*ಪರದೆ ಬಿದ್ದರೂ ಅಭಿನಯ ನಿಲ್ಲಿಸದವರು

ಭರತ ಎಂದರೆ ನಟ. ನಾಟಕದ ಕೊನೆಯಲ್ಲಿ ನಟನಾದವನು ದೇಶಕ್ಕೆ, ಜನತೆಗೆ ಒಳಿತಾಗಲಿ ಎಂದು ಶುಭವನ್ನು ಕೋರುವ ವಾಕ್ಯವನ್ನು ಹೇಳುತ್ತಾನೆ. ಅದೇ ಭರತ ವಾಕ್ಯ. ಭರತ ವಾಕ್ಯ ಮುಗಿದ ಮೇಲೆ ನಾಟಕ ಮುಗಿದ ಹಾಗೆ.
ಕೆಲವೊಮ್ಮೆ, ಅವನದೇನು ಭರತ ವಾಕ್ಯವೆ?' ಎಂದು ಪ್ರಶ್ನಿಸುವುದಿದೆ. ಅಂದರೆ ಆತನೇನು ಪ್ರಶ್ನಾತೀತನೆ? ಅವನ ಮಾತನ್ನು ಮೀರಿ ಬೇರೆಯವರ ಮಾತು ಅಲ್ಲಿ ನಡೆಯುವುದಿಲ್ಲವೆ ಎಂದು ಕೇಳುವ ರೀತಿ ಅದು. ಕೆಲವೊಮ್ಮೆಭರತ ವಾಕ್ಯ ಮುಗಿದರೂ ನಾಟಕ ಮುಗಿದೇ ಇಲ್ಲ ನೋಡು ಅವನದು’ ಎಂದು ಹೇಳುವವರಿದ್ದಾರೆ. ಭಾಷಣ ಮಾಡುವ ಮಹಾಶಯ ಜನರೆಲ್ಲ ಎದ್ದು ಹೋದರೂ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುತ್ತಿದ್ದರೆ ಹೇಗೆ? ಅನುಯಾಯಿಗಳೆಲ್ಲ ತಮ್ಮನ್ನು ಬಿಟ್ಟು ಹೋಗಿದ್ದರೂ ನಾಯಕನಾದವನು ಕುರ್ಚಿಗೆ ಅಂಟಿಕೊಂಡಿದ್ದರೆ ಹೇಗೆ? ಅಧಿಕಾರ ಸ್ಥಾನದಿಂದ ತೊಲಗುವಂತೆ ಆದೇಶ ಬಂದರೂ ಅಧಿಕಾರ ಬಿಡದಿದ್ದರೆ ಹೇಗೆ? ಒಂದು ಕ್ಷೇತ್ರದಲ್ಲಿ ತಮ್ಮ ಉಪಯುಕ್ತತೆ ಮುಗಿಯಿತು ಎಂದು ತಿಳಿದ ಮೇಲೂ ಅದಕ್ಕೆ ಅಂಟಿಕೊಂಡಿದ್ದರೆ ಆಗಲೂ ಇಂಥ ಮಾತು ಬರುತ್ತದೆ.
ಅಡಿಗರು ನೆಹರೂ ನಿವೃತ್ತರಾಗುವುದಿಲ್ಲ' ಎಂಬ ಪದ್ಯದಲ್ಲಿಭರತ ವಾಕ್ಯಕ್ಕೂ ಬೆದರನೀತ ಧೀರೋದಾತ್ತ ನಾಯಕ, ತೆರೆ ಬಿದ್ದರೂ ರಂಗ ಬಿಡದ ಚಿರ ಯುವಕ’ ಎಂದು ಹೇಳಿರುವುದು ಇದನ್ನೇ ಧ್ವನಿಸುತ್ತದೆ.