*ಮನ್ನಣೆ ನೀಡುವುದು

ವನು ಹೇಳಿದ್ದಕ್ಕೆಲ್ಲ ಇವನು ಮಣೆ ಹಾಕುತ್ತಾನೆ ಎಂದು ಹೇಳುವುದನ್ನು ಕೇಳಿದ್ದೇವೆ. ಮಣೆ ಹಾಕುವುದೆಂದರೆ ಇಲ್ಲಿ ಎರಡು ಮಾತಿಲ್ಲದೆ ಒಪ್ಪಿಕೊಳ್ಳುವುದು ಎಂದರ್ಥ. ಅವನ ಮಾತಿಗೆ ಇವನು ಸಂಪೂರ್ಣ ಮನ್ನಣೆ ನೀಡಿದ ಎನ್ನುವುದು ತಾತ್ಪರ್ಯ.
ನಮ್ಮ ಗ್ರಾಮೀಣ ಭಾಗದಲ್ಲಿ ಇಂದಿಗೂ ಕುರ್ಚಿಗಳಿಲ್ಲದೆ ಇರುವ ಮನೆಗಳು ತುಂಬಾ ಇವೆ. ಮನೆಗೆ ಯಾರಾದರೂ ಅತಿಥಿಗಳು ಬಂದರೆ, ಅವರು ಕುಳಿತುಕೊಳ್ಳುವುದಕ್ಕೆ, ತಂಗಿ, ಮಣೆ ತಂದುಕೊಂಡು ಎಂದು ಹೇಳುತ್ತಾರೆ. ಬಂದವರನ್ನು ಆದರಿಸುವ ಕ್ರಿಯೆಗಳಲ್ಲಿ ಇದೂ ಒಂದು. ಮಣೆ ಹಾಕುವುದು ನಮ್ಮ ಸಂಸ್ಕೃತಿಯ ಒಂದು ಭಾಗ. ಅತಿಥಿ ಸತ್ಕಾರದ ಒಂದಂಶ. ಮಣೆ ಇಲ್ಲದ ಮನೆಯಲ್ಲಿ ಚಾಪೆ ಹಾಕುತ್ತಾರೆ.
ತನಗೇ ಮಣೆ ಬೇಕು ಎನ್ನುವುದು ತನಗೇ ಅಧಿಕಾರ ಬೇಕು ಎಂದು ಹೇಳಿದಂತೆ.
ಮಣೆ ಆಸನ. ಇದು ಸಿಂಹಾಸನವೂ ಆಗಬಹುದು. ಹಿರಿಯರು ಬಂದಾಗ ಕಿರಿಯರು ತಮ್ಮ ಆಸನದಿಂದ ಎದ್ದು ನಿಲ್ಲುವುದು, ತಮ್ಮ ಆಸನವನ್ನು ಅವರಿಗೆ ಬಿಟ್ಟುಕೊಡುವುದು ಇವೆಲ್ಲ ಮಣೆ ಹಾಕುವುದೇ. ಮನೆಯಿಂದ ಆಚೆ ಬಸ್ಸುಗಳಲ್ಲೂ ತಮ್ಮ ಮಣೆ ಬೇರೆಯವರಿಗೆ ಬಿಟ್ಟುಕೊಡುವ ದೊಡ್ಡ ಗುಣದವರೂ ಇದ್ದಾರೆ.