‘ಆವರ್ತ’ ಇದು ಆಶಾ ರಘು ಅವರ ಬೃಹತ್ ಕಾದಂಬರಿ. ಮೊದಲ ಪ್ರಯತ್ನದಲ್ಲಿಯೇ ಅವರು ಎಲ್ಲೆಗಳನ್ನು ಮೀರುವ ಪ್ರಯತ್ನ ಮಾಡಿದ್ದಾರೆ. ಇತಿಹಾಸವೂ ಅಲ್ಲದ, ಪೌರಾಣಿಕವೂ ಅಲ್ಲದ ತಮ್ಮದೇ ಆದ ವಿಶ್ವಾಮಿತ್ರ ಸೃಷ್ಟಿಯೊಂದನ್ನು ಅವರು ಈ ಕೃತಿಯಲ್ಲಿ ಸಾಧಿಸಿದ್ದಾರೆ. ಇತಿಹಾಸವೆಂದೇ ಭ್ರಮೆ ಹುಟ್ಟಿಸುವ ಕಾಲ್ಪನಿಕ ಕಥಾನಕಗಳು ಕನ್ನಡಕ್ಕೆ ಹೊಸತೇನೂ ಅಲ್ಲ. ಆದರೆ ಈ ಕೃತಿಯ ಘಟನೆಗಳು ನಡೆಯುವುದು ಕ್ರಿಸ್ತನಿಗೂ ಪೂರ್ವ ಕಾಲದಲ್ಲಿ. ಅಪಾರವಾದ ಪಾತ್ರಪ್ರಪಂಚ, ಅವುಗಳ ನಡುವಿನ ಸಂಬಂಧಗಳನ್ನು ನಿರ್ವಹಿಸುವಲ್ಲಿಯ ಶ್ರದ್ಧೆ ಗಮನ ಸೆಳೆಯುತ್ತದೆ. ಮನುಷ್ಯನ ಮನೋವ್ಯಾಪಾರವೇ ಆವರ್ತ ಕಾದಂಬರಿಯ ಕೇಂದ್ರ ಪ್ರಜ್ಞೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳು ವ್ಯಕ್ತಿಯೊಬ್ಬನನ್ನು ಬದುಕಿನಲ್ಲಿ ಹೇಗೆ ಮಾಗಿಸುತ್ತವೆ, ಅದರಿಂದ ಆತ ಪಡೆಯುವ ಜೀವನ ದರ್ಶನದ ಸ್ವರೂವೇನು ಎಂಬುದನ್ನು ನಿಕಷಕ್ಕೆ ಒಡ್ಡುತ್ತದೆ ಈ ಕಾದಂಬರಿ. ಪ್ರಶಾಂತವಾದ ನೀರಿನ ಕೊಳದಲ್ಲೊಂದು ಕಲ್ಲನ್ನು ನೀವು ಎಸೆಯಿರಿ. ಅದು ತನ್ನ ಒಂದು ಕೇಂದ್ರದಿಂದ ಆವರ್ತಗಳನ್ನು ಉಂಟುಮಾಡುತ್ತ ಹೋಗುವುದು. ಕೊನೆಯಲ್ಲಿ ಅವೆಲ್ಲ ಏಕೀಭವಿಸಿ ಮೊದಲಿನಂತೆಯೇ ಪ್ರಶಾಂತವಾದ ತಿಳಿಗೊಳವಾಗುವುದು. ಮನುಷ್ಯನ ಬದುಕು ಕೂಡ ಇದೇ ರೀತಿಯದು ಎಂಬುದನ್ನು ಹೇಳಲು ಹೊರಟಂತಿದೆ ಈ ಕಾದಂಬರಿ. ಇದು ಈ ಕೃತಿಯ ತಾತ್ವಿಕತೆ ಇರಬಹುದು. ಕಾದಂಬರಿಯ ಆರಂಭದಲ್ಲಿ ಉಪೋದ್ಘಾತದ ರೀತಿಯಲ್ಲಿ ಈ ಮಾತುಗಳನ್ನು ಬರೆಯಲಾಗಿದೆ: ‘‘ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಸುಳಿಯಲ್ಲಿ ಸಿಕ್ಕಿಕೊಂಡು ತೊಳಲಾಡುವ, ಬಿಡಿಸಿಕೊಳ್ಳಲು ಯತ್ನಿಸುವ, ಕಡೆಗೆ ಒಳಗಿದ್ದೂ ಇರದ ಹದವನ್ನು ಕಂಡುಕೊಳ್ಳುವ ವ್ಯಕ್ತಿಯೊಬ್ಬನ ಬದುಕಿನ ಚಿತ್ರಣ ಈ ಕಾದಂಬರಿಯ ವಸ್ತು. ನಾನಾ ಕಾರಣಗಳಿಂದ ಎಲ್ಲ ಸಂಬಂಧಗಳಿಗೂ ವಿಮುಖನಾಗಿ ಆತ್ಮಜ್ಞಾನವನ್ನು ಅರಸುತ್ತಾ ಸಾಗುತ್ತಾನೆ. ಆದರೂ ಬಿಡದ ಮೋಹ ಪುನಃ ಲೌಕಿಕ ಬದುಕಿಗೆ ಎಳೆತರುತ್ತದೆ. ಒಂದರ ಹಿಂದೊಂದರಂತೆ ಎಲ್ಲ ಸಂಬಂಧಗಳೂ ಹಿಂಬಾಲಿಸುತ್ತವೆ. ಕಡೆಗೆ ಆವರ್ತದ ಚಕ್ರದೊಳಗೆ ಬಂಧಿಯಾದರೂ ಮುಕ್ತನಾಗಿ, ಯೋಗಾಭೋಗಗಳ ಸಮನ್ವಯ ಸಾಧಿಸಬಹುದಾದ ಹೊಳಹಿನೊಂದಿಗೆ ಆತ್ಮಜ್ಞಾನಕ್ಕೂ, ಲೌಕಿಕ ಬದುಕಿಗೂ ಅಭಿಮುಖನಾಗುತ್ತಾನೆ.’’ ಪ್ರತೀಪ ಎಂಬ ರಾಜನ ಸುತ್ತ ಕತೆಯ ಹಂದರ ಹಬ್ಬಿದೆ. ಪ್ರಮದ್ವರೆ, ಮಧುಮತಿ, ಲಾಕ್ಷಿ, ಸತ್ಯವತಿ, ಕಾಂತಾಲತೆ, ಶ್ಲಾಘ್ಯದೇವಿ ಎಂಬ ಆರು ಸ್ತ್ರೀಯರು ಅರಿಷಡ್ವರ್ಗಗಳನ್ನು ಪ್ರತಿನಿಧಿಸುವರು. ಈ ಸ್ತ್ರೀಯರ ಸಂಪರ್ಕದಲ್ಲಿ ರಾಜ ಪ್ರತೀಪನು ಪಡೆಯುವ ಅನುಭವ, ಸಾಧಿಸುವ ಅನುಭಾವ, ಅನುಭವಿಸುವ ಅನುಭೂತಿ ಇವನ್ನು ಈ ಕಾದಂಬರಿ ಹೇಳುತ್ತದೆ. ಇವರೆಲ್ಲ ಒಬ್ಬರಾದ ಬಳಿಕ ಒಬ್ಬರಂತೆ ಪಾಳಿಹಚ್ಚಿದವರಂತೆ ಪ್ರತೀಪನ ಆತ್ಮಸಂಗಾತಕ್ಕೆ ಒಳಗಾಗುವರೆ ಎಂಬ ಪ್ರಶ್ನೆಯನ್ನು ಎತ್ತಬಹುದು. ಆದರೆ ಆ ರೀತಿಯಲ್ಲೇನು ಕತೆ ಬೆಳೆಯುವುದಿಲ್ಲ.. ಕಥಾವಸ್ತುವೊಂದರ ಕಾಲೈಕ್ಯ, ಕ್ರಿಯೈಕ್ಯ, ಸ್ಥಳೈಕ್ಯ, ಭಾವಾವೈಕ್ಯಗಳೆಂಬ ಕಟ್ಟಳೆಗಳನ್ನು ಅನುಸರಿಸಬೇಕೆಂಬುದು ಸರ್ವಸಾಧಾರಣವಾದ ನಿಯಮವಾದರೂ ಅದರ ಉಲ್ಲಂಘನೆಯ ಸ್ವಾತಂತ್ರ್ಯ ಲೇಖಕರಿಗೆ ಇದ್ದೇ ಇರುತ್ತದೆ. ರಾಜ ಪ್ರತೀಪ ಈ ಸವಾಲುಗಳನ್ನು ಹೇಗೆ ಎದುರಿಸುತ್ತಾನೆ, ಉಂಡೂ ಉಪವಾಸಿ ಬಳಸಿಯೂ ಬ್ರಹ್ಮಚಾರಿಯಂತೆ ಹೇಗೆ ಉಳಿದುಬರುತ್ತಾನೆ, ಈ ಹಂತದಲ್ಲಿ ಆತ ಅನುಭವಿಸುವ ತೊಳಲಾಟಗಳು, ಆತನನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಘಟನೆಗಳು, ಸನ್ನಿವೇಶಗಳ ಕಾತರ, ತಲ್ಲಣಗಳು ಕಾದಂಬರಿಯ ಜೀವಾಳವಾಗಿದೆ. ಅರಿಷಡ್ವರ್ಗಗಳೆಲ್ಲ ಹೆಣ್ಣುಗಳಾಗಿಯೇ ಕಾಡಬೇಕೆ? ಪುರುಷರೂಪಿಂದಲೂ ಬರಬಹುದಿತ್ತಲ್ಲ ಎಂಬ ಪ್ರಶ್ನೆಯನ್ನ ನೀವು ಕೇಳುವ ಅಗತ್ಯವಿಲ್ಲ. ಅದು ಲೇಖಕಿಯ ಆಯ್ಕೆ. ಈ ಅರಿಷಡ್ವರ್ಗಗಳು ಮಾನವನ ಉದಯದೊಂದಿಗೇ ಅಸ್ತಿತ್ವವನ್ನು ಪಡೆದುಕೊಂಡಂತಹವು. ಹೊಟ್ಟೆ ತುಂಬಿಸಿಕೊಳ್ಳುವ ಪ್ರಯತ್ನದಲ್ಲಿ ಇವೆಲ್ಲ ಆರಂಭವಾದವು. ಹೊಟ್ಟೆ ತುಂಬಿದ ಮೇಲೆ ಇನ್ನೇನು? ಆ ಅದನ್ನು ಹೇಳುತ್ತದೆ ಈ ಕಾದಂಬರಿ. ಕಾದಂಬರಿಯ ಶೈಲಿ ಸೊಗಸಾಗಿದೆ. ಆಶಾ ಅವರಿಗೆ ಕತೆಯನ್ನು ಕಟ್ಟುವುದು ಭಾಷೆಯ ದೃಷ್ಟಿಯಿಂದ ಸವಾಲಾಗಿರುವಂತೆ ಎಲ್ಲಿಯೂ ಕಾಣುವುದಿಲ್ಲ. ಕತೆಯ ನಾಯಕನೇ ತನ್ನ ಬಗ್ಗೆ ತಾನು ಹೇಳಿಕೊಂಡರೆ, ಅವನ ಬಗ್ಗೆ ಉಳಿದವರು ಹೇಳುವ ಭಾಗವೂ ಇದೆ. ವ್ಯಾಕರಣದಲ್ಲಿ ಇದನ್ನೇ ಪ್ರಥಮ ಪುರುಷ ನಿರೂಪಣೆ ಎಂದೂ ಉತ್ತಮ ಪುರುಷ ನಿರೂಪಣೆ ಎಂದೂ ಕರೆಯುವುದು. ಇವೆರಡರ ನಡುವೆ ಪ್ರಜ್ಞಾಪ್ರವಾಹ ತಂತ್ರವನ್ನು ಬಳಸಿದ್ದಾರೆ. ಓದುಗನನ್ನು ಪಾತ್ರ, ಘಟನೆಗಳ ಗೊಂಡಾರಣ್ಯದಲ್ಲಿ ಸಿಲುಕಿಸಿ ಗೋಳಾಡುವುದಿಲ್ಲ ಎನ್ನುವುದು ವಿಶೇಷವಾದದ್ದು. ಒಂದು ಕೃತಿ ಒಳ್ಳೆಯದು ಎನ್ನುವುದಕ್ಕೆ ಇದಕ್ಕಿಂತ ಮಿಗಿಲಾದುದು ಇನ್ನೇನು ಬೇಕು? ಸೊಗಸಾದ ಶೈಲಿಯಿಂದಾಗಿ ಕಾದಂಬರಿಯು ಬೇಸರವಿಲ್ಲದಂತೆ, ಕುತೂಹಲವನ್ನು ಉಳಿಸಿಕೊಂಡು ಮುಂದುವರಿಯುತ್ತದೆ. ಓದುಗನ ಪ್ರೀತಿ ಗಳಿಸುವುದಕ್ಕೆ ಇದೊಂದೇ ಅರ್ಹತೆ ಸಾಕು. ತಮ್ಮ ಪ್ರಥಮ ಕಾದಂಬರಿಯಲ್ಲಿ ಆಶಾ ಅವರು ಅಪೂರ್ವವಾದ ಯಶಸ್ಸನ್ನೇ ಗಳಿಸಿದ್ದಾರೆ. ಪ್ರ: ಉಪಾಸನ, ಬೆಂಗಳೂರು, ಪುಟಗಳು ೫೧೨, ಬೆಲೆ ₹ ೩೫೦