*ಪಟ್ಟುಬಿಡದೆ ಕೆಲಸವನ್ನು ಸಾಧಿಸುವುದು

ಶ್ರೀರಾಮಚಂದ್ರ ಹುಟ್ಟಿದ ಇಕ್ಷ್ವಾಕು ವಂಶದಲ್ಲಿ ಸಗರನೆಂಬ ಅರಸ ಇದ್ದ. ಸಗರನ ಅರವತ್ತು ಸಾವಿರ ಮಕ್ಕಳು ಮುನಿ ಶಾಪದಿಂದ ಸುಟ್ಟು ಭಸ್ಮವಾಗುತ್ತಾರೆ. ಅವರಿಗೆ ಸದ್ಗತಿ ಬರಬೇಕೆಂದರೆ ದೇವಗಂಗೆಯನ್ನು ಅವರ ಬೂದಿಯ ಮೇಲೆ ಹರಿಸಬೇಕು ಎಂದು ಹೇಳುತ್ತಾರೆ. ಇದಕ್ಕಾಗಿ ಅವರ ಸಹೋದರ ದಿಲೀಪ ಪ್ರಯತ್ನ ಮಾಡುತ್ತಾನೆ. ಅವನಿಂದ ಅದು ಸಾಧ್ಯವಾಗುವುದಿಲ್ಲ. ದಿಲೀಪನ ಮಗ ಭಗೀರಥ ದೇವಗಂಗೆಯನ್ನು ಕುರಿತು ತಪಸ್ಸು ಮಾಡುತ್ತಾನೆ. ಗಂಗೆ ಧರೆಗಿಳಿಯಲು ಒಪ್ಪುತ್ತಾಳೆ. ದೇವಗಂಗೆಯ ರಭಸವನ್ನು ತಡೆಯುವುದು ಹೇಗೆ? ಭಗೀರಥ ಶಿವನನ್ನು ಒಲಿಸಿ ಗಂಗೆಯ ರಭಸ ತಡೆಯಲು ಕೋರುತ್ತಾನೆ. ಗಂಗೆ ಆರ್ಭಟಿಸಿದಾಗ ಶಿವ ಗಂಗೆಯನ್ನು ಜಡೆಯಲ್ಲಿಯೇ ಅಡಗಿಸಿಬಿಡುತ್ತಾನೆ.
ಭಗೀರಥ ಮತ್ತೆ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಶಿವನ ಜಡೆಯಿಂದ ಹರಿದ ನೀರಿನಲ್ಲಿ ಜಹ್ನು ಎಂಬ ಮುನಿಯ ಆಶ್ರಮ ಕೊಚ್ಚಿಕೊಂಡು ಹೋಗುತ್ತದೆ. ಆಗ ಸಿಟ್ಟಿಗೆದ್ದ ಆ ಮುನಿಯು ಗಂಗೆಯನ್ನು ಆಪೋಷಿಸುತ್ತಾನೆ. ಭಗೀರಥ ಮತ್ತೆ ಮುನಿಯನ್ನು ಒಲಿಸಿಕೊಂಡಾಗ ಆತ ತನ್ನ ಕಿವಿಯಿಂದ ಗಂಗೆಯನ್ನು ಹೊರಗೆ ಬಿಡುತ್ತಾನೆ. ಹೀಗಾಗಿ ಗಂಗೆ ಜಾಹ್ನವಿಯಾಗುತ್ತಾಳೆ. ಹೀಗೆ ಭಗೀರಥ ತನ್ನ ಪಿತೃಗಳ ಬೂದಿಯ ಮೇಲೆ ಗಂಗೆಯನ್ನು ಹರಿಸುತ್ತಾನೆ. ಈ ಮೂಲಕ ಅವರಿಗೆ ಸದ್ಗತಿಯನ್ನು ಕೊಡಿಸುತ್ತಾನೆ. ಭಗೀರಥನಿಂದಾಗಿಯೇ ಗಂಗೆ ಭಾಗೀರಥಿಯಾಗುತ್ತಾಳೆ.
ಎಡಬಿಡದ ಸತತ ಪ್ರಯತ್ನದಿಂದ ಕಾರ್ಯಸಾಧನೆ ಮಾಡುವುದನ್ನು ಭಗೀರಥ ಪ್ರಯತ್ನಕ್ಕೆ ಹೋಲಿಸುವುದು ರೂಢಿಯಲ್ಲಿ ಬಂದಿದೆ.