*ತೋರಿಕೆಯ ದುಃಖ ಪ್ರದರ್ಶನ

ಮೊಸಳೆ ಕಣ್ಣೀರು ಸುರಿಸುತ್ತಾನೆ ಅವನು, ನಂಬಬೇಡಿ ಅವನನ್ನು ಎಂದೋ, ನಿನ್ನ ಮೊಸಳೆ ಕಣ್ಣೀರಿಗೆ ನಾವೇನು ಕರಗಿ ಬಿಡುತ್ತೇವೆ ಅಂದುಕೊಂಡಿದ್ದೀಯಾ ಎಂದೋ ಹೇಳುವುದನ್ನು ಕೇಳಿದ್ದೇವೆ.
ಏನಿದು ಮೊಸಳೆ ಕಣ್ಣೀರು? ಯಾವುದಾದರೂ ಮೃಗಾಲಯಕ್ಕೆ ಹೋದಾಗ ನೀವು ಮೊಸಳೆಯನ್ನು ನೋಡಿರಬಹುದು. ಕಣ್ಣು ಮುಚ್ಚಿ ಮಲಗಿರುವ ಮೊಸಳೆಯ ಕಣ್ಣಿಂದ ನೀರು ಹರಿಯುತ್ತಿರುವುದನ್ನೂ ನೀವು ಕಂಡಿರಬಹುದು. ಮೊಸಳೆ ತನ್ನ ಆಹಾರವನ್ನು ಆಕರ್ಷಿಸಲು ಕಣ್ಣೀರು ಸುರಿಸುತ್ತದೆ ಎಂಬ ಕತೆ ಇದೆ. ಮೊಸಳೆಯ ಕಣ್ಣಿಂದ ನೀರು ನಿರಂತರವಾಗಿ ಹರಿಯುತ್ತಿರುತ್ತದೆ. ಮೊಸಳೆಗೆ ದುಃಖವಾಗಿ ಅದು ಕಣ್ಣೀರು ಸುರಿಸುವುದಿಲ್ಲ. ಅದರ ದೇಹ ರಚನೆಯ ಕಾರಣದಿಂದ ಕಣ್ಣೀರು ಬರುತ್ತಿರುತ್ತದೆ. ಮೊಸಳೆ ನೀರಿನಿಂದ ಹೊರಬಂದು ಬಹಳ ಹೊತ್ತಾದ ಬಳಿಕ ಮೈಯೆಲ್ಲ ಒಣಗಿದಾಗ ಕಣ್ಣಿನ ನೀರು ಕಾಣುತ್ತದೆ. ಲೆಕ್ರಿಮಲ್‌ ಗ್ಲಾಂಡ್‌ಗಳು ಎರಡೂ ಕಣ್ಣುಗಳ ಪರೆಯಲ್ಲಿಇರುತ್ತವೆ. ಇವುಗಳಿಂದ ನೀರು ಬರುತ್ತದೆ. ಇದು ವೈಜ್ಞಾನಿಕ ವಿವರಣೆ.
ಕೆಲವರು ತಮಗೆ ದುಃಖ ಆಗದೆ ಇದ್ದರೂ ದುಃಖವಾಗಿದೆ ಎಂದು ತೋರಿಸಿಕೊಳ್ಳಲು ಕಣ್ಣೀರು ಸುರಿಸುತ್ತಾರೆ. ಮೊಸಳೆಯ ಕಣ್ಣೀರಿಗೂ ಇವರ ಕಣ್ಣೀರಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ತೋರಿಕೆಯ ದುಃಖ ಪ್ರದರ್ಶನವನ್ನು ಹೀಗೆ ಮೊಸಳೆಯ ಕಣ್ಣೀರಿಗೆ ಹೋಲಿಸುವುದು ರೂಢಿಗೆ ಬಂದಿದೆ. ಷೇಕ್ಸ್‌ಪಿಯರ್‌ ಕೂಡ ತನ್ನ ಒಥೆಲೋ ನಾಟಕದಲ್ಲಿ ಮೊಸಳೆ ಕಣ್ಣೀರನ್ನು ಬಳಸಿದ್ದಾನೆ.