ತೆಲುಗಿನ ಜನಪ್ರಿಯ ಸಾಹಿತಿ ಯಂಡಮೂರಿ ವೀರೇಂದ್ರನಾಥ್ ಅವರು ಕನ್ನಡದಲ್ಲಿಯೂ ಜನಪ್ರಿಯರಾಗಿದ್ದಾರೆ. ಇದಕ್ಕೆ ಅವರ ಕೃತಿಗಳ ಅನುವಾದವೇ ಕಾರಣವಾಗಿದೆ. ಅವರ ಕೃತಿಗಳನ್ನು ಕನ್ನಡಿಸುತ್ತಿರುವವರಲ್ಲಿ ಯತಿರಾಜ್ ವೀರಾಂಬುಧಿಯವರು ಪ್ರಮುಖರು. ಇದೀಗ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೃತಿ ‘ಕಣಿವೆಯಿಂದ ಶಿಖರಕ್ಕೆ’ ಕನ್ನಡ ಓದುಗರಿಗೆ ದೊರೆಯುವಂತೆ ಮಾಡಿದ್ದಾರೆ ವೀರಾಂಬುಧಿಯವರು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ವಿಶೇಷತೆಗಳಿರುತ್ತವೆ. ಮರೆವೆಯಿಂದಲೋ ಆಲಸ್ಯದಿಂದಲೋ ಆ ವಿಶೇಷತೆಗಳು ಹೊರಬರುವುದೇ ಇಲ್ಲ. ಹನುಮಂತನಿಗೆ ಆತನ ಸಾಮರ್ಥ್ಯವನ್ನು ಬೇರೆಯವರು ಹೇಳಿದ ಮೇಲಷ್ಟೆ ಅರಿವಿಗೆ ಬರುತ್ತಿತ್ತಂತೆ. ಋಷಿಗಳ ಶಾಪದಿಂದ ಆತನಿಗೆ ಹಾಗೆ ಆಗಿತ್ತು. ತಮ್ಮ ನೈಜ ಸಾಮರ್ಥ್ಯವನ್ನು ಮರೆತುಹಾಕುವುದೆಂದರೆ ಶಾಪಗ್ರಸ್ತರಾದಹಾಗೆಯೇ. ವ್ಯಕ್ತಿತ್ವ ವಿಕಸನದ ಪುಸ್ತಕಗಳು ಇಂಥವರನ್ನು ಶಾಪವಿಮೋಚನೆಗೊಳಿಸುತ್ತವೆ. ನಮ್ಮಲ್ಲಿರುವ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳುವುದಕ್ಕೆ ಇಂಥ ಪುಸ್ತಕಗಳು ಸಹಕಾರಿಯಾಗುತ್ತವೆ. ಈ ಕೃತಿಯಲ್ಲಿ ಎರಡು ಭಾಗಗಳಿವೆ. ಮೊದಲ ಭಾಗ ಕಣಿವೆ ಎಂದೂ ಎರಡನೆ ಭಾಗ ಶಿಖರ ಎಂದೂ ವಿಭಾಗಿಸಿದ್ದಾರೆ. ಮೊದಲ ಭಾಗದಲ್ಲಿ ನಮ್ಮ ವ್ಯಕ್ತಿತ್ವ ಕುಸಿಯುವ ಕಾರಣಗಳನ್ನು ಅವರು ಗುರುತಿಸುತ್ತಾರೆ. ಶಿಖರ ಭಾಗದಲ್ಲಿ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವ ಬಗೆಗಳನ್ನು ಹೇಳುತ್ತಾರೆ. ಯಂಡಮೂರಿಯವರು ಬದುಕನ್ನು ಪುಸ್ತಕಕ್ಕೆ ಹೋಲಿಸುತ್ತಾರೆ. ನಿನ್ನ ಪುಸ್ತಕವನ್ನು ನೀನೇ ಪ್ರೀತಿಸ(ಲಾರ)ದಿದ್ದರೆ ಇತರರು ಅದರತ್ತ ಕನಿಷ್ಠಪಕ್ಷ ಕಣ್ಣೆತ್ತಿ ಕೂಡಾ ನೋಡರು. ಪ್ರತಿದಿನವೂ ಅದನ್ನು ಓದು, ಬೇಕಾದಷ್ಟು ಅಚ್ಚುತಪ್ಪುಗಳು ದೊರಕುತ್ತವೆ. ಗತ ಅನುಭವಗಳ ಸಹಾಯದಿಂದ ಅವನ್ನು ತಿದ್ದಿದಷ್ಟೂ ನಿನ್ನ ಜೀವನ ಪುಸ್ತಕ ಮತ್ತಷ್ಟು ಅಂದವಾಗಿ ತಯಾರಾಗುತ್ತದೆ. ಆ ಪ್ರೂಫ್ರೀಡಿಂಗನ್ನೇ ‘ಆತ್ಮಪರಿಶೀಲನೆ’ ಎನ್ನುತ್ತಾರೆ. ಪ್ರೂಫ್ರೀಡಿಂಗ್ ಎಷ್ಟು ಚೆನ್ನಾಗಿದ್ದರೆ ಪುಸ್ತಕ ಅಷ್ಟು ಚೆನ್ನಾಗಿರುತ್ತದೆ. ತುಂಬ ಸರಳವಾದ ಉದಾಹರಣೆಯ ಮೂಲಕ ಹೇಳುವ ಈ ಕ್ರಮ ಓದುಗನನ್ನು ಆವರಿಸಿಬಿಡುತ್ತದೆ. ಇದು ಯಂಡಮೂರಿಯವರ ಬರೆವಣಿಗೆಯ ಶೈಲಿ. ನಾವು ಹೊಲದಲ್ಲಿ ಕಾಳನ್ನು ಬಿತ್ತುತ್ತೇವೆ. ಎಲ್ಲ ಕಾಳೂ ಮೊಳಕೆಯೊಡೆಯುತ್ತವೆ ಎಂದೇನಿಲ್ಲ. ವ್ಯಕ್ತಿತ್ವ ವಿಕಸನದ ಪುಸ್ತಕವನ್ನು ಓದಿದವರೆಲ್ಲ ತಮ್ಮ ವ್ಯಕ್ತಿತ್ವವನ್ನು ಉತ್ತಮಪಡಿಸಿಕೊಳ್ಳುತ್ತಾರೆ ಅಂತೇನೂ ಇಲ್ಲ. ನೂರರಲ್ಲಿ ಹತ್ತಾದರೂ ಜನರು ಬದಲಾದರೆ ಕೃತಿ ಬರೆದವರ ಶ್ರಮ ಸಾರ್ಥಕವಾಗುತ್ತದೆ. ಕೃತಿಯನ್ನು ಓದಿ ಪ್ರಭಾವಿತರಾಗಿ ತಮ್ಮ ಬದುಕನ್ನು ಬದಲಿಸಿಕೊಂಡ ಕೆಲವರು ಲೇಖಕರಿಗೆ ಮುಖಾಮುಖಿಯಾಗಿ ತಮ್ಮ ಯಶಸ್ಸನ್ನು ಹೇಳಿಕೊಂಡಿದ್ದಾರೆ. ಹಾಗೆ ಮುಖಾಮುಖಿಯಾಗದೆ ಇರುವವರು ಹಲವರು ಇರಬಹುದು. ಬದುಕಿನಲ್ಲಿ ಯಶಸ್ಸು ಸಾಧಿಸುವ ಸಂಬಂಧದಲ್ಲಿ ಸೂತ್ರರೂಪದ ಹಲವು ಮಾತುಗಳನ್ನು ಯಂಡಮೂರಿ ಈ ಕೃತಿಯಲ್ಲಿ ಹೇಳಿದ್ದಾರೆ. ‘‘ಗೆಲುವೆಂದರೆ… ಒಬ್ಬ ಮನುಷ್ಯ ಹಾಯಾಗಿ, ಆನಂದವಾಗಿ, ಕಡಿಮೆ ಸಮಸ್ಯೆಗಳೊಂದಿಗೆ ಸನಿಹದವರೊಂದಿಗೆ ಒಳ್ಳೆಯ ಸಂಬಂಧಗಳೊಂದಿಗೆ, ನಾಲ್ವರ ನಡುವೆ ಒಳ್ಳೆಯ ಹೆಸರಿನೊಂದಿಗೆ ಹಣಕ್ಕಾಗಿ ಪರದಾಡದೇ, ಇದ್ದುದರಲ್ಲಿಯೇ ಇತರರಿಗೆ ಸಹಾಯ ಮಾಡುತ್ತಾ, ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ, ತನ್ನ ಸಮಯವನ್ನು ತಾನು ನಿರ್ದೇಶಿಸಿಕೊಳ್ಳುವ ಮಟ್ಟದಲ್ಲಿ ಪ್ರಶಾಂತವಾಗಿ ಇರಬಲ್ಲವನಾಗುವುದು.’’ ‘‘ಗೆಲ್ಲುತ್ತಿದ್ದರೆ ನಿನ್ನ ನೆರಳಿನೊಂದಿಗೆ ಹಸ್ತಲಾಘವ ಮಾಡಲು ಕೂಡ ಜನರು ಓಡಿಬರುತ್ತಾರೆ. ಸೋಲಿನ ಕತ್ತಲಿನಲ್ಲಿ ನಿನ್ನ ನೆರಳು ಕೂಡ ನಿನ್ನ ಪಕ್ಕದಿಂದ ಮಾಯವಾಗುತ್ತದೆ.’’ ‘‘ಒಬ್ಬ ವ್ಯಕ್ತಿಯ ವರ್ತನೆ, ಎಮೋಷನ್ಸ್, ನಿಯತ್ತು, ಸಂಭಾಷಣಾ ಚಾತುರ್ಯ, ಬುದ್ಧಿವಂತಿಕೆ ಮೊದಲಾದ ಗುಣಗಳನ್ನೆಲ್ಲಾ ಸೇರಿಸಿ, ‘ವ್ಯಕ್ತಿತ್ವ’ ಎನ್ನುತ್ತೇವೆ. ವ್ಯಕ್ತಿತ್ವ ವಿಕಾಸವೆಂದರೆ ಪರ್ಸನಲ್ ಡೆವಲಪ್ಮೆಂಟ್. ಸಂಕ್ಲಿಷ್ಟವಾದ ಜೀವನ ಪಯಣದಲ್ಲಿ ಗೆಲುವಿನ ಗುರಿಯನ್ನು ಸಾಧ್ಯಮಾಡಿಕೊಳ್ಳಲು ಸುಸ್ಪಷ್ಟವಾದ ದಾರಿಯೆಂದರೆ ವ್ಯಕ್ತಿತ್ವವಿಕಾಸ.’’ ಕೆಲವರಿಗೆ ಗಮ್ಯ ಇರುತ್ತದೆ. ದಾರಿ ತಿಳಿಯದು. ಮತ್ತೆ ಕೆಲವರಿಗೆ ದಾರಿ ತಿಳಿದರೂ ಪ್ರಯಾಣ ಮಾಡಲು ಸರಿಯಾದ ವಾಹನ ಇರುವುದಿಲ್ಲ. ವಾಹನವಿದ್ದರೂ ಅದರಲ್ಲಿ ಇಂಧನವಿರುವುದಿಲ್ಲ. ಅಂತಹ ಗಮ್ಯವನ್ನು, ದಾರಿಯನ್ನು, ವಾಹನವನ್ನು, ಇಂಧನವನ್ನು ತೋರಿಸಿಕೊಡುವುದೇ ವ್ಯಕ್ತಿತ್ವ ವಿಕಾಸ ಎಂದು ಹೇಳುತ್ತ ಹಲವು ಉದಾಹರಣೆಗಳನ್ನು ಅವರು ನೀಡುತ್ತಾರೆ. ಇವೆಲ್ಲ ತಟ್ಟನೆ ಮನಸ್ಸಿಗೆ ನಾಟುವಂತಿವೆ. ಮನುಷ್ಯ ಕುಸಿದು ಹೋಗುವುದಕ್ಕೆ ಆತನ ಬಲಹೀನತೆಗಳೇ ಕಾರಣ ಎಂದು ಯಂಡಮೂರಿ ಹೇಳುತ್ತಾರೆ. ಈ ಬಲಹೀನತೆಯನ್ನು ದೈಹಿಕ ಮತ್ತು ಮಾನಸಿಕ ಎಂದು ಅವರು ವಿಭಾಗಿಸುತ್ತಾರೆ. ದೈಹಿಕವಾದದ್ದು ವಾಸ್ತವಿಕ ಮತ್ತು ಸ್ವಯಂಕಲ್ಪಿತ ಎಂದೂ ಮಾನಸಿಕವಾದುದನ್ನು ವಾಸ್ತವ- ಊಹಾಜನಿತ ಮತ್ತು ಫೋಬಿಯಾ- ದುರ್ವ್ಯಸನ ಎಂದೂ ವಿಭಾಗಿಸುತ್ತಾರೆ. ಈ ಭಯವನ್ನು ಹೇಗೆ ದೂರಮಾಡಿಕೊಳ್ಳಬೇಕು ಎಂಬ ಸಲಹೆಗಳೇ ಈ ಕೃತಿಯ ಹೈಲೈಟ್ಸ್. ಮನುಷ್ಯನ ಮತ್ತೊಂದು ಬಲಹೀನತೆ ಸೋಮಾರಿತನ. ಸೋಮಾರಿತನ ಬೇರೆ ವಿಶ್ರಾಂತಿ ಬೇರೆ. ಕೆಲಸಗಳ ನಡುವೆ ಶ್ವಾಸ ಎಳೆದುಕೊಳ್ಳುವುದು ವಿಶ್ರಾಂತಿ. ಕೆಲಸವನ್ನೇ ಮಾಡದೆ ಇರುವುದು ಸೋಮಾರಿತನ. ಸೋಮಾರಿತನಕ್ಕೆ ಮೂವರು ತಂಗಿಯರು: ನಿರ್ಲಿಪ್ತತೆ, ಹತಾಶೆ, ನಿರಾಸಕ್ತಿ. ಅದೇ ರೀತಿ ವರ್ಕ್ಹಾಲಿಕ್ಸ್ ಕೂಡ ಒಂದು ಬಲಹೀನತೆ ಎಂದು ಅವರು ವಿವರಿಸುತ್ತಾರೆ. ಮಗಳ ಮದುವೆಯ ಸಮಯದಲ್ಲಿ ಆಫೀಸಿನ ವಿಷಯಗಳನ್ನು ಚರ್ಚಿಸುವಂಥ ಅತಿರೇಕಿಗಳು ಇವರು. ಇದನ್ನು ಮೀರುವುದು ಹೇಗೆ ಎಂಬುದನ್ನು ಇದರಲ್ಲಿ ಯಂಡಮೂರಿ ವಿವರಿಸಿದ್ದಾರೆ. ನಾಯಕತ್ವದ ಲಕ್ಷಣಗಳನ್ನು ಅವರು ವಿವರಿಸುತ್ತಾರೆ. ಒಳ್ಳೆಯ ನಾಯಕರು ಹುಟ್ಟುವುದಿಲ್ಲ ತಯಾರಾಗುತ್ತಾರೆ ಎನ್ನುತ್ತಾರೆ. ಮಾತನಾಡುವ ಕಲೆಯಿಂದ ನಮ್ಮ ಬದುಕನ್ನು ಹೇಗೆ ಉತ್ತಮ ಪಡಿಸಿಕೊಳ್ಳಬಹುದು ಎಂಬುದನ್ನು ವಿವರಿಸುತ್ತಾರೆ. ಕೊನೆಯಲ್ಲಿ, ‘ವಿಜಯವೆಂದರೆ ಬದುಕನ್ನು ಚಿಕ್ಕಮಕ್ಕಳಂತೆ ಅನುಭವಿಸುವುದು’ ಎಂದು ಹೇಳುತ್ತಾರೆ. ನಾವು ಕಂಡುಕೇಳಿದ ವಿಷಯಗಳನ್ನೇ ಅವರು ತಮ್ಮದೇ ದೃಷ್ಟಿಕೋನದಿಂದ ನೋಡಿ ಪ್ರಸ್ತುತಕ್ಕೆ ಅನ್ವಯಿಸಿ ಹೇಳುವ ಮೂಲಕ ಬರೆಹಕ್ಕೆ ಒಂದು ಆಪ್ತತೆಯನ್ನು ಒದಗಿಸಿದ್ದಾರೆ. ವ್ಯಕ್ತಿತ್ವ ವಿಕಸನ ಸಾಹಿತ್ಯದಲ್ಲಿ ತಮ್ಮ ಬರೆಹಗಳಿಗೆ ಒಂದು ವಿಶೇಷ ಸ್ಥಾನವಿದೆ ಎಂಬುದನ್ನು ಯಂಡಮೂರಿ ಈ ಕೃತಿಯಲ್ಲಿ ಸಾಬೀತುಪಡಿಸಿದ್ದಾರೆ. ಪ್ರ: ನವಸಾಹಿತಿ ಪಬ್ಲಿಷರ್ಸ್, ವಿಜಯವಾಡ, ಪುಟಗಳು ೨೫೬, ಬೆಲೆ ₹ ೧೭೫
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.