*ಚತುರತೆಯನ್ನು ಇದಕ್ಕೂ ಪರಿಣಾಮಕಾರಿಯಾಗಿ ಹೇಳುವುದು ಸಾಧ್ಯವಿಲ್ಲ

ವನು ಚಾಪೆ ಕೆಳಗೆ ತೂರಿದರೆ ಇವನು ರಂಗೋಲಿ ಕೆಳಗೇ ತೂರಿದನು ಎಂದು ಹೇಳುವುದನ್ನು ಕೇಳಿದ್ದೇವೆ. ಒಬ್ಬ ಬಹಳ ಚಾಣಾಕ್ಷ ಎಂದು ಹೇಳುವುದಕ್ಕೆ ಈ ಉಪಮೆಯನ್ನು ಬಳಸುತ್ತಾರೆ. ಬಹಳ ಒಳ್ಳೆಯದಕ್ಕೆ ಹೇಳುವಾಗಲೂ ಇದನ್ನು ಹೇಳುತ್ತಾರೆ. ಬಹಳ ಕೆಟ್ಟವನ ಚಾಣಾಕ್ಷತೆಯನ್ನು ಹೇಳುವಾಗಲೂ ಇದನ್ನೇ ಹೇಳುತ್ತಾರೆ.
ಒಬ್ಬನ ಚತುರತೆಗಿಂತ ಇನ್ನೊಬ್ಬನ ಚತುರತೆ ಮಿಗಿಲು ಎಂದು ಹೇಳುವಾಗ ಒಳ್ಳೆಯದು ಕೆಟ್ಟದ್ದು ಎಂಬ ತಾರತಮ್ಯ ತಲೆ ಎತ್ತುವುದಿಲ್ಲ.
ಚಾಪೆಯ ಕೆಳಗೆ ತೂರಿ ಹೋಗುವುದಕ್ಕೆ ಭೂಮಿ ಮತ್ತು ಚಾಪೆಯ ನಡುವೆ ಸ್ವಲ್ಪವಾದರೂ ಅವಕಾಶವಿರುತ್ತದೆ. ಆದರೆ ರಂಗೋಲಿ ಭೂಮಿಗೆ ಅಂಟಿಕೊಂಡೇ ಇರುತ್ತದೆ. ರಂಗೋಲಿಯನ್ನು ಎತ್ತಿ ಬೇರೆಡೆಗೆ ಇಡುವುದಕ್ಕೆ ಬರುತ್ತದೆಯೇ? ಸ್ವಲ್ಪವೇ ತಾಗಿದರೂ ರಂಗೋಲಿ ರಂಗೋಲಿಯಾಗಿರುವುದಿಲ್ಲ.
ಇಂಥ ರಂಗೋಲಿಯ ಕೆಳಗೇ ತೂರುತ್ತಾನೆಂದರೆ ಅದೊಂದು ಸಾಹಸವೇ. ಚತುರತೆಯನ್ನು ಇನ್ನೂ ಪರಿಣಾಮಕಾರಿಯಾಗಿ ಉಪಮಿಸುವುದು ಸಾಧ್ಯವೇ ಇಲ್ಲ.