*ಅಖಂಡ ಪ್ರೇಮಿಗಳ ಪ್ರತೀಕ ಇವರು

ಪ್ರೇಮ ಒಂದು ವಿಚಿತ್ರ ರೋಗ. ಈ ರೋಗ ಹತ್ತಿತು ಎಂದರೆ ವಾಸಿಯಾಗುವುದಕ್ಕೆ ಹಲವು ವರ್ಷಗಳೇ ಬೇಕು. ಈ ರೋಗ ತೀವ್ರವಾಗಿ ಸತ್ತವರೂ ಇದ್ದಾರೆ.
ಪ್ರೇಮಜ್ವರ ತೀವ್ರವಾಗಿ ಜೀವ ಕೊಟ್ಟ ಪಾತ್ರಗಳಲ್ಲಿ ಲೈಲಾ ಮತ್ತು ಮಜ್ನು ಜಗದ್ವಿಖ್ಯಾತರು. ಇವರು ಇತಿಹಾಸ ಪುರುಷರೇನಲ್ಲ. ಹಾಶ್ಮೀತ್‌ ಶಾ ಎನ್ನುವವರು ಬರೆದ ಕತೆಯ ಪಾತ್ರಗಳು ಈ ಲೈಲಾ ಮಜ್ನು. ಮಜ್ನು ನಾಜಿದ್‌ನ ದೊರೆ ಓಮರ್‌ನ ಮಗ. ಆತನನ್ನು ಆರನೆ ವರ್ಷಕ್ಕೆ ಒಂದು ಶಾಲೆಗೆ ಸೇರಿಸುತ್ತಾರೆ. ಅಲ್ಲಿ ಆತ ಲೈಲಾ ಎಂಬ ಹುಡುಗಿಯ ಪ್ರೀತಿಗೆ ಸಿಲುಕುತ್ತಾನೆ. ಅವಳ ಮರುಳುಗೊಳಿಸುವ ಕಪ್ಪು ಕಣ್ಣುಗಳು ಅವನಿಗೆ ಮೋಡಿ ಮಾಡುತ್ತವೆ.
ಶಾಲೆಯಲ್ಲಿಯೇ ಮಜ್ನು ತನ್ನ ಗುರುಗಳ ಮುಂದೆ ಲೈಲಾ ನನ್ನ ಕಾಬಾ ಎಂದು ಘೋಷಿಸುತ್ತಾನೆ. ಲೈಲಾಳ ತಾಯಿ ಅವಳನ್ನು ನಾಚಿಕೆಯಿಲ್ಲದವಳು ಎಂದು ಜರೆಯುತ್ತಾಳೆ. ವರ್ಷಗಳು ಉರುಳಿದಂತೆ ಲೈಲಾನ ಪ್ರೇಮಪಾಶ ಮಜ್ನುವನ್ನು ಇನ್ನಷ್ಟು ತೀವ್ರವಾಗಿ ಬಂಧಿಸುತ್ತದೆ. ಆತ ಲೈಲಾನ ಮನೆಗೆ ಹೋದಾಗ ಆಕೆಯ ತಂದೆ ಅಬ್ದುಲ್ಲಾ ಆತನಿಗೆ ಚೆನ್ನಾಗಿ ಹೊಡೆಯುತ್ತಾನೆ. ಮಜ್ನು ಹುಚ್ಚನಾಗಿ ಕಾಡುಮೇಡುಗಳಲ್ಲಿ ಅಲೆಯುತ್ತಾನೆ. ಲೈಲಾನ ಹೆತ್ತವರು ಆಕೆಯನ್ನು ಅರೇಬಿಯಾದ ಒಬ್ಬ ಯುವರಾಜನಿಗೆ ಮದುವೆಮಾಡಿ ಕೊಡುತ್ತಾರೆ.
ಪ್ರೇಮಿಯಿಂದ ಅಗಲಿದ ದುಃಖ ಸಹಿಸಲಾಗದೆ ಲೈಲಾ ಅನ್ನ ನೀರು ಬಿಟ್ಟು ಸಾಯುತ್ತಾಳೆ. ಈ ಸುದ್ದಿ ಕೇಳಿದ ಮಜ್ನು ಧಾವಿಸಿ ಬರುತ್ತಾನೆ. ಆಕೆಯ ಸಮಾಧಿಯ ಮೇಲೆ ಬಿದ್ದು ಸಾಯುತ್ತಾನೆ.
ಇಂಥ ಅಮರ ಪ್ರೇಮಿಗಳು ಇನ್ನೂ ಇದ್ದಾರೆ. ರೋಮಿಯೋ – ಜೂಲಿಯಟ್‌, ದೇವದಾಸ – ಪಾರ್ವತಿ, ಅನಾರ್ಕಲಿ – ಸಲೀಂ. ನಾವು ನೀವು ಕಂಡು ಕೇಳಿರುವ ಇನ್ನೂ ಅನೇಕರಿದ್ದಾರೆ. ತೀವ್ರ ಪ್ರೇಮದಲ್ಲಿ ಬಿದ್ದವರನ್ನು ಕಂಡಾಗ ಮೊದಲಿಗೆ ನಮ್ಮ ಬಾಯಿಂದ ಬರುವುದು, ನೋಡೋ ಅವರನ್ನ, ಒಳ್ಳೆ ಲೈಲಾ ಮಜ್ನು ಥರ ಮಾಡ್ತಾರೆ ಎಂಬ ಮಾತು.