*ಬದುಕು ಹಲವರಿಗೆ ಉಪಯುಕ್ತವಾಗುವಂತಿರಬೇಕು

ಕೆಲವು ಲೋಭಿಗಳನ್ನು ಕಂಡಾಗ ಮಡಕೆಯಲ್ಲಿ ದೀಪ ಬೆಳಗುವವರು ಎಂದು ಅವರನ್ನು ಟೀಕಿಸುವುದನ್ನು ಕೇಳಿದ್ದೇವೆ. ಏನು ಹಾಗಂದರೆ?
ದೀಪವನ್ನು ಬೆಳಗುವುದು ಜಗದ ಕತ್ತಲೆಯನ್ನು ಕಳೆಯಲೆಂದು. ಅದು ಬಯಲಿನಲ್ಲಿ ಇರಬೇಕು. ಪ್ರಕಾಶದ ವ್ಯಾಪ್ತಿ ದೂರದವರೆಗೂ ಬೀಳುತ್ತದೆ. ಚಿಕ್ಕ ಮಡಕೆಯಲ್ಲಿ ದೀಪವನ್ನು ಬೆಳಗಿ ಇಟ್ಟರೆ ಮಡಕೆಯೊಳಗಷ್ಟೇ ಪ್ರಕಾಶ ಬೀಳುತ್ತದೆ. ಅದರಿಂದ ಮಡಕೆಗೂ ಪ್ರಯೋಜನವಿಲ್ಲ. ಬೆಳಗಿದವರಿಗೂ ಪ್ರಯೋಜನವಿಲ್ಲ. ಇದ್ದೂ ಇಲ್ಲದಂತೆ ಅದು. ಕಾಡಿನಲ್ಲಿ ಅರಳಿದ ಕುಸುಮ ಅತ್ತ ದೇವರ ಅಡಿಗೂ ಇಲ್ಲ, ಹೆಣ್ಣಿನ ಮುಡಿಗೂ ಇಲ್ಲ. ಪರಿಮಳವನ್ನು ಆಘ್ರಾಣಿಸುವವರಿಗೂ ಇಲ್ಲ ಎನ್ನುವ ಸ್ಥಿತಿ ಇದು.
ದೀಪವನ್ನು ಮಡಕೆಯಲ್ಲಿ ಇಡುವ ಬದಲು ಗಾಜಿನ ಗೋಲದಲ್ಲಿ ಇಟ್ಟರೆ ಅದರ ಪರಿಣಾಮವೇ ಬೇರೆಯಾಗುತ್ತದೆ. ಬಹೂಪಯೋಗಿಯಾಗುತ್ತದೆ ಅದು. ಅದೇ ರೀತಿಯಲ್ಲಿ ನಮ್ಮ ಬದುಕು ಹಲವರಿಗೆ ಉಪಯುಕ್ತವಾಗುವ ರೀತಿಯಲ್ಲಿ ಇರಬೇಕು. ನಮ್ಮ ಜ್ಞಾನ ಇರಬಹುದು, ನಮ್ಮ ಸಂಪತ್ತು ಇರಬಹುದು- ಅದನ್ನು ಸುತ್ತಲಿನವರಿಗೆ ಪ್ರಯೋಜನಕ್ಕೆ ಬರುವ ಹಾಗೆ ಬಳಸಬೇಕು.
ನೀವೊಬ್ಬ ವೈದ್ಯರಿರಬಹುದು. ನಿಮ್ಮ ನೆರೆಮನೆಯಲ್ಲಿಯೇ ಒಬ್ಬರಿಗೆ ತುರ್ತು ಸಮಯದಲ್ಲಿ ನೀವು ನೆರವಾಗದೆ ಹೋದರೆ ನೀವು ಮಡಕೆಯಲ್ಲಿ ಬೆಳಗಿಟ್ಟ ದೀಪವೇ ಸೈ. ನೀವು ಅಕ್ಷರ ಕಲಿತವರು. ನಿರಕ್ಷರಿಯೊಬ್ಬನಿಗೆ ನೀವೊಂದು ಪತ್ರ ಬರೆದು ಕೊಟ್ಟರೆ ನೀವು ಸಾಕ್ಷರರಾದುದು ಸಾರ್ಥಕವಾಗುತ್ತದೆ. ನಮ್ಮ ಪ್ರತಿಯೊಂದು ಸಾಧನೆಯೂ ಪರೋಪಕಾರ ಬುದ್ಧಿಯೊಂದಿಗೆ ಸಮಾಜಕ್ಕೆ ವಿನಿಯೋಗವಾಬೇಕು. ಹಾಗಾದಾಗಲೇ ಅದು ನಿಜವಾದ ಅರ್ಥದಲ್ಲಿ ಬೆಳಕು ಆಗುವುದು.