ಹೊನ್ನಾವರದ ಪೇಟೆಯಲ್ಲಿ ಕೋಳಿ ಕೂಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ನಸುಕಿನ ಐದು ಗಂಟೆ ಎಂದರೆ ಬ್ರದರ್ ಸ್ಕೂಲಿನ ದೊಡ್ಡ ಗಂಟೆ ಬಡಿದುಕೊಳ್ಳುತ್ತಿತ್ತು. ಬೆಳಗಾಯಿತು ಎಂದು ಅದು ಸಾರುತ್ತಿತ್ತು. ಬರೀ ಪೇಟೆಯೇ ಏಕೆ, ಕೆಳಗಿನ ಪಾಳ್ಯ, ಯೇಸು ಬಂದರ, ಬಿಕಾಸನ ತಾರಿ, ಮಂಜಗುಣಿಕೇರಿ, ರಾಮತೀರ್ಥ ರಸ್ತೆಯಲ್ಲೆಲ್ಲ ಈ ಗಂಟೆಯ ನಾದ ಅನುರಣಿಸುತ್ತಿತ್ತು. ಬ್ರದರ್ ಸ್ಕೂಲಿನಲ್ಲಿ ಕೇರಳ ಕಡೆಯ ಹುಡುಗರು ಓದಲೆಂದು ಬಂದು ಅಲ್ಲಿಯೇ ವಾಸ್ತವ್ಯ ಮಾಡುತ್ತಿದ್ದರು. ಸ್ಕೂಲಿನ ಗೋಪುರದಲ್ಲಿ ಒಂದು ದೊಡ್ಡ ಗಂಟೆಯನ್ನು ಕಟ್ಟಲಾಗಿತ್ತು. ಬೆಳಗಿನ ಐದು ಗಂಟೆ ಮತ್ತು ಸಂಜೆ ಆರು ಗಂಟೆಗೆ ಈ ಹುಡುಗರು ತಪ್ಪದೆ ಗಂಟೆ ಹೊಡೆಯುತ್ತಿದ್ದರು. ಇನ್ನು ಪೇಟೆಯಲ್ಲಿ ಮತ್ತು ಕೆಳಗಿನ ಪಾಳ್ಯದಲ್ಲಿ ಎರಡು ಮಸೀದಿಗಳು ಇದ್ದವು. ಬ್ರದರ್ ಸ್ಕೂಲಿನ ಗಂಟೆಯ ಅನುರಣನ ನಿಲ್ಲುತ್ತಿದ್ದಂತೆಯೇ ಈ ಮಸೀದಿಗಳಲ್ಲಿ ಬೆಳಗಿನ ನಮಾಜು ಸದ್ದು. ಎರಡೂ ಮಸೀದಿಗಳ ನಡುವೆ ಸುಮಾರು ಎರಡು ಫರ್ಲಾಂಗು ಅಂತರ. ಅವರ ಕೂಗು ಇವರಿಗೆ ಇವರ ಕೂಗು ಅವರಿಗೆ ಕೇಳಿಸುವ ಸ್ಪರ್ಧೆಯಂತೆ ಇಬ್ಬರೂ ಅಲ್ಲಾಹುನನ್ನು ಕೂಗುತ್ತಿದ್ದರು. ಇವು ನಿಲ್ಲುತ್ತಿದ್ದಂತೆಯೇ ಅಲ್ಲಿಲ್ಲಿಯ ಮರಗಳಲ್ಲಿ ಹಕ್ಕಿಗಳ ಸಂಚಲನ ಕೇಳಿಸುತ್ತಿದ್ದವು. ಕಾಗೆ, ಕೋಗಿಲೆಗಳು, ಗೊರವಂಕ, ಪಿಕಳಾರಗಳು, ಟಿಟ್ಟಿಭ, ಮರಕುಟುಕಗಳು ಅದ್ಯಾರಿಗೋ ಸಂದೇಶ ಮುಟ್ಟಿಸುವ ತರಾತುರಿಯಲ್ಲಿದ್ದವುಗಳಂತೆ ದನಿ ಮಾಡುತ್ತಿದ್ದವು. ಬಸ್ ಸ್ಟ್ಯಾಂಡಿನಲ್ಲಿ ಮೊದಲ ಬಸ್‌ನ ಡ್ರೈವರ್‌ಗಳು ಗಡಿಬಿಡಿಯಲ್ಲಿ ಮುಖ ತೊಳೆದುಕೊಂಡು ಬಸ್ ಬೋರ್ಡ್ ಬದಲಿಸಿ ಗ್ಲಾಸ್ ಒರೆಸಿಕೊಂಡು ಎಂಜಿನ್ ಬಿಸಿಮಾಡಲು ಸ್ಟಾರ್ಟ್‌ಮಾಡುತ್ತಿದ್ದರು. ಹೊಟೇಲುಗಳ ಮಾಲೀಕರು ನಿದ್ದೆಗೂಳಿಗಳಾದ ತಮ್ಮ ಕೆಲಸಗಾರರನ್ನು ಬಡಿದು ಎಬ್ಬಿಸುತ್ತಿದ್ದರು. ಎಮ್ಮೆ ಪೈಲಿನ ಶಂಕರ ಶೇಟ ಹಾಲು ಹಿಂಡುವುದಕ್ಕೆ ಸಿದ್ಧರಾಗುತ್ತಿದ್ದರು. ಶಾಲೆಗೆ ಹೋಗುವ ಮಕ್ಕಳಿದ್ದ ಮನೆಯಲ್ಲಿ ಅಪ್ಪ ಅಮ್ಮಂದಿರು ಮಕ್ಕಳನ್ನು ಎಬ್ಬಿಸಲು ತಮ್ಮ ಪ್ರಯತ್ನ ಆರಂಭಿಸುತ್ತಿದ್ದರು. ಹೂವಿನ ಪೇಟೆಯಲ್ಲಿ ಹೂವಿನ ಗಮ, ಬಂದರಿನಲ್ಲಿ ಮೀನಿನ ಗಮಲು ಅಡರಲು ಆರಂಭವಾಗುತ್ತಿತ್ತು. ಹೊನ್ನಾವರದ ಬೆಳಗಿಗೂ ಬಳಕೂರು ಡಾಕ್ಟರರಿಗೂ ಅದೇನೋ ನಂಟು ಬೆಳೆದು ಬಿಟ್ಟಿತ್ತು. ಬ್ರದರ್ ಸ್ಕೂಲಿನ ಪಕ್ಕದಲ್ಲಿಯೇ ಅವರ ಮನೆ ಇದ್ದುದು. ಗಂಟೆಯ ಧ್ವನಿಯ ಜತೆಯಲ್ಲೇ ಅವರೂ ಎದ್ದುಬಿಡುತ್ತಿದ್ದರು. ಬೆಳಗಿನ ಹವಾ ಸೇವನೆಗೆ ಅವರು ಹೊರಟುಬಿಡುತ್ತಿದ್ದರು. ಚುಮುಚುಮು ಚಳಿ ಇರಲಿ, ಸೋನೆ ಮಳೆ ಇರಲಿ ಡಾಕ್ಟರರ ಮುಂಜಾನೆಯ ವಾಯುವಿಹಾರ ತಪ್ಪುತ್ತಿರಲಿಲ್ಲ. ಆರಡಿ ಎತ್ತರ, ತೆಳ್ಳನೆಯ ಶರೀರ, ಗೌರವರ್ಣ, ನೋಡಿದಾಕ್ಷಣ ಗೌರವ ಮೂಡುವ ವ್ಯಕ್ತಿತ್ವ ಅವರದ್ದು. ಕೈಯಲ್ಲೊಂದು ಉರುಟು ಮರಗೋಲನ್ನು ಹಿಡಿದು ಅವರು ಬರುತ್ತಿದ್ದರೆಂದರೆ ಅಡಕೆ ಮರ ಎದ್ದು ನಡೆದಂತೆ, ಹೊನ್ನಾವರದ ರಥಬೀದಿಯ ತೇರು ಜಾರುತ್ತಿದ್ದಂತೆ ಭಾಸವಾಗುತ್ತಿತ್ತು. ದೇವರ ತಲೆಯ ಮೇಲಿನ ಹೂವು ತಪ್ಪಿದರೂ ಈ ಡಾಕ್ಟರ್ ಅವರ ವಾಕಿಂಗ್ ತಪ್ಪುವುದಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಅವರ ಮನೆಯ ಕಾಂಪೌಂಡಿನ ಪಕ್ಕದ ರಸ್ತೆಯನ್ನು ದಾಟಿದರೆ ಅವರ ಆಸ್ಪತ್ರೆ. ಅವರ ಆಸ್ಪತ್ರೆ ಇದ್ದ ಸಾಲು ಮನೆಗಳಲ್ಲಿ ಒಂದರಲ್ಲಿ ನಮ್ಮ ದೂರದ ಸಂಬಂಧಿ ನಾರಾಯಣ ಮಾಸ್ತರು ಇದ್ದರು. ಅವರು ಒಂಟಿಯಾಗಿ ಬದುಕಿದ್ದರು. ಅವರ ಮಕ್ಕಳು ಬೇರೆ ಊರುಗಳಲ್ಲಿ ಇದ್ದರು. ನಾವು ಶಾಲೆಗೆ ಹೋಗುವುದಕ್ಕೆಂದು ಅವರ ಮನೆಯಲ್ಲಿ ನಮ್ಮನ್ನು ನಮ್ಮ ತಂದೆ ಇರಿಸಿದ್ದರು. ಆವತ್ತಿನ ಹೊನ್ನಾವರದ ಪ್ರಸಿದ್ಧ ವೈದ್ಯರಲ್ಲಿ ಬಳಕೂರು ಡಾಕ್ಟರರೇ ಅಗ್ರಸ್ಥಾನದಲ್ಲಿದ್ದರು. ಅವರ ಪೂರ್ತಿ ಹೆಸರು ವಿ.ಕೆ.ಬಿ. ಬಳಕೂರು ಎಂದು. ಎಲ್ಲರಿಗೂ ಎರಡು ಅಕ್ಷರ ಆರಂಭದಲ್ಲಿ ಇದ್ದರೆ ಇವರಿಗೆ ಮೂರು ಅಕ್ಷರ ಏಕೆ ಎಂಬ ಕುತೂಹಲ ನನ್ನನ್ನು ಹಲವು ಕಾಲ ಕಾಡಿತ್ತು. ವಸಂತರಾವ್ ಕೃಷ್ಣರಾವ್ ಭಂಡಾರ್ಕರ್ ಬಳಕೂರು ಎಂದು ಆನಂತರ ನನಗೆ ತಿಳಿಯಿತು. ಸಮಯ ಪಾಲನೆಯಲ್ಲಿ ಅವರು ಅಪ್‌ಟುಡೇಟ್. ಬೆಳಿಗ್ಗೆ ಏಳು ಗಂಟೆಗೆ ಎಂದರೆ ಅವರು ಆಸ್ಪತ್ರೆಗೆ ಬರುವವರು. ಧೋತಿ ಮತ್ತು ಕೋಟು ಅವರು ತೊಡುತ್ತಿದ್ದರು. ಒಂದು ಗಂಟೆಗೆ ಊಟಕ್ಕೆ. ಮತ್ತೆ ಸಂಜೆ ನಾಲ್ಕರಿಂದ ಆರು ಗಂಟೆವರೆಗೆ ಆಸ್ಪತ್ರೆ. ಸಂಜೆ ಟಪ್ಪರ್ ಹಾಲ್‌ನಲ್ಲಿದ್ದ ಸೋಶಿಯಲ್ ಕ್ಲಬ್‌ಗೆ ಹೋಗುತ್ತಿದ್ದರು. ಹೊನ್ನಾವರ ಪುರಸಭೆಯ ಅಧ್ಯಕ್ಷರಾಗಿ, ಅರ್ಬನ್ ಬ್ಯಾಂಕ್‌ನ ಅಧ್ಯಕ್ಷರಾಗಿ ಅವರು ತುಂಬಾ ವರ್ಷ ಕೆಲಸ ಮಾಡಿದ್ದರು. ಬಳಕೂರು ಡಾಕ್ಟರರಿಗೆ ಒಂದು ಪರೋಪಕಾರಿ ಮುಖವೂ ಇತ್ತು. ನಾನು ಓದುತ್ತಿದ್ದುದು ಅಲ್ಲಿಯ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ. ಹೆಸರು ಇಂಗ್ಲಿಷ್ ಸ್ಕೂಲಾಗಿದ್ದರೂ ಅದು ಕನ್ನಡ ಮಾಧ್ಯಮದ ಶಾಲೆಯಾಗಿತ್ತು. ಆಗಿನ ಕಾಲದಲ್ಲಿ ಇಂಗ್ಲಿಷ್ ಶಾಲೆ ಎಂದರೆ ಹೈಸ್ಕೂಲು ಎಂಬ ಭಾವನೆ ಇತ್ತು. ಅಲ್ಲಿ ಐದರಿಂದ ಹತ್ತನೆ ತರಗತಿಯ ವರೆಗೆ ಕಲಿಸುತ್ತಿದ್ದರು. ಆ ಶಾಲೆಯ ಎಲ್ಲ ಮಕ್ಕಳಿಗೂ ಬಳಕೂರು ಡಾಕ್ಟರರು ಔಷಧವನ್ನು ಪುಕ್ಕಟೆ ಕೊಡುತ್ತಿದ್ದರು. ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಒಂದು ಹೆಲ್ತ್ ಕಾರ್ಡ್ ಮಾಡಿಸಿದ್ದರು. ಆ ಕಾರ್ಡನ್ನು ತೆಗೆದುಕೊಂಡು ಅವರಲ್ಲಿಗೆ ಹೋದರೆ ಆಯಿತು. ಇದರಿಂದಾಗಿ ಶಾಲೆಯ ಮಕ್ಕಳು ತಮಗೆ ಆರೋಗ್ಯ ಸರಿ ಇರಲಿಲ್ಲ ಎಂದು ಸುಳ್ಳು ಹೇಳಿ ಶಾಲೆ ತಪ್ಪಿಸುವುದಕ್ಕೂ ಆಗುತ್ತಿರಲಿಲ್ಲ. ಬೇಸಿಗೆಯಿಂದ ಮಳೆಗಾಲ, ಮಳೆಗಾಲದಿಂದ ಚಳಿಗಾಲಕ್ಕೆ ತಿರುಗುವಾಗ ಅನಾರೋಗ್ಯ ಸಹಜ. ಆಗ ಡಾಕ್ಟರರಿಗೆ ಬಿಡುವೇ ಇರುತ್ತಿರಲಿಲ್ಲ. ಸುತ್ತಲಿನ ಹತ್ತಾರು ಊರಿನ ರೋಗಿಗಳು ಅವರ ಆಸ್ಪತ್ರೆಗೇ ಬರುತ್ತಿದ್ದರು. ಅವರ ಶುಲ್ಕವೂ ಕಡಿಮೆ. ಆಗಿನ ಕಾಲದಲ್ಲಿ ನಾಲ್ಕಾಣೆಗೆ ಒಂದು ದಿನದ ಔಷಧ ಆಸ್ಪತ್ರೆಯಲ್ಲಿಯೇ ನೀಡುತ್ತಿದ್ದರು. ಚಿಕ್ಕ ಬಾಟಲಿಯನ್ನು ನಾವು ಒಯ್ಯಬೇಕಿತ್ತು. ನೀರು ಔಷಧ ಮತ್ತು ಗುಳಿಗೆಗಳನ್ನು ಪುಡಿ ಮಾಡಿ ದಿನಕ್ಕೆ ಮೂರು ಬಾರಿ ಸೇವಿಸುವುದಕ್ಕೆ ಪ್ರತ್ಯೇಕವಾಗಿ ಮೂರು ಚೀಟಿ ಮಾಡಿ ಕೊಡುತ್ತಿದ್ದರು. ಹೀಗೆ ಮಾಡುವುದಕ್ಕೆ ಅವರಲ್ಲಿ ಇನಾಸ್ ಎಂಬ ಪರಿಣತನಾದ ಕಂಪೌಂಡರ್ ಇದ್ದ. ಬಾಟಲಿಯ ನೀರೌಷಧವನ್ನು ಮೂರು ಭಾಗ ಮಾಡಲು ಒಂದು ಕಾಗದ ಪಟ್ಟಿ ಅಂಟಿಸಿ ಮೂರು ಗುರುತು ಮಾಡಿ ಕೊಡುತ್ತಿದ್ದರು. ಒಬ್ಬರೇ ಬಂದು ತಮ್ಮ ಮನೆ ಮಂದಿಗೆಲ್ಲ ಔಷಧ ಒಯ್ಯುವುದೂ ಸಾಮಾನ್ಯವಾಗಿತ್ತು. ರೋಗದ ಶ್ರಾಯದಲ್ಲಿ ನಾಲ್ಕೈದು ಜನರಿಗೆಂದು ಒಬ್ಬರೇ ನಾಲ್ಕೈದು ಬಾಟಲಿಗಳನ್ನು ತರುತ್ತಿದ್ದರು. ಡಾಕ್ಟರು ರೋಗಿಗೆ ಏನಾಗಿದೆ ಎಂದು ಕೇಳಿಸಿಕೊಂಡು ಔಷಧ ಕೊಡುತ್ತಿದ್ದರು. ಔಷಧಕ್ಕೆ ಮಾತ್ರ ದುಡ್ಡು. ಕನ್ಸಲ್ಟನ್ಸಿಗೆ ಯಾವುದೇ ಹಣ ಪಡೆಯುತ್ತಿರಲಿಲ್ಲ. ಅವರ ಕೈಗುಣ ಚೆನ್ನಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಡಾಕ್ಟರ್ ಬಳಿ ಒಂದು ಕಾರು ಇತ್ತು. ಅಂದಿನ ಹೊನ್ನಾವರದಲ್ಲಿ ಕಾರು ಹೊಂದಿದ್ದ ಕೆಲವೇ ವ್ಯಕ್ತಿಗಳಲ್ಲಿ ಇವರೂ ಒಬ್ಬರಾಗಿದ್ದರು. ಅವರಿಗೆ ಒಬ್ಬ ಕಾಯಂ ಡ್ರೈವರ್ ಇದ್ದ. ಆ ಕಾರು ಈಗ ಅವರ ಬಳಿ ಇದ್ದಿದ್ದರೆ ವಿಂಟೇಜ್ ಮೌಲ್ಯ ಬಂದುಬಿಡುತ್ತಿತ್ತು. ಅದನ್ನು ನೋಡಿದರೆ ಮರ್ಕ್ಯೂರಿ ವಿ೮ ಪೆಟ್ರೋಲ್ ಮಾದರಿಯ ಕಾರಿನ ಹಾಗೆ ಕಾಣುತ್ತಿತ್ತು. ಅದು ಬ್ಯಾಟರಿಯಿಂದ ಚಾಲು ಆಗದಿದ್ದರೆ ಮುಂದುಗಡೆ ಒಂದು ಸರಳು ತೂರಿಸಿ ಹ್ಯಾಂಡಲ್ ರೀತಿಯಲ್ಲಿ ತಿರುಗಿಸಿ ಚಾಲು ಮಾಡುತ್ತಿದ್ದರು. ಇತ್ತೀಚೆಗೆ ಬಳಕೂರ ಡಾಕ್ಟರರ ಮಕ್ಕಳು ಮೊಮ್ಮಕ್ಕಳೆಲ್ಲ ಸೇರಿ ದೊಡ್ಡದೊಂದು ಆಸ್ಪತ್ರೆಯನ್ನು ಕಟ್ಟಿಸಿ ಉದ್ಘಾಟಿಸಿದ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದಾಗ ಇವೆಲ್ಲ ನೆನಪಾಯಿತು. ಹೊನ್ನಾವರದ ಬೆಳಗಿಗೆ ತಮ್ಮ ಸೀಲು ಒತ್ತಿದವರು ಇನ್ನೊಬ್ಬರು ಸೌಕೂರು ಮಾಸ್ತರರು. ಅವರು ನಮಗೆ ಶಾಲೆಯಲ್ಲಿ ಇಂಗ್ಲಿಷ್ ಮತ್ತು ಸಂಸ್ಕೃತ ಕಲಿಸುತ್ತಿದ್ದರು. ಹೊನ್ನಾವರದ ರಥಬೀದಿಯ ಹತ್ತಿರವೇ ಅವರ ಮನೆ ಇತ್ತು. ಅವರು ಅವಿವಾಹಿತರಾಗಿದ್ದರು. ಅವರ ಮನೆಯಲ್ಲಿ ಮತ್ತೂ ಯಾರುಯಾರೋ ಇರುತ್ತಿದ್ದರು. ಬ್ರದರ್ ಸ್ಕೂಲಿನ ಗಂಟೆ ನಸುಕಿನಲ್ಲಿ ಬಡಿದುಕೊಳ್ಳುತ್ತಿದ್ದಂತೆಯೇ ಅವರು ಎದ್ದು ಸುಮಾರು ಮೂರು ಕಿ.ಮೀ. ದೂರದಲ್ಲಿದ್ದ ರಾಮತೀರ್ಥಕ್ಕೆ ನಡೆದುಕೊಂಡು ಹೋಗಿಬಿಡುವವರು ಮತ್ತು ಅಲ್ಲಿಯೇ ಸ್ನಾನ ಮಾಡಿ ತಮ್ಮ ಬಟ್ಟೆಯನ್ನು ತೊಳೆದುಕೊಂಡು ಬಂದುಬಿಡುತ್ತಿದ್ದರು. ಮಳೆ ಇರಲಿ ಚಳಿ ಇರಲಿ ಇದು ನಿತ್ಯವೂ ನಡೆಯುತ್ತಿತ್ತು. ಹೊನ್ನಾವರದಲ್ಲಿ ರಾಮನವಮಿಗೆ ವೆಂಕಟೇಶ್ವರ ದೇವರ ರಥೋತ್ಸವ ನಡೆಯುತ್ತದೆ. ಕರಾವಳಿ ಭಾಗದಲ್ಲಿ ತೇರನ್ನು ಕಾಣುವುದೇ ಕಣ್ಣಿಗೆ ಒಂದು ಹಬ್ಬ. ಈ ತೇರು ನಡೆಯುತ್ತಿದ್ದ ಜಾಗ ಮತ್ತು ರಸ್ತೆಗೆ ರಥಬೀದಿ ಎಂದು ಹೆಸರು. ಆ ದೇವಸ್ಥಾನದ ಅರ್ಚಕರು ಶ್ರೀನಿವಾಸ ಭಟ್ಟರು. ಅವರ ಮಗ ರಾಘವೇಂದ್ರ ನಮ್ಮ ಕ್ಲಾಸಿನಲ್ಲಿಯೇ ಇದ್ದ. ತೇರಿನ ಮಾರನೆ ದಿನ ಓಕುಳಿ. ಭಾರೀ ದೇಹದ ಶ್ರೀನಿವಾಸ ಭಟ್ಟರನ್ನು ಹೊತ್ತು ತಂದು ಬಣ್ಣ ತುಂಬಿದ ದೊಡ್ಡ ತಪ್ಪಲೆಯಲ್ಲಿ ಮುಳುಗಿಸುತ್ತಿದ್ದರು. ಆ ಮಜಾ ನೋಡುವುದಕ್ಕೆಂದೇ ಜನ ಮುಕುರುತ್ತಿದ್ದರು. ಆ ದೇವಸ್ಥಾನದ ಎದುರೇ ನಾಗರಿಕ ಪತ್ರಿಕೆಯ ದೀನಬಂಧು ಮುದ್ರಣಾಲಯ ಇತ್ತು. ನಾಗರಿಕ ಪತ್ರಿಕೆಯು ಯಾರಯಾರದೋ ಕೈ ದಾಟಿ ಕೊನೆಗೆ ಹಿರಿಯ ಪತ್ರಕರ್ತ ಜಿ.ಆರ್.ಪಾಂಡೇಶ್ವರ ಅವರ ಕೈಗೆ ಬಂದಿತ್ತು. ಅವರು ದೊಡ್ಡ ಗಂಟಲಿನ ಭಾಷಣಕಾರರೂ ಆಗಿದ್ದರು. ಹೊಳೆಸಾಲಿನಲ್ಲಿ ಅವರ ಗಂಟಲನ್ನು ಬ್ರದರ್ ಸ್ಕೂಲಿನ ದೊಡ್ಡ ಗಂಟೆಗೆ ಹೋಲಿಸುವವರೂ ಇದ್ದರು. ಹೊಳೆಸಾಲಿನ ಹಲವು ಲೇಖಕರ ಪ್ರಥಮ ಬರೆಹ ಪ್ರಕಟವಾಗಿದ್ದು ನಾಗರಿಕದಲ್ಲಿಯೇ ಆಗಿತ್ತು. ಪಾಂಡೇಶ್ವರರು ತಮ್ಮ ಪತ್ರಿಕೆಯಲ್ಲಿ ತಾಲೂಕಿನ ಹಲವು ಸಮಸ್ಯೆಗಳ ಬಗೆಗೆ ಬರೆಯುತ್ತಿದ್ದರು. ಚಂದಾ ವಸೂಲಿಗಾಗಿ ಅವರು ತಾಲೂಕಿನ ಪ್ರತಿ ಊರನ್ನೂ ಸುತ್ತುತ್ತಿದ್ದರು. ಹೀಗೆ ಊರೂರು ಸುತ್ತುವುದಕ್ಕೆ ಅವರಿಗೆ ಯಾವುದೇ ಬೇಸರ ಇರಲಿಲ್ಲ. ಆ ಕಾಲದಲ್ಲಿಯೇ ಅವರು ವಿಧವಾ ವಿವಾಹವಾಗಿ ಕ್ರಾಂತಿಕಾರಿಗಳೆಂದು ಹೆಸರಾಗಿದ್ದರು. ನಿಮ್ಮ ಪತ್ರಿಕೆ ಬೇಡ ಎಂದು ಪತ್ರ ಬರೆದರೂ ಅವರು ಪತ್ರಿಕೆ ಕಳುಹಿಸುವುದನ್ನು ಬಿಡುತ್ತಿರಲಿಲ್ಲ. ಕೊನೆಗಾಲದಲ್ಲಿ ಅವರಿಗೆ ಕ್ಯಾನ್ಸರ್ ರೋಗ ಬಂದಿತ್ತು. ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಅವರ ಒಂದು ಕಾಲನ್ನು ಕತ್ತರಿಸಲಾಗಿತ್ತು. ನಮ್ಮ ತಂದೆಗೂ ದವಡೆಯ ಕ್ಯಾನ್ಸರ್ ಆಗಿತ್ತು. ಅದೇ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಪಾಂಡೇಶ್ವರರೊಂದಿಗೆ ಮುಖಾಮುಖಿಯಾಗಿತ್ತು. ತಾವು ಬದುಕಿನ ಅಂತಿಮ ಘಟ್ಟದಲ್ಲಿದ್ದರೂ ನಮ್ಮ ತಂದೆಗೆ ಅವರು ಧೈರ್ಯ ಹೇಳಿದ್ದರು. ನಮ್ಮ ತಂದೆ ಊರಿಗೆ ಬಂದ ಮೇಲೆ ಅವರು ಸತ್ತ ಸುದ್ದಿ ಪತ್ರಿಕೆಯಲ್ಲಿ ಬಂತು. ಅದನ್ನು ಓದಿದ ನಮ್ಮ ತಂದೆ ಕಣ್ಣಿಂದ ನೀರು ಬಳಬಳನೆ ಇಳಿಯಿತು. ಪಾಂಡೇಶ್ವರರ ಕುರಿತು ಸಂಯುಕ್ತ ಕರ್ನಾಟಕ ಪತ್ರಿಕೆ ಆಗ ಸಂಪಾದಕೀಯ ಬರೆದದ್ದು ನೆನಪಾಗುತ್ತಿದೆ. ಬ್ರದರ್ ಸ್ಕೂಲಿನ ದೊಡ್ಡ ಗಂಟೆ ಸಂಜೆ ಆರು ಗಂಟೆಗೆ ಬಡಿದುಕೊಳ್ಳುತ್ತಿದ್ದಂತೆ ಹೊನ್ನಾವರದ ಬಂದರಿನಲ್ಲಿದ್ದ ಸಿಗ್ನಲ್ ಲೈಟ್ ಕಂಬದಲ್ಲಿ ದೀಪ ಹೊತ್ತಿಕೊಳ್ಳುತ್ತಿತ್ತು. ದಡದಿಂದ ಐವತ್ತು ಮೀಟರ್ ದೂರದಲ್ಲಿ ನದಿ ನೀರಿನಲ್ಲಿ ಈ ಲೈಟು ಕಂಬವನ್ನು ಸ್ಥಾಪಿಸಿದ್ದರು. ಸುಮಾರು ಇಪ್ಪತ್ತೈದರಿಂದ ಮೂವತ್ತು ಅಡಿ ಎತ್ತರವಿದ್ದ ಈ ಕಂಬದಿಂದ ಕೆಂಪು ಮತ್ತು ಹಸಿರು ದೀಪ ಸರತಿಯಂತೆ ನಿರಂತರವಾಗಿ ಹೊಮ್ಮುತ್ತಿತ್ತು. ದೊಡ್ಡ ದೊಡ್ಡ ಮಚುವೆಗಳು ಹಿಂದೆ ಬಂದರಿಗೆ ಬಂದು ನಿಲ್ಲುತ್ತಿದ್ದವು. ಅವುಗಳಿಗೆ ಗುರುತು ಹೇಳುವುದಕ್ಕಾಗಿ ಈ ಲೈಟಿನ ಕಂಬ ನೆಟ್ಟಿದ್ದರು. ಬ್ರದರ್ ಸ್ಕೂಲಿನ ಗಂಟೆ ಸ್ಥಾಪಿಸಿದವರಿಗೂ, ಬೆಳಿಗ್ಗೆ ಮತ್ತು ಸಂಜೆ ಅದನ್ನು ಬಾರಿಸಬೇಕೆಂದು ನಿಯಮ ಮಾಡಿದವರಿಗೂ ಹಾಗೂ ಅದನ್ನು ಬಾರಿಸುತ್ತಿದ್ದವರಿಗೂ ಎರಡು ಅನುರಣನಗಳ ನಡುವೆ ನಡೆವ ಜೀವ ಚೈತನ್ಯಗಳ ಆಗುವ ಮಾಗುವ ಕ್ರಿಯೆಗಳ ಪರಿವೇ ಇರಲಿಲ್ಲ. ಹುಡುಗರು ಗಂಟೆಯನ್ನು ಈಗಲೂ ಬಾರಿಸುತ್ತಿದ್ದಾರೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.