ಲೋಕದಲ್ಲಿ ಜನಿಸಿದಾ ಬಳಿಕ..

 ನಮ್ಮ ಬದುಕಿನ ಕಥೆಯನ್ನು ನಾವೇ ಬರೆದುಕೊಂಡರೆ ಅದು ಆತ್ಮಕಥನವಾಗುತ್ತದೆ. ನಮ್ಮ ಜೀವನ ಕಥೆಯನ್ನು ಬೇರೆಯವರು ಬರೆದಾಗ ಅದು ಜೀವನ ಚರಿತ್ರೆಯಾಗುತ್ತದೆ. ಈ ಎರಡೂ ಪ್ರಕಾರಗಳಲ್ಲಿ ಕೆಲವು ಲೋಪಗಳು ತಲೆದೋರುವ ಸಾಧ್ಯತೆಗಳಿವೆ. ಆತ್ಮಕಥನದಲ್ಲಿ ಲೇಖಕ ತನ್ನ ಮೂಗಿನ ನೇರಕ್ಕೆ ಸರಿ ಎನಿಸಿದ್ದನ್ನಷ್ಟೇ ಬರೆಯುತ್ತಾನೆ. ಬದುಕಿನ ಘಟನೆಗಳಿಗೆ ಎರಡನೆಯ ಮಗ್ಗಲೂ ಇರುತ್ತದೆ. ಆ ಮಗ್ಗಲು ಇಲ್ಲಿ ತಪ್ಪಿಹೋಗುತ್ತದೆ. ಜೀವನಚರಿತ್ರಕಾರನಿಗೆ ಬರೆಯುವಾಗ ಆಯ್ಕೆಗಳಿರುತ್ತವೆ. ಈ ಆಯ್ಕೆಯಲ್ಲಿ ಕೆಲವು ಬಿಟ್ಟುಹೋಗುವ ಸಾಧ್ಯತೆಯೂ ಇರುತ್ತದೆ. ಆತ್ಮಕಥನಗಳು ಒಂದು ಸಾಹಿತ್ಯ ಪ್ರಕಾರ ಎನ್ನುವಷ್ಟು ಗಟ್ಟಿಯಾಗಿ ಬೆಳೆದು ಬಂದದ್ದು ಮರಾಠಿಯಲ್ಲಿ. ಅದರಲ್ಲೂ ದಲಿತ ಚಳವಳಿಯ ಸಂದರ್ಭದಲ್ಲಿ ಆತ್ಮಕಥನಗಳು ಅಲ್ಲಿ ದೊಡ್ಡ ವಿಪ್ಲವವನ್ನೇ ಮಾಡಿದವು.
  ಆತ್ಮಕಥನಗಳನ್ನೂ ಸಾಹಿತ್ಯದ ದೃಷ್ಟಿಯಿಂದ ಪರಿಗಣನೆಗೆ ತೆಗೆದುಕೊಳ್ಳಬಹುದು ಎನ್ನುವಂಥ ಉತ್ತಮವಾದ ಸಾಹಿತ್ಯಿಕ ಗುಣಗಳನ್ನು ಹೊಂದಿದ ಕೃತಿಗಳು ಕನ್ನಡದಲ್ಲಿ ಬಂದಿವೆ. ಸಾಹಿತಿಗಳಲ್ಲಿ ಕುವೆಂಪು ಅವರ “ನೆನಪಿನ ದೋಣಿ‘, ಕಾರಂತರ “ಹುಚ್ಚು ಮನಸ್ಸಿನ ಹತ್ತು ಮುಖಗಳು’, ಡಿ. ಸಿದ್ದಲಿಂಗಯ್ಯನವರ “ಊರುಕೇರಿ’,  ಗಿರೀಶ ಕಾರ್ನಾಡರ “ಆಡಾಡತಾ ಆಯುಷ್ಯ’, ಭೈರಪ್ಪನವರ “ಭಿತ್ತಿ’ ಎಲ್ಲ ನೆನಪಿಗೆ ಬರುತ್ತವೆ.
 ಸಾಹಿತಿ ಏಕಾಂಗಿಯಲ್ಲ. ಆತ ಸಮಾಜದ ಭಾಗವಾಗಿ ಬೆಳೆಯುತ್ತಾನೆ. ಆತನ ಬೆಳವಣಿಗೆಯಲ್ಲಿ ಸಮಾಜದ ಬೆಳವಣಿಗೆಯೂ ಇರುತ್ತದೆ. ಬಹುಮುಖಿ ವ್ಯಕ್ತಿತ್ವದ ಬರೆಹಗಾರನ ಆತ್ಮಚರಿತ್ರೆಯು ಆ ಕಾಲದ ಸಾಂಸ್ಕೃತಿಕ ಚರಿತ್ರೆಯೂ ಆಗಿರುತ್ತದೆ. ಅಲ್ಲದೆ ಅದು ಆ ಕಾಲದ ಇತಿಹಾಸದ ಒಂದು ಭಾಗ ಕೂಡ. ಈ ಹಿನ್ನೆಲೆಯಲ್ಲಿ ನಾವು ಕನ್ನಡದ ಪ್ರಮುಖ ಬರೆಹಗಾರರಲ್ಲಿ ಒಬ್ಬರಾಗಿರುವ ಬಿ.ಎಲ್.ವೇಣು ಅವರ ಆತ್ಮಕಥನ “…ಲೋಕದಲ್ಲಿ ಜನಿಸಿದಾ ಬಳಿಕ…’ ಕೃತಿಯನ್ನು ನೋಡಬೇಕು.
 ವೇಣು ಅವರ ಆತ್ಮಕಥನವನ್ನು ಓದುತ್ತಿದ್ದಹಾಗೆ ತಟ್ಟನೆ ನೆನಪಿಗೆ ಬಂದದ್ದು ಲಂಕೇಶರ “ಹುಳಿಮಾವಿನ ಮರ’ ಮತ್ತು ಕುಂವೀಯವರ “ಗಾಂಧೀ ಕ್ಲಾಸು’. ಇದಕ್ಕೆ ಕಾರಣ ವೇಣು ಅವರ ಅಭಿವ್ಯಕ್ತಿಯ ಶೈಲಿ. ಬದುಕಿನ ಕುರಿತ ತೀವ್ರವಾದ ವ್ಯಾಮೋಹ, ಪರಿಣಾಮದ ಪರಿವೆ ಇಲ್ಲದೆ ಮುಖಕ್ಕೇ ಹೇಳುವ ರೀತಿಯಲ್ಲಿ ವೇಣು ಆ ಇಬ್ಬರು ಲೇಖಕರಿಗೆ ಎಲ್ಲೋ ಸರಿದೂಗುತ್ತಾರೆ. “ನಾಲ್ಕು ಜನ ಹೊಟ್ಟೆ ಉರಿಯುವಂತೆ ಬಾಳು’ ಎಂಬ ಬೀಚಿಯವರ ಮಾತು ನನಗಿಷ್ಟ ಎಂದು ಅವರು ಒಂದೆಡೆ ಹೇಳಿಕೊಂಡಿದ್ದಾರೆ. ಹಾಗೆ ಬದುಕಿದ್ದರ ದಾಖಲೆ ಈ ಕೃತಿ. ಅದಕ್ಕೆ ಪೂರಕವೆನ್ನುವಂತೆ ಕೃತಿಯಲ್ಲಿ ವೇಣು ಬರೆದ ಒಂದು ವಾಕ್ಯ- “ತ.ರಾ.ಸು. ಅಂಥವರು ನನ್ನಂಥವನನ್ನು ಎದುರಾಳಿಯಾಗಿ ಪರಿಗಣಿಸಿದ್ದು ಒಂದು ವಿಧವಾದ ಬೌದ್ಧಿಕ ಆನಂದವನ್ನುಂಟುಮಾಡಿತ್ತು.’ 
 ಬಿ.ಎಲ್.ವೇಣು ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುಮಾಸ್ತರಾಗಿದ್ದವರು. ದುರ್ಗದಲ್ಲಿ ಪ್ರಸಿದ್ಧರಾಗಿದ್ದ ತರಾಸು ಅವರು ಇನ್ನೂ ಬರೆಯುತ್ತಿದ್ದ ಕಾಲದಲ್ಲಿಯೇ ತಮ್ಮ ಬರೆವಣಿಗೆಯನ್ನು ಆರಂಭಿಸಿದವರು. ಹೀಗಾಗಿ ದುರ್ಗದಲ್ಲಿ ಒಂದು ವರ್ಗದವರ ಕುಹಕಕ್ಕೆ ಒಳಗಾದವರು. ನಾಲ್ಕಾಣೆ ಸಾಹಿತ್ಯ ಎಂಟಾಣೆ ಅದೃಷ್ಟ ಎಂಬ ಟೀಕೆಯನ್ನು ಕೇಳಿದ್ದರು. ತರಾಸು ಹೇಗೆ ಸಿನಿಮಾ ನಂಟನ್ನು ಹೊಂದಿದ್ದರೋ ವೇಣು ಕೂಡ ಅದಕ್ಕೂ ಸ್ವಲ್ಪ ಹೆಚ್ಚೇ ಅನ್ನುವಷ್ಟು ಸಿನಿಮಾ ನಂಟನ್ನು ಹೊಂದಿದ್ದಾರೆ. ತರಾಸು “ದುರ್ಗಾಸ್ತಮಾನ’ ಕಾದಂಬರಿ ಬರೆಯುವ ಸಮಯದಲ್ಲಿಯೇ ವೇಣು “ಗಂಡುಗಲಿ ಮದಕರಿನಾಯಕ’ ಕಾದಂಬರಿ ಬರೆಯಲು ಆರಂಭಿಸಿದ್ದರು. ಅದನ್ನು ಬರೆಯಬೇಡಿ ಎಂದು ಅಂದಿನ ಜಿಲ್ಲಾಧಿಕಾರಿ ಶಾಂತಕುಮಾರ್ ಇವರಿಗೆ ಸಲಹೆ ನೀಡಿದ್ದರಂತೆ. ಇಂಥ ಹಲವು ಕುತೂಹಲಕಾರಿ ಘಟನೆಗಳನ್ನು ಈ ಕೃತಿ ಒಳಗೊಂಡಿದೆ.
 ವೇಣು ತಮ್ಮ ಬದುಕಿನ ಫ್ಲ್ಯಾಶ್‌ಬ್ಯಾಕ್ ಹೀಗೆ ಬಿಚ್ಚುತ್ತಾರೆ…. “ನಮ್ಮಮ್ಮನಿಗೆ ಮದುವೆಯಾಗಿ ಒಂಬತ್ತು ವರ್ಷಗಳಾದರೂ ಮಕ್ಕಳಾಗಲಿಲ್ಲವಂತೆ. ಅಮ್ಮನ ತಾಯಿ ಮಹಾಲಕ್ಷ್ಮಮ್ಮ (ನಾವೆಲ್ಲ ಮಾತಮ್ಮ ಅನ್ನುತ್ತಿದ್ದೆವು) ದೇವದಾಸಿಯಾದರೂ ತನ್ನ ಮಗಳನ್ನು ಇಂಥ ನರಕದ ಬಾಳಿಗೆ ತಳ್ಳಬಾರದೆಂದು ಯೋಚಿಸಿ ಮದುವೆ ಮಾಡಲು ಸ್ವಯಂ ನಿರ್ಧಾರ ಕೈಗೊಂಡ ಮಾನವೀಯ ಸಾಕಾರಮೂರ್ತಿ..’
 ಹೀಗೆ ವೇಣು ನಿರ್ಭಾವುಕರಾಗಿ ವಿವರಿಸುತ್ತ ಹೋಗುತ್ತಾರೆ. ಇವರ ತಾಯಿಗೆ ಗಂಡು ಹುಡುಕುವುದು ಕಷ್ಟವಾಗುವುದು, ಕುಡುಕನಾದ ರಂಗಭೂಮಿ ನಟ ಆಕೆಗೆ ಪತಿಯಾಗಿ ಬರುವುದು, ತಾವು ಬಾಲ್ಯದಲ್ಲಿಯೇ ನಟನಾದ ಪ್ರಸಂಗ, ತಮ್ಮ ಪ್ರೇಮಪ್ರಸಂಗ ಎಲ್ಲವನ್ನೂ ಬರೆದಿದ್ದಾರೆ. ದುರ್ಗದಲ್ಲಿ ಎಲ್ಲ ಅನನುಕೂಲಗಳ ನಡುವೆಯೂ ಅವರು ಒಬ್ಬ ಜನಪ್ರಿಯ ಲೇಖಕರಾಗಿ ಸಮಾಜದಿಂದ ಗುರುತಿಸಲ್ಪಡುವ ಮಟ್ಟಕ್ಕೆ ಏರಿದ್ದು, ಈ ದಾರಿಯಲ್ಲಿ ಅವರು ಅನುಭವಿಸಿದ ಕಷ್ಟಗಳು, ಅಪಮಾನಗಳು, ಕೈ ಹಿಡಿದವರು, ಕೈಬಿಟ್ಟವರು, ಕೈಕೊಟ್ಟವರು ಎಲ್ಲವನ್ನೂ ವಿವರಿಸಿದ್ದಾರೆ.
 ವೇಣು ಅವರದು ಬಂಡಾಯ ಮನೋಧರ್ಮ. ಮಠಾಧೀಶರ ಒಳಗೊಂದು ಹೊರಗೊಂದು ನಡವಳಿಕೆಯನ್ನು ಖಂಡಿಸಿ ವಿವಿಧ ಪತ್ರಿಕೆಗಳಿಗೆ ಅವರು ಲೇಖನಗಳನ್ನು ಬರೆದಿದ್ದಾರೆ. ಈ ಲೇಖನಗಳನ್ನೆಲ್ಲ ಸೇರಿಸಿ ಅವರು “ಮಠಗಳು ದೇಶಕ್ಕೆ ಶಾಪ’ ಎಂಬ ಕೃತಿಯನ್ನು ಪ್ರಕಟಿಸಿ ಇದರ ಬಿಡುಗಡೆಗೆ ಚಂದ್ರಶೇಖರ ಪಾಟೀಲರನ್ನು ಕರೆಸುತ್ತಾರೆ. ಚಂಪಾ ಆಗ ಕಸಾಪ ಅಧ್ಯಕ್ಷರಾಗಿದ್ದರು. ಸಮಾರಂಭದಲ್ಲಿ ಚಂಪಾ ವೇಣು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಒಬ್ಬರ ಮನೆಯಲ್ಲಿ ಉಪಾಹಾರ ಸೇವಿಸಿದ ಋಣ ತೀರಿಸುತ್ತಿದ್ದಾರೆ ಎಂದುಕೊಳ್ಳುತ್ತಾರೆ ವೇಣು. ಮಠಗಳ ಸ್ವಾಮಿಗಳ ಬಗ್ಗೆ ವಕಾಲತ್ತು ವಸಿಕಿಕೊಂಡ ಚಂಪಾ ಬಗ್ಗೆ, “… ರೀಸೆಂಟ್ ಆಗಿ ಮಠಗಳಿಗೆ ರೌಂಡ್ಸ್ ಹೊಡೆದು ಪರಿಷತ್ತಿನ ಅಧ್ಯಕ್ಷ ಗಾದಿ ಗಿಟ್ಟಿಸಿದ್ದು ನೆನಪಿಗೆ ಬಂತು’ ಎಂದು ಬರೆದಿದ್ದಾರೆ. ಇದೇ ವೇದಿಕೆಯಲ್ಲಿ ನಟ ಲೋಹಿತಾಶ್ವ ಅವರೂ ಇವರನ್ನು ಟೀಕಿಸಿದ್ದರು. ವೇಣು ಈ ಬಗ್ಗೆ ಹೀಗೆ ಬರೆಯುತ್ತಾರೆ, “… ಪ್ರಾಯಶಃ ಯಾವ ಲೇಖಕನೂ ತನ್ನ ಕೃತಿ ಬಿಡುಗಡೆ ಸಮಾರಂಭದಲ್ಲಿ ಇಷ್ಟೊಂದು ಅಪಮಾನಿತನಾಗಿರಲಾರ. ಒಂದೇ ಮಾತಿನಲ್ಲಿ ಹೇಳೋದಾದರೆ ತುಂಬಿದ ಸಭೆಯಲ್ಲಿ “ವಸ್ತ್ರಾಪಹರಣ’ವಾದಂತೆ.’
 ವೇಣು ಅವರ ಸಿನಿಮಾ ನಂಟಿನ ಬಗ್ಗೆ ಆಗಲೇ ಪ್ರಸ್ತಾಪವಾಗಿದೆ. ಸಿನಿಮಾ ಗೆದ್ದರೆ ಚಿನ್ನ ಸೋತರೆ ಖಿನ್ನ ಎನ್ನುವ ಸ್ಥಿತಿ. ಇದು ತ್ರಿಕಾಲ ಸತ್ಯವೇ ಹೌದು. ತಮ್ಮ ಸಿನಿಮಾ ಸಂಬಂಧಗಳ ಬಗ್ಗೆ ಹೇಳುವಾಗಲೇ ಬೆಳ್ಳಿಪರದೆಯ ಹಿಂದಿನ ಹಲವು ಮುಖಗಳ ದರ್ಶನವನ್ನು ಅವರು ಮಾಡಿಸುತ್ತಾರೆ. ವಿಷ್ಣುವರ್ಧನ ಅವರು ಅಭಿನಯಿಸಿದ “ದೇವ’ ಸಿನಿಮಾದ ಒಂದು ಪ್ರಸಂಗವನ್ನು ಹೀಗೆ ಹೇಳುತ್ತಾರೆ. ವಿಷ್ಣುವರ್ಧನ ಅವರು ದೇವ ಸಿನಿಮಾದ ಸ್ಕ್ರಿಪ್ಟ್ ಬಗ್ಗೆ ಚರ್ಚಿಸುವಾಗ, “ನನ್ನನ್ನು­ ಒಬ್ಬನನ್ನು ಮಾತ್ರ ಕರೆಸಿಕೊಂಡು ಕಥೆ ಬಗ್ಗೆ ಚರ್ಚಿಸಿದರು. ಅವರದು ಕೆಲವು ಸಲ ವಿಪರೀತ ಇನ್‌ವಾಲ್ವ್‌ಮೆಂಟ್. ಚೆನ್ನಾಗಿದೆ ಎಂದರೆ ಯಾಕೆ ಚೆನ್ನಾಗಿದೆಯೆಂದು ವಿವರಿಸಬೇಕು. ಸೀನ್‌ಗಳ ಹೈಲೈಟ್ ಬಗ್ಗೆ ಖಚಿತಪಡಿಸಬೇಕು. ಮತ್ತೇನು ಚೇಂಜ್ ಮಾಡಿಕೊಂಡರೆ ಮಜಾ ಸಿಗುತ್ತದೆಂಬುದನ್ನು ಬಣ್ಣಿಸಬೇಕು’ ವಿಷ್ಣುವರ್ಧನರ ವ್ಯಕ್ತಿತ್ವದ ಅಪರೂಪದ ಚಿತ್ರ ಇಲ್ಲಿ ಸಿಗುತ್ತದೆ. 
ಅದೇ ರೀತಿ ಸಿದ್ದಲಿಂಗಯ್ಯನವರ ಕುರಿತು. ವಿಷ್ಣುವರ್ಧನರಿಗೆ ವೇಣು ಕಾದಂಬರಿ ಆಧಾರಿತ “ವೀರಮದಕರಿ’ ಎಂಬ ಐತಿಹಾಸಿಕ ಸಿನಿಮಾ ಮಾಡುವ ಇಚ್ಛೆ ಇತ್ತು. ಈ ಸಂಬಂಧದಲ್ಲಿ ವಿಷ್ಣುವರ್ಧನರ ಜೊತೆ ಸಿದ್ದಲಿಂಗಯ್ಯ ಹೇಗೆ ಒರಟಾಗಿ ನಡೆದುಕೊಂಡರು ಎಂಬುದನ್ನೂ ವೇಣು ದಾಖಲಿಸಿದ್ದಾರೆ.
 ತಮ್ಮ ಸಹೋದರ ಶಿವುಗೆ ಡಾ.ರಾಜಕುಮಾರ್ ಅವರ ದರ್ಶನ ಮಾಡಿಸಿದ ಪ್ರಸಂಗವನ್ನೂ ಇಲ್ಲಿ ವೇಣು ಬರೆದಿದ್ದಾರೆ. ಆ ಹಿರಿಯ ನಟನ ಬಗ್ಗೆ ಅವರಿಗಿರುವ ಅಪಾರ ಗೌರವ ಅಲ್ಲಿ ವ್ಯಕ್ತವಾಗಿದೆ. ಪುಟ್ಟಣ್ಣ ಕಣಗಾಲ, ಬಿ.ವಿ.ವೈಕುಂಠರಾಜು ಮೊದಲಾದವರ ಒಡನಾಟದ ವಿವರಗಳಿವೆ.
 ವೇಣು ಅವರ ಈ ಕೃತಿಯನ್ನು ಓದಿದಾಗ ತಟ್ಟನೆ ಅರಿವಿಗೆ ಬರುವುದು ಅವರ ದಿಟ್ಟತನದ ಬದುಕು. ಕೆಲವರಿಗೆ ಅದು ಅಹಂಕಾರ ಎನ್ನಿಸಬಹುದು, ಧಾರ್ಷ್ಟ್ಯ ಎನ್ನಿಸಬಹುದು. ಅವರನ್ನು ಇಷ್ಟಪಡದವರ ಸಂಖ್ಯೆ ಚಿಕ್ಕದು. ಆದರೆ ಅವರನ್ನು ಪ್ರೀತಿಸುವವ ಸಂಖ್ಯೆ ಬಹುದೊಡ್ಡದು. ಈ ಕೃತಿ ಹಲವರಿಗೆ ಪ್ರೇರಣೆ, ಹಲವರಿಗೆ ಪಾಠ.