ಸಹೃದಯ ವಿಮರ್ಶೆ ವಿಭಾವರಿ ಭಟ್ಟರು ರಮೇಶ ಭಟ್‌‌ ಬೆಳಗೋಡು ಎಂದು ನನಗೆ ಗೊತ್ತಾಗಿದ್ದು ಅದೆಷ್ಟೋ ದಿನಗಳ ಬಳಿಕ. `ಕನ್ನಡಪ್ರಭ’ದ `ಅಕ್ಷರ ತೋರಣ’ ಪುಟಕ್ಕೆ ನಿಯಮಿತವಾಗಿ ಅವರು ವಿಮರ್ಶೆ ಬರೆಯುತ್ತಿದ್ದರು. ಹೇಳಿದ ದಿನಕ್ಕೆ ಹೇಳಿದ ಸಮಯಕ್ಕೆ ಸರಿಯಾಗಿ ಮೇಲ್ ಮಾಡುತ್ತಿದ್ದ ವಿಭಾವರಿ ಭಟ್ಟರು ನಂತರ ಫೋನ್‌ ಮಾಡಿ `ಕಳುಹಿಸಿದ್ದೇನೆ’ ಎಂದೂ ಹೇಳುತ್ತಿದ್ದರು. ಇದು ಅವರ ಕಾರ್ಯತತ್ಪರತೆ ಮತ್ತು ಶ್ರದ್ಧೆಯನ್ನು ತೋರಿಸುತ್ತದೆ. ಈ `ಶ್ರದ್ಧೆ’ ಎಂಬ ಮಾತನ್ನು ನಾನು ಒತ್ತಿ ಹೇಳುವುದಕ್ಕೆ ಇಷ್ಟಪಡುತ್ತೇನೆ. ಏಕೆಂದರೆ, ಇದು ನಮ್ಮ ಸಸಂಸ್ಕೃತಿಯ ಪದ. ಶ್ರದ್ಧೆಯು ಅವರು ಮಾಡುತ್ತಿರುವ ಬ್ಯಾಂಕ್‌ ಉದ್ಯೋಗದಿಂದಲೂ ಸಿದ್ಧಿಸಿರಬಹುದು. ಬ್ಯಾಂಕಿನಲ್ಲಿ ಹಿರಿಯ ಅಧಿಕಾರಿಯಾಗಿರುವ ಅವರು ವಿವಿಧ ಮನೋಧರ್ಮದ ಹಲವಾರು ಜನರನ್ನು ನಿತ್ಯವೂ ಭೇಟಿಮಾಡಬೇಕಾಗುತ್ತದೆ. ಅದು ಅವರಿಗೆ ಪೊಲೈಟ್‌ನೆಸ್‌ ಕಲಿಸಿಕೊಟ್ಟಿದೆ. ಈ ಪೊಲೈಟ್‌ನೆಸ್‌ ಅವರ ವಿಮರ್ಶೆಯ ಹೈಲೈಟ್‌ ಎಂದು ಹೇಳಿದರೆ ತಪ್ಪಾಗಲಾರದು. ಭಟ್ಟರ ವಿಮರ್ಶೆಯೆಲ್ಲವೂ ಭಾರತೀಯ ಸಂಸ್ಕೃತಿಯ ಮಾನದಂಡದಿಂದಲೇ ನೋಡಿರುವಂಥದ್ದು. ಅವರ ವಿಮರ್ಶೆಯನ್ನು ಓದಿದವರಿಗೆ, ಭಟ್ಟರು ಭಾರತೀಯ ಕಾವ್ಯಮೀಮಾಂಸೆಯನ್ನು ಎಷ್ಟೊಂದು ಆಳವಾಗಿ ಅಭ್ಯಾಸ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಅವರದು ತೀ.ನಂ.ಶ್ರೀ. ಪಂಥ. ಭಟ್ಟರ ವಿಮರ್ಶೆಯಲ್ಲಿ ಸಹೃದಯನಿಗೆ ಮೊದಲ ಆದ್ಯತೆ. ಯಾವುದೇ ಪರಿಚಯವಿಲ್ಲದೆ ಒಂದು ಕೃತಿ ಓದುಗನನ್ನು ಹೇಗೆ ತಲುಪುತ್ತದೆ ಎನ್ನುವುದು ಅವರ ದೃಷ್ಟಿಯಲ್ಲಿ ಮುಖ್ಯವಾದದ್ದು. ಅವರ ವಿಮರ್ಶೆಯ ಪಾರಿಭಾಷಿಕ ಪದಗಳನ್ನು ನೋಡಿ- ಪೂರ್ವಸೂರಿಗಳು, ಶಬ್ದಚೇಷ್ಟೆ, ಆಜ್ಞೇಯತೆಯ ಅಧ್ಯಾತ್ಮ, ಪ್ರತಿಮಾ ವೈಭವ, ವ್ಯಂಗ್ಯ-ವಿಡಂಬನೆ, ಶ್ಲೇಷೆ, ನಾಟಕೀಯ ಸ್ವಗತ, ಸಾಹಿತ್ಯಸೌಜನ್ಯ, ಸೃಜನಶೀಲಪ್ರತಿಭೆ, ಭ್ರಮರ ಕೀಟ ನ್ಯಾಯ, ದಿವ್ಯ ಅನುಭೂತಿ, ವಿಮರ್ಶೆಯ ಬೆರಗು- ಇವನ್ನೆಲ್ಲ ನೋಡಿದಾಗ ಇವರ ವಿಮರ್ಶೆಯ ಪಥ ಯಾವುದೆಂದು ಬೋಧೆಯಾಗುತ್ತದೆ. ಭಟ್ಟರ ವಿಮರ್ಶೆಯ ಇನ್ನೊಂದು ಕ್ರಮವೆಂದರೆ ತಾವು ಅನುಸಂಧಾನ ಮಾಡುವ ಕೃತಿಯ ಬಗ್ಗೆ ಇತರರು ಏನು ಹೇಳಿದ್ದಾರೆ ಎಂಬುದನ್ನು ಸಂಗ್ರಹಿಸಿ ಕೊಡುವುದು. ಅವರೆಲ್ಲರ ಅಭಿಪ್ರಾಯಗಳ ಆಚೆಗೆ ಹೇಳಬೇಕಾದದ್ದು ಏನಿದೆ ಎಂಬುದನ್ನು ಆ ಬಳಿಕ ಮಂಡಿಸುವುದು. ತಾವು ಹೇಳಬೇಕಾದ ವಿಷಯಕ್ಕೆ ಪೂರಕವಾಗಿ ಉಳಿದವರು ಏನೇನು ಹೇಳಿದ್ದಾರೆ ಎಂಬುದನ್ನು ಬಳಸಿಕೊಳ್ಳುವುದು. ಇದು ಮೇಲ್ನೋಟಕ್ಕೆ ತೋರುವ ಹಾಗೆ ಸುಲಭದ್ದಂತೂ ಅಲ್ಲ. ಕೃತಿಯನ್ನು ಓದಬೇಕು, ಜೊತೆಗೆ ಅದರ ಬಗ್ಗೆ ಬಂದಿರುವ ಇತರ ಕೃತಿಗಳನ್ನೂ ಓದಬೇಕು. ಹೀಗಾಗಿ ಒಂದೊಂದು ವಿಮರ್ಶೆಯೆನ್ನುವುದೂ ಒಂದೊಂದು ಅಧ್ಯಯನವೇ ಆಗಿಬಿಡುತ್ತದೆ. ಇದು ಮೇಲೆ ಹೇಳಿದ ಹಾಗೆ ತತ್ಪರತೆ ಮತ್ತು ಶ್ರದ್ಧೆ ಇದ್ದವರಿಂದ ಮಾತ್ರ ಸಾಧ್ಯವಾಗುವಂಥದ್ದು. ಹೊಸ ಮಾನದಂಡದೊಂದಿಗೆ ಹಳೆಯ ಕೃತಿಗಳ ಅಧ್ಯಯನವು ಭಟ್ಟರ ಶಿಸ್ತುಗಳಲ್ಲಿ ಒಂದು. ಇದು ಕೃತಿಗಳಿಗೆ ಹೊಸ ಬೆರಗನ್ನು ನೀಡಿದೆ. ಕಾರಂತರ ಮರಳಿ ಮಣ್ಣಿಗೆ, ಮೊಗಸಾಲೆಯವರ ಉಲ್ಲಂಘನೆ ಮೊದಲಾದ ಕೃತಿಗಳ ಕುರಿತ ಅವರ ವಿಮರ್ಶೆಯಲ್ಲಿ ಇವನ್ನು ನಾವು ಗುರುತಿಸಬಹುದು. ಕೆದಿಲಾಯರು ಅಡಿಗರ ಕವಿತೆಗಳ ಬಗ್ಗೆ ಬರೆದಿರುವ ವಿಮರ್ಶೆಯನ್ನು ವಿಮರ್ಶಿಸುವ ಭಟ್ಟರು, ಅಲ್ಲಿ ಕೆದಿಲಾಯರ ಬಗ್ಗೆ ಆಡಿರುವ ಮಾತು ಸ್ವತಃ ತಮ್ಮ ಬಗ್ಗೆ ಹೇಳಿಕೊಂಡ ಮಾತುಗಳಂತಿವೆ. ಭಟ್ಟರು ಹೇಳುತ್ತಾರೆ, `ಕೆದಿಲಾಯರ ಇಲ್ಲಿನ ಅಧ್ಯಯನದಿಂದ ಪ್ರಾಪ್ತವಾಗುವ ಅತಿದೊಡ್ಡ ಲಾಭವೆಂದರೆ ಅಡಿಗರ ಕವಿತೆಯನ್ನು ಮಾತ್ರವಲ್ಲ, ಅದಕ್ಕೆ ಮೂಲಸೂತ್ರವಾದ ಯುಗಧರ್ಮ, ಸಾಹಿತ್ಯಪ್ರಜ್ಞೆ ಮತ್ತು ವೈಚಾರಿಕತೆಯ ಮುಖಗಳನ್ನೂ ಅಡಿಗರ ಒಳತೋಟಿಯನ್ನೂ ಅರ್ಥೈಸಿಕೊಳ್ಳುವಲ್ಲಿ ಲಭ್ಯವಾಗುವ ನೆರವು. ಅಡಿಗರ ಇಪ್ಪತ್ತು ಕವಿತೆಗಳನ್ನು ಪರಿಚಯಿಸುವಾಗಲೂ ಅವರು ನವ್ಯ ವಿಮರ್ಶಕರಂತೆ ಕೆಲಸ ಮಾಡದೆ ಹಳೆಯ ತಲೆಮಾರಿನ ಕನ್ನಡ ಪಂಡಿತರ ರೀತಿಯಲ್ಲಿ ಕೆಲಸ ಮಾಡುತ್ತಾರೆ. ನವ್ಯ ವಿಮರ್ಶಕ ಮೊದಲಿಗೆ ಅನುಮಾನಿಸುತ್ತಾನೆ, ಮತ್ತೆ ಅದಕ್ಕೆ ಪೂರಕವಾದ ದಾಖಲೆಗಳನ್ನು ಕಲೆಹಾಕುತ್ತಾನೆ. ಹಳೆಯ ತಲೆಮಾರಿನ ಕನ್ನಡ ಪಂಡಿತ ಮೊದಲಿಗೆ ಅಕ್ಷರವನ್ನು ಪ್ರೀತಿಸುತ್ತಾನೆ, ಸೊಗಸನ್ನು ಗುರುತಿಸಲು ಶ್ರಮಿಸುತ್ತಾನೆ, ತನಗೆ ಪ್ರಾಪ್ತವಾದ ಬೆರಗನ್ನು ವಿನಯದಿಂದ ಇತರರ ಎದುರು ಒಡ್ಡುತ್ತಾನೆ. ಕೆದಿಲಾಯರ ಅಧ್ಯಯನದ ಸೊಗಸೇ ಈ ವಿನಯ.’ ಈ ವಿನಯವನ್ನು ನಾವು ವಿಭಾವರಿ ಭಟ್ಟರ ವಿಮರ್ಶೆಯಲ್ಲೂ ಗುರುತಿಸಬಹುದು. ಭಟ್ಟರ ದೃಷ್ಟಿಯಲ್ಲಿ ಸಾಹಿತ್ಯವೆಂದರೆ ಸಾಮಾನ್ಯ ಓದುಗರಿಗೆ ಸಂಭ್ರಮದ ಮತ್ತು ಸಾಹಿತ್ಯ ವಿಮರ್ಶೆಯ ಅಧ್ಯಯನಾಸಕ್ತರಿಗೆ ಕುತೂಹಲದ ಘಳಿಗೆಗಳನ್ನು ತಂದುಕೊಡುವ ಸಂಗತಿಗಳಲ್ಲಿ ಒಂದು. ಮಾಧವ ಕುಲಕರ್ಣಿಯವರ ಕಥೆಗಳ ಬಗ್ಗೆ ಬರೆದ ವಿಮರ್ಶೆಯಲ್ಲಿ ಅವರ ಈ ಸಾಲುಗಳನ್ನು ಓದಬೇಕು, `ಮಾಧವ ಕುಲಕರ್ಣಿಯವರ ಐವತ್ತೊಂದು ಸಣ್ಣಕತೆಗಳ ಓದಿನ ಅನಂತರ ನನ್ನನ್ನು ತೋಯಿಸಿಬಿಟ್ಟ ಒಂದು ದಿವ್ಯ ಅನುಭೂತಿಯನ್ನು ವಿಮರ್ಶೆಯ ಬೆರಗು ಮೀರಿದ ಪರಿಭಾಷೆಯಲ್ಲಿ ದಾಖಲಿಸಲೇಬೇಕಾದ ಒಂದು ತುರ್ತು ನನ್ನನ್ನು ಅಲುಗಿಸಿಬಿಟ್ಟಿದೆ.’ ಈ ಹಂತದಲ್ಲಿಯೇ ವಿಮರ್ಶೆ ಕೇವಲ ವಿಮರ್ಶೆಯಾಗದೆ ಒಂದು ಸೃಜನಶೀಲ ಕಥನವಾಗುತ್ತದೆ. ವಿಮರ್ಶೆಯನ್ನು ಕಥನವಾಗಿಸುವ ಶೈಲಿ ವಿಭಾವರಿ ಭಟ್ಟರಿಗೆ ಸಿದ್ಧಿಸಿದೆ. ಈ ಕಾರಣಕ್ಕಾಗಿಯೇ ಅವರ ವಿಮರ್ಶೆಗಳು ಆಪ್ತವಾಗಿ ಓದಿಸಿಕೊಳ್ಳುತ್ತವೆ. ಅರಿವನ್ನು ವಿಸ್ತರಿಸುತ್ತವೆ. ಒಂದು ಕೃತಿ ವಿಮರ್ಶಕನ ವಶವಾಗುವುದು ‘ಸಾಂಪ್ರದಾಯಿಕ ಓದಿನಾಚಿನ ಓದಿನಲ್ಲಿ’ ಎಂಬುದು ಅವರ ನಂಬುಗೆ. ‘ಓದಿನಾಚಿನ ಓದು’ ಎಂದರೆ ಯಾವುದೇ ಕೃತಿ ಎರಡನೆಯ ಓದಿನಲ್ಲಿ ಬಿಟ್ಟುಕೊಡುವ ವಿಸ್ಫುರಣ. ಬದುಕಿನ ಬಗ್ಗೆ ಮತ್ತು ಸಾಹಿತ್ಯದ ಬಗ್ಗೆ ಜೀವಂತ ಶ್ರದ್ಧೆ ಮತ್ತು ಆಸಕ್ತಿ ಇರುವವರು ಕೃತಿಯನ್ನು ಅಧ್ಯಯನಾಸಕ್ತಿಯಿಂದ ಓದಿದರೆ ಆ ಕೃತಿಯ ಒಳಗಿನಿಂದ ಒಬ್ಬ ಸಮಾಜಶಾಸ್ತ್ರಜ್ಞ, ಮಾನವೀಯ ಸಂಬಂಧಗಳ ವಿಶ್ಲೇಷಕ ಮತ್ತು ಅರ್ಥಶಾಸ್ತ್ರ ಪ್ರಸ್ತುತತೆಯ ದಿಕ್ಸೂಚಕನಾಗಿ ಗೋಚರಿಸುತ್ತಾನೆ. ಬದುಕಿನ ಮೌಲ್ಯಗಳನ್ನು ಪುನಃ ಮೊದಲಿನಿಂದ ಶೋಧಿಸುವ, ಸ್ವರೂಪವನ್ನು ನಿಶ್ಚಯಿಸುವ, ಬದುಕನ್ನು ಒಳಗಿನಿಂದ ಕಾಣುವ ಅವರ ಅವಸರವು ಆಪ್ತವಾದ ಬರೆವಣಿಗೆಯಿಂದ ಮನಮುಟ್ಟುತ್ತದೆ ಎಂದು ಹೇಳುವಲ್ಲಿ ಭಟ್ಟರು ವಿಮರ್ಶೆಯ ಮೀಮಾಂಸೆಯನ್ನು ಮಂಡಿಸುತ್ತಿರುವಂತೆ ತೋರುತ್ತದೆ. ವಿಭಾವರಿ ಭಟ್ಟರು ತಮ್ಮ ವಿಮರ್ಶೆಯ ಸಂಕಲನಕ್ಕೆ `ಸೃಷ್ಟಿಯ ಮೇಲಣ ಕಣಿ’ ಎಂದು ಹೆಸರಿಟ್ಟು ಅಲ್ಲಮನ ಮೇಲಿನ ತಮ್ಮ ಪ್ರೀತಿಯನ್ನು ಮತ್ತೊಮ್ಮೆ ಜಾಹೀರು ಪಡಿಸಿದ್ದಾರೆ. ಇದಕ್ಕೊಂದು ಮುನ್ನುಡಿಯ ರೂಪದಲ್ಲಿ ಕೆಲವು ಮಾತುಗಳನ್ನು ಬರೆಯ ಬೇಕೆಂಬ ಅವರ ಬಯಕೆಯನ್ನು ನಾನು ಆದೇಶವೆಂದೇ ತಿಳಿದು ಸ್ನೇಹದ ಬಾಗಿನದ ರೂಪದಲ್ಲಿ ಕೆಲವು ಮಾತುಗಳನ್ನು ಹೇಳಿದ್ದೇನೆ. ಭಟ್ಟರು ಕನ್ನಡದ ಒಬ್ಬ ಪ್ರಮುಖ ಸಹೃದಯ ವಿಮರ್ಶಕ. ಅವರಿಂದ ಇನ್ನಷ್ಟು ವಿಮರ್ಶೆಯ ಕೃತಿಗಳು ಹೊರಬರಲಿ ಎಂದು ಆಶಿಸುತ್ತ ವಿರಮಿಸುತ್ತೇನೆ.