ಮಾತನಾಡಬೇಡ.(Don`t Speak)

ಇದು ಈ ಬಾರಿಯ ನೊಬೆಲ್ ಪ್ರಶಸ್ತಿ ಪಡೆದ ಚೀನದ ಸಾಹಿತಿ ಗುಆನ್ ಮೋಯೆಯ ಕಾವ್ಯನಾಮ “ಮೋ ಯಾನ್” ಎಂಬುದರ ಅರ್ಥ. ಮಾತು ಮಾಣಿಕ್ಯ, ಮಾತೆಂಬುದು ಜ್ಯೋತಿರ್ಲಿಂಗ ಎಂದು ಮಾತಿನ ಮಹತ್ವವನ್ನು ವರ್ಣಿಸಿದ ನಾಡು ನಮ್ಮದು. ಆದರೆ ಚೀನದಂಥ ಕಮ್ಯುನಿಸ್ಟ್ ದೇಶದಲ್ಲಿ ಇಲ್ಲವೆ ಮಿಲಿಟರಿ ಸರ್ವಾಧಿಕಾರಿಗಳು ಇರುವ ದೇಶದಲ್ಲಿ ಸೃಜನಶೀಲ ಬರೆಹಗಾರನೊಬ್ಬನ ಸ್ಥಿತಿ ಇದು. ಈ ಸ್ಥಿತಿಯನ್ನೇ ತನ್ನ ಕಾವ್ಯನಾಮ ಮಾಡಿಕೊಂಡ ಗೋಆನ್ ಮೋಯೆ ಒಂದರ್ಥದಲ್ಲಿ ವ್ಯವಸ್ಥೆಗೆ ಧಿಕ್ಕಾರ ಹೇಳಿದವರು. ತಮ್ಮ ದೇಶದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗೆ ಒಂದು ರೂಪಕ ಎನ್ನುವಂತೆ ತಮ್ಮ ಕಾವ್ಯನಾಮವನ್ನು ಇರಿಸಿಕೊಂಡರು. ಈ ಬಗ್ಗೆ ಅವರನ್ನು ಕೇಳಿದರೆ, ಇದು “ನನಗೆ ತೋಚಿದ್ದನ್ನು ಬಹಿರಂಗವಾಗಿ ಆಡದಂತೆ ನನ್ನ ಹೆತ್ತವರು ನನಗೆ ನೀಡಿದ ಎಚ್ಚರಿಕೆ’ ಎನ್ನುತ್ತಾರೆ. ಈ ಕಾವ್ಯನಾಮವೇ ಅವರನ್ನು ಪ್ರಭುತ್ವದ ವಿರುದ್ಧ ಸದಾ ಎಚ್ಚರಿಕೆಯಿಂದ ಇರುವಂತೆ ನೆನಪಿಸುತ್ತ ಇರುತ್ತದೆ. ಚೀನದಂಥ ದೇಶದಲ್ಲಿ ಸಾಹಿತಿಯೊಬ್ಬನ ಬದುಕು ಅಸಿಧಾರಾ ವ್ರತದಂತೆ. ಈ ವ್ರತ ಪಾಲನೆಯಲ್ಲಿ ಗುಆನ್ ಮೋಯೆ ಯಶಸ್ವಿಯಾಗಿದ್ದಾರೆ. ಕಲೆ ಮತ್ತು ಸಾಹಿತ್ಯ ಸಮಾಜವಾದದ ಬೆಂಬಲಕ್ಕೆ ಇರಬೇಕು. ಅದು ಬರೆಹಗಾರನಾದವ ತಾನಾಗಿಯೇ ಒಪ್ಪಿ ಮಾಡುವ ಕ್ರಿಯೆಯಾಗಬೇಕೆ ಹೊರತು ಕಮ್ಯುನಿಸ್ಟ್ ಪಾರ್ಟಿಯ ಭಯದಿಂದ ಮಾಡುವಂಥದಲ್ಲ ಎಂಬುದು ಅಲ್ಲಿಯ ಸರ್ಕಾರದ ಧೋರಣೆ. ಇದನ್ನು ಅವರು ಒಪ್ಪಿಕೊಂಡಿದ್ದರೆ?ಅವರ ವಿರೋಧಿಗಳ ದೃಷ್ಟಿಯಲ್ಲಿ ಅವರೊಬ್ಬ ಸರ್ಕಾರಿ ಏಜೆಂಟ್. ಕಲೆ ಮತ್ತು ಸಂಸ್ಕೃತಿಯ ವಿಷಯದಲ್ಲಿ ಸರ್ಕಾರದ ಕಾರ್ಯಕ್ರಮಗಳ, ರೀತಿ ನೀತಿಗಳ ಬೆಂಬಲಿಗ. ಆದರೆ ಗುಆನ್ ಮೋಯೆಯವರ ಕೃತಿಗಳನ್ನು ಒಳಹೊಕ್ಕು ನೋಡಿದರೆ ಈ ಆರೋಪ ಸಕಾರಣವಾದುದಲ್ಲ ಎಂಬುದು ಗೊತ್ತಾಗುತ್ತದೆ. ಗುಆನ್ ಮೋಯೆ ದೃಷ್ಟಿಯಲ್ಲಿ ಸಾಹಿತಿಯಾದವನು ಏನು ಮಾಡಬೇಕು? ಅವನನ್ನು ಹೇಗೆ ಅಳೆಯಬೇಕು? ಫ್ರಾಂಕ್್ಫರ್ಟ್್ನಲ್ಲಿ 2009ರಲ್ಲಿ ನಡೆದ ಪುಸ್ತಕ ಮೇಳದಲ್ಲಿ ಗುಆನ್ ಮೋಯೆ, “ಒಬ್ಬ ಲೇಖಕನನ್ನು ಆತನ ಕೃತಿಗಳ ಮೂಲಕ ಮಾತ್ರ ಮೌಲ್ಯಮಾಪನ ಮಾಡಬೇಕು. ಒಬ್ಬ ಲೇಖಕ ಸಮಾಜದ ಕೊಳಕುಗಳ ಬಗ್ಗೆ ಹಾಗೂ ಮಾನವ ಸ್ವಭಾವದ ಕುರೂಪದ ಬಗ್ಗೆ ಟೀಕೆಯನ್ನು ಮತ್ತು ತನ್ನ ಸಾತ್ವಿಕ ಕೋಪವನ್ನು ಪ್ರದರ್ಶಿಸಬೇಕು. ಕೆಲವರು ಬೀದಿಯಲ್ಲಿ ನಿಂತು ಕೂಗುವುದಕ್ಕೆ ಬಯಸಬಹುದು. ಆದರೆ ತಮ್ಮ ಕೋಣೆಗಳಲ್ಲಿ ಅಡಗಿಕೊಂಡಿರುವವರನ್ನು ನಾವು ಸಹಿಸಿಕೊಳ್ಳಬೇಕು ಹಾಗೂ ಅವರ ಅಭಿಪ್ರಾಯಗಳಿಗೆ ಧ್ವನಿಯಾಗಲು ಸಾಹಿತ್ಯವನ್ನು ಬಳಸಿಕೊಳ್ಳಬೇಕು’ ಎಂಬ ಮಾತನ್ನೂ ಹೇಳಿದ್ದಾರೆ. ಆಧುನಿಕ ಚೀನದ ಬಹುತೇಕ ಕಥೆಗಳು ರಾಜಕೀಯ ಸ್ವರೂಪದವು. ಇದಕ್ಕೆ ಕಾರಣ ಇತ್ತೀಚಿನ ಚೀನದ ಇತಿಹಾಸ ಮತ್ತು ಸಮಾಜವನ್ನು ರಾಜಕೀಯವು ಅಷ್ಟೊಂದು ಪ್ರಭಾವಿಸಿ ಬಿಟ್ಟಿರುವುದು. ಒಬ್ಬ ಸಾಹಿತಿ ರಾಜಕೀಯದ ಬಗ್ಗೆಯೇ ಬರೆಯುವುದು ಅನಿವಾರ್ಯತೆ ಎನಿಸಿಬಿಟ್ಟಿದೆ. ತಾನು ಏನು ಬರೆಯಬೇಕು ಮತ್ತು ಏನು ಬರೆಯಬಾರದು ಎಂಬುದನ್ನು ಆತ ಚೆನ್ನಾಗಿ ಅರಿತಿರುತ್ತಾನೆ. ಗುಆನ್ ಮೋಯೆ ಹುಟ್ಟಿದ್ದು 1955ರಲ್ಲಿ ಶಾನ್್ಡಾಂಗ್ ಪ್ರಾಂತ್ಯದ ಗಾವೋಮಿ ಜಿಲ್ಲೆಯ ಒಂದು ರೈತ ಕುಟುಂಬದಲ್ಲಿ. ಆ ಪಟ್ಟಣದ ಹೆಸರು ದಲಾನ್. ಇದನ್ನೇ ಅವರು ತಮ್ಮ ಕಾದಂಬರಿಯೊಂದರಲ್ಲಿ ಗಾವೋಮಿ ಜಿಲ್ಲೆಯ ಈಶಾನ್ಯ ಪಟ್ಟಣ ಎಂದು ವರ್ಣಿಸಿದ್ದಾರೆ. ಚೀನದ ಸಾಂಸ್ಕೃತಿಕ ಕ್ರಾಂತಿಯ ಸಂದರ್ಭದಲ್ಲಿ ಅವರು ಶಾಲೆಯನ್ನು ಬಿಡಬೇಕಾಯಿತು. ಕೆಲವು ಕಾಲ ಅವರು ದನ ಕಾಯುವ ಕೆಲಸವನ್ನು ಮಾಡಿದರು. ಆ ಕಷ್ಟದ ದಿನಗಳಲ್ಲಿ ಅವರು ಜೀವ ಉಳಿಸಿಕೊಳ್ಳಲು ಮರದ ತೊಗಟೆ, ಸೊಪ್ಪುಗಳನ್ನು ತಿನ್ನಬೇಕಾಯಿತು. ಬಳಿಕ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸುತ್ತಿದ್ದ ಕಾರ್ಖಾನೆಯೊಂದರಲ್ಲಿ ಅವರು ಕೆಲಸಕ್ಕೆ ಸೇರಿದರು. ಈ ಸಾಂಸ್ಕೃತಿಕ ಕ್ರಾಂತಿಯ ಬಳಿಕ ಅವರು 1976ರಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್್ಎ) ಸೇರಿದರು. ತಾವು ಸೈನಿಕರಾಗಿರುವಾಗಲೇ 1981ರಲ್ಲಿ ಅವರು ಬರೆವಣಿಗೆಯನ್ನು ಆರಂಭಿಸಿದರು. ಮೂರು ವರ್ಷಗಳ ನಂತರ ಪಿಎಲ್್ಎ ಕಲೆ ಮತ್ತು ಸಾಹಿತ್ಯದ ಅಕಾಡೆಮಿಯಲ್ಲಿ ಸಾಹಿತ್ಯ ವಿಭಾಗದಲ್ಲಿ ಬೋಧನೆಗೆ ಅವಕಾಶವನ್ನು ಪಡೆದುಕೊಂಡರು. ಅಲ್ಲಿಯೇ ಅವರು 1984ರಲ್ಲಿ ತಮ್ಮ ಪ್ರಥಮ ನೀಳ್ಗತೆ “ಎ ಟ್ರಾನ್ಸ್್ಪರೆಂಟ್ ರಾಡಿಶ್’ ಪ್ರಕಟಿಸಿದರು. 1991ರಲ್ಲಿ ಅವರು ಬೀಜಿಂಗ್್ನ ವಿವಿಯಿಂದ ಎಂಎ ಪದವಿಯನ್ನು ಪಡೆದುಕೊಂಡರು.ಅದ್ಭುತ ರಮ್ಯ ಮತ್ತು ವಾಸ್ತವದ ಚಿತ್ರಣ ಒಂದೆಡೆಯಾದರೆ ಐತಿಹಾಸಿಕ ಮತ್ತು ಸಾಮಾಜಿಕ ದೃಷ್ಟಿಕೋನದ ಮಿಶ್ರಣ ಇನ್ನೊಂದೆಡೆ. ವಿಲಿಯಂ ಫಾಲ್ಕನರ್ ಮತ್ತು ಗೇಬ್ರಿಯಲ್ ಮಾರ್ಕ್ವೆಜ್ ಅವರ ಬರೆಹಗಳ ಸಂಕೀರ್ಣತೆಯನ್ನು ಗುಆನ್ ಮೋಯೆಯವರ ಬರೆಹಗಳಲ್ಲಿ ವಿಮರ್ಶಕರು ಗುರುತಿಸುತ್ತಾರೆ. ಡಿ.ಎಚ್.ಲಾರೆನ್ಸ್, ಅರ್ನೆಸ್ಟ್ ಹೆಮಿಂಗ್ವೆ ಕೂಡ ಮೋಯೆಯವರನ್ನು ಪ್ರಭಾವಿಸಿದ್ದಾರೆ. ಚೀನದ ಪ್ರಾಚೀನ ಸಾಹಿತ್ಯ ಮತ್ತು ತೋಂಡಿ ಸಂಪ್ರದಾಯದ ಹಿನ್ನೆಲೆ ಅವರಲ್ಲಿ ಅದ್ಭುತ ರಮ್ಯ ಕಲ್ಪನೆಗಳನ್ನು ಮೂಡಿಸುವುದಕ್ಕೆ ಸಹಕಾರಿಯಾಗಿದೆ. ಗುಆನ್ ಮೋಯೆಯವರ ಕೃತಿಗಳಲ್ಲಿಯ ಭ್ರಮಾತ್ಮಕ ವಾಸ್ತವವು ಯಾವುದು ಜನಪದ ಕಥೆ, ಯಾವುದು ಇತಿಹಾಸ, ಯಾವುದು ವಾಸ್ತವ ಎಂಬುದನ್ನು ಗುರುತಿಸಲು ಸಾಧ್ಯವಾಗದಂತೆ ಮಾಡುವುದು. ಅವರ ಅದ್ಭುತ ರಮ್ಯ ಕಥಾನಕದ ಬೀಜ ಇರುವುದೇ ಇಲ್ಲಿ. ಮೋಯೆ ಕಥೆಗಳನ್ನು, ಕಾದಂಬರಿಗಳನ್ನು, ನೀಳ್ಗತೆಗಳನ್ನು, ಪ್ರಬಂಧಗಳನ್ನು ಬರೆದಿರುವರು. ಪ್ರಸ್ತುತ ಚೀನದ ಸಾಮಾಜಿಕ ಚಿಂತನಕಾರರಲ್ಲಿ ಅವರಿಗೆ ಅಗ್ರಪಂಕ್ತಿಯಲ್ಲಿ ಸ್ಥಾನವಿದೆ. ನೊಬೆಲ್ ಸಮಿತಿಯ ಕಾಯಂ ಕಾರ್ಯದರ್ಶಿಯು “ನಿಮಗೆ ನೊಬೆಲ್ ಬಹುಮಾನ ಬಂದಿದೆ’ ಎಂದು ಮೋಯೆಗೆ ಹೇಳಿದಾಗ ಅವರಿಗೆ ಅತೀವ ಸಂತೋಷದ ಜೊತೆಗೆ ಒಳಗೊಳಗೇ ಭಯ ಕೂಡ. ರೆಡ್ ಸೋರ್ಗಮ್ (1993), ದಿ ಗಾರ್ಲಿಕ್ ಬ್ಯಾಲಡ್ಸ್ (1995) ಬಿಗ್ ಬ್ರೆಸ್ಟ್ ಆ್ಯಂಡ್ ವೈಡ್ ಹಿಪ್ಸ್ (2004) ಮೋಯೆಯವರ ಪ್ರಖ್ಯಾತ ಕೃತಿಗಳು.  ಮೋಯೆಯವರ ಬರೆವಣಿಗೆಯ ಪ್ರಾತಿನಿಧಿಕ ಸ್ವರೂಪವನ್ನು ಅರಿಯಬೇಕೆಂದರೆ “ದಿ ಗಾರ್ಲಿಕ್ ಬ್ಯಾಲಡ್ಸ್’ ಓದಬೇಕು. ಇದು ನೊಬೆಲ್ ಸಮಿತಿಯ ಅಭಿಪ್ರಾಯ ಕೂಡ. ಒಂಟಿತನ ಮತ್ತು ಹಸಿವು ತಮ್ಮ ಸೃಜನಶೀಲತೆಯ ಮೂಲ ಎಂದು ಗುಆನ್ ಮೋಯೆ ಹೇಳಿಕೊಂಡಿದ್ದಾರೆ. ಭ್ರಷ್ಟಾಚಾರ, ಚೀನದ ಸಮಾಜದಲ್ಲಿಯ ನೈತಿಕ ಅಧಃಪತನ, ಚೀನದ ಕುಟುಂಬ ಕಲ್ಯಾಣ ಯೋಜನೆ ಮತ್ತು ಗ್ರಾಮೀಣ ಬದುಕು ಇವರ ಸಾಹಿತ್ಯದ ವಸ್ತು. ಕಮ್ಯುನಿಸ್ಟ್ ಪಕ್ಷಕ್ಕೆ ಹತ್ತಿರವಾಗಿದ್ದರೂ ಅವರ ಕೆಲವು ಕೃತಿಗಳು ನಿಷೇಧಕ್ಕೆ ಒಳಗಾಗಿವೆ. ಗುಆನ್ ಮೋಯೆಯೊಳಗೊಬ್ಬ ತುಂಟ ಇದ್ದಾನೆ ಎನ್ನುವುದಕ್ಕೆ ಅವರ ಕೃತಿಗಳ ಶೀರ್ಷಿಕೆಗಳೇ ಸಾಕ್ಷಿ. “ಬಿಗ್ ಬ್ರೆಸ್ಟ್ ಎಂಡ್ ವೈಡ್ ಹಿಪ್ಸ್’, “ದಿ ರಿಪಬ್ಲಿಕ್ ಆಫ್ ವೈನ್’  (ಬನಾನಾ ರಿಪಬ್ಲಿಕ್ ಅಲ್ಲ!) ಕೆಲವು ಉದಾಹಣೆಗಳು. ಸರ್ಕಾರಿ ಮಾಧ್ಯಮ ಇವರ ಸಾಹಿತ್ಯಕ್ಕೆ  ಪ್ರಚೋದನಕಾರಿ ಮತ್ತು ಹೊಲಸು ಎಂದು ಹಣೆಪಟ್ಟಿ ಕಟ್ಟಿತ್ತು. ಇವರ ಪ್ರಖ್ಯಾತ ಕೃತಿ ರೆಡ್ ಸೋರ್ಗಮ್ (ಮೇವಿಗಾಗಿ ಬೆಳೆಸುವ ಕೆಂಪು ಜೋಳ) ಕಮ್ಯುನಿಸ್ಟ್ ಪಾರ್ಟಿಯ ಆಡಳಿತದ ಆರಂಭದ ದಿನಗಳಲ್ಲಿ ರೈತರು ಅನುಭವಿಸಿದ ಕಷ್ಟಗಳ ಬಗ್ಗೆ ಹೇಳುತ್ತದೆ. ಒಂದು ಪುಟ್ಟ ಹಳ್ಳಿಯಲ್ಲಿ ಜಪಾನಿ ವಿರೋಧಿ ಹೋರಾಟಗಳ ಹಿನ್ನೆಲೆಯಲ್ಲಿ ಒಂದು ಮಣ್ಣಿನ ಪ್ರೇಮದ ಕಥೆ ಮತ್ತು ರೈತರ ಹೋರಾಟವನ್ನು ಇದು ವರ್ಣಿಸುತ್ತದೆ. ನಂತರ ಇದು ಚಲನಚಿತ್ರವಾಗಿಯೂ ಜನಪ್ರಿಯತೆ ಗಳಿಸಿತು. ಈ ಸಿನಿಮಾ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಗ್ರಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತು.  ಚೀನದಲ್ಲಿ ಈಗ ಲೇಖಕರ ಮೇಲೆ ತೀವ್ರಗಾಮಿ ಮಾವೋವಾದಿಗಳ ಕಾಲದಲ್ಲಿದ್ದಷ್ಟು ನಿರ್ಬಂಧವಿಲ್ಲ. ಗುಆನ್ ಮೋಯೆ ಇತ್ತೀಚೆಗೆ ಬರೆದ ಒಂದು ಕಾದಂಬರಿ ಫ್ರಾಗ್ಸ್ (ಕಪ್ಪೆಗಳು). ಇದರಲ್ಲಿಯ ಕಥಾನಾಯಕಿ ಆಸ್ಪತ್ರೆಯೊಂದರ ನರ್ಸ್. ಅವಳು ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಉಗ್ರ ಪ್ರತಿಪಾದಕಿ. ಅವಳಿಂದ ಸಾವಿರಾರು ಭ್ರೂಣಗಳ ಹತ್ಯೆ ನಡೆಯುತ್ತದೆ. ಒಮ್ಮೆ ಅವಳು ಕುಡಿದ ಅಮಲಿನಲ್ಲಿ ಹೊಂಡವೊಂದರಲ್ಲಿ ಬಿದ್ದಾಗ ಅವಳು ಪಾತ ಮಾಡಿಸಿದ ಭ್ರೂಣಗಳೇ ಕಪ್ಪೆಗಳಾಗಿ ಅವಳನ್ನು ಮುತ್ತುತ್ತವೆ. ಇಂಥ ಕಠೋರ ವ್ಯಂಗ್ಯ ಸರ್ಕಾರದ ನೀತಿಯ ಬಗ್ಗೆ ಇದ್ದರೂ ಆ ಕೃತಿ ನಿಷೇಧಕ್ಕೆ ಒಳಗಾಗಲಿಲ್ಲ. ಗುಆನ್ ಮೋಯೆಯವರ ಬರೆವಣಿಗೆಯ ಶೈಲಿ ಓತಪ್ರೋತವಾದದ್ದು. ನೇರವಾಗಿ ಇದ್ದುದನ್ನು ಇದ್ದಂತೆ ವರ್ಣಿಸುವ ಅವರದ್ದು ಒಮ್ಮೊಮ್ಮೆ ಹಸಿಬಿಸಿಯ ಅಡುಗೆ ಅನ್ನಿಸಿದರೂ ಅದರಲ್ಲಿಯ ದಟ್ಟ ವಿವರಣೆಗಳು, ಹಾಸ್ಯ, ವ್ಯಂಗ್ಯ ಇವೆಲ್ಲ ಚೀನದ ಮಾಂತ್ರಿಕ ವಾಸ್ತವವನ್ನು ಅನುಭವಿಸುವಂತೆ ಮಾಡುತ್ತವೆ. ನಮ್ಮ “ಚಂದಮಾಮ”ದ ಕಥೆಗಳಲ್ಲಿ ಬರುವ ಮಾಂತ್ರಿಕರೆಲ್ಲ ಚೀನ ದೇಶದವರೇ ಅಲ್ಲವೆ? ವಿಶ್ವ ಸಾಹಿತ್ಯವನ್ನು ಚೀನಿ ಅನುವಾದದಲ್ಲಿ ಓದಿರುವ ಗೋಆನ್ ಮೋಯೆ ಚೀನದ ಲೇಖಕರು ಹೊರ ಜಗತ್ತಿನ ಸಾಹಿತ್ಯ ಓದಬೇಕೆಂದು ಬಲವಾಗಿ ಪ್ರತಿಪಾದಿಸುತ್ತಾರೆ. ಗುಆನ್ ಮೋಯೆಯವರನ್ನು ಪಾಶ್ಚಾತ್ಯ ಜಗತ್ತಿಗೆ ತೆರೆದವರು ಅವರ ಕೃತಿಗಳ ಅನುವಾದಕ ಗೋಲ್ಡ್್ಬ್ಲಾಟ್. ಅವರಿಬ್ಬರ ಮೊದಲ ಮುಖಾಮುಖಿಯನ್ನು ಗೋಲ್ಡ್್ಬ್ಲಾಟ್ ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ. 1990ರ ದಶಕದಲ್ಲಿ ಮೊದಲ ಬಾರಿಗೆ ಇವರಿಬ್ಬರೂ ಬೀಜಿಂಗ್್ನಲ್ಲಿ ಸಂಧಿಸಿದರು. ರಾತ್ರಿಯ ಊಟಕ್ಕೆಂದು ಅವರಿಬ್ಬರೂ ಜೊತೆಯಾಗಿದ್ದರು. ಇಬ್ಬರ ನಡುವೆ ಯಾವುದೇ ರೀತಿಯ ತಾದಾತ್ಮ್ಯ ಎಂಬುದು ಇರಲಿಲ್ಲ. ಹೀಗಾಗಿ ಅದೆಷ್ಟೋ ಹೊತ್ತಿನ ವರೆಗೆ ಇಬ್ಬರ ನಡುವೆ ಮಾತು ಬಿಚ್ಚಿಕೊಳ್ಳಲೇ ಇಲ್ಲ. ಗೋಲ್ಡ್್ಬ್ಲಾಟ್ ಸಂಭಾಷಣೆ ಆರಂಭಿಸಬೇಕೆಂದು ಪ್ರಯತ್ನಿಸಿದರೂ ಫಲ ದೊರೆಯಲಿಲ್ಲ. ಕೊನೆಗೆ ಗುಆನ್ ಮೋಯೆ ಸಿಗರೇಟೊಂದನ್ನು ತೆಗೆದು ಮುಂದೆ ಚಾಚುತ್ತಾರೆ. ನಿಜ ಹೇಳಬೇಕೆಂದರೆ ಗೋಲ್ಡ್್ಬ್ಲಾಟ್ ಸಿಗರೇಟು ಸೇದುವುದು ಬಿಟ್ಟು ಎಷ್ಟೋ ವರ್ಷಗಳಾಗಿದ್ದವು. ಆದರೂ ಕೈ ಮುಂದೆ ಚಾಚಿ ಅದನ್ನು ತೆಗೆದುಕೊಂಡರು. “ಆ ನಂತರ ನಾವಿಬ್ಬರೂ ಅತ್ಯುತ್ತಮ ಗೆಳೆಯರಾದೆವು’ಎಂದು ಅವರು ಹೇಳಿಕೊಂಡಿದ್ದಾರೆ ಗುಆನ್ ಮೋಯೆಯವರಿಗೆ ಬಂದಿರುವ ನೊಬೆಲ್ ಪ್ರಶಸ್ತಿಯನ್ನು ಚೀನದ ಸರ್ಕಾರವು ಕಲೆ ಮತ್ತು ಸಾಹಿತ್ಯದ ಕುರಿತ ಕಮ್ಯುನಿಸ್ಟ್ ಪಕ್ಷದ ನೀತಿಗೆ ಸಂದ ಗೆಲವು ಎಂದು ವ್ಯಾಖ್ಯಾನಿಸಬಹುದು ಹಾಗೂ ಈ ಮೂಲಕ ತಮ್ಮ ಟೀಕಾಕಾರರ ಬಾಯನ್ನು ಮುಚ್ಚಿಸಬಹುದು. ಹಾಗೆ ನೋಡಿದರೆ ಚೈನಿ ಭಾಷೆಗೆ ಬಂದ ನೊಬೆಲ್ ಇದು ಎರಡನೆಯದು. ಈ ಮೊದಲು 2000ನೆ ಇಸ್ವಿಯಲ್ಲಿ ಗಾವೋ ಕ್ಸಿಂಗ್್ಜಿಯಾನ್ ಪ್ರಶಸ್ತಿ ಪಡೆದಿದ್ದರು. ಆದರೆ ಅವರು 1980ರ ದಶಕದಲ್ಲಿಯೇ ಫ್ರಾನ್ಸ್್ಗೆ ವಲಸೆ ಹೋಗಿದ್ದರು. ನಂತರ ಅವರು 1997ರಲ್ಲಿ ಆ ದೇಶದ ನಾಗರಿಕತ್ವ ಪಡೆದಿದ್ದರು. ಪ್ರಜಾಪ್ರಭುತ್ವವಾದಿ,  ಕಮ್ಯುನಿಸ್ಟ್್ರ ವಿರೋಧಿ, ಜೈಲಿನಲ್ಲಿರುವ ಭಿನ್ನಮತೀಯ ಲಿಯು ಕ್ಸಿಯಾಬೂಗೆ 2010ರ ನೊಬೆಲ್ ಶಾಂತಿ ಪ್ರಶಸ್ತಿ ಬಂದಾಗ ಚೀನ ಅದನ್ನು ಒಪ್ಪಿಕೊಂಡಿರಲಿಲ್ಲ. 1989ರಲ್ಲಿ ದಲೈ ಲಾಮಾ ಅವರಿಗೆ ಶಾಂತಿ ಪುರಸ್ಕಾರ ನೀಡಿದ್ದಕ್ಕೂ ಅದು ಆಕ್ಷೇಪ ವ್ಯಕ್ತಪಡಿಸಿತ್ತು. ನೊಬೆಲ್ ಪ್ರತಿಷ್ಠಾನವು ಜರ್ಮನಿಯ ಗುಂಟರ್ ಗ್ರಾಸ್ ಮತ್ತು ಟರ್ಕಿಯ ಒರ್ಹಾನ್ ಪಾಮುಕ್್ರಂಥ ರಾಜಕೀಯ, ಸಾಮಾಜಿಕ ಟೀಕಾಕಾರರಿಗೆ ಪ್ರಶಸ್ತಿಯನ್ನು ನೀಡಿದೆ. ಇದೀಗ ನೂರಮೂವತ್ತನಾಲ್ಕು ಕೋಟಿಗೂ ಅಧಿಕ ಜನಸಂಖ್ಯೆಯ ಚೀನ ದೇಶದ ಒಬ್ಬ ಸಾಹಿತಿಗೆ ಪ್ರಶಸ್ತಿ ನೀಡುವ ಮೂಲಕ ಅದು ಈ ಭೂಮಿಯ ಬಹು ದೊಡ್ಡ ಜನಸಂಖ್ಯೆಯ ಮಾನ್ಯತೆಯನ್ನು ಗಳಿಸಲು ಯತ್ನಿಸಿದೆ. ಮೊದಲೆರಡು ಬಾರಿ ತಿರಸ್ಕರಿಸಿದ್ದ ಚೀನ ಈ ಬಾರಿ ಅದನ್ನು ಸ್ವಾಗತಿಸಿದೆ. ಗುಆನ್ ಮೋಯೆಯು ಚೀನದ ಸಾಹಿತ್ಯದ ಅಧ್ಯಯನ ಮಾಡಬೇಕೆನ್ನುವ ಉಳಿದ ವಿಶ್ವಕ್ಕೆ ಒಂದು ಕಿಟಕಿಯಾಗಿದ್ದಾರೆ. ಅವರನ್ನು ಅಭಿನಂದಿಸೋಣ.