ಪ್ರೊ.ಎಸ್.ಎನ್.ಬಾಲಗಂಗಾಧರ ಅವರ ಸಂಶೋಧನ ಗ್ರಂಥ ‘ದಿ ಹೀದನ್ ಇನ್ ಹೀಸ್ ಬ್ಲೈಂಡ್ನೆಸ್’ನ ವಿಚಾರಗಳನ್ನು ಆಧರಿಸಿ ಪ್ರೊ.ರಾಜಾರಾಮ್ ಹೆಗಡೆಯವರು ಬರೆದಿರುವ ಕೃತಿ ‘ಬೌದ್ಧಿಕ ದಾಸ್ಯದಲ್ಲಿ ಭಾರತ’. ವಸಾಹತುಶಾಹಿ ಪ್ರಜ್ಞೆಯು ಭಾರತೀಯ ಚಿಂತನಾಕ್ರಮವನ್ನು ಹೇಗೆ ಪ್ರಭಾವಿಸಿವೆ, ಪಾಶ್ಚಾತ್ಯ ಪ್ರಜ್ಞೆಯಿಂದ ಭಾರತೀಯ ಜೀವನವನ್ನು ಹೇಗೆ ಅರ್ಥೈಸಲು ಯತ್ನಿಸಲಾಗಿದೆ ಮತ್ತು ಅವೆಲ್ಲ ಹೇಗೆ ನಿರರ್ಥಕವಾದವು ಎಂಬುದನ್ನು ಈ ಕೃತಿಯಲ್ಲಿ ಮನಗಾಣಿಸಲು ಪ್ರಯತ್ನಿಸಲಾಗಿದೆ. ಭಾರತೀಯ ಚಿಂತಕರು ಶತಮಾನದ ಹಿಂದಿನಿಂದಲೂ ಎದುರಿಸುತ್ತಿರುವ ಬೌದ್ಧಿಕ ಸಮಸ್ಯೆಯನ್ನು ಬಾಲಗಂಗಾಧರರು ತಮ್ಮ ಸಂಶೋಧನೆಯ ಮೂಲಕ ಪರಿಹರಿಸಲು ಯತ್ನಿಸಿದ ಫಲ ಈ ಕೃತಿ. ಇದನ್ನು ಅಧ್ಯಯನ ಮಾಡಿದವರಿಗೆ ಇದು ಕೃತಿಕಾರರ ಕೇವಲ ಶೈಕ್ಷಣಿಕ ಕಸರತ್ತುಗಳಲ್ಲ ಅಥವಾ ಒಬ್ಬ ವ್ಯಕ್ತಿಯ ಖಾಸಗಿ ಸಂಗತಿಗಳಲ್ಲ. ಇದು ಭಾರತೀಯ ಸಂಸ್ಕೃತಿಯ ಪುನರುಜ್ಜೀವನದತ್ತ ನಡೆಯುತ್ತಿರುವ ಒಂದು ಬೌದ್ಧಿಕ ಚಳವಳಿ ಎಂಬ ಅರಿವು ಮೂಡಬೇಕು ಎಂಬುದು ಇಲ್ಲಿಯ ಆಶಯ ಎಂದನ್ನಿಸುವುದು. ವಸಾಹತುಶಾಹಿ ಆಡಳಿತ ಎಂದಾಗ ನಮಗೆ ತಕ್ಷಣಕ್ಕೆ ನೆನಪಾಗುವುದು ಬ್ರಿಟಿಷರ ಆಡಳಿತ. ಆದರೆ ಲೇಖಕರು ಗುರುತಿಸುವಂತೆ ಕನಿಷ್ಠ ಎರಡು ವಸಾಹತುಗಳು ನಮ್ಮ ವೈಚಾರಿಕ ಪ್ರಜ್ಞೆಯನ್ನು ಪ್ರಭಾವಿಸಿವೆ. ಮೊದಲನೆಯದು ಮುಸ್ಲಿಮರ ವಸಾಹತು, ಎರಡನೆಯದು ಬ್ರಿಟಿಷರ ವಸಾಹತು. ಇದೊಂದು ದೀರ್ಘಕಾಲದ್ದಾದ್ದರಿಂದ ನಮ್ಮ ಸಂಸ್ಕೃತಿ ಸಂಪ್ರದಾಯಗಳಲ್ಲಿ ಕೆಲವು ಭಾಗ ಅವರ ಬಳುವಳಿಯಾಗಿವೆ. ಇಲ್ಲಿಯ ಲೇಖನಗಳು ಹೇಗಿವೆಯೆಂದರೆ, ಮೇಲ್ನೋಟಕ್ಕೆ ಅವು ಲಘು ಹರಟೆಗಳಂತೆ ಕಾಣಿಸಬಹುದು. ತೋಚಿದ್ದೆಲ್ಲ ಗೀಚಿದಂತೆ ಭಾಸವಾಗಬಹುದು. ಜನಪ್ರಿಯ ಭಾಷಣದ ಲೇಖನ ರೂಪದಂತೆಯೂ ತೋರಬಹುದು. ಯಾವುದೋ ಒಂದು ಪಕ್ಷವನ್ನು ಸಮರ್ಥಿಸುವ ಸಂಶೋಧನೆಯ ಫಲಿತದಂತೆ ಕಾಣಬಹುದು. ನಾವು ನಂಬಿಕೊಂಡಿದ್ದನ್ನೆಲ್ಲ ಅವರು ಅಲ್ಲಗಳೆಯುತ್ತಿದ್ದಾರೆ ಎಂದೆನ್ನಿಸಬಹುದು. ಆದರೆ ಇವು ನಾಲ್ಕೈದು ದಶಕಗಳ ಸಂಶೋಧನೆಯ ಫಲ. ಕಾರಣ ಇವುಗಳನ್ನು ತಿರಸ್ಕರಿಸುವಾಗಲೂ ಗಂಭೀರವಾಗಿ ಚಿಂತಿಸಲೇ ಬೇಕಾಗುತ್ತದೆ. ಇದು ಇಲ್ಲಿಯ ಲೇಖನಗಳ ಹೆಚ್ಚುಗಾರಿಕೆ. ಈ ಕೃತಿಯನ್ನು ನಾಲ್ಕು ಭಾಗ ಮಾಡಲಾಗಿದ್ದು ಮೂವತ್ತೊಂದು ಲೇಖನಗಳನ್ನು ನೀಡಲಾಗಿದೆ. ಮೊದಲ ಭಾಗದಲ್ಲಿ ಪ್ರಸ್ತಾವನೆಯ ರೂಪದಲ್ಲಿ ಎರಡು ಲೇಖನಗಳಿವೆ. ನಮ್ಮೊಳಗಿನ ಎರಡು ಜಗತ್ತುಗಳನ್ನು ಅವರು ಪರಿಚಯಿಸುತ್ತಾರೆ. ಒಂದು ಸಾಂಪ್ರದಾಯಿಕವಾದ ಜಗತ್ತು. ಇನ್ನೊಂದು ಶಾಲೆ ಕಾಲೇಜುಗಳ ಮೂಲಕ ಪರಿಚಯವಾಗುವ ಜಗತ್ತು. ಅಕ್ಷರ ಲೋಕದ ಬೆಳಕಿನಲ್ಲಿ ಮೊದಲಿನ ಜಗತ್ತನ್ನು ನೋಡಿದಾಗ, ಮೊದಲು ನಾನು ಅದರಲ್ಲೇ ಬದುಕಿದ್ದರೂ ನನಗಿದೆಲ್ಲ ತಿಳಿದೇ ಇರಲಿಲ್ಲ, ಇಂಥದ್ದೊಂದು ಪುಸ್ತಕವನ್ನು ಓದಿದ ನಂತರ ಸಮಾಜದ ನಿಜ ಸ್ವರೂಪ ತಿಳಿಯಿತು ಎಂದುಕೊಳ್ಳುತ್ತಾರೆ. ಈ ಅರಿವಿನಲ್ಲಿ ನಮ್ಮ ಸುತ್ತಲನ್ನು ನಾವು ಪರಿಭಾವಿಸತೊಡಗಿದಾಗಲೇ ನಿಜವಾದ ಸಮಸ್ಯೆ ಎದುರಾಗುವುದು. ಆ ಸಮಸ್ಯೆ ಏನು ಎಂಬುದನ್ನು ಇಲ್ಲಿ ಲೇಖಕರು ಚರ್ಚಿಸುತ್ತಾರೆ. ಪಾಶ್ಚಾತ್ಯ ಚಿತ್ರಣಗಳನ್ನೇ ಸತ್ಯವೆಂಬುದಾಗಿ ನಂಬಿಕೊಂಡು ನಮ್ಮ ಅನುಭವವನ್ನು ಆ ಚಿತ್ರಣಗಳ ಬೆಳಕಿನಲ್ಲಿ ವಿಕಾರವಾಗಿ ಜೋಡಿಸಿಕೊಳ್ಳುವಂತೆ ಮಾಡುವುದೇ ವಸಾಹತು ಪ್ರಜ್ಞೆ ಎಂದು ಒಂದೆಡೆ ವ್ಯಾಖ್ಯೆಯನ್ನು ನೀಡುತ್ತಾರೆ. ನಮ್ಮ ಸಮಾಜದ ಕುರಿತು ನಾವು ಒಪ್ಪಿಕೊಂಡಿರುವ ಚಿತ್ರಣಗಳು ಮೂಲತಃ ಕ್ರೈಸ್ತ ಥಿಯಾಲಜಿಯ ವಿಚಾರಗಳಾಗಿವೆ ಎಂಬ ಇನ್ನೊಂದು ಮಾತನ್ನೂ ಬಾಲಗಂಗಾಧರ ಅವರು ಹೇಳುತ್ತ ಅದನ್ನು ಸಮರ್ಥಿಸುವ ಅನೇಕ ಉದಾಹರಣೆಗಳನ್ನು ನೀಡುತ್ತಾರೆ. ಪಾಶ್ಚಾತ್ಯರಲ್ಲಿ ಧರ್ಮ ಎಂದರೇನು? ಅಲ್ಲಿಯ ರಿಲಿಜನ್ ನಮ್ಮ ಧರ್ಮಕ್ಕೆ ಏಕೆ ಸಂವಾದಿಯಾಗಲಾರದು ಎಂದು ಅವರು ಚರ್ಚಿಸುತ್ತಾರೆ. ಯುರೋಪಿನಲ್ಲಿ ಕ್ರೈಸ್ತ ಕೆಥೋಲಿಕ್ ರಿಲಿಜನ್ನನ್ನು ಪ್ರತಿಭಟಿಸಿ ಪ್ರೊಟೆಸ್ಟಾಂಟರು ಸೆಕ್ಯುಲರ್ ರೂಪದ ಚಿಂತನೆಗಳನ್ನು ಪ್ರಚಾರಕ್ಕೆ ತಂದು ಮಾನವರ ಕುರಿತ ಸಿದ್ಧಾಂತಗಳು ಹಾಗೂ ಚಿಂತನೆಗಳು ರೂಪುಗೊಂಡವು ಎಂದು ಹೇಳುವ ಬಾಲಗಂಗಾಧರರು, ರಿಲಿಜನ್ನು ಮತ್ತು ವಿಜ್ಞಾನಗಳು ಪರಸ್ಪರ ವಿರುದ್ಧವಾದ ಸಂಗತಿಗಳು ಎಂಬುದಾಗಿ ನಾವೆಲ್ಲ ಗ್ರಹಿಸುತ್ತೇವೆ. ಆದರೆ ರಿಲಿಜನ್ನು ಪಾಶ್ಚಾತ್ಯ ವಿಜ್ಞಾನದ ಮೂಲ ಮಾದರಿಯಾಗಿದೆ. ರಿಲಿಜನ್ನು ಇಲ್ಲದಿದ್ದರೆ ಪಾಶ್ಚಾತ್ಯ ವಿಜ್ಞಾನವು ಕೂಡ ಬೆಳೆಯುತ್ತಿರಲಿಲ್ಲ ಎನ್ನುವರು. ದೇವತೆಗಳು ಹಾಗೂ ಆಚರಣೆಗಳನ್ನು ಬದಲಾಯಿಸುವುದು ಮತಾಂತರವೆ ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಅವರು ಚರ್ಚಿಸುತ್ತಾರೆ. ಸತ್ಯವಾದ ರಿಲಿಜನ್ನು ಮಾತ್ರವೇ ಮನುಷ್ಯನ ಉದ್ಧಾರಕ್ಕೆ ಮಾರ್ಗವಾಗಬಲ್ಲದು. ಕನ್ವರ್ಶನ್ ಎಂದರೆ ಸುಳ್ಳು ರಿಲಿಜನ್ನಿನಿಂದ ಸತ್ಯವಾದ ರಿಲಿಜನ್ನಿಗೆ ಪರಿವರ್ತನೆಯಾಗುವುದು. ಮನುಷ್ಯನಿಗೆ ಈ ಹಕ್ಕನ್ನು ನೀಡುವುದು ರಿಲಿಜನ್ನುಗಳ ಹಿನ್ನೆಲೆಯಿಂದ ಅತ್ಯಗತ್ಯ. ಆದರೆ ಭಾರತೀಯ ಸಂಪ್ರದಾಯಗಳಲ್ಲಿ ಈ ಪರಿಕಲ್ಪನೆ ಇಲ್ಲ ಎಂದು ವಿವರಿಸುವರು. ಸೆಕ್ಯುಲರ್ ಪ್ರಭುತ್ವವು ರಿಲಿಜನ್ನುಗಳ ಕುರಿತು ತಟಸ್ಥ ಧೋರಣೆಯನ್ನು ಹೊಂದಿರಬೇಕು ಎಂಬುದು ಸೆಕ್ಯುಲರ್ ನೀತಿಯಾಗಿದೆ. ಆದರೆ ಭಾರತೀಯ ಪ್ರಭುತ್ವಕ್ಕೆ ಈ ತಟಸ್ಥತೆ ಸಾಧ್ಯವಿಲ್ಲ ಎನ್ನುವ ಅವರು, ರಿಲಿಜನ್ ಅಲ್ಲದ್ದು ಸೆಕ್ಯುಲರ್ ಎಂಬ ಒಂದು ಸಾಮಾನ್ಯ ಜ್ಞಾನ ನಮ್ಮಲ್ಲಿದೆ. ಆದರೆ ಸೆಕ್ಯುಲರ್ ಎನ್ನುವುದು ರಿಲಿಜನ್ನಿನ ಒಂದು ಭಾಗ. ಒಂದು ರಿಲಿಜನ್ನಾಗಿ ಕ್ರಿಶ್ಚಿಯಾನಿಟಿಯ ಪ್ರಸಾರಕ್ಕೆ ಸೀಮಿತ ಅವಕಾಶಗಳಿವೆ. ಆದರೆ ಸೆಕ್ಯುಲರ್ ರೂಪದಲ್ಲಿ ಅದು ಅನ್ಯ ಸಂಸ್ಕೃತಿಗಳ ಗಡಿಗಳನ್ನು ದಾಟಿ ಜಗದ್ವ್ಯಾಪಿಯಾಗಿದೆ. ಅವನ್ನು ಒಪ್ಪಿಕೊಳ್ಳುವುದೂ ಒಂದೇ ಕ್ರಿಶ್ಚಿಯಾನಿಟಿಯನ್ನು ಒಪ್ಪಿಕೊಳ್ಳುವುದೂ ಒಂದೇ ಎನ್ನುವರು. ಹಿಂದೂ ಧರ್ಮ ಎನ್ನುವುದೊಂದಿದೆಯೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳುವ ಅವರು ಅದಕ್ಕೆ ತಾವೇ ಉತ್ತರವನ್ನೂ ಹೇಳುವರು. ಆಂಗ್ಲ ಭಾಷೆಯ ರಿಲಿಜನ್ ಎಂಬ ಶಬ್ದವನ್ನು ಧರ್ಮ ಎಂಬುದಾಗಿ ಭಾಷಾಂತರಿಸಿಕೊಂಡು ಭಾರತದಲ್ಲಿ ಹಿಂದೂ ಧರ್ಮ ಎಂಬ ಶಬ್ದವನ್ನು ಸೃಷ್ಟಿಸಿದ್ದೇವೆ. ಮೂಲತಃ ಭಾರತದಲ್ಲಿ ಹಿಂದೂ ರಿಲಿಜನ್ನು ಎಂಬ ಸಂಗತಿಯೇ ಇಲ್ಲ ಎಂದು ಹೇಳುತ್ತ, ಆ ಕಾರಣದಿಂದಾಗಿ ಈ ಭಾಷಾಂತರವು ಸೃಷ್ಟಿಸಿರಬಹುದಾದ ಗೊಂದಲಗಳನ್ನು ವಿವರಿಸುತ್ತಾರೆ. ಧರ್ಮ ಎಂಬುದಕ್ಕೆ ಇದಮಿತ್ಥಂ ಎಂಬ ಒಂದು ವಿವರಣೆಯು ನಮ್ಮ ಸಂಸ್ಕೃತಿಯಲ್ಲೇ ಇಲ್ಲ. ಕ್ರಿಶ್ಚಿಯಾನಿಟಿ, ಇಸ್ಲಾಂ ಹಾಗೂ ಜೂಡಾಯಿಸಂ ಎಂಬ ಈ ಮೂರನ್ನು ಮಾತ್ರವೇ ರಿಲಿಜನ್ನುಗಳೆನ್ನಬಹುದು. ಭಾರತೀಯ ನೆಲದಲ್ಲಿ ಹುಟ್ಟಿ ಬೆಳೆದ ಯಾವ ರಿಲಿಜನ್ನುಗಳೂ ಇಲ್ಲ. ಹಾಗಾಗಿ ರಿಲಿಜನ್ ಎಂಬುದರ ಭಾಷಾಂತರವಾಗಿ ಹಿಂದೂ ಧರ್ಮ ಎಂಬ ಶಬ್ದವನ್ನು ಪ್ರಯೋಗಿಸಿದರೆ ಧರ್ಮ ಎಂಬುದಕ್ಕೆ ಯಾವ ನೆಲೆಯಲ್ಲೂ ಅರ್ಥವಿರಲು ಸಾಧ್ಯವಿಲ್ಲ; ಧರ್ಮ ಎಂಬ ನೆಲೆಯಲ್ಲೂ ಇರಲು ಸಾಧ್ಯವಿಲ್ಲ, ರಿಲಿಜನ್ ಎಂಬ ನೆಲೆಯಲ್ಲೂ ಸಾಧ್ಯವಿಲ್ಲ ಎನ್ನುವರು. ರಾಜಕೀಯವನ್ನು ಧರ್ಮದಿಂದ ದೂರವಿಡಬೇಕು ಎಂಬುದು ಅರ್ಥವಿಲ್ಲದ ಹೇಳಿಕೆಯಾಗಿದೆ. ಏಕೆಂದರೆ ಧರ್ಮ ಎಂದರೆ ರಿಲಿಜನ್ ಅಲ್ಲ. ಇದನ್ನು ತಿಳಿದುಕೊಳ್ಳದೆ ಈ ಹೇಳಿಕೆಯನ್ನು ಮಾಡಿದರೆ ಎಷ್ಟು ಅಸಸಂಬದ್ಧವಾಗಿರುತ್ತದೆ ಎಂಬುದನ್ನು ವಿವರಿಸುತ್ತಾರೆ. ನಮ್ಮ ಜನರ ಪ್ರಕಾರ ಧರ್ಮ ಎಂದರೆ ಒಳ್ಳೆಯ ಕೆಲಸಗಳನ್ನು ಮಾಡುವುದು. ರಾಜಕೀಯದಲ್ಲಿ ಧರ್ಮವನ್ನು ಬೆರೆಸಬಾರದು ಎಂದರೆ ರಾಜಕಾರಣಿಗಳು ಒಳ್ಳೆಯ ಕೆಲಸವನ್ನು ಮಾಡಬಾರದು ಎಂದು ಅರ್ಥವೆ ಎಂದು ಪ್ರಶ್ನಿಸುವರು. ಆದರೆ ಇಂದಿನ ಭಾರತೀಯ ಸಂದರ್ಭದಲ್ಲಿ ಹಿಂದೂ ಎಂಬುದು ಒಂದು ಧರ್ಮದ ಹೆಸರಾಗಿಯೂ, ಆ ಹಿಂದೂವನ್ನು ಒಂದು ರಾಜಕೀಯ ಶಕ್ತಿಯನ್ನಾಗಿಯೂ ಮಾಡಿಕೊಂಡಿರುವುದನ್ನು ಬಾಲಗಂಗಾಧರರು ಗಮನಿಸದೇ ಇರಲಾರರು. ಒಟ್ಟಾರೆಯಾಗಿ ಪಾಶ್ಚಾತ್ಯರ ಮಾನದಂಡದಿಂದ ಭಾರತೀಯ ಸಂದರ್ಭವನ್ನು ಅರ್ಥೈಸಲು ಹೊರಡುವುದು ವಿಪರೀತ ಅರ್ಥಗಳಿಗೆ ಎಡೆಮಾಡಿಕೊಡುತ್ತದೆ. ಅದೊಂದು ಬೌದ್ಧಿಕ ದಾಸ್ಯ ಎಂಬುದನ್ನು ಕೃತಿಯುದ್ದಕ್ಕೂ ಯಶಸ್ವಿಯಾಗಿ ಮಂಡಿಸಿದ್ದಾರೆ. ಅದನ್ನು ಒಪ್ಪುವುದು ಬಿಡುವುದು ಅದರ ಅಭ್ಯಾಸಿಗಳಿಗೆ ಬಿಟ್ಟಿದ್ದು. ಪ್ರ: ನಿಲುಮೆ ಪ್ರಕಾಶನ, ಯಕ್ಷ ಸೃಷ್ಟಿ, ತಾರಗೋಡು ಅಂಚೆ, ಶಿರಸಿ, ಉ.ಕ., ಪುಟಗಳು ೨೦೦ ಬೆಲೆ ₹ ೧೫೦
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.