‘ಆರನೆಯ ಹೆಂಡತಿಯ ಆತ್ಮಕಥೆ’ಯನ್ನು ಬರೆದು ಭಾರೀ ಸುದ್ದಿ ಮಾಡಿದ್ದ ತೆಹಮಿನಾ ದುರ‌್ರಾನಿಯವರು ಇದೀಗ ‘ಪೀಠಾಧಿಪತಿಯ ಪತ್ನಿ’ ಎಂಬ ಕಾದಂಬರಿಯನ್ನು ಬರೆದಿರುವರು. ಇದರ ವಸ್ತು ಕೂಡ ಸ್ತ್ರೀಶೋಷಣೆಯೇ. ಈ ಕಾದಂಬರಿಯ ಪ್ರಮುಖ ಪಾತ್ರಗಳು ಹೀರ್ ಮತ್ತು ಪೀರ್ ಸಾಯಿಬ್. ತಂದೆಯಿಲ್ಲದ ಬಡ ಕುಟುಂಬದ ಹೆಣ್ಣುಮಗಳು ಈ ಹೀರ್. ಅವಳ ತಾಯಿ ಕಷ್ಟಪಟ್ಟು ಹೇಗೋ ಗಣ್ಯವರ್ಗದ ಪೀರ್ ಸಾಯಿಬ್‌ನ ಜೊತೆ ಮಗಳ ಸಂಬಂಧವನ್ನು ಕುದುರಿಸುತ್ತಾಳೆ. ಅವನ ಸಂಬಂಧದಿಂದ ತಮ್ಮ ಸಾಮಾಜಿಕ ಅಂತಸ್ತು ಏರುವುದೆಂದೂ, ಇತರ ಹೆಣ್ಣುಮಕ್ಕಳಿಗೆ ಉತ್ತಮ ಸಂಬಂಧ ಸಿಗುವುದೆಂದೂ ಅವಳು ಆಲೋಚಿಸುತ್ತಾಳೆ. ‘‘ನಿನ್ನ ಈ ಮದುವೆಯಿಂದಾಗಿ ನಮಗೆ ಮತ್ತೆ ಸಾಮಾಜಿಕ ಘನತೆ ಗೌರವ ದೊರಕಲಿವೆ. ಮೊದಲಿನ ಸ್ಥಾನಮಾನ ಮತ್ತೆ ಹಿಂತಿರುಗಿ ಬರುತ್ತವೆ. ನಿನ್ನ ಸಹೋದರನಿಗೂ ಕೂಡ ಉತ್ತಮ ಸಂಬಂಧ ದೊರೆಯುತ್ತದೆ; ಒಳ್ಳೆಯ ಮನೆತನದ ಹುಡುಗಿ, ಒಳ್ಳೆಯ ಕೆಲಸ ಮುಂತಾದವು ದಕ್ಕುತ್ತವೆ. ನಮ್ಮ ಸಾಮಾಜಿಕ ಸ್ಥಿತಿ ಗತಿ ತುಂಬಾ ಸುಧಾರಿಸುತ್ತವೆ. ಅಷ್ಟೇ ಯಾಕೆ, ಅವನ ಹೆಸರು ಸಹ ನನಗೆ ಇಷ್ಟವಾಗಿದೆ. ಎಷ್ಟು ಮುದ್ದಾದ ಹೆಸರು ಅಂತಿ! …. ’’(ಪುಟ ೨೨) ಆದರೆ ಮದುವೆಯ ಬಳಿಕ ಮಗಳ ಮನೆಗೆ ಹೋಗುವುದಕ್ಕೂ ಅವಳಿಗೆ ಸಾಧ್ಯವಾಗುವುದಿಲ್ಲ. ಹೀರ್‌ಳ ಮೌಲ್ಯ ನಿರ್ಧಾರವಾಗುವುದು ಅವಳು ಕೊಂಡೊಯ್ಯುವ ವರದಕ್ಷಿಣೆಯ ಮೇಲೆಯೇ. ಒಬ್ಬಳು ತನ್ನ ಅಪ್ಪನ ಮನೆಯಿಂದ ತರುವ ಧನ, ಕನಕ, ಸಾಧನ ಸಂಪತ್ತಿಗನುಗುಣವಾಗಿಯೇ ಗಂಡನ ಮನೆಯಲ್ಲಿ ಅವಳಿಗೆ ಗೌರವ ಮರ್ಯಾದೆ ದೊರಕುತ್ತದೆ. (ಪುಟ ೨೫) ಇದು ಅವಳ ತಾಯಿಯ ಅಭಿಪ್ರಾಯವಾಗಿತ್ತು. ತನ್ನ ಗೆಳತಿ ಚಾಂದಿಯ ಅಣ್ಣ ರಾಂಝಾನೊಂದಿಗೆ ಸಲುಗೆಯಿಂದಿದ್ದ ಹಾಗೂ ಅವನ ಜೊತೆಗೆ ತನ್ನ ಮದುವೆಯ ಕನಸು ಹೆಣೆಯುತ್ತಿದ್ದ ಹೀರ್ ತಾಯಿಯ ಒತ್ತಾಯಕ್ಕೆ ಶ್ರೀಮಂತ ಪೀರ್ ಸಾಯಿಬ್‌ನ ಜೊತೆ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ‘ನನಗೆ ದೊರೆಯಲಿದ್ದ ಅಪೂರ್ವ ಸ್ಥಾನಮಾನದ ಸಮ್ಮುಖದಲ್ಲಿ ಅವನ ಎಲ್ಲ ನ್ಯೂನತೆಗಳನ್ನು ಮರೆಯಲು ಮಾನಸಿಕವಾಗಿ ಸಿದ್ಧಳಾ’ಗುತ್ತಾಳೆ. (ಪುಟ ೨೬) ಕಾದಂಬರಿಯು ಆರಂಭವಾಗುವುದು ಪೀರ್ ಸಾಯಿಬ್‌ನ ಸಾವಿನ ಸನ್ನಿವೇಶದೊಂದಿಗೆ. ಹೀರ್‌ಳ ಮನೋಭಿತ್ತಿಯಲ್ಲಿ ನಡೆಯುವ ವ್ಯವಹಾರದ ಚಿತ್ರಣದೊಂದಿಗೆ ಕತೆಯು ಬೆಳೆಯುತ್ತದೆ. ಇಡೀ ಕಾದಂಬರಿ ಹೀರ್‌ಳ ಅಭಿವ್ಯಕ್ತಿಯಂತೆ ಪ್ರಥಮ ಪುರುಷದಲ್ಲಿ ದಾಖಲಾಗಿದೆ. ಪ್ರಜ್ಞಾಪ್ರವಾಹ ತಂತ್ರದಲ್ಲಿ ಕತೆಯನ್ನು ಹೇಳಲಾಗಿದೆ. ಈ ಕಾರಣಕ್ಕಾಗಿ ಇದು ಕೂಡ ಆತ್ಮಕಥನವೇ ಅನ್ನಿಸುವುದು. ತನ್ನ ಶ್ರೀಮಂತ ಗಂಡನ ಮನೆಯಲ್ಲಿ ಅಲ್ಲಿಯ ತೋರಿಕೆಯ ಡೌಲಿನಲ್ಲಿ ತಾನು ಹೇಗೆ ಸಾಕಿದ ಪಶುವಿಗಿಂತ ಕಡೆಯಾಗಿದ್ದೆ ಎಂಬುದನ್ನು ಹೀರ್ ನೆನಪು ಮಾಡಿಕೊಳ್ಳುತ್ತ ಹೋಗುತ್ತಾಳೆ. ತನ್ನ ಮದುವೆಯ ದಿನ ತನ್ನ ತಾಯಿ ಹೇಗೆ ಕಾಣುತ್ತಿದ್ದಳು ಎಂಬುದನ್ನು ಹೀರ್ ಹೀಗೆ ವರ್ಣಿಸುತ್ತಾಳೆ. ‘ಅವ್ವ ತನ್ನ ಈಗಿನ ಆಕಾರಕ್ಕೆ ಹೊಂದುವಂತೆ ಮಾರ್ಪಡಿಸಲಾಗಿದ್ದ ತನ್ನ ಮದುವೆಯ ಉಡುಪನ್ನು ಧರಿಸಿದ್ದಳು. ಬಹುಶಃ ತನ್ನ ಮದುವೆಯ ದಿನ ಇಂದಿನ ನನ್ನಂತೆಯೇ ಕಾಣಿಸುತ್ತಿದ್ದಿರಬಹುದು. ಹಿಂದೆ ಅವಳ ತಾಯಿ ಅವಳಿಗಾಗಿ ಅತ್ತಂತೆಯೇ ಇಂದು ಅವಳು ನನಗಾಗಿ ಅಳುತ್ತಿದ್ದಾಳೆ.’ (ಪುಟ ೩೭) ಮದುವೆಯ ನಂತರ ತನ್ನ ಗಂಡನ ಮನೆಗೆ ಹೊರಟು ನಿಂತ ಹೀರ್‌ಗೆ ಅವಳ ತಾಯಿ ಹೇಳುವ ಮಾತುಗಳು ಕಾಳಿದಾಸನ ‘ಶಾಕುಂತಲ’ದಲ್ಲಿಯ ಕಣ್ವೋಪದೇಶದಂತೆ ಭಾಸವಾಗುತ್ತವೆ. ಮದುವೆ ಹಿಂದಿನ ದಿನ ತಾಯಿ ಮಗಳಿಗೆ ಹೇಳುತ್ತಾಳೆ, ‘‘ನಿನ್ನ ಸಚ್ಚಾರಿತ್ರ್ಯ, ಸನ್ನಡತೆಯ ಮೂಲಕ ನಿನ್ನ ಅಪ್ಪನ ಮರ್ಯಾದೆಯನ್ನು ಎತ್ತಿ ಹಿಡಿಯಬೇಕು. ಗಂಡನ ಇಚ್ಛಾನುವರ್ತಿಯಾಗಿ ಬಾಳಿ ಬದುಕುತ್ತ ಸದಾ ಅವನ ಸಂಕಲ್ಪಕ್ಕೆ ವಿಧೇಯಳಾಗಿರಬೇಕು. ನಡೆ ನುಡಿ ಸದಾ ಅಸ್ಖಲಿತವಾಗಿರಲಿ; ದೋಷ ದೂರವಾಗಿರಲಿ. ಅವಸರದಲ್ಲಿ ಏನಾದರೂ ಆಡಿ, ಮಾಡಿ ಆ ಮೇಲೆ ಅದಕ್ಕೆ ವಿವರಿಸುವ ಪ್ರಸಂಗ ತಂದುಕೊಳ್ಳಬೇಡ. ದುಡುಕು, ದೂರು ದುಮ್ಮಾನಗಳಿಗೆ ಎಂದೂ ಆಸ್ಪದ ನೀಡಬೇಡ.’’ (ಪುಟ ೩೨) ಇದು ದೇಶ, ಕಾಲ, ಧರ್ಮಾತೀತವಾದ ಕರುಳಿನ ಮಿಡಿತ. ಪುರುಷಪ್ರಧಾನ ವ್ಯವಸ್ಥೆ ಅಲ್ಲಿಯ ಸಮಾಜದಲ್ಲಿಯೂ ಇದ್ದದ್ದೇ. ಅವಳ ತಂದೆ ಕೂಡ ತನ್ನ ಗಂಡಸುತನವನ್ನು ತಾಯಿಯ ಮೇಲೆ ತೋರಿಸಿದವನೇ. ಆದರೆ ತಾಯಿ ಅವನನ್ನು ಎಂದೂ ದೂರುತ್ತಿರಲಿಲ್ಲ. ಅವನನ್ನು ಸಮರ್ಥಿಸಲು ಕಾರಣಗಳನ್ನು ಅವಳು ಹುಡುಕುತ್ತಿದ್ದಳು. ‘ಅಪ್ಪ ಹಾಗೆಲ್ಲ ನಡೆದುಕೊಂಡರೂ ಅದಕ್ಕಾಗಿ ಯಾರೂ ಅವನನ್ನು ದ್ವೇಷಿಸುತ್ತಿರಲಿಲ್ಲ. ಅವನು ಗಂಡಸಾಗಿ ಹುಟ್ಟಿರುವುದರಿಂದ ದೇವರು ಅವನಿಗೆ ವಿಶೇಷವಾಗಿ ದಯಪಾಲಿಸಿರುವ ಅವಕಾಶ ಅಧಿಕಾರದ ಹಕ್ಕು ಚಲಾಯಿಸುತ್ತಿದ್ದಾನೆ ಎಂದೇ ಭಾವಿಸುತ್ತಿದ್ದೆವು’ (ಪುಟ೪೯) ಎಂದು ಹೀರ್ ಹೇಳುತ್ತಾಳೆ. ತನ್ನ ಗಂಡನ ಮನೆಯ ಸ್ಥಿತಿ ಹೇಗಿತ್ತು ಎಂಬುದನ್ನು ಹೀರ್ ವರ್ಣಿಸುವುದು ಹೀಗೆ: ‘‘ನಾನು ಅಲ್ಲಿಯ ವ್ಯವಸ್ಥೆಗೆ ಹೊಂದಿಕೊಂಡು ಸಂಸ್ಥಾಪಿತ ರೀತಿ ನೀತಿಗಳನ್ನು ಮೈಗೂಡಿಸಿಕೊಂಡೆನಾದರೂ ಅಲ್ಲಿಯ ಏಕತಾನತೆಯಿಂದ ಭಯವಿಹ್ವಲಗೊಂಡೆ. ಯಾವ ಕ್ಷಣದಲ್ಲಿ ಏನು ಘಟಿಸುತ್ತದೆಯೋ ಏನೂ ಹೇಳಲಾಗದ ಕರಾಳ ಭವಿಷ್ಯತ್ತಿನ ಭಯ ನನ್ನನ್ನು ಪೀಡಿಸಲಾರಂಭಿಸಿತು. ಇಲ್ಲಿ ಈ ಮನೆಯಲ್ಲಿ ಎಲ್ಲವೂ ಕಾಯಂ ಆಗಿತ್ತು. ಬದಲಾವಣೆಗೆ ಎಳ್ಳಷ್ಟೂ ಸ್ಥಾನವಿರಲಿಲ್ಲ. ಅಪರಿವರ್ತನೀಯತೆ ಅಲ್ಲಿಯ ನಿತ್ಯ ನಿಯಮವಾಗಿತ್ತು. ಅವರಿಗೆ ಹೊಸ ವಿಧಾನಗಳ ಅವಶ್ಯಕತೆ ಇರಲಿಲ್ಲ. ಹಳೆ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋಗಬಲ್ಲ, ಗತದ ದಾರಿಯಲ್ಲಿಯೇ ಚಾಚು ತಪ್ಪದೆ ಹೆಜ್ಜೆ ಹಾಕುತ್ತ ನಿರಂತರತೆಯನ್ನು ಕಾಪಾಡಬಲ್ಲ ವ್ಯಕ್ತಿಯ ಅವಶ್ಯಕತೆ ಅವರಿಗಿತ್ತು.’’ (ಪುಟ ೫೪) ಹೀರ್‌ಳ ಆತ್ಮಕತೆಯಂತೆ ತೋರುವ ಈ ಬರೆಹದಲ್ಲಿ ಏಕಮುಖದ ನಿರೂಪಣೆ ಇದೆ. ಹೀರ್‌ಗೆ ತೋರುವಂತೆ ಅವಳ ಗಂಡ ಅಷ್ಟೊಂದು ಕೆಟ್ಟವನಾಗಿದ್ದನೆ? ಅವನಲ್ಲಿ ಅವಳು ಮೆಚ್ಚಿಕೊಳ್ಳುವ ಗುಣಗಳ್ಯಾವವೂ ಇರಲಿಲ್ಲವೆ? ಪುರುಷರ ದೋಷಗಳನ್ನೆಲ್ಲ ಅವನೊಬ್ಬನಿಗೇ ಆರೋಪಿಸಿ ಪಾತ್ರ ಸೃಷ್ಟಿಸಿದಂತೆ ಭಾಸವಾಗುತ್ತದೆ. ಹೆಣ್ಣು ಯಾವತ್ತೂ ಶೋಷಿತಳೇ. ಅದಕ್ಕೆ ದೇಶ, ಧರ್ಮಗಳ ಎಲ್ಲೆಯಿಲ್ಲ, ಕಾಲಗಳ ಮಿತಿಯಿಲ್ಲ, ಸಂಸ್ಕೃತಿಗಳ ಮೇರೆಯಿಲ್ಲ. ಸಮಾಜಶಾಸ್ತ್ರಜ್ಞರು ಇದಕ್ಕೆ ಹಲವಾರು ಕಾರಣಗಳನ್ನು ನೀಡಬಹುದು, ಸುಧಾರಣಾವಾದಿಗಳು ಹಲವು ಪರಿಹಾರಗಳನ್ನು ಸೂಚಿಸಬಹುದು, ಸರ್ಕಾರಗಳು ನೂರಾರು ಕಾನೂನುಗಳನ್ನು ಮಾಡಬಹುದು. ಈ ಯಾವವೂ ಪುರುಷ ಮತ್ತು ಮಹಿಳೆಯ ನಡುವಿನ ತರತಮವನ್ನು ನಿವಾರಿಸಲಾರವು. ಹೀರ್ ಈ ಕೃತಿಯಲ್ಲಿ ಎಲ್ಲ ಶೋಷಿತ ಮಹಿಳೆಯರ ಪ್ರತಿನಿಧಿಯಾಗಿ ಸ್ಥಾಪಿತಳಾಗಿದ್ದಾಳೆ. ಪಾಕಿಸ್ತಾನದಲ್ಲಿಯ ಮುಸ್ಲಿಂ ಸಮಾಜದಲ್ಲಿಯ ಆಚರಣೆಗಳು, ನಡಾವಳಿಗಳು ನಮಗೆ ಅಪರಿಚಿತವೆಂದು ಅನಿಸುವುದಿಲ್ಲ. ನಮ್ಮ ಪಕ್ಕದ ಊರಿನ ಕತೆಯನ್ನು ಓದುತ್ತಿದ್ದಂತೆ ಇದು ಓದಿಸಿಕೊಂಡು ಹೋಗುತ್ತದೆ. ಅದೇ ಈ ಕಾದಂಬರಿಯ ಹೆಚ್ಚುಗಾರಿಕೆ. ಇದನ್ನು ರಾಹು ಅವರು ಅನುವಾದಿಸಿದ್ದಾರೆ. ಪ್ರ: ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು, ಪುಟಗಳು ೩೭೦, ಬೆಲೆ ₹ ೩೫೦.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.