇಸತ್ತು ಆತನಿಂದ ವಿಚ್ಛೇದನ ಪಡೆದು ಸಾವಿತ್ರಿ ಅಮೆರಿಕಕ್ಕೆ ಚಿಕ್ಕ ಮಗನನ್ನು ಕರೆದುಕೊಂಡು ಉನ್ನತ ವ್ಯಾಸಂಗಕ್ಕೆ ಎಂದು ಹೋದವಳು 36 ವರ್ಷಗಳ ಬಳಿಕ ಗ್ಯಾಂಗ್ರೀನ್‌ ಆಗಿ ಕಾಲನ್ನು ಕಳೆದುಕೊಂಡು ಬದುಕುತ್ತಿದ್ದ ಗಂಡನ ಜೊತೆ ಬದುಕಿನ ಉಳಿದ ಕಾಲವನ್ನು ಕಳೆಯುವುದಕ್ಕೆಂದು ಬರುತ್ತಾಳೆ. ಅವಳ ಮಗ ಕೂಡ ತಂದೆ ಎನ್ನಿಸಿಕೊಂಡಿದ್ದವನನ್ನು ನೋಡಲು ಬರುವುದಕ್ಕೆ ಒಪ್ಪುವುದಿಲ್ಲ. ಅಂತಹ ಅನಿವಾರ್ಯತೆ ಅವಳ ಬದುಕಿನಲ್ಲಿ ಏನಾಯಿತು ಎಂಬುದರ ವಿವರಗಳು ಇಲ್ಲ. ಎಲ್ಲವನ್ನೂ ಓದುಗರ ಊಹೆಗೆ ಬಿಡುತ್ತಾರೆ ಲೇಖಕರು.


`ಸ್ವಿಗ್ಗಿ ಹುಡುಗಿ’ ಕೊನೆಯ ಕತೆ. ಮಹಾನಗರಗಳ ಆಧುನಿಕ ಬದುಕಿನ ಭಾಗವಾಗಿರುವ ಆನ್‌ಲೈನ್‌ ಶಾಪಿಂಗ್‌ ಮತ್ತು ಅದನ್ನು ಮನೆ ಬಾಗಿಲಿಗೆ ತಂದೊಪ್ಪಿಸುವ ಒಂದು ಉದ್ಯೋಗಿಗಳ ವೃಂದ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಅವರಲ್ಲಿ ಹೆಣ್ಣುಮಕ್ಕಳೂ ಇದ್ದಾರೆ. ಮಹಾನಗರಗಳ ವಾಹನ ದಟ್ಟಣೆಯಲ್ಲಿ ವಾಹನ ಚಲಾಯಿಸಿಕೊಂಡು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದು ಹೆಣ್ಣುಮಕ್ಕಳಿಗೆ ತುಂಬ ಶ್ರಮದಾಯಕ ಕೆಲಸ. ಅಂತಹ ಕೆಲಸವನ್ನೂ ಹೆಣ್ಣುಮಕ್ಕಳು ಯಶಸ್ವಿಯಾಗಿ ನಿಭಾಯಿಸಬಲ್ಲರು ಎಂಬುದನ್ನು ಹೇಳಲು ಕತೆ ಪ್ರಯತ್ನಿಸಿದೆ. ಸ್ವಿಗ್ಗಿ ಹುಡುಗಿಯ ಚಿಕ್ಕಚಿಕ್ಕ ವಿವರಗಳು, ಆ ಉದ್ಯೋಗದ ಒಳ ವಿವರಗಳನ್ನೆಲ್ಲ ಓದುಗರಿಗೆ ತಲುಪಿಸುವಲ್ಲಿ ಕತೆಗಾರರುಯಶಸ್ವಿಯಾಗಿದ್ದಾರೆ.


ಒಳನೋಟಗಳು ದಕ್ಕಿದರೆ ಸಮರ್ಥ ಕತೆಗಾರ ಯಾವ ವಸ್ತುವನ್ನೇ ಆದರೂ ಸುಂದರ ಕತೆಯಾಗಿಸಬಲ್ಲ ಎಂಬುದಕ್ಕೆ ಇಲ್ಲಿಯ ಏಳೂ ಕತೆಗಳು ಉದಾಹರಣೆಯಾಗಿವೆ.