*ಗುಂಪಿನಲ್ಲಿದ್ದೂ ಅದರ ಭಾಗವಾಗದವ

ಬೆಕ್ಕು ಬಿಡಾರ ಕಟ್ಟಿದ್ದು ನೋಡಿದ್ದೀರಾ? ಬಿಡಾರ ಅಂದರೆ ಪುಟ್ಟದಾದ ಮನೆ. ಬೆಕ್ಕು ಇರುವುದೇ ಮನೆಯಲ್ಲಿ. ಅಷ್ಟೊಂದು ದೊಡ್ಡದಾದ ಮನೆ ಇದ್ದರೂ ಬೆಕ್ಕು ತನ್ನದೇ ಒಂದು ಸ್ಥಳವನ್ನು ಮಲಗುವುದಕ್ಕೆ ಕಂಡುಕೊಂಡಿರುತ್ತದೆ. ಅದು ಮರಿಯನ್ನು ಹಾಕುವುದೂ ಅಲ್ಲೇ. ಮನೆಯೊಳಗೊಂದು ಮನೆಯನ್ನು ನಿರ್ಮಿಸಿಕೊಳ್ಳುವ ಬೆಕ್ಕಿನ ಸ್ವಭಾವವನ್ನು ಮನುಷ್ಯರಿಗೂ ಅನ್ವಯಿಸಿ ಹೇಳುವುದಿದೆ.
ಎಲ್ಲರೂ ಸೇರಿ ಒಂದು ಕಾರ್ಯ ಸಾಧನೆಯಲ್ಲಿ ತೊಡಗಿರುವಾಗ ಒಬ್ಬರು ಪ್ರತ್ಯೇಕವಾಗಿ ತಮ್ಮದೇ ಕಾರ್ಯಕ್ರಮವನ್ನು ಜಾರಿಗೆ ತರಲು ಹೊರಟಾಗ `ಬೆಕ್ಕಿಗೆ ಬೇರೆ ಬಿಡಾರವೆ?’ ಎಂದು ಪ್ರಶ್ನಿಸುವುದಿದೆ.
ಗುಂಪಿನಲ್ಲಿದ್ದೂ ಗುಂಪಿನಂತಾಗದವರ ಸ್ಥಿತಿ ಇದು. ಇದು ಆ ವ್ಯಕ್ತಿಯಲ್ಲಿಯೇ ಇರುವ ಕೊರತೆ ಇರಬಹುದು ಅಥವಾ ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಬೇಕು ಎಂಬ ತುಡಿತ ಇರಬಹುದು ಇಲ್ಲವೇ ಒಂದು ರೀತಿಯ ಬಂಡಾಯವೂ ಇದಾಗಿರಬಹುದು.
ಬಹುಮತದ ಹಾದಿಯಲ್ಲಿ ನಡೆಯಬೇಕು ಎಂಬ ಪ್ರಜಾಪ್ರಭುತ್ವ ನಾಡಿನ ಉಪದೇಶ ಇದು.