*ಸಾಹಿತ್ಯ ಮತ್ತು ನೆಲದ ಸಂಬಂಧವನ್ನು ಇದು ಹೇಳುತ್ತದೆ

ವನ ಕಾವ್ಯದಲ್ಲಿ ಮಣ್ಣಿನ ವಾಸನೆಯೇ ಇಲ್ಲ ಎಂದು ಹೇಳುವುದನ್ನು ಕೇಳಿದ್ದೇವೆ. ಮಣ್ಣಿನ ವಾಸನೆ ಎಂಬ ನುಡಿಗಟ್ಟು ನವ್ಯ ಸಾಹಿತ್ಯ ವಿಮರ್ಶೆಯಲ್ಲಿ ಹೆಚ್ಚಾಗಿ ಪ್ರಚಾರಕ್ಕೆ ಬಂತು. ಸಾಮಾನ್ಯ ಜನರ ಮಾತಿನಲ್ಲಿ ಇದು ಬಳಕೆಯಾಗದಿದ್ದರೂ ಸಾಹಿತಿಗಳು ಪರಸ್ಪರ ಮಾತನಾಡುವಾಗ ಇದನ್ನು ಬಳಸುತ್ತಾರೆ. ಅವನ ಸಾಹಿತ್ಯದಂತೆ ಅವನ ಬದುಕಿಗೂ ಮಣ್ಣಿನ ವಾಸನೆ ಇಲ್ಲ ಎಂದೋ, ಅವನ ಮಾತಿನಲ್ಲಿ ಮಣ್ಣಿನ ವಾಸನೆಯ ಘಾಟು ಹೆಚ್ಚಾಗಿದೆ ಎಂದೋ ಹೇಳುವುದನ್ನು ಕೇಳಿದ್ದೇವೆ.
ನವೋದಯ ಸಾಹಿತ್ಯಕ್ಕೆ ಪ್ರತಿಕ್ರಿಯಾತ್ಮಕವಾಗಿ ಹುಟ್ಟಿದ ನವ್ಯ ಸಾಹಿತ್ಯವು, ನವೋದಯ ಸಾಹಿತಿಗಳು ಆಕಾಶ, ಕುಸುಮ, ಪಕ್ಷಿ, ಪ್ರಾಣಿಗಳ ಮೇಲೆ ಕಾವ್ಯ ರಚಿಸಿ ಜನರ ಸಮಸ್ಯೆಯನ್ನು ನಿರ್ಲಕ್ಷಿಸಿ ಬಿಟ್ಟರು. ಅವರದು ಸ್ವಪ್ನಸೌಧ, ಮಣ್ಣಿನಿಂದ ಮೂಡಿದ್ದಲ್ಲ ಅವರ ಸಾಹಿತ್ಯ. ಅದರಲ್ಲಿ ಮಣ್ಣಿನ ವಾಸನೆ ಇಲ್ಲ ಎಂದೆಲ್ಲ ದೂರಿತು.
ಮಣ್ಣಿನ ವಾಸನೆ ಎಂದರೆ ಈ ನೆಲದ ಸಮಸ್ಯೆ, ನಮ್ಮ ಸುತ್ತಮುತ್ತಲು ಇರುವವರ ಸಮಸ್ಯೆ ಸಾಹಿತ್ಯದಲ್ಲಿ ಇರುವುದು. ಬರೀ ಹೂವಿನ ವಾಸನೆ ಇದ್ದರೆ ಕಾವ್ಯ ಸಾರ್ಥಕವಲ್ಲ ಎಂಬ ಅಭಿಪ್ರಾಯ ಇಲ್ಲಿದೆ.
ಮೊದಲ ಮಳೆ ಭೂಮಿಯ ಮೇಲೆ ಬಿದ್ದಾಗ ನಿಜವಾದ ಮಣ್ಣಿನ ವಾಸನೆಯನ್ನೂ ನೀವು ಆಘ್ರಾಣಿಸಬಹುದು.