*ಇದು ಮಿಲಿಯನ್‌ ಡಾಲರ್‌ ಕ್ವೆಶ್ಚನ್‌ಗೆ ಸಂವಾದಿಯೇ?

ಮುಂದೇನಾಗುತ್ತದೆ ಎಂದು ಊಹಿಸಲಾಗದ ಸಂದರ್ಭದಲ್ಲಿ, ಉತ್ತರವೇ ಹೇಳಲಾಗದಂಥ ಕಗ್ಗಂಟು ಎದುರಾದಾಗಲೆಲ್ಲ ಇದೊಂದು ಯಕ್ಷ ಪ್ರಶ್ನೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆ.
ಏನಿದು ಯಕ್ಷ ಪ್ರಶ್ನೆ? ಯಾರು ಯಕ್ಷ? ಪ್ರಶ್ನೆ ಕೇಳಿದ್ದು ಯಾರಿಗೆ? ಅದೇನು ಪ್ರಶ್ನೆಗಳು?
ಪಗಡೆಯಾಟದಲ್ಲಿ ಸೋತುಹೋದ ಪಾಂಡವರು ವನವಾಸಕ್ಕೆ ತೆರಳುತ್ತಾರೆ. ಅವರ ವನವಾಸ ಮುಗಿದು ಇನ್ನೇನು ಅಜ್ಞಾತವಾಸಕ್ಕೆ ತೆರಳಬೇಕು ಎನ್ನುವ ಸಂಧಿಸಮಯದಲ್ಲಿ ಈ ಪ್ರಸಂಗ ನಡೆಯುತ್ತದೆ. ಕಾಡಿನಲ್ಲಿದ್ದ ಪಾಂಡವರಿಗೆ ವಿಪರೀತ ಬಾಯಾರಿಕೆ. ಧರ್ಮರಾಯನು ನೀರನ್ನು ತೆಗೆದುಕೊಂಡು ಬರುವಂತೆ ನಕುಲನನ್ನು ಕಳುಹಿಸುತ್ತಾನೆ.
ಒಂದು ಕೊಳದ ಬಳಿ ಬಂದ ನಕುಲ ನೀರನ್ನು ತುಂಬಿಕೊಳ್ಳಲು ಬಾಗುತ್ತಾನೆ. ಆಗ ಆತನಿಗೆ ಒಂದು ಅಶರೀರವಾಣಿ ಕೇಳಿಸುತ್ತದೆ. ನಿಲ್ಲು, ನಾನು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ ನೀರನ್ನು ಕುಡಿ. ಈ ಎಚ್ಚರಿಕೆಯನ್ನು ಲೆಕ್ಕಿಸದೆ ನಕುಲ ನೀರನ್ನು ತೆಗೆದುಕೊಂಡಾಗ ಗತಪ್ರಾಣನಾಗಿ ಬೀಳುತ್ತಾನೆ.
ಬಳಿಕ ಸಹದೇವ, ಅರ್ಜುನ, ಭೀಮ ಇವರ ಸ್ಥಿತಿಯೂ ಹಾಗೇ ಆಗುತ್ತದೆ. ಕೊನೆಯಲ್ಲಿ ಧರ್ಮರಾಯ ಬರುತ್ತಾನೆ. ಯಕ್ಷ ಕಣ್ಣಿಗೆ ಕಾಣಿಸಿಕೊಂಡು ಪ್ರಶ್ನೆಯನ್ನು ಕೇಳುತ್ತಾನೆ… ಭೂಮಿಗಿಂತ ದೊಡ್ಡದು ಯಾವುದು? ತಾಯಿ ಎನ್ನುವುದು ಉತ್ತರ. ಹಲವು ಪ್ರಶ್ನೆಗಳ ಬಳಿಕ ಯಕ್ಷ ಕೇಳಿದ ಕೊನೆಯ ಪ್ರಶ್ನೆ, ಈ ನಿನ್ನ ಸಹೋದರರಲ್ಲಿ ಯಾರನ್ನು ಬದುಕಿಸಲಿ? ಕುಂತಿಯ ಮಗನಾದ ನಾನಿದ್ದೇನೆ. ಮಾದ್ರಿಯ ಮಕ್ಕಳಲ್ಲಿ ಒಬ್ಬನಾದರೂ ಇರಲಿ ಎಂದು ನಕುಲನನ್ನು ಬದುಕಿಸು ಎಂದು ಕೇಳುತ್ತಾನೆ.
ಧರ್ಮರಾಯನ ಈ ಧರ್ಮಬುದ್ಧಿಯಿಂದ ಯಕ್ಷನ ರೂಪದಲ್ಲಿದ್ದ ಯಮಧರ್ಮನಿಗೆ ಸಂತೋಷವಾಗುತ್ತದೆ. ಎಲ್ಲರನ್ನೂ ಬದುಕಿಸುತ್ತಾನೆ.
ಇಂಗ್ಲಿಷಿನಲ್ಲೂ ಇಂಥದ್ದೊಂದು ಮಾತಿದೆ. ಅದು ಮಿಲಿಯನ್‌ ಡಾಲರ್‌ ಕ್ವೆಶ್ಚನ್‌. ಅದಕ್ಕೆ ಸಂವಾದಿಯಾಗಿ ಯಕ್ಷ ಪ್ರಶ್ನೆಯನ್ನು ಬಳಸಬಹುದೇನೋ.