*ಬೇಡವೆಂದರೂ ಬೆಂಬಿಡದ ಅನಪೇಕ್ಷಿತ ವ್ಯಕ್ತಿ

ಯಾರಾದರೊಬ್ಬ ವ್ಯಕ್ತಿಯಿಂದ ನಾವು ತಪ್ಪಿಸಿಕೊಳ್ಳಬೇಕು ಎಂದು ಬಯಸುತ್ತಿರುತ್ತೇವೆ. ಆದರೆ ಆಗುವುದೇ ಇಲ್ಲ. ಹೋದಲ್ಲಿ ಬಂದಲ್ಲಿ ಅದೇ ವ್ಯಕ್ತಿ ವಕ್ಕರಿಸುತ್ತಲೇ ಇರುತ್ತಾನೆ. ಆಗ ಗೊಣಗುತ್ತೇವೆ, ಬೆನ್ನಿಗೆ ಬಿದ್ದ ಬೇತಾಳ, ಇವನಿಂದ ತಪ್ಪಿಸಿಕೊಳ್ಳುವುದು ಹೇಗಪ್ಪ… ಎಂದು.
ಬೇತಾಳ ಪಂಚವಿಂಶತಿ ಎಂಬ ಕತೆಗಳು ಕನ್ನಡದಲ್ಲೂ ಬೇತಾಳ ಕತೆಗಳು ಎಂದು ಪ್ರಸಿದ್ಧವಾಗಿವೆ. ಇದರಲ್ಲಿ ರಾಜಾ ವಿಕ್ರಮಾದಿತ್ಯನು ಸಿದ್ಧಿಗೋಸ್ಕರ ಸ್ಮಶಾನದಲ್ಲಿ ಮರದ ಮೇಲಿದ್ದ ಶವವನ್ನು ಕೆಳಗಿಳಿಸಿ ತರುವಾಗ ಆ ಶವದಲ್ಲಿ ಇದ್ದ ಭೂತವು (ಇದೇ ಬೇತಾಳ) ರಾಜನಿಗೆ ಕತೆಯೊಂದನ್ನು ಹೇಳಿ ಕೊನೆಯಲ್ಲಿ ಸಮಸ್ಯೆಯ ಪ್ರಶ್ನೆ ಹಾಕುತ್ತದೆ. ರಾಜ ಉತ್ತರಿಸುತ್ತಾನೆ. ಇದರೊಂದಿಗೆ ರಾಜನ ಮೌನ ಭಂಗವಾಗುತ್ತದೆ. ಬೇತಾಳ ತಪ್ಪಿಸಿಕೊಂಡು ಹೋಗುತ್ತದೆ. ರಾಜ ಮತ್ತೆ ಶವವನ್ನು ತರಲು ಹೋಗುತ್ತಾನೆ. ಹೀಗೆ ಇಪ್ಪತ್ತೈದು ಬಾರಿ ನಡೆಯುತ್ತದೆ. ಕೊನೆಯಲ್ಲಿ ರಾಜ ಉತ್ತರಿಸಲಾಗದ ಪ್ರಶ್ನೆಯನ್ನು ಬೇತಾಳ ಕೇಳುತ್ತದೆ.
ಬೇತಾಳ ಕತೆಗಳ ಜನಪ್ರಿಯತೆಯಿಂದಾಗಿಯೇ ಬೆನ್ನಿಗೆ ಬಿದ್ದ ಬೇತಾಳ ಕೂಡ ಜನಪ್ರಿಯವಾಗಿದೆ.