ಈಗಾಗಲೆ ಒಂಬತ್ತು ಕವನ ಸಂಕಲನಗಳನ್ನು ಪ್ರಕಟಿಸಿರುವ ಡಾ.ನಾ.ಮೊಗಸಾಲೆಯವರು ಇದೀಗ ‘ದೇವರು ಮತ್ತೆ ಮತ್ತೆ’ ಎಂಬ ಹತ್ತನೆಯ ಸಂಕಲನವನ್ನು ಹೊರತಂದಿದ್ದಾರೆ. ಅವರ ಈ ಮೊದಲಿನ ಕೃತಿ ‘ಕಾಮನೆಯ ಬೆಡಗು’ ಪ್ರಕಟವಾಗಿದ್ದು ೨೦೧೦ರಲ್ಲಿ. ಅಂದರೆ ಅಲ್ಲಿಂದ ಈಚೆಗೆ ಮೂರೂವರೆ ವರ್ಷಗಳಲ್ಲಿ ಅವರು ಬರೆದ ೮೫ ಕವಿತೆಗಳು ಈ ಸಂಕಲನದಲ್ಲಿವೆ. ಸರಾಸರಿ ವರ್ಷಕ್ಕೆ ಇಪ್ಪತ್ತೈದು, ತಿಂಗಳಿಗೆ ಎರಡರಂತೆ ಅವರು ಕವಿತೆಗಳನ್ನು ಬರೆಯುತ್ತಿದ್ದಾರೆ ಎಂಬುದು ಗಣಿತದ ಲೆಕ್ಕಾಚಾರ. ಕೇವಲ ಕವಿತೆ ಮಾತ್ರವಲ್ಲ, ಕತೆಗಳು, ಕಾದಂಬರಿ, ವ್ಯಕ್ತಿಚಿತ್ರ, ಅಂಕಣ ಬರೆಹ ಹೀಗೆ ಸಾಹಿತ್ಯದ ವಿವಿಧ ವಿಭಾಗಗಳಲ್ಲಿ ಅವರು ಕೃಷಿ ಮಾಡುತ್ತಿದ್ದಾರೆ. ಎಪ್ಪತ್ತು ವಸಂತಗಳನ್ನು ಕಳೆದಿರುವ ಮೊಗಸಾಲೆಯವರದು ಅನುಭವದಿಂದ ಮಾಗಿದ ಬದುಕು. ‘ವರ್ತಮಾನದ ಮುಖಗಳು’ ಅವರ ಮೊದಲ ಸಂಕಲನ. ಅದು ಪ್ರಕಟವಾಗಿದ್ದು ೧೯೭೪ರಲ್ಲಿ. ಅಂದರೆ ಅವರು ಕಾವ್ಯದೀಕ್ಷೆಯನ್ನು ಪಡೆದು ನಾಲ್ಕು ದಶಕಗಳು ಸಂದವು. ಅವರ ಮಾಗಿದ ಜೀವನಾನುಭವಗಳನ್ನು ನಾವು ಈ ಸಂಕಲನದಲ್ಲಿ ಗುರುತಿಸಬಹುದಾಗಿದೆ. ಅಲ್ಲಮನ ಚಿಂತನೆಗಳನ್ನು ಅಧ್ಯಯನ ಮಾಡಿರುವ ಮೊಗಸಾಲೆಯವರು ನಿಂತಲ್ಲಿ ಕುಂತಲ್ಲಿ ಅವನನ್ನೇ ಧ್ಯಾನಿಸುತ್ತಿದ್ದಾರೆ. ತಾವು ಇದುವರೆಗೆ ಅನುಭವಿಸಿ ಬಂದ ಬದುಕಿನ ಬಗ್ಗೆ ಕುತೂಹಲದಿಂದ ಒಂದು ಸಿಂಹಾವಲೋಕನವನ್ನು ಅವರು ಬೀರಿದ್ದಾರೆ. ಬದುಕೆಂದರೆ ಏನು? ಬದುಕಿನಲ್ಲಿ ಭಗವಂತನ ಭಾಗ ಎಷ್ಟು? ಯಾರು ಭಗವಂತ? ಎಲ್ಲಿದ್ದಾನೆ ಭಗವಂತ? ಹೀಗೆ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಅವರು ಮಾಡಿದ್ದಾರೆ. ಒಂದರ್ಥದಲ್ಲಿ ಅವರು ವಾನಪ್ರಸ್ಥಾಶ್ರಮದಲ್ಲಿದ್ದಾರೆ. ಹೀಗಾಗಿ ಸಹಜವಾಗಿಯೇ ಅವರ ಚಿಂತನೆಗಳು ಭಗವದ್‌ಸತ್ಯಗಳ ಹುಡುಕಾಟದಲ್ಲಿ ತೊಡಗಿವೆ. ಆಂತರಿಕವಾಗಿ ಅವರ ಈ ಶೋಧದ ಕಾಟ ಅತಿಯಾದಾಗ ಅದು ‘ಹುಡುಕಾಟ’ ಎಂಬ ಕವಿತೆಯಾಗಿದೆ. ಅಲ್ಲಿ ಓದಿದ್ದ ಯಾರ ಕವಿತೆಗೂ ಬರಲಿಲ್ಲ ದೇವರು ನನ್ನ ಕವಿತೆಗೆ ಬಂದಿದ್ದ ಅಪವಾದವಾಗಿ ನಾನು ಕಲ್ಲಿನಲ್ಲಿರುವ ಅವನನ್ನು ನಿಧಾನವಾಗಿ ಎಬ್ಬಿಸಿ ತಂದಿದ್ದೆ ಮನುಷ್ಯನಾಗಿ ಮೊಗಸಾಲೆಯವರು ಒಂದು ರೀತಿಯಲ್ಲಿ ಅಕ್ಷರಗಳಲ್ಲಿ ದೇವರನ್ನು ಹುಡುಕ ಹೊರಟ ಕವಿ ಕೇರಳದ ಎಳುತ್ತಚ್ಚನ್ ಹಾಗೆ. ಅದಕ್ಕಾಗಿಯೇ ಅವರು ಹೇಳುವುದು, ಯಾವುದನ್ನು ಯಾರೂ ಇದೇ ಇದು ಎನ್ನಲಾಗದು ದೇವರನ್ನೂ ಕವಿತೆಯನ್ನೂ ಕೂಡಾ ಕವಿತೆ ದೇವರಲ್ಲಿ ದೇವರು ಕವಿತೆಯಲ್ಲಿ ನಾವು ಪ್ರಕೃತಿಯಲ್ಲಿ ಪ್ರಕೃತಿ ನಮ್ಮಲ್ಲಿ ಇರಬಹುದಲ್ಲ ಹೀಗೆ! ಇಂಥ ಒಂದು ಸಹಜವಾದ ವಿಸ್ಮಯದೊಂದಿಗೆ ಅವರು ನಮ್ಮ ಸುತ್ತಲಿನ ಎಲ್ಲವನ್ನೂ ಅನುಸಂಧಾನ ಮಾಡುತ್ತಾರೆ. ಈ ಕ್ರಿಯೆಯಲ್ಲಿ ಅವರು ‘‘ಇಲ್ಲ ಇಲ್ಲ ಎನ್ನುವುದನ್ನು ಗಟ್ಟಿಗೊಳಿಸುತ್ತಲೇ ಹೋದೆ. ಇಲ್ಲ ಎನ್ನುವುದೇ ಇದೆ ಎಂಬಂತಾಯಿತು ಇದೆ ಇದೆ ಎಂದದ್ದೆಲ್ಲ ಇಲ್ಲ ಎನ್ನುವುದರಲ್ಲಿ ಇದ್ದಂತಾಯಿತು’’ ಎಂದು ಹೇಳುತ್ತಾರೆ. ಕವಿಯಾಗಿ ಮೊಗಸಾಲೆ ಭಾವನೆಗಳ ಪ್ರವಾಹದಲ್ಲಿ ಎಂದೂ ಕೊಚ್ಚಿ ಹೋಗಲಿಲ್ಲ. ತಮ್ಮ ನಿಶಿತವಾದ ಒರೆಗಲ್ಲನ್ನು ಯಾವತ್ತೂ ಸಿದ್ಧಪಡಿಸಿಕೊಂಡೇ ಇರುತ್ತಾರೆ ಅವರು. ಎಲ್ಲೋರದ ಗುಹೆಗಳಿಗೆ ಭೇಟಿ ನೀಡಿದ್ದ ಅವರು ಕೆಲವು ಕವನಗಳನ್ನು ಬರೆದಿರುವರು. ಆ ಗುಹಾಲಯಗಳ ಮುಂದೆ ಒಂದು ಪ್ರಸಂಗ ಕವಿ ಹೇಳುತ್ತಾರೆ.ಎಲ್ಲ ಗುಹೆಗಳ ಒಳಹೊಕ್ಕು ಹೊರಬಂದೆ. ಕೊನೆಯಲ್ಲಿ ಇನ್ನೂ ಒಂದಿರಬಹುದೇನೋ ಎನ್ನುವ ಅನುಮಾನ ಅವರಿಗೆ. ಆಗ ಅವರಿಗೆ ಒಂದು ಪಿಸುಮಾತು ಕೇಳಿಸುತ್ತದೆ. ಇರಬಹುದೆ ಅದು ಆ ಎಲ್ಲ ಗುಹೆಗಳಲ್ಲಿ ದೇವಾದಿ ದೇವತೆಗಳ ಕಾಲ್ತುಳಿತಕ್ಕೆ ಸಿಕ್ಕಿ ಸತ್ತ ಶಿಲ್ಪಿಗಳ ಅಥವಾ ಕೂಲಿಯಾಳುಗಳ? ಎಂದುಕೊಳ್ಳುತ್ತಾರೆ. ಇಂಥ ಶೋಷಿತರ ಪರವಾದ ಧೋರಣೆ ಇರುವುದರಿಂದಲೇ ಅವರಿಗೆ ‘ದಲಿತೋಪನಿಷತ್ತು’ ಬರೆಯುವುದು ಸಾಧ್ಯವಾಗಿದೆ. ಅಂಥ ಐದು ಕವಿತೆಗಳು ಇಲ್ಲಿವೆ. ದಲಿತರನ್ನು ಇಬ್ಬನಿಗೆ ಹೋಲಿಕೆ ಮಾಡಿದ್ದು, ಇಬ್ಬನಿ ಗರಿಕೆಗೆ ಜೀವವಾಗಿದ್ದು, ಇಬ್ಬನಿಯು ಹಳ್ಳ ತೊರೆ ನದಿ ಸಮುದ್ರವಾಗುವ ಪರಿಯನ್ನು ಅವರು ಹೇಳುತ್ತಾರೆ. ಪ್ರಖರ ಸೂರ್ಯನ ಧಿಕ್ಕರಿಸುವ ಆ ರೀತಿಯೇ ಅದ್ಭುತ. ಎದೆಗೆ ಬಿದ್ದ ಅಕ್ಷರದ ಮೂಲಕ ದಲಿತೋತ್ಥಾನದ ಪರಿಯನ್ನು ಸೀತೆ ಭೂಮಿಯಲ್ಲಿ ಹುಟ್ಟಿದ ರೂಪಕಕ್ಕೆ ಹೋಲಿಸುತ್ತಾರೆ. ‘ಬರೆಯುತ್ತೇವೆ ಬಿಡಿ ನಾವು ರಾಮಾಯಣವ ಆ ನಿಮ್ಮ ಸಿತೆ ಮತ್ತು ಸೀತೆಯನ್ನೂ ಮೀರಿ’ ಎಂಬ ದಲಿತರ ಆತ್ಮವಿಶ್ವಾಸ ಎದುರಾಳಿಯ ಎದೆ ನಡುಗಿಸುವಂತಿದೆ. ಇಡೀ ಸಂಕಲನವನ್ನು ಅವರು ಒಂಬತ್ತು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಕವಿತೆಗಳಲ್ಲಿ ಎಂಬ ಭಾಗವೂ ಇದರಲ್ಲಿದೆ. ಇದರಲ್ಲಿಯ ‘ಯೋನಿ ಇದೆ ಉಚಿತವಾಗಿ ಕೊಟ್ಟಂತೆ’ ಎಂಬ ಕವಿತೆಯನ್ನು ಎಲ್ಲ ಅತ್ಯಾಚಾರಿಗಳ ಮೂಲ ಪುರುಷ ದೇವೇಂದ್ರನ ಅಹಲ್ಯಾ ಪ್ರಸಂಗದೊಂದಿಗೆ ತಳಕು ಹಾಕಿ ನೋಡಿದರೆ ಕವಿತೆಯ ಅರ್ಥವಿಸ್ತಾರ ಅಧಿಕವಾಗುತ್ತದೆ. ಕವಿ ಸಂತನಾಗುವ ಪರಿಯನ್ನು ಈ ಸಂಕಲನದ ಹಲವು ಕವಿತೆಗಳಲ್ಲಿ ನಾವು ಅನುಭವಿಸಬಹುದಾಗಿದೆ. ಸಂಕಲನವನ್ನು ಇಡಿಯಾಗಿ ನೋಡಿದಾಗ ಕವಿಯು ಹಣ್ಣಿನ ಮರದ ಕೆಳಗೆ ನಿಂತ ಹುಡುಗನ ಹಾಗೆ ಭಾಸವಾಗುವುದು. ಹಣ್ಣನ್ನು ಎಟಕಿಸಿಕೊಳ್ಳಲು ನೆಗೆಯುತ್ತಲೇ ಇದ್ದಾನೆ ಆತ. ಆ ನೆಗೆತಕ್ಕೆ ಹಲವು ದಕ್ಕಿವೆ, ಕೆಲವು ತಪ್ಪಿವೆ. ಕವಿ ಮೊಗಸಾಲೆ ಇಲ್ಲಿ ಒಂದು ತಾಯಿಯ ಹಾಗೆ. ತನ್ನ ಪುಟ್ಟ ಮಗುವನ್ನು ಬಗೆಬಗೆಯ ಬಟ್ಟೆಗಳಲ್ಲಿ ಸಿಂಗರಿಸಿ ನೋಡಿ ಖುಷಿ ಪಡುವ ಮಾತೃ ಹೃದಯದ ಸಂಭ್ರಮ ಅವರದು. ಅದೆಷ್ಟು ಬಗೆಯ ಬಟ್ಟೆಗಳು, ಜಡೆ ಹಾಕುವ ಪರಿ, ಪೌಡರ್ ಮೆತ್ತುವ ರೀತಿಯೋ, ಇತರರ ದೃಷ್ಟಿ ತಾಕೀತೇನೋ ಎಂದುಕೊಂಡು ಕಪ್ಪು ಚುಕ್ಕೆಯನ್ನು ಇಟ್ಟು ಸಂಭ್ರಮಿಸುವ ಪರಿ ಎಲ್ಲವನ್ನೂ ಈ ಸಂಕಲನದಲ್ಲಿ ನಾವು ಕಾಣಬಹುದು. ಅವರ ಈ ಕಾವ್ಯ ಶಿಶು ಅವರಿಗಷ್ಟೇ ಅಲ್ಲ ಎಲ್ಲರಿಗೂ ಮುದ್ದಾಗಿಯೇ ಕಾಣುವುದರಲ್ಲಿ ಸಂಶಯವಿಲ್ಲ. ಆರಂಭದಲ್ಲಿ ಮೊಗಸಾಲೆಯವರು ಒಂದು ಮಾತನ್ನು ಹೇಳಿದ್ದಾರೆ, ‘ಇಲ್ಲಿ ನಿಮಗೆ ಕಾವ್ಯಾನುಭವ ಆಗಿ ಹೋದರೆ, ಅದನ್ನು ನೀವು ದೇವರೆಂದು ಸ್ವೀಕರಿಸಿ ನಾನು ಧನ್ಯನಾಗುತ್ತೇನೆ. ಅದು ಆಗದೇ ಹೋದರೆ ಇವು ಇನ್ನೂ ದೇವರಾಗದೆ ಉಳಿದಿರುವ ಕಲ್ಲು ಎಂದು ತಿಳಿದುಕೊಳ್ಳಿ’ ಎಂದು. ನಿಜ, ಕಣಕಣಗಳಲ್ಲೂ ದೇವರನ್ನೇ ಕಾಣುವ ಯೋಗ್ಯತೆ ಇದ್ದಾಗ ಕಲ್ಲೆಲ್ಲ ದೇವರೇ ತಾನೆ! ಪ್ರ: ದೇಸಿ ಪುಸ್ತಕ, ಬೆಂಗಳೂರು, ಪುಟಗಳು ೧೩೬, ಬೆಲೆ ₹ ೮೦