ಡ್ಯಂತ್ರ ಎಂಬ ಪದವನ್ನು ನಾವು ನಿತ್ಯವೂ ಒಂದಲ್ಲ ಒಂದು ಸಂದರ್ಭದಲ್ಲಿ ಬಳಸುತ್ತೇವೆ. ಹೀಗಂದರೆ ಏನು? ನನ್ನ ವಿರುದ್ಧ ಅವನು ಷಡ್ಯಂತ್ರ ರಚಿಸಿದ್ದಾನೆ ಎನ್ನುತ್ತೇವೆ, ರಾಜಕೀಯ ನಾಯಕರಾದವರು ಪ್ರತಿಪಕ್ಷದವರು ತಮ್ಮ ವಿರುದ್ಧ ಷಡ್ಯಂತ್ರ ರಚಿಸಿದ್ದಾರೆ ಎನ್ನುತ್ತಾರೆ. ಇಲ್ಲೆಲ್ಲ ಸಾಮಾನ್ಯವಾಗಿ ಹೊರಹೊಮ್ಮುವ ಅರ್ಥ ಒಳಸಂಚು ಎಂದು. ಷಡ್ಯಂತ್ರ ಎಂಬುದು ಸಂಸ್ಕೃತ ಪದ. ಇದರಲ್ಲಿ ಷಟ್ ಮತ್ತು ಯಂತ್ರ ಎಂಬ ಎರಡು ಪದಗಳಿವೆ. ಷಟ್ ಅಂದರೆ ಆರು ಮತ್ತು ಯಂತ್ರ ಎಂಬುದಕ್ಕೆ ಹಲವು ರ್ಥಗಳಿವೆ. ಅವುಗಳಲ್ಲಿ ಒಂದು ಬಲ ಎಂಬುದು. ಅಂದರೆ ಆರು ರೀತಿಯ ಒಳಸಂಚುಗಳಿರಬಹುದೆ? ತಾಂತ್ರಿಕ ಆಚರಣೆಗಳಲ್ಲೂ ಯಂತ್ರ ಪದವಿದೆ. ದುಷ್ಟ ಶಕ್ತಿಗಳ ವಿರುದ್ಧ ರಕ್ಷಣೆಗೆ ಯಂತ್ರವನ್ನು ಕಟ್ಟಿಕೊಳ್ಳುತ್ತೇವೆ. ‘ವಶ್ಯಾಕರ್ಷಣಯೋ ರಕ್ತಾ ಶ್ಯಾಮಾ ಸ್ತಂಭವಿರೋಧ್ಯೋ| ನಿಗ್ರಹೋಚ್ಚಾಟಯೋಃ ಕೃಷ್ಣಾ ಶ್ವೇತಾ ಮೋಕ್ಷಪರೋಕ್ಷಯೋಃ॥’ ಎಂಬ ಶ್ಲೋಕವೊಂದಿದೆ. ಇದು ಷಡ್ಯಂತ್ರದ ಆರು ರೂಪಗಳನ್ನು ಹೇಳುತ್ತಿರುವಂತಿದೆ. ವಶ್ಯ (ಆಕರ್ಷಣೆ), ಸ್ತಂಭ (ನಿಲ್ಲಿಸುವುದು), ವಿರೋಧ (ಪ್ರತಿಭಟಿಸುವುದು), ನಿಗ್ರಹ (ಕೊಲೆ, ಅಂತ್ಯಗೊಳಿಸುವುದು), ಉಚ್ಚಾಟನ (ದಾರಿಯಿಂದ ಸರಿಸುವುದು), ಮೋಕ್ಷ/ಶಾಂತಿ (ಶಾಂತಿಯಿಂದಿರುವುದು). ಈ ಆರು ರೀತಿಯ ಬಲಗಳನ್ನು ವಿರೋಧಿಯ ಮೇಲೆ ಪ್ರಯೋಗಿಸುವುದೇ ಷಡ್ಯಂತ್ರ.