ಕನ್ನಡದ ಸಮಕಾಲೀನ ಕವಿಗಳಲ್ಲಿ ಪ್ರಮುಖರಾದ ಬಿ.ಆರ್.ಲಕ್ಷ್ಮಣರಾವ್್ ಅವರು ಕವಿತೆ ಬಿಟ್ಟು ಬೇರೇನೂ ಬರೆಯುವುದಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಕವಿಗಳೇ ಆಗಿದ್ದಾರೆ. ಅವರು ಕತೆಗಳನ್ನೂ ಬರೆದಿದ್ದಾರೆ. ನಾಟಕ, ವ್ಯಕ್ತಿಚಿತ್ರ ಇಷ್ಟೇ ಅಲ್ಲ ಕಾದಂಬರಿಯನ್ನೂ ಬರೆದಿದ್ದಾರೆ. ಆದರೂ ಅವರು ಕವಿಯೆಂದೇ ಪ್ರಸಿದ್ದರು. ಅವರ ಅಭಿವ್ಯಕ್ತಿ ಪ್ರಕಟಗೊಳ್ಳಲು ಕಾತರಿಸುವುದು ಕಾವ್ಯ ಮಾಧ್ಯಮದ ಮೂಲಕವೇ. ‘ಗೋಪಿ ಮತ್ತು ಗಾಂಡಲಿನಾ’ದಿಂದ ಇಲ್ಲಿಯ ವರೆಗೆ ಈಗಾಗಲೆ ಒಂಬತ್ತು ಕವನ ಸಂಕಲನಗಳನ್ನು ಪ್ರಕಟಿಸಿರುವ ಅವರು ಇದೀಗ ‘ನನ್ನ ಮಟ್ಟಿಗೆ’ ಎಂಬ ಹತ್ತನೆಯ ಸಂಕಲನವನ್ನು ಪ್ರಕಟಿಸಿದ್ದಾರೆ. ಇದರಲ್ಲಿ 50 ಕವಿತೆಗಳಿವೆ. 38 ಕವಿತೆಗಳನ್ನು ಮೊದಲ ಭಾಗ ಎಂದೂ 12 ಕವಿತೆಗಳನ್ನು ಎರಡನೆ ಭಾಗ ಎಂದೂ ವಿಂಗಡಿಸಿದ್ದಾರೆ. ಎರಡನೆಯ ಭಾಗದ ಕವಿತೆಗಳು ಹಾಡುವುದಕ್ಕೆ ಅನುಕೂಲವಾಗುವಂತೆ ಬರೆದಿರುವಂತೆ ತೋರುತ್ತದೆ. ಲಕ್ಷ್ಮಣರಾಯರು ಕಾವ್ಯದ ಬಗ್ಗೆ ನಿರ್ದಿಷ್ಟವಾದ ಅರಿವನ್ನು ಹೊಂದಿದವರು. ಅವರ ದೃಷ್ಟಿಯಲ್ಲಿ “ಕಾವ್ಯ ಸಹಜ ಉಸಿರಾಟದಂತೆ; ಇದ್ದೀತು ಕಾದುಸಿರು ಏದುಸಿರು ಏನೆಲ್ಲ. ಪ್ರಾಣಾಯಾಮ ಕಾವ್ಯವಲ್ಲ.” ಅವರು ಏನನ್ನೇ ಧ್ಯಾನಿಸಲಿ ಅದು ಕಾವ್ಯವಾಗಿಯೇ ಹೊರಬರುತ್ತದೆ. ವಾಕಿಂಗ್್ಗೆ ಹೋದಾಗ ಅವರ ಪತ್ನಿಯ ಕರಿಮಣಿ ಸರವನ್ನು ಕಳ್ಳನೊಬ್ಬ ಎಗರಿಸಿಕೊಂಡು ಹೋಗಲು ಯತ್ನಿಸಿದ್ದು ಮತ್ತು ಅದನ್ನು ಇವರು ತಡೆದದ್ದು ಇಲ್ಲಿ ಕವಿತೆಯಾಗಿದೆ. ಕೆ.ಎಸ್.ನರಸಿಂಹಸ್ವಾಮಿಯವರು ಹೊಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ ಎಂದು ಹಾಡಿದ್ದಾರೆ. ಲಕ್ಷ್ಮಣರಾಯರು ಕೂಡ ‘ಇವಳಿದ್ದಾಳೆ’ ಎಂಬ ಕವಿತೆ ಬರೆದಿದ್ದಾರೆ. ಅದು ಹೀಗೆ ಆರಂಭವಾಗುತ್ತದೆ- ಇವಳಿದ್ದಾಳೆ ಮುಂಜಾನೆಯೇ ಎದ್ದು ಮನೆಯ ಅಂಗಳ ತೊಳೆದು, ರಂಗೋಲಿ ಬಿಡಿಸಿ, ಹೆಗಲ ಬಳಸಿ ಒಳಕ್ಕೆ ಕರೆತರಲು ಹೊಚ್ಚಹೊಸ ಹಗಲನ್ನು… ಈ ಕವಿತೆ ಕೊನೆಯಾಗುವುದು ಹೀಗೆ- ಇವಳಿದ್ದಾಳೆ ಬಹುಪಾಲು ಎಲ್ಲರ ಮನೆಯಲ್ಲೂ ತನ್ನ ಪಾಡಿಗೆ ತಾನು ಕಾಣದ ಪ್ರಾಣವಾಯುವಿನಂತೆ ಮನೆಯ ಯಜಮಾನಿಗೆ ಇದಕ್ಕಿಂತ ಮಿಗಿಲಾದ ಗೌರವವನ್ನು ತೋರುವುದು ಸಾದ್ಯವಿಲ್ಲವೇನೋ ಎನ್ನುವಷ್ಟು ಸಹಜವಾಗಿ ಸರಳವಾಗಿ ಅನನ್ಯವಾಗಿ ಈ ಕವಿತೆ ಅರಳಿಕೊಂಡಿದೆ. ಸಂಕಲನದ ಯಶಸ್ವಿ ಕವಿತೆಗಳಲ್ಲಿ ಇದೂ ಒಂದು. ಇನ್ನೊಂದು ಕವಿತೆ ‘ಕಬಂಧ’. ಬೆಳೆಯುತ್ತಿರುವ ನಗರಗಳ ಅಸಡ್ಡಾಳ ರೂಪವನ್ನು ಕಬಂಧ ಪ್ರತಿಮೆಯೊಂದಿಗೆ ಇಲ್ಲಿ ಕವಿ ಮಂಡಿಸಿರುವ ರೀತಿಯು ವಿಶೇಷವಾದ್ದು. “ಒಂದೊಮ್ಮೆ ಸುಂದರ ಗಂಧರ್ವನಂತಿದ್ದ ಈ ನಮ್ಮ ಮುದ್ದು ನಗರ, ಇಂದು ಶಾಪಗ್ರಸ್ತ ಹೆಳವ ನರಭಕ್ಷಕ ಭೀಕರ ಕಬಂಧಾಸುರ……. ಎಂದು ವರ್ಣಿಸುತ್ತ ನಗರಗಳ ಎಲ್ಲ ಅಸಡ್ಡಾಳ ರೂಪಗಳನ್ನು ಪರಿಚಯಿಸುತ್ತಾರೆ. ಲಕ್ಷ್ಮಣರಾಯರು ಅಡಿಗರ ಮತ್ತು ಕೆ.ಎಸ್.ನರಸಿಂಹಸ್ವಾಮಿಯವರ ಪ್ರಭಾವದಲ್ಲಿ ಬೆಳೆದವರು ಎಂದು ಗುರುತಿಸಿದವರಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಎರಡು ಕವಿತೆಗಳನ್ನು ನಾನು ಇಲ್ಲಿ ಉಲ್ಲೇಖಿಸಿರುವುದು. ಪ್ರಭಾವಗಳ ಆಚೆಗೂ ತಮ್ಮದೇ ಒಂದು ರೇಖೆಯನ್ನು ಹಾಕಿಕೊಂಡು ತಮ್ಮತನ ಮೆರೆದಿರುವುದನ್ನು ನಾವು ಈ ಕವಿತೆಗಳಲ್ಲಿ ಗುರುತಿಸಬಹುದು. ಯಾರದೋ ಪ್ರಭಾವದಿಂದ ಯಾರೋ ಕವಿತೆ ಬರೆಯುತ್ತಾರೆ ಎಂದರೆ ಅದರ ಜೀವಿತಾವಧಿ ತೀರ ಚಿಕ್ಕದಿರುತ್ತದೆ. ಲಕ್ಷ್ಮಣರಾಯರು ಸರಿಸುಮಾರು ನಾಲ್ಕೂವರೆ ದಶಕಗಳಿಂದ ಈ ಕಾವ್ಯೋದ್ಯೋಗವನ್ನು ನಡೆಸಿರುವುದರಿಂದ ಲಕ್ಷ್ಮಣಮಾರ್ಗವನ್ನು ಅವರು ನಿರ್ಮಿಸಿಕೊಂಡಿದ್ದಾರೆ. ವ್ಯಂಗ್ಯದ ಬೆರಗು ಮಾಡುವ ಅದ್ಭುತವಾದ ಪರಿಣಾಮವನ್ನು ಅವರು ತಮ್ಮ ‘ಜನಗಣಮನ’ ಕವಿತೆಯಲ್ಲಿ ಸಾಧಿಸಿದ್ದಾರೆ. ಮಲಮೂತ್ರಾದಿಗಳ ಬಾಧೆ ಇಲ್ಲದ ಭರತೇಶ ವೈಭವದ ಭರತ ಚಕ್ರವರ್ತಿಯ ಉಪಮೆ ದೊಡ್ಡ ವ್ಯಕ್ತಿಗಳ ಬಗೆಗಿರುವ ಸಾಮಾನ್ಯ ಜನರ ಭ್ರಮೆಗಳನ್ನು ತೋರಿಸುತ್ತದೆ. ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಬಗೆಗೂ ಜನರಲ್ಲಿ ವಿಚಿತ್ರವಾದ ತರ್ಕದೂರವಾದ ಹಲವು ನಂಬಿಕೆಗಳು ಇದ್ದವು. ಆಕೆಯನ್ನು ದುರ್ಗೆಯೆಂದುಕೊಂಡವರೂ ಇದ್ದರು. ಅಂಥ ಇಂದಿರಾಗಾಂಧಿ ಚಿಕ್ಕಮಗಳೂರಿಗೆ ಬಂದಾಗ ಜನ ಅವರ ದರ್ಶನಕ್ಕಾಗಿ ಕಾಯುತ್ತಿದ್ದರು. “ಪಕ್ಕದಲ್ಲಿದ್ದಾತ ಅವನ ಕಿವಿಯಲ್ಲಿ ಉಸುರಿದ, ಸಂಡಾಸ್ಗೋಗವರಂತೆ ಅಮ್ಮ. ಬೆಕ್ಕಸಬೆರಗಾದ ಬೋರೇಗೌಡ ಪ್ರಶ್ನಿಸಿದ ಇಂದಿರಮ್ನೂ ಸಂಡಾಸ್ಗೋಗ್ತಾರಾ?- ಇದು ಪ್ರಜಾಪ್ರಭುತ್ವವಾದಕಾರಣ ರಾಜನ ಅಳತೆ ಬೇರೆಯಲ್ಲ, ಪ್ರಜೆಯ ಅಳತೆ ಬೇರೆಯಲ್ಲ. ಅದಕ್ಕೇ ಜನಗಣಮನ. ಈ ಸಂಕಲನದಲ್ಲಿ ಇಷ್ಟವಾಗುವ ಎರಡುಮೂರು ವ್ಯಕ್ತಿಚಿತ್ರಗಳಿವೆ. ನಿಸಾರ್ ಅಹ್ಮದ್ ಅವರ ಕುರಿತದ್ದು ಹಾಗೂ ಎಚ್.ಎಸ್.ವಿಯವರಿಗೆ 70 ತುಂಬಿದ ಸಂದರ್ಭದಲ್ಲಿ ಬರೆದ ಕವಿತೆಗಳು ಮುಖ್ಯವಾದವು. ನಿಮ್ಮೊಡನಿದ್ದೂ ನಿಮ್ಮಂತಾಗದೆ ಎಂದು ವಿಷಾದಪಡುವ ನಿಸಾರರಿಗೆ ಲಕ್ಷ್ಮಣರಾಯರು- ನೀವು ನಮ್ಮವರಿಗಿಂತಲೂ ಅಪ್ಪಟ ನಮ್ಮವರು, ನಮಸ್ತೇ!- ತನ್ನ ಪಾಡನ್ನು ಹಾಡಾಗಿಸುವ ಈ ಕವಿ ಜೇನುಗೂಡು ಎಂದು ಎಚ್ಚೆಸ್ವಿಯವರ ಬಗ್ಗೆ ಹೇಳಿದ್ದಾರೆ. ಲಕ್ಷ್ಮಣರಾಯರು ಇಷ್ಟೊಂದು ಸುದೀರ್ಘವಾಗಿ ಕಾವ್ಯಶೀಲರಾಗಲು ಏನು ಕಾರಣ? ಅವರು ನವ್ಯದಲ್ಲೂ ಬರೆದರು, ರಮ್ಯದಲ್ಲೂ ಬರೆದರು. ಬಂಡಾಯ ಮನೋಧರ್ಮವನ್ನೂ ರೂಢಿಸಿಕೊಂಡರು. ಯಾವ ಕಾಲಕ್ಕೆ ಯಾವುದು ಸಲ್ಲುವುದೋ ಅದರಲ್ಲೇ ತಮ್ಮ ಕಾವ್ಯಧರ್ಮವನ್ನು ಅವರು ಕಂಡುಕೊಂಡರು. ಕವಿಗೆ ಯಾವುದೇ ಇಸಂ ಇಲ್ಲ, ಕವಿತೆ ಬರೆಯುವುದೇ ಇಸಂ. ರಾಯರ ದೀರ್ಘ ತಾಳಿಕೆಗೆ ಅವರ ಈ ಮನೋಧರ್ಮವೇ ಕಾರಣ. ಅವರು ಇನ್ನೂ ಬರೆಯುತ್ತಿರಲಿ, ಹತ್ತಕ್ಕೆ ಇನ್ನೊಂದು ಸೇರಲಿ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.