ಕರಾವಳಿಯ ಹೊಳೆಸಾಲಿನಲ್ಲಾದರೆ ಸೆಪ್ಟೆಂಬರ್ ಕೊನೆಯೆಂದರೆ ಗೊರಬು, ಕಂಬಳಿಯನ್ನೆಲ್ಲ ಹೊಗೆ ಅಟ್ಟಕ್ಕೆ ಸೇರಿಸುವ ಸಮಯ. ಆಕಾಶಕ್ಕೇ ತೂತುಬಿದ್ದಂತೆ ಹೊಯ್ಯುವ ಮಳೆ ಆಗಂತೂ ಇರುವುದೇ ಇಲ್ಲ. ಬಂದರೆ ಬಂತು ಹೊದರೆ ಹೋಯ್ತು ಎನ್ನುವಂತೆ ಆಗೊಮ್ಮೆ ಈಗೊಮ್ಮೆ ಒಂದೆರಡು ಜುಮುರು ಮಳೆ ಬಂದು ಹೋಗಿಬಿಡುತ್ತದೆ. ಅದೇ ಬೆಂಗಳೂರಿನಲ್ಲಿ ಮಾತ್ರ ಎಲ್ಲ ಉಲ್ಟಾಪಲ್ಟಾ. ಸೆಪ್ಟೆಂಬರ್ ತಿಂಗಳಲ್ಲೇ ಜೋರು ಮಳೆ. ಮೂರು ದಿನ ರಾತ್ರಿ ಮಳೆ ಸುರಿುತೆಂದರೆ ಎಲ್ಲೆಲ್ಲಿ ತಗ್ಗು ಪ್ರದೇಶಗಳಿವೆಯೋ ಅಲ್ಲೆಲ್ಲ ನೀರು ನಿಂತು ಬಿಡುತ್ತಬೆ. ಪೂರ್ವಯೋಜಿತವಲ್ಲದ ಹೊಸಹೊಸ ಬಡಾವಣೆಗಳು ಈ ಬೆಂಗಳೂರಿನಲ್ಲಿ ಎಲ್ಲಿ ಬೇಕೋ ಅಲ್ಲೆಲ್ಲ ತಲೆ ಎತ್ತಿ ಮಳೆ ನೀರಿನ ಸಹಜ ಹರಿವಿಗೆ ಅಡ್ಡಿಪಡಿಸಿಬಿಟ್ಟಿವೆ. ಬೆಂಗಳೂರಿನ ಇಂಥ ಬಡಾವಣೆಗಳಲ್ಲಿ ಒಂದು ಹೆಗಡೆ ನಗರ. ಕೆಲವರು ಇದನ್ನು ಹೆಗ್ಗಡೆ ನಗರವೆಂದೂ ಕರೆಯುತ್ತಾರೆ. ಅದೇ ರೀತಿಯಲ್ಲಿ ಬಿಎಂಟಿಸಿ ಬಸ್ಸುಗಳೂ ಬೋರ್ಡುಗಳನ್ನು ತಗುಲಿಸಿಕೊಂಡು ಓಡಾಡುತ್ತವೆ. ಹೆಗಡೆನಗರಕ್ಕೆ ಹೆಗಡೆನಗರವೇ ಒಂದು ಕಾಲದಲ್ಲಿ ಸ್ಲಂ ಆಗಿತ್ತು. ಥಣಿಸಂದ್ರ ಎಂಬ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಈ ಹೆಗಡೆನಗರ ಅಸ್ತಿತ್ವಕ್ಕೆ ಬಂದದ್ದು ರಾಮಕೃಷ್ಣ ಹೆಗಡೆ ಎಂಬ ಮುಖ್ಯಮಂತ್ರಿಯವರು ಈ ರಾಜ್ಯವನ್ನು ಆಳುತ್ತಿದ್ದ ಕಾಲದಲ್ಲಿ. ಅವರಿಗೆ ಬೇಕಾದ ಸಂಸದರೊಬ್ಬರು ತಮ್ಮ ವೋಟ್‌ಬ್ಯಾಂಕನ್ನು ಭದ್ರಪಡಿಸಿಕೊಳ್ಳಲು ಸಕಲ ಧರ್ಮಗಳ ಬಡವರನ್ನೆಲ್ಲ ಕರೆತಂದು ಇಪ್ಪತ್ತು ಮೂವತ್ತು ಅಳತೆಯ ನಿವೇಶನಗಳನ್ನು ಅವರಿಗೆ ಹಕ್ಕುಪತ್ರದ ಮೂಲಕ ನೀಡಿ ಸಾವಿರ ಕುಟುಂಬಗಳನ್ನು ಅಲ್ಲಿ ಸ್ಥಾಪಿಸಿ ಬಿಟ್ಟಿದ್ದರು. ಹೀಗಾಗಿ ಈ ಸ್ಲಂಗೆ ಹೆಗಡೆನಗರ ಎಂಬ ಹೆಸರು ಬಂತು. ಮೊನ್ನೆ ಮೊನ್ನೆ ತೀರಿಹೋದರಲ್ಲ, ಪ್ರಸಿದ್ಧ ವಿಜ್ಙಾನಿ ರಾಜಾರಾಮಣ್ಣ, ಅವರು ಸಂಸದರಾಗಿದ್ದ ಸಮಯದಲ್ಲಿ ಅವರ ಸಂಸದರ ನಿಧಿಯಿಂದ ಈ ಬಡವರ ಮನೆಗಳ ಸಾಲುಗಳ ನಡುವೆ ರಸ್ತೆಯೆಂಬ ರಸ್ತೆಗಳು ಆಗಿದ್ದವು. ಸಾವಿರ ಮನೆಗಳ ನಡುವೆ ಮೂರ‌್ನಾಲ್ಕು ಚರ್ಚುಗಳು, ಐದಾರು ಮಸೀದೆಗಳು, ಮುರುಗ, ಅಯ್ಯಪ್ಪ, ಶಿವ, ಗಣೇಶ, ಶನಿ, ಕೃಷ್ಣ, ಹನುಮಂತ ಮೊದಲಾದವರ ದೇವಾಲಯಗಳೂ ಇದ್ದವು. ಕನ್ನಡದವರಷ್ಟೇ ಅಲ್ಲದೆ ತೆಲುಗು, ತಮಿಳರು, ಮರಾಠರು ಎಲ್ಲರೂ ಅಲ್ಲಿ ಸೇರಿದ್ದರು. ಈ ಹೆಗಡೆನಗರವೆಂಬ ಬ್ರಹ್ಮಾಂಡದಲ್ಲಿ ತಮಿಳು ಮಾತನಾಡುವವರು ಎಷ್ಟು, ತೆಲುಗು ಮಾತನಾಡುವವರು ಎಷ್ಟು, ಕನ್ನಡದವರೇ ಎಷ್ಟು, ಹಿಂದೂಗಳೆಷ್ಟು, ಮುಸ್ಲಿಮರೆಷ್ಟು, ಕ್ರೈಸ್ತರೆಷ್ಟು, ಹಸಿರು ಕಾರ್ಡಿನವರೆಷ್ಟು, ಕೇಸರಿ ಕಾರ್ಡಿನವರೆಷ್ಟು ಎಂಬಿತ್ಯಾದಿ ಕಾನಿಶ್‌ಮಾರಿ ಬಗೆಗೆ ಅಲ್ಲಿಯ ಯಾರೊಬ್ಬರಿಗೂ ಆಸಕ್ತಿಯೆಂಬುದೇ ಇರಲಿಲ್ಲ. ಎರಡು ಹೊತ್ತು ಗಂಜಿಯನ್ನು ಗಳಿಸುವುದು ಹೇಗೆಂಬ ಚಿಂತೆಯಲ್ಲಿದ್ದ ಅವರಿಗೆ, ಇಂಥ ಕಾನಿಶ್‌ಮಾರಿಯ ಅಂಕಿ ಅಂಶಗಳನ್ನೆಲ್ಲ ತಮ್ಮ ಉದ್ಧಾರಕ್ಕೆ ಬಳಕೆಯಾಗದೆ ಇನ್ಯಾವುದೋ ಇನ್ಯಾರದೋ ಉದ್ದೇಶ ಸಾಧನೆಗೆ ಸಾಧನವಾಗುತ್ತದೆ ಎಂಬ ತಿರಸ್ಕಾರವೂ ಇತ್ತು. ಬೆಂಗಳೂರು ಎಷ್ಟು ಬೆಳೆಯಬಹುದು ಎಂಬುದು ಇದನ್ನು ನಿರ್ಮಿಸಿದ ಕೆಂಪೇಗೌಡನಿಗೇ ಗೊತ್ತಿರಲಿಲ್ಲ. ಅವನು ಹಳೆಯ ಕಾಲದವನು. ಆದರೆ ಹೊಸಕಾಲದವರಾದ ಹೆಗಡೆಯವರಿಗೂ ಬೆಂಗಳೂರು ಎಷ್ಟು ವೇಗವಾಗಿ ತನ್ನನ್ನು ಹಿಗ್ಗಿಸಿಕೊಳ್ಳುತ್ತದೆ ಎಂಬುದು ಊಹಿಸಿವುದಕ್ಕೂ ಸಾಧ್ಯವಾಗಿರಲಿಲ್ಲ. ಹಾಗಿಲ್ಲದಿದ್ದರೆ ಅವರು ವಿಧಾನಸೌಧಕ್ಕೆ ಇಷ್ಟೊಂದು ಹತ್ತಿರದಲ್ಲಿ ಕೊಂಪೆಯೊಂದನ್ನು ಹುಟ್ಟುಹಾಕುತ್ತಿರಲಿಲ್ಲ. ಕೊಂಪೆಯಾದರೂ ಸರಿಯೇ ಹೆಗಡೆನಗರವೊಂದು ಬೆಂಗಳೂರೆಂಬ ಮಹಾನಗರದಲ್ಲಿ ಅಸ್ತಿತ್ವವನ್ನು ಪಡೆಯುತ್ತಿದ್ದಂತೆಯೇ ಥಣಿಸಂದ್ರ, ಸರಪಾಳ್ಯ, ನಾಗವಾರಗಳ ನಾಗರಿಕರಿಗೆ ಬರಪೂರ ಬಸ್ಸುಗಳು ಸಿಗತೊಡಗಿದವು. ಹೆಗಡೆನಗರದ ನಿವಾಸಿಗಳೆಲ್ಲ ಬೆಳಿಗ್ಗೆಯೆಂದರೆ ತಮ್ಮ ಹೊಟ್ಟೆಪಾಡನ್ನು ಹುಡುಕಿಕೊಂಡು ಹೋಗುವುದು ಕೆ.ಆರ್.ಮಾರ್ಕೆಟ್, ಗೌರಿಪಾಳ್ಯ, ಮಾರತಹಳ್ಳಿ, ಯಲಹಂಕ ಇತ್ಯಾದಿ ಹತ್ತು ದಿಕ್ಕುಗಳಿಗೆ. ಮನೆ ಕಟ್ಟಿಸಿಕೊಟ್ಟ ತಪ್ಪಿಗೆ ಅವರಿಗೆ ಅಡ್ಡಾಡಲೆಂದು ಬಸ್ಸುಗಳನ್ನೂ ಓಡಾಡಿಸಲಾುತು. ಬಿಎಂಟಿಸಿಯ ಕುಖ್ಯಾತ ಮಾರ್ಗಗಳಲ್ಲಿ ಹೆಗಡೆನಗರದ ಮಾರ್ಗವೂ ಒಂದು ಎಂದು ಪ್ರಸಿದ್ಧ. ನಿರ್ವಾಹಕರು ಮತ್ತು ಅಲ್ಲಿಯ ನಿವಾಸಿಗಳ ನಡುವೆ ಅದೆಂಥದ್ದೋ ತಿಳಿವಳಿಕೆ. ಬಸ್ಸುಗಳೇ ಒಮ್ಮೊಮ್ಮೆ ಗೂಡ್ಸ್‌ಗಾಡಿಯಾಗುವುದೂ ಇದೆ. ಮೂರು ರುಪಾಯಿಯ ಟಿಕೇಟಿಗೆ ಒಂದು ರುಪಾಯಿ ತೆತ್ತು ಪಾರಾಗುವವರು ಅದರಲ್ಲಿ ಅನೇಕರಿದ್ದಾರೆ. ಟಿಕೇಟ್ ಇಲ್ಲದೆ ಪ್ರಯಾಣಿಸುವುದನ್ನು ಅಲ್ಲಿಯ ನಿವಾಸಿಗಳಿಗೆ ಬಿಎಂಟಿಸಿ ನಿರ್ವಾಹಕರು ಪರಿಚಯಿಸಿದರೋ ಅಥವಾ ಈ ನಿರ್ವಾಹಕರಿಗೇ ಆ ನಿವಾಸಿಗಳು ಕಲಿಸಿದರೋ ಎಂಬುದು ಅಧ್ಯಯನಯೋಗ್ಯ ವಿಷಯವಾಗಿದೆ. ನೀವೆಲ್ಲಾದರೂ ಅಪ್ಪಿತಪ್ಪಿ ಆ ಬಸ್ಸಿನಲ್ಲಿ ಪ್ರಯಾಣಿಸಿದಿರಿ ಎಂದರೆ ನಿರ್ವಾಹಕ ಮತ್ತು ಆ ನಿವಾಸಿಗಳ ನಡುವಿನ ವಿವಾದದಲ್ಲಿ ಮಧ್ಯಸ್ಥರಾಗುವ ಅಪಾಯದಲ್ಲಿ ಸಿಕ್ಕಿ ಬೀಳುತ್ತೀರಿ. ಮೂರು ರುಪಾಯಿ ಪ್ರಯಾಣದ ದೂರಕ್ಕೆ ಪ್ರಯಾಣಿಕ ಒಂದು ರುಪಾಯಿ ನೀಡುತ್ತಾನೆ. ನಿರ್ವಾಹಕ ಎರಡು ರುಪಾಯಿ ಕೊಡು ಎಂದು ಒತ್ತಾಯಿಸುತ್ತಾನೆ. ಆತ ಕೊಡುವುದಿಲ್ಲ, ಇವನು ಬಿಡುವುದಿಲ್ಲ. ಕೊನೆಗೆ ನಿರ್ವಾಹಕ ನಿಮ್ಮ ಹತ್ತಿರ, ‘ಮೂರು ರುಪಾಯಿ ಟಿಕೇಟಿಗೆ ಇವನು ಒಂದು ರುಪಾಯಿ ಕೊಡುತ್ತಿದ್ದಾನೆ. ಇದು ನ್ಯಾಯವಾ?’ ಎಂದು ಪ್ರಶ್ನಿಸುತ್ತಾನೆ. ನೀವು ಏನೆನ್ನಬಹುದು? ಏನಾದ್ರೂ ಹೇಳಲೇ ಬೇಕಲ್ಲ; ಇಲ್ಲಾಂದ್ರೆ ನಿಮಗೆ ಕಿವಿ ಕೇಳುವುದಿಲ್ಲ ಎಂದು ಅವರು ತೀರ್ಮಾನಿಸಿ ಬಿಡುತ್ತಾರೆ. ನೀವು ಏನೋ ಹೇಳಬೇಕು ಎಂದು ಗುಣಾಕಾರ ಭಾಗಾಕಾರ ಹಾಕುತ್ತಿರುವಾಗ ಪ್ರಯಾಣಿಕ ತನ್ನ ನಿಲವು ಬದಲಾುಸಿ ನಾಲ್ಕಾಣೆಯ ನಾಣ್ಯವೊಂದನ್ನು ಕಿಸೆಯ ತಳದಿಂದ ಎತ್ತಿ ನಿರ್ವಾಹಕನ ಕೈಗಿಡುತ್ತಾನೆ. ನಿರ್ವಾಹಕ, ಈಗ ನಾಲ್ಕಾಣೆ ಚಲಾವಣೆಯಲ್ಲಿಲ್ಲ ಎಂಬುದು ಗೊತ್ತಿಲ್ವೆ ಎಂದು ದಬಾಯಿಸುತ್ತಾನೆ. ನಿಮ್ಮ ಬಾಯಿಂದ ಮಾತು ಹೊರಬೀಳದಿದ್ದರೆ, ಇನ್ನೊಬ್ಬರನ್ನು ಮಧ್ಯಸ್ಥರನ್ನಾಗಿ ಮಾಡಲು ಆತ ಮುಂದಾಗುತ್ತಾನೆ. ಇಂಥ ಜಗಳ ಪಂಚಾಯ್ತಿಗಳ ನಡುವೆ ಗಾರೆ ಕೆಲಸ, ಗಿಲಾಯಿ ಕೆಲಸ, ಕರೆಂಟ್ ರಿಪೇರಿ, ಸೇಲ್ಸ್ ಮ್ಯಾನ್ ಇತ್ಯಾದಿ ಹಲವು ಕರ್ಮಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಇಲ್ಲಿಯ ಜನರು, ಒಂದೊಂದು ರಿನ್ ಸುಪ್ರೀಂ ಬಾರ್ ಬಳಸಿ ತೊಳೆದರೂ ಕೊಳೆ ಬಿಡದಂಥ ತಮಗೆ ತಾವೇ ರೂಪಿಸಿಕೊಂಡ ಯುನಿಫಾರ್ಮ್‌ಗಳನ್ನು ಧರಿಸಿ, ಜೊತೆಯಲ್ಲಿ ತಮ್ಮ ಕೆಲಸದ ಹಾರೆ, ಗುದ್ದಲಿ, ಗಿಲಾಯಿಯ ತಾಪಿ, ಕಟ್ಟಿಗೆಯ ತುಂಡುಗಳು, ಕೋಳಿಗಳು, ಬಟ್ಟೆಯ ಗಂಟುಗಳು ಇತ್ಯಾದಿ ಸಾಧನ ಸಲಕರಣೆಗಳು, ಗಂಟು ಮೂಟೆಗಳನ್ನೆಲ್ಲ ಆ ಬಸ್ಸುಗಳಲ್ಲೇ ಒಯ್ಯುತ್ತಿದ್ದುದರಿಂದ ಹೊಸ ಬಟ್ಟೆ ತೊಟ್ಟ ಯಾರಾದರೂ ಅದರಲ್ಲಿ ಏರಿದರೆಂದರೆ ಅವರ ಬಟ್ಟೆಯೂ ಇವರ ಯುನಿಫಾರ್ಮ್ ರೀತಿಯ ಬಣ್ಣ ತಳೆದೇ ತಳೆಯುತ್ತಿದ್ದವು. ಅಲ್ಲದೆ ಹೆಗಡೆ ನಗರದ ಬಸ್ಸೆಂದರೆ ಸೋಂಕು ರೋಗ ಪ್ರಸಾರದ ತೋಟ್ಟಿಯೆಂಬ ಮಾತು ಜನಜನಿತವಾಗಿತ್ತು. ಇಂಥ ತರಾವರಿ ಗುಣಲಕ್ಷಣಗಳ ಹೆಗಡೆ ನಗರಕ್ಕೆ ಹೋಗುವ ದಾರಿಯಲ್ಲಿರುವ ನಾಗವಾರ ಮತ್ತು ಸರಪಾಳ್ಯಗಳ ನಡುವಿನ ರಸ್ತೆ ಸೇತುವೆಯೊಂದು ಬೆಂಗಳೂರಿನ ಅಕಾಲಿಕ ಮಳೆಯಿಂದಾಗಿ ಕುಸಿದು ಕುಳಿತಿತ್ತು. ರಸ್ತೆಗಳಲ್ಲಿ ಮೋರಿಗಳ ಮೇಲೆ ಸೇತುವೆಗಳನ್ನು ಕಟ್ಟುವುದು ಅತ್ಯಂತ ಸಾಮಾನ್ಯಾತಿಸಾಮಾನ್ಯ ಘಟನೆಗಳಲ್ಲಿ ಒಂದು. ಆ ಸೇತುವೆಯಂಥ ಹತ್ತು ಸಾವಿರದ ಮುನ್ನೂರಕ್ಕೂ ಅಧಿಕ (ಇದು ಒಂದು ಹಳೆಯ ಅಂದಾಜು ಮಾತ್ರ) ಈ ಬೆಂಗಳೂರೆಂಬ ಮಹಾನಗರಿಯ ಒಡಲಲ್ಲಿ ಎಲ್ಲಿ ಬೇಕೆಂದರಲ್ಲಿ ಕಾಣಸಿಗುತ್ತಿದ್ದವು. ಮಧ್ಯರಾತ್ರಿ ದಾಟಿದ ಮೇಲೆ ನರಪಿಳ್ಳೆಯ ಸಂಚಾರ ಇಲ್ಲದಿದ್ದ ಸಮಯದಲ್ಲಿ ಮಳೆ ನೀರಿನಲ್ಲಿ ತೊಯ್ದು ಚಳಿ ತಾಳಲಾರದೆ ಕುಂಯ್ಯೋ ಎಂದು ಹುುಲೆಬ್ಬಿಸುತ್ತಿದ್ದ ಕುನ್ನಿಯೊಂದರ ಆರ್ತ ನಾದಕ್ಕೆ ಶ್ರುತಿ ಹಿಡಿದಂತೆ ಬೋಸ್ ಎಂಬ ಶಬ್ದ ಮಾಡಿ ನೆಲ ಕಚ್ಚಿದ ಸೇತುವೆಯ ಆ ದುರಂತ ಕ್ಷಣಕ್ಕೆ ಪ್ರತ್ಯಕ್ಷದರ್ಶಿಗಳಾರೂ ಇರಲಿಲ್ಲ. ಹೆಗಡೆ ನಗರದಲ್ಲಿ ರಾತ್ರಿ ತಂಗಿ ಬೆಳಿಗ್ಗೆ ಐದು ಗಂಟೆಗೆ ಕೆ.ಆರ್.ಮಾರ್ಕೆಟ್‌ಗೆ ಹೊರಟ ಬಸ್ ಬಂದಾಗಲೇ ವಿಷಯ ಜಗತ್ತಿಗೆ ಗೊತ್ತಾಗಿದ್ದು. ಮುರಿದ ಸೇತುವೆಯ ಬಾಯಿಯ ವರೆಗೆ ಬಂದು ಇನ್ನೇನು ಬಿದ್ದೇ ಹೋಯಿತು ಅನ್ನುವ ಕ್ಷಣದಲ್ಲಿ ಅದರ ಚಾಲಕ ದಿಢೀರ್ ಎಂದು ಬ್ರೇಕ್ ಹಾಕಿದಾಗಲೇ, ನಿದ್ದೆಗಣ್ಣಿನಲ್ಲಿಯೇ ಬಸ್ ಏರಿದ್ದ ಪ್ರಯಾಣಿಕರೆಲ್ಲ ಮುಂದಿನ ಸೀಟಿನ ಬಾರ್‌ಗೆ ತಮ್ಮ ತಲೆಯನ್ನು ಘಟ್ಟಿಸಿಕೊಂಡು ಕುಂಯ್‌ಗುಡುತ್ತ, ಚಾಲಕನನ್ನು ಶಪಿಸುತ್ತ, ಏನು, ಏತ್ತ ಎಂಬೆಲ್ಲ ಪ್ರಶ್ನೆಗಳನ್ನು ಮೂಟೆ ಮಾಡಿಕೊಂಡು ಹಣಕಿ ಇಣಕಿ ನೋಡುತ್ತ ವಾಸ್ತವ ಪ್ರಪಂಚಕ್ಕೆ ಬಂದವರಂತೆ, ಕೆ.ಆರ್.ಮಾರುಕಟ್ಟೆಗೆ ಬೇರೆ ಯಾವ ಯಾವ ಮಾರ್ಗಗಳಿಂದ ಬಸ್ಸನ್ನು ಒಯ್ಯಬಹುದು ಎಂದು ಚಾಲಕನಿಗೆ ಸೂಚಿಸತೊಡಗಿದರು. ಅವರ ತಕ್ಷಣದ ಗರಜು ಕೆ.ಆರ್.ಮಾರುಕಟ್ಟೆ ಮುಟ್ಟಿಕೊಳ್ಳುವುದಾಗಿತ್ತೇ ಹೊರತು ಸೇತುವೆ ರಿಪೇರಿಯಾಗಿರಲಿಲ್ಲ. ಸೇತುವೆ ರಿಪೇರಿಯಂಥ ಘನ ಕಾರ‌್ಯಕ್ಕೂ ತಮಗೂ ಏನೇನೂ ಸಂಬಂಧವಿಲ್ಲವೆಂದೂ, ಅದು ಇನ್ಯಾರಿಗೋ ಸಂಬಂಧಿಸಿದ ಕೆಲಸವೆಂದೂ, ಅವರು ಅವರ ಸಮಯಕ್ಕೆ ಬಂದು ಸರಿ ಮಾಡುವರೆಂದೂ, ತಾವು ಇಲ್ಲಿ ನಿಂತು ಮಾಡುವುದಾದರು ಏನಿದೆ? ಅಲ್ಲಿಗೆ ಹೋಗಬೇಕಾಗಿರುವಲ್ಲಿಗೆ ಹೋದರೆ ಇಂದಿನ ಹೊಟ್ಟೆಪಾಡಾದರೂ ತೀರುತ್ತದೆ ಎಂದು ಮುಂತಾಗಿ ಆಲೋಚಿಸುತ್ತ, ಅದೇ ಉಸಿರಿನಲ್ಲಿ ಗಾಡಿಯನ್ನು ತಿರುಗಿಸುವಂತೆ ಚಾಲಕನಿಗೆ ಅವಸರ ಮಾಡುತ್ತ, ಇನ್ನು ಸ್ವಲ್ಪ ಹೊತ್ತು ಹೀಗೆಯೇ ಇಲ್ಲಿ ನಿಂತರೆ ಬಸ್ಸನ್ನು ಹಿಂದಕ್ಕೆ ತಿರುಗಿಸಲೂ ಆಗದ ಹಾಗೆ ವಾಹನಗಳ ಸಾಲು ದಟ್ಟೈಸುವುದೆಂದು ಎಚ್ಚರಿಸುತ್ತ, ತಮ್ಮ ಖಾಸಾ ಲೋಕದಿಂದ ಒಂದಿನಿತೂ ಈಚೆ ಬರಲು ಒಲ್ಲದೆ ಮುಷ್ಕರ ಹಿಡಿದವರಂತೆ ಒಂದು ಒಂದು ಮಾತಾಡತೊಡಗಿದರು. ಚಾಲಕ ನಿರ್ವಾಹಕರಿಬ್ಬರೂ ಗುಸುಗುಸು ಮಾತನಾಡಿಕೊಂಡು ಬಸ್ ತಿರುಗಿಸಿ ರಾಚೇನಹಳ್ಳಿ, ದಾಸರಹಳ್ಳಿ, ರಿಂಗ್‌ರೋಡ್, ನಾಗವಾರ ಮಾರ್ಗವಾಗಿ ಕೆ.ಆರ್.ಮಾರ್ಕೆಟ್ ಸೇರುವುದೆಂದು ನಿರ್ಧರಿಸಿ ಹೊರಟರು. ಎದುರಿಗೆ ಬರುವ ಪ್ರತಿಯೊಂದು ವಾಹನ, ಅದು ಬಸ್ ಇರಲಿ, ಕಾರ್ ಇರಲಿ, ಟ್ರಕ್ ಇರಲಿ, ಸೈಕಲ್ ಇರಲಿ, ಅವರಿಗೆಲ್ಲ ಸೇತುವೆ ಕುಸಿದುದನ್ನು ಹೇಳುವುದು ತನ್ನ ಆದ್ಯ ಕರ್ತವ್ಯ ಅಂದುಕೊಂಡವನಂತೆ ಚಾಲಕ ಹುಸೇನ್‌ಖಾನ್ ಹೇಳುತ್ತ ಹೋದ. ಅಂತೂ ರಾತ್ರಿರಾಣಿಯ ತೆಕ್ಕೆಯೊಳಗಿಂದ ಬಿಡಿಸಿಕೊಂಡು ಆಕಳಿಸುತ್ತ, ಮೈಮುರಿಯುತ್ತ, ಸ್ವಲ್ಪ ಬೆಚ್ಚಗಾಗುತ್ತ ಆ ಸೂರ್ಯದೇವ ಮೇಲೇರುತ್ತ ಬಂದಹಾಗೆ ಸೇತುವೆ ಕುಸಿದು ಕುಳಿತ ವಿಷಯ ಬೆಂಗಳೂರೆಂಬ ಬೆಂಗಳೂರಿಗೇ ತಿಳಿದು ಹೋುತು. ಸರ್ಕಾರದ ಚಾಲನ ಕೇಂದ್ರವಾದ ವಿಧಾನಸೌಧಕ್ಕೆ ಹತ್ತು ಕಿಲೋಮೀಟರಿಗೂ ಕಡಿಮೆ ಅಂತರದಲ್ಲಿ ಇಂಥದೊಂದು ಅವಘಡ ಸಂಭವಿಸಿದೆ ಎಂದರೆ ನಂಬುವುದಕ್ಕೆ ಯಾರೂ ಸಿದ್ಧರಿರಲಿಲ್ಲ. ಸೇತುವೆ ಕುಸಿದ ಕಾರಣ ಹೆಗಡೆನಗರಕ್ಕೆ ನಿರಂತರವಾಗಿ ಸಾಗುತ್ತಿದ್ದ ಬಸ್ಸುಗಳೆಲ್ಲ ಬಂದ್ ಆದವು. ಹಲವು ಬಸ್‌ಗಳು ನಾಗವಾರ ವರೆಗೆ ಮಾತ್ರ ಬಂದರೆ, ಕೆಲವು ಬಸ್‌ಗಳು ಕುಸಿದ ಸೇತುವೆಯ ಬಾುಯವರೆಗೆ ಬಂದು ನಿಂತು, ಅಲ್ಲಿಯೇ ಜನರನ್ನು ಇಳಿಸತೊಡಗಿದವು. ಆ ಕೊಳಚೆ ಹಳ್ಳವನ್ನು ಹೇಗೋ ದಾಟಿ ಆಟೋರಿಕ್ಷಾದ ಮೇಲೆ ಹೆಗಡೆನಗರದ ತಮ್ಮ ಗೂಡು ಸೇರಿಕೊಳ್ಳತೊಡಗಿದರು. ಬಸ್ಸಿಗೇ ಮೂರು ರುಪಾಯಿ ಕೊಡುವಲ್ಲಿ ಒಂದು ಕೊಟ್ಟು ಹೋಗಿಬಂದು ಮಾಡುತ್ತಿದ್ದ ಜನ ಬಸ್ಸಿಗಲ್ಲದೆ ಮತ್ತೆ ಆಟೋಗಳಿಗೆ ಹಣ ತೆರಬೇಕಾಗಿ ಬಂದುದು ವಿಧಿಯ ವೈಪರೀತ್ಯವಾಗಿ ಅವರಿಗೆ ಕಂಡುಬಂತು. ಯಲಹಂಕ ಕಡೆಗೆ ಹೋಗುವ ಬಸ್ಸುಗಳು ಸುತ್ತುಬಳಸಿ ಹೆಗಡೆನಗರದ ಮೇಲಿಂದ ಹೋಗುತ್ತಿದ್ದವಾದರೂ ಹೆಚ್ಚಿಗೆ ಹಣವನ್ನು ವಸೂಲು ಮಾಡುತ್ತಿದ್ದವು. ಥಣಿಸಂದ್ರ ಮುಖ್ಯರಸ್ತೆಯಲ್ಲಿ ಈಗ ಬಸ್ಸು, ಕಾರು, ಲಾರಿಗಳ ಓಡಾಟ ಸಂಪೂರ್ಣ ಬಂದ್ ಆಗಿಬಿಟ್ಟಿತು. ದಿಢೀರ್ ಬೆಳವಣಿಗೆಯೆಂದು ನೂರಾರು ರಿಕ್ಷಾಗಳು ಎಲ್ಲೆಲ್ಲಿಂದಲೋ ಬಂದುಬಿಟ್ಟವು. ಹೆಗಡೆನಗರ- ಕುಸಿದ ಸೇತುವೆ ನಡುವೆ ಸಂಪರ್ಕಸಾಧನ ಆಟೋರಿಕ್ಷಾಗಳು ಮಾತ್ರ ಆದವು. ಪರಿಸ್ಥಿತಿಯ ಲಾಭವನ್ನು ಅವೂ ಪಡೆಯತೊಡಗಿದವು. ಮೊದಲಾದರೆ ಮೂರು ರುಪಾಯಿಗೆ ಸೀಟು ಹಾಕಿಕೊಂಡು ಹೋಗುತ್ತಿದ್ದ ರಿಕ್ಷಾಗಳು ಈಗ ಐದು ರುಪಾಯಿಗೆ ಏರಿ ಕುಳಿತಿದ್ದವು. ಬೇಕಿದ್ದರೆ ಹತ್ತಿ ಬೇಡದಿದ್ದರೆ ಬಿಡಿ ಎಂಬ ಧೋರಣೆ ಅವುಗಳದ್ದಾಗಿತ್ತು. ನಾಲ್ಕಾರು ದಿನಗಳಾದರೂ ಸೇತುವೆಯನ್ನು ಸರಿಪಡಿಸುವ ಯಾವುದೇ ಪ್ರಯತ್ನಗಳು ಆರಂಭವಾಗದೆ ಇದ್ದಾಗ ಹೆಗಡೆನಗರದ ಸಮಸ್ತ ನಾಗರಿಕರೂ ಆತಂಕಕ್ಕೆ ಒಳಗಾದರು. ವಿಧಾನಸೌಧ ಇಷ್ಟು ಹತ್ತಿರ ಇದ್ದರೂ ನಮಗೆ ಇಂಥ ಬೇಗುದಿಯೆ? ಕೂಡದು ಕೂಡದು ಎಂದು ಜನರು ರಸ್ತೆ ರಸ್ತೆಗಳಲ್ಲಿ ಗುಂಪುಗುಂಪಾಗಿ ನಿಂತು ಮಾತನಾಡತೊಡಗಿದರು. ಗುಂಪುಗಳೆಲ್ಲ ತಮಗರಿವಿಲ್ಲದಂತೆ ಹೆಗಡೆನಗರದ ಬಸ್ ಟರ್ಮಿನಲ್ ಬಳಿ ಧ್ವಜಕಟ್ಟೆಯ ಸುತ್ತ ಜಮಾಯಿಸಿಬಿಟ್ಟಿದ್ದವು. ತಾನೇತಾನಾಗಿ ಅದಕ್ಕೊಂದು ಸಭೆಯ ಸ್ವರೂಪ ಬಂದುಬಿಟ್ಟಿತು. ಗುಂಪುಗಾರಿಕೆ ಕಳಚಿಕೊಂಡು ಅವರೆಲ್ಲ ಸಭಾಸದರಾದರು. ಸಭೆಯಲ್ಲಿ ಮೊದಲು ಮಾತನಾಡಿದ ಸುಲೇಮಾನ್ ಸೇಠ್, ಮೊದಲು ಧ್ವನಿ ಎತ್ತಿದವರು ಎಂಬ ಕಾರಣಕ್ಕಾಗಿಯೇ ಸಭೆಯ ಅಧ್ಯಕ್ಷತೆ ವಹಿಸಿ ಕಲಾಪ ನಡೆಸಬೆಕಾಯಿತು. ಸುಲೇಮಾನ್ ಸೇಠ್ ಸೋ.. ಎಂದಾಗ ಸೋಬಾನೆ ಎಂದವರು ಗಜಾನನ ಮತ್ತು ಅಂತೋನಿ. ಇವರಲ್ಲದೆ ಪಳನಿಸ್ವಾಮಿ, ರಾಜಶೇಖರನ್, ಮುರುಗನ್, ಏಳುಮಲೆ ಮೊದಲಾದ ಇನ್ನೂ ಏಳು ಜನ ಸೇರಿ ಹತ್ತು ಸಮಸ್ತರ ಒಂದು ಸಮಿತಿಯನ್ನು ರಚಿಸಲಾುತು. ಎಲ್ಲರೂ ಸೇರಿ ಇವತ್ತೆಂದರೆ ಇವತ್ತೇ ಮುಖ್ಯಮಂತ್ರಿ, ಕಾಮಗಾರಿ ಮಂತ್ರಿ, ಪ್ರತಿಪಕ್ಷದ ನಾಯಕರು ಹೀಗೆ ಕಾರ್ಯಮಾಡಿಸುವ ಸಾಮರ್ಥ್ಯವುಳ್ಳ ಎಲ್ಲರನ್ನೂ ಭೆಟ್ಟಿಯಾಗಬೇಕು ಎಂದು ನಿರ್ಧರಿಸಿ ತಂಡೋಪತಂಡವಾಗಿ ವಿಧನಸೌಧದತ್ತ ದೌಡು ಬಂದರು. ಇಷ್ಟೊಂದು ಜನ ಸೇರಿರುವಾಗ, ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಜೈ ಅನ್ನಬೇಕೋ ಧಿಕ್ಕಾರ ಕೂಗಬೇಕೋ ಒಂದೂ ಗೊತ್ತಾಗದೆ, ಈ ಬಗ್ಗೆ ಯಾರೂ ಏನೂ ಹೇಳಿಕೊಟ್ಟಿರದೆ ಇದ್ದುದರಿಂದ ಮತ್ತು ಇದು ಬೇರಾರೋ ಕರೆದುಕೊಂಡು ಬಂದ ರ‌್ಯಾಲಿಯ ಭಾಗವಾಗಿರದೆ ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಬಂದ ನಿಯೋಗದ ರೂಪದಲ್ಲಿದ್ದುದರಿಂದ ಅವರೆಲ್ಲ ತಳಮಳಕ್ಕೊಳಗಾದರು. ಏನೊಂದೂ ಘೋಷಣೆ ಕೂಗದೆ ಇದ್ದರೆ ಅಹವಾಲು ಕೇಳಿಸಿಕೊಳ್ಳುವವರ ಮೇಲೆ ನಾವೆಂತು ಪ್ರಭಾವ ಬೀರುವುದು ಶಕ್ಯ ಎಂಬ ಗೊಂದಲವೂ ಅವರನ್ನು ಕಾಡಿತು. ಸುಲೇಮಾನ್ ಸೇಠ್ ಯಾವುದಾದರೂ ಸೂಚನೆ ನೀಡುವವರೆಗೆ ತಾವೇನೂ ಉಪ್ಪುಉಪ್ಪಿನ ಹರಳು ಎಂದು ಮಾತನಾಡಬಾರದು ಎಂದು ಶಪಥ ತೊಟ್ಟವರಂತೆ ಅವರ‌್ಯಾರೂ ಮಾತನಾಡಲಿಲ್ಲ. ಮುಖ್ಯಮಂತ್ರಿಯವರು ಬಂದರು. ಕಾಮಗಾರಿ ಸಚಿವರನ್ನು ಕರೆಸಿದರು. ಮುಖ್ಯಮಂತ್ರಿಯವರೇನೋ ಸಮಸ್ಯೆಯನ್ನು ತಕ್ಷಣಕ್ಕೆ ಬಗೆಹರಿಸುವ ಮೂಡ್‌ನಲ್ಲಿದ್ದಂತೆ ತೋರಿತು. ಆದರೆ ಕಾಮಗಾರಿ ಸಚಿವರು ಮುಖ್ಯಮಂತ್ರಿಯ ಕಿವಿಯಲ್ಲಿ ಏನೋ ಪಿಸುಗುಟ್ಟಿದರು. ಮುಖ್ಯಮಂತ್ರಿಯ ಹಣೆಯ ಮೇಲೆ ನಿರಿಗೆಗಳು ಕಾಣಿಸಿಕೊಂಡವು. ಶಲ್ಯದಿಂದ ಅವರು ಕಂಠದ ಸುತ್ತಲಿನ, ಹಣೆಯ ಮೇಲಿನ ಬೆವರನ್ನು ಒರಿಸಿಕೊಂಡರು. ಸಾರಿಗೆ ಸಚಿವರಿಗೆ ಬರಹೇಳಿದರು. ಅವರೂ ಬಂದರು. ಮೂವರೂ ಕೋಣೆಯೊಳಗೆ ಹೋಗಿ ಏನೇನೋ ಚರ್ಚಿಸಿದರು. ಹೆಗಡೆನಗರದ ನಿವಾಸಿಗಳಿಗೆ ತಮ್ಮ ಹುಳುಸಮಾನವಾದ ಸಮಸ್ಯೆಯೊಂದು ರಾಜ್ಯದ ನೇತಾರರನ್ನು ಇಷ್ಟೊಂದು ಕಾಡುವುದೆಂದು ಗೊತ್ತಿರಲಿಲ್ಲ. ಚಿಟಿಕೆಹೊಡೆಯುವಷ್ಟರಲ್ಲಿ ಮುಖ್ಯಮಂತ್ರಿ ಬಗೆಹರಿಸಿಬಿಡುತ್ತಾರೆ. ನಾಳೆಯೆಂದರೆ ಮಾಮೂಲು ರಸ್ತೆಯಲ್ಲಿ ಸಂಚಾರ ಮಾಡಬಹುದು ಎಂದುಕೊಂಡಿದ್ದವರಿಗೆ ಮುಂದೇನು ಎಂಬ ದುಗುಡ ಕಾಡಲಾರಂಭಿಸಿತು. ಇಬ್ಬರು ಮಂತ್ರಿಗಳೊಂದಿಗೆ ಮುಖ್ಯಮಂತ್ರಿ ಅರ್ಧಗಂಟೆ ಚರ್ಚಿಸಿದ ಬಳಿಕ ಹೊರಗೆ ಬಂದರು. ಭೂಮಿಯಲ್ಲಿ ಬೀಜ ಬಿತ್ತನೆ ಮಾಡಿ ಮಳೆಗಾಗಿ ಆಕಾಶದ ಮೋಡಗಳತ್ತ ದೃಷ್ಟಿ ನೆಟ್ಟ ರೈತರಂತೆ ಕಂಡುಬಂದ ಹೆಗಡೆನಗರದ ನಿವಾಸಿಗಳು, ಮುಖ್ಯಮಂತ್ರಿ ಏನೆಂದು ಉಸುರಬಹುದು ಎಂದು ಉಸಿರು ಬಿಗಿಹಿಡಿದು ನಿಂತಾಗಲೇ, ಮುಖ್ಯಮಂತ್ರಿ ಬದಲಿಗೆ ಸಾರಿಗೆ ಸಚಿವರು ತುಟಿ ಎರಡು ಮಾಡಿ, ನಾಳೆಯಿಂದಲೇ ಹೆಗಡೆ ನಗರಕ್ಕೆ ಮೊದಲೆಷ್ಟು ಬಸ್ಸುಗಳು ಹೋಗುತ್ತಿದ್ದವೋ ಅಷ್ಟು ಬಸ್ಸು ಹೋಗುವ ಹಾಗೆ ವ್ಯವಸ್ಥೆ ಮಾಡುತ್ತೇವೆ. ಹೆಚ್ಚಿಗೆ ಹಣ ವಸೂಲು ಮಾಡದಂತೆ ನಿರ್ವಾಹಕರಿಗೆ ಸೂಚಿಸುತ್ತೇವೆ ಎಂದು ಹೇಳಿ ಮುಖ್ಯಮಂತ್ರಿಯ ಕಡೆ ಮುಖಮಾಡಿದರು. ತಮ್ಮ ಮಾಮೂಲು ಶೈಲಿಯಲ್ಲಿ, ನೀವೇ ನಮ್ಮ ಜೀವಜೀವಾಳ ಎಂಬಂಥ ಶಬ್ದಗಳನ್ನು ಉರುಳಿಸಿದ ಮುಖ್ಯಮಂತ್ರಿ, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾಗಿದೆ. ತಕ್ಷಣಕ್ಕೆ ಸೇತುವೆ ರಿಪೇರಿ ಸಾಧ್ಯವಿಲ್ಲ. ಹೊಸದಾಗಿ ನಿರ್ಮಿಸುವ ಸೇತುವೆ ಯಾವ ರೀತಿಯದಿರಬೇಕು, ಯಾವ ಕಾರಣಕ್ಕಾಗಿ ಸೇತುವೆ ಕುಸಿಯಿತು, ತಾನಾಗಿಯೇ ಕುಸಿಯಿತೇ ಅಥವಾ ಯಾರಾದರೂ ವಿಧ್ವಂಸಕ ಕೃತ್ಯ ಎಸಗಿದರೇ ಎಂಬಿತ್ಯಾದಿಗಳ ಬಗೆಗೆ ವಿಚಾರಿಸಬೇಕಾಗಿದೆ ಎಂದು ಮುಂತಾಗಿ ಹೇಳಿ ಅವರನ್ನೆಲ್ಲ ಸಾಗಹಾಕಿ ತಮ್ಮ ಮಂತ್ರಾಲೋಚನೆಯ ಕೊಠಡಿಯನ್ನು ಸೇರಿಕೊಂಡರು. ಕೇವಲ ಟೀವಿಗಳಲ್ಲಷ್ಟೇ ನೋಡುತ್ತಿದ್ದ ಮುಖ್ಯಮಂತ್ರಿಯನ್ನು ಪ್ರತ್ಯಕ್ಷ ಕಂಡಂತಾಯಿತಲ್ಲ ಎಂಬ ಏಕೈಕ ಖುಷಿಯೊಂದಿಗೆ ಅವರೆಲ್ಲ ಹಿಂತಿರುಗಿದರು. ಅವರು ಅತ್ತ ಹೋಗುತ್ತಿದ್ದಂತೆ, ಇತ್ತ ಮುಖ್ಯಮಂತ್ರಿಗಳು, ಕಾಮಗಾರಿ ಮಂತ್ರಿ ಹೇಳಿದ್ದರಲ್ಲಿ ಏನಾದರೂ ಐನ್ ಪಾಯಿಂಟ್ ಇದೆಯೇ ಎಂದು ಚಿಂತಿಸಲಾರಂಭಿಸಿದರು. ಈ ಪಿಡುಗು ಇದೇ ರೀತಿ ಮುಂದುವರಿದರೆ ಬೆಂಗಳೂರಿನಲ್ಲಿ ಇನ್ನು ವರ್ಷಕ್ಕೆ ಎಷ್ಟು ಸೇತುವೆಗಳು ಕುಸಿದು ಹೋಗಬಹುದು ಎಂದು ದೂರಾಲೋಚನೆ ಮಾಡಿದರು. ಮುಖ್ಯಮಂತ್ರಿಯವರನ್ನು ಚಿಂತೆಗೆ ದೂಡಿದ ಕಾಮಗಾರಿ ಮಂತ್ರಿಯ ಮಾತು ಅದಾವುದು? ಕೆಂಪೇಗೌಡನ ಕಲ್ಪನೆ ಮೀರಿ, ಹೆಗಡೆಯವರ ಮುಂದಾಲೋಚನೆ ಹಿಂದಿಕ್ಕಿ ಈ ಬೆಂಗಳೂರು ತನ್ನಷ್ಟಕ್ಕೆ ತಾನೇ ಬೆಳೆದು ಹೋಯಿತೆ? ಬೆಂಗಳೂರನ್ನು ಅಭಿವೃದ್ಧಿಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೆಂಬ ಸಂಸ್ಥೆ ಇದ್ದರೂ ಅದರ ಆಮೆ ನಡಿಗೆಯಿಂದಾಗಿ ಹಲವಾರು ಖಾಸಗಿ ಬಿಲ್ಡರುಗಳು ನೆರೆ ರಾಜ್ಯಗಳಿಂದ ಬೆಂಗಳೂರಿಗೆ ಲಗ್ಗೆ ಇಟ್ಟು ಹೊಸಹೊಸದಾದ ಚಿಕ್ಕಚಿಕ್ಕದಾದ ಬಡಾವಣೆಗಳನ್ನು ಮನೆಕಟ್ಟಿಕೊಳ್ಳುವ ಕನಸು ಕಂಡವರಿಗಾಗಿ ನಿರ್ಮಿಸತೊಡಗಿದರು. ಅಂಥ ನೂರಾರು ಬಡಾವಣೆಗಳು ಥಣಿಸಂದ್ರ, ಹೆಗಡೆನಗರ, ನಾಗವಾರ, ಸರಪಾಳ್ಯ, ರಾಚೇನಹಳ್ಳಿ, ಮೇಸ್ತ್ರಿಪಾಳ್ಯ, ವೆಂಕಟೇಶಪುರ, ಯಲಹಂಕ ಮುಂತಾದಕಡೆ ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದವು. ಈ ಬಡಾವಣೆಗಳ ಯೋಜನೆಗಳೆಲ್ಲ ಅವುಗಳ ವ್ಯಾಪ್ತಿಯಲ್ಲಷ್ಟೇ ಸೀಮಿತವಾಗಿರುತ್ತಿದ್ದವು. ಅದರಾಚೆ ಅವುಗಳ ಕರ್ತೃಗಳು ಯೋಚಿಸುತ್ತಲೇ ಇರಲಿಲ್ಲ. ಸಮಗ್ರವಾದ ಯೋಜನೆಯೊಂದಿದ್ದರೆ ನೀರು, ಒಳಚರಂಡಿ ಇತ್ಯಾದಿ ವ್ಯವಸ್ಥೆಗಳನ್ನು ಇಡಿಯಾಗಿ ರೂಪಿಸಬಹುದಿತ್ತು. ಈ ತುಂಡು ತುಂಡು ಯೋಜನೆಗಳಿಂದಾಗಿ ಪ್ರಾಕೃತಿಕವಾಗಿದ್ದ ಹಳ್ಳದ ಹರಿವು, ಭೂಮಿಯ ಏರು ತಗ್ಗು ಇತ್ಯಾದಿಗಳೆಲ್ಲ ಪಲ್ಲಟಗೊಂಡು ಅವಾಂತರ ಸೃಷ್ಟಿಸಿದ್ದವು. ಅವು ಗೋಚರಿಸುವುದು ಮಳೆಗಾಲದಲ್ಲಿ ಮಾತ್ರ. ಸರಪಾಳ್ಯದಲ್ಲಿ ರಸ್ತೆ ಕುಸಿಯಲಿಕ್ಕೂ ಇದೇ ಕಾರಣವಾಗಿತ್ತು. ಪಕ್ಕದಲ್ಲಿಯೇ ಪ್ರಭಾವಿ ರಾಜಕಾರಣಿಯೊಬ್ಬ ನೂರಿನ್ನೂರು ಸೈಟುಗಳ ಹೊಸ ಬಡಾವಣೆ ಸೃಷ್ಟಿಸಿಬಿಟ್ಟಿದ್ದ. ಹತ್ತುಕಡೆ ಹರಿದು ಹೊರಟಿದ್ದ ಹಳ್ಳಗಳನ್ನೆಲ್ಲ ಮುಚ್ಚಿ ಒಂದೇ ಕಡೆ ನೀರು ಹರಿಯುವ ಹಾಗೆ ಮಾಡಿದ್ದ. ಮುಂದಿನ ಪರಿಸ್ಥಿತಿ ಏನು ಎಂದು ಆತ ನೋಡಲಿಲ್ಲ. ನೀರು ಉಕ್ಕಿ ಹರಿದು ಸೇತುವೆ ಕುಸಿದಿತ್ತು. ತನ್ನ ಪಕ್ಷ ಆಡಳಿತದಲ್ಲಿದ್ದಾಗ ಬಡಾವಣೆಗೆ ಅನುಮತಿ ಪಡೆದುಕೊಂಡಿದ್ದ ಆತ ಈಗ ಪ್ರತಿಪಕ್ಷದಲ್ಲಿದ್ದ. ಬಡಾವಣೆ ನಿರ್ಮಿಸಿ ಕೋಟ್ಯಂತರ ರುಪಾಯಿ ಸಂಪಾದನೆ ಮಾಡಿದ್ದಾನೆ ಎಂಬ ಗುಮಾನಿ ಈಗಿನ ಆಳುವ ಪಕ್ಷದ್ದು. ಸೇತುವೆ ಕುಸಿದಿದ್ದಕ್ಕೂ ಆತನಿಗೂ ಸಂಬಂಧ ಕಲ್ಪಿಸಿ ಆತನ ತೇಜೋವಧೆ ಮಾಡುವುದು ಕಾಮಗಾರಿ ಸಚಿವರ ಉದ್ದೇಶ. ಅತ್ತ ಬಡಾವಣೆ ನಿರ್ಮಿಸಿದ ಶಾಸಕನೂ ಮುಂದಾಗುವುದನ್ನು ಊಹಿಸಿ ತನ್ನ ತೇಜೋವಧೆ ಮಾಡುವುದಕ್ಕಾಗಿಯೇ ಈ ಸೇತುವೆಯನ್ನು ತನಗಾಗದವರು ಯಾರೋ ಹಾಳುಗೆಡವಿದ್ದಾರೆ ಎಂದು ಆರೋಪಿಸಿದ. ಪ್ರತಿಪಕ್ಷವು ಈಗ ಎಡವಟ್ಟಿನ ಪ್ರಸಂಗವನ್ನು ಎದುರಿಸಬೇಕಾಯಿತು. ಬಡಾವಣೆ ನಿರ್ಮಿಸಿದ ಶಾಸಕ ತನ್ನ ಪಕ್ಷದವನೇ ಆಗಿದ್ದುದರಿಂದ ಅವನನ್ನು ಖಂಡಿಸುವುದು ಅದಕ್ಕೆ ಸಾಧ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೊಸದೊಂದು ಮಾರ್ಗವನ್ನು ಕಂಡುಕೊಂಡಿತು. ಬೆಂಗಳೂರು ನಗರದ ಸಂಚಾರ ಈಗ ಮೊದಲಿನ ಹಾಗೆ ಇಲ್ಲವೆಂದೂ, ಹತ್ತು ವರ್ಷಗಳ ಹಿಂದೆ ಇದ್ದ ವಾಹನಗಳ ಸಂಖ್ಯೆಯು ಈಗ ಮೂವತ್ತು ಪಟ್ಟು ಹೆಚ್ಚಿದೆ ಎಂದೂ, ಈ ಭಯಂಕರ ಸಂಚಾರ ತಾಳಿಕೊಳ್ಳುವ ಸಾಮರ್ಥ್ಯ ಹಳೆಯ ಸೇತುವೆಗೆ ಇಲ್ಲವೆಂದೂ ಹೇಳುವುದಕ್ಕೆ ಅದು ಹೊರಟಿತು. ಆದರೆ ಆಡಳಿತ ಪಕ್ಷವು ಬಡಾವಣೆಗಳನ್ನು ನಿರ್ಮಿಸುವವರ ವಿರುದ್ಧ ಇದ್ದುದರಿಂದ ಮತ್ತು ಬಡಾವಣೆಗಳನ್ನು ನಿರ್ಮಿಸುವುದಕದಕ್ಕಾಗಿ ಭಾರೀ ಪ್ರಮಾಣದಲ್ಲಿ ಉಸುಕು, ಕಬ್ಬಿಣ, ಕಲ್ಲುಗಳನ್ನು ಹೇರಿಕೊಂಡ ವಾಹನಗಳು ಸಂಚರಿಸಿದ್ದರಿಂದಲೇ ಸೇತುವೆಯು ಕುಸಿಯಿತು ಎಂದು ಅದು ಪ್ರತ್ಯಾರೋಪ ಮಾಡುವ ಸಾಧ್ಯತೆ ಇದ್ದುದರಿಂದಲೂ ಅದು ಆ ವಿಚಾರವನ್ನು ಬಿಟ್ಟುಕೊಟ್ಟು ಇನ್ನೊಂದು ಅಪಾಯಕಾರಿ ಮಾರ್ಗವನ್ನು ತುಳಿಯಲು ಮುಂದಾಯಿತು. ಬಡಾವಣೆ ನಿರ್ಮಿಸಿದ ಶಾಸಕ ಹಿಂದೂವಾಗಿದ್ದು ಆತ ಕಳೆದ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಸೋಲಿಸಿದ್ದ. ಮುಂದಿನ ಚುನಾವಣೆಯಲ್ಲಿ ಆತ ಪ್ರಬಲ ಸ್ಪರ್ಧೆಯನ್ನು ನೀಡುವ ಸಾಧ್ಯತೆ ಇದ್ದುದರಿಂದ ಆತನ ತೇಜೋವಧೆಯನ್ನೂ ಮಾಡಬೇಕು ಎಂದು ಆಲೋಚಿಸಿ, ಆಡಳಿತ ಪಕ್ಷದವರು ಎಸಗಿದ ದುಷ್ಕೃತ್ಯ ಇದು. ಇದರಲ್ಲಿ ಪಾಕಿಸ್ತಾನದ ಐಎಸ್‌ಐ ಕೈವಾಡವಿದೆ ಎಂದು ಆರೋಪಿಸಿತು. ಹೆಗಡೆನಗರದಲ್ಲಿ ಪಾಕಿಸ್ತಾನದ ಐಎಸ್‌ಐ ಏಜೆಂಟರಿದ್ದಾರೆ. ಬಾಂಗ್ಲಾದೇಶದ ಅಕ್ರಮ ವಲಸಿಗರಿದ್ದಾರೆ. ಅವರಿಗೆಲ್ಲ ಇಲ್ಲಿ ರೇಷನ್‌ಕಾರ್ಡ್ ಒದಗಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದೆಲ್ಲ ಆರೋಪಿಸಿತು. ಆ ಪಕ್ಷದ ಕೆಲವು ರಾಜಕೀಯೇತರ ಸಂಘಟನೆಗಳು ಬೀದಿಗಿಳಿದು ಹೋರಾಟವನ್ನೂ ಆರಂಭಿಸಿಬಿಟ್ಟವು. ಇದು ಕೇವಲ ಸಣ್ಣದಾದ ಸೇತುವೆಯೊಂದು ಕುಸಿದು ಕುಳಿತ ಸಮಸ್ಯೆಯಲ್ಲ; ನಮ್ಮ ಶಾಸಕರೇ ಇದನ್ನು ಮನಸ್ಸು ಮಾಡಿದರೆ ಒಂದೇ ದಿನದಲ್ಲಿ ದುರಸ್ತಿ ಮಾಡಿಸಬಹುದು, ಇಲ್ಲವೇ ಹೊಸದನ್ನೂ ಕಟ್ಟಿಸಬಹುದು. ಹಾಗೆ ಮಾಡಿದರೆ ಸತ್ಯ ಸತ್ತುಹೋಗುತ್ತದೆ. ಸತ್ಯ ಸಾಯಲು ಬಿಡಬಾರದು. ಕೆಲವು ದಿನ ಕಷ್ಟವಾದರೂ ಸೈ. ತನಿಖೆ ನಡೆಯಲೇ ಬೇಕು ಎಂದು ಮುಂತಾಗಿ ಹೇಳಿಕೆ ನೀಡತೊಡಗಿತು. ಸರಕಾರ ಮತ್ತು ಪ್ರತಿಪಕ್ಷಗಳ ಗುದುಮುರಿಗೆಯಲ್ಲಿ ಕುಸಿದು ಕುಳಿತ ಸೇತುವೆ ಮೇಲೇಳುವ ಯಾವುದೇ ಲಕ್ಷಣ ಕಾಣದೆ ಹೋದಾಗ, ನಮ್ಮ ಕಾಯಿಲೆಗೆ ನಾವೇ ಔಷಧ ಕುಡಿಯಬೇಕು ಎಂಬ ಲೋಕಾನುಭವದಿಂದ ಹೆಗಡೆನಗರ, ಥಣಿಸಂದ್ರ, ಸರಪಾಳ್ಯ ಮುಂತಾದ ಹತ್ತೂರ ಜನರು ಶ್ರಮದಾನ ಮಾಡಿ ಸೇತುಬಂಧ ಮಾಡಬೇಕು ಎಂಬ ಆಲೋಚನೆ ಅದ್ಯಾರದೋ ತಲೆಯಲ್ಲಿ ಮಿಂಚಿತು. ಒಬ್ಬರ ತಲೆಯಲ್ಲಿದ್ದ ವಿಚಾರ ಇನ್ನಾರದೋ ಕಿವಿಗೆ, ಅವರ ಬಾಯಿಂದ ಮತ್ಯಾರದೋ ಕಿವಿಗೆ ಹಬ್ಬುತ್ತ, ಜನರೇ ಸರ್ಕಾರವಾಗುವ ಅನಂತ ಸಾಧ್ಯತೆಗಳ ಬಗೆಗೆ ರೆಕ್ಕೆಪುಕ್ಕಗಳು ಹುಟ್ಟಿಕೊಂಡು ಇರುವ ಸಕಾರದ ಬೇರುಗಳನ್ನು ಅಲ್ಲಾಡಿಸುವ ಲಕ್ಷಣಗಳು ಕಂಡುಬಂದವು. ಅಂತೋನಿಯ ಟೈಲರಿಂಗ್ ಅಂಗಡಿಯಲ್ಲಿ, ಹುಸೇನ್‌ಸಾಬಿಯ ಗಡಿಯಾರ ರಿಪೇರಿ ಅಂಗಡಿಯಲ್ಲಿ, ಮುತ್ತುವೇಲುನ ಕ್ಷೌರದ ಅಂಗಡಿಯಲ್ಲಿ, ರಾಜಶೇಖರನ್ ಅವರ ಕಿರಾಣಿ ಅಂಗಡಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಏನಾದರೂ ಮಾಡಲೇಬೇಕು ಎಂಬ ಹುಕಿ ಮಾತಾಗಿ, ಕತೆಯಾಗಿ, ಪುರಾಣವಾಗಿ, ರಾಮಾಯಣವಾಗಿ, ಮಹಾಭಾರತವಾಗಿ, ಹರಿಕತೆ, ಶಿವಕತೆಯಾಗಿ ಹೀಗೆ ಎಂಥೆಂಥದ್ದೋ ರೂಪ ಪಡೆಯುತ್ತ ಗಟ್ಟಿಯಾಗುತ್ತಿರುವಾಗಲೇ ಸರ್ಕಾರವೇ ಏಕೆ ಪ್ರತಿಪಕ್ಷವೂ ಗಾಬರಿ ಬಿದ್ದಿತು. ತಾನು ಯಾರಿಗಾಗಿ ಭರವಸೆಗಳನ್ನು ಇನ್ನು ನೀಡುವುದು ಎಂಬುದು ಸರ್ಕಾರದ ಚಿಂತೆಯಾದರೆ, ತಾನು ಯಾರ ಪರವಾಗಿ ಇನ್ನು ಹೋರಾಟಗಳನ್ನು ರೂಪಿಸುವುದು ಎಂಬ ಚಿಂತೆ ಪ್ರತಿಪಕ್ಷಗಳನ್ನು ಕಾಡಿತು. ನೀವು ನಮ್ಮನ್ನು ಆಳಿ ಎಂದು ಆದೇಶ ಕೊಟ್ಟ ಮೇಲೆ ಮಧ್ಯದಲ್ಲಿ ಮೂಗು ತೂರಿಸುವಂಥ ಅಧಿಕಪ್ರಸಂಗಿತನವನ್ನು ಇವರಿಗೆ ಕೊಟ್ಟವರಾರು ಎಂಬಂಥ ಕ್ರಾಂತಿಕಾರಿ ಆಲೋಚನೆಗಳೂ ಸರ್ಕಾರಿ ವಲಯದಲ್ಲಿ ಮೂಡಿಬಂದವು. ಸೇತುವೆ ಕುಸಿದೇ ಇರಬೇಕು. ಅದನ್ನು ನಿರ್ಮಿಸಿಕೊಡಿ ಎಂದು ಜನರು ಮನವಿ ಮಾಡುತ್ತಲೇ ಇರಬೇಕು. ನಾವು ಭರವಸೆ ಕೊಡುತ್ತಲೇ ಇರಬೇಕು ಎಂದು ಸರ್ಕಾರ ಯೋಚಿಸಿದರೆ, ಪ್ರತಿಪಕ್ಷವೂ ತನ್ನ ಹೋರಾಟಕ್ಕೆ ಒಂದು ವಿಷಯ ಕಡಿಮೆಯಾಗುತ್ತದಲ್ಲ ಎಂದು ಚಿಂತೆಯಲ್ಲಿ ಬಿದ್ದು ಸೇತುಬಂಧ ತಡೆಗೆ ತಮ್ಮವೇ ನಕ್ಷೆಗಳನ್ನು ಸಿದ್ಧಪಡಿಸತೊಡಗಿದವು. ಕುಸಿದ ಸೇತುವೆಯ ಬಳಿಯೇ ಕೆಲವು ಬಸ್ಸುಗಳು ಬಂದು ನಿಂತು ತಿರುಗಿ ಹೋಗುವುದರಿಂದಲೂ, ರಿಕ್ಷಾಗಳು ಅಲ್ಲಿಂದಲೇ ಜನರನ್ನು ಹತ್ತಿಸಿಕೊಂಡು ಬರುವುದರಿಂದಲೂ ಅದೊಂದು ಜಂಕ್ಷನ್ ಆಗಿ ಬದಲಾಗಿಬಿಟ್ಟಿತು. ಹೀಗಾಗಿ ಆಮ್ಲೆಟ್ ತಯಾರಿಸುವ ನಾಲ್ಕೈದು ಗಾಡಿ ಅಂಗಡಿಗಳು, ಪಾನ್‌ಬೀಡಾ ಅಂಗಡಿಗಳು, ಚಾ, ಫಾಸ್ಟ್‌ಫುಡ್, ಪಾನಿಪೂರಿ, ಹಣ್ಣಿನ ಅಂಗಡಿಗಳೆಲ್ಲ ರಸ್ತೆಬದಿಯಲ್ಲಿ ತಲೆ ಎತ್ತಿದವು. ವ್ಯಾಪಾರ ಸುಮಾರಾಗಿಯೇ ನಡೆಯುತ್ತಿದ್ದವು. ರಾತ್ರಿ ಒಂದು ಗಂಟೆಯವರೆಗೂ ವ್ಯಾಪಾರ ಮಾಡುತ್ತಿದ್ದರು. ತಮ್ಮ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗಲೇ ಇನ್ನೊಂದು ಅಂಗಡಿಯ ಮೇಲೆ ಅವರ ಕಣ್ಣಿರುತ್ತಿತ್ತು. ನನಗಿಂತಲೂ ಅವನಿಗೆ ಇವತ್ತು ಗಿರಾಕಿ ಜಾಸ್ತಿ ಸಿಕ್ಕಿರಬೇಕು ಎಂದು ಅವರ ಬಗೆಗೆ ಇವರು, ಇವರ ಬಗೆಗೆ ಅವರು ಅಂದಾಜು ಮಾಡುತ್ತಿದ್ದರು. ಓಹೋ, ಮತ್ತೆ ಈ ಸೇತುಬಂಧ ನಡೆದುಬಿಟ್ಟರೆ ಇಲ್ಲಿ ಕುದುರಿದ್ದ ವ್ಯಾಪಾರವೂ ಇಲ್ಲದೆ ಹೋಗಿಬಿಡುತ್ತದಲ್ಲ. ಇನ್ನಷ್ಟು ದಿನ ಇದು ಹೀಗೆಯೇ ಇರಬಾರದೇ ಎಂದು ಮಟನ್ ಕಬಾಬ್ ತಯಾರಿಸುವ ಬದ್ರುದ್ದಿನ್, ಚಾ ಮಾರುತ್ತಿದ್ದ ಪುರುಷೋತ್ತಮ ಇಬ್ಬರೂ ಯೋಚಿಸುತ್ತಿದ್ದರು. ಹಣ್ಣುಮಾರುವ ಯಾಕೂಬ, ಪಾನಿಪೂರಿಯ ಸಂಜೀವ ಎಲ್ಲರ ಯೋಚನೆಯೂ ಅದೇ. ವ್ಯಾಪಾರ ಚೆನ್ನಾಗಿ ಕುದುರಿದರೆ ಈ ವರ್ಷವೇ ಮಗಳ ಮದುವೆ ಮಾಡುವ ಕನಸನ್ನು ಬದ್ರುದ್ದಿನ್ ಕಾಣುತ್ತಿದ್ದ. ಪುರುಷೋತ್ತಮ ಗಾಡಿಯಲ್ಲಿ ಚಾ ಮಾರುವುದನ್ನು ಬಿಟ್ಟು ಒಂದು ದರ್ಶಿನಿ ತೆರೆದು ಗಲ್ಲಾದ ಮೇಲೆ ಕುಳಿತು ಹಣ ಎಣಿಸುವ ಕನಸು ಕಾಣುತ್ತಿದ್ದ. ಅವರವರು ಅವರವರದೇ ಗುಣಾಕಾರ, ಭಾಗಾಕಾರ, ಹುನ್ನಾರ, ಹಿಕ್ಮತ್ತು, ಸಂಚು, ಪ್ರತಿಸಂಚಿನಲ್ಲಿ ಕಳೆದುಹೋಗುತ್ತಿದ್ದಾಗ ಅವರಿಗೆ ಇನ್ನಷ್ಟು ನಿಗೂಢತೆತನ್ನು ಒದಗಿಸಲೋ ಎಂಬಂತೆ ಹೊತ್ತು ಮುಳುಗಿ ಕತ್ತಲೆ ಕವಿದುಬಿಟ್ಟಿತು. ಮನೆಗೆ ಹೋಗುವುದಕ್ಕೆ ಹಗಲಿಂದ ದುಡಿದು ದಣಿದ ಅವರ ದೇಹ ಮನಸ್ಸು ಎರಡೂ ಚಡಪಡಿಸುತ್ತಿದ್ದವು. ಕೆಲವರು ಅಲ್ಲಿಯೇ ಮಲಗುವುದಕ್ಕೆ ಸಿದ್ಧರಾದರು. ಬದ್ರುದದಿನ್ ಗಾಡಿ ಮಡಚಿ, ಸೈಕಲ್ ಹತ್ತಿದಾಗ ಕತ್ತಲೆಯೆಂಬುದು ಇದ್ದಲಿಯಂತೆ ಕೈಯಿಂದ ಹಿಡಿಯುವಷ್ಟು ಘನವಾಗಿತ್ತು. ಸೈಕಲ್ಲಿಗೆ ಅದೇನೋ ತಾಗಿದಂತಾಗಿ ಬದ್ರುದ್ದಿನ್ ಕೆಳಗಿಳಿದು ಏನೆಂದು ಕೈಯಾಡಿಸುತ್ತಿದ್ದಂತೆಯೇ ಕತ್ತಲೆಯನ್ನು ಸೀಳಿಕೊಂಡು ದಂಡವೊಂದು ಆತನ ತಲೆಯ ಮೇಲೆ ಅಪ್ಪಳಿಸಿತು. ಬಾಯಿಂದ ಅಯ್ಯೋ, ಅಲ್ಲಾ ಎಂಬ ಶಬ್ದಗಳೂ ಹೊರಡದೆ ಬದ್ರುದ್ದಿನ್ ಗತಪ್ರಾಣನಾಗಿ ಸೈಕಲ್ಲಿನ ಮೇಲೇ ಉರುಳಿದ್ದ. ಕತ್ತಲೆಯಲ್ಲಿಯೇ ಚಲಿಸಿದ ಆ ದಂಡವು ಕುಸಿದು ಕುಳಿತ ಸೇತುವೆಯ ಬಳಿ ಚಾದಂಗಡಿಯಲ್ಲಿಯೇ ಮಲಗಿದ್ದ ಪುರುಷೋತ್ತಮನ ಮೇಲೆಯೂ ಪ್ರಹಾರ ಮಾಡಿತು. ಅವನ ಅಂಗಡಿಯಲ್ಲಿಯೇ ಇದ್ದ ಸ್ಟೋವ್‌ನಿಂದ ಸೀಮೆ ಎಣ್ಣೆ ಸುರುವಿ, ಬೆಂಕಿ ಕಡ್ಡಿ ಕೊರೆದು ಬೆಂಕಿಯನ್ನೂ ಹಚ್ಚಿತು. ಮರುದಿನ ಬೆಳಿಗ್ಗೆಯೇ, ಜನರೇ ಶ್ರಮದಾನದಿಂದ ಸೇತುವೆ ಕಟ್ಟುವವರಿದ್ದರು ಎಂಬುದು ಕೇವಲ ಕಾಕತಾಳೀಯ ಆಗಿರಲಿಲ್ಲ. ಸೈಕಲ್ಲಿಗೆ ಆತುಕೊಂಡು ತಲೆಯಿಂದ ರಕ್ತ ಹರಿಸುತ್ತ ಬಿದ್ದಿದ್ದ ಬದ್ರುದ್ದಿನ್‌ನ ಶವ ಮತ್ತು ಚಾ ಗಾಡಿಯಲ್ಲಿಯೇ ಸುಟ್ಟು ಅರೆ ಕರಕಲಾಗಿದ್ದ ಪುರುಷೋತ್ತಮನ ಶವ ಶ್ರಮದಾನಕ್ಕೆ ತಮ್ಮತಮ್ಮ ಮನೆಗಳಿಂದಲೇ ಹಾರೆ, ಗುದ್ದಲಿ, ಸಲಿಕೆ ಇತ್ಯಾದಿಗಳನ್ನು ತಂದಿದ್ದ ಜನರಲ್ಲಿ ರೋಷವನ್ನು ಉಕ್ಕಿಸಿತು. ಪುರುಷೋತ್ತಮನ ಕೊಲೆಗೆ ಮುಸ್ಲಿಮರು ಕಾರಣ ಎಂದೂ, ಬದ್ರುದ್ದಿನ್‌ನ ಕೊಲೆಗೆ ಹಿಂದೂಗಳು ಕಾರಣ ಎಂದೂ ಯಾರೂ ಹೇಳದೆಯೇ ಅವರವರೇ ನಿರ್ಧಾರ ತಳೆದು ನರಗಳನ್ನು ಬಿಗಿಮಾಡಿಕೊಂಡು, ರೋಮಗಳನ್ನು ನಿಗುರಿಸಿಕೊಂಡು, ಕಣ್ಣುಗಳನ್ನು ಕೆಂಪುಬಿಳಿದು ಮಾಡುತ್ತ, ಸುವ್ವರ್‌ಗಳೆನ್ನುತ್ತ, ಹಲ್ಕಟ್‌ಮುಂಡೇಮಕ್ಕಳು ಎನ್ನುತ್ತ, ತಮಗೆ ಮನೆಯಲ್ಲಿ ಹೆಂಡತಿ, ಮಕ್ಕಳು, ತಂದೆ, ತಾಯಿ ಇತ್ಯಾದಿಯೆಂಬ ಒಂದು ಪ್ರಪಂಚ ಇದೆ ಎಂಬುದನ್ನು ಮರೆಯುತ್ತ ಎರಡು ತಂಡಗಳಾಗಿ ಬಡಿದಾಟಕ್ಕೇ ನಿಂತವು. ಹಾಯ್, ಹೊಯ್, ಕೊಚ್ಚು, ಕಡಿಗಳ ನಡುವೆ ರಕ್ತವು ಕೋಡಿಯಾುತು. ಹೆಣಗಳು ಬಿದ್ದವು. ಕೊಚ್ಚೆಯ ನೀರಿನಲ್ಲಿ ರಕ್ತ ಸೇರಿಹೋಇತು. ಪೊಲೀಸ್ ವ್ಯಾನ್‌ಗಳು ಬಂದವು. ಕರ್ಫ್ಯೂ, 144ನೆ ಕಲಂ ಎಲ್ಲ ಯಥಾ ಪ್ರಕಾರ ಜಾರಿಯಾದವು. ಆಳುವ ಪಕ್ಷದವರು ಬಂದರು. ಪ್ರತಿಪಕ್ಷದವರೂ ಬಂದರು. ಮತ್ತು ಭರವಸೆಯ ಮಹಾಪೂರ, ಊಗ್ರ ಹೋರಾಟದ ಶಪಥ, ಪರಿಹಾರ ಘೋಷಣೆ, ತನಿಖೆಗೆ ಒತ್ತಾಯ ಎಲ್ಲವೂ ಆದವು. ಸೇತುಬಂಧ ಕೊನೆಗೂ ಆಗಲೇ ಇಲ್ಲ. ಕನ್ನಡಪ್ರಭ ದೀಪಾವಳಿ “ಶೇಷಾಂಕ 2004