ಹೊಳೆಸಾಲು ಎಂದರೆ ನೆಗಸು, ಯಕ್ಷಗಾನ, ಕೋಳಿಅಂಕ, ತೇರು, ಊರಹಬ್ಬ ಎಲ್ಲ ಇದ್ದಿದ್ದೇ. ಈ ಪ್ರದೇಶದ ಜನರ ನಂಬಿಕೆಗಳು ತರಹೇವಾರಿ ಚಿತ್ರವಿಚಿತ್ರವಾದದ್ದು. ನಂಬಿಕೆ ಎನ್ನುವುದು ತೀರ ಖಾಸಗಿಯಾದದ್ದು ಮತ್ತು ಅವರವರಿಗೆ ಸಂಬಂಧಪಟ್ಟ ವಿಷಯ. ಇದು ದೇವರ ಅಸ್ತಿತ್ವದ ಕುರಿತು ಇರಬಹುದು, ತಾನು ಇವತ್ತು ಈ ಅಂಗಿಯನ್ನು ತೊಟ್ಟು ಹೊರಗೆ ಹೊರಟರೆ ಕಾರ್ಯಸಿದ್ಧಿಯಾಗುತ್ತದೆ ಎಂದುಕೊಳ್ಳುವವರೆಗೂ ಇರಬಹುದು. ಮನೆಯಿಂದ ಹೊರಗೆ ಹೊರಡುವಾಗ ಬೋಳು ತಲೆಯವರು ಎದುರಾದರೆ ಕೆಲಸವಾಗುವುದಿಲ್ಲ ಎಂದುಕೊಳ್ಳುವಂಥ ತರ್ಕಕ್ಕೆ ನಿಲುಕದ ನಂಬಿಕೆಗಳೂ ಇವೆ. ಕೆಲವು ನಂಬಿಕೆಗಳ ಬೆನ್ನು ಬಿದ್ದರೆ ಅದೇನೇನೋ ಕಾರ್ಯಕಾರಣ ಸಂಬಂಧಗಳು ಗೋಚರಿಸುತ್ತವೆ. ಹೊಳೆಸಾಲಿನವರು ನಂಬುವ ದೇವರುಗಳಲ್ಲಿ ಒಂದು ತಿರುಪತಿ ತಿಮ್ಮಪ್ಪ, ಇನ್ನೊಂದು ಧರ್ಮಸ್ಥಳದ ಮಂಜುನಾಥ. ವೈಶಾಖ ಮಾಸದಲ್ಲಿ ಮನೆಯಲ್ಲಿ ದೇವರ ಕಾರ್ಯ ಮಾಡಿ ದೇವರಿಗೆ ದುಡ್ಡು ತೆಗೆದಿಡುತ್ತಾರೆ. ತಮ್ಮ ಜೀವಮಾನದಲ್ಲಿ ಒಮ್ಮೆ ತಿರುಪತಿಯನ್ನು ನೋಡಬೇಕು, ಒಮ್ಮೆ ಧರ್ಮಸ್ಥಳವನ್ನು ನೋಡಬೇಕು ಎಂದುಕೊಳ್ಳುವವರು ತುಂಬ ಜನ ಇದ್ದರು. ಮನೆಯವರೆಲ್ಲ ಸೇರಿ ಕುಟುಂಬ ಯಾತ್ರೆ ಮಾಡುವವರೂ ಇದ್ದರು. ಸಾರಿಗೆ ಸಂಪರ್ಕ ಇಲ್ಲದ ಹಿಂದಿನ ದಿನಗಳಲ್ಲಿ ಈ ಎರಡು ದೇವರ ಕಂಡು ಬಂದವರು ಊರಿನಲ್ಲಿ ಒಬ್ಬರೋ ಇಬ್ಬರೋ ಇರುತ್ತಿದ್ದರು. ಈಗ ಆ ಪರಿಸ್ಥಿತಿ ಏನಿಲ್ಲ. ಆದರೆ ಆ ದೇವರುಗಳ ಮೇಲಿನ ನಂಬಿಕೆ ಮಾತ್ರ ಹಾಗೇ ಉಳಿದುಕೊಂಡಿದೆ. ತೋಟದಲ್ಲಿ ಏನಾದರೂ ಕಳ್ಳತನವಾದರೆ ಹೊಳೆಸಾಲಿನವರು ಪೊಲೀಸ್ ಠಾಣೆಗೆ ದೂರು ಕೊಡುವ ಬದಲು ಧರ್ಮಸ್ಥಳದ ಮಂಜುನಾಥನಿಗೆ ದೂರು ಕೊಡುತ್ತಾರೆ. ಅನನ್ಯ ಭಕ್ತಿಯಿಂದ ಕೈಮುಗಿದು ಕಳ್ಳನಿಗೆ ತಕ್ಕ ಶಿಕ್ಷೆ ಕೊಡು ನನ್ನೊಡೆಯಾ ಎಂದು ಬೇಡಿಕೊಂಡರೆ ಆಯ್ತು. ಇವರ ಮನಸ್ಸಿಗೆ ನೆಮ್ಮದಿ. ಇವರ ಮನಸ್ಸಿನ ದುಗುಡವೆಲ್ಲ ಇಳಿದುಹೋಗುತ್ತದೆ. ದಾಯಾದಿಗಳಲ್ಲಿ ಆಸ್ತಿ ಜಗಳ, ಬೇರೆ ಇನ್ನಾವುದೋ ವಿಷಯದಲ್ಲಿ ತಗಾದೆ ತಲೆದೋರಿದರೆ ಮಂಜುನಾಥನಿಗೆ ಹೊಯ್ಲು ಕೊಡುತ್ತಾರೆ. ಹುಯಿಲು ಆಡುಮಾತಿನಲ್ಲಿ ಹೊಯ್ಲು ಆಗಿದೆ. ಹೊಳೆಯಲ್ಲಿ ನೆರೆ ಬಂದಾಗ ಹೊಯ್ಲು ಉಂಟಾಗುವುದು ಇನ್ನೊಂದು. ಈ ಹೊಯ್ಲು ಪ್ರವಾಹದ ಸೆಳೆತ. ಹೊಳೆಸಾಲಿನವರು ತಮ್ಮ ಪ್ರಾಮಾಣಿಕತೆಯನ್ನು ಸಿದ್ಧಮಾಡಿ ತೋರಿಸಬೇಕೆಂದರೆ ಧರ್ಮಸ್ಥಳದ ಮಂಜುನಾಥನ ಹೆಸರಿನಲ್ಲಿ ಆಣೆ ಮಾಡಬೇಕಾಗುತ್ತದೆ. ಕನ್ನಡ ಶಾಲೆಗೆ ಹೋಗುವಾಗಲೇ ಅವರಿಗೆ ಇದೊಂದು ರೂಢಿಯಾಗಿಬಿಟ್ಟಿರುತ್ತದೆ. ಯಾರದೋ ಪೆನ್ಸಿಲ್ಲೋ ಪೆನ್ನೋ ಕಾಣೆಯಾದರೆ ಅದನ್ನು ಕಳೆದು ಕೊಂಡವನಿಗೆ ಇನ್ನೊಬ್ಬನ ಮೇಲೆ ಅನುಮಾನ. ತನ್ನ ಅನುಮಾನ ಪರಿಹರಿಸಿಕೊಳ್ಳಲು ಅವನು ತಾನು ಅನುಮಾನಿಸಿದ ಹುಡುಗನಿಗೆ, ನೀನು ಧರ್ಮಸ್ಥಳದ ಆಣೆ ಮಾಡು ಅನ್ನುತ್ತಾನೆ. ಆ ಹುಡುಗ ಕದ್ದಿಲ್ಲದಿದ್ದರೆ ಆಣೆ ಮಾಡುತ್ತಾನೆ. ಕದ್ದಿದ್ದರೆ ಅದನ್ನು ವಾಪಸ್ಸು ಮಾಡುತ್ತಾನೆ. ಎಷ್ಟೋ ಅಪರಾಧ ಪ್ರಕರಣಗಳು ಮಂಜುನಾಥನ ಹೆಸರು ಎತ್ತುತ್ತಿದ್ದಂತೆಯೇ ಇತ್ಯರ್ಥವಾಗಿಹೋಗಿರುತ್ತವೆ. ಕೆಲವರು ಧರ್ಮಸ್ಥಳ ಎಂದು ಪೂರ್ತಿ ಹೇಳುವುದಿಲ್ಲ. ಕೇವಲ ಧ..ಧ.. ಎಂದಷ್ಟೇ ಹೇಳಿದರೂ ಉಳಿದವರಿಗೆ ಅವನು ಏನು ಹೇಳುತ್ತಿದ್ದಾನೆ ಎನ್ನುವುದು ಅರ್ಥವಾಗುತ್ತದೆ. ಹೊಳೆಸಾಲಿನವರು ನಂಬಿರುವ ಇನ್ನೊಬ್ಬ ದೇವರು ಇಡಗುಂಜಿಯ ಗಣಪತಿ. ಯಾವುದೋ ಒಂದು ಸಮಸ್ಯೆ ತಲೆದೋರಿದಾಗ ಅದನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದು ಗೊತ್ತಾಗದ ಸಂದಿಗ್ಧದಲ್ಲಿ ಇದ್ದಾಗ ಅದನ್ನು ದೇವರ ನಿರ್ಧಾರಕ್ಕೆ ಬಿಡುವವರು ಇದ್ದಾರೆ. ದೇವರ ಮೇಲೆ ಭಾರ ಹಾಕಿ ನಿರ್ಧಾರ ಕೈಗೊಳ್ಳುತ್ತಾರೆ. ಹಾಗೆ ನಿರ್ಧಾರ ಕೈಗೊಳ್ಳಲು ಅವರು ಇಡಗುಂಜಿಯ ದೇವರಲ್ಲಿ ಪ್ರಸಾದವನ್ನು ಕೇಳುತ್ತಾರೆ. ತಮ್ಮ ಸಂದಿಗ್ಧವನ್ನು ಅವರು ಅರ್ಚಕರ ಬಳಿ ಹೇಳಿಕೊಳ್ಳುತ್ತಾರೆ. ಅವರು ಅದನ್ನು ತಾಡೋಲೆಯ ಮೇಲೆ ಬರೆದು ದೇವರ ಎಡ ಮತ್ತು ಬಲ ಪಾದದ ಮೇಲೆ ಅಂಟಿಸುತ್ತಾರೆ. ಸ್ವಲ್ಪಹೊತ್ತಿನ ನಂತರ ಎಡದ್ದೋ ಬಲದ್ದೋ ಒಂದುಕಡೆಯ ತಾಡೋಲೆ ಕೆಳಕ್ಕೆ ಬೀಳುತ್ತದೆ. ಎಡದ್ದು ಬಿದ್ದರೆ ಬೇಡ ಎಂದೂ ಬಲದ್ದು ಬಿದ್ದರೆ ಆಗಬಹುದು ಎಂದೂ ತಿಳಿಯುತ್ತಾರೆ. ಕೆಲವೊಮ್ಮೆ ಎರಡೂ ಕಡೆಯದು ಬೀಳದೆಯೂ ಇರುತ್ತದೆ. ಆಗ ದೇವರು ಪ್ರಸಾದ ಕೊಡಲಿಲ್ಲ ಎಂದು ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ ಇಲ್ಲವೆ ಇನ್ನೊಂದು ದಿನ ಪ್ರಸಾದ ಕೇಳುತ್ತಾರೆ. ಜಮೀನು ಖರೀದಿ, ಆಕಳು, ಎಮ್ಮೆ ಖರೀದಿ, ಮದುವೆಗೆ ಹೆಣ್ಣು ಗಂಡು ನಿರ್ಧರಿಸುವುದು ಇತ್ಯಾದಿ ವಿಷಯಗಳ ಕುರಿತು ಪ್ರಸಾದ ಕೇಳುತ್ತಾರೆ. ಸಣ್ಣೀರಪ್ಪನೂ ತನ್ನ ಹೆಂಡತಿ ಸುಬ್ಬಿಯನ್ನು ಇಡಗುಂಜಿಯಲ್ಲಿ ಪ್ರಸಾದ ಆದ ಮೇಲೆಯೇ ಮದುವೆ ಮಾಡಿಕೊಂಡಿದ್ದ. ಸಣ್ಣೀರಪ್ಪನ ಬಳಿ ಒಂದು ಹಾಯಿದೋಣಿ ಇತ್ತು. ನಮ್ಮೂರ ಜನರನ್ನು ಹೊನ್ನಾವರಕ್ಕೆ ಬೆಳಿಗ್ಗೆ ಕರೆದೊಯ್ದು ಸಂಜೆಯ ಹೊತ್ತಿಗೆ ಮರಳಿ ಕರೆತರುವುದು ಅವನ ಕಾಯಕ. ಊರವರು ಕೊಡುವ ಕೆಲವು ವಸ್ತುಗಳನ್ನು ಪುರದ ಬಂದರಿನಲ್ಲಿ ಮಾರಿ ಅವರು ಹೇಳಿದ ವಸ್ತುಗಳನ್ನು ತಂದುಕೊಡುತ್ತಿದ್ದ. ಬಿಚ್ಚಿದ ಹಾಯಿಯಲ್ಲಿ ಗಾಳಿ ತುಂಬುತ್ತಿದ್ದರೆ ದೋಣಿ ಸಳ್‌ಸಳ್ ಎಂದು ಸದ್ದು ಮಾಡುತ್ತ ಮುಂದೆ ಸಾಗುತ್ತಿತ್ತು. ಇವನು ದೋಣಿಯಲ್ಲಿ ಕುಳಿತವರೊಂದಿಗೆ ಅದು ಇದು ಕತೆ ಹೇಳುತ್ತ, ಕವಳ ಅಗಿಯುತ್ತ ಕುಳಿತುಬಿಡುತ್ತಿದ್ದ. ಊರವರೆಲ್ಲ ಸಣ್ಣೀರಪ್ಪ ಚಲೋಂವ ಎಂದು ಹೇಳುತ್ತಿದ್ದರು. ಸುಬ್ಬಿಗೂ ತನ್ನ ಗಂಡ ಚಲೋಂವ ಎಂದು ಅನಿಸಿತ್ತು. ನಾಲ್ಕಾರು ವರ್ಷಗಳ ಅವರ ದಾಂಪತ್ಯದಲ್ಲಿ ಇಬ್ಬರು ಮಕ್ಕಳೂ ಆ ದಂಪತಿಗೆ ಆಗಿದ್ದರು. ಅದು ಹೇಗೋ ಏನೋ, ಸಣ್ಣೀರಪ್ಪನಿಗೆ ಕುಡಿತದ ಚಟ ಗಂಟುಬಿದ್ದಿತ್ತು. ಮದುವೆ ಮೊದಲೆಲ್ಲ ಅವನು ಹಾಗಿರಲಿಲ್ಲ. ಮೈಕೈ ನೋವು ಕಳೆಯುವುದಕ್ಕೆಂದು ಪ್ರಾರಂಭಿಸಿದ ಕುಡಿತ ಮೆಲ್ಲಗೆ ಅವನನ್ನೇ ಮುಳುಗಿಸಿತ್ತು. ಬದುಕಿನಲ್ಲಿ ಅವನಿಗೆ ಆಸಕ್ತಿ ಕಡಿಮೆಯಾಗತೊಡಗಿತು. ಆದರೆ ಸುಬ್ಬಿಯಲ್ಲಿ ಮೊದಲಿನದೇ ಉತ್ಸಾಹ, ಚೈತನ್ಯ. ತನ್ನ ಪತ್ನಿಯು ಹೊಳೆಯಲ್ಲಿ ಮಗ್ಣಿ ಮೀನು ಹಾರುವಂತೆ ಪುಟಿಯುತ್ತಿರುವುದನ್ನು ಕಂಡಾಗ ಸಣ್ಣೀರಪ್ಪನಿಗೆ ಅಸಹನೆ. ಕಾರಣವಿಲ್ಲದೆ ಹೆಂಡತಿಯ ಮೇಲೆ ಸಿಡುಕತೊಡಗುವನು. ದೋಣಿಯಲ್ಲಿ ಪುರಕ್ಕೆ ಹೋಗುತ್ತಿದ್ದರೆ ಅವನ ಮನಸ್ಸೆಲ್ಲ ಮನೆಯ ಕಡೆಯೇ ಇರುತ್ತಿತ್ತು. ನಾಲ್ಕಾರು ಬಾರಿ ತಾನು ಕರೆದುಕೊಂಡು ಹೋದವರನ್ನು ತಿರುಗಿ ಅವರು ಬರುವವರೆಗೂ ಕಾಯದೆ ಪುರದಲ್ಲಿಯೇ ಬಿಟ್ಟೂ ಬಂದಿದ್ದನು. ಅದೇನೋ ಅವಸರ. ಯಾಕೆ ಹೀಗೆ ಎಂಬುದು ಅವನಿಗೆ ಗೊತ್ತಾಗುತ್ತಿರಲಿಲ್ಲ. ಒಂದು ದಿನ ಪುರದಿಂದ ಬಂದವನು ದೋಣಿಯನ್ನು ನಿಲ್ಲಿಸಿ ಮೇಲೆ ಬಂದ. ಸುಬ್ಬಿ ಊಟಕ್ಕೆ ಬಡಿಸಲು ಸಿದ್ಧಳಾಗಿ ನಿಂತಿದ್ದಳು. ಇವನು ಮಾತ್ರ ಊಟ ಮಾಡದೆ ಜಗುಲಿಯ ಮೇಲೆ ಮಲಗಿಯೇ ಬಿಟ್ಟ. ಗಂಡನಿಗೆ ಏನಾಗಿದೆಯೋ ಎಂದು ಗೊತ್ತಾಗದೆ ಸುಬ್ಬಿ ಗಾಬರಿಗೊಂಡಳು. ಗಂಡನನ್ನು ಎಬ್ಬಿಸುವ ಪ್ರಯತ್ನ ಮಾಡಿದಳು. ಸಣ್ಣೀರಪ್ಪ ಅವಳ ಕೈ ಹಿಡಿದು ಸಣ್ಣ ಮಗುವಿನಂತೆ ಅಳಲಾಬಂಭಿಸಿದ. ಧ.. ಧ.. ಎಂದು ತೊದಲಲಾರಂಭಿಸಿದ. ಆಣೆ ಮಾಡು ಎಂದ. ಏಕೆ ಎಂಬುದು ಅವಳಿಗೆ ಗೊತ್ತಾಗಲಿಲ್ಲ. ಕುಡಿದದ್ದು ಜಾಸ್ತಿ ಆಗಿದೆಯೇನೋ ಅಂದುಕೊಂಡಳು. ಗಂಡ ಮಾತ್ರ ಧ.. ಧ.. ಎನ್ನುತ್ತಲೇ ಇದ್ದ. ಗಂಡ ತನ್ನಿಂದ ಮಂಜುನಾಥನ ಆಣೆ ಮಾಡಿಸಿಕೊಳ್ಳುತ್ತಿದ್ದಾನೆ ಎಂಬುದು ಅವಳಿಗೆ ಗೊತ್ತಾಯಿತು. ನನ್ಗೆ ಮೋಸ ಮಾಡೂದಿಲ್ಲ ಎಂದು ಆಣೆ ಮಾಡು ಎಂದ ಸಣ್ಣೀರಪ್ಪ. ಸುಬ್ಬಿಗೆ ಕೋಪ ಬಂದು ಗಂಡನ ಸೊಂಟದ ಮೇಲೆ ಒಂದು ಇಕ್ಕರಿಸಿದಳು. ದಿನಗಳೆದಂತೆ ಸಣ್ಣೀರಪ್ಪ ಅವಳನ್ನು ಧ.. ಧ … ಎಂದು ಕಾಡುವುದು ಅತಿಯಾಗುತ್ತ ಹೋಯಿತು. ನಿತ್ಯ ಪ್ರಮಾಣ ಮಾಡಿ ತನ್ನ ಸಾಚಾತನ ಹೇಳಿಕೊಳ್ಳಬೇಕಾಗಿ ಬಂದ ದುಸ್ಥಿತಿ ಕಂಡು ಗಂಡನ ಮೇಲೆ ಅವಳಿಗೆ ಹೇಸಿಕೆ ಬಂತು. ಆಗಲೇ ಅವಳು ಒಂದು ನಿರ್ಧಾರಕ್ಕೆ ಬಂದಿದ್ದಳು. ಗಂಡ ದೋಣಿಯನ್ನು ಪುರದ ಕಡೆಗೆ ನಡೆಸಿದಾಗ ಇವಳು ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮನೆಬಿಟ್ಟು ಹೋಗಿಯೇಬಿಟ್ಟಳು. ಸಣ್ಣೀರಪ್ಪ ಇವತ್ತಿಗೂ ಸುಬ್ಬಿಯನ್ನು ಹುಡುಕುತ್ತಲೇ ಇದ್ದಾನೆ.