*ಇದು ನಾಯಕರ ದಾರಿಯಲ್ಲ, ಅನುಯಾಯಿಗಳದ್ದು

ರಾಮ ಮತ್ತು ರಾವಣ ಬದ್ಧ ವೈರಿಗಳು. ಇಬ್ಬರಿಗೂ ಸ್ವಸ್ತಿ ಹೇಳಿಕೊಂಡು ಬದುಕುವುದು ಹೇಗೆ? ಎರಡೂ ಕಡೆಯೂ ಒಳ್ಳೆಯನಾಗುವುದು ಎಲ್ಲರಿಗೂ ಸಿದ್ಧಿಸುವ ಕಲೆಯಲ್ಲ. ಕೆಲವರಷ್ಟೇ ಅದನ್ನು ಸಿದ್ಧಿಸಿಕೊಂಡಿರುತ್ತಾರೆ. ಎರಡೂ ಕಡೆಯವರು ಬಲಶಾಲಿಗಳಾಗಿದ್ದಾಗ ಯಾರು ಗೆಲ್ಲುತ್ತಾರೆ, ಯಾರ ಕೈ ಮೇಲಾಗುತ್ತದೆ ಎಂದು ನಿರ್ಧರಿಸುವುದು ಕಷ್ಟವಾಗುತ್ತದೆ. ಆಗ ಅವರ ಹತ್ತಿರದಲ್ಲಿರುವವರು ಒಂದು ಸಮಾನಾಂತರವನ್ನು ಕಾಯ್ದುಕೊಂಡು ಹೋಗುವುದಕ್ಕೆ ಪ್ರಯತ್ನಿಸುತ್ತಾರೆ.
ತಕ್ಕಡಿಯ ಯಾವ ಬದಿ ಯಾವಾಗ ಮೇಲೇಳುತ್ತದೆ ಗೊತ್ತಾಗುವುದಿಲ್ಲ. ಒಬ್ಬರು ಗೆದ್ದೆತ್ತಿನ ಬಾಲ ಹಿಡಿಯುವುದಕ್ಕೆ ಇಂಥ ಲೆಕ್ಕಾಚಾರದ ನಡೆ ಅಗತ್ಯ.
ನಾಯಕನಾಗುವವನು ಈ ಮಾರ್ಗವನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ. ಇದು ಅನುಯಾಯಿಗಳ ಮಾರ್ಗ ಮಾತ್ರ.
ಇದನ್ನೇ ಇನ್ನೊಂದು ರೀತಿಯಲ್ಲಿ ಕೌರವರಿಗೂ ಭಾವ ಪಾಂಡವರಿಗೂ ಭಾವ ಎಂದು ಹೇಳುತ್ತಾರೆ. ಶ್ರೀಕೃಷ್ಣ ಸಂಬಂಧದಿಂದ ಪಾಂಡವರು ಮತ್ತು ಕೌರವರಿಬ್ಬರಿಗೂ ಭಾವನೇ. ಯುದ್ಧ ನಡೆಯುವ ಸಂದರ್ಭ ಬಂದಾಗ ಕೃಷ್ಣನ ನೆರವನ್ನು ಕೋರಿ ದುರ್ಯೋಧನ ಮತ್ತು ಅರ್ಜುನ ಇಬ್ಬರೂ ಹೋಗುತ್ತಾರೆ. ಇಬ್ಬರನ್ನೂ ಕೃಷ್ಣ ಆದರಪೂರ್ವಕವಾಗಿಯೇ ಸತ್ಕರಿಸುತ್ತಾನೆ. ತಾನೊಬ್ಬನೇ ಒಂದು ಕಡೆ, ಯಾದವರ ಸೈನ್ಯ ಒಂದು ಕಡೆ ಎಂದು ವಿಂಗಡಿಸಿ ಬೇಕಾದವರು ಬೇಕಾದುದನ್ನು ಆರಿಸಿಕೊಳ್ಳಬಹುದು ಎನ್ನುತ್ತಾನೆ. ಅರ್ಜುನ ಕೃಷ್ಣನನ್ನೇ ಆಯ್ಕೆ ಮಾಡಿಕೊಳ್ಳುತ್ತಾನೆ.