*ಚಂಚಲ ಮನಸ್ಸಿನ ಮಾರ್ಜಾಲ

ತಿಯಾದ ಚಂಚಲ ಬುದ್ಧಿಯವರನ್ನು ಕಂಡಾಗ, ಮಠದೊಳಗಿನ ಬೆಕ್ಕು ಇದ್ದಾಂಗ ಅವ್ನೆ ನೋಡು ಎಂದು ಟೀಕೆಯನ್ನು ಮಾಡುವುದನ್ನು ಕೇಳಿದ್ದೇವೆ. ಮಠದೊಳಗಿನ ಬೆಕ್ಕಿಗೆ ಅದೇನು ವಿಶೇಷ?
ಸನ್ಯಾಸಿಯೊಬ್ಬರು ಮಠದಲ್ಲಿ ಬೆಕ್ಕನ್ನು ಸಾಕಿದ್ದರಂತೆ. ಬಂದವರಿಗೆಲ್ಲ ಆ ಸನ್ಯಾಸಿ ಅಹಿಂಸೆಯನ್ನು ಬೋಧಿಸುತ್ತಿದ್ದರು. ಆ ಬೋಧನೆ ಬೆಕ್ಕಿನ ಕಿವಿಗೂ ಬೀಳುತ್ತಿತ್ತು. ಸನ್ಯಾಸಿಯ ಪಕ್ಕದಲ್ಲಿಯೇ ಬೆಕ್ಕು ಕಣ್ಣು ಮುಚ್ಚಿಕೊಂಡು ಕುಳಿತಿರುತ್ತಿತ್ತು. ಸನ್ಯಾಸಿಯ ಸಾಮೀಪ್ಯದಿಂದ ಬೆಕ್ಕು ತನ್ನ ಮೂಲ ಸ್ವಭಾವವನ್ನು ಬಿಟ್ಟುಕೊಟ್ಟಿದೆಯೇನೋ ಎಂಬ ಅನುಮಾನ ಬರುವ ಹಾಗಿತ್ತು.
ಹೀಗಿರುವಾಗ ಮಠದ ಮೂಲೆಯಲ್ಲಿ ಇಲಿಯೊಂದು ಕಾಣಿಸಿಕೊಂಡಾಗ ಬೆಕ್ಕು ಚಂಗನೆ ಎರಗಿ ಅದನ್ನು ಹಿಡಿದು ಕೊಂದು ಬಿಟ್ಟಿತು. ಮಠದ ವಾಸದಿಂದ ಬೆಕ್ಕಿನ ಮೂಲ ವಾಸನೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.
ಇದನ್ನೇ ಜೇಡರ ದಾಸಿಮಯ್ಯನವರು ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯ್ತು ಕಾಣಾ ರಾಮನಾಥ ಎಂದು ಡೋಂಗಿ ಜನರ ಭಕ್ತಿಯನ್ನು ಲೇವಡಿ ಮಾಡಿದ್ದಾರೆ. ಮೂಲ ಸ್ವಭಾವವನ್ನು ಬದಲಿಸಲು ಸಾಧ್ಯವಿಲ್ಲ. ಪ್ರಚೋದನೆ ದೊರೆತಾಗ ಅದು ಪ್ರಕಟಗೊಂಡೇ ಬಿಡುತ್ತದೆ. ಹುಟ್ಟಿನೊಂದಿಗೆ ಬಂದ ಗುಣ ಘಟ್ಟ ಹತ್ತಿದರೂ ಹೋಗದು ಎಂಬ ಮಾತು ಘಟ್ಟದ ಕೆಳಗಿನ ಕರಾವಳಿ ಭಾಗದಲ್ಲಿ ಚಲಾವಣೆಯಲ್ಲಿದೆ. ಮನೋನಿಗ್ರಹ ಮತ್ತು ವಿಷಯಾಸಕ್ತಿ ಹೇಗೆ ಮನುಷ್ಯನಲ್ಲಿ ಚಂಚಲತೆಯನ್ನು ಉಂಟುಮಾಡುತ್ತದೆ ಎಂಬುದಕ್ಕೆ ಮಠದೊಳಗಣ ಬೆಕ್ಕು ಒಂದು ಒಳ್ಳೆಯ ರೂಪಕವಾಗಿದೆ. ದುಷ್ಟರು ಒಳ್ಳೆಯವರ ಸಹವಾಸದಲ್ಲಿದ್ದರೂ ತಮ್ಮ ಮೂಲ ಗುಣವನ್ನು ಬಿಡುವುದಿಲ್ಲ ಎನ್ನುವುದಕ್ಕೆ ಇಡೀ ಕಥೆಯು ಒಂದು ದೃಷ್ಟಾಂತ.