*ಕೇಳಿದರೇ ಭಯವಾಗುವ ಸ್ಥಿತಿ

ದುರಾಳಿಗಳಿಗೆ ಆತ ಸಿಂಹಸ್ವಪ್ನವಾಗಿದ್ದ ಎಂದು ವರ್ಣಿಸುವುದನ್ನು ಕೇಳಿದ್ದೇವೆ. ಅಂದರೆ ಎದುರಾಳಿಗಳು ಅವನನ್ನು ಕಂಡರೆ ಅಂಜುತ್ತಿದ್ದರು, ಎದುರಾಳಿಗಳಲ್ಲಿ ಆತ ಭಯವನ್ನು ಹುಟ್ಟಿಸುತ್ತಿದ್ದ, ಎದುರಾಳಿಗಳನ್ನು ನಾಶ ಮಾಡುವ ಸಾಮರ್ಥ್ಯ ಅತನಲ್ಲಿತ್ತು ಎಂದೆಲ್ಲ ಭಾವಾರ್ಥ ಇಲ್ಲಿ ಹುಟ್ಟುತ್ತದೆ.
ಆತನ ಹೆಸರು ಕೇಳಿದರೆ ನಿದ್ದೆಯಲ್ಲೂ ಬೆಚ್ಚಿಬೀಳುತ್ತಾರೆ ಎಂದರೆ ಆತನ ಕ್ರೂರತೆಯನ್ನೂ ಇದು ಹೇಳುತ್ತದೆ. ಪೊಲೀಸ್‌ ಅಧಿಕಾರಿಯೊಬ್ಬನ ವಿಷಯದಲ್ಲಿ ಅಪರಾಧಿಗಳಿಗೆ ಸಂಬಂಧಿಸಿದಂತೆ ಹೀಗೆ ಹೇಳಿದರೆ ಆತ ದಕ್ಷ ಎಂದರ್ಥ. ಇದೇ ಮಾತುಗಳನ್ನು ಅಪರಾಧಿಗಳ, ರೌಡಿಗಳ ವಿಷಯದಲ್ಲಿ ಹೇಳಿದರೆ ಆತ ಕ್ರೂರಿ ಎಂದರ್ಥ.
ಹೇಳಿಕೇಳಿ ಸಿಂಹ ಕಾಡಿನ ರಾಜ. ಅದರ ಗಾಂಭೀರ್ಯವನ್ನು ನೋಡಿದರೆ ಅಂಜಿಕೆ ಹುಟ್ಟುವುದು ಸಹಜ. ಸಿಂಹ ಒಮ್ಮೆ ಗರ್ಜನೆ ಹಾಕಿದರೆ ಎದೆ ನಡುಗುತ್ತದೆ. ಎದುರಿಗಿರುವ ಸಿಂಹವನ್ನು ನೋಡಿ ಅಂಜಿದವನು ಅದರ ನೆನಪಿನಲ್ಲೇ ಮಲಗಿದರೆ ನಿದ್ದೆ ಎಲ್ಲಿ ಬರುವುದು ಅರೆಬರೆ ನಿದ್ದೆಯಲ್ಲಿ ಸ್ವಪ್ನ ಬಿದ್ದರೂ ಸಿಂಹದ್ದೇ ಸ್ವಪ್ನ. ನಿದ್ದೆಯಲ್ಲೂ ಆತ ಅಂಜದೆ ಇರುತ್ತಾನೆಯೇ?
ಇದಕ್ಕಾಗಿಯೇ ಹೇಳುವುದು ಬದುಕಿದರೆ ಸಿಂಹದ ಹಾಗೆ ಬದುಕಬೇಕು ಎಂದು.