ಕೆ.ಸತ್ಯನಾರಾಯಣ ಅವರ- ಮಹಾ ಕಥನದ ಮಾಸ್ತಿ
ಕನ್ನಡದ ಪ್ರಮುಖ ಗದ್ಯ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಸುಮಾರು ನಾಲ್ಕು ದಶಕಗಳಿಂದ ಕನ್ನಡದ ಆಸ್ತಿ ಎಂದು ಹೆಸರಾಗಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರನ್ನು ಓದುತ್ತ, ಅವರ ಪ್ರಭಾವಕ್ಕೆ ಒಳಗಾಗುತ್ತ, ಆ ಪ್ರಭಾವವನ್ನು ಮೀರಿ ಬೆಳೆಯಲು ಪ್ರಯತ್ನಿಸುತ್ತ, ತಮ್ಮದೇ ಒಂದು ಕಥನ ಶೈಲಿಯನ್ನು ರೂಢಿಸಿಕೊಂಡವರು. ಮಾಸ್ತಿಯವರ ಪ್ರಥಮ ಕಥಾ ಸಂಕಲನ ಪ್ರಕಟವಾಗಿ ನೂರು ವರ್ಷಗಳು ಆಗುತ್ತಿರುವ ಸಂದರ್ಭದಲ್ಲಿ ಮಾಸ್ತಿಯವರ ಕತೆಗಳನ್ನು ಸುದೀರ್ಘವಾಗಿ ಅಧ್ಯಯನ ಮಾಡಿ `ಮಹಾ ಕಥನದ ಮಾಸ್ತಿ’ ಎಂಬ ಅಧ್ಯಯನಪೂರ್ಣ ಕೃತಿಯನ್ನು ಹೊರತಂದಿದ್ದಾರೆ. ಅಧ್ಯಯನದ ಶಿಸ್ತು ಒಬ್ಬ ಪಿಎಚ್.ಡಿ. ವಿದ್ಯಾರ್ಥಿಯ ರೀತಿಯದು.
ಮಾಸ್ತಿಯವರು ಸುಮಾರು ಏಳು ದಶಕಗಳ ಅವಧಿಯಲ್ಲಿ ಒಂದು ನೂರು ಕತೆಗಳನ್ನು ಬರೆದಿದ್ದಾರೆ. ನವೋದಯದ ಆರಂಭದ ಕಾಲದಲ್ಲಿ ಕತೆಗಳನ್ನೇ ತಮ್ಮ ಸೃಜನಕ್ರಿಯೆಯ ಪ್ರಮುಖ ಮಾಧ್ಯಮವನ್ನಾಗಿ ಮಾಡಿಕೊಂಡವರಲ್ಲಿ ಮಾಸ್ತಿಯವರೇ ಅಗ್ರಗಣ್ಯರು. ನವೋದಯ, ಪ್ರಗತಿಶೀಲ, ನವ್ಯ, ಬಂಡಾಯದ ಅಲೆಗಳೆಲ್ಲ ಅವರ ಬರೆವಣಿಗೆಯ ಕಾಲದಲ್ಲಿ ಒತ್ತರಿಸಿ ಬಂದವು. ಈ ಎಲ್ಲ ಅಲೆಗಳ ಮೇಲೆ ತೇಲಿದ ಮಾಸ್ತಿಯವರು ಅವೆಲ್ಲವುಗಳಿಗಿಂತ ಹೇಗೆ ಭಿನ್ನವಾಗಿ ತಮ್ಮ ಕತೆಗಳನ್ನು ರಚಿಸಿದರು, ಆ ಕತೆಗಳ ಮೂಲ ಆಶಯವೇನು, ಕತೆಗಳು ಹೇಗೆ ಹುಟ್ಟಿಕೊಳ್ಳುತ್ತವೆ, ಸೃಜನ ಕೃತಿಯೊಂದು ಅಂತಿಮವಾಗಿ ಬೀರಬೇಕಾದ ಪರಿಣಾಮವೇನು, ಕನ್ನಡದ ಇತರ ಕತೆಗಾರರಿಂದ ಮಾಸ್ತಿ ಹೇಗೆ ಭಿನ್ನವಾಗಿ ನಿಲ್ಲುತ್ತಾರೆ ಇತ್ಯಾದಿ ಚರ್ಚೆಗಳನ್ನು ಸತ್ಯನಾರಾಯಣ ಅವರು ಇಲ್ಲಿ ಮಾಡಿದ್ದಾರೆ.
ಪುಸ್ತಕದ ಮೊದಲ ಅಧ್ಯಾಯ `ಮಾಸ್ತಿಗನ್ನಡಿ’. ಮಾಸ್ತಿಯವರು ನೂರು ಕತೆಗಳನ್ನು ಬರೆದು, ಮೊದಲ ಕತೆ ಬರೆದು ನೂರು ವರ್ಷವೂ ಆಗುತ್ತ ಬಂದ ಸಂದರ್ಭದಲ್ಲಿ ತಾವು ಬದುಕಿದ್ದಾಗ ಅಡ್ಡಾಡಿದ್ದ ಗುಟ್ಟಳ್ಳಿ, ಗವಿಪುರ ಮೊದಲಾದ ಪ್ರದೇಶಗಳು, ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದವುಗಳನ್ನು ನೋಡಿಕೊಡು ಹೋಗಲು ಮತ್ತೊಮ್ಮೆ ಭೂಮಿಗೆ ಬರುತ್ತಾರೆ. ತಾವು ಕತೆ ಬರೆದಾಗಿನ ದಿನಗಳಿಗೂ ಈಗಿನ ದಿನಗಳಿಗೂ ಆಗಿರುವ ಮಹತ್ತರವಾದ ಬದಲಾವಣೆಗಳನ್ನು, ಚಿಂತನ ಕ್ರಮಗಳನ್ನು ಅವರು ಗಮನಿಸುತ್ತಾರೆ. ತಮ್ಮ ಕತೆಯ ಪಾತ್ರಗಳು ಈಗ ಹೇಗಿವೆ ಎಂಬುದನ್ನು ನೋಡುತ್ತಾರೆ. ಈ ಅಧ್ಯಾಯದ ಕೊನೆಯ ಪ್ಯಾರಾ ಹೀಗಿದೆ- ಕಂಡ ಮೊದಲ ದೃಶ್ಯದಲ್ಲೇ ಹಿಂದಿನ ದಿನ ತಾನೇ ಕೇಳಿ ಪರಿಚಯವಾಗಿದ್ದ, ಮೈಯೆಲ್ಲಾ ಗಂಧೆಯಾಗಿ ನರಳುತ್ತಿದ್ದ ಸುಶೀಲ ಎಂಬ ಹುಡುಗಿಗೆ ಈಗ ಸುಖವಾಗಿ ಪ್ರಸವವಾಗಿ ಮಗ್ಗುಲಲ್ಲಿ ಮೊರದ ತುಂಬಾ ಮಲಗಿದ್ದ ಹಸಿ ಹಸಿ ಮಗುವಿನ ಕೆನ್ನೆಯನ್ನು ತಾಯಿಯು ಬಲಗೈಯ ತುದಿ ಬೆರಳಿನಿಂದ ಮುಟ್ಟಿದರೂ ಮುಟ್ಟದಂತೆ ಸವರುತ್ತಿದ್ದಳು.- ನಿಜ, ಮಾಸ್ತಿ ಕಂಡಿದ್ದ ಮತ್ತು ಕಾಣ ಬಯಸಿದ್ದ ಜೀವನ ಪ್ರೀತಿ ಈಗಲೂ ಹಾಗೆಯೇ ಇದೆ ಎಂಬುದನ್ನು ಸತ್ಯನಾರಾಯಣ ಅವರು ಸೃಜನಾತ್ಮಕ ರೀತಿಯಲ್ಲಿ ವಿವರಿಸುತ್ತಾರೆ. ಇದು ಅವರು ಬರೆದಿದ್ದ ಒಂದು ಕತೆಯಾಗಿದ್ದು, ಅವರ ಒಂದು ಸಂಕಲನದಲ್ಲಿ ಈಗಾಗಲೆ ಪ್ರಕಟವಾಗಿಯೂ ಇದೆ. ಮಾಸ್ತಿಯವರ ನೂರನೆ ಕತೆ `ಮಾಯಣ್ಣನ ಕನ್ನಡಿ’ ಎಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕು.
ಇದರಲ್ಲಿಯೇ ಕತೆ ಎಂದರೆ ಏನು ಎಂಬುದರ ಜಿಜ್ಞಾಸೆಗೂ ಮಾಸ್ತಿಯವರು ಸಾಕ್ಷಿಯಾಗುತ್ತಾರೆ. ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮವೊಂದರಲ್ಲಿ ಹೋಗಿ ಕುಳಿತ ಮಾಸ್ತಿಯವರು ಭಾಷಣ ಕೇಳಿಸಿಕೊಳ್ಳುತ್ತಾರೆ. ಒಬ್ಬ ಭಾಷಣಕಾರ, ಯಾವ ಕತೆಯೂ ನಿಜವಲ್ಲ, ಯಾವ ಕತೆಯೂ ಪೂರ್ಣವಲ್ಲ. ಕತೆ ಬರೆಯುವವನು ಕತೆಯ ಅಗತ್ಯಕ್ಕಾಗಿ ಬರೆಯುವುದಿಲ್ಲ. ತನ್ನ ಅಗತ್ಯಕ್ಕೆ ತನಗೆ ಬೇಕಾದಷ್ಟು ಮಾತ್ರ ಬರೆಯುತ್ತಾನೆ. ಕತೆ ನಿಜವಲ್ಲ. ನಿಜದ ಒಂದು ಭಾಗ. ಕತೆ ಬರೆಯುವಾಗಲೂ, ಕತೆ ಬರೆದ ನಂತರವೂ ನಿಜ ಹಾಗೇ ಉಳಿದಿರುತ್ತದೆ. ಸಾರಾಂಶವೆಂದರೆ ಕತೆಗೂ ವೃತ್ತ ಪತ್ರಿಕೆಗೂ, ಕತೆಗೂ ಹೋಟೆಲ್ ಮೆನುಕಾರ್ಡಿಗೂ ಅಂತಹ ವ್ಯತ್ಯಾಸವೇನಿಲ್ಲ ಎಂದು ಹೇಳುತ್ತಾನೆ.- ಇದನ್ನು ಕೇಳಿಸಿಕೊಂಡ ಮಾಸ್ತಿಯವರು ತುಂಬ ಚಡಪಡಿಸುತ್ತಾರೆ. ಅವರಿಗೆ ಆ ಮಾತುಗಳು ಒಪ್ಪಿಗೆಯಾಗುವುದಿಲ್ಲ. ನಾನು ಬರೆದ ಒಂದೇ ಒಂದು ಕತೆ ಸುಳ್ಳಲ್ಲ. ಎಲ್ಲವೂ ಕಂಡದ್ದು ಕಂಡವರಿಂದ ಕೇಳಿಸಿಕೊಂಡದ್ದು ಎನ್ನುವ ಮಾಸ್ತಿ ಅಲ್ಲಿಂದ ಅಸಮಾಧಾನದಿಂದಲೇ ಹೊರಟುಬಿಡುತ್ತಾರೆ.
ಈ ಎಳೆಯಲ್ಲಿಯೇ ಸತ್ಯನಾರಾಯಣ ಅವರು ಮಾಸ್ತಿಯವರ ಅನುಸಂಧಾನ ಮಾಡುತ್ತಾರೆ. ಮಾಸ್ತಿಯವರ ಪಾತ್ರಗಳು ಸಮಾಜದ ಬೇರೆ ಬೇರೆ ಸ್ತರಗಳಿಗೆ ಸೇರಿದವು. ಇತಿಹಾಸದ ಬೇರೆ ಬೇರೆ ಕಾಲದಿಂದ ಮೂಡಿಬಂದಿರುವಂಥವು. ಹಾಗೆಯೇ ಪುರಾಣ ಪ್ರಪಂಚದಿಂದ, ಬೇರೆ ಬೇರೆ ದೇಶಗಳಿಂದ ಮೂಡಿಬಂದ ಪಾತ್ರಗಳು ಕೂಡ ಇಲ್ಲಿವೆ. ಇದು ಮಾಸ್ತಿಯವರಿಗೆ ವಿಶಿಷ್ಟವಾದ ಹೆಗ್ಗಳಿಕೆ. ಇಷ್ಟೊಂದು ವೈವಿಧ್ಯಮಯವಾದ ಪಾತ್ರಗಳನ್ನು ಜೀವಂತವಾಗಿ ಸೃಷ್ಟಿಸಿದ ಇನ್ನೊಬ್ಬ ಕನ್ನಡ ಲೇಖಕನಿಲ್ಲ ಎಂದು ಹೇಳಿದರೆ ತಪ್ಪಾಗಲಾರದು ಎಂದು ಅವರು ಹೇಳುತ್ತಾರೆ. ಮಾಸ್ತಿಯವರಿಗೆ ಬರೆವಣಿಗೆ ಎಂದರೆ ಜೊತೆಯ ಜೀವದ ಜೀವನದಲ್ಲಿ ಸಹಾನುಭೂತಿಯಿಂದ ಬೆರೆತು, ಅದರ ಸಂಗತಿಯನ್ನು ಬೇರೆ ಜೀವಕ್ಕೂ ತಿಳಿಸುವ ಆಸೆಯದು. ಸಾಹಿತ್ಯ ಹಲವು ರೀತಿ ಉದಯಿಸಬಲ್ಲದು. ಆದರೆ ಅದು ಹೀಗೆ ಉದಯಿಸಿದಾಗ ಸಾಹಿತ್ಯವೆಂಬ ಕರ್ಮದ ಅತ್ಯುತ್ತಮ ಲಕ್ಷ್ಯವನ್ನು ಸಾಧಿಸಹೊರಟಿರುತ್ತದೆ ಎಂಬ ತಿಳಿವಳಿಕೆ ಅವರದು.
ಕೆ.ಸತ್ಯನಾರಾಯಣ ಅವರು ತಮ್ಮ ಮಾಸ್ತಿ ಅಧ್ಯಯನದಲ್ಲಿ ಅವರ ಕಥಾಲೋಕದ ವಿಶೇಷಗಳನ್ನು ವಿಸ್ತೃತವಾಗಿ ಚರ್ಚಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದ ಹತ್ತನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ.
1.ಮಾಸ್ತಿ ತಮ್ಮ ಬರವಣಿಗೆಯ ಎಲ್ಲ ಘಟ್ಟದಲ್ಲೂ ಮನುಷ್ಯನಾದವನು ಇಲ್ಲಿ ಅರ್ಥಪೂರ್ಣ ಬದುಕೆಂಬುದನ್ನು ನಡೆಸಬೇಕಾದರೆ ನಿರಂತರವಾಗಿ ಎದುರಿಸಬೇಕಾದ `ಕಾಣುವ’ ಮತ್ತು ಕಂಡದ್ದನ್ನು `ಪ್ರಸ್ತುತಗೊಳಿಸುವ’ ಸಮಸ್ಯೆಯ ಬಗ್ಗೆಯೇ ಯೋಚಿಸುತ್ತಿದ್ದರು.
2.ಅವರ ಕತೆಗಳ ಮನುಷ್ಯ ವರ್ತಮಾನ ಮತ್ತು ಭವಿಷ್ಯ ಎರಡರಲ್ಲೂ ಒಟ್ಟಿಗೆ ಬದುಕುತ್ತಿರುತ್ತಾನೆ.
3.ಮಾಸ್ತಿ ಕತೆ ಹೇಳುವವರೂ ಅಲ್ಲ- ಹಿಂದಿನ ಪುರಾಣಿಕರುಗಳಂತೆ; ಕತೆ ಕಟ್ಟುವವರೂ ಅಲ್ಲ- ಅವರ ಮುಂದೆ ಬಂದ ನವ್ಯರಂತೆ. ಅವರು ಕತೆಯನ್ನು ದಾಟಿಸುವವರು, ಒಪ್ಪಿಸುವವರು…. ಅವರೇನು ನಮಗೆ ಚಿತ್ರವತ್ತಾದ ವಿವರಗಳನ್ನು ಕೊಡುವುದಿಲ್ಲ. ವಿಶೇಷ ಎನ್ನುವಂತಹ ವರ್ಣನೆಯೂ ಇರುವುದಿಲ್ಲ. ಅವರ ಕತೆಗಳ ವಿವರ ಬರುವುದು ಸಾರಸಂಗ್ರಹ ರೂಪದಲ್ಲಿ- ಸಾರಾಂಶದಲ್ಲಿ, ಒಮ್ಮೊಮ್ಮೆ ವಿಶ್ಲೆಷಣೆಯಲ್ಲಿ. ಕತೆಯನ್ನು ನಾವು ಇನ್ನೊಬ್ಬರಿಗೆ ಹೇಳುವಾಗ, ಇನ್ನೊಬ್ಬರು ಹೇಳಿದ್ದನ್ನು ಕೇಳಿಸಿಕೊಳ್ಳುವಾಗ ನಮ್ಮಗಳ ಮನಸ್ಸಿನಲ್ಲಿ ವಿವರಗಳು ದಾಖಲಾಗುವ ಸ್ವರೂಪವೇ ಇದು.
4.ಕತೆ ದಾಟಿಸುವವನ ಮುಖ್ಯ ಕರ್ತವ್ಯವೆಂದರೆ ಇನ್ನೊಬ್ಬನ `ಅನುಭವ’ವನ್ನು ತನ್ನ ಅನುಭವದಷ್ಟೇ ತುರ್ತಿನಲ್ಲಿ, ನಿಜದಲ್ಲಿ ನೋಡಿ ಕತೆ ದಾಟಿಸಬೇಕಾಗುವುದು. ಹೀಗೆ ಇನ್ನೊಬ್ಬರ ಅನುಭವವನ್ನು ತನ್ನ ಅನುಭವದಷ್ಟೇ ಒಳಗುಮಾಡಿಕೊಳ್ಳುವ ಪ್ರಕ್ರಿಯೆ ಕತೆಗಾರನಿಗೆ, ಕಲಾವಿದನಿಗೆ ಮಾತ್ರ ಅನಿವಾರ್ಯವೆಂದು ಮಾಸ್ತಿ ಭಾವಿಸುವುದಿಲ್ಲ. ಅದು ಎಲ್ಲ ಮನುಷ್ಯರ ಕರ್ತವ್ಯ ಎಂದು ಕೂಡ ಅವರು ತಿಳಿದಂತಿದೆ.
5.ಮಾಸ್ತಿಯವರಿಗೆ ಒಂದು ಕಾಲದ ಒಂದು ಚಾರಿತ್ರಿಕ ಸನ್ನಿವೇಶದ ಬದುಕಿಗಿಂತ ಮತ್ತೆ ಮತ್ತೆ ಎದುರಾಗುವ ಮನುಷ್ಯನ ಮೂಲಭೂತ ಆಶಯಗಳಿಗೆ ಸಂಬಂಧಪಟ್ಟಂತಹ ಮಾದರಿಗಳನ್ನು ಬೇರೆಬೇರೆ ಸನ್ನಿವೇಶದಲ್ಲಿ ಬೇರೆಬೇರೆ ಹಿನ್ನೆಲೆಯಲ್ಲಿ ಇಟ್ಟು ನೋಡುವುದೇ ಹೆಚ್ಚು ಅರ್ಥಪೂರ್ಣವಾಗಿ ಕಂಡಂತಿದೆ.
6.ಮಾಸ್ತಿ ಮನುಷ್ಯರ ಕತೆಗಳನ್ನು ಚರಿತ್ರೆಯಂತೆಯೂ, ಚರಿತ್ರೆಯನ್ನು ಮನುಷ್ಯರ ಕತೆಗಳಂತೆಯೂ ಹೇಳುತ್ತಾ ಹೋಗುತ್ತಾರೆ. ಇತಿಹಾಸದಿಂದ ಇವೊತ್ತಿನ ಮನುಷ್ಯನ ತಿಳಿವಳಿಕೆಗೆ, ಸ್ವಭಾವಕ್ಕೆ ಏನು ಪಡೆಯಬೇಕೆಂಬುದನ್ನು ತಮ್ಮ ಬರವಣಿಗೆಯುದ್ದಕ್ಕೂ ಯೋಚಿಸಿದವರು ಮಾಸ್ತಿಯೊಬ್ಬರೇ ಎಂದು ಅನ್ನಿಸುತ್ತದೆ.
7.ಮಾಸ್ತಿಯವರ ಬಹುತೇಕ ಪಾತ್ರಗಳು, ವಿಶೇಷವಾಗಿ ಸ್ತ್ರೀಪಾತ್ರಗಳು ಬದುಕಿನಲ್ಲಿ ಏನನ್ನೋ ಒಂದು ಉತ್ತಮವಾದದ್ದನ್ನು ಎತ್ತಿ ಹಿಡಿಯುವ ಪ್ರಸಂಗ ಬಂದಾಗ ಸದ್ದಿಲ್ಲದೆ ಸಾವನ್ನು ಒಪ್ಪಿಕೊಳ್ಳುವುದನ್ನು ಕಾಣುತ್ತೇವೆ.
8.ಕತೆಗಾರಿಕೆಯ ಉದ್ದೇಶವೇನು, ಕತೆಗೂ ಕತೆಗಾರನಿಗೂ, ಕತೆಗೂ ಜೀವನಕ್ಕೂ ಇರುವ ಇರಬೇಕಾದ ಸಂಬಂಧ ಯಾವ ಸ್ವರೂಪದ್ದು ಎಂಬೆಲ್ಲ ಪ್ರಶ್ನೆಗಳ ಅರ್ಥಪೂರ್ಣ ಚರ್ಚೆಗೆ ಮಾಸ್ತಿ ಕತೆಗಳು ನೆರವಿಗೆ ಬರುವ ಹಾಗೆ ಮತ್ತ್ಯಾವ ಕತೆಗಾರರ ಬರವಣಿಗೆಯೂ ಬರುವುದಿಲ್ಲ.
9.ಮಾಸ್ತಿಯವರು ಇಲ್ಲಿಯ ಜನಪದರು ತಮ್ಮ ತಮ್ಮ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಜೀವನದ ಸಂಘರ್ಷಗಳನ್ನು ಎದುರಿಸುವಲ್ಲಿ ತೋರಿದ ಜಾಣ್ಮೆಯನ್ನು ಧಾರಣಾಶಕ್ತಿಯನ್ನು ಮಾತ್ರವೇ ಮತ್ತೆ ಮತ್ತೆ ಎಂಬಂತೆ ತಮ್ಮ ಕತೆಗಳಲ್ಲಿ ಪ್ರತಿನಿಧೀಕರಿಸುತ್ತ ಹೋದರು. ಏಕೆದರೆ ಇಂತಹ ಜಾಣ್ಮೆ, ಧಾರಣಾಶಕ್ತಿ ಮಾತ್ರ ಇಲ್ಲಿಯ ನಾಗರಿಕತೆಗೆ ಬಹುಕಾಲ ಬದುಕುಳಿಯುವ ಗುಣಸ್ವಭಾವವನ್ನು ತಂದುಕೊಟ್ಟಿದೆಯೆಂದು ಅವರು ನಂಬಿದ್ದರು,
10.ಅನುಭವದ ಧ್ವನಿಯನ್ನು ಮಾಸ್ತಿ ಗ್ರಹಿಸಿ ಕಥೆಯ ಭೂಮಿಕೆಗೆ ತಂದು ಬಿಡುತ್ತಾರೆ. ನಂತರ ಅನುಭವದ ತಾತ್ವಿಕ ಸ್ವರೂಪವನ್ನು ತಾಳಿಕೊಳ್ಳುವಂತಹ ಪ್ರಶ್ನೆಗಳಿಗೆ, ಜಿಜ್ಞಾಸೆಗೆ ಗಮನ ಕೊಡುತ್ತಾರೆ. ಈ ಪ್ರಶ್ನೆ ಜಿಜ್ಞಾಸೆ ತುಂಬಾ ಮೆಲುದನಿಯಲ್ಲಿ, ನೇರ ಸಂಭಾಷಣೆಯಲ್ಲಿ, ಸರಳ ನಿರೂಪಣೆಯಲ್ಲಿ ನಡೆಯುವುದರಿಂದ ಕಥೆಗಳು ಯಾವತ್ತೂ ಭಾರವೆನಿಸುವುದಿಲ್ಲ.
ಕೆ.ಸತ್ಯನಾರಾಯಣ ಅವರು ಮಾಸ್ತಿಯವರನ್ನು ಮತ್ತೆ ಮತ್ತೆ ಓದಿದ್ದಾರೆ, ಮಾಸ್ತಿಯವರ ಬಗ್ಗೆ ಬೇರೆಯವರು ಬರೆದುದನ್ನು ಓದಿದ್ದಾರೆ, ಮಾಸ್ತಿಯವರ ಸಾಹಿತ್ಯದ ಕುರಿತು ಹಿರಿಯರೊಂದಿಗೆ ಚರ್ಚಿಸಿದ್ದಾರೆ. ಅವೆಲ್ಲವುಗಳ ಸಾರ ಈ ಕೃತಿಯಲ್ಲಿ ಹರಳುಗಟ್ಟಿದೆ. ಮಾಸ್ತಿಯವರು ಮನುಷ್ಯನ ಘನತೆಯನ್ನು ಕಾಣುವುದಕ್ಕೆ ಮತ್ತು ಅದನ್ನು ತಮ್ಮ ಸಮಾಜಕ್ಕೆ ತೋರಿಸುವುದಕ್ಕೆ ತಮ್ಮ ಕತೆಗಳನ್ನು ಹೇಗೆ ಸಾಧನ ಮಾಡಿಕೊಂಡರು ಎಂಬುದನ್ನು ಅವರದೇ ಕತೆಗಳನ್ನು ಚರ್ಚಿಸುವ ಮೂಲಕ ಇಲ್ಲಿ ಹೇಳಲಾಗಿದೆ. ಮಾಸ್ತಿಯವರ ಕಥಾ ಬರೆವಣಿಗೆಯ ಶತಮಾನದ ಸಂದರ್ಭದಲ್ಲಿ ಈ ಕೃತಿ ಹೊರಬರುತ್ತಿರುವುದು ತುಂಬ ಸಾಂದರ್ಭಿಕವಾಗಿದೆ. ಇದು ಮಾಸ್ತಿಯವರನ್ನು ಸದಾ ಚರ್ಚೆಯಲ್ಲಿ ಇಡಲಿ, ಇನ್ನಷ್ಟು ಇಂಥ ಅಧ್ಯಯನಗಳಿಗೆ ಪ್ರೇರಣೆಯನ್ನು ನೀಡಲಿ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.